ಪ್ರಚಲಿತ

ಭಾರತೀಯ ಶಿಕ್ಷಣ: ಬದಲಾವಣೆಯ ಅಗತ್ಯತೆ

ಕಲಿಕೆ, ಮೂರಕ್ಷರದ ಪದವಾದರೂ, ಅಗಾಧ ಅರ್ಥ ಉಳ್ಳದ್ದು. ಹುಟ್ಟಿನಿಂದ ಸಾಯುವ ತನಕವೂ ಪ್ರತಿಯೊಂದು ಜೀವಿಗೂ ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ಪ್ರತಿದಿನವೂ ಪ್ರತಿ ಕ್ಷಣವೂ ಕಲಿತರೂ ಮುಗಿಯದಷ್ಟು ಸಂಗತಿಗಳು ಜೀವನದಲ್ಲಿ ಹಾದುಹೋಗುತ್ತವೆ. ಇದೇ ಕಲಿಕೆ ಎಂಬ ಪದವನ್ನು ಒಂದು ಚೌಕಟ್ಟಿನೊಳಗೆ ಇಟ್ಟು ಹೇಳುವುದಾದರೆ ಅದುವೇ ಶಾಲಾ ಶಿಕ್ಷಣ. ಅಂದರೆ ಇದು ಜೀವನದ ಅಗಾಧ ಕಲಿಕೆಯ ಒಂದು ಸಣ್ಣ ಭಾಗ.

ಮಕ್ಕಳಿಗೆ ಎಲ್ಲವನ್ನೂ ಹೇಳಿಕೊಡುವುದು ಸಾಧ್ಯವೇ? ಖಂಡಿತಾ ಇಲ್ಲ. ಅದಕ್ಕಾಗಿ ಪ್ರಾಥಮಿಕ ಹಂತದಲ್ಲಿ ಕೆಲವೊಂದು ಸಮಾನ್ಯವಾದ ಮೂಲಭೂತ ವಿಷಯಗಳಾದ ಗಣಿತ, ವಿಜ್ಞಾನ ಇತಿಹಾಸ ಹಾಗೂ ಜನರೊಂದಿಗೆ ವ್ಯವಹರಿಸಲು ಅಗತ್ಯವಾದಂತಹ ಕೆಲವು ಭಾಷೆಗಳನ್ನು, ಮುಂದೆ ಹೋದಂತೆ ಆಯ್ದ ನಿರ್ದಿಷ್ಟ ವಿಷಯಗಳನ್ನು ಕ್ರಮಪ್ರಕಾರವಾಗಿ, ವಯಸ್ಸಿಗನುಗುಣವಾಗಿ ಪಠ್ಯಪುಸ್ತಕಗಳ ಸಹಾಯದೊಂದಿಗೆ ಹೇಳಿಕೊಡುವುದೇ ಇಂದಿನ ‘ಶಿಕ್ಷಣ’ ಪದದ ಸಾಂಕೇತಿಕ ಅರ್ಥ. ಸಂಕ್ಷಿಪ್ತವಾಗಿ ಹೇಳುವುದಾದರೆ ಎಲ್ಲರಿಗೂ ಕೆಲವು ಸಾಮಾನ್ಯ ವಿಷಯಗಳ ಬಗ್ಗೆ ತಿಳುವಳಿಕೆ ನೀಡುವುದೇ ಇದರ ಮುಖ್ಯ ಉದ್ದೇಶ. ಹಿಂದೆ ಭಾರತದಲ್ಲಿ ವೇದ, ಶಸ್ತ್ರವಿದ್ಯೆಗಳಂತಹ ವಿಷಯಗಳನ್ನು ಬೋಧಿಸಲು ಗುರುಕುಲಗಳ ರೂಪದಲ್ಲಿ ಪ್ರಾರಂಭವಾದ ಶಿಕ್ಷಣ ಪದ್ಧತಿಯು ನಂತರ ಹಲವು ಮಾರ್ಪಾಡುಗಳನ್ನು ಹೊಂದಿ ಪ್ರಸಕ್ತ ನಾವು ಶಿಕ್ಷಣ ಪಡೆಯುತ್ತಿರುವ ಶಾಲೆಗಳು ರೂಪುಗೊಂಡಿವೆ.

ಹಿಂದೆ ಭಾರತೀಯ ಶಿಕ್ಷಣವು ಅತ್ಯುತ್ತಮ ಮೌಲ್ಯಗಳನ್ನೂ, ಪ್ರಾಯೋಗಿಕ ಜ್ಞಾನವನ್ನೂ, ಜೀವನ ಕೌಶಲಗಳನ್ನೂ ನೀಡುತ್ತಿತ್ತು. ಆದರೆ ಯಾವಾಗ ಬ್ರಿಟಿಷರಿಂದ ನಮ್ಮ ಶೈಕ್ಷಣಿಕ ಪದ್ಧತಿಯು ಮಾರ್ಪಡಿಸಲ್ಪಟ್ಟಿತೋ, ಅಂದಿನಿಂದ ಶಿಕ್ಷಣದಲ್ಲಿ ಜೀವನ ಮೌಲ್ಯಗಳ ಕುಸಿತ ಪ್ರಾರಂಭವಾಯಿತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಇಂದು ಎಲ್ಲೆಡೆ ಸ್ಪರ್ಧೆ ಎಷ್ಟರಮಟ್ಟಿಗೆ ಇದೆ ಎಂದರೆ ಮಕ್ಕಳ ವಿದ್ಯಾಭ್ಯಾಸ ಸ್ಪರ್ಧೆಗಷ್ಟೇ ಸೀಮಿತವಾಗಿದೆ. ಇದಕ್ಕೆ ಪೋಷಕರೂ ಪ್ರಮುಖ ಕಾರಣ. 100ಕ್ಕೆ 100 ಅಂಕ ಪಡೆದರೂ ತೃಪ್ತವಾಗದ ಮನಸ್ಸು. ಅದಕ್ಕಾಗಿ ವಿಶೇಷ ಬೋಧನಾ ತರಗತಿಗಳು, ಮನೆ ಪಾಠ, ಲಕ್ಷಗಟ್ಟಲೆ ಶುಲ್ಕ ಇವೆಲ್ಲವೂ ಈಗ ಸರ್ವೇ ಸಾಮಾನ್ಯ. ಅದೇ ಅವರಿಗೆ ಪ್ರತಿಷ್ಠೆ, ಘನತೆ. ಆದರೆ, ಇವೆಲ್ಲದರ ನಡುವೆ ನಿಶ್ಶಬ್ಧವಾಗಿ ಕಳೆದುಹೋಗುತ್ತಿರುವುದು ಮಕ್ಕಳ ಮುಗ್ಧತೆ, ಜೀವನ ಕೌಶಲಗಳು, ಸಾಮಾನ್ಯ ಜ್ಞಾನ ಹಾಗೂ ಮೌಲ್ಯಗಳು. ವಿದ್ಯಾಭ್ಯಾಸವು ಪಠ್ಯಪುಸ್ತಕಗಳಿಗೇ ಸೀಮಿತÀವಾಗಿರುವ ಕಾರಣ ಪ್ರಾಯೋಗಿಕ ಜ್ಞಾನವೂ ಎಲ್ಲೋ ಮರೆಯಾಗುತ್ತಿದೆ. ಬಾಲ್ಯ ಶಿಕ್ಷಣದಿಂದ ಹಿಡಿದು ಉನ್ನತ ವ್ಯಾಸಂಗದವರೆಗೂ ಇದೇ ಸ್ಥಿತಿ. ಬಾಲ್ಯದಲ್ಲಿ ಶೂ ಲೇಸ್ ಕಟ್ಟುವುದರಿಂದ ಹಿಡಿದು, ಮುಂದೆ ಕಟ್ಟಡ ಕಟ್ಟುವವರೆಗೂ ಕನಿಷ್ಠ ಪ್ರಾಯೋಗಿಕ ಜ್ಞಾನ ಹಾಗೂ ಸಾಮಾನ್ಯ ಆಲೋಚನಾ ಶಕ್ತಿಯೇ ಹಲವರಲ್ಲಿ ಇರುವುದಿಲ್ಲ. ಶಾಲಾ ಕಾಲೇಜುಗಳು ತಮ್ಮ ನಿಜವಾದ ಕರ್ತವ್ಯವಾದ ಶಿಕ್ಷಣವನ್ನು ಬಿಟ್ಟು ಹಣದ ಕ್ರೋಢೀಕರಣದಲ್ಲೇ ಮಗ್ನರಾಗಿರುವುದು ಈಗಿನ ಈ ಸ್ಥಿತಿಗೆ ಮುಖ್ಯ ಕಾರಣಗಳಲ್ಲೊಂದು.
ಮುಗ್ಧತೆಗೆ ಇನ್ನೊಂದು ಹೆಸರೇ ಮಕ್ಕಳು. ಮಕ್ಕಳ ಬಾಲ್ಯವನ್ನು, ಮುಗ್ಧತೆಯನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಮಗುವಿಗೆ 2 ವರ್ಷ ಆಗುವಾಗಲೇ ಪೋಷಕರು ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ಬಾಗಿಲು ಬಡಿಯುತ್ತಾರೆ. ಎಳವೆಯಲ್ಲೇ ಸ್ಪರ್ಧೆ ಎಂಬ ಭೂತ ಮಕ್ಕಳ ಬೆನ್ನು ಹತ್ತುತ್ತದೆ. ಹೀಗೆ 2-3ರ ವಯಸ್ಸಿಗೇ ಬಲವಂತವಾಗಿ ಎ, ಬಿ, ಸಿ, ಡಿ… ಹೇರುವ ಪೋಷಕರ ದುಸ್ಸಾಹಸಕ್ಕೆ ಕಡಿವಾಣ ಹಾಕಿದಾಗಲೇ ಆ ಕಂದಮ್ಮಗಳು ತಮ್ಮ ಸುಂದರವಾದ ಬಾಲ್ಯವನ್ನು ಅನುಭವಿಸಬಹುದು. ಇದಕ್ಕಾಗಿ ಮಕ್ಕಳನ್ನು ಶಾಲೆಗೆ ಸೇರಿಸಲು ಕನಿಷ್ಠ 4 ವರ್ಷ ತುಂಬಿರಬೇಕು ಎನ್ನುವ ಕಾನೂನು ಜಾರಿಯಾಗಬೇಕು.
ಇನ್ನು 1ರಿಂದ 10ನೇ ತರಗತಿಯ ಮಕ್ಕಳ ವಿಷಯಕ್ಕೆ ಬರುವುದಾದರೆ, ಇದು ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಯ ಪ್ರಮುಖ ಘಟ್ಟ. ಕುತೂಹಲ, ಆಸಕ್ತಿಗಳು ಹೊರಬರುವ ವಯಸ್ಸೂ ಸಹ ಇದೇ. ಹಾಗಾಗಿ, ಈ ಹಂತದಲ್ಲಿ ಮಕ್ಕಳಿಗೆ ಪಾಠದ ಜೊತೆ ಆಟೋಟಗಳು, ದೈಹಿಕ ವ್ಯಾಯಾಮಗಳು ಬಹಳ ಮುಖ್ಯ. ಕಳೆದ ಕೆಲ ವರ್ಷಗಳವರೆಗೂ ದಿನದಲ್ಲಿ ಸಂಜೆಯ ಕೊನೆಯ 1 ಘಂಟೆಯ ಅವಧಿ ಆಟಕ್ಕಾಗಿಯೇ ಮೀಸಲಾಗಿರುತ್ತಿತ್ತು. ಈಗ ಆ ಅವಧಿಯನ್ನು ಪಾಠಗಳು ಆಕ್ರಮಿಸಿಕೊಂಡಿವೆ. ಇದರಿಂದಾಗಿ ಇಡೀ ದಿನ ಮಕ್ಕಳು 4 ಗೋಡೆಗಳ ನಡುವೆ ಬಂಧಿಯಾಗುತ್ತಾರೆ. ಸಂಜೆ ಮನೆಗೆ ಕಾಲಿಟ್ಟ ತಕ್ಷಣ ಮನೆ ಪಾಠಗಳು, ದೂರದರ್ಶನ, ಗಣಕಯಂತ್ರ ಇವುಗಳೆಡೆಯಲ್ಲಿ ಆಟವೆಂಬುದು ಮರೀಚಿಕೆ. ಇದಕ್ಕೆಲ್ಲಾ ಪರಿಹಾರವಾಗಿ, ಪ್ರತಿ ಶಾಲೆಯಲ್ಲೂ ಪ್ರತಿ ದಿನವೂ ಕನಿಷ್ಠ 30ನಿಮಿಷದ ಕ್ರೀಡೆ ಮತ್ತು ವ್ಯಾಯಾಮದ ಅವಧಿಯನ್ನು ಕಡ್ಡಾಯಗೊಳಿಸಬೇಕು. ಹಾಗೂ ಈ ಅವಧಿಯನ್ನು ಬೇರೆ ಯಾವುದೇ ವಿಷಯಗಳಿಗಾಗಿಯೂ ವಿನಿಯೋಗಿಸಬಾರದು ಎಂಬ ನಿಯಮವನ್ನು ಜಾರಿಗೆ ತರಬೇಕು. ಹಾಗೆಯೇ, ಮಕ್ಕಳಿಗೆ ನಿಗದಿತ ಪಾಠದ ಹೊರತಾಗಿ ಪ್ರೊಜೆಕ್ಟ್ ವರ್ಕ್‍ಗಳನ್ನು ಹೇರಿ, ಅವುಗಳನ್ನು ನಿಗದಿತ ಸಮಯದೊಳಗೆ ಮುಗಿಸಬೇಕು ಎನ್ನುವ ಒತ್ತಡ ಹಾಕುವುದರ ಬದಲಾಗಿ, ಕೆಲವೊಂದು ವಿಷಯಗಳನ್ನು ಪಾಠದಿಂದಲೇ ಕಡಿತಗೊಳಿಸಿ, ಪ್ರೊಜೆಕ್ಟ್ ವರ್ಕ್‍ಗಳ ರೂಪದಲ್ಲಿ ಶಿಕ್ಷಕರೇ ಮಕ್ಕಳಿಗೆ ಪ್ರಾಯೋಗಿಕವಾಗಿ ಹೇಳಿಕೊಡುವುದರಿಂದ, ಅವರಿಗೆ ಸುಲಭವಾಗಿ ವಿಷಯಗಳು ಮನನವಾಗುತ್ತವೆ. ಒತ್ತಡವೂ ಕಡಿಮೆಯಾಗುತ್ತದೆ.
ಈ ಡಿಜಿಟಲ್ ಯುಗದಲ್ಲಿ ಜನರಿಗೆ ಹಣ ಹಾಗೂ ಉದ್ಯೋಗದ ಅವಶ್ಯಕತೆ ಎಷ್ಟಿದೆಯೋ, ಉದ್ಯೋಗದಾತರಿಗೂ ನೌಕರರ ಕೌಶಲಗಳು ಅಷ್ಟೇ ಅವಶ್ಯ. ಆದರೆ ಈಗಿನ ಪದ್ಧತಿಯಿಂದಾಗಿ ಬರೇ ಅಂಕಗಳು ಸಿಗುತ್ತಿವೆಯೇ ಹೊರತು, ಸರ್ವಾಂಗೀಣ ಬೆಳವಣಿಗೆ ಆಗುತ್ತಿಲ್ಲ. ಇದರ ಪರಿಣಾಮವಾಗಿ ಭವಿಷ್ಯದ ಜೀವನ ದುರ್ಲಭವಾಗುತ್ತದೆ. ಉದಾಹರಣೆಗೆ, ತಾಂತ್ರಿಕ ಶಿಕ್ಷಣದ ಅತೀ ಹಳೆಯ ಮತ್ತು ಮುಖ್ಯ ವಿಷಯವಾದ ಸಿವಿಲ್ ಇಂಜಿನಿಯರಿಂಗ್ ಅನ್ನು ತೆಗೆದುಕೊಂಡರೆ, ಅದರಲ್ಲಿ 4 ವರ್ಷಗಳ ಪದವಿ ಪಡೆದು, ಪದವಿ ಪ್ರಮಾಣಪತ್ರ ಸಿಕ್ಕಿದರೂ, ಪ್ರಾಯೋಗಿಕವಾಗಿ ಅಡಿಪಾಯ ಹಾಕುವುದು ಹೇಗೆಂದೂ ಹಲವರಿಗೆ ತಿಳಿದಿರುವುದಿಲ್ಲ (ಇದು ನನ್ನ ಅನುಭವವೂ ಹೌದು). ಯಾವುದೇ ಪದವಿ ಹಾಗೂ ವೃತ್ತಿಪರ ಶಿಕ್ಷಣದಲ್ಲಿ ಪಠ್ಯದ ಜೊತೆಗೆ ಪ್ರಾಯೋಗಿಕ ತರಗತಿಗಳು ಹಾಗೂ ಅದರದೇ ಆದ ಪಠ್ಯವಿದೆಯಾದರೂ, ವಿದ್ಯಾರ್ಥಿಗಳು ಪ್ರಯೋಗಗಳನ್ನೂ ಅಂಕಗಳಿಗಾಗಿಯೇ ಮಾಡುತ್ತಾರೆ. ಇದಕ್ಕೆ ಬದಲಾಗಿ, ಕೆಲವೊಂದು ಅವಧಿಗಳನ್ನು, ಮುಂದಿನ ವೃತ್ತಿಯಲ್ಲಿ ತಾವು ಕಲಿತ ವಿಷಯಗಳ ಅಗತ್ಯತೆ ಮತ್ತು ಆ ವಿಷಯಗಳನ್ನು ಅಥವಾ ಪ್ರಯೋಗಗಳನ್ನು ಎಲ್ಲಿ, ಯಾವಾಗ ಮತ್ತು ಹೇಗೆ ಉಪಯೋಗಿಸಬೇಕು ಎಂಬುದನ್ನು ತಿಳಿಸಿಕೊಡಲು ಮೀಸಲಿಟ್ಟರೆ ಉತ್ತಮ. ಎಲ್ಲವನ್ನೂ ಶಾಲಾ ಕಾಲೇಜುಗಳು ಕಲಿಸಲು ಸಾಧ್ಯವಾಗದಿದ್ದರೂ, ಅತೀ ಪ್ರಮುಖ ವಿಷಯಗಳನ್ನು ಪ್ರಾಯೋಗಿಕವಾಗಿ ತಿಳಿಯಪಡಿಸುವುದು ಅತ್ಯಗತ್ಯ.

ಇವೆಲ್ಲದರ ಜೊತೆಗೆ ಬಹಳ ಮುಖ್ಯವಾದ ವಿಷಯವೆಂದರೆ, ಮಕ್ಕಳಿಗೆ 4ನೇ ವರ್ಷದಿಂದ ಹಿಡಿದು ಶಿಕ್ಷಣದ ಪ್ರತಿಯೊಂದು ಹಂತದಲ್ಲೂ ನಮ್ಮ ದೇಶದ ಬಗ್ಗೆ ಪ್ರೀತಿ ಹಾಗೂ ಗೌರವ ಬೆಳೆಸುವುದು ಭಾರತದ ಪ್ರತಿ ಶಾಲಾ ಕಾಲೇಜುಗಳ, ಪೋಷಕರ ಕರ್ತವ್ಯ. ಬಾಲ್ಯದಿಂದಲೇ ಪ್ರತಿಯೊಬ್ಬರಲ್ಲೂ ‘ದೇಶಪ್ರೇಮ’ ಜಾಗೃತಗೊಳ್ಳಬೇಕು. ದೇಶಭಿಮಾನ ಪ್ರತಿಯೊಬ್ಬನ ಕಣ್ಣಂಚಿನಲ್ಲೂ ಮಿನುಗಬೇಕು. ಇದು ಶಿಕ್ಷಣದ ಮುಖ್ಯ ಅಗತ್ಯತೆ.

ಒಟ್ಟಿನಲ್ಲಿ ಹೇಳುವುದಾದರೆ, ಶಿಕ್ಷಣದ ಎಲ್ಲಾ ಘಟ್ಟದಲ್ಲಿಯೂ ಪುಸ್ತಕ ಜ್ಞಾನಕ್ಕಿಂತಲೂ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚು ಮಹತ್ವಕೊಟ್ಟರೆ, ವಿದ್ಯಾರ್ಥಿಗಳ ಮುಂದಿನ ಜೀವನ ಉತ್ತಮವಾಗಿ ದೇಶದ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಕಲಿಕೆ ತಾನಾಗಿಯೇ ಮಕ್ಕಳಿಗೆ ಬಹಳ ಆಸಕ್ತಿಯ ವಿಷಯವಾಗತೊಡಗುತ್ತದೆ. ಹಾಗೆಯೇ ವಿದ್ಯಾರ್ಥಿಗಳಿಗೆ ಅಂಕ ಗಳಿಸಲು ಅತಿಯಾದ ಒತ್ತಡ ಹಾಕುವುದರ ಬದಲು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡುವುದರಿಂದ, ಅವರ ಮಾನಸಿಕ ವಿಕಾಸವೂ ಸಾಧ್ಯ. ಇಂತಹ ಕ್ರಮಗಳಿಂದ, ಈಗಿನ ಅತೀ ಒತ್ತಡ, ಅಶಾಂತಿ, ನಾನಾ ರೀತಿಯ ಖಾಯಿಲೆಗಳು ಇವೆಲ್ಲದರಿಂದ ದೂರವಿರಬಹುದು. ಇಲ್ಲವಾದರೆ, ಈಗಿನ ಶಿಕ್ಷಣ ಪದ್ಧತಿ ನಮ್ಮನ್ನು ಉನ್ನತಿಯತ್ತ ಕೊಂಡೊಯ್ಯುತ್ತಿರುವುದೋ ಅಥವಾ ನಿಧಾನವಾಗಿ ಅವನತಿಯತ್ತಲೋ ಎಂಬ ಸಂದೇಹ ಬರುವುದು ಖಚಿತ.

Photo by Sean MacEntee

 

Namratha K

Facebook ಕಾಮೆಂಟ್ಸ್

ಲೇಖಕರ ಕುರಿತು

Namratha K

Resident of Puttur. Graduate in Civil Engineering from VTU. Worked as Civil Engineer in Bengaluru for two years. Presently in an attempt to persue Photography, a long term passion, as her career.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!