ಕಥೆ

ಕಥೆ: ಋಣ ಮುಕ್ತ

“ನಿಮ್ಮಲ್ಲೊಂದು ಬಹು ಪ್ರಾಮುಖ್ಯವಾದ ವಿಷಯ ಹೇಳಕ್ಕಿದೆ. ದಯವಿಟ್ಟು ನಾಡಿದ್ದು ಭಾನುವಾರ ಸಿಗ್ತೀರಾ?” ಎಂದು ಯಾರೋ ಅಪರಿಚಿತರು ಫೋನ್ ಮಾಡಿ ಮನವಿ ಮಾಡಿದ್ದರಿಂದ ಅಂದು ರಾಜೇಶ ಹೊರಗೆಲ್ಲೂ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದ. ‘ತಾವ್ಯಾರು? ಏನು ವಿಷಯ?’ ಎಂದು ರಾಜೇಶ ಬಹಳ ಆಶ್ಚರ್ಯದಿಂದಲೇ ಪ್ರಶ್ನಿಸಿದರೆ, ‘ಅದನ್ನೆಲ್ಲ ವಿವರವಾಗಿ ನುಮಗೆ ಮುಖತಃ ಹೇಳ್ತೀನಿ…..ದಯವಿಟ್ಟು ತಪ್ಪು ತಿಳ್ಕೋಬೇಡಿ’ ಎಂದವರು ಕೇಳಿಕೊಂಡಿದ್ದರು.

ರಾಜೇಶ ಕೊಂಚ ಆತಂಕ ಹಾಗೂ ಕಾತರದಿಂದಲೇ ಭಾನುವಾರವನ್ನು ಕಾಯುತ್ತಿದ್ದ. ಅವನ ಪತ್ನಿ ಶರ್ಮಿಳಾಳೂ ಆತಂಕಿತಳಾಗಿದ್ದಳು.

‘ನಾವು ಬೆಳಗ್ಗೆಯೇ ಬರ್ತೇವೆ’ ಎಂದವರು ಹೇಳಿದ್ದರಿಂದ ಶರ್ಮಿಳಾ ಕೆಲಸಗಳನ್ನೆಲ್ಲ ಬೇಗ ಬೇಗ ಮುಗಿಸಿದ್ದಳು.

ಆ ಅಪರಿಚಿತರು ಸಪತ್ನೀಕರಾಗಿ ಸಮಯಕ್ಕೆ ಸರಿಯಾಗಿಯೇ ಆಗಮಿಸಿದರು. ರಾಜೇಶ ಮತ್ತು ಶರ್ಮಿಳಾರು ಬಹಳ ಕುತೂಹಲಗೊಂಡಿದ್ದರು.

“ಬನ್ನಿ..ಬನ್ನಿ… ಬಾಯಾರಿಕೆಗೇನಾದರೂ…?” ರಾಜೇಶ ಬಂದವರನ್ನು ಬಹು ಸೂಕ್ಷ್ಮವಾಗಿ ಅವಲೋಕಿಸುತ್ತಲೇ ಸ್ವಾಗತಿಸಿದ. ಬಹಳ ಸಭ್ಯಸ್ಥರಂತೆ ತೋರಿತು. ಅವರ ನಡವಳಿಕೆಗಳಲ್ಲಿ ಸುಸಂಸ್ಕೃತಿ ಎದ್ದು ತೋರುತ್ತಿತ್ತು. ಕಣ್ಣುಗಳಲ್ಲೇನೋ ನೋವಿನ ಛಾಯೆ….

“ನಿಮಗೆ ನಮ್ಮ ಪರಿಚಯವಿರಲಾರದು. ನಮ್ಮದು ಸಂಪಿಗೆ ಹಳ್ಳೀ ಊರು. ನಾನು ಸದಾನಂದ ಅಂತ. ಸಣ್ಣದೊಂದು ಸೊಸೈಟಿಯಲ್ಲಿ ಮ್ಯಾನೇಜರ್. ಇವಳು ನನ್ನ ಪತ್ನಿ ವಿಮಲಾ. ಪ್ರೈಮರಿ ಸ್ಕೂಲ್ ಟೀಚರ್….”

“ಸರಿ..ನಮ್ಮ ಪರಿಚಯ ನಿಮಗೆ ಹೇಗೆ? ನಮ್ಮಿಂದ ನಿಮಗೇನಾಗಬೇಕಿದೆ…?”

“ನಿಮ್ಮ ನೇರ ಪರಿಚಯ ನಮಗಿಲ್ಲ. ನಿಮ್ಮ ತಂದೆಯಿಂದಾಗಿ ಪರಿಚಯ ಅಷ್ಟೇ..”

“ಹೌದೆ? ಹೇಗೆ…?”

“ನಿಮ್ಮ ತಂದೆ ಸಂಪಿಗೆ ಹಳ್ಳಿಯ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ನಿಮಗೆ ನೆನಪಿದೆಯೇ?”

“ಹೌದು. ನಾನಾಗ ಎರಡನೆಯೋ ಮೂರನೆಯೋ ತರಗತಿಯಲ್ಲಿದ್ದೆ. ಆಮೇಲೆ ಅಪ್ಪನಿಗೆ ಪಕ್ಕದ ಜಿಲ್ಲೆಗೆ ವರ್ಗವಾಯಿತು…”

“ಆ ಶಾಲೆಯಲ್ಲಿ ಗಿರಿಜಾ ಅಂತ ಒಬ್ರು ಶಿಕ್ಷಕಿ ಇದ್ರು, ನೆನಪಿದೆಯೇ…?”

“ಹೌದೌದು…ನಮ್ಮ ತರಗತಿಗಳಿಗಿರಲಿಲ್ಲ. ಐದು, ಆರು ಹಾಗೂ ಏಳನೆಯ ತರಗತಿಗಳಿಗೆ ಗಣಿತ ಪಾಠ ಮಾದ್ತಿದ್ರಂತೆ. ಅವರು ಬಹಳ ಒಳ್ಳೇ ಟೀಚರ್ ಅಂತ ಹೇಳುವುದು ಕೇಳಿದ್ದೆ. ಅವರನ್ನು ಎಲ್ಲಾ ಮಕ್ಕಳೂ ತುಂಬಾ ಇಷ್ಟಪಡ್ತಿದ್ರಂತೆ. ಆ ಶಾಲೆಯಲ್ಲ್ಲಿ ಅವರಿಗೆ ಬಹಳ ಒಳ್ಳೆಯ ಹೆಸರಿತ್ತಂತೆ. ನಮ್ಮ ತಂದೇನೂ ಅವರನ್ನು ಬಹಳ ಹೊಗಳುತಿದ್ರು…”

“ಅವರ ಮಗನೇ ನಾನು…”

“ಓಹ್! ನೀವವರ ಮಗನೆ? ಒಳ್ಳೇ ತಾಯಿಗೆ ಒಳ್ಳೇ ಮಗನೇ ಸರಿ. ಹೇಗಿದ್ದಾರೆ ನಿಮ್ಮಮ್ಮ ಈಗ…? ರಿಟೈರ್ ಆಗಿದ್ದಾರಾ…?”

“ಇಲ್ಲ .. ರಿಟೈರಾಗಿಲ್ಲ”

“ಹಾಗಾದ್ರೆ ಅಲ್ಲಿ ಕಲೀತಿರೋ ಮಕ್ಕಳ ಸೌಭ್ಯಾಗವೇ ಸರಿ”

“ಆದ್ರೆ ಅವರೀಗ ಶಾಲೆಗೆ ಹೋಗ್ತಾ ಇಲ್ಲ…:

“ಹೌದೆ? ಯಾಕೆ? ಏನಾಗಿದೆ ಅವರಿಗೆ..?”

ಅಷ್ಟರಲ್ಲಿ ಶರ್ಮಿಳಾ ತಟ್ಟೆಯೊಂದರಲ್ಲಿ ಒಂದಷ್ಟು ಸಿಹಿ, ಖಾರ ಹಾಗೂ ಕಾಫಿ ತಂದಿಟ್ಟಳು.

ರಾಜೇಶ ಅವರಿಗೆ ಸ್ವೀಕರಿಸಲು ಹೇಳಿ ತಾನೂ ಒಂದು ಲೋಟ ಕೈಗೆತ್ತಿಕೊಂಡು ಅವರ ಉತ್ತರಕ್ಕಾಗಿ ಕಾಯತೊಡಗಿದ.

“ಅವರೀಗ ಶಾಲೆಗೆ ಹೋಗೋ ಸ್ಥಿತೀಲಿ ಇಲ್ಲ….”

“ಏನಾಯಿತವರಿಗೆ…?” ತುಸು ಮೌನವಾದ ಸದಾನಂದ ಕಷ್ಟಪಟ್ಟು ನುಡಿದ – “ಅವರೀಗ ಮನೋರೋಗಿಯಾಗಿದ್ದಾರೆ..”

ರಾಜೇಶ ಲಘುವಾಗಿ ಕಂಪಿಸಿದ. “ಔಷಧಿ ಮಾಡಿಲ್ವೆ?”

“ನಾವು ಎಲ್ಲಾ ಥರದ ಔಷಧಿಗಳನ್ನೂ ಮಾಡಿಯಾಯಿತು. ಹರಕೆ,ನೇಮ, ಪೂಜೆ, ವ್ರತ.. ಎಲ್ಲವೂ ಆಯ್ತು.”

“ಇಲ್ಲಿ ಬೆಂಗಳೂರಲ್ಲಿ ಯಾವುದಾದರೂ ಒಳ್ಳೆಯ ಡಾಕ್ಟ್ರಿಗೆ ತೋರಿಸಬಹುದಿತ್ತು…”

“ಅದೂ ಆಗಿದೆ…”

“ಏನಂದ್ರು ಡಾಕ್ಟರ್? ಅವರಿಗೆ ಹಾಗಾಗಲು ಕಾರಣವೇನಂತೆ?”

ತುಸು ಮೌನವಾದ ಸದಾನಂದ ಪತ್ನಿಯ ಮುಖ ನೋಡಿದ.

“ಹೇಳುವ ಹಾಗಿದ್ರೆ ಹೇಳಿ….” ರಾಜೇಶ ಅವರ ಸಂಕೋಚವನ್ನು ಗಮನಿಸಿ ನುಡಿದ.

“ನಮ್ಮಮ್ಮನಿಗೆ ಒಬ್ಬರ ಮೇಲೆ ಬಹಳ ವಿಶ್ವಾಸವಿತ್ತು. ಅಚಲವಾದ ನಂಬಿಕೆಯಿತ್ತು. ಆ ನಂಬಿಕೆಯಿಂದ ಅಮ್ಮ ಅವರು ನೌಕರ ಸೊಸೈಟಿಯಿಂದ ತೆಗೆದ ಸಾಲಕ್ಕೆ ಜಾಮೀನು ನಿಂತಿದ್ರು…”

“ಎಷ್ಟಕ್ಕೆ? ಆಮೇಲೆ?”

“ಸಾಲದ ಮೊತ್ತ ಎರಡು ಲಕ್ಷ..”

“ಅಷ್ಟೊಂದು ದೊಡ್ಡ ಮೊತ್ತಕ್ಕೆ ನಿಮ್ಮಮ್ಮ ಜಾಮೀನು ನಿಂತರೆ ? ಆಶ್ಚರ್ಯ…”

“ಅದೇ ಹೇಳಿದ್ನಲ್ಲ…ಅವರ ಮೇಲೆ ಅಮ್ಮನಿಗೆ ಅಷ್ಟೊಂದು ಬಲವಾದ ನಂಬಿಕೆ, ಅಚಲವಾದ ವಿಶ್ವಾಸವಿತ್ತು. ಅದಕ್ಕಾಗಿಯೇ ಜಾಮೀನು ನಿಂತರಂತೆ. ಆದ್ರೆ…”

“ಆದ್ರೆ??”

“ಸಾಲ ತೆಗೆದವರು ಮರು ಪಾವತಿ ಮಾಡಲೇ ಇಲ್ಲ”

“ಆಮೇಲೆ?” ರಾಜೇಶ ಬಹಳ ಆಶ್ಚರ್ಯಗೊಂಡಿದ್ದ.

“ಆಮೇಲೇನು? ಅಮ್ಮ ಅವರಿಗೆ ಹಲವಾರು ವಿಧದಲ್ಲಿ ಮರುಪಾವತಿ ಮಾಡಲು ಹೇಳಿದ್ರಂತೆ. ಆದ್ರೆ ಅವರು ಒಂದು ನಯಾಪೈಸೆಯೂ ಕಟ್ಟದೆ ಬೇರೆ ಊರಿಗೆ ಟ್ರಾನ್ಸ್ ಫರ್ ತೆಗೆದುಕೊಂಡು ಹೋದರಂತೆ..”

“ಸಾಲ…?”

“ಹಾಗೆ ಹೋದವರು ಏನಾದರೆಂದೇ ಗೊತ್ತಾಗಲಿಲ್ಲ. ಕಾನೂನು ನಿಮಗೆ ಗೊತ್ತೇ ಇದೆಯಲ್ಲ… ಜಾಮೂನು ನಿಂತವರು ಮರುಪಾವತಿ ಮಾಡಬೇಕಾಯಿತು.”

“ಅಷ್ಟು ದೊಡ್ಡ ಮೊತ್ತವನ್ನು ನಿಮ್ಮಮ್ಮ ಒಬ್ರೇ ಮರುಪಾವತಿ ಮಾಡಿದ್ರಾ….?”

“ಹೌದು, ಕಾನೂನು ಹಾಗೇ ಇತ್ತಲ್ಲ..? ಒಂದೆಡೆ ಅವರು ಮಾಡಿದ ವಿಶ್ವಾಸ ದ್ರೋಹ…ಇನ್ನೊಂದೆಡೆ ಸಾಲದ ಹೊರೆ… ಅಮ್ಮನದು ಬಹಳ ಸೂಕ್ಷ್ಮ ಮನಸ್ಸು. ಆ ಅಘಾತವನ್ನು ತಡೆದುಕೊಳ್ಳಲು ಅವರಿಂದಾಗಲೇ ಇಲ್ಲ. ಹಲವಾರು ವರ್ಷಗಳಿಂದ ದುಡಿದು ಶೇಖರಿಸಿಟ್ಟಿದ್ದ ಹಣ.. ವ್ಯರ್ಥವಾಯಿತು. ಮತ್ತೂ ಮುಗಿಯದ ಸಾಲದ ಹೊರೆ. ಬೆಟ್ಟದಷ್ಟಿದ್ದ ವಿಶ್ವಾಸಕ್ಕೆ ತಗುಲಿದ ಪೆಟ್ಟು… ಅಮ್ಮ ಮನಸ್ಸಿನ ಸ್ತಿಮಿತ ಕಳಕೊಂಡು ಬಿಟ್ರು…” ಎನ್ನುತ್ತಾ ಸದಾನಂದ ಗದ್ಗದಿತನಾದ.

ರಾಜೇಶನಿಗೆ ಹೇಗೆ ಮಾತು ಮುಂದುವರಿಸಬೇಕೆಂದೇ ತಿಳಿಯದೆ ತೊಳಲಾಡಿದ.

“ಸಾಲ ತೆಗೆದವರು ಯಾರು…?”

ಸದಾನಂದ ಉತ್ತರಿಸಲಿಲ್ಲ. ವಿಮಲಳೂ ತಲೆ ತಗ್ಗಿಸಿ ಕುಳಿತಿದ್ದಳು.

“ನನ್ನ ಯಾರಾದರು ಪರಿಚಿತರೇ?” ರಾಜೇಶ ಮುಗ್ದವಾಗಿ ಪ್ರಶ್ನಿಸಿದ.

ಸದಾನಂದ ಈಗಲೂ ಮೌನಿ.

“ಹೇಳಿ…ಸಂಕೋಚ ಬೇಡ… ನನ್ನಿಂದೇನಾದರೂ ಮಾಡಲು ಸಾಧ್ಯವೇ?”

“ನೀವು ಹೇಳಿದ್ರೆ ತಪ್ಪು ತಿಳಿಯೋಲ್ಲ ತಾನೇ?”

“ಇಲ್ಲ ಹೇಳಿ…”

“ನೀವು ನಮ್ಮನ್ನು ಮೋಸಗಾರರು ಅನ್ತೀರೇನೋ..”

“ಛೆ..ಛೆ… ಖಂಡಿತಾ ಇಲ್ಲ.. ಹೇಳಿ… ಯಾರವರು?”

“ಅವರು ಬೇರಾರೂ ಅಲ್ಲ.. ನಿಮ್ಮ ತಂದೇನೇ…”

ರಾಜೇಶ ಒಂದು ಕ್ಷಣ ನಿಶ್ಚೇಷ್ಟಿತನಾದ. ಮಾತು ಗಂಟಲಲ್ಲೇ ಹೂತು ಹೋಯಿತು.

“ಏನ್ ಹೇಳ್ತಾ ಇದ್ದೀರಿ ನೀವು..?”

“ನಾನು ಮೊದ್ಲೇ ಹೇಳಿದ್ದೆ… ನೀವು ತಪ್ಪು ತಿಳಿಯಬಾರದು ಎಂದು”

ರಾಜೇಶನಿಗೆ ಊಹಿಸಲಸಾಧ್ಯವಾದ ಆಘಾತವಾಗಿತ್ತು. ತಂದೆ ಹೀಗೂ ಮಾಡಿರಬಹುದೇ? ಬದುಕಿದ್ದಾಗ ಅವರು ತನ್ನ ಯಾವ ಒಂದು ವ್ಯವಹಾರವನ್ನು ಹೇಳಿದವರಲ್ಲ. ಅವರಿಗೆ ಖರ್ಚು ವೆಚ್ಚಗಳನ್ನು ಬರೆದಿಡುವ ಪದ್ಧತಿಯೂ ಇರಲಿಲ್ಲ. ಅಪ್ಪನ ಯಾವುದೇ ವ್ಯವಹಾರಗಳೂ ಅಮ್ಮನಿಗೆ ತಿಳಿದಿರಲಿಲ್ಲ. ಈಗ ಇಂಥ ಪರಿಸ್ಥಿತಿ ಎದುರಾಗಬೇಕೆ? ಅಷ್ಟು ಮೊತ್ತದ ಹಣವನ್ನು ಇವರಿಗೆ ತಾನೀಗ ನೀಡಬೇಕೆಂದು ಇವರ ನಿರೀಕ್ಷೆಯೇ?

ಕಣ್ಣು ಕತ್ತಲಿಟ್ಟಂತಾಯಿತು.

ತುಸು ಮೌನದ ನಂತರ ಸದಾನಂದ ಮುಂದುವರಿಸಿದ “ ಡಾಕ್ಟರ್ ಸಲಹೆಯ ಪ್ರಕಾರ ನನ್ನ ಅಮ್ಮನಿಗೆ ಅಷ್ಟು ಹಣವನ್ನು ನೀವು ಕೊಟ್ಟರೆ ಮಾಅತ್ರ ಅವು ಮೊದಲಿನಂತಾಗಬಹುದಂತೆ… ಹಾಗಂತ ನೀವದನ್ನು ಕೊಡಿ ಅಂತ ನಾನು ಹೇಲ್ತಿಲ್ಲ….”

“ಮತ್ತೆ?” ಶರ್ಮಿಳಾ ತುಸು ಚೇತರಿಸಿಕೊಂಡು ಕುತೂಹಲದಿಂದ ಪ್ರಶ್ನಿಸಿದಳು.

“ನೀಮೊಮ್ಮೆ ನಮ್ಮ ಮನೆಗೆ ಬನ್ನಿ. ಅಮ್ಮ ಒಬ್ರೇ ಕೋಣೆಯಲ್ಲಿರ್ತಾರೆ. ನಾನಲ್ಲಿ ನಿಮಗೆ ಎರಡೂವರೆ ಲಕ್ಷ ಹಣ ಕೊಡ್ತೀನಿ. ನೀವದನ್ನು ಅಮ್ಮನಿಗೆ ಕೊಟ್ಟು ಅಪ್ಪ ತೆಗೆದ ಸಾಲವನ್ನು ನಾನು ನಿಮಗೆ ಹಿಂತಿರುಗಿಸ್ತಾ ಇದ್ದೇನೆ, ಅಪ್ಪ ಮಾಡಿದ ತಪ್ಪನ್ನು ದಯಬಿಟ್ಟು ಮರೆತುಬಿಡಿ ಎಂದಷ್ಟೇ ಹೇಳಿದರೆ ಸಾಕು”

ರಾಜೇಶ ಏನೂ ಮಾತಾಡುವ ಸ್ಥಿತಿಯಲ್ಲಿರಲಿಲ್ಲ. ಸದಾನಂದ ಹೇಳಿರುವ ಮಾತನ್ನು ತಳ್ಳಿಹಾಕಲು ಸಾಧ್ಯವಿರಲಿಲ್ಲ. ಅದಕ್ಕೆ ಪೂರಕವಾಗಿ ಅಪ್ಪನ ವ್ಯವಹಾರಗಳೇನೂ ತನಗೆ ತಿಳಿದಿಲ್ಲ. ಇವರನ್ನು ನೋಡಿದರೆ ಇವರೇನೂ ಮೋಸ ಮಾಡುವವರಂತೆಯೂ ಕಾಣುತಿಲ್ಲ.”

“ನನ್ನ ಅಮ್ಮ ಈಹ ಜೀವಚ್ಛವವಾಗಿದ್ದಾರೆ. ಅವರು ಸಂಪೂರ್ಣವಾಗಿ ಮೊದಲಿನಂತೆ ಆದಾರು ಎಂಬ ಭರವಸೆ ಇಲ್ಲ, ಆದರೂ ಎಲ್ಲರಂತೆ ಓಡಾಡಿಕೊಂಡು ತನ್ನ ಕೆಲಸ ಮಾಡಿಕೊಳ್ಳುವಂತಾದರೆ ಸಾಕು. ಅವರ ಪರಿಸ್ಥಿತಿ ನೋಡಿ ನೋಡಿ ಸಾಕಾಗಿ ಹೋಗಿದೆ. ಊರವರ ಅನುಕಂಪದ ನೋಟ ಎದುರಿಸಿ ಎದುರಿಸಿ ಸಾಕಾಗಿ ಹೋಗಿದೆ. ದಯವಿಟ್ಟು ನನ್ನ ಕೋರಿಕೇನ ಇಲ್ಲ ಅನ್ಬೇಡಿ.  ಏನೇನೋ ಕಷ್ಟಪಟ್ಟು ಹಣ ಹೊಂದಿಸಿದ್ದೇನೆ. ನನಗೆ ನನ್ನ ಅಮ್ಮ ಬೇಕು,.” ಸದಾನಂದ ನೋವೆಲ್ಲ ಧ್ವನಿಯಾಗಿತ್ತು.

ಅವರ ಬೇಡಿಕೆಯನ್ನು ನೋಡಿ ರಾಜೇಶ ಕಸಿವಿಸಿಗೊಂಡ. “ಆಯ್ತು, ನೀವು ಹೇಳಿದ ದಿನ ಖಂಡಿತ ಬರ್ತೀವಿ…”

****

ಸದಾನಂದ ದಂಪತಿ ಹೊರಟುಹೋದ ಅನಂತರ ರಾಜೇಶ ತೀರಾ ಯೋಚನೆಗೆ ಬಿದ್ದ. ನಿಜವಿರಬಹುದೆ? ತೆಗೆದ ಸಾಲವನ್ನು ಮರುಪಾವತಿಸದೆ ಜಾಮೀನು ನಿಂತವರನ್ನೇ ಹೊಣೆಯಾಗಿಸುವಂಥ ಬೇಜವಾಬ್ದಾರಿ ಮನುಷ್ಯರಾಗಿದ್ದರೇ ಅಪ್ಪ? ಏನು ಮಾಡಿರಬಹುದು ಹಣ? ಐಷಾರಾಮಿ ಜೀವನಕ್ಕೆ ಬಳಸಿಕೊಂಡರೆ? ಅಪ್ಪ ಮಕ್ಕಳಿಗೆ  ಯಾವ ವಿಷಯದಲ್ಲೂ ಏನೊಂದೂ ಕಡಿಮೆ ಮಾಡಿದವರಲ್ಲ. ಆ ಕಾಲಕ್ಕೇ ಕಾರು ಕೊಂಡಿದ್ದರು. ಎಲ್ಲಿಗೆ ಹೋಗುವಾಗಲೂ ಕಾರಲ್ಲೇ ಹೋಗುತ್ತಿದ್ದ ನೆನಪು! ಆಗೆಲ್ಲ ಅದರ ನಿರ್ವಹಣೆ, ಖರ್ಚು ವೆಚ್ಚಗಳ ಬಗ್ಗೆಯೂ ಅರಿವಿರಲಿಲ್ಲ. ಅಪ್ಪನಿಗೆ ಬರುವ ಸಂಬಳವೂ ಎಷ್ಟೆಂದು ಗೊತ್ತಿರಲಿಲ್ಲ. ಮಕ್ಕಳು ದೊಡ್ಡವರಾದ ಮೇಲೂ ತಂದೆ ತನ್ನ ಯಾವ ವ್ಯವಹಾರವನ್ನು ಹೇಳಿದವರಲ್ಲ. ನಾವಾದರೂ ಹೇಗೆ ಕೇಳುವುದು? ಖರ್ಚು ವೆಚ್ಚ ಬರೆದಿಡುವ ಅಭ್ಯಾಸವಿರಲಿಲ್ಲ.

ಈ ಎಲ್ಲ ಸೌಕರ್ಯಗಳನ್ನೂ ಅವರು ಸಾಲದ ಹಣದಿಂದಲೇ ಮಾಡಿರಬಹುದೇ? ನಾವು ಅನುಭವಿಸಿದ ಎಲ್ಲ ಸುಖ ಸೌಕರ್ಯ ಈ ಟೀಚರ್ ಜಾಮೀನು ಹಾಕಿದ ಸಾಲದ ಹಣದಿಂದಲೇ ಇರಬಹುದೇ?

ರಾಜೇಶನಿಗೆ ಎಲ್ಲವೂ ಗೊಂದಲ…ಗೊಂದಲ.. ಅಪ್ಪ ಯಾಕೆ ಹೀಗೆ ಮಾಡಿರಬಹುದು? ಒಂದು ವಿಷಯ ತನ್ನಲ್ಲಿ ಹೇಳಿದ್ದರೆ?

ಅವರು ಹೇಳುವುದು ಸಂಪೂರ್ಣ ನಿಜವಿರಬಹುದೆ? ಅವರನ್ನು ಗಮನಿಸಿದರೆ ಅವರು ಸುಳ್ಳು ಹೇಳುವಂಥ ವ್ಯಕ್ತಿಯಂತೆ ಕಾಣಿಸಲಿಲ್ಲ.ಅಪ್ಪ ಮಾಡಿದ ಸಾಲವನ್ನು ತಾನು ತೀರಿಸಬೇಕೆ? ಎಷ್ಟೊಂದು ದೊಡ್ಡ ಮೊತ್ತ! ಛೇ! ಹಾಗಂತ ಅವರೇನೂ ನನ್ನಲ್ಲಿ ಕೇಳಿಲ್ಲವಲ್ಲ.. ಅವರೇ ಕೊಟ್ಟ ಹಣವನ್ನು ಹಿಂತಿರುಗಿಸಿದರಾಯಿತು.. ಸಂಚೇನಾದರೂ ಇರಬಹುದೇ? ಇರಲಾರದು. ತನ್ನ ತಾಯಿಯನ್ನು ಮನೋರೋಗಿ ಎಂದು ಸುಮ್ಮನೇ ಹೇಳಲಾರರು. ಯಾವುದಕ್ಕೂ ಅಲ್ಲಿ ಹೋಗಿ ನೋಡಿದರೆ ಗೊತ್ತಾಗುತ್ತಲ್ಲ ಪರಿಸ್ಥಿತಿ. ಆಮೇಲೆ ಯೋಚಿಸಿದರಾಯಿತೆಂದುಕೊಂಡ.

***

ಗಿರಿಜಮ್ಮ ಮಲಗಿದ್ದ ಕೋಣೆಗೆ ರಾಜೇಶ ನಿಶ್ಯಬ್ದವಾಗಿ ಕಾಲಿಟ್ಟ. ಎದೆ ಧಸಕ್ಕೆನಿಸಿತು. ಕೆದರಿದ ಕುದಲುಗಳು, ಶೂನ್ಯದತ್ತ ನೆಟ್ಟ ದೃಷ್ಟಿ. ಮೈಮೇಲೆ ಎಚ್ಚರವಿಲ್ಲದ ಸ್ಥಿತಿ. ರಾಜೇಶನ ಕರುಳು ಕಿತ್ತು ಬರುವಂತಾಯಿತು. ಇವರ ಈ ಸ್ಥಿತಿಗೆ ತನ್ನ ತಂದೆ ಕಾರಣರೇ? ನನ್ನ ಅಮ್ಮನಿಗೆ ಇಂಥ ಸ್ಥಿತಿ ಬಂದಿರುತ್ತಿದ್ದರೇ? ರಾಜೇಶ ನಖಶಿಖಾಂತ ಕಂಪಿಸಿದ.

“ಅಮ್ಮ…” ಮೆಲ್ಲಗೆ ಕರೆದ.

ಅವರು ನಿಧಾನವಾಗಿ ಅವನತ್ತ ತಿರುಗಿದರು. ಕಣ್ಣುಗಳಲ್ಲಿ ಪ್ರಶ್ನಾರ್ಥಕ ಚಿಹ್ನೆ.

“ನಾನು ಸಂಜೀವ ಮಾಸ್ತರರ ಮಗ… ರಾಜೇಶ”

ಅವರ ಕಣ್ಣುಗಳೊಮ್ಮೆ ಕೆಂಡದುಂಡೆಗಳಂತಾಗಿ ಮತ್ತೆ ಕಳಾಹೀನವಾದವು.

“ಅವರು…ಅವರು.. ನನ್ನ ದುಡಿತದ ಹಣವನ್ನೆಲ್ಲ ಹಾಳುಮಾಡಿಬಿಟ್ರು… ಈಗ ನೋಡು ನನ್ನ ಜೀವನವೇ ಹಾಳಾಗಿ ಹೋಯ್ತು..” ಎನ್ನುತ್ತಾ ಬಿಕ್ಕಿ ಬಿಕ್ಕಿ ಅತ್ತರು.

“ಅಮ್ಮ ಇಲ್ನೋಡಿ. ಅಳ್ಬೇಡಿ. ನಮ್ ತಂದೆ ಮಾಡಿದ ಸಾಲದ ಹಣವನ್ನು ನಾನು ನಿಮಗೆ ಹಿಂತಿರುಗಿಸ್ತಾ ಇದ್ದೇನೆ. ದಯವಿಟ್ಟು ನಮ್ಮಪ್ಪನ್ನ ಕ್ಷಮಿಸಿಬಿಡಿ..” ಎನ್ನುತ್ತಾ ಹಣವನ್ನು ಅವರ ಪಾದದ ಬಳಿ ಇಟ್ಟುಬಿಟ್ಟ.

ಗಿರಿಜಮ್ಮ ತದೇಕಚಿತ್ತದಿಂದ ಆ ಹಣದ ಕಟ್ಟನ್ನೇ ನೋಡುತ್ತಾ ನಿಂತರು.

“ಅಮ್ಮ ದಯವಿಟ್ಟು ತೆಗೆದುಕೊಳ್ಳಿ. ಸಂಜೀವ ಮಾಸ್ತರ್ ಸಾಲ ತೆಗೆದ ಹಣ ನಾನು ನಿಮಗೆ ಹಿಂತಿರುಗಿಸ್ತಾ ಇದ್ದೇನೆ.”

ತತ್ ಕ್ಷಣ ಗಿರಿಜಮ್ಮ ಅವನ ಬಳಿ ಬಂದು ಕೈಹಿಡಿದು, “ತುಂಬಾ ಉಪಕಾರ ಮಾಡಿದಿ ಕಣೋ…ಅಪ್ಪ ಮಾಡಿದ ಸಾಲ ನೀನಾದ್ರೂ ತೀರಿಸಿದಿಯಲ್ಲ.. ನೀನು ನೂರ್ಕಾಲ ಆನಂದವಾಗಿ ಬಾಳು ಕಂದ..” ಎಂದು ಕಣ್ಣೀರಿಟ್ಟರು. ರಾಜೇಶ ಮೂಕನಾಗಿ ನಿಂತುಬಿಟ್ಟ.

ಕೋಣೆಯಿಂದ ಹೊರಬಂದಾಗ ಅವನನ್ನೇ ಕಾದು ಕುಳಿತಂತಿದ್ದ ಸದಾನಂದ ಮತ್ತು ವಿಮಲಾರನ್ನು ಎದುರಿಸುವುದೇ ಅಸಾಧ್ಯವೆನಿಸಿತು. ಆ ಹಣ ಮಾಡಲು ಎಷ್ಟು ಕಷ್ಟಪಟ್ಟರೋ.. ನನ್ನ ತಂದೆ ಮಾಡಿದ ಪಾಪದ ಕೆಲಸಕ್ಕೆ ಎಷ್ಟೊಂದು ಜೀವಗಳು ನರಳುತ್ತಿವೆ. ರಾಜೇಶ ಅಲ್ಲೇ ಕುಸಿದು ಕುಳಿತ. ..

“ಇನ್ನು ನನಗೆ ಚಿಂತೆಯಿಲ್ಲ ರಾಜೇಶ್. ಅಮ್ಮ ಇನ್ನು ಕೆಲವೇ ದಿನಗಳಲ್ಲಿ ಮೊದಲಿನಂತಾದಾರು.ಅಮ್ಮನಿಗಾಗಿ ನಾವು ಪಡಬಾರದ ಕಷ್ಟವನ್ನೆಲ್ಲಾ ಅನುಭವಿಸಿದೆವು. ಸ್ವಲ್ಪ ಜಾಗ ಇತ್ತು. ಮಾರಿಬಿಟ್ಟೆ. ಒಳ್ಳೆ ಬೆಲೇನೆ ಸಿಕ್ತು. ಬಂಗಾರದಂಥ ಜಾಗ. ಆದ್ರೆ ಅಮ್ಮನಿಗಿಂತ ಮಿಗಿಲಲ್ಲ ಅಲ್ವಾ? ಜಾಗ ಯಾವಾಗ ಬೇಕ್ರಿದ್ರೂ ಮಾಡಿಕೊಳ್ಳಬಹುದು..ಆದರೆ ಅಮ್ಮ? ಮತ್ತೆ ಸಿಗ್ತಾರಾ?? ಹಾಂ..! ಅಂದ ಹಾಗೆ ನೀವೇನೂ ಇದಕ್ಕೆ ಪಶ್ಚಾತ್ತಾಪ ಪಡಬೇಕಾಗಿಲ್ಲ.ನಿಮ್ಮಪ್ಪ ವ್ಯವಹಾರ ಹೇಳದಿದ್ರೆ ನೀವಾದರೂ ಏನು ಮಾಡಲು ಸಾಧ್ಯ? ಒಟ್ಟಿನಲ್ಲಿ ನಮ್ಮ ಭಾಗ್ಯ ಇಷ್ಟೆ….”

ರಾಜೇಶನಿಗೆ ಏನೊಂದೂ ಉತ್ತರಿಸಲು ಸಾಧ್ಯವಾಗಲಿಲ್ಲ. ಈ ಕಾಲದಲ್ಲಿ ಜನರು ಏನೆಲ್ಲ ಹೇಳೀ ಮೋಸ ಮಾಡ್ತಾರೆ…ಆದ್ರೆ ಇವರಂಥವರೂ ಇದ್ದಾರಲ್ಲ.. ಅವರೆದುರು ತಲೆ ಎತ್ತಲೇ ನಾಚಿಕೆಯೆನಿಸಿತು.

“ಬಹಳ ದೂರದಿಂದ ಬಂದಿದ್ದೀರಿ. ಊಟ ಮಾಡಿ ಹೋಗಿ…” ಅಲ್ಲಿಂದ ಹೊರಡುವಾಗ ರಾಜೇಶನ ಮನಸ್ಸೆಲ್ಲ ಭಾರ..ಭಾರ.. ಹೆಜ್ಜೆಯನ್ನೆಳೆದುಕೊಂಡೇ ಊರಿಗೆ ಮುಖಮಾಡಿದ.

***

ರಾಜೇಶ ಹಾಗೂ ಶರ್ಮಿಳಾ ಸದಾನಂದನ ಮನೆಗೆ ಕಾಲಿಟ್ಟಾಗ ಅಲ್ಲಿಯ ದೃಶ್ಯ ಕಂಡು ಬೆರಗಾದರು. ಗಿರಿಜಮ್ಮ ಸಾಕ್ಷಾತ್ ದೇವತೆಯಂತೆ ಕಂಗೊಳಿಸುತ್ತಿದ್ದರು. ಶಾಂತಿ, ತೃಪ್ತಿ, ಸಂತೋಷ ಅಲ್ಲಿ ಮನೆ ಮಾಡಿತ್ತು. ರಾಜೇಶನನ್ನು ಕಂಡ ಗಿರಿಜಮ್ಮ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ “ಬಾಪ್ಪಾ…ಬಾ…ಬಾ… ಒಳ್ಳೇ ಸಮಯಕ್ಕೆ ಬಂದೆ ನೀನು..ನಿನ್ನಿಂದಾಗಿ ನಮ್ಮ ಭವಿಷ್ಯವೇ ಬದಲಾಯಿತು ಕಣಪ್ಪ. ದೇವರು ನಿನ್ನ ನೂರು ವರ್ಷ ಸುಖವಾಗಿಟ್ಟರಲಿ.” ಎಂದು ಹರಸಿದರು.

“ನೀವೆಲ್ಲ ದೂರ ಹೊರಟಿರುವಿರಿ?”

“ನಾವೆಲ್ಲ ದೇವಸ್ಥಾನಕ್ಕೆ ಹೊರಟಿದೀವಿ, ನೀವೂ ಬನ್ನಿ..”

“ನೀವು ಮುಂದೆ ಹೋಗಿ. ನಾವು ಸದಾನಂದನ ಜೊತೆ ಬರ್ತೀವಿ.”

“ಆಗ್ಲಿ , ನೀವು ನಿಧಾನಕ್ಕೆ ಬನ್ನಿ. ನಾನು ಮುಂದೆ ಹೋಗ್ತೀನಿ” ಎನ್ನುತ್ತಾ ಗಿರಿಜಮ್ಮ ಹೊರಟುಹೋದರು.

“ಸದಾನಂದ್, ನಿಮ್ಮಂಥ ವ್ಯಕ್ತಿಗಳಿಗೂ ಅಪ್ಪ ಯಾಕೆ ಹೀಗೆ ಮಾಡಿದರೋ ಗೊತ್ತಿಲ್ಲ. ಅವರ ಕಷ್ಟಗಳೇನಿತ್ತೋ ಅದೂ ಗೊತ್ತಿಲ್ಲ. ಆದ್ರೆ ಅವರ ಮಗನಾಗಿ ನಾನು ನಿಮ್ಮ ಋಣ ಸಂದಾಯ ಮಾಡದಿದ್ರೆ ಯಾವ ನರಕಕ್ಕೆ ಹೋಗ್ತೀನೋ.. ಆದ್ದರಿಂದ ದಯವಿಟ್ಟು ಇದನ್ನು ತೆಗೆದುಕೊಳ್ಳಿ.” ಎನ್ನುತ್ತಾ ಹಣದ ಕಟ್ಟೊಂದನ್ನು ಸದಾನಂದನ ಕೈಗಿತ್ತು “ದಯಮಾಡಿ ಸ್ವೀಕರಿಸಿ ನನ್ನನ್ನು ಋಣಮುಕ್ತನನ್ನಾಗಿ ಮಾಡಿ” ಎಂದು ಕಂಬನಿಯಾದ….

ಸದಾನಂದ ಅವನನ್ನು ಬಿಗಿದಪ್ಪಿದ… ಇಬ್ಬರ ಕಂಗಳಲ್ಲೂ ಆನಂದದ ಬಾಷ್ಪ…..

ತೆಂಕಬೈಲು ಸೂರ್ಯನಾರಾಯಣ

Photo by built4love.hain

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!