ಪ್ರಚಲಿತ

ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ?

ಈ ಮಾತು ಸಧ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯವರಿಗೆ ಸರಿಯಾಗಿ ಅನ್ವಯಿಸುತ್ತದೆ. ತನ್ನೆಲ್ಲಾ ವಿಧ್ಯೆಯನ್ನು ಧಾರೆಯೆರೆದು ಸಂಪೂರ್ಣ ಶಕ್ತಿಯನ್ನು, ರಾಜಕೀಯ ಯುಕ್ತಿಯನ್ನು ಪ್ರಯೋಗಿಸಿ  ಬಿಜೆಪಿಯನ್ನು ಹೊಳೆ ದಾಟಲು ನೆರವಾದ ಅಂಬಿಗನನ್ನೇ  ಹೊಳೆಗೆ ನೂಕಿದರಲ್ಲಾ? ತಪ್ಪು ಯಾರದ್ದೇ ಇರಲಿ ಆದರೆ ಇಂದು ಇಂತಹಾ ಸನ್ನಿವೇಶ ಬಿಜೆಪಿಯಲ್ಲಿ ಸೃಷ್ಟಿಯಾಗಿರುವುದು ದುರಂತವಲ್ಲದೇ ಮತ್ತೇನು? ಚುನಾವಣೆಗೆ ಮೊದಲು ನಡೆದ ಪ್ರಹಸನಗಳು ಹೋಗಲಿ ಬಿಡಿ, ಈಗ ಅಧಿಕಾರವಂತೂ ಸಿಕ್ಕಿದೆ. ಈಗಲಾದರೂ ಅದನ್ನೆಲ್ಲಾ ಸರಿಪಡಿಸಿಕೊಂಡು ಮುನ್ನಡೆಯಬಾರದೇ?

 ಅಡ್ವಾಣಿಯವರನ್ನು ತಲೆಯ ಮೇಲಿಟ್ಟು ಮೆರವಣಿಗೆ ಮಾಡಬೇಕೆಂದು ದೇವರಾಣೆಗೂ ಹೇಳುತ್ತಿಲ್ಲ. ಅಡ್ವಾಣಿಯವರು ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಮಾಡಿದ್ದೂ ಸರಿಯಲ್ಲ. 2009ರಲ್ಲಿ ತನ್ನ ನಾಯಕತ್ವದಲ್ಲಿ ಸೋತರೂ ತದನಂತರ ಪ್ರತಿಪಕ್ಷ ನಾಯಕನ ಸ್ಥಾನ ಕಳೆದುಕೊಂಡರೂ ಅಡ್ವಾಣಿಗೆ ಈ ಜನ್ಮದಲ್ಲಿ ಒಮ್ಮೆಯಾದರೂ ಪ್ರಧಾನಿಯಾಗಲೇಬೇಕೆಂಬ ಮಹದಾಸೆ ಇತ್ತು. ಆಸೆಯ ಬೆನ್ನ ಹಿಂದೆ ಬಿದ್ದವರಿಗೆ ಉಳಿದವ್ಯಾವುದೂ ಕಾಣಲಿಲ್ಲ. ದೇಶಕ್ಕೆ ದೇಶವೇ ಮೋದಿ ಬೆನ್ನಿಗೆ ನಿಂತಿದ್ದರೆ ಅಡ್ವಾಣಿ ಮಾತ್ರ ತನ್ನ ಬೆನ್ನ ಹಿಂದೆ ಕೆಲ ಅಯೋಗ್ಯರನ್ನು ಕಟ್ಟಿಕೊಂಡು ತನ್ನನ್ನೇ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಕೂಗು ಎಬ್ಬಿಸಿದ್ದನ್ನು ಸರ್ವಥಾ ಒಪ್ಪಲಾಗದು. ತನ್ನ ಬೇಡಿಕೆಗೆ ಪಕ್ಷ ಸೊಪ್ಪು ಹಾಕದಿದ್ದಾಗ ತಾನೇ ಆಡಿಸಿ ಮುದ್ದಾಡಿಸಿ ಬೆಳೆಸಿದ ಬಿಜೆಪಿಯ ಎಲ್ಲಾ ಸ್ಥಾನಕ್ಕೂ ರಾಜೀನಾಮೆಯಿತ್ತು ಪಕ್ಷದ ಮರ್ಯಾದೆಯನ್ನು ಮೂರಾಬಟ್ಟೆಯನ್ನಾಗಿಸಿದ್ದನ್ನು ಖಂಡಿತಾ ಸಮರ್ಥಿಸಿಕೊಳ್ಳುವುದಿಲ್ಲ. ಒಬ್ಬ ಪ್ರಬುದ್ಧ ರಾಜಕೀಯ ಮುತ್ಸದ್ದಿಯಾಗಿ ಜನರ ಭಾವನೆಯನ್ನು ಮತ್ತು ಪಕ್ಷದ ಕಾರ್ಯಕರ್ತರ ಭಾವನೆಯನ್ನು ಅರ್ಥ ಮಾಡಿಕೊಳ್ಳದೇ ಸ್ವಾರ್ಥ ಸಾಧನೆಗೆ ಹೊರಟಿದ್ದು ಭೀಷ್ಮ ಮಾಡಿದ್ದು ದೊಡ್ಡ ತಪ್ಪೇ.

 ಆದರೆ..?? ಒಮ್ಮೆ ಬಿಜೆಪಿಯ ಹಿನ್ನಲೆಯನ್ನು ನೋಡೋಣ! ಭಾರತೀಯ ಜನತಾ ಪಾರ್ಟಿ ಎನ್ನುವುದು ಈ ಪಾಟಿ ಬೆಳೆದಿದ್ದಾದರೂ ಹೇಗೆ? ಪಕ್ಷ ಹುಟ್ಟಿಕೊಂಡಿದ್ದು ಹೇಗೆ? ಇದರ ಹಿಂದಿನ ಪರಿಶ್ರಮ ಯಾರದ್ದು ಎನ್ನುವುದನ್ನು ಗಮನಿಸಿದರೆ ಅಡ್ವಾಣಿಯವರ ವರ್ಚಸ್ಸೇನು ಎಂಬುದು ಅರಿವಾಗುತ್ತದೆ.

 ಅಡ್ವಾಣಿಯವರು ಆಗ ರಾಜಸ್ಥಾನದಲ್ಲಿ ಆರೆಸ್ಸೆಸ್ ಪ್ರಚಾರಕನಾಗಿದ್ದರು. ಅದೊಂದು ದಿನ ಭರತ್ ಪುರ ಎಂಬಲ್ಲಿದ್ದ ಅವರಿಗೆ ಸಿಕ್ರಿಯಲ್ಲಿ ಏರ್ಪಾಡಾಗಿದ್ದ ಅರೆಸ್ಸೆಸ್ ನ ಕಾರ್ಯಕ್ರಮಕ್ಕೆ ತುರ್ತಾಗಿ ಹೋಗಬೇಕಾಗಿತ್ತು. ಅಲ್ಲಿಗೆ ಹೋಗಬೇಕಾದರೆ ಮೊದಲು ಕಾಮಕ್ಕೆ ಬಂದು ಅಲ್ಲಿಂದ ನಂತರ ಸಿಕ್ರಿಗೆ ಹೋಗಬೇಕಿತ್ತು. ಆದರೆ ಅಡ್ವಾಣಿ ಕಾಮಕ್ಕೆ ಬಂದು ತಲುಪಿದಾಗ ಸಿಕ್ರಿಗೆ ಹೋಗುವ ಬಸ್ಸು ಇವತ್ತು ಬರುವುದಿಲ್ಲ ಎಂದು ಗೊತ್ತಾಯಿತು. ಹೇಳಿ ಕೇಳಿ ಆರೆಸ್ಸೆಸ್ ನ ಪ್ರಮುಖ ಕಾರ್ಯಕ್ರಮವಾಗಿದ್ದರಿಂದ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವಂತಿರಲಿಲ್ಲ. ಅಡ್ವಾಣಿ ತಡಮಾಡಲಿಲ್ಲ. ನಡೆದುಕೊಂಡೇ ಹೋಗಲು ನಿರ್ಧರಿಸಿದರು. 10 ಗಂಟೆ ನಡೆದು ಸಿಕ್ರಿ ತಲುಪಿದರು. ಅಡ್ವಾಣಿ ಹೀಗೆ ನಡೆದು ಬಂದಿದ್ದು ಬರೋಬ್ಬರಿ 45 ಕಿಲೋಮೀಟರ್!!! ಮತ್ತೂ ಒಂದು ಘಟನೆ ನೋಡಿ, ಅದೊಮ್ಮೆ ಅಡ್ವಾಣಿಯವರಿಗೆ ಜನಸಂಘದ ಕಾರ್ಯಕ್ರಮದಲ್ಲಿ ತುರ್ತಾಗಿ ಭಾಗವಹಿಸಬೇಕಾಗಿತ್ತು. ಅದಾಗಲೇ ರಾತ್ರಿಯಾಗಿದ್ದರಿಂದ ಪ್ರಯಾಣಿಸಲು ಬಸ್ಸಾಗಲೀ ಟ್ಯಾಕ್ಸಿಯಾಗಲೀ ಇರಲಿಲ್ಲ. ಅಡ್ವಾಣಿಯವರಿಗಿದ್ದಿದ್ದು ಒಂದೇ ದಾರಿ. ಗೂಡ್ಸ್ ರೈಲು! ಹಿಂದೆ ಮುಂದೆ ನೋಡದೆ ರೈಲ್ವೇ ಅಧಿಕಾರಿಯ ಅನುಮತಿ ಪಡೆದು ಉಪ್ಪು ಮೂಟೆಯನ್ನು ಹೊತ್ತಿದ್ದ ರೈಲನ್ನೇರಿಯೇ ಬಿಟ್ಟಿದ್ದರು ಅಡ್ವಾಣಿ. ಇದು ಅಡ್ವಾಣಿ ಅವರಿಗೆ ಪಕ್ಷದ ಬಗ್ಗೆ ಇದ್ದೆ ಶ್ರಧ್ಧೆ, ನಿಷ್ಟೆ!

 ಇದೇ ರೀತಿ ಜನಸಂಘದ ನಾಯಕರು ರಾಜಸ್ಥಾನದ ಉರಿ ಬಿಸಿಲಿಗೆ ಟಿಸಿಲೊಡೆಯುತ್ತಿದ್ದ ಬೆವರನ್ನೂ ಲೆಕ್ಕಿಸದೇ, ಕಾಶ್ಮೀರದ ಮೈಕೊರೆಯುವ ಚಳಿಗೂ ಕ್ಯಾರೇ ಎನ್ನದೇ ಇಡೀ ಭಾರತವನ್ನು ಸುತ್ತಿದರು. ಹೀಗೆ ವಾಜಪೇಯಿಯಾಗಲಿ, ಅಡ್ವಾಣಿಯಾಗಲಿ, ಮುರಳೀ ಮನೋಹರ್ ಜೋಶಿ, ಜಸ್ವಂತ್ ಸಿಂಘ್ ಇತರ ಯಾರೇ ಆಗಲಿ ಪಕ್ಷಕ್ಕಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಜನತಾ ಪಕ್ಷದಿಂದ ಹೊರಬಂದು ಬಿಜೆಪಿ ಕಟ್ಟಿದಾಗ ಪಕ್ಷದ ಸ್ಥಿತಿ ಬಹಳ ಶೋಚನೀಯವಾಗಿತ್ತು. ಪಕ್ಷದ ಬಾವುಟ ಕಟ್ಟಲೂ ಜನರಿರಲಿಲ್ಲ. 1984ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ್ದು ಕೇವಲ ಎರಡು ಸ್ಥಾನ. ಅಂತಹ ಹೊತ್ತಲ್ಲಿ ಎದೆಗುಂದದೇ ಬಿಜೆಪಿಯನ್ನು ಬೇರು ಮಟ್ಟದಿಂದ ಬೆಳೆಸಿದವರು ಅಡ್ವಾಣಿ. ಅಟಲ್-ಅಡ್ವಾಣಿ ಜೋಡಿಯ ಅವಿರತ ಪ್ರಯತ್ನದಿಂದ  1989ರಲ್ಲಿ 89 ಸ್ಥಾನಗಳನ್ನು ಗೆಲ್ಲುತ್ತದೆ ಭಾರತೀಯ ಜನತಾ ಪಾರ್ಟಿ. 1990ರಲ್ಲಿ ಗುಜರಾತ್ ನ ಸೋಮನಾಥದಿಂದ ಉತ್ತರಪ್ರದೇಶದ ಅಯೋಧ್ಯೆಗೆ ರಥಯಾತ್ರೆ ಕೈಗೊಂಡಿದ್ದರು ಉಕ್ಕಿನ ಮನುಷ್ಯ. ಆದರೆ ಉತ್ತರ ಪ್ರದೇಶಕ್ಕೆ ತಲುಪುವ ಮೊದಲೇ ಬಿಹಾರದಲ್ಲಿ ಲಾಲೂ ಸರಕಾರ ಅವರನ್ನು ಬಂಧಿಸಿತ್ತು. ರಥಯಾತ್ರೆ ಅಯೋಧ್ಯೆ ತಲುಪಲಿಲ್ಲವಾದರೂ 1991ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ 119 ಸ್ಥಾನ ತಂದುಕೊಡುವಲ್ಲಿ ಯಶಸ್ವಿಯಾಗಿತ್ತು. ಇದರೊಂದಿಗೆ ಹಿಂದುತ್ವದ ಇಮೇಜ್ ಬಹಳ ಅನಾಯಾಸವಾಗಿ ಬಂದೊದಗಿತ್ತು ಅಡ್ವಾಣಿಯವರಿಗೆ. ಆದರೂ ಬರೇ ಹಿಂದುತ್ವ ತನ್ನ ಪಕ್ಷಕ್ಕೆ ಅಧಿಕಾರ ತಂದು ಕೊಡಲ್ಲ ಎಂಬ ವಾಸ್ತವವೂ ಅವರಿಗೆ ಅರಿವಿತ್ತು. ಅದಕ್ಕಾಗಿಯೇ ಮುಂಬೈನಲ್ಲಿ 1995ರಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಮುಂದಿನ ಚುನಾವಣೆ ನಾವು ಎ.ಬಿ.ವಾಜಪೇಯಿಯವರ ನೇತೃತ್ವದಲ್ಲಿ ಎದುರಿಸುತ್ತೇವೆ ಎಂದು ಘೋಷಿಸಿಯೇ ಬಿಟ್ಟರು. ಕಾರ್ಯಕರ್ತರೂ “ಅಗ್ಲಿ ಬಾರಿ ಅಟಲ್ ಬಿಹಾರಿ” ಎಂಬ ಸ್ಲೋಗನ್ ನೊಂದಿಗೆ ಉತ್ಸಾಹವಾಗಿ ಕೆಲಸ ಮಾಡಿದ್ದರಿಂದ 1999 ರಲ್ಲಿ ಅಟಲ್ ನೇತೃತ್ವದಲ್ಲಿ ಎನ್.ಡಿ.ಎ. ಸರಕಾರ ಅಸ್ತಿತ್ವಕ್ಕೆ ಬಂತು. ಇದಕ್ಕೆ ಪ್ರಮುಖ ಕಾರಣವಾಗಿದ್ದು ಅಡ್ವಾಣಿಯವರ ರಥಯಾತ್ರೆ ಹಾಗೂ ಹಿಂದುತ್ವದ ಅಜೆಂಡಾ. ಅಟಲ್ ಜೀ ನೇತ್ರತ್ವದ ಎನ್.ಡಿ.ಎ ಸರಕಾರದಲ್ಲಿ ಉಪಪ್ರಧಾನಿಯಾಗುತ್ತಾರೆ ಅಡ್ವಾಣಿ. ಹಲವು ಒಳ್ಳೆಯ ಕಾರ್ಯಕ್ರಮಗಳ ಮೂಲಕ ದೇಶದ ಜನರ ಮನಗೆದ್ದು 2004 ರಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಕನಸಿನಲ್ಲಿ ಇಂಡಿಯಾ ಶೈನಿಂಗ್ ಹೆಸರಿನಲ್ಲಿ ರಥಯಾತ್ರೆ ಕೈಗೊಳ್ಳುತ್ತಾರೆ ಅಡ್ವಾಣಿ. ಆದರೆ ಬಿಜೆಪಿ ಚುನಾವಣೆಯಲ್ಲಿ ಮುಗ್ಗರಿಸಿತ್ತು. 2009 ರಲ್ಲಿ ಅಡ್ವಾಣಿ ನೇತೃತ್ವದಲ್ಲಿ ಮತ್ತೊಮ್ಮೆ ಸೋತಿತ್ತು ಎನ್.ಡಿ.ಎ. ಇಲ್ಲಿಗೆ ಪಿಎಂ ಆಗೋ ಅಡ್ವಾಣಿ ಕನಸೂ ಕಮರಿ ಹೋಯಿತು.!!

 ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ಅಡ್ವಾಣಿ ತಾವೇ ನೀರೆರೆದು ಪೋಷಿಸಿದ್ದ ಪಕ್ಷದಲ್ಲಿ ಇವತ್ತು ಏಕಾಂಗಿಯಾಗಿದ್ದಾರೆ. 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಯಡಿಯೂರಪ್ಪರವರನ್ನು ಅಡ್ವಾಣಿಯವರ ಪ್ರಬಲ ಪ್ರತಿರೋಧದ ನಡುವೆಯೂ ಮಾತೃ ಪಕ್ಷಕ್ಕೆ ಕರೆದು ತಂದಿತ್ತು ಮೋದಿ-ಅಮಿತ್ ಜೋಡಿ. ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಅಡ್ವಾಣಿಯವರನ್ನು ಎನ್.ಡಿ.ಎ. ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬಹುದು ಎಂಬುದು ಎಲ್ಲರ ಊಹೆಯಾಗಿತ್ತು. ಆದರೆ ಹಾಗಾಗಲಿಲ್ಲ. ೧೨ ಸದಸ್ಯರ ಪಾರ್ಲಿಮೆಂಟರಿ ಬೋರ್ಡ್ ನಿಂದಲೂ ಅಡ್ವಾಣಿಯವರನ್ನು ಹೊರಗಿಡಲಾಯಿತು. ಹೊಸದಾಗಿ ನಿರ್ಮಿಸಲಾದ ಮಾರ್ಗದರ್ಶಕ ಮಂಡಳಿಯಲ್ಲಿ ಭೀಷ್ಮರನ್ನು ಸೇರಿಸಲಾಯಿತಾದರೂ ಅಡ್ವಾಣಿ ಬರೇ ದರ್ಶಕರಾಗಿ ಉಳಿದಿರುವುದಂತೂ ಎಲ್ಲರಿಗೂ ಗೊತ್ತಿರುವ ಸತ್ಯ. ಅಡ್ವಾಣಿಯವರು ಕನಿಷ್ಟ ಪಕ್ಷ ಲೋಕಸಭಾ ಸ್ಪೀಕರ್ ಸ್ಥಾನವನ್ನಾದರೂ ನಿರೀಕ್ಷಿಸಿದ್ದರು. ಆದರೆ ಅದೂ ಅಡ್ವಾಣಿಯವರ ಪಾಲಿಗೆ ಬಂದೊದಗಲಿಲ್ಲ.

 ಇನ್ನು ಮೊನ್ನೆ ನಡೆದ ಬೆಂಗಳೂರು ರಾಷ್ಟ್ರೀಯ ಕಾರ್ಯಕಾರಣಿಯಲ್ಲೂ ಅಡ್ವಾಣಿ ಮೌನಕ್ಕೆ ಶರಣಾಗಿದ್ದರು. ಇಲ್ಲಿಯವರೆಗೆ ನಡೆದ ಎಲ್ಲಾ ಕಾರ್ಯಕಾರಣಿಗಳಲ್ಲಿ ಅಡ್ವಾಣಿ ಭಾಷಣವೇ ದಿಕ್ಸೂಚಿಯಾಗಿತ್ತು. ಆದರೆ ಗೋವಾ ಕಾರ್ಯಕಾರಣಿಗೆ ಗೈರಾಗಿದ್ದ ಅಡ್ವಾಣಿ ಬೆಂಗಳೂರು ಕಾರ್ಯಕಾರಣಿಗೆ ಹಾಜರಾದರೂ ಭಾಷಣವನ್ನೇ ಮಾಡಲಿಲ್ಲ. ಬೆಂಗಳೂರು ಕಾರ್ಯಕಾರಣಿಗೂ ಗೈರು ಹಾಜರಾಗುವ ಆಲೋಚನೆಯಲ್ಲಿದ್ದರು ಬಿಜೆಪಿಯ ಭೀಷ್ಮ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ತಮ್ಮಿಂದಾಗಿ ಪಕ್ಷಕ್ಕೆ ಇರಿಸು-ಮುರಿಸಾಗಬಾರದು ಎಂದು ಹಿರಿತನವನ್ನು ಮೆರೆದಿದ್ದಾರೆ ಅಡ್ವಾಣಿ. ಬಿಜೆಪಿ ರಾಜ್ಯ ಘಟಕವೂ ಅಡ್ವಾಣಿಯವರನ್ನು ನಿರ್ಲಕ್ಷಿಸಿದ್ದು ಎದ್ದು ಕಾಣುತ್ತಿತ್ತು. ವೇದಿಕೆ ಮೇಲೆ ಮೋದಿ,ಅಮಿತ್ ಶಾ ಅವರಿಗೆ ಹಾರ ತುರಾಯಿ, ಪೇಟ ತೊಡಿಸಿ ಸನ್ಮಾನ ಮಾಡಿದ್ದ ರಾಜ್ಯ ನಾಯಕರು ತಮ್ಮ ಪಕ್ಷದ ಹಿರಿಯ ನಾಯಕನನ್ನು ಮರೆತಿದ್ದರು.

 ಶಿಷ್ಯ ತನ್ನನ್ನು ಮೀರಿಸಿದಾಗ ಗುರುವಾದವನು ಖುಷಿಯಾಗಬೇಕು ಎಂಬ ಮಾತಿದೆ. ಆದರೆ ಅಡ್ವಾಣಿ ವಿಚಾರದಲ್ಲಿ ಇದಾಗಲಿಲ್ಲ,ಶಿಷ್ಯನನ್ನು ಆಶೀರ್ವದಿಸಬೇಕಿದ್ದ ಅಡ್ವಾಣಿಯವರು ಆತನ ವಿರುದ್ಧ ಕತ್ತಿ ಮಸೆದರು ಎನ್ನುವುದು ಬಹುತೇಕರ ಅಭಿಪ್ರಾಯ. ರಾಜನಾದವನು ರಾಜ್ಯವನ್ನು ಹೇಗೆ ನೋಡಿಕೊಳ್ಳಬೇಕೆಂದು ಮಹಾಭಾರತದಲ್ಲಿ ಭೀಷ್ಮ ಹೇಳುತ್ತಾನೆ. ಗುಜರಾತ್ ಗಲಭೆ ವಿಷಯದಲ್ಲಿ ಬಿಜೆಪಿಯ ಭೀಷ್ಮ ಅಡ್ವಾಣಿ ಮೋದಿ ರಕ್ಷಣೆಗೆ ನಿಂತಿದ್ದರು. ಆದರೆ ಅದೇ ಅಡ್ವಾಣಿ ಸ್ಥಿತಿ ಇವತ್ತು ಮಹಾಭಾರತದ ಭೀಷ್ಮನಂತೆ ಆಗಿರುವುದಂತೂ ವಿಪರ್ಯಾಸವೇ ಸರಿ.

 ಇವತ್ತಿನ ಯಂಗ್ ಜನರೇಶನ್ (ನನ್ನನ್ನೂ ಸೇರಿ) ಮೋದಿ ಬೆಂಬಲಕ್ಕಿರಬಹುದು.( ಬಹುತೇಕರಿಗೆ ಬಿಜೆಪಿಯ ಇತಿಹಾಸ ತಿಳಿದಿಲ್ಲ) . ಆದರೆ ಮೋದಿ, ಶಾ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅಧಿಕಾರ, ನಾಯಕತ್ವ ಯಾವತ್ತೂ ಶಾಶ್ವತವಲ್ಲ. ಹೃದಯ ವೈಶಾಲ್ಯತೆಗೆ ಮೀರಿದ್ದು ಯಾವುದೂ ಇಲ್ಲ.  ಅಡ್ವಾಣಿಯವರು ಪಕ್ಷದಲ್ಲಿ ತಾನೂ ಬೆಳೆದಿದ್ದಾರೆ ಉಳಿದವರನ್ನೂ ಬೆಳೆಸಿದ್ದಾರೆ. ಇವತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರಲು ಮೋದಿಯೇ ಕಾರಣವೆನ್ನುವುದು ನಿಸ್ಸಂಶಯವಾಗಿಯೂ ಸತ್ಯ. ಆದರೆ ಪಕ್ಷವನ್ನು ಆ ಮಟ್ಟಕ್ಕೆ ಬೆಳೆಸಿದ್ದು ಅಡ್ವಾಣಿ ಎನ್ನುವುದೂ ಸೂರ್ಯ ಚಂದ್ರರಷ್ಟೆ ಸತ್ಯ. ಅಂತಹಾ ಮಿ.ಕ್ಲೀನ್ ವ್ಯಕ್ತಿಯನ್ನು ಮೋದಿ-ಅಮಿತ್ ಜೋಡಿ ಒಳ್ಳೆ ರೀತಿಯಲ್ಲಿ ನಡೆಸಿಕೊಳ್ಳಬಹುದಿತ್ತು. ಅದು ಬಿಟ್ಟು ಅಡ್ವಾಣಿಯೆವರು ನಮ್ಮ ನಾಯಕರು, ಅವರ ಮಾರ್ಗದರ್ಶನವನ್ನು ಪಕ್ಷ ಸದಾ ಬಯಸುತ್ತದೆ ಎನ್ನುವ ಮಾತು ಬರೀ ಮಾತಾಗಿರದೆ ಕೃತಿಯಲ್ಲಿಯೂ ಇದ್ದರೆ ಉತ್ತಮ ಹಾಗೂ ಅದು ಎಲ್ಲರಿಗೂ ಶೋಭೆ ತರುವಂತದ್ದು!!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!