ಪ್ರಚಲಿತ

ಶಕ್ತಿಶಾಲಿ ಭಾರತದ ಕಲ್ಪನೆ ಮತ್ತು ಸಾಕಾರ

 ಇಂದು ಯುವಜನಾಂಗ ಸ್ವಾತಂತ್ರ್ಯವನ್ನು ಸ್ವೇಚ್ಚೆಯಾಗಿಸಿಕೊಳ್ಳವ ಭಯ ಹೆತ್ತ ತಾಯ್ತಂದೆಯರನ್ನು ಕಾಡುತ್ತಿರುವ ಕಾಲಘಟ್ಟದಲ್ಲಿ ವಿವೇಕಾನಂದರ ಸಂದೇಶಗಳು ಯುವಕರನ್ನು ಮತ್ತೆ ಆಧ್ಯಾತ್ಮದೆಡೆಗೆ ಸ್ವದೇಶಾಬಿಮಾನದ ಕಡೆಗೆ ಕರೆದೊಯ್ಯಬೇಕಿದೆ. ಈ ನಿಟ್ಟಿನಲ್ಲಿ ಅವರ ರಾಷ್ಟ್ರೀಯ ಚಿಂತನೆಗಳನ್ನು ನಾವು ಮನದಟ್ಟು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಜಾಗತಿಕರಣದ ಕಿಡಿ ಮತ್ತೆ ಜ್ವಾಲೆಯಾಗಿ ನಮ್ಮನ್ನು ಸಂಪೂರ್ಣ ಹಾಸ್ಯಕ್ಕೆ ಗುರಿ ಮಾಡುವ ಎಲ್ಲಾ ಸಾಧ್ಯತೆಗಳ ನಡುವೆಯೂ ನಾವು ಭಾರತೀಯರೆಂಬ ಹೆಮ್ಮೆ ನಮ್ಮ ಮನದಲ್ಲಿ ಅಚ್ಚಳಿಯದೇ ಉಳಿಯುವಂತೆ ಮಾಡಲು ನಾವು ಮತ್ತೆ ವಿವೇಕಾನಂದರಿಗೆ ಮೊರೆ ಹೋಗಬೇಕಾಗಿದೆ. ಅವರೇ ಹಂಬಲಿಸಿದಂತೆ ಮತ್ತೊಮ್ಮೆ ವಿವೇಕಾನಂದ ಹುಟ್ಟಿ ಬರುತ್ತಾನೋ ಇಲ್ಲವೊ! ಆದರೆ ನಮ್ಮ ವ್ಯಾಪ್ತಿ ಮಿತಿಯಲ್ಲಿ ಆತ್ಮವಿಶ್ವಾಸಕ್ಕೆ ಆತ್ಮಗೌರವಕ್ಕೆ ಸದಾ ಉದಾಹರಣೆಯಾಗಿ ನಿಲ್ಲುವ ಸ್ವಾಮೀ ವಿವೇಕಾನಂದರ ಸ್ಪೂರ್ತಿದಾಯಕ ಮಾತುಗಳಿವೆ. ಅವರ ಕೃತಿಗಳ ಮೂಲಕ ಅವರ ಮಾತುಗಳೆಲ್ಲವೂ ದಾಖಲಾಗಿದೆ. ಅವರ ಮಾತುಗಳು ಚಿಂತನೆಗಳು ಮತ್ತೆ ನಮಗೆ ದಾರಿ ದೀಪವಾಗಲಿ. ಸ್ವಾತಂತ್ರ್ಯ ಪೂರ್ವದಲ್ಲಿ ಅವರು ಹಚ್ಚಿದಂತಹಾ ರಾಷ್ಟ್ರಪ್ರೇಮದ ಬೆಳಕು ಮತ್ತೆ ನಮ್ಮೆಲ್ಲರ ಎದೆಗಳಲ್ಲಿ ತುಂಬಲಿ. ಮುಂದಿನ ಪೀಳಿಗೆ ತಾಯಿ ಭಾರತಿಯ ಹಿರಿಮೆಯನ್ನು ಎತ್ತಿ ಹಿಡಿಯುವಂತಾಗಲಿ. ಅವರ ಪ್ರಯತ್ನಗಳಲ್ಲಿ ಸ್ವಾಮಿ ವಿವೇಕಾನಂದರ ಆಶೀರ್ವಾದವಿರಲಿ. ನಾವು ಭಾರತೀಯರೆಂಬ ಹೆಮ್ಮೆ ಸದಾ ನಮ್ಮ ಹೃದಯದಲ್ಲಿ ಮಿನುಗುತ್ತಿರಲಿ.
ಶಕ್ತಿಶಾಲಿ ಭಾರತದ ಕಲ್ಪನೆ:
ಭಾರತ ಸಂಸ್ಕøತಿ ಸಂಸ್ಕಾರಗಳ ಮೇಲೆ ನಂಬಿಕೆಯಿರಿಸಿಕೊಂಡು ಅದರ ಆಧಾರದ ಮೇಲೆ ಬಾಳುತ್ತಿರುವ ವಿಶ್ವದ ಏಕೈಕ ರಾಷ್ಟ್ರ. ಇಲ್ಲಿನ ವ್ಯಕ್ತಿಗಳ ರಾಷ್ಟ್ರ ಜೀವನದ ಬಗ್ಗೆ ಅಧ್ಯಯನ ಮಾಡಿದರೆ ಇಲ್ಲಿನ ರಾಷ್ಟ್ರದ ಅಂತಃಸತ್ವ, ಸ್ವಾಭಿಮಾನ ಹಾಗೂ ಸಾಕಾರತೆಯ ಸರ್ವಸ್ವತೆ ಜಗಜ್ಜಾಹೀರಾಗುತ್ತದೆ. ಶಕ್ತಿ ಎಂಬ ಪದವನ್ನು ಕೇವಲ ಬಲದ ಮುಖಾಂತರ ಅಳೆಯದೇ ಸಾಮಥ್ರ್ಯದೊಂದಿಗೆ ತಳುಕುಹಾಕದೆ ದೈಹಿಕತೆಯೊಂದಿಗೆ ತೂಕ ಮಾಡದೆ ಮನಸ್ಸು ಹಾಗೂ ದೇಹದ ನಿಗ್ರಹಣೆಯನ್ನೇ ಶಕ್ತಿ ಎಂದು ನಂಬಿದ ರಾಷ್ಟ್ರ ಭಾರತ. ಶಕ್ತಿ ಶಾಲಿ ಭಾತರದ ಕಲ್ಪನೆ ತುಂಬಾ ಸುಂದರ. ಮೊದಲೇ ಹೇಳಿದಂತೆ ಅತಿ ರಂಜಿತ ತಥಾ ಕಥಿತ ರೂಪು ರೇಷೆಗಳ ಲೇಪನವಿಲ್ಲದೆ ಕೃತಿ ಚಿಂತನೆಗಳಲ್ಲಿ ಲೋಪವಿಲ್ಲದೆ, ಅರ್ಥಗರ್ಭಿತವಾಗಿ ಹಾಗೂ ತುಂಬಾ ಸರಳವಾಗಿ ಮಂಡಿಸಬಹುದಾದ ಚಿಂತನೆ.
ಪರರ ಮೇಲಿನ ದಾಳಿ ಆಕ್ರಮಣಗಳಿಂದ ಶಕ್ತಿವಂತರಾಗಬಹುದು ಎಂಬ ಒಣ ನಂಬಿಕೆಯನ್ನು ಸುಟ್ಟು ಬೂದಿ ಮಾಡಿದ ನಮ್ಮ ಪುರಾಣ ಇತಿಹಾಸಗಳು ಜೊತೆ ಜೊತೆಗೆ ಭಾರತೀಯರ ಮನದಂಗಳಲ್ಲಿ ಸಾಮರಸ್ಯದ ವಿವಿಧ ಸಸಿಗಳನ್ನು ನೆಟ್ಟವು ಅದರ ಮುಂದುವರಿದ ಪ್ರಕ್ರಿಯೆಯೇ ಶಕ್ತಿಶಾಲಿ ಭಾರತದ ಕಲ್ಪನೆ ಶಕ್ತಿ ಎಂಬುದು ಇಚ್ಚೆಗೆ ಬಿಟ್ಟ ವಿಷಯವಾಗಿದ್ದು ಇದನ್ನು ಮನಸ್ಸು ತನ್ನ ಸುಪರ್ದಿಗೆ ತೆಗೆದುಕೊಂಡ ತಕ್ಷಣವೇ ಒಬ್ಬ ವ್ಯಕ್ತಿ ಧೀಮಂತನಾಗಬಲ್ಲ, ನಾಯಕನಾಗಿ ಮೆರೆಯಬಲ್ಲ, ಯೋಗಿಯಾಗಿ ಮರೆಯಾಗಬಲ್ಲ. ಶಕ್ತಿ ಎಂಬುದು ಜ್ಞಾನದ ಸಂಕೇತ. ಸಾಮರಸ್ಯದ ಪ್ರತೀಕ ದೌರ್ಬಲ್ಯಗಳ ಹಿಮ್ಮೆಟ್ಟಿಸುವುದೇ ಶಕ್ತಿ. ಮಾನವನು ಯಾವಾಗ ತನ್ನಲ್ಲಿ ತಾನು ಸಂಪೂರ್ಣ ನಂಬಿಕೆಯನ್ನು ಇಟ್ಟುಕೊಳ್ಳತ್ತಾನೋ ಅವತ್ತಿನಿಂದಲೇ ಅವನು ಪರಿಪೂರ್ಣತೆಯ ಮೊದಲ ಮೆಟ್ಟಿಲು ಏರುತ್ತಾನೆ. ಅಂತಹ ಮಾನವನ ಸಮಾಜಮುಖಿ ಚಿಂತನೆಗಳು ಆರೋಗ್ಯಕರ ಸಮಾಜವನ್ನು ನಿರ್ಮಿಸುತ್ತವೆ. ಇಂತಹ ಹಲವಾರು ಪ್ರಕ್ರಿಯೆಯ ಸಂಮಿಶ್ರಣವೇ ಶಕ್ತಿಶಾಲಿ ಭಾರತ.
ಭರತಖಂಡದ ಅವನತಿಗೆ ಕಾರಣ ಅನ್ಯರಾಷ್ಟ್ರಗಳೊಂದಿಗೆ ಸಂಬಂಧ ಕಳೆದುಕೊಂಡುದು. ಹೊರದೇಶದವರು ಹೇಗಿದ್ದಾರೆ? ಎಂತಿದ್ದಾರೆ? ಅವರ ಅಭಿವೃದ್ಧಿಯ ಪಥ ಎಂತದ್ದು ಎಂಬ ಯಾವುದನ್ನೋ ನಾವು ಗಣನೆಗೇ ತೆಗೆದುಕೊಳ್ಳಲಿಲ್ಲ. ನಾವಾಯಿತು ನಮ್ಮ ಪ್ರಪಂಚವಾಯಿತು ಎಂದು ನಮ್ಮನಮ್ಮೊಳಗೇ ಅವಿತುಕುಳಿತು ಕೂಪಮಂಡೂಕಗಳಾದೆವೇ ವಿನಾಃ ನಮ್ಮದ್ದಾದ ಆಧ್ಯಾತ್ಮಿಕ ಅಂತಃಸತ್ವವನ್ನು ಹೊರಜಗತ್ತಿಗೇನು, ನಮ್ಮ ದೇಶದವರೇ ಆದ ದೀನದಲಿತರಿಗಾಗಲಿ, ಮಹಿಳೆಯರಿಗಾಗಲಿ,ಕೊಡಲಿಲ್ಲ. ಸ್ತ್ರೀಯರನ್ನು ಇನ್ನಿಲ್ಲದಂತೆ ಕಡೆಗಣಿಸಿರುವುದು ದೇಶದ ಅಧಃಪತನಕ್ಕೆ ಕಾರಣ ಎಂಬುದರ ಕುರಿತು ಭಾರತೀಯರಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನಮಾಡಿಕೊಳ್ಳುತ್ತಾರೆ ಸ್ವಾಮೀ ವಿವೇಕಾನಂದರು.
ಪ್ರಾಚೀನ ಸಂಶೋಧನಾ ಕಾರ್ಯದಲ್ಲಿ ತೊಡಗುವ ಕುರಿತು ಐರೋಪ್ಯರ ಮಾದರಿಯನ್ನು ಅನುಸರಿಸಬೇಕು. ಆದರೆ ಅನ್ವೇಷಣೆ ಮಾತ್ರ ಸ್ವತಂತ್ರವಾಗಿರಬೇಕು. ವೇದಗಳನ್ನು, ಪುರಾಣಗಳನ್ನು ಹಾಗೂ ಪ್ರಾಚೀನ ಐತಿಹಾಸಿಕ ದಾಖಲೆಗಳನ್ನು ಅಧ್ಯಯನ ಮಾಡಬೇಕು. ಆ ಮೂಲಕ ಸಹಾನುಭೂತಿ ಪೂರ್ವಕವಾದ, ಸ್ಫೂರ್ತಿದಾಯಕವಾದ ಮತ್ತು ವಸ್ತುನಿಷ್ಠವಾದ ಇತಿಹಾಸವನ್ನು ಬರೆಯಬೇಕು. ಭಾರತದ ಇತಿಹಾಸವನ್ನು ಬರೆಯಬೇಕಾದವರು ಭಾರತೀಯರೇ ವಿನಾ ವಿದೇಶಿಯರಲ್ಲ. ಕಾಲಗರ್ಭದಲ್ಲಿ ಕಣ್ಮರೆಯಾಗಿ ಹೋಗಿರುವ ನಮ್ಮ ದೇಶದ ಅಮೂಲ್ಯ ಸಂಪತ್ತನ್ನು ಹುಡುಕಿ ಹೊರತೆಗೆಯುವ ಕಾರ್ಯದಲ್ಲಿ ಯುವಕರು ಕಂಕಣಬಧ್ಧರಾಗಬೇಕು. ಪ್ರಾಚೀನ ಭಾರತದ ವೈಭವವನ್ನು ಜನಮನದಲ್ಲಿ ಪುನರ್‍ಸ್ಥಾಪನೆ ಮಾಡಬೇಕು. ಅಲ್ಲಿಯವರೆಗೆ ವಿಶ್ರಾಂತರಾಗಕೂಡದು ನಿಜವಾದ ರಾಷ್ಟ್ರೀಯ ಶಿಕ್ಷಣವೆಂದರೆ ಇದು. ಇಂತಹ ರಾಷ್ಟ್ರೀಯ ಶಿಕ್ಷಣದ ಪ್ರಗತಿಯೊಂದಿಗೆ ನಿಜವಾದ ರಾಷ್ಟ್ರಪ್ರಜ್ಞೆಯೂ ಜಾಗೃತವಾಗುತ್ತದೆ. ಭಾರತದಲ್ಲಿನ ತಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಅವು ಗುರಿಸೇರುವವರೆಗೂ ನಿಲ್ಲುವಂತಾಗಬಾರದು ಎಂಬುದು ನರೇಂದ್ರರ ಆಶಯವಾಗಿತ್ತು ಹಾಗಾಗಿಯೇ ಅವರ ಆದೇಶಗಳು ಮೃದುವಾಗಿರಲಿಲ್ಲ ಕಠಿಣವಾಗೇ ಇದ್ದವು. ಅವರ ದೃಷ್ಟಿಯಲ್ಲಿ ಭಾರತದ ಪುನರುದ್ಧಾರಕ್ಕೆ ಅರೆಬರೆ ತ್ಯಾಗವೆಲ್ಲ ಸಾಕಾಗಲಾರದು.

ಭಾರತದ ಪುನರುತ್ಥಾನವಾಗಬೇಕಾದರೆ ನಾವು ಬಡವರಿಗಾಗಿ ದುಡಿಯಲೇಬೇಕು. ಜನಸಮೂಹ ಸರಿಯಾಗಿ ಆಹಾರವನ್ನು ಒಳ್ಳೆಯ ವಿದ್ಯಾಭ್ಯಾಸವನ್ನು ಸರಿಯಾದ ಆರೈಕೆಯನ್ನು ಪಡೆಯುವವರೆಗೂ ಯಾವುದೇ ಬಗೆಯ ರಾಜಕೀಯವೂ ವ್ಯರ್ಥವಾಗುತ್ತದೆ. ನಮ್ಮ ದೇಶದ ದೊಡ್ಡ ಪಾಪವೇ ಜನಸಾಮಾನ್ಯರನ್ನು ನಿರ್ಲಕ್ಷಿಸಿದ್ದು. ಅದೇ ನಮ್ಮ ಅವನತಿಗೆ ಕಾರಣ . ಭರತ ಖಂಡದಲ್ಲಿ ಜನಸಾಮಾನ್ಯರಿಗೆ ಪುನಃ ಒಳ್ಳೆಯ ಶಿಕ್ಷಣ ಕೊಟ್ಟು , ಹೊಟ್ಟೆ ತುಂಬಾ ಅನ್ನವಿಟ್ಟು ಚೆನ್ನಾಗಿ ಕಾಪಾಡುವವರೆಗೆ ಎಂತಹ ರಾಜಕೀಯ ಚಳುವಳಿಯಿಂದಲೂ ಪ್ರಯೋಜನವಿಲ್ಲ.
ಸಾಕಾರ ಹೇಗೆ?
“ ಭವಿಷ್ಯದ ಭರತಖಂಡದ ನಿರ್ಮಾಣಕ್ಕೆ ನಾವು ಪ್ರಥಮದಲ್ಲಿ ಮಾಡಬೇಕಾದುದೇ ಧಾರ್ಮಿಕ ಭಾವನೆಯನ್ನು ಒಂದುಗೂಡಿಸುವುದು. ಹಿಂದೂಗಳೆಲ್ಲ ಕೆಲವು ಸಾಮಾನ್ಯ ಭಾವನೆಗಳನ್ನು ಇವೆ ಎಂಬುದನ್ನು ಎಲ್ಲರಿಗೂ ಪ್ರಚಾರ ಮಾಡಬೇಕಾಗಿದೆ. ನಮ್ಮ ಆತ್ಮೋದ್ಧಾರಕ್ಕಾಗಿ ನಮ್ಮ ನಮ್ಮಲ್ಲೇ ಕಾದಾಡುವುದನ್ನು ನಾವು ಮರೆಯಬೇಕಾದ ಕಾಲಬಂದಿದೆ. ಭರತಖಂಡದ ಏಕತೆ ಎಂದರೆ ಚದುರಿ ಹೋಗಿರುವ ಆಧ್ಯಾತ್ಮಿಕ ಶಕ್ತಿಯನ್ನು ಸಂಗ್ರಹಿಸುವುದಾಗಿದೆ. ಭರತಖಂಡದಲ್ಲಿ ಜನಾಂಗವೆಂದರೆ ಒಂದೇ ಆದರ್ಶಕ್ಕೆ ಹೃದಯ ಸ್ಪಂಧಿಸುತ್ತಿರುವ ವ್ಯಕ್ತಿಗಳ ಏಕತೆ. ಪ್ರತಿಯೊಂದು ಪ್ರಗತಿಕಾರ್ಯದ ಮೊದಲು ಧಾರ್ಮಿಕ ಪುನರುತ್ಥಾನ ಭಾರತದಲ್ಲಿ ಅವಶ್ಯಕ. ಭಾರತವನ್ನು ಸಮಾಜವಾದಿ ಅಥವಾ ರಾಜಕೀಯ ಭಾವನೆಗಳ ಪ್ರವಾಹದಿಂದ ತುಂಬುವ ಮೊದಲು ಆಧ್ಯಾತ್ಮಿಕ ಬಾವನೆಗಳ ಮಹಾಪೂರದಿಂದ ತುಂಬಲಿ.”
ಶತಶತಮಾನಗಳ ಕಾಲ ಕಳೆದ ದಾಸ್ಯದ ಸಂಕೋಲೆಯ ಬಂಧಿಯಿಂದ ಹೊರಬಂದ ಭಾರತವು ಅಕ್ಷರಶಃ ನಂತರವೂ ಕಂಡಿರುವುದು ಕೇವಲ ಪರಸ್ಪರರ ಮೇಲಿನ ಕೆಸರೆರಚಾಟದ ಹೊರತು ಮತ್ತೇನಲ್ಲ. ಒಣಪ್ರತಿಷ್ಠೆಯ ಸುಂಕವಿಲ್ಲದ ಬಿಗುಮಾನಗಳನ್ನು ಬದಿಗಿಟ್ಟು ಆದರತೆ ಹಾಗೂ ಆತ್ಮೀಯತೆಗಳ ನೆಲೆಯಡಿಯಲ್ಲಿ ವ್ಯಕ್ತಿ-ವ್ಯಕ್ತಿಗಳು ಒಂದಾಗಬೇಕಾಗಿದ್ದಾರೆ. ಬ್ರಿಟೀಷರಿಂದ ಬಳುವಳಿಯಾಗಿ ಪಡೆದಂತಹ ಭೋಗ ಲಾಲಸೆಗಳನ್ನು ಸಾಕಿ ಸಲಹದೇ ನಮ್ಮದೇ ಮಣ್ಣಿನ ಗುಣಗಳಾದ ತ್ಯಾಗ ಸೇವೆಗಳನ್ನು ಮತ್ತೊಮ್ಮೆ ಪಟ್ಟಾಭಿಷೇಕ ಮಾಡಿದಲ್ಲಿ ಭಾರತವು ಶಕ್ತಿಶಾಲಿಯಾಗಿ ಹೊಮ್ಮುವುದರಲ್ಲಿ ಸಂಶಯವಿಲ್ಲ.

Gowthami Manasa

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!