ಪ್ರಚಲಿತ

ಅಮೃತಧಾರೆ: ಸರದಾರ ಭಗತ್ ಸಿಂಗ್

            1857ರ ಸ್ವಾತಂತ್ರ್ಯ ಸಂಗ್ರಾಮ ಬ್ರಿಟಿಷರನ್ನು ಬೆಂಬಿಡದೆ ಕಾಡುತ್ತಿತ್ತು. ಭಾರತದ ಚಿಂತನಶೀಲ ಬೌದ್ಧಿಕ ವರ್ಗವನ್ನು ತಮ್ಮೆಡೆಗೆ ಸೆಳೆದುಕೊಳ್ಳುವುದೇ ಇಂತಹ ಸಂಗ್ರಾಮ ಮರುಕಳಿಸದಂತೆ ಮಾಡಲು ಇರುವ ಏಕೈಕ ಉಪಾಯ ಎಂದರಿತ ಬ್ರಿಟಿಷರು 1885ರಲ್ಲಿ ತಮ್ಮವನೇ ಆದ ಎ.ಓ.ಹ್ಯೂಮ್ ನ ಮುಂದಾಳತ್ವದಲ್ಲಿ ಕಾಂಗ್ರೆಸಿನ ಸ್ಥಾಪನೆ ಮಾಡಿದರು. ಆದರೆ ತಾಯಿ ಭಾರತಿ ರತ್ನಗರ್ಭಾ ವಸುಂಧರೆ. ಅಂತಹ ಅಂಧಕಾರದ ಸಮಯದಲ್ಲಿ ಅತ್ಯಂತ ತೇಜಸ್ವೀ ಪುರುಷನೊಬ್ಬನಿಗೆ ಜನ್ಮ ನೀಡಿದಳು. ಅವರೇ ಮಹರ್ಷಿ ದಯಾನಂದರು. ಅವರು ಗಾಢಾಂಧಕಾರವನ್ನು ತೊಲಗಿಸಲು ದೀಪವೊಂದನ್ನು ಹಚ್ಚಿದರು. ಅದೇ ಆರ್ಯ ಸಮಾಜ. ಆ ದೀವಿಗೆಯ ಒಂದೊಂದು ಕಿಡಿಯೂ ಕ್ರಾಂತಿಯ ಕಿಡಿ!

            ಭಾರತೀಯರ ಮುಂದೆ ಈಗ ಎರಡು ದಾರಿಗಳಿದ್ದವು. ಬ್ರಿಟಿಷ್ ಸರಕಾರದ ಆಶೀರ್ವಾದ ಪಡೆದು ಅವರ ಮಾತುಗಳಿಗೆ ಅನುಕೂಲಕರವಾಗಿ ನಡೆಯಬಲ್ಲ ವ್ಯಕ್ತಿಗಳನ್ನು ತಯಾರು ಮಾಡುವ ಕಾರ್ಖಾನೆ ಕಾಂಗ್ರೆಸ್ ಒಂದು ಕಡೆಯಾದರೆ ಭಾರತದ ವೇದಕಾಲೀನ ಮೌಲ್ಯಗಳನ್ನಾಧರಿಸಿ ಭಾರತದ ಪುನರ್ನಿರ್ಮಾಣ ಮಾಡಲು ಹೊರಟಿದ್ದ ಆರ್ಯ ಸಮಾಜ ಇನ್ನೊಂದೆಡೆ. ಈ ಎರಡೂ ಪ್ರಭಾವಗಳು ತರುಣ ಪೀಳಿಗೆಯ ಮರಣ ಭಯ ನೀಗಿಸಿದ ಶ್ರೇಷ್ಠ ಕ್ರಾಂತಿಕಾರಿ ಭಗತ್ ಸಿಂಗನ ವಂಶವೃಕ್ಷಕ್ಕಾಯಿತು ಎಂಬುದೇ ವಿಶೇಷವಾದ ಸಂಗತಿ. ಆ ವಂಶದ ಪೂರ್ವಜ ಖೇಮ ಸಿಂಹನ ಅಗ್ರ ಪುತ್ರ ಸುರ್ಜನ ಸಿಂಹ ಬ್ರಿಟಿಷರ ಪಾದಸೇವೆ ಮಾಡುವುದರೊಂದಿಗೆ ಆ ಧಾರೆಯೇ ಭಾರತಕ್ಕೆ ವಿಷಧಾರೆಯಾದರೆ ಮಧ್ಯಮ ಅರ್ಜುನ ಸಿಂಹನ ಕ್ಷಾತ್ರ-ಬ್ರಹ್ಮತೇಜ ಕ್ರಾಂತಿಧಾರೆಯಾಗಿ ಅವನ ಪೀಳಿಗೆಯೇ ತಾಯಿ ಭಾರತಿಯ ಪಾಲಿಗೆ ಅಮೃತಧಾರೆಯಾಗಿ ಹರಿಯಿತು. ಅಂತಹ ಅಮೃತಧಾರೆಯ ಒಂದು ಬಿಂದುವೇ ಸರದಾರ ಭಗತ್ ಸಿಂಗ್!

          ಅರ್ಜುನ ಸಿಂಹನಿಗೆ ಋಷಿ ದಯಾನಂದರ ದರ್ಶನವಾಗುವುದರೊಂದಿಗೆ ಆತನ ವ್ಯಕ್ತಿತ್ವವೇ ಬದಲಾಯಿತು. ಮಹರ್ಷಿಗಳು ಸ್ವಹಸ್ತದಿಂದ ಜನಿವಾರ ಹಾಕಿದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಆತನೊಬ್ಬನಾಗಿದ್ದ. ಆತ ಮಾಂಸ ತಿನ್ನುವುದನ್ನು ಬಿಟ್ಟ. ಮಧ್ಯದ ಬಾಟಲಿಯನ್ನು ತಿಪ್ಪೆಗೆಸೆದ! ಹವನಕುಂಡ ಆತನಿಗೆ ಪ್ರಿಯವಾಯಿತು! ಸಂಧ್ಯಾವಂದನೆ, ಪ್ರಾರ್ಥನೆ, ಸಾಮಾಜಿಕ ಕ್ರಾಂತಿ ಆತನ ಜೀವಾಳವಾಯಿತು. ಆತನ ಸಾಂಸ್ಕೃತಿಕ ಪುನರ್ಜನ್ಮವಾಗಿತ್ತು. ಜೊತೆಗೇ ಆ ವಂಶದ್ದೂ! ಅಂದಿನ ರಾಜಕೀಯ-ಸಾಮಾಜಿಕ ಜೀವನವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಅದೊಂದು ಕ್ರಾಂತಿಕಾರಿ ಬದಲಾವಣೆ! ದೇವಸ್ಥಾನಗಳೇ ಆರ್ಯ ಸಮಾಜದಿಂದ ದೂರವಿದ್ದ ಕಾಲದಲ್ಲಿ ಬಹುದೂರದ ಗುರುದ್ವಾರದಿಂದ ಆತ ಆರ್ಯ ಸಮಾಜದ ಭವನವನ್ನು ಪ್ರವೇಶಿಸಿದ್ದನೆಂದರೆ ಆ ವಂಶಕ್ಕೆ “ಕ್ರಾಂತಿ” ಎಂಬುದು ರಕ್ತಗತವಾಗಿ ಬಂದಿತ್ತೇನೋ! ಪ್ರಸಿದ್ಧ ಯುನಾನಿ ವೈದ್ಯನಾಗಿದ್ದ ಜೊತೆಗೇ ಕೃಷಿಯನ್ನೇ ವೃತ್ತಿಯಾಗಿರಿಸಿಕೊಂಡಿದ್ದ ಪರಿಶ್ರಮಿ ಅರ್ಜುನ ಸಿಂಹ ಅನೇಕರಿಗೆ ದೀಕ್ಷೆ ನೀಡುವ, ಪ್ರಕಾಂಡ ಪಂಡಿತರೊಂದಿಗೆ ಅಮೋಘ ಚರ್ಚೆ ಮಾಡುವ ಮಟ್ಟಕ್ಕೆ ಬೆಳೆದು ಆರ್ಯ ಸಮಾಜದ ಪ್ರಮುಖ ಪ್ರತಿನಿಧಿಯಾದ. ಆತ್ಮವಿಸ್ಮೃತಿಯಿಂದ ಹೊರಬಂದು ಆತ್ಮಜ್ಞಾನವನ್ನು ಪಡೆದು ಆತ್ಮವಿಶ್ವಾಸದಿಂದ ಕೂಡಿರುವ ಆತ್ಮಜಾಗೃತ ಸಮಾಜವನ್ನು ಯಾರಿಗೂ ಗುಲಾಮಗಿರಿಯಲ್ಲಿಡಲು ಸಾಧ್ಯವಿಲ್ಲವೆಂಬ ಆರ್ಯ ಸಮಾಜದ ಚಿಂತನೆಯ ಅರಿವು ಅರ್ಜುನ ಸಿಂಹನಿಗಿತ್ತು.

          ಇದನ್ನು ಮನಗಂಡಿದ್ದ ಬ್ರಿಟಿಷರು ಆರ್ಯಸಮಾಜವನ್ನು ಬಗ್ಗು ಬಡಿಯಲು “ಆರ್ಯ ಸಮಾಜಿಗಳು ಗುರು ಗ್ರಂಥ ಸಾಹಿಬ್ ಗೆ ಅವಮಾನ ಮಾಡುತ್ತಿದ್ದಾರೆಂದು” ಸಾಂಪ್ರದಾಯವಾದಿಗಳ ಮುಖೇನ ಮೊಕದ್ದಮೆ ಹೂಡಿದಾಗ ಅರ್ಜುನ ಸಿಂಹ ಹಿಂದೂ ಗ್ರಂಥಗಳು ಮತ್ತು ಗುರುಗ್ರಂಥ ಸಾಹಿಬ್ ನಲ್ಲಿದ್ದ ಸುಮಾರು ಏಳುನೂರು ಶ್ಲೋಕಗಳನ್ನು ಹೇಳಿ ಅವುಗಳು ಒಂದೇ ರೀತಿ ಇದ್ದುದನ್ನು ಎತ್ತಿ ತೋರಿಸಿ ಸಿಖ್ಖರೂ ಹಿಂದೂಗಳೇ ಎಂದು ಪ್ರಮಾಣಿಸಿ ತೋರಿಸಿದ. ರೈತನೂ, ಹಕೀಮನೂ, ಅದ್ವಿತೀಯ ಬರಹಗಾರನೂ, ಆರ್ಯ ಸಮಾಜಿಯೂ ಆಗಿದ್ದ ಅರ್ಜುನ ಸಿಂಹನ ಮನಸ್ಸು ಸದಾ ದೇಶದ ಕುರಿತಾಗೇ ಚಿಂತಿಸುತ್ತಿತ್ತು. ಆತ ತನ್ನ ತಮ್ಮ ಮೆಹರ್ ಸಿಂಹನ ಮಗ ಹರಿಸಿಂಹನ ಜೊತೆಗೂಡಿ ಬಾಂಬೊಂದನ್ನು ತಯಾರಿಸಿ ಪರೀಕ್ಷಿಸಿದ. ಅದರ ಸದ್ದು ಕೇಳಿ ಅನುಮಾನಗೊಂಡು ಬಂದ ಬ್ರಿಟಿಷ್ ಪೋಲಿಸರಿಗೆ ಅರ್ಜುನ ಸಿಂಹನ ಮೇಲೆ ಜನರಿಗಿದ್ದ ಅಪಾರ ಗೌರವದ ಕಾರಣ ಸಾಕ್ಷ್ಯ ಸಿಗಲೇ ಇಲ್ಲ. ಬ್ರಾಹ್ಮಣ-ಶೂದ್ರ ಭೇದ ಭಾವ ತೋರದೆ ಎಲ್ಲರೊಂದಿಗೆ ಊಟದಲ್ಲೂ-ನೋಟದಲ್ಲೂ ಸಮಾನ ಭಾವ ಇರಿಸಿದ್ದ, ಸಂಬಳವೇ ಸಿಗದ ಕಾಲದಲ್ಲಿ ತನ್ನ ನೌಕರರಿಗೆ ರೋಟಿಯ ಮೇಲೆ ದುಡ್ಡಿನ ಪಲ್ಯ ಇಟ್ಟು ಸತ್ಕರಿಸುತ್ತಿದ್ದ(ಇದು ಅವನಿದ್ದ ಸಮಾಜದ್ದೇ ಮಾತು) ಆತನ ಮೇಲೆ ಯಾರಿಗಾದರೂ ದ್ವೇಷ ಇದ್ದೀತೇ? ಕ್ರಾಂತಿಗೀತೆ ಶುರುವಾಗಿತ್ತು. ತನ್ನ ಮೂವರು ಪುತ್ರರಿಗೂ ಬುದ್ಧಿ ಪೂರ್ವಕ ಕ್ರಾಂತಿದೀಕ್ಷೆ ನೀಡಿದ. ದೇಶಕ್ಕಾಗಿ ನಡೆದ ಯಾವುದೇ ಕ್ರಾಂತಿಯಾದರೂ ಭಾಗವಹಿಸುತ್ತಿದ್ದ ಅರ್ಜುನನ ಅಗ್ರ ಪುತ್ರ ಕಿಶನ್ ಸಿಂಹ ತುಂಬು ಯೌವನದಲ್ಲಿ ಅಮರನಾದ! ದ್ವಿತೀಯ ಅಜಿತ್ ಸಿಂಹ ಭಾರತ ಮಾತಾ ಸೊಸೈಟಿಯ್ ಮುಖೇನ ಚಾಪೇಕರ್ ಸಹೋದರರು ಹಾರಿಸಿದ್ದ ಕಿಡಿಯನ್ನು ವಿದೇಶಗಳಿಗೂ ಹಬ್ಬಿಸಿದ, ತಾನೂ ಗಡೀಪಾರಾಗಿ ಹೋದ! ಮೂರನೆಯವ ಸ್ವರ್ಣ ಸಿಂಹ ಕೈಕೋಳ-ಬೇಡಿಗಳ ಚದುರಂಗದಾಟದಲ್ಲಿ ಜೀವನ ಪೂರ್ತಿ ಕಳೆದ! ಅರ್ಜುನ ಸಿಂಹ ತನ್ನ ಹಿರಿಯ ಮೊಮ್ಮಕ್ಕಳಾದ ಜಗತ್-ಭಗತ್ ರನ್ನು ಅವರ ಬ್ರಹ್ಮೋಪದೇಶದ ಸಮಯದಲ್ಲಿ ಯಜ್ಞವೇದಿಕೆಯ ಮೇಲೆ ನಿಲ್ಲಿಸಿಕೊಂಡು ದೇಶದ ಬಲಿ ವೇದಿಕೆಗೆ ದಾನ ಮಾಡುತ್ತೇನೆ ಎಂದು ಸಂಕಲ್ಪ ಮಾಡಿದ. ಅವರಿಬ್ಬರಿಗೂ ರಾಷ್ಟ್ರೀಯ ವಿಚಾರ-ಕ್ರಾಂತಿಯ ಸಂಸ್ಕಾರ ನೀಡಿದ. ಯಜ್ಞ ಕುಂಡದಲ್ಲಿ ಅಗ್ನಿಗೆ ಆಜ್ಯವೊದಗಿತ್ತು. ಪೂರ್ಣಾಹುತಿ ಬಾಕಿ ಇತ್ತು!

             1907 ಸೆಪ್ಟೆಂಬರ್ 28… ವಿಕ್ರಮ ಸಂವತ್ಸರದ 1964ರ ಆಶ್ವಯುಜ ಶುಕ್ಲ ತ್ರಯೋದಶಿ ಶನಿವಾರ ಬೆಳಿಗ್ಗೆ 9 ಗಂಟೆಗೆ ಈಗಿನ ಪಾಕಿಸ್ತಾನದಲ್ಲಿರುವ ಪಂಜಾಬಿನ ಲಾಯಲಾಪುರದ ಬಂಗಾ ಗ್ರಾಮದಲ್ಲಿ ಸೂರ್ಯ ತೇಜಸ್ಸೊಂದು ಭೂಮಿಗೆ ಬಿದ್ದಿತು! ಅದೇ ದಿನ ಚಿಕ್ಕಪ್ಪ ಅಜಿತನ  ಗಡೀಪಾರು ಶಿಕ್ಷೆ ಮುಗಿದ ಸುದ್ದಿ ಬಂತು, ತಂದೆ ಕಿಶನ್, ಚಿಕ್ಕಪ್ಪ ಸ್ವರ್ಣ ಸಿಂಹ ಜೈಲಿನಿಂದ ಬಿಡುಗಡೆಯಾಗಿದ್ದರು. ಎಲ್ಲರೂ ಮಗುವನ್ನು “ಭಾಗ್ಯವಂತ” ಎಂದು ಕರೆದರು. ಅಜ್ಜಿ ಜಯಾ ಕೌರ್ “ಭಗತ್” ಎಂದು ಹೆಸರಿಟ್ಟಳು! ಎಲ್ಲರ ಕಣ್ಮಣಿಯಾಗಿ ಬೆಳೆದ ಸುಂದರ-ಆಕರ್ಷಕ ರೂಪದ ಮಗು ಎರಡೂವರೆ ವರ್ಷವಾಗಿದ್ದಾಗ ತಂದೆಯ ಜೊತೆ ಜಮೀನಿಗೆ ಹೋದಾಗ ತಂದೆಯ ಕೈಬಿಟ್ಟು ಜಮೀನಿನಲ್ಲಿ ಚಿಕ್ಕ ಚಿಕ್ಕ ಹುಲ್ಲಿನ ಕಡ್ಡಿಗಳನ್ನು ನೆಡಲಾರಂಭಿಸಿತು. ತಂದೆ ಪ್ರೀತಿಯಿಂದ ಏನು ಮಾಡುತ್ತಿದ್ದೀಯಾ ಎಂದು ಕೇಳಿದರೆ “ಬಂದೂಕುಗಳನ್ನು ನೆಡುತ್ತಿದ್ದೇನೆ” ಎಂದು ಇನ್ನೂ ಸರಿಯಾಗಿ ಶಬ್ಧ ಉಚ್ಛಾರಣೆ ಮಾಡಲಾಗದ ಮಗುವಿನ ಉತ್ತರವನ್ನು ಕೇಳಿ ತಂದೆ ಹಾಗೂ ಸ್ನೇಹಿತ ಮೆಹ್ತಾ ದಿಗ್ಭ್ರಮೆಗೊಳಗಾದರು. ಬೆಳೆಯುವ ಸಿರಿ ಮೊಳಕೆಯಲ್ಲಿ!

          ನಾಲ್ಕನೆಯ ತರಗತಿಯಲ್ಲಿರುವಾಗಲೇ ಆತ ತನ್ನ ಮನೆಯಲ್ಲಿದ್ದ ಅಜಿತ್ ಸಿಂಹ, ಸೂಫೀ ಅಂಬಾಪ್ರಸಾದ, ಲಾಲಾ ಹರದಯಾಳ್ ಬರೆದಿದ್ದ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಓದಿ ಮುಗಿಸಿದ್ದ. ಅವುಗಳಲ್ಲಿದ್ದದ್ದು ಬರೇ ರಾಜಕೀಯ-ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳು! ಆತನಲ್ಲಿ ಬ್ರಿಟಿಷ್ ವಿರೋಧಿ ದ್ವೇಷಾಗ್ನಿ ಝಗಝಗಿಸಲಾರಂಭಿಸಿತು! ಭಾರತಾ ಮಾತಾ ಸೊಸೈಟಿಯ ಆಂದೋಳನ ಶುರುವಾದಾಗ ಶಿಶುವಾಗಿದ್ದ, ಗದರ್ ಪಾರ್ಟಿಯ ಆಂದೋಳನದ ಬೆಳವಣಿಗೆಯನ್ನು ಹೆಜ್ಜೆಹೆಜ್ಜೆಗೂ ಕೇಳಿಸಿಕೊಂಡಿದ್ದ ಆತ ಗದರ್ ಆಂದೋಳನ ತಾರಕಕ್ಕೇರಿದಾಗ ಅದರಲ್ಲೊಬ್ಬನಾದ! 1919ರ ಏಪ್ರಿಲ್ 13! ಜಲಿಯನ್ ವಾಲಾ ಬಾಗ್ ನಲ್ಲಿ ಬ್ರಿಟಿಷರು ದೇಶೀರಕ್ತದ ಹೋಳಿ ಆಚರಿಸಿದ್ದರು! ಹನ್ನೆರಡು ವರ್ಷದ ಭಗತ್ ಮರುದಿನ ಶಾಲೆಗೆ ಹೋದವನು ಸಮಯಕ್ಕೆ ಸರಿಯಾಗಿ ಮರಳಲಿಲ್ಲ. ಜಲಿಯನ್ ವಾಲಾ ಬಾಗಿಗೆ ಹೋಗಿ ರಕ್ತದಿಂದ ನೆನೆದಿದ್ದ ಮಣ್ಣನ್ನು ಹಣೆಗೆ ಹಚ್ಚಿಕೊಂಡ. ಸ್ವಲ್ಪ ಮಣ್ಣನ್ನು ಶೀಶೆಯಲ್ಲಿ ತುಂಬಿಸಿಕೊಂಡು ಮನೆಗೆ ಬಂದ. ಆ ಶೀಶೆಯ ನಾಲ್ಕೂ ಕಡೆ ಹೂವುಗಳನ್ನಿರಿಸಿ ಭಕ್ತಿಯಿಂದ ನಮಿಸಿದ. ಅದು ದಿನನಿತ್ಯದ ಪೂಜೆಯಾಯಿತು! ಸ್ನೇಹಿತ ಜಯದೇವನ ಮುಖೇನ ತಂದೆಗೆ ಶಾಲೆ ಬಿಟ್ಟು ಕ್ರಾಂತಿಗೆ ಧುಮುಕುವ ವಿಚಾರ ಅರುಹಿದ ಭಗತ್ ಗೆ ವಿದೇಶೀ ವಸ್ತುಗಳ ಹೋಳಿ ಆಚರಣೆ ಕ್ರಾಂತಿಯ ಎರಡನೆ ಮೆಟ್ಟಿಲಾಯಿತು.

              ಆಗ ಸಿಡಿದಿತ್ತು ಚೌರಿಚೌರಾ! ಪೊಲೀಸರನ್ನು ಠಾಣೆಯೊಳಗೆ ಕೂಡಿ ಹಾಕಿದ ದೇಶಭಕ್ತ ಗುಂಪು ಠಾಣೆಗೇ ಬೆಂಕಿ ಹಚ್ಚಿತು. ಗಾಂಧಿ ಹಿಂಸೆ ತಲೆದೋರಿದೆ ಎಂದು ತನ್ನ ಆಂದೋಲನವನ್ನೇ ಹಿಂತೆಗೆದುಕೊಂಡರು. ಡಾ. ಮೂಂಜೆ, ಲಾಲಾ ಲಜಪತ್ ರಾಯ್ ಇದನ್ನು ಕಟುವಾಗಿ ಟೀಕಿಸಿದರು. ಭಗತನ ಮನಸ್ಸು ಹೊಯ್ದಾಟವಾಡುತ್ತಿತ್ತು. ಕ್ರಾಂತಿಯೇ…..ಅಹಿಂಸೆಯೇ? ಆಗ ನಗುನಗುತ್ತ ಬಲಿವೇದಿಯನ್ನೇರಿದ ಕರ್ತಾರ್ ಸಿಂಗ್ ಸರಾಬಾನ ಪುಣ್ಯಕರ್ಮವು ಭಗತ್ ಸಿಂಹನ ಎದೆಯಲ್ಲಿ ಹೊಳೆಯುತ್ತಾ ಕರ್ತಾರನ ಆತ್ಮವೇ ಅವನ ನರನಾಡಿಗಳಲ್ಲಿ ತುಂಬಿಕೊಂಡಿತು! ಅಸಂಖ್ಯಾತ ಜನರನ್ನು ಸೆಳೆದರೂ ಅಹಿಂಸೆಯ ಹಾದಿ ದೇಶವನ್ನು ಸ್ವಾತಂತ್ರ್ಯ ಸಾಧನೆಯ ಕಡೆಗೆ ಕೊಂಡೊಯ್ಯುವುದಿಲ್ಲ ಎಂದವನ ಅಂತರ್ವಾಣಿ ನುಡಿಯಲಾರಂಭಿಸಿತು.

                ಭಗತ್ ಮೆಟ್ರಿಕ್ ಪಾಸಾಗಿರಲಿಲ್ಲ. ಒಂಭತ್ತನೇ ತರಗತಿಯಲ್ಲಿ ಅಸಹಕಾರೀ ಆಂದೋಲನಕ್ಕಾಗಿ ಶಾಲೆ ಬಿಟ್ಟಿದ್ದ ಅವನ ಬುದ್ಧಿಮತ್ತೆಯನ್ನು ಗುರುತಿಸಿದ್ದ ಭಾಯಿ ಪರಮಾನಂದರು ಆತನನ್ನು ನ್ಯಾಷನಲ್ ಕಾಲೇಜಿಗೆ ಸೇರಿಸಲು ನೆರವಾದರು. ಪ್ರೊ. ಜಯಚಂದ್ರ ವಿದ್ಯಾಲಂಕಾರರ ಸಂಪರ್ಕದಿಂದ ಭಗತನೊಳಗಿನ ಭೂಗತ ಕ್ರಾಂತಿಕಾರಿ ಅರಳಲಾರಂಭಿಸಿದ. ಕಾಲೇಜಿನಲ್ಲಿ ನಾಟಕದ ಕ್ಲಬ್ವೊಂದನ್ನು ಸ್ಥಾಪಿಸಿ ಅದರ ಮೂಲಕ ರಾಣಾ ಪ್ರತಾಪ, ಸಾಮ್ರಾಟ್ ಚಂದ್ರಗುಪ್ತರ ನಾಟಕವನ್ನು ಆರಂಭಿಸಿದ. ಅದಕ್ಕೆ ಸರ್ಕಾರದ ಕಾಕದೃಷ್ಟಿ ಬಿತ್ತು. ಮದುವೆಗೆ ಮನೆಯವರ ಒತ್ತಡ ಹೆಚ್ಚಾದಾಗ ನಿಶ್ಚಿತಾರ್ಥಕ್ಕೆ ಕೆಲವೇ ದಿನಗಳಿರುವಾಗ ಲಾಹೋರಿಗೆ ಪರಾರಿಯಾದ. ಅಲ್ಲಿಂದ ಕಾನ್ಪುರ ತಲುಪಿದ. ಅಲ್ಲಿ ಬಂಗಾಲಿ ಕ್ರಾಂತಿಕಾರಿಗಳೊಡನೊಂದಾಗಿ ಹೋದ. ಗಣೇಶ ಶಂಕರ ವಿದ್ಯಾರ್ಥಿಯ “ಪ್ರತಾಪ್” ಪತ್ರಿಕೆಗೆ ಬಲವಂತ ಸಿಂಹ ಎಂಬ ಹೆಸರಲ್ಲಿ ಲೇಖನಗಳನ್ನು ಬರೆಯಲಾರಂಭಿಸಿದ. ಮದುವೆಗೆ ಬಲವಂತ ಮಾಡುವುದಿಲ್ಲ ಎಂದು ಮಾತುಕೊಟ್ಟ ಕಾರಣ ಮತ್ತೆ ಮನೆಗೆ ಹಿಂದಿರುಗಿದ. ಜೈತೋಂನಲ್ಲಿ ಭಗತ್ ಸಿಂಹನ ಕಾರ್ಯದಿಂದ ಅವಮಾನಿತನಾದ ಕಿಶನ್ ಸಿಂಗನ ಕುಟುಂಬ ವರ್ಗಕ್ಕೆ ಸೇರಿದ ಮ್ಯಾಜಿಸ್ಟ್ರೇಟ್ ದಿಲ್ ಬಾಗ್ ಸಿಂಹ ಭಗತನನ್ನು ಹಿಡಿಯಲು ವಾರಂಟ್ ತರಿಸಿದ. ಆದರೆ ಭಗತ್ ಸಿಗದೆ ಮಾಯವಾದ. ಮುಂದೆ ಲಾಹೋರಿನಲ್ಲಿ ನೌಜವಾನ್ ಭಾರತ್ ಸಭಾದ ಸ್ಥಾಪನೆಯಲ್ಲಿ ತೊಡಗಿದ. ಕರ್ತಾರನ ಬಲಿದಾನದ ದಿನವನ್ನು ಕರ್ತಾರನ ಫೋಟೋ ಮೇಲೆ ರಕ್ತದಭಿಷೇಕ ಮಾಡಿ ಕ್ರಾಂತಿದೀಕ್ಷೆ ನೀಡುವ ಮೂಲಕ ಬಹಿರಂಗವಾಗಿ ಆಚರಿಸಲಾಯಿತು. ಇದರ ಮಧ್ಯೆ ಪಂಡಿತ್ ರಾಮ ಪ್ರಸಾದರ ನೇತೃತ್ವದಲ್ಲಿ ನಡೆದ ಕಾಕೋರಿ ಕಾಂಡದಲ್ಲಿ ಭಾಗಿಯಾದ. 1927ರ ಜುಲೈನಲ್ಲಿ ಮೊದಲ ಬಾರಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದ. ಕೆಲವು ವಾರಗಳ ಬಳಿಕ ಅರವತ್ತು ಸಾವಿರ ರೂಪಾಯಿಗಳ ಮುಚ್ಚಳಿಕೆ ಬರೆಸಿಕೊಂಡು ಅವನನ್ನು ಬಿಡುಗಡೆ ಮಾಡಲಾಯಿತು. ಸೈಮನ್ ಕಮೀಷನ್ನಿನ ವಿರುದ್ಧ ಹೋರಾಡುತ್ತಿದ್ದ ಲಾಲಾ ಲಜಪತ್ ನೇತೃತ್ವದ ಹೋರಾಟಗಾರರ ಮೇಲೆ ಸ್ಕಾಟ್ ನ ಆದೇಶದಂತೆ ಸ್ಯಾಂಡರ್ಸ್ ಮುಗಿಬಿದ್ದ. ಪಂಜಾಬಿನ ವೃದ್ಧ ವೀರ ಕೇಸರಿಯ ಶರೀರ ಸ್ಯಾಂಡರ್ಸನ ಲಾಠಿ ಏಟುಗಳ ಆಘಾತಕ್ಕೆ ಜರ್ಝರಿತವಾಯಿತು. ಸ್ಕಾಟ್ ನ ಬಲಿಗೆ ಬಲೆ ಹೆಣೆಯಲಾಯಿತು. ಆದರೆ ಜಯಗೋಪಾಲ ತಪ್ಪಾಗಿ ಗುರುತಿಸಿದ್ದರಿಂದ ಸ್ಕಾಟಿನ ಬದಲಾಗಿ ರಾಜಗುರು ಹಾಗೂ ಭಗತ್ ಸಿಂಹನ ಗುಂಡುಗಳಿಗೆ ಸ್ಯಾಂಡರ್ಸ್ ಬಲಿಯಾದ. ಅದೇನೆ ಇರಲಿ ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಸೂರ್ಯ ಮುಳುಗುವ ಮೊದಲೇ ಮರ್ಮಾಘಾತವಾಯಿತು!

              ಅಸೆಂಬ್ಲಿಯಲ್ಲಿ ಬಾಂಬು ಎಸೆಯುವ ಯೋಜನೆ ಭಗತನದ್ದು. ವ್ಯೂಹ ರಚನೆ ಆಜಾದರದ್ದು. ಆಜಾದ್ ಅಂದರು “ಬಾಂಬು ಎಸೆದವರು ಕೂಡಲೇ ಓಡಿ ಬರಬೇಕು. ಅವರನ್ನು ನಾನು ರಕ್ಷಿಸುತ್ತೇನೆ”. ಆದರೆ ಬಾಂಬು ಎಸೆದು ಎಲ್ಲರೆದುರು ನಿಂತು ನಾವು ಯಾಕೆ ಎಸೆದೆವೆಂದು ಹೇಳಬೇಕು, ಓಡಬಾರದು ಎಂಬುದು ಭಗತ್ ನಿಲುವಾಗಿತ್ತು. ಭಗತ್ ನ ಹಠಕ್ಕೆ ಎಲ್ಲರೂ ಒಪ್ಪಲೇಬೇಕಾಯಿತು. ಸೂರ್ಯ ಮುಳುಗದ ಸಾಮ್ರಾಜ್ಯದ ಕಿವುಡರ ಅಸೆಂಬ್ಲಿಯಲ್ಲಿ ಕ್ರಾಂತಿಯ ಬಾಂಬು ಸಿಡಿದಿತ್ತು. ಆದರೆ ಭಗತ್-ದತ್ತ ತ್ಯಾಗದ ಹುಚ್ಚಿಗೊಳಗಾಗಿ ಬಂಧನಕ್ಕೊಳಗಾದರು! ಚಂದ್ರಶೇಖರ್ ಆಜಾದ್ ವೇಶಮರೆಸಿಕೊಂಡು ಬಂದು ಭಗತ್ ನನ್ನು ಬಿಡಿಸಲೆತ್ನಿಸಿದರು. ಆದರೆ ಭಗತನ ಹಠ ಅದಕ್ಕೊಪ್ಪಲಿಲ್ಲ…”ಸರ್-ಫರೋಶಿ ಕೀ ತಮನ್ನಾ…” ಹೇಡಿಗಳು ತಮ್ಮ ಸ್ವಾಭಾವಿಕ ಮೃತ್ಯುವಿನ ಮೊದಲೇ ಎಷ್ಟೋ ಸಲ ಸಾಯುತ್ತಾರೆ. ಆದರೆ ವೀರನಿಗೆ ಮೃತ್ಯು ಬರುವುದು ಒಂದೇ ಸಲ! ಅದೇನೋ ಸರಿ. ಆದರೆ ಭಗತ್ ಆಜಾದರ ಮಾತಿಗೆ ಒಪ್ಪುತ್ತಿದ್ದರೆ ಭಾರತಕ್ಕೆ ಇಂದಿನ ದುರ್ದೆಶೆ ತಪ್ಪುತ್ತಿತ್ತೇನೋ ಅಂತ ಬಹಳ ಸಲ ಅನ್ನಿಸಿದೆ. ಯಾಕೆಂದರೆ ಕುತಂತ್ರಿಗಳ ಜೊತೆ ಹೋರಾಡುವಾಗ ಕೃಷ್ಣತಂತ್ರ-ಚಾಣಕ್ಯ ನೀತಿಯೇ ಬೇಕಾದದ್ದು. ಅದೇನೇ ಇರಲಿ ಆತ ಸಾಮ್ರಾಜ್ಯಶಾಹಿಗಳಿಗೆ ಪದಾಘಾತ ನೀಡಿ ರಾಜಗುರು-ಸುಖದೇವರೊಂದಿಗೆ ನಗುನಗುತ್ತಾ ಸ್ವಾತಂತ್ರ್ಯ ಯಜ್ಞಕ್ಕೆ ಪೂರ್ಣಾಹುತಿ ನೀಡಿ ತಾತ ಅರ್ಜುನನ ಸಂಕಲ್ಪವನ್ನು ಪೂರೈಸಿದ. ಫಾಸಿಕೋಣೆಯಲ್ಲಿ ಗಂಭೀರ ಅಧ್ಯಯನಗಳೊಂದಿಗೆ ತನ್ನ “ಆತ್ಮಕಥೆ”, “ದಿ ಡೋರ್ ಟು ಡೆತ್”, “ಐಡಿಯಲ್ ಆಫ್ ಸೋಷಿಯಾಲಿಸಮ್”, “ಸ್ವಾಧೀನತಾ ಕೀ ಲಢಾಯೀ ಮೇಂ ಪಂಜಾಬ್ ಕಾ ಪಹಲಾ ಉಭಾರ್” ಎಂಬ ಪುಸ್ತಕಗಳನ್ನೂ ಬರೆದ.

             ಸರದಾರ ಅರ್ಜುನ ಸಿಂಹ ಅತ್ಯಂತ ಸಾಹಸದಿಂದ ಅಂಧವಿಶ್ವಾಸ ಮತ್ತು ಪರಂಪರಾವಾದಗಳ ಜಡತೆಯಿಂದ ಮುಚ್ಚಿಹೋಗಿದ್ದ ತನ್ನ ಮನೆಯ ಬಾಗಿಲನ್ನು ಮುಕ್ತವಾಗಿ ತೆರೆದ. ಅಡ್ಡಾದಿಡ್ಡಿಯಾಗಿದ್ದ ಮಾರ್ಗವನ್ನು ಶುಚಿಗೊಳಿಸಿ ತನ್ನ ಮನೆಯಂಗಳದಲ್ಲಿ ಯಜ್ಞವೇದಿಕೆಗಳನ್ನು ಅಣಿ ಮಾಡಿದ. ಸರದಾರ್ ಕಿಶನ್ ಸಿಂಹ ಆ ಮನೆಯ ಅಂಗಳವನ್ನು ತೊಳೆದು ಸಾರಿಸಿ ಯಜ್ಞವೇದಿಕೆಯ ಮೇಲೆ ವಿಶಾಲವಾದ ಯಜ್ಞಕುಂಡವೊಂದನ್ನು ಸ್ಥಾಪಿಸಿದ. ಸರ್ದಾರ್ ಅಜಿತಸಿಂಹ್ ಆ ಯಜ್ಞಕುಂಡದಲ್ಲಿ ಸಮಿತ್ತುಗಳನ್ನು ಜೋಡಿಸಿ ಅದರಲ್ಲಿ ಅಗ್ನಿಯನ್ನು ಪ್ರತಿಷ್ಠಾಪಿಸಿದ. ಸ್ವರ್ಣ ಸಿಂಹ ಅದನ್ನೂದಿ ಉರಿಯನ್ನೆಬ್ಬಿಸಿದ. ಅಜಿತ್ ಸಿಂಗ್ ಇಂಧನವನ್ನು ಹುಡುಕುತ್ತಾ ಹೋದಾಗ ಕಿಶನ್ ಸಿಂಹ ಅದರ ರಕ್ಷಣೆ ಮಾಡುತ್ತಿದ್ದ. ಆದರೆ ಭಗತ್ ಸಿಂಗ್ ಅಲ್ಲಿ ಇಲ್ಲಿ ಎಂದು ಇಂಧನವನ್ನು ಹುಡುಕದೆ ತನ್ನ ಜೀವನವನ್ನೇ ಇಂಧನವಾಗಿ ಮಾಡಿ ಆ ಯಜ್ಞಕುಂಡಕ್ಕೆ ಧುಮುಕಿದ. ಅದರ ಜ್ವಾಲೆ ದೇಶದಾದ್ಯಂತ ಹರಡಿತು. ಅಮೃತಧಾರೆಯು ತಾಯಿ ಭಾರತಿಗೆ ಅಭಿಷೇಕ ಮಾಡಿ ಅಮರವಾಯಿತು.

Facebook ಕಾಮೆಂಟ್ಸ್

ಲೇಖಕರ ಕುರಿತು

Rajesh Rao

ವೃತ್ತಿ: ವಿ ಎಲ್ ಎಸ್ ಐ ಇಂಜಿನಿಯರ್
ಪ್ರವೃತ್ತಿ: ಇತಿಹಾಸ/ಪ್ರಚಲಿತ ವಿದ್ಯಮಾನ, ಕಥೆ-ಕವನ ಬರವಣಿಗೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!