Featured ಪ್ರಚಲಿತ

ಕಮಲ್ ಹಾಸನ್ ಆವತ್ತು ಹಾಗೆ ಹೇಳಿದ್ದು ಸುಮ್ಮನೇ ಅಲ್ಲ!

2013ರ ವರ್ಷಾರಂಭದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಟ ಕಮಲ್ ಹಾಸನ್ ತಮ್ಮ ಬಹು ನಿರೀಕ್ಷಿತ ವಿಶ್ವರೂಪಂ ಚಿತ್ರವನ್ನು ತೆರೆಗೆ ತರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಸೆನ್ಸಾರ್ ಬೋರ್ಡಿನಿಂದ ಕ್ಲಿಯರೆನ್ಸ್ ಪಡೆದುಕೊಂಡಿದ್ದ ಚಿತ್ರ ಬಿಡುಗಡೆಗೆ  ಇನ್ನೇನು ಎರಡು ಮೂರು ದಿನಗಳಿದ್ದಂತೆ ಕೋರ್ಟಿನಿಂದ ನಿಷೇಧಕ್ಕೊಳಗಾಯ್ತು. ಕಾರಣ ಏನೆಂದರೆ ಮುಸ್ಲಿಂ ಪಾತ್ರಧಾರಿಯೊಬ್ಬನನ್ನು ಭಯೋತ್ಪಾದಕನನ್ನಾಗಿ ಬಿಂಬಿಸಲಾಗಿದೆ ಅಂತ ಕೆಲವು ಮುಸ್ಲಿಂ ಸಂಘಟನೆಗಳು ಚಿತ್ರವನ್ನು ಬ್ಯಾನ್ ಮಾಡುವಂತೆ ತಮಿಳುನಾಡು ಸರಕಾರವನ್ನು ಒತ್ತಾಯಿಸಿದ್ದರು. ಅದಕ್ಕೂ ಮೊದಲು ನೂರಾರು ಕೋಟಿ ಹಾಕಿ ಮಾಡಿದ ಚಿತ್ರ ಟೈಟಲ್ ವಿವಾದಕ್ಕೊಳಗಾಗಿತ್ತು. ಡಿಟಿಎಚ್’ನಲ್ಲಿ ಮನೆಯಲ್ಲೇ ಕುಳಿತು ಚಿತ್ರ ವೀಕ್ಷಿಸುವ ಕಮಲ್ ಹಾಸನ್ ಅವರ ಹೊಸ ಪರಿಕಲ್ಪನೆಯೂ ವಿವಾದಕ್ಕೊಳಗಾಗಿತ್ತು. ಅದನ್ನೆಲ್ಲಾ  ಹೇಗೋ ನಿವಾರಿಸಿಕೊಂಡ ಕಮಲ್’ಗೆ ಮೂರನೆಯದ್ದು ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿತ್ತು. ಅದು ಆ ಚಿತ್ರದ ಅಳಿವು ಉಳಿವಿನ ಪ್ರಶ್ನೆಯೂ ಆಗಿತ್ತು. ಸಣ್ಣ ಪುಟ್ಟ ದೃಶ್ಯಗಳಿಗೆಲ್ಲಾ ಮುಸ್ಲಿಂ ಸಂಘಟನೆಗಳು ಕಮಲ್’ರನ್ನು ತೀವ್ರವಾಗಿ ಕಾಡತೊಡಗಿದವು.  ಇದೆಲ್ಲದರಿಂದ ಬೇಸತ್ತು ಹೋದ ಕಮಲ್  ಹಾಸನ್ ಒಂದು ಹಂತದಲ್ಲಿ “ಇದನ್ನೆಲ್ಲಾ ನೋಡುವಾಗ ನನಗೆ ಭಾರತವನ್ನೇ ಬಿಟ್ಟು ಹೋಗಬೇಕೆಂದು ಅನಿಸುತ್ತಿದೆ” ಅಂತ ಹೇಳಿಕೆಯನ್ನು ಕೊಟ್ಟಿದ್ದರು.

ಮೊನ್ನೆ ಜನಶ್ರೀ ಚಾನೆಲಿನಲ್ಲಿ ಪ್ರಕಾಶ್ ರೈಯವರು “ಇದೊಳ್ಳೆ ರಾಮಾಯಣ” ಚಿತ್ರದ ಪ್ರೋಮೋ ಇಂಟರ್ವ್ಯೂನಿಂದ ಅರ್ಧಕ್ಕೆ ಎದ್ದು ಹೋಗಿದ್ದು, ತಪ್ಪು ತಮ್ಮದೇ ಆದರೂ ಅದನ್ನು ಪ್ರಕಾಶ್ ರೈಯವರದ್ದೇ ಎಂದು ಬಿಂಬಿಸಿ ಜನಶ್ರೀ ಚಾನೆಲ್’ನವರು ವಿವಾದ ಹುಟ್ಟಿಸಲು ಪ್ರಯತ್ನಿಸಿದ್ದು, ಇವೆಲ್ಲವನ್ನು ನೋಡಿದಾಗ ಅಂದಿನ ಕಮಲ್ ಹಾಸನ್ ಹೇಳಿಕೆ ನೆನಪಿಗೆ ಬಂತು.

ಕಮಲ್ ಹಾಸನ್ ವಿಷಯಕ್ಕೂ ಮುನ್ನ ಮೊನ್ನೆಯ ಘಟನೆಯ ಬಗ್ಗೆ ಮಾತನಾಡೋಣ. ಅದು ಪ್ರಕಾಶ್ ರೈ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ  “ಇದೊಳ್ಳೆ ರಾಮಾಯಣ” ಚಿತ್ರದ ಪ್ರಚಾರಾರ್ಥ ಸಂದರ್ಶನವಾಗಿತ್ತು ಅದು. ಚಿತ್ರದ ಕುರಿತಾದ ಪ್ರಶ್ನೆಗಳನ್ನು ಕೇಳಿದ ಬಳಿಕ, ಆಂಕರ್ ಕಾವೇರಿ ವಿವಾದ ಕುರಿತಾಗಿ “ಕರ್ನಾಟಕ ತಮಿಳುನಾಡಿನ ಮಧ್ಯೆ ಒಂದು ತಿಂಗಳಿನಿಂದ ಕಾವೇರಿ ರಾಮಾಯಣ ನಡೀತಾ ಇದೆ. ನಿಮಗೇನನ್ಸತ್ತೆ, ಸುಪ್ರೀಂ ಕೋರ್ಟ್ ತಪ್ಪಾ? ಹಠ ಮಾಡ್ತಾ ಇರೋದು ಯಾರು ಕರ್ನಾಟಕದವರಾ, ತಮಿಳುನಾಡಿನವರಾ? ಎನ್ನುವ ಎರಡು ಮೂರು ಪ್ರಶ್ನೆಗಳನ್ನು ಒಮ್ಮೆಗೇ ಕೇಳುತ್ತಾರೆ. ಅದಕ್ಕೆ ಪ್ರಕಾಶ್ ರೈ, “ನಟ ನಿರ್ಮಾಪಕ ನಿರ್ದೇಶಕ ಪ್ರಕಾಶ್ ರೈ ಇವತ್ತು ‘ಇದೊಳ್ಳೆ ರಾಮಾಯಣ’ ಚಿತ್ರದ ಬಗ್ಗೆ ಮಾತನಾಡೋದಕ್ಕೆ ಇಲ್ಲಿ ಬಂದಿದ್ದಾನೆ, ಇದರ ಮಧ್ಯೆ ಕಾವೇರಿಯಂತಹ ಗಂಭೀರ ವಿಷಯದ ಬಗ್ಗೆ ಮಾತನಾಡೋದಿಕ್ಕೆ ಇದು ವೇದಿಕೆಯಲ್ಲ, ಈ ಥರದ ಕಾರ್ಯಕ್ರಮಗಳಲ್ಲಿ ಸುಮ್ನೆ ಬಾಯಿಗ್ ಬಂದಂಗೆ ಪ್ರಶ್ನೆ ಕೇಳಿ ನನ್ನನ್ನು ಎಳಿಬೇಡಿ” ಅಂತ ಸಮಾಧಾನದಿಂದಲೇ ನೇರವಾಗಿ  ಉತ್ತರಿಸಿದರು. ಅಷ್ಟಕ್ಕೇ ತೃಪ್ತರಾಗದ ಆಂಕರ್ “ಬಟ್… ನಟನಾಗಿ…. ” ಅಂತ ಮತ್ತೆ ಪ್ರಶ್ನಿಸೋದಕ್ಕೆ ಹೊರಟಾಗ ರೈ ಸಹನೆ ಕಳಕೊಂಡ್ರು.

ಪ್ರಕಾಶ್ ರೈ ಯಾರು? ಅವರ ನಟನೆಯ ಖದರ್ ಎಂತಾದ್ದು? ಅವರಿಗೆಷ್ಟು ಬೇಡಿಕೆಯಿದೆ? ಅಂತ ನಮಗೆಲ್ಲಾ ಚೆನ್ನಾಗಿ ಗೊತ್ತು. ಕನ್ನಡ ನಾಡಿನಲಿ ಹುಟ್ಟಿದವರಾದರೂ, ಇಲ್ಲೇ ಚಿತ್ರರಂಗಕ್ಕೆ ಪರಿಚಿತರಾದವರಾದರೂ, ಅವರು ನೆಲೆ ಕಂಡುಕೊಂಡಿದ್ದು ತಮಿಳುನಾಡಿನಲ್ಲಿ ಮತ್ತು ತನ್ನ ನಟನೆಯ ಬಾಹುಗಳನ್ನು  ಚಾಚಿಕೊಂಡಿದ್ದು ತೆಲುಗು ಮತ್ತು ಹಿಂದಿಯಲ್ಲಿ. ಅವರೊಬ್ಬ ಬಹುಭಾಷಾ ನಟ. ಹೇಳಿ, ಕನ್ನಡ ಮತ್ತು ತಮಿಳು ಸಿನೆಮಾ ಉದ್ಯಮದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವನ ಬಳಿ ಹೋಗಿ “ಹಠ ಹಿಡಿತಾಯಿರೋದು ಯಾರು? ಕನ್ನಡಿಗರಾ ಅಲ್ಲಾ ತಮಿಳರಾ?” ಅಂತ ಆ ಆಂಕರ್ ಕೇಳಿದ್ರಲ್ಲಾ, ತಪ್ಪು ಯಾರದ್ದು ನೀವೇ ಹೇಳಿ?.  ಒಂದು ವೇಳೆ ಹಠ ಹಿಡಿತಿರೋದು ಕನ್ನಡಿಗರು ಅಂತ ಹೇಳ್ತಿದ್ರೆ ಕರ್ನಾಟಕದಲ್ಲಿ ವಿವಾದ, ಇಲ್ಲಾ ತಮಿಳರು ಅಂತ ಹೇಳಿದ್ರೆ ತಮಿಳುನಾಡಿನಲ್ಲಿ ವಿವಾದ. ಯಾವ ಮನುಷ್ಯ ತಾನೇ ಅಂತಹಾ ವಿವಾದದಲ್ಲಿ ಸಿಲುಕಿ ಹಾಕಿಕೊಳ್ಳಲು ಇಷ್ಟ ಪಡುತ್ತಾನೆ? ಬರೀ  ಕಾವೇರಿ ವಿವಾದದ ಕುರಿತು ನಿಮ್ಮ ಅಭಿಪ್ರಾಯವೇನು ಅಂತ ಕೇಳಿದ್ರೆ ಅದು ಸಮಂಜಸವೆನಿಸುತ್ತಿತ್ತು.

ಪ್ರಕಾಶ್ ರೈ ಮಾಡಿದ್ದು ತಪ್ಪಾ?’ ಚಿತ್ರದ ಪ್ರಮೋಶನ್ ಕಾರ್ಯಕ್ರಮದಲ್ಲಿ ಕಾವೇರಿಯಂತಹ ಗಂಭೀರ ವಿಷಯದ ಕುರಿತು ಪ್ರಶ್ನೆ ಅಗತ್ಯ ಇತ್ತಾ? ಮಾಡದೇ ಇರುವ ತಪ್ಪಿಗೆ ಬಲವಂತವಾಗಿ ರೈಯವರಿಂದ ಕ್ಷಮೆ ಕೇಳಿಸುವ ಅಗತ್ಯವಿತ್ತಾ? ಪ್ರಕಾಶ್ ರೈಯವರು ಆ ಪ್ರಶ್ನೆಗೆ “ಸುಪ್ರಿಂ ಕೋರ್ಟಿನದ್ದು ತಪ್ಪು” ಅಂದಿದ್ದರೆ  ಸುಪ್ರಿಂ ಕೋರ್ಟಿನ ತೀರ್ಪೇನಾದರು ಬದಲಾಗುತ್ತಿತ್ತಾ? ಇದು ನಾನು ಕೇಳುತ್ತಿರುವ ಪ್ರಶ್ನೆಗಳಲ್ಲ, ಮೊನ್ನೆಯ ವಿವಾದಕ್ಕೆ ಸಂಬಂಧಿಸಿದಂತೆ ಜನರಿಂದ ಬಂದಿರುವ  90 ಶೇಕಡಾ  ಪ್ರತಿಕ್ರಿಯೆಗಳು.  ಇವಿಷ್ಟೇ ಸಾಕು, ಪ್ರಕಾಶ್ ರೈಯವರದ್ದೇನೂ ತಪ್ಪಿಲ್ಲ ಎನ್ನುವುದಕ್ಕೆ.

ಪ್ರಕಾಶ್ ರೈಯವರಿಂದ ತನ್ನ ಅಲ್ಪ ಸ್ವಲ್ಪ ಹೆಸರಿಗೆ  ಇತಿಶ್ರೀ ಹಾಡಿಸಿಕೊಂಡ ಜನಶ್ರೀ ಚಾನೆಲ್’ನವರು ಅಷ್ಟಕ್ಕೇ ಸುಮ್ಮನಾಗಬೇಕಿತ್ತು. ಆದರೆ ಅವರೆಂತಹಾ  ಶೇಮ್’ಲೆಸ್ ಜನಗಳೆಂದರೆ ಪ್ರತಿಷ್ಟಿತ ನಟನೊಬ್ಬ ತನ್ನ ಚಾನಲ್’ನ ಕ್ಯಾರೆಕ್ಟರ್ ಕುರಿತಾಗಿ  ಬೈದಿದ್ದನ್ನೂ  ನಾಚಿಕೆಯಿಲ್ಲದೆ ಪ್ರಸಾರ ಮಾಡಿಬಿಟ್ಟಿದ್ದಾರೆ. ಟಿ.ಆರ್.ಪಿಗಾಗಿ ನಮ್ಮ ಮಾಧ್ಯಮಗಳು ಏನು ಮಾಡೋಕೂ ಹೇಸೋದಿಲ್ಲ ಅನ್ನೋದಕ್ಕೆ  ಇದು ಮತ್ತೊಂದು ಹಸಿ ಹಸಿಯಾದ ಉದಾಹರಣೆ. ಅಷ್ಟಕ್ಕೂ ನಿಲ್ಲದ ಜನಶ್ರೀ, ಈ ಕುರಿತಾಗಿ ಕಾವೇರಿ ಪರ ಹೋರಾಟಗಾರರು, ಕೆಲ ರಾಜಕಾರಣಿಗಳನ್ನೆಲ್ಲಾ ಪ್ರಕಾಶ್ ರೈ ವಿರುದ್ಧ ಎತ್ತಿ ಕಟ್ಟಿತು. ಇದರ ಕುರಿತು ಉಗ್ರ ಹೋರಾಟ ಮಾಡೋದಕ್ಕೆ ಕೆಲ ಫೇಕ್ ಕನ್ನಡ ಪರ ಹೋರಾಟಗಾರರನ್ನು ಸ್ಟುಡಿಯೋದಲ್ಲಿ ಕೂರಿಸಿಕೊಂಡು ಅವರಿಗೂ ಸ್ವಲ್ಪ ಟಿ.ಆರ್.ಪಿ ಬರೋ ಹಾಗೆ ಮಾಡಿತು. ಪ್ರಕಾಶ್ ರೈಯವರ ಚಿತ್ರಗಳನ್ನು ಬ್ಯಾನ್ ಮಾಡಿಸುವ ಬೆದರಿಕೆಯ ಹೇಳಿಕೆಯನ್ನು  ವಾಟಾಳ್ ನಾಗರಾಜ್ ಮತ್ತು ಸಾರಾ ಗೋವಿಂದು ಬಾಯಿಯಿಂದ ಕೊಡಿಸಿತು. ಒಟ್ಟಿನಲ್ಲಿ  ತಪ್ಪು ಟಿವಿಯವರದ್ದೇ ಎನ್ನುವ ಸೂರ್ಯಸತ್ಯ ಕಣ್ಣಿಗೆ ರಾಚುವಂತಿದ್ದರೂ, ಇಲ್ಲ ತಪ್ಪು ರೈ ಅವರದ್ದೇ ಎಂಬುದನ್ನು ವ್ಯವಸ್ಥಿತವಾಗಿ ಬಿಂಬಿಸಲು ಪ್ರಯತ್ನಿಸಿತು.

ಪ್ರಕಾಶ್ ರೈ ಅವರು ಒಬ್ಬ ಮಾಸ್ ನಟ ಅದಕ್ಕಿಂತಲೂ ಹೆಚ್ಚಾಗಿ ಅವರೊಬ್ಬ ಕ್ರಿಯೇಟಿವ್ ನಿರ್ದೇಶಕ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಅವರು ಕನ್ನಡದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ  ಮಾಡಿರುವ ಮೂರು ಚಿತ್ರಗಳನ್ನು ನೋಡಿ, ನಾನೂ ನನ್ನ ಕನಸು, ಒಗ್ಗರಣೆ, ಇದೊಳ್ಳೆ ರಾಮಾಯಣ. ಇವು ಲಾಂಗು ಮಚ್ಚುಗಳಿಲ್ಲದ ಕೌಟುಂಬಿಕ ಅಭಿರುಚಿಯ  ಚಿತ್ರಗಳು. ನಿಮಗೆಲ್ಲಾ ಗೊತ್ತಿರಲಿ,  ಮೊದಲೆರಡು ಚಿತಗಳು ಜನರ ಮನ  ಗೆಲ್ಲುವಲ್ಲಿ ಯಶಸ್ವಿಯಾದರೂ ಸಹ ಬಾಕ್ಸ್ ಆಫೀಸಿಸಲ್ಲಿ ದೊಡ್ಡ ಸದ್ದು ಮಾಡಲಿಲ್ಲ, ತಮಿಳು, ತೆಲುಗು  ಮತ್ತು  ಹಿಂದಿಯಲ್ಲಿ ಕೇವಲ ನಟನೆಗೇ ಕೋಟ್ಯಾಂತರ ಹಣ ಪಡೆಯುವ ಪ್ರಕಾಶ್  ರೈ ಅವರಿಗೆ ಕನ್ನಡದ ಮೇಲೆ ಸ್ವಲ್ಪವೂ ಅಭಿಮಾನವೇ ಇಲ್ಲದಿದ್ದರೆ, ಇಲ್ಲಿ ಬಂದು ಯಾಕೆ ಕೌಟುಂಬಿಕ ಅಭಿರುಚಿಯ ಚಿತ್ರಗಳನ್ನು ಮಾಡಿ ಹಣ ಕಳೆದುಕೊಳ್ಳಬೇಕಿತ್ತು? ಕನಿಷ್ಟ ಲಾಂಗು ಮಚ್ಚು, ಐಟಂ ಸಾಂಗ್’ಗಳಿರುವ ಮಾಸ್ ಚಿತ್ರಗಳನ್ನಾದರೂ ಮಾಡಿ ಹಣ ಮಾಡಬಹುದಿತ್ತಲ್ಲವೇ? ರೈ ಅವರ ಕನ್ನಡ ಕಾಳಜಿಯನ್ನು ಪ್ರಶ್ನಿಸಿದ ಶ್ರೀಯತ ಅನಂತ ಚಿನವಾರರು ಉತ್ತರಿಸಬೇಕು.

ಚಿನಿವಾರ್ ತನ್ನ ಸಂಪಾದಕೀಯದಲ್ಲಿ “ಇಲ್ಲಿನ ನಟರು ಅಲ್ಲಿನ ನಟರು ಸೇರಿ ಎರಡೂ ರಾಜ್ಯಗಳ ಮಧ್ಯೆ ಸಾಮರಸ್ಯ ಮಾಡಿಸಲು ಸಾಧ್ಯವೇ ಎನ್ನುವ ಅರ್ಥದಲ್ಲಿ ಆಂಕರ್ ಆ ಪ್ರಶ್ನೆ ಕೇಳಿದ್ದು” ಅಂತ ಅತ್ಯಂತ ಹಾಸ್ಯಾಸ್ಪದ ಮಾತೊಂದನ್ನು ಹೇಳಿದರು.  ನಮ್ಮ ಮಾಧ್ಯಮಗಳ ಮೆಂಟಾಲಿಟಿ ಹೇಗಿದೆ, ಅವೆಷ್ಟು ಸಾಮರಸ್ಯ ಮೂಡಿಸುತ್ತಿವೆ ಎಂಬುದು ತಿಳಿಯದಷ್ಟು ಮೂರ್ಖರು ರೈಯೂ ಅಲ್ಲ, ರಾಜ್ಯದ ಜನರೂ ಅಲ್ಲ. ರಾಜ್ಯಕ್ಕೆ ರಾಜ್ಯ ಹೊತ್ತಿ ಉರಿಯುತ್ತಿರುವಾಗ ಇವರದ್ದು ಸಾಮರಸ್ಯ ಅಂತೆ. ಕರ್ಮಕಾಂಡ.

ಸಂಪಾದಕೀಯದಲ್ಲಿ ಚಿನಿವಾರರು ಪ್ರಕಾಶ್ ರೈಯವರನ್ನು ಇಂಚಿಂಚಿಗೂ ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿದ್ದರು. ಕಾವೇರಿ ವಿಷಯದ ಕುರಿತಾಗಿ ಮಾತನಾಡಲು ಇದಲ್ಲ ವೇದಿಕೆ ಅಂತ ಪ್ರಕಾಶ್ ರೈಯವರು ಭಾರಿ ಭಾರಿ ಹೇಳಿದ್ದಾಗ್ಯೂ, “ಹಾಗಾದ್ರೆ, ಬೇರೆ ವೇದಿಕೆಗಳಲ್ಲಿ ನೀವೆಷ್ಟು ಭಾರಿ ಕನ್ನಡದ ಪರವಾಗಿ ಮಾತನಾಡಿದ್ದೀರಿ ಪ್ರಕಾಶ್ ರೈಯವರೇ?” ಅಂತ ಕೇಳಿದ ಚಿನಿವಾರರಿಗೆ ನನ್ನದೊಂದು ನೇರ ಪ್ರಶ್ನೆ, ಕಾವೇರಿಯ ಬಗ್ಗೆ ಅಪಾರ ಕಾಳಜಿಯಿರುವ ನೀವು ಅದೆಷ್ಟು ಭಾರಿ ಕನ್ನಡದವರೇ ಆದ ರಜನಿಕಾಂತ್, ಜಯಲಲಿತಾ ಬಳಿಗೆ ಹೋಗಿ ಕಾವೇರಿ ವಿವಾದದ ಕುರಿತು ಅಭಿಪ್ರಾಯ ಕೇಳಿದ್ದೀರಾ? ರಜನೀಕಾಂತ್’ಗೆ ಬೆಂಗಳೂರಿನ ಋಣ ಇಲ್ಲವೇ? ಇತ್ತೀಚೆಗಿನ  ಕಬಾಲಿ ಚಿತ್ರವನ್ನು ಬೆಂಗಳೂರಿನ ಜನ ಎದ್ದು ಬಿದ್ದು ನೋಡಿಲ್ಲವೇ? ಮೊನ್ನೆ ಬೆಂಗಳೂರು  ಹೊತ್ತಿ ಉರಿದಾಗ  ಅವರ ಅಭಿಪ್ರಾಯವನ್ನು ಕೇಳಿ ಯಾಕೆ ನೀವು ಎರಡೂ ರಾಜ್ಯಗಳ ಮಧ್ಯೆ ಸಾಮರಸ್ಯ ಮೂಡಿಸಲು ಪ್ರಯತ್ನಿಸಲಿಲ್ಲ?

ಅಸಲಿಗೆ ಸಾಮರಸ್ಯವೂ ಇಲ್ಲ ಮಣ್ಣಂಗಟ್ಟಿಯೂ ಇಲ್ಲ. ಇವರುಗಳಿಗೆ ಬೇಕಿದ್ದಿದ್ದು ವಿವಾದ ಮಾತ್ರ.  ಇಲ್ಲದಿದ್ದರೆ “ಇದನ್ನು ರಿಲೇ ಮಾಡ್ಬೇಡಿ” ಅಂತ ರೈಯವರು ಹೇಳಿದ್ದರೂ “ಕಾವೇರಿ ನೀರು ಕುಡಿದ ಕನ್ನಡಿಗನಿಂದಲೇ ದ್ರೋಹ” ಎನ್ನುವ ತಲೆಬರಹ ಕೊಟ್ಟು ಅದನ್ನು ರಿಲೇ ಮಾಡುತ್ತಿರಲಿಲ್ಲ. “ಸಣ್ಣ ವಿಷಯವನ್ನು ದೊಡ್ದದು ಮಾಡ್ಬೇಡಿ” ಅಂತ ಪ್ರಕಾಶ್ ರೈ ಪರಿಪರಿಯಾಗಿ ಕೇಳಿಕೊಂಡರೂ “ನಿಮಗಿನ್ನೂ ನೀವು ತಪ್ಪು ಮಾಡಿದ್ದೀರಿ ಅಂತ ಅನಿಸುತ್ತಿಲ್ಲ” ಅಂತ ಮತ್ತೆ ಮತ್ತೆ ಹೇಳಿ ತಮ್ಮ ತಪ್ಪನ್ನು ಪ್ರಕಾಶ್ ರೈಯವರ ಮೇಲೆ ಹೇರುವ ಅಹಂಕಾರವನ್ನು ಚಿನಿವಾರರು ತೋರಿಸುತ್ತಿರಲಿಲ್ಲ.  ಮೊನ್ನೆಯ ಇಡೀ ಘಟನೆ, ಮಾಧ್ಯಮಗಳು ವಿವಾದಕ್ಕೆ ಆಸ್ಪದವೇ ಇಲ್ಲದಿದ್ದರೂ ಹೇಗೆ ವಿವಾದ ಹುಟ್ಟಿಸುತ್ತವೆ ಮತ್ತದನ್ನು ಹೇಗೆ ತನ್ನ ಟಿ.ಆರ್.ಪಿಗಾಗಿ ಬಳಸಿಕೊಳ್ಳುತ್ತದೆಯೆಂಬುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ.

ಮೊನ್ನೆ ಮೊನ್ನೆಯಷ್ಟೇ ಚಿತ್ರ ನಟ  ಉಪೇಂದ್ರ ಪಬ್ಲಿಕ್ ಟಿವಿಯವರಿಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ರು. ಈಗ ಪ್ರಕಾಶ್ ರೈಯವರು “ಯಾವ ಸಮಯದಲ್ಲಿ ಯಾವ ಪ್ರಶ್ನೆಯನ್ನು ಯಾರಿಗೆ ಕೇಳ್ಬೇಕೆನ್ನುವ ಬೇಸಿಕ್ ಕಾಮನ್ ಸೆನ್ಸ್ ಬೆಳೆಸಿಕೊಳ್ಳಿ” ಅಂತ ಜನಶ್ರೀ ಟಿವಿಯವರಿಗೆ ಬುದ್ಧಿ ಕಲಿಸಿದ್ದಾರೆ. ಇದು ಬರೀ ಈ ಎರಡು ಚಾನೆಲ್’ಗಳಿಗೆ  ಅವರಿಗೆ ಮಾತ್ರ ಪಾಠ ಅಲ್ಲ. ಟಿ.ಆರ್.ಪಿ ಗಾಗಿ ಹೇಸಿಗೆ ತಿನ್ನಲೂ ಸಿದ್ಧರಿರುವ ಎಲ್ಲಾ ಮಾಧ್ಯಮದ ಮಂದಿಗೂ ಇದು ಅನ್ವಯ.

ಹೌದು,  ಪ್ರಕಾಶ್ ರೈಯವರು ಮೊನ್ನೆ ಅಷ್ಟೊಂದು ಕೂಗಾಡುವ ಅಗತ್ಯವಿರಲಿಲ್ಲ. ಒಬ್ಬ ಹಿರಿಯ ನಟನಾಗಿ ಸ್ವಲ್ಪ ಕೋಪವನ್ನು ಕಂಟ್ರೋಲ್ ಮಾಡಿಕೊಂಡು ಪ್ರಬುದ್ಧತೆಯಿಂದ ವರ್ತಿಸಬಹುದಿತ್ತು.  ಆದರೆ ಅವರದ್ದೇನೇನೂ ತಪ್ಪಿರಲಿಲ್ಲ ಅದರಲ್ಲಿ. ಮಗಳಿನ ವಯಸ್ಸಿನವಳಾದರೂ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವಾಗ ಕನಿಷ್ಟ  ಪ್ರಬುದ್ಧತೆ ಆಂಕರ್’ಗೂ ಇರಬೇಕು. ಇಲ್ಲದಿದ್ದರೆ ಅದನ್ನು ಹೇಳಿಕೊಡುವ ಗುಣ ತಂದೆಯ ವಯಸ್ಸಿನ ಸಂಪಾದಕರಿಗಾದರೂ ಇರಬೇಕು.

ಮಾಡದ ತಪ್ಪಿಗಾಗಿ ಹೆಸರಾಂತ ನಟನೊಬ್ಬ ಕ್ಷಮೆ ಕೇಳುವಂತಾಗಿದ್ದು ನೋಡಿ ಬೇಸರವಾಯ್ತು ಮತ್ತು ನಿತ್ಯವೂ ಪ್ರತಿಷ್ಟಿತರ ಸುತ್ತ ಮುತ್ತ   ಇಂತಹಾ ವಿವಾದ ಹುಟ್ಟಿಸಿ ಟಿ.ಆರ್.ಪಿ ದಾಹ ತೀರಿಸಿಕೊಳ್ಳುವ ಮಾಧ್ಯಮಗಳು ಎಲ್ಲೆಡೆ ರಾರಾಜಿಸುತ್ತಿರುವುದನ್ನು ನೋಡುವಾಗ ಆವತ್ತು   ಕಮಲ್ ಹಾಸನ್ ಹಾಗೆ ಹೇಳಿದ್ದು ಸುಮ್ಮನೇ ಅಲ್ಲ ಅನಿಸಿತು.

#WearewithPrakashrai

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!