ಅಂಕಣ

ಗಣೇಶ ನೆಂಬ ದೇವರಂಥ ಗೆಳೆಯ

ganesha chaturti wishes

ಆತ ದೇವರಾಗಿ ಗುಡಿಯಲ್ಲಿದ್ದರೂ ಕೇವಲ ಅಷ್ಟಕ್ಕೇ ಸೀಮಿತವಾಗಲಿಲ್ಲ.ನಾನಾ ಥರದ ಸೇವೆಗಳನ್ನು,ನೀತಿ-ನಿಯಮಗಳನ್ನು ಭಕ್ತರಿಂದ ಎಂದೂ ಅಪೇಕ್ಷಿಸಿದವನಲ್ಲ.ಒಂದು ಕಟ್ಟು ಗರಿಕೆಗೆ,ಒಂದಷ್ಟು ಭಕ್ಷ ಭೋಜ್ಯಗಳಿಗೆ ಸಂತ್ರಪ್ತನಾಗುವ ಮಗುವಿಂಥ ಮನಸ್ಸು ಆತನದ್ದು. ವ್ಯಾಸರ ಬಾಯಿಯಿಂದ ಬಂದ ಮಹಾಭಾರತವನ್ನು ಬರಹರೂಪಕ್ಕೆ ಇಳಿಸಿ ಅದು ಅಜರಾಮರವಾಗಲು ಕಾರಣವಾದವನು ಅವನು. ಎಲ್ಲ ಶುಭಕಾರ್ಯಗಳಲ್ಲೂ ಮೊದಲ ಪೂಜೆ ಅವನಿಗೇ. ಎಂಥ ವಿಘ್ನಗಳನ್ನಾದರೂ ಪರಿಹಾರ ಮಾಡಬಲ್ಲ ಸಾಮರ್ಥ್ಯವುಳ್ಳಾತ. ವಿದ್ಯಾರ್ಥಿಗಳಿಗೆ ಸರಸ್ವತಿಯ ಜೊತೆಗೇ ಯಶಸ್ಸಿನ ಅಭಯ ನೀಡುವ ವಿದ್ಯಾಧಿಪತಿಯೂ ಈತನೇ. ನಾಳೆ ಮದುವೆ, ನಾಳೆ ಮದುವೆ ಎಂದುಕೊಂಡು ಕೊನೆಯವರೆಗೂ ಬ್ರಹ್ಮಚಾರಿಯಾಗೇ ಉಳಿದಾತ. ಇಂಥ ಗಣಪನನ್ನು ಸದಾ ಕಾಲ ನಮ್ಮ ನೋವಿನಲ್ಲೂ, ನಲಿವಿನಲ್ಲೂ ಜೊತೆಯಾಗುವ ದೇವರಂಥ ಗೆಳೆಯ ಎನ್ನಬಹುದು.

ಪ್ರತಿ ಸಂವತ್ಸರದಂತೆ ಈ ಬಾರಿಯೂ ಚತುರ್ಥಿಯ ದಿನದಂದು ನಮ್ಮೊಂದಿಗೆ ತನ್ನ ಹಬ್ಬವನ್ನು ಆಚರಿಸಿಕೊಳ್ಳಲು ಗಣೇಶ ಬಂದಿದ್ದಾನೆ. ಆತ ಎಲ್ಲ ಅಭ್ಯುದಯಗಳಿಗೂ ಕಾರಣಕರ್ತ. ಜನರನ್ನು ಒಗ್ಗೂಡಿಸುವ ಚಾತುರ್ಯವುಳ್ಳವನು. ಆತನ ಆಶೀರ್ವಾದದೊಂದಿಗೆ ಒಟ್ಟಾಗಿ ಮಾಡಿದ ಎಲ್ಲ ಕೆಲಸಗಳೂ ಯಶಸ್ವಿಯಾಗಿವೆ. ಇದಕ್ಕೆ ಬಹುದೊಡ್ಡ ಉದಾಹರಣೆಯೆಂದರೆ ನಮ್ಮ ಸ್ವಾತಂತ್ರ್ಯ ಹೋರಾಟ. ಅಂದು ಲೋಕಮಾನ್ಯ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವದ ನೆಪದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜಾತಿ, ಮತ, ಧರ್ಮಗಳನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸಿದ್ದರು. ಅಲ್ಲಿ ಹೋರಾಟಕ್ಕೆ ಗಣಪತಿ ಆಧಾರ ಸ್ತಂಭವಾಗಿದ್ದ. ಅವನ ಮೂರ್ತಿ ಕೂರಿಸುವುದು, ನಂತರ ಅದರ ನಿತ್ಯಪೂಜೆ, ಆಮೇಲೆ ವಿಸರ್ಜನೆ ಈ ಎಲ್ಲ ಹಂತಗಳಲ್ಲೂ ಜನ ಒಗ್ಗೂಡಿ ಸ್ವಾತಂತ್ರ್ಯ ಹೋರಾಟದ ರೂಪುರೇಷೆಗಳನ್ನು ಚರ್ಚಿಸಿ ಬ್ರಿಟಿಷರೊಂದಿಗೆ ಹೋರಾಡುತ್ತಿದ್ದರು. ಇಂಥ ಸಂಕಷ್ಟದ ಸಮಯದಲ್ಲಿ ಸಂಕಷ್ಟಹರ ಗಣಪನಾಗಿ ಆತ ದೇವರಂಥ ಗೆಳೆಯನಾಗೇ ಎಲ್ಲ ಜನರ ಮಧ್ಯೆ ಇದ್ದ.

ಗಣಪನನ್ನು ವಿವಿಧ ರೀತಿಯಲ್ಲಿ ಹಲವು ಕಲಾವಿದರು ಚಿತ್ರಿಸಿದ್ದಾರೆ. ಅಂಥ ಕಲಾವಿದರಿಗೆ ಕಲ್ಪನೆಯ ಸ್ಪೂರ್ಥಿಯಾಗಿ ಅವರ ಕಲ್ಪನೆ ಮೂರ್ತ ರೂಪಕ್ಕಿಳಿಯುವಲ್ಲಿ ಮುಖ್ಯ ಪಾತ್ರವಹಿಸಿದವನು ಗಣಪತಿ. ಅದಕ್ಕಾಗಿಯೇ ನಾವಿಂದು ವಿಧ ವಿಧದ ಭಂಗಿಗಳ ಗಣೇಶನನ್ನು ಕಾಣುತ್ತೇವೆ. ಮಲಗಿರುವ ಗಣಪ, ಡ್ಯಾನ್ಸಿಂಗ್ ಗಣಪ, ಗಿಟಾರ್ ಹಿಡಿದ ಗಣಪ, ಟೋಪಿ ಧರಿಸಿದ ಗಣಪ, ಕ್ರಿಕೆಟ್ ಬ್ಯಾಟ್ ಹಿಡಿದ ಗಣಪ, ಮೊಂಡು ಹಟ ಮಾಡುವ ಬಾಲ ಗಣಪ, ಕನ್ನಡಕ ಧರಿಸಿದ ಗಣಪ,ದೊಡ್ಡ ಇಲಿಯ ಮೇಲೆ ಕುಳಿತ ಪುಟ್ಟ ಗಣೇಶ ಹೀಗೆ ನಾನಾ ಅವತಾರಗಳಲ್ಲಿ ನಾವು ಗಣೇಶನನ್ನು ನೋಡಿದ್ದೇವೆ. ಆಗೆಲ್ಲ ನಮಗೆ ಆತನ ಭಂಗಿಗಳನ್ನು ನೋಡಿ ಖುಷಿ ಆಯಿತೇ ವಿನಃ ನಮ್ಮ ದೇವರನ್ನು ಹಲವು ರೀತಿಯಲ್ಲಿ ಕಲಾವಿದರು ತೋರಿಸಿದ್ದಾರಲ್ಲ, ಇದು ಧರ್ಮಕ್ಕೆ ಮಾಡಿದ ಅವಹೇಳನ ಅಂತ ಅನ್ನಿಸಲಿಲ್ಲ. ಅದೇ ಗಣೇಶನ ಜಾಗದಲ್ಲಿ ಶಿವನನ್ನೋ, ವಿಷ್ಣುವನ್ನೋ, ಕೃಷ್ಣನನ್ನೋ ಊಹಿಸಿಕೊಂಡಾಗ ಮನಸ್ಸು ಕಸಿವಿಸಿಗೊಳ್ಳುತ್ತದೆ. ಈ ದೇವರುಗಳನ್ನೆಲ್ಲ ಹಲವು ಭಂಗಿಗಳಲ್ಲಿ ನೋಡಲು ನಾವು ಇಷ್ಟಪಡುವುದಿಲ್ಲ. ಆದರೆ ಗಣೇಶ ಹಾಗಲ್ಲ.ಆತ ಹೇಗಿದ್ದರೂ ನಮಗೆ ಚೆಂದ. ಗಣೇಶನೂ ಅಷ್ಟೇ. ತನ್ನನ್ನು ಬೇರೆ ಬೇರೆ ರೀತಿಯಲ್ಲಿ ತೋರಿಸಿದ್ದಕ್ಕೆ ಕೋಪಗೊಳ್ಳುವುದಿಲ್ಲ. ಬದಲಿಗೆ ಇಡೀ ಜಗತ್ತು ತನ್ನನ್ನು ನೋಡುತ್ತಿದೆಯೆಂದು ಹೇಗೆ ಪುಟ್ಟ ಮಗು ಖುಷಿಪಟ್ಟು ನಗುತ್ತದೆಯೋ ಹಾಗೆಯೇ ಗಣಪನೂ ಜನರು ತನ್ನನ್ನು ಖುಷಿಯಿಂದ ನೋಡಿದ್ದಕ್ಕೆ ನಕ್ಕು ನಲಿಯುತ್ತಾನೆ. ಅದಕ್ಕೇ ಆತ ನಮ್ಮ ನಡುವೆಯೇ ಇರುವ ದೇವರಂಥ ಗೆಳೆಯ.

ಒಬ್ಬ ಗೆಳೆಯನಿಗೆ ಮಾತ್ರ ಇನ್ನೊಬ್ಬ ಗೆಳೆಯನ ಮನದಲ್ಲಿ ಬಾಲ್ಯದ ನೆನಪುಗಳ ಮೂಟೆಯನ್ನೇ ತುಂಬಿಸಲು ಸಾಧ್ಯವಾಗುತ್ತದೆ. ಸ್ವಲ್ಪ ಆಲೋಚಿಸಿ. ನಮಗೆಲ್ಲ ಬಾಲ್ಯದಲ್ಲಿ ಚೌತಿ ಹಬ್ಬ ಎಂಥ ಖುಷಿಯ ಹಬ್ಬವಾಗಿತ್ತೆಂದು. ಗಣೇಶನನ್ನು ಕೂರಿಸುವುದಕ್ಕೆ ಹಿರಿಯರ ಜೊತೆ ಸೇರಿ ಉತ್ಸಾಹದಿಂದ ಮಂಟಪ ಮಾಡುವುದೇನು.ಮಾರುಕಟ್ಟೆಯಲ್ಲಿ ಅಪ್ಪಾ ಈ ಗಣೇಶ ಬೇಡ ಅದನ್ನು ತಗೊಳ್ಳೋಣ. ಅದು ಬೇಡ, ಇನ್ನೊಂದಿದೆಯಲ್ಲ ಅದೇ ತಗೊಳ್ಳೋಣ ಅಂತ ಗಣೇಶನ ಮೂರ್ತಿ ತರುವಾಗ ಅಪ್ಪನನ್ನು ಗಂಟೆಗಟ್ಟಲೇ ಪೀಡಿಸಿ ನಮ್ಮ ಇಷ್ಟದ ಗಣೇಶನನ್ನು ತರುವ ಖುಷಿ. ಆಮೇಲೆ ಆತನಿಗೆ ನೈವೇದ್ಯಕ್ಕೆ ಅಮ್ಮ ಲಡ್ಡು,ಚಕ್ಕುಲಿ,ಮೋದಕ,ಕೋಡುಬಳೆ,ಪಂಚಕಜ್ಜಾಯ,ಕಡುಬು ಮುಂತಾದ ಭಕ್ಷ್ಯಗಳನ್ನು ಮಾಡುವಾಗ ಅವುಗಳನ್ನು ಗಣಪನಿಗೆ ಇಡುವುದಕ್ಕೂ ಮೊದಲೇ ಸ್ವಲ್ಪ ಸ್ವಲ್ಪ ತಿನ್ನುವ ಆನಂದವೇನು. ಏಕೆಂದರೆ ತಿಂಡಿಪೋತ ಗೆಳೆಯನಿಗೆ ಎಲ್ಲವೂ ರುಚಿಯಾಗಿದೆಯೇ ಅಂತ ಪರೀಕ್ಷಿಸಿ ಇಡಬೇಕಲ್ಲ. ಅದರ ನೆಪದಲ್ಲಿ ಪೂಜೆಗೂ ಮೊದಲೇ ತಿಂಡಿಗಳನ್ನು ಗುಳುಂ ಮಾಡಿದ ಸಿಹಿನೆನಪು. ನಂತರ ಚೌತಿಯ ರಾತ್ರಿ ಚಂದ್ರನನ್ನು ನೋಡಿದರೆ ಗೆಳೆಯ ಶಾಪ ಕೊಟ್ಟಾನು ಎಂದು ಹೆದರಿ ಮನೆಯಿಂದ ಹೊರಗೇ ಬರದೆ ಗಣಪನ ಬಗ್ಗೆ ಹಿರಿಯರು ಹೇಳುವ ಕಥೆಗಳನ್ನು ಕೇಳುತ್ತಾ ನಿದ್ದೆ ಹೋದ ನೆನಪುಗಳು. ಗಣೇಶನ ವಿಸರ್ಜನೆ ಸಮಯದಲ್ಲಿ ಊರಿನ ಬೀದಿ ಬೀದಿಗಳಲ್ಲೂ ಪಲ್ಟಿ ಹೊಡೆದು ಲಾಗ ಹಾಕಿ ಕುಣಿದು ಖುಶಿಪಟ್ಟದ್ದೇನು. ಹೀಗೆ ಇಂಥ ಅನೂಹ್ಯವಾದ ನೆನಪುಗಳಿಗೆಲ್ಲ ಕಾರಣನಾದವನು ನಮ್ಮ ಗೆಳೆಯ ಗಣಪ.

ವಿವಿಧ ಕವಿವರೇಣ್ಯರಿಗೆ, ಸಾಹಿತಿಗಳಿಗೆ, ಕಾದಂಬರಿಗಾರರಿಗೆ ಗಣೇಶ ಅವರದ್ದೇ ಆದ ಕಲ್ಪನೆ ಹೊರಬರಲು ಅನುವು ಮಾಡಿಕೊಟ್ಟಿದ್ದಾನೆ. ಇಂದಿನ ಆಧುನಿಕ ಯುಗದ ಮಕ್ಕಳಿಗೆ ಗಣೇಶನೆಂದರೆ ಮೊದಲು ನೆನಪಾಗುವುದೇ ‘ಬಾಲ್ ಗಣೇಶ್’ ಎಂಬ ಅನಿಮೇಶನ್ ಸಿನಿಮಾದ ಪುಟ್ಟ ಗಣೇಶ. ಅಲ್ಲಿ ಕಾರ್ಟೂನ್ ರೂಪದಲ್ಲಿ ನಾನಾ ಅವತರದಲ್ಲಿ, ಹಲವು ಸಾಹಸಗಳನ್ನು ಮಾಡುತ್ತಾ ಮಕ್ಕಳಿಗೆ ಗಣೇಶ ಗೆಳೆಯನಾಗಿಬಿಟ್ಟಿದ್ದಾನೆ. ಆ ಸಿನಿಮಾಗಳಲ್ಲಿ ತೋರಿಸುವಂತೆ ಸಣ್ಣ ಪುಟ್ಟ ಪುಂಡಾಟಿಕೆ ಮಾಡುವ ಗಣಪನೇ ಮಕ್ಕಳಿಗೆ ಖುಷಿ ಕೊಡುತ್ತಾನೆ. ಅಂಥ ಪುಂಡತನವನ್ನು ಮಕ್ಕಳು ಮಾಡಿದಾಗ ತಂದೆ ತಾಯಿಯರು ಗದರಿದರೆ ಅನಿಮೇಶನ್ ಸಿನಿಮಾದಲ್ಲೂ ಗಣೇಶ ಹೀಗೇ ಮಾಡುತ್ತಿದ್ದ, ಬೈದರೆ ಅವನಿಗೂ ಬೈಯಿರಿ ಎಂದು ಹೇಳಿ ಮಕ್ಕಳು ಪೋಷಕರ ಬಾಯಿ ಮುಚ್ಚಿಸುತ್ತಾರೆ.

ಅಪ್ಪ ಅಮ್ಮನಿಗಿಂತ ಮಿಗಿಲಾದ ದೇವರಿಲ್ಲ ಎಂದು ಜಗತ್ತಿಗೆ ಪಾಠ ಹೇಳಿದವನೂ ನಮ್ಮ ಗಣಪನೇ. ಜಗತ್ತನ್ನೇ ಸುತ್ತಿ ಬನ್ನಿ ಎಂದು ಕುಮಾರ-ಗಣೇಶ ಇಬ್ಬರಿಗೂ ಶಿವ ಪಾರ್ವತಿಯರು ಹೇಳಿದಾಗ ತಂದೆ ತಾಯಂದಿರಿಗಿಂತ ಮಿಗಿಲಾದ ಜಗತ್ತಿಲ್ಲ ಎಂದು ‘ತ್ವಮೇವ ಮಾತಾಚ ಪಿತಾ ತ್ವಮೇವ, ತ್ವಮೇವ ಬಂಧುಶ್ಚ ಸುಖಾ ತ್ಮಮೇವ,ತ್ವಮೇವ ವಿದ್ಯಾ ದ್ರವಿಣಂ ತ್ವಮೇವ, ತ್ವಮೇವ ಸರ್ವಂ ಮಮ ದೇವ ದೇವ’ ಎನ್ನುತ್ತ ಗಣೇಶ ಅಪ್ಪ ಅಮ್ಮಂದಿರಿಗೇ ಪ್ರದಕ್ಷಿಣೆ ಹಾಕಿದ. ಗಣೇಶನ ಜನನದ ಬಗ್ಗೆಯೂ ಹಲವರು ಹಲವು ಕಥೆಗಳನ್ನು ಹೇಳುತ್ತಾರೆ.

ಇವತ್ತಿನ ದಿನಗಳಲ್ಲಿ ಕೆಲವೆಡೆ ಗಣೇಶೋತ್ಸವ ಅದ್ಧೂರಿತನ, ಆಡಂಬರದ ಪ್ರದರ್ಶನವಾದರೂ ಗಣೇಶ ಮತ್ತೆ ಮತ್ತೆ ತನ್ನ ಹಬ್ಬಕ್ಕೆ ಬರುತ್ತಲೇ ಇದ್ದಾನೆ. ಎಲ್ಲ ಕಡೆಗಳಲ್ಲೂ ಸಮತಾವಾದ, ಏಕತಾವಾದವನ್ನು ಬಿತ್ತುತ್ತಲೇ ಇದ್ದಾನೆ. ಕಿವಿಗಡಚಿಕ್ಕುವ ಧ್ವನಿವರ್ಧಕಗಳು, ರಾತ್ರಿಯಾದರೆ ಆರ್ಕೆಸ್ಟ್ರಾ ಹಾಡುಗಳು, ತೋರಿಕೆಗೆ ಅಹಂಕಾರದಿಂದ ಮಾಡುವ ಸನ್ಮಾನ, ಅನ್ನ ಸಂತರ್ಪಣೆಗಳು ಈ ಎಲ್ಲದರ ನಡುವೆಯೂ ಗಣೇಶ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದ್ದಾನೆ.

ನೂರು ಮತದ ಹೊಟ್ಟು ತೂರಿ ಎಲ್ಲ ತತ್ವದ ಎಲ್ಲೆ ಮೀರಿ ಜನರನ್ನು ಬೆಸೆಯಲು ಒಡ್ಡೋಲಗದೊಂದಿಗೆ ಬಂದಿರುವ ದೇವರಂಥ ಗೆಳೆಯ ಗಣೇಶನನ್ನು ನಮ್ಮ ಮನೆ-ಮನದೊಳಗೆ ಪ್ರೀತಿಯಿಂದ ಬರಮಾಡಿಕೊಳ್ಳೋಣ. ಆತನಿಗೆ ಇಷ್ಟವಾದದ್ದನ್ನು ಮಾಡಿ ನಮ್ಮ ಉತ್ತರೋತ್ತರ ಅಭಿವೃದ್ಧಿಗಾಗಿ,ದೇಶದ ಏಳಿಗೆಗಾಗಿ ಪ್ರಾರ್ಥಿಸೋಣ. ಗಣೇಶ ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಿ ಆನಂದ ತರಲಿ.

ನಿಮ್ಮ ಬಂಧು ಬಳಗಕ್ಕೆ ಗಣೇಶ ಹಬ್ಬದ ಶುಭಾಶಯ ಕೋರಲು ಇಲ್ಲಿ ಕ್ಲಿಕ್ ಮಾಡಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Lakshmisha J Hegade

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಿರುವ ವೈದ್ಯ.ಹೆಮ್ಮೆಯ ಕನ್ನಡಿಗ.ದೇಶದ ಶ್ರೀಸಾಮಾನ್ಯ ಪ್ರಜೆಗಳಲ್ಲೊಬ್ಬ.ಕನ್ನಡ ಬ್ಲಾಗರ್.ಇವಿಷ್ಟೇ ನನ್ನ ಪ್ರವರ.ಹೆಚ್ಚು ತಿಳಿಸುವ ಅಗತ್ಯವಿಲ್ಲ.ನನ್ನ ನಿಲುವು,ಸಿದ್ಧಾಂತ,ಮನಸ್ಥಿತಿಯನ್ನು ತಿಳಿಯಲು ಇಲ್ಲಿ ಪ್ರಕಟವಾಗಿರುವ ನನ್ನ ಬರಹಗಳನ್ನು ಓದಿ.ಏನಾದರೂ ಗೊತ್ತಾಗಬಹುದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!