ಅದು ಕಣಿಯಾರು ಮಲೆ , ಒಂದು ಕಾಲದಲ್ಲಿ ಸಸ್ಯಜನ್ಯ, ಪ್ರಾಣಿಗಳಿಂದ ತುಂಬಿದ್ದ ಸಮೃದ್ಧ ಅರಣ್ಯ , ಮೂಜುವಿನ ಕೂಗು , ಗೂಬೆಯ ಹಾಡು , ಪೊಟ್ಟ ಹಕ್ಕಿಯ ಕರ್ಕಶ ಧ್ವನಿ ಸಾಮಾನ್ಯವಾಗಿರುತಿತ್ತು. ಇಂದು ಸಹ ಒಂದಷ್ಟು ಇವುಗಳ ಸಂಖ್ಯೆಯಲ್ಲಿ ಅವರೋಹಣವಾಗಿದ್ರೂ ನೈಜತೆಯನ್ನು ಉಳಿಸಿಕೊಂಡು ಬಂದಿದೆ. ಕಾಡಿನ ತಪ್ಪಲಿನಲ್ಲಿರುವ ಅರಣ್ಯ ಇಲಾಖೆಯ ಗುಪ್ಪೆಯ ವರೆಗೆ ಒತ್ತುವರಿ ಮಾಡಿ ಮನೆ ಕಟ್ಟಿಸಿಕೊಂಡು ಜೀವನ ಸಾಗಿಸುವ ಕಷ್ಟ ಜೀವಿಗಳು , ಅವರೊಬ್ಬ ಈ ಮುದರ , ತನ್ನ ಎರಡು ಕೋಣೆಯ ಪುಟ್ಟ ಮುಳಿ ಹುಲ್ಲಿನ ಮನೆಗೆ ಮಳೆಗಾಲದ ಮೊದಲೂಮ್ಮೆ ಅಡಕೆ ಹಾಲೆಯ ತುಂಡುಗಳನಿಟ್ಟು ಮಾಡಿನ ಸಂದಿನ ಸೆರೆಯಿಂದ ಸೂರ್ಯನ ಬೆಳಕು ಬರುವುದನ್ನು ತಡೆಯುತ್ತಾನೆ , ಗಾಳಿಗೆ ಅಲ್ಲಾಡುವ ಸೋಗೆಯನ್ನು ನಿಲ್ಲಿಸಲು ತೆಂಗಿನ ಮಡಲೋ , ಬಿದಿರಿನ ತೊಳುಗಳನಿಟ್ಟು ಸಿಂಗಾರ ಮಾಡುತ್ತಾನೆ. ಆರು ಜನರಿರುವ ಮನೆಯಲ್ಲಿ ಯಜಮಾನನಾಗಿಯೇ ಇದ್ದು ದುಡಿಯದೇ ಜೀವನ ಸಾಗಿಸುತಿದ್ದ. ಬೇಸಗೆಯಲ್ಲಿ ಜೇನು ಹಿಡಿದು ತಂದು ಹತ್ತಿರದ ಭಟ್ರ ಅಂಗಡಿ ಮಧು ಮಲ್ಟಿಪಲ್ಸ್ಗೆ ಪೆಟ್ಟಿಗೆ ಜೇನೆಂದು ಮಾರಿ ದುಡ್ಡು ಮಾಡುತಿದ್ದ . ಬೇಡವಾದ ಪುರಿಯೆದಿ , ಮಂಜೊಲ್ ಎದಿಗಳೆಂದು ವಿಂಗಡಿಸಿ ಅದೆಷ್ಟೋ ಬಾರಿ ನನ್ನ ಬಾಯನ್ನು ಸಿಹಿ ಮಾಡಿದ್ದ . ಅಪರೂಪಕ್ಕೆಂಬಂತೆ ಜೇನಿನ ಅತಿಯಾದ ಪ್ರೀತಿಯಿಂದ ಆತನನ್ನು ಖಾರವಾಗಿ ಕುಟುಕಿ ಹನುಮಂತನಾದದ್ದು ಇದೆ . ಯಾವ ಕಲ್ಲಿನ ಸೆರೆಯಲ್ಲಿ ಯಾವ ಜೇನಿದೆ ಎಂದು ಆತನಿಗೆ ತಿಳಿಯುತ್ತಿತ್ತು , ತುಡುವೆ , ಕೋಲ್ಚಿಯಾ , ಕುಡುಪೋಲ್ , ಮೊಜಂಟಿ , ಅತೀ ಎತ್ತರದಲ್ಲಿ ಗೂಡು ಕಟ್ಟುವ ಪೆರಿಯ ಹೀಗೆ ಹಲವು ….. ಯಾವಾಗಲು ಏಕಾಂಗಿಯಾಗಿ ಅಲೆಯುವ ಆತನಿಗೆ ಅನೇಕ ಬಾರಿ ಸಾಥ್ ನೀಡುತಿದದ್ದು ನಮ್ಮ ಮನೆಯ ರಾಜು , ಮೆಲ್ಲನೆ ಆತನಿಂದ ಮುಂದೆ ಮುಂದೆ ಹೋಗಿ ಬಾಲ ಅಲ್ಲಾಡಿಸುತ್ತಾ , ಭೂ ವಿಜ್ಞಾನಿಯಂತೆ ಮೂಸಿ ಕಲ್ಲಿನ ಸೆರೆಯಲ್ಲಿರುವ ಜೇನನ್ನು ಸಂಶೋಧಿಸುತಿತ್ತು , ಎತ್ತರದ ಕುಂಬು ಕುತ್ತಿಯ ಮೇಲೆ ಕಾಡುಕೋಳಿಯ ಮೊಟ್ಟೆಯನ್ನು ಗೊತ್ತು ಮಾಡಿಸುತಿತ್ತು. ಮತ್ತೆ ಋತುಮಾನ ಅನುಸಾರ ವಾಗಿ ಬೆಳೆಯುವ ಕಾಡುತ್ಪತಿಗಳಾದ ಸೀಗೆ , ಉಂಡೆ ಪುಲಿ , ಕಾಟ್ ಪುಲಿ, ಲೆಂಕಿರಿ ಕೊಕ್ಕೆ , ಬೆದ್ರ್ ಕೇರ್ಪು ಗಳನ್ನೂ ತಂದು ಸೇಸಪ್ಪಣ್ಣನ ಅಂಗಡಿಗೋ, ಮೂಸೆ ಬ್ಯಾರಿಗೋ ಮಾರುತಿದ್ದ .
ಮುದರ ಹೋದಲೆಲ್ಲ ಗೈರ್ ವೈರ್ ನ ಉರುಳು ಇಟ್ಟು ಬರುವುದು ಅಭ್ಯಾಸ , ಅಪರೂಪಕ್ಕೆಂಬಂತೆ ಕೇಂಕನ್ , ಮುಳ್ಳು ಹಂದಿ, ಕಾಡು ಹಂದಿ, ಬೆರೂ ಹೀಗೆ ಹಲವು ಕಾಡು ಪ್ರಾಣಿ – ಪಕ್ಷಿಗಳು ಸಿಕ್ಕಿ ಅಡುಗೆ ಮನೆ ಸೇರುತಿದ್ದವು . ಮಳೆಯೆಂದರೆ ಅವನಿಗೇನೋ ಪ್ರೀತಿ ಜಡಿ ಮಳೆಯಿರಲಿ , ಪಿರಿ ಪಿರಿ ಮಳೆಯಿರಲಿ ಹಳೆಯ ಕೊರಂಬು , ಕೈ ಕಡೆ ಇಲ್ಲದ ಕೊಡೆ ಆತನನ್ನು ಸೇರುತ್ತಿತ್ತು ತೋಡುತ್ಪತಿಗಳಾದ ತೆಂಗಿನ ಕಾಯಿ , ನೀರಿನ ಸುಳಿಗೆ ಅಲ್ಲೇ ನಿಂತ ಅಡಿಕೆ , ಅಂಬಟೆ ಆತನ ಹಳೆಯ ಸಂಗೀಸು ಚೀಲದಲ್ಲಿ ಕುಣಿಯುತಿರುತಿತ್ತು. ಮತ್ತೆ ನರ್ತೆ , ಸಾರಿನ ಡೆಂಜಿ , ಗದ್ದೆಯ ಆಮೆಗಳೆಲ್ಲ ಅಡುಗೆಯ ನೆಸಲೆಯೊಳಗೆ ವ್ಯಾಯಾಮ ಮಾಡುತಿರುತ್ತಿದ್ದವು . ಪಿರಿಪಿರಿ ಮಳೆಯ ಜೊತೆ ಬರುವ ಗುಡುಗಿಗೆ ಅರಳುವ ಭಟ್ರ ಮಾಂಸವಾದ ಅಣಬೆಗಳು ಆತನನ್ನೇ ಹುಡುಕಿಕೊಂಡು ಬಂದಂತೆ ಆತನ ಸುತ್ತ ಮುತ್ತಲೇ ಅರಳುತಿದ್ದವು ನಾಯಿಂಬ್ರೆ , ಮುಟ್ಟಾಲಂಬು , ಸುಳಿರು . ಪರಲ್ಲು , ಕಲ್ಲಣಬೆ, ಮರಣಬೆ ಹೀಗೆ … ಅಪರೂಪಕ್ಕೆಂಬಂತೆ ಅಪ್ಪ ಅಣಬೆಯ ಪರಿಮಳ ಸಿಕ್ಕಿ ಹುಡುಕುವುದನ್ನು ನೋಡಿದರೆ , ಅಣಬೆಗಳನ್ನು ಹುಡುಕಬಾರದು ಕೆಲವೊಮ್ಮೆ ವಿಷ ಹಾವುಗಳು ಅಣಬೆಯನ್ನು ನೆಕ್ಕಿ ಬಂದು ಬಾಯಿ ದೊಡ್ಡ ಮಾಡಿ ಪರಿಮಳ ಬಿಡುತ್ತವೆ ಎಂದು ಎಚ್ಚರಿಸುತಿದ್ದ .
ಹಿಂಗಾರು ಶುರುವಾಗುತ್ತಾ , ದೀಪಾವಳಿ ಹತ್ತಿರವಾದಂತೆ, ಷಷ್ಟಿಯ ಸಮಯಕ್ಕೆ ದುಂಬಿಗಳು ತಲೆಯ ಎತ್ತರದಲ್ಲಿ ಹಾರುತಿದ್ದಂತೆ , ಹಾವುಗಳು ಹರಿದಾಡುವುದು ಜಾಸ್ತಿ … ನಮ್ಮ ಮನೆಯಂಗಳದಲ್ಲಿ ಹಾವುಗಳನ್ನು ಕಂಡರೆ ಆತನನ್ನೇ ಕರೆಯುತಿದ್ದೆವು , ಅದೇನೋ ಪವಾಡವೋ ಗೊತ್ತಿಲ್ಲ , ಆತನನ್ನು ಕಂಡ ಕೂಡಲೇ ಮೃಗ ಕೂಡಿಬರದೇ ಸರಸರನೇ ತಮ್ಮ ಹಾದಿ ಹಿಡಿಯುತಿದದ್ದು ಮಾತ್ರ ಸತ್ಯ. ಆತ ವಿವರಿಸುತ್ತಾ ಆ ಹಾವು ಇಷ್ಟು ವಿಷ , ಇದರಲ್ಲಿ ಹಲವು ಬಣ್ಣ ಇರುತ್ತದೆ , ಅದು ಹಾಗೆ ನೆತ್ತೆರ್ ಮುಂಗುಲಿ , ಕಟ್ಟ ಮಲಕರಿ , ಮರಮರಿ , ಪಗೆಲೇ , ತೌಡುಗುಲೆ ಹೀಗೆ ಹಲವು ಬಗೆಯವೂ ಎಂದು … ಉಡ , ಪೊಲಿಂಕೆಗಳು ಮನೆಯ ಗೋಡೆಯಲ್ಲಿ ಹರಿದಾಡಿದರೆ ಮನೆಗೆ ಮಾಟ ಮಾಡಿದಂತೆ , ಅರಣೆ ತಲೆ ಮುಟ್ಟಿದರೆ ಮರೆವು ಜಾಸ್ತಿ , ಹಲ್ಲಿ ನೆತ್ತಿಗೆ ಬಿದ್ದರೆ ಮರಣ ಅಂತಲೂ ವಿವರಿಸುತಿದ್ದ . ಆತನೊಂದಿಗೆ ಸಕಾರಣದಿಂದ ಕಾಡಿಗೆ ಹೋದದ್ದೇ ಆದರೆ ಅದೆಷ್ಟೋ ಗಿಡ ಬಳ್ಳಿಗಳ ಬಗೆಗೆ ನಮ್ಮ ಜೀವಶಾಸ್ತ್ರ ಶಿಕ್ಷಕಿಗಿಂತಲೂ ಚೆನ್ನಾಗಿ ವಿವರಿಸುತಿದ್ದ ಅದು ಪಾದಲಪ್ಪು , ಈಶ್ವರ ಬೇರು , ಕಟ್ರೆಗಿಡ , ನೆಲನೆಲ್ಲಿ , ಬೊಲ್ಲೆಸಪ್ಪು , ಗರುಡಪಾತಾಳ , ಒಳ್ಳೆಕುಡಿ , ನೆಲಪಾದೆ , ನೀಲಿ ಸಪ್ಪು , ಪಂಚೆ ಪತ್ರೆಗಳೆಂದು ಹೇಳಿ ಅದು ಜ್ವರಕ್ಕೆ , ಇದು ಪಿತ್ತಕ್ಕೆ , ಉರಿ ಮೂತ್ರಕ್ಕೆ, ಇದು ಬಾಣಂತಿಯರಿಗೆ ಕೊಟ್ಟರೆ ಒಳ್ಳೆಯದು ಕೆಲವನ್ನು ಅರೆದು ಹಸಿ ಕುಡಿಯಬೇಕು , ಮತ್ತೆ ಕೆಲವನ್ನು ಕಷಾಯ ಮಾಡಬೇಕೆಂದು ತಿಳಿಸಿ ಹೇಳಿ ಆಯುರ್ವೇದ ವೈದ್ಯನೂ ಆಗುತಿದ್ದ . ಆತ ಹೋದದ್ದೇ ದಾರಿ , ಬಂದದ್ದೇ ಮಾರ್ಗ, ಬಾಯಾರಿಕೆ ನೀಗಿಸಲು ಯೆಂಜಿರ್ ಬಳ್ಳಿಯ ಕಡಿದು ನೀರು ಕುಡಿಸುತಿದ್ದ ಅದು ಆರೋಗ್ಯಕ್ಕೂ ಉತ್ತಮ ಕಣ್ಣಿನ ರಕ್ಷಣೆಗೂ ದಿವ್ಯ ಔಷಧಿಯೆಂದು …. ಹೊಟ್ಟೆ ತುಂಬಿಸಲು ಕಾಟು ನೆಲ್ಲಿಕಾಯಿ, ಕಾರೆ ಕಾಯಿ , ಕೊಟ್ಟೇ ಹಣ್ಣು , ಚೂರಿಕಾಯಿ ಗಳನ್ನೂ ಕೀಳಿ ಕೊಡುತಿದ್ದ . ಮತ್ತೆ ಈ ನೀರಿನ ಗುಂಡಿಗೆ ಜಿಂಕೆ ಬರುತ್ತದೆ , ಕಾಟಿಯ ಕರುವಿನ ಹೆಜ್ಜೆ ಇದು ಇಲ್ಲೊಮ್ಮೆ ನೋಡಿ , ಇದು ಕಾಡು ಹಂದಿಯ ಹೆಜ್ಜೆ ಹೀಗೆ ಹೆಜ್ಜೆಗಳ ಪರಿಚಯವನ್ನು ಮಾಡಿಸುತಿದ್ದ .
ಈ ಮುದರ ನಮ್ಮ ದೈವದ ಸೇವಕನಾಗಿದುದ್ದರಿಂದ ;ಜೀವನದಲೋಮ್ಮಯೂ ಆತನ ಪಾದ ಚಪ್ಪಲ್ಲಿ ಸವೆಸಿಲ್ಲ , ತಲೆ ಮುಟ್ಟಾಲೆಯನ್ನು ಮುಟ್ಟಿಲ್ಲ . ಆತ ಹೇಳುತಿದ್ದ ಕಥೆಗಳೆಲ್ಲ ವಿಶೇಷ ಆಸಕ್ತಿ ಹುಟ್ಟಿಸುವಂತಹುಗಳು , ಭತ್ತದಿಂದ ವೈನು ತೆಗೆಯುವುದು , ರಮ್ಮು ಕುಡಿದಾಗ ಶೀತ ಕಡಿಮೆಯಾಗುವುದು , ಒಣಗಿದ ಗೇರು ಮರ ಕಡಿದಾಗ ಮೀಸೆ ಸುಂದರ ಗಾರ್ಡ್ ರ ಜಬರ್ದಸ್ತ್ ಗೆ ಬೋಂಡ ಕೊಟ್ಟು ಸಮಾಧಾನ ಮಾಡಿದ್ದೂ , ನಾಗರಹಾವು ತನ್ನ ಬಾಯಲ್ಲಿರುವ ಮಾಣಿಕ್ಯವನ್ನು ಬದಿಯಲಿಟ್ಟು ನೀರು ಕುಡಿಯುವುದು , ರಾತ್ರಿ ಹೊತ್ತು ರಿಕ್ಷಾ ಟೆಂಪೋ ದಲ್ಲಿ ಬಂದ ಮೀನು ತರುವಾಗ ಹಿಂದಿನಿಂದ ಏನೋ ಎಳೆದಂತೆ ಆದದ್ದು , ಬಿಳಿ ಕುಲೆ ಕಂಡದ್ದು , ಬ್ರಹ್ಮ ರಕ್ಕಸ ಪಾಚಿಯದದ್ದು , ಒಂಟಿ ಕಾಟಿಯನ್ನು ಓಡಿಸಿದ್ದು ಹೀಗೆ ಸಾಲು ಸಾಲು ಅಂತೆ ಕಂತೆಗಳೇ ನಮ್ಮ ಬುದ್ಧಿಗೆ ಆಹಾರವಾಗುತಿದ್ದವು . ಈ ವರ್ಷದ ಮುಂಗಾರಿನ ಜಿಟಿ ಜಿಟಿ ಮಳೆಗೆ ನೆನೆಯ ಬೇಕಾದ ಈತ ಅದಕ್ಕೆ ಮೊದಲೇ ಕಳೆದು ಹೋಗಿದ್ದಾನೆ . ಪರಿಸರ ರಕ್ಷಕನಾಗಿ , ಶಿಕ್ಷಕನಾಗಿ ಮುದರ ಆಗಾಗ ಕಾಡುತಿರುತ್ತಾನೆ .