ಈವಂಗೆ ದೇವಂಗೆ ಅವುದಂತರವಯ್ಯಾ
ದೇವನು ಜಗಕೆ ಕೊಡಲಿಹನು | ಕೈಯಾರೆ
ಇವನೇ ದೇವ ಸರ್ವಜ್ಞ.
ಪ್ರಪಂಚದಲ್ಲಿ ದಾನ ಮಾಡುವವನು ದೇವರಿಗೆ ಸಮಾನನು, ಪೂಜೆಗೆ ಯೋಗ್ಯನು ಸಮಾಜದ ಉನ್ನತಿಗೆ ಪ್ರತಿಫಲಾಪೇಕ್ಷೆ ಇಲ್ಲದೇ ಸ್ಪೂರ್ತಿಯಿಂದ ಕೊಡುಗೆ ನೀಡುವವನೇ ಮಹಾದಾನಿ ಎಂದು ಒಟ್ಟಾರೆ ತಾತ್ಪರ್ಯ.
ದಾನಕ್ಕೆ ಎಲ್ಲ ಧರ್ಮಗಳಲ್ಲೂ ಉಚ್ಚ ಸ್ಥಾನವಿದೆ, ಈ ದಾನವೆಂಬುವುದು ದೇವಸ್ಥಾನದಲ್ಲಿ ಕೊಡುವ ಎಣ್ಣೆಯಿಂದ ಹಿಡಿದು, ಬಲಿವಾಡುಗಳಿಂದ ಹಿಡಿದು, ಗೋದಾನ, ವಸ್ತ್ರದಾನ, ಅನ್ನದಾನ, ರಾಜರು ಕೊಡುತಿದ್ದ ಭೂದಾನ, ರಕ್ತದಾನ, ದೇಹದಾನ,ಕನ್ಯಾದಾನ, ವಿದ್ಯಾದಾನ ಹೀಗೆ… ಕರ್ಣನ ದಾನ, ಶಿಭಿ ಚಕ್ರವರ್ತಿಯ ದಾನ, ಬಲಿ ಚಕ್ರವರ್ತಿ ದಾನ ಎಲ್ಲವೂ ಉಲ್ಲೇಖನಿಯಾ…
ಆ ನಮ್ಮ ದೇಹಕ್ಕೆ ನಿಜವಾದ ವ್ಯಾಖ್ಯಾನ ಸಿಗುವುದೆ ಇಲ್ಲಿ , ಶವಕ್ಕೆ ಪಠ್ಯದ ಸ್ವರೂಪ ನೀಡಿ, ಸಂಕೀರ್ಣ ಶರೀರ ರಚನೆಯ ಅಧ್ಯಯನ ಮಾಡಿ, ಪಂಚಭೂತಗಳ ವಿಂಗಡನೆ ಮಾಡಿ, ಸಾಧ್ಯವಿರುವ ಎಲ್ಲ ಪ್ರಯೋಗಗಳ ನಂತರ ದೇಹವನ್ನು ಮೂಲ ರೂಪಕ್ಕೆ ತಂದು ಅದನಂತರ ಅವರವರ ಧರ್ಮದ ಅನುಸಾರವಾಗಿ ಸಂಸ್ಕಾರವನ್ನೂ ಮಾಡಲಾಗುತ್ತದೆ. ಮತ್ತೆ ಮೂಳೆಗಳನ್ನು ಸಂಗ್ರಹಿಸಿ ಮೂಳೆಶಾಸ್ತ್ರ ವಿಭಾಗದಲ್ಲಿ ಅಧ್ಯಯನ ಮಾಡಲಾಗುತ್ತದೆ. ನಾವು ನೀವು ತಿಳಿದುಕೊಂಡ ಶವ ಸಂಸ್ಕಾರಕ್ಕಿಂತ ಶವ ಸತ್ಕಾರವೇ ಶ್ರೇಷ್ಠವಲ್ಲವೇ…
ಹಮ್ ನಾ ರಹೇಂಗೆ,
ತುಮ್ ನಾ ರಹೋಂಗೆ,
ಪೀರ್ ಬೀ ರಹೇಗಿ ನಿಶಾನಿಯಾ….
ರಾಜ್ ಕಪೂರ್ ರ ಈ ಹಿಂದಿ ಹಾಡು ಎಷ್ಟು ಹೊಂದುತ್ತದೆತಲ್ಲಾ,
ದಾನಕ್ಕೆ ಬರುವ ಅಡೆತಡೆಗಳು:
*ಅಮ್ಮ ಅಪ್ಪನೊಂದಿಗೆ ಹೇಳಿ ಒಪ್ಪಿಸುವುದು ಪ್ರಾಥಮಿಕವಾದದ್ದು.
*ಅಜ್ಜಿಯೊಂದಿಗೆ ಚರ್ಚಿಸಿದರೆ ಮುಂದಿನ ಜನ್ಮದಲ್ಲಿ ಕುರುಡನಾಗುತ್ತಿ, ಮೋಕ್ಷ ಸಿಗಲ್ಲವೆಂದು ಪೂರ್ವಗ್ರಹ ಪೀಡಿತರಾಗಿ ನಿಮ್ಮನ್ನು ಬೆಂಬಲಿಸಲ್ಲ.
*ಸತ್ತ ಮೂರು ದಿನದಲ್ಲಿ ಮಾಡುವ ಬೂದಿ ಮುಚ್ಚುವುದು, ಬೊಜ್ಜದಂದು ದೂಪೆ ಹತ್ತಿರ ಹೋಗುವ ಕ್ರಮಗಳಿಗೆ ಪರ್ಯಾಯ ಕ್ರಮಗಳನ್ನು ಮಾಡಬೇಕು.
ಹೇಗೆ ಮಾಡಬೇಕು:
*ಹತ್ತಿರದ ವೈದ್ಯಕೀಯ ಮಾಹಾವಿದ್ಯಾಲಯದಲ್ಲಿ ನೋಂದಯಿಸಬೇಕು.
*ಮೃತ್ಯುಪತ್ರದಲ್ಲಿ ವಿವರವನ್ನು ಭರಿಸತಕ್ಕದ್ದು.
*ವಕೀಲರ ಮೂಲಕ ಮರಣ ಶಾಸನ ವಿಲೋನಾಮೆ ಪತ್ರ ಬರೆಯಿಸಿ ಅವರ ಸಹಿ ಮಾಡಿಸಬೇಕು. (ರೂ. 750.00 ನಾನು ಕೊಟ್ಟಿದ್ದೆ).
*ಮನೆಯವರ ಸಾಕ್ಷಿ ಸಹಿ ಬೇಕು, ಅಪ್ಪ , ಅಮ್ಮನೋ ಅಕ್ಕ -ತಮ್ಮನೋ, ಇಲ್ಲ ಹತ್ತಿರದ ಸಂಬಂಧಿಗಳಾದರೂ ಆಗಬಹುದು.
*ನೋಂದಾವಣೆ ಕಡ್ಡಾಯವೇನಲ್ಲ ಕೊನೆ ಗಳಿಗೆಯಲ್ಲೂ ಸಂಬಂಧಿಸಿದ ವೈದ್ಯರಿಗೆ ಕುಟುಂಬ ಸಾಕ್ಷಿಗಳೆದುರು ಶವದಾನ ಮಾಡಬೇಕೆಂದು ಬಯಸುವವರು ಹೇಳಿಕೆ ನೀಡಬಹುದು.
*ತಮ್ಮ ದೇಹದಾನ ಮನೆಯವರಿಗೆಲ್ಲಾ ತಿಳಿದಿರಬೇಕು.
ಯಾರೆಲ್ಲ ಮಾಡಬಹುದು?
*ಆರೋಗ್ಯವಾಗಿರುವ ಎಲ್ಲರೂ ಮಾಡಬಹುದು. ಪ್ರಾಥಮಿಕ ಹಂತದ ಕ್ಯಾನ್ಸರ್, ಏಡ್ಸ್, ಜಾಂಡೀಸ್ ರೋಗವಿದ್ದವರೂ ಸಹ.,
*ಅಸ್ವಾಭಾವಿಕ, ಅಪಘಾತದ ಸಾವುಗಳಾಗಿದ್ದಲ್ಲಿ ಪೋಲಿಸ್ ಮತ್ತು ಎಲ್ಲ ಕಾನೂನಿನ ರಿತ್ಯಗಳ ನಂತರ.
*ವಯಸ್ಸು, ಲಿಂಗಗಳ ಭೇದವಿಲ್ಲ.
ಕುಟುಂಭಿಕರ ಜವಾಬ್ದಾರಿ
* ವ್ಯಕ್ತಿ ಮೃತರಾದೊಡನೆಯೆ ನೋಂದಾಯಿಸಿದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ತಿಳಿಸಬೇಕು.
*ಸ್ವಂತ ವೆಚ್ಚದಲ್ಲಿ ಮಹಾವಿದ್ಯಾಲಯ ಸಾಗಾಣಿಕ ವ್ಯವಸ್ಥೆ ಮಾಡಿಕೊಳ್ಳುತ್ತದೆ.
*10 -12 ಗಂಟೆಗಳ ಒಳಗೆ ದೇಹ ವೈದ್ಯಕೀಯ ಮಹಾವಿದ್ಯಾಲಯದ ಸುಪರ್ದಿಗೆ ಸೇರಬೇಕು.
ಎಲ್ಲಿ ಒಳಿತು, ಕೇವಲ ಒಳಿತಿನದೇ ಅಧಿಪತ್ಯವಿರುತ್ತದೋ, ಅಂತಹ ಸಮಾಜವೊಂದರ ನಿರ್ಮಾಣದಲ್ಲಿ ಈ ವಿಚಾರ ಅತ್ಯಂತ ಸಣ್ಣ ರೀತಿಯಲ್ಲಾದರೂ ನೆರವಾದರೆ ಅದೇ ಸಂತಸ. “ವ್ಯಕ್ತಿಯ ದಾನ ಕರ್ಮಗಳಿಂದ ಅವನಿಗೆ ಲಭ್ಯವಾಗುವ ಪುಣ್ಯವು, ಆ ವ್ಯಕ್ತಿಯ ಹೃದಯ, ದಾನ ನೀಡುವುದರ ಹಿಂದಿನ ಅವನ ಉದ್ದೇಶ, ದಾನ ನೀಡುವಾಗಿನ ಸಂದರ್ಭ, ಯಾರಿಗೆ ದಾನ ನೀಡಲಾಗುತ್ತಿದೆ ಹಾಗೂ ಆ ಸಂದರ್ಭದಲ್ಲಿ ದಾನ ಸ್ವೀಕರಿಸುವವನ ಪರಿಸ್ಥಿತಿ ಎಲ್ಲವೂ ಗಣನೆಗೆ ಬರುತ್ತದೆ.”