ಅಂಕಣ

ನಮ್ಮ ಆತ್ಮದ “ಸೆಲ್ಫೀ” ತೆಗೆದುಕೊಳ್ಳುವಂತಿದ್ದರೆ??

ಅದೆಷ್ಟು ಖುಷಿ ಸೆಲ್ಫೀ ಫೋಟೋ ತೆಗೆಯುವುದು ಎಂದರೆ, ಎಲ್ಲಿ ಹೋದರಲ್ಲಿ ನಮ್ಮದೊಂಡು ಸೆಲ್ಫ್ಹೀ ಬೇಕೇ ಬೇಕು. ಏನಂತೀರಾ? ಅದೇನೋ ವಿಶೇಷ ಆಕರ್ಷಣೆ ಸೆಲ್ಫೀಯಲ್ಲಿ, ಇಲ್ಲಿಗೇ ನಿಲ್ಲುವುದಿಲ್ಲ ನಮ್ಮ ಸೆಲ್ಫೀ ಕಥೆ! ವಾಟ್ಸಾಪ್, ಫೇಸ್ಬುಕ್, ಟ್ವಿಟರ್ ಹೀಗೆ ಸಾಮಾಜಿಕ ಜಾಲತಾಣಗಳಲ್ಲೂ ಫೋಟೋ ಹಾಕಬೇಕು, ಲೈಕುಗಳೂ ಬೇಕು! ನಾವೀಗ ಒಂದಿಷ್ಟು ಸಮಯ “ಆತ್ಮದ ಸೆಲ್ಫೀ” ಕುರಿತು ಯೋಚಿಸೋಣ. ಹೌದು, ಒಂದು ವೇಳೆ ಆತ್ಮದ ಸೆಲ್ಫೀ ಕ್ಲಿಕ್ಕಿಸುವ ಅವಕಾಶ ನಮಗಿರುತ್ತಿದ್ದರೆ? ಅದೆಷ್ಟು ಆಕರ್ಷಣೀಯವಾಗಿರಬಹುದು? ಯಾವುದೇ ಮುಖವಾಡವಿಲ್ಲದ ಆತ್ಮದ ಸೆಲ್ಫೀಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವಂತಹ ಆತ್ಮ ತೃಪ್ತಿ ನಮಗಿದೆಯೇ? ನಿಜ, ಸಾಗುವ ಹಾದಿಯಲ್ಲಿ ಆತ್ಮಾವಲೋಕನ ಬಹು ಅಗತ್ಯ.

ಆತ್ಮ ಎಂದಾಕ್ಷಣ ಅದ್ಯಾವುದೋ ಕಬ್ಬಿಣದ ಕಡಲೆಯಂತಹ ವಿಷಯವೆಂಬ ಯೋಚನೆ ಬೇಡ, ಆತ್ಮ-ಆಧ್ಯಾತ್ಮ ಇಂತಹ ಚಿಂತನೆಗೂ ಹೋಗದಿರಿ. ಆತ್ಮ ಎಂದರೆ ಮತ್ತೇನಲ್ಲ ಅದು ಮನುಷ್ಯನ ಅಂತರಂಗ! ಅಂತರಂಗ ಶುದ್ಧಿಯೇ ನೆಮ್ಮದಿಗೆ ರಹದಾರಿ, ಆತ್ಮ ವಿಸ್ತಾರಗೊಳ್ಳಬೇಕು – ಅಂತರಂಗದ ಸೆಲ್ಫೀ ಕ್ಲಿಕ್ ನಲಿದಾಡಬೇಕು! ಇವೆಲ್ಲದಕ್ಕೂ ಬೇಕು ಜೀವನದ ಗುರಿಯೊಡನೆ ಹೊಂದಾಣಿಕೆ, ತಾಳ್ಮೆ, ನಮ್ರತೆ, ಬದ್ಧತೆ. ಜೀವನದ ಸಾಧನೆಯ ಹಾದಿಯಲ್ಲಿ ಹೊಂದಾಣಿಕೆಯೊಂದು ಇದ್ದರೆ ಅಂತರಂಗವದು ಸಹಜ – ಸುಂದರ. ಉದಾಹರಣೆಗೆ, ಇರುವೆಯೊಂದರ ಮುಂದೆ ಏನಾದರೂ ಅಡ್ಡವೊಂದನ್ನು ಇಟ್ಟು ನೋಡಿ, ಆ ಅಡ್ಡಕ್ಕೆ ಅದೆಷ್ಟು ಹೊಂದಿಕೊಂಡು ಬಿಡುತ್ತದೆಯೆಂದರೆ ಅಡ್ಡದ ಮೇಲೇರಿ, ಸುತ್ತಿ ಬಳಸಿ ಹೀಗೇ ಹೇಗೋ ದಾರಿ ಮಾಡಿಕೊಂಡೂ, ಇನ್ಯಾರಿಗೂ ನೋವಾಗದಂತೆ ತನ್ನ ಪಯಣ ಸಾಗಿಸುತ್ತದೆ. ಇಂತಹ ತಾಳ್ಮೆ – ಹೊಂದಾಣಿಕೆ ಇದ್ದರೆ ಗುರಿ ಸಾಧಿಸಲು ಸಾಧ್ಯ, ಜೊತೆ ಜೊತೆಗೆ ಆತ್ಮಾನಂದವೂ ಸೌಮ್ಯ-ಸರಳ.

ಜೀವನದ ಗುರಿ, ಶಿಖರೋನ್ನತ ಕನಸು ಇವೆಲ್ಲವನ್ನೂ ಏರುವ ಅವಸರದಲ್ಲಿ, ಏರುತ್ತಿರುವ ದಾರಿ ಸರಿಯಾಗಿದೆಯೇ, ಜೊತೆಗಿರುವವರು ನೆಮ್ಮದಿಯಲ್ಲಿದ್ದಾರೆಯೇ, ಎಲ್ಲವೂ ಮುಖ್ಯ ಅಂಶಗಳು, ನಮ್ಮ-ನಿಮ್ಮ ಕನಸುಗಳು, ಅದರ ಆಯಾಮಗಳು ವಿಭಿನ್ನವೇ ಆಗಿರಬಹುದು; ಆದರೆ ಮನಸ್ಸು, ಆತ್ಮ ಇದಕ್ಕೆ ನೀಡಬೇಕಾದ ಸ್ವಗೌರವ ಭಿನ್ನವಾದುದಲ್ಲಿ. ಗುರಿ ಸಾಧನೆಗೆ ಸ್ವಪ್ರಯತ್ನ, ಶ್ರಮ, ಕ್ರಿಯಾತ್ಮಕತೆ, ಸೃಜನತೆ, ಅನುಕಂಪ ಭಾವನೆ ಇವೆಲ್ಲವೂ ಜೊತೆಯಾಗಿರಬೇಕು. ಪ್ರಯತ್ನ,ಕ್ರಿಯಾತ್ಮಕತೆ ಎಷ್ಟು ಮುಖ್ಯವೋ, ಭಾವನೆ-ಸೃಜನತೆ ಅಷ್ಟೇ ಅವಶ್ಯ. ಆತ್ಮದ ಚಿತ್ ಸ್ವರೂಪಕ್ಕೆ, ಭಾವನೆಗಳಿಗೆ ಬೆಲೆ ಕೊಟ್ಟಾಗಲಷ್ಟೇ ಸೆಲ್ಫೀ ಆಕರ್ಷಣೀಯವಾಗಿ, ಅಂದವಾಗಿ ಆನಂದಮಯವಾಗಿರಬಹುದು. ಸಹಜತೆ ಮೆರೆದು ಆತ್ಮದ ಸೆಲ್ಫೀ ಆಕರ್ಷಕವಾಗಿರುವಂತೆ, ಫೇಸ್ಬುಕ್ ಲೈಕುಗಳನ್ನೂ ಮೀರಿ ನಿಲ್ಲುವಂತೆ ಬಾಳೋಣ. ಸಾಧನೆಯ ಉತ್ತುಂಗ ಶಿಖರವೇರಿದಾಗಲೂ ಅಂತರಂಗದಿಂದ ಸಂತಸ ಪಡುವ ಸ್ಥಿತಿ ನಮ್ಮದಾಗಲಿ.

ಅಂತರಂಗಕ್ಕೆಂದೆಂದಿಗೂ ನಿಷ್ಟರಾಗಿರೋಣ. ನಿಷ್ಟೆಯೆಂಬುದು ಒಂದು ಪಕ್ವಗೊಂಡ ಮನಸ್ಸು ವರ್ತಿಸುವ ರೀತಿ ಎನ್ನಬಹುದು. ಎಲ್ಲಿಯವರೆಗೆ ನಮ್ಮ ಅಂತರಂಗಕ್ಕೆ ನಾವು ನಿಷ್ಟರಾಗಿರುತ್ತೇವೋ, ಅಲ್ಲಿಯವರೆಗೂ ಪಾಪ ಪ್ರಜ್ಞೆ ನಮ್ಮತ್ತ ಸುಳಿಯದು, ಜಾಗೃತ ಮನಸ್ಸು ನಮ್ಮದಾಗಿದ್ದರೆ ನಿಷ್ಟೆ ಸಹಜವಾಗಿಯೇ ಬೆಳೆದುಬಿಡುತ್ತದೆ. ಅದಲ್ಲದೇ, ನಿಷ್ಟವಾದ ಮನಸ್ಸು ಎಂದಿಗೂ ಯಾರಿಗೂ ಅಂಜಬೇಕಾದ ಸ್ಥಿತಿಯನ್ನು ತಂದೊಡ್ಡುವುದಿಲ್ಲ. ಕ್ಷಣಿಕ ಸುಖಕ್ಕಾಗಿ ಆತ್ಮ ನಿಷ್ಟೆಯನ್ನು ಕಳೆದುಕೊಳ್ಳುವ ಹುಂಬರಾಗುವುದು ಬೇಡ.

ತಲೆಯಿಂದ ತಲೆಗೆ ಪೀಳಿಗೆಯಿಂದ ಪೀಳಿಗೆಗೆ

ಅಲೆಯಿಂದಲಲೆಗೆ ಟಪ್ಪೆಯ ಚಾರನಂತೆ

ಇಳಿಯುತಿದೆ ಯುಗದಿಂದ ಯುಗಕೆ ಮಾನವ ಧರ್ಮ

ನಿಲದಅಮೃತಧಾರೆಯದು – ಮಂಕುತಿಮ್ಮ

 

ಬುದ್ಧಿಯನ್ನು ಉಪಯೋಗಿಸಿ, ಸಾಮರ್ಥ್ಯವನ್ನು ಸದ್ವಿನಿಯೋಗಿಸಿ, ಇಂದ್ರಿಯಗಳ ತೃಪ್ತಿಯನ್ನು ಮಾಡಿಕೊಳ್ಳುವುದರ ಜೊತೆಗೆ, ನಾವು ಕಾಣುವ ಎಲ್ಲ ಶಕ್ತಿಗಳಿಗಿಂತ ಮೀರಿದ ಶಕ್ತಿಯಿದೆ, ಅದೇ ಮಾನವ ಧರ್ಮ. ಡಿವಿಜಿ ಅವರು ಹೇಳಿದಂತೆ, ಪೀಳಿಗೆಯಿಂದ ಪೀಳಿಗೆಗೆ, ಯುಗದಿಂದ ಯುಗಕೆ ಸಹಜವಾಗಿ ಇಳಿದು ಬರುತ್ತಿರುವ ಎಂದಿಗೂ ನಿಲ್ಲದ ಅಮೃತ ಧಾರೆಯೇ ಮಾನವ ಧರ್ಮ. ಮಾನವ ಧರ್ಮ ಪಾಲಿಸಿ ಸಂತೃಪ್ತ ಆತ್ಮರಾಗೋಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Sumana Mullunja

Trying hard to be myself on this Earth. Born and brought up at Puttur, Dakshina Kannada. Completed my B.Sc and pursuing M.Sc Physics from Kuvempu University – Distance Education, Shivamogga.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!