ಅಂಕಣ

ಸ್ವಚ್ಚತೆಯ ಪರಿಧಿ ವಿಸ್ತರಿಸಲಿ

ಬಿದ್ದಿರುವ ಕಸವನ್ನಷ್ಟೇ ರಾಶಿ ಹಾಕಿ ಬೂದಿ ಮಾಡಿಬಿಟ್ಟರೆ ಭಾರತ ಸ್ವಚ್ಚವಾದೀತೇ.? ಮೋದೀಜೀಯವರ ಸ್ವಚ್ಚ ಭಾರತದ ಕರೆಯ ವೈಶಾಲ್ಯತೆಯನ್ನು ನಾವೆಷ್ಟು ಅರ್ಥೈಸಿಕೊಂಡಿದ್ದೇವೆ? ರದ್ದಿ ಕಾಗದಗಳು, ಪ್ಲಾಸ್ಟಿಕ್ ಲಕೋಟೆಗಳು ಮಾತ್ರ ಕಸವೇ? ಟೇಬಲ್ ನ ಕೆಳಗೆ ತೂರಿ ಬರುವ ಕೈಗಳಿಗೆ ನೋಟಿನ ಕಂತೆಯನ್ನಿಡಲು ಶಕ್ತಿಯಿಲ್ಲದ ಬಡಪಾಯಿಯೊಬ್ಬನನ್ನು ಕಛೇರಿಯಿಂದ ಕಛೇರಿಗೆ ಅಲೆದಾಡಿಸುವ ಒರಟು ಅಧಿಕಾರಿಗಳ ಹೊಲಸು ಕೈಗಳು ಸ್ವಚ್ಚವಾಗಬೇಡವೇ? ಸರಕಾರದಿಂದ ಬರುವ ಅನುದಾನಗಳ ಬಹುಪಾಲನ್ನು ತಮ್ಮ ಜೇಬಿಗಿಳಿಸಿಕೊಳ್ಳುವ ಭ್ರಷ್ಟ ಅಧಿಕಾರಿಗಳ ಹಾಗೂ ರಾಜಕಾರಣಿಗಳ ಕಸ ತುಂಬಿದ ಮನಸ್ಸುಗಳು ಸ್ವಚ್ಚವಾಗಬೇಕು ತಾನೇ?

ಇನ್ನು ಸಾಮಾನ್ಯ ನಾಗರಿಕರಾದ ನಮ್ಮಲ್ಲೊಂದು ಸ್ವಚ್ಚ ಹಾಗೂ ಸಭ್ಯತೆಯ ಪ್ರಜ್ಞೆ ಮೂಡಬೇಕಲ್ಲವೇ? ನಿಲ್ದಾಣದಲ್ಲಿ ನಿಂತಿರುವ ಬಸ್ಸಿನ ಕಿಟಕಿ, ಬಾಗಿಲುಗಳ ಮೂಲಕವೋ, ಅಂಗಡಿ ಮುಂದಿರುವ ಫುಟ್ ಫಾತ್ ಮೇಲೆಯೋ ನಿಂತು ತಾಂಬೂಲ, ಪಾನ್ ಮಸಾಲೆಗಳ ವರ್ಣವೈಭವವನ್ನು ಉದ್ದಗಲಕ್ಕೂ ಚಿತ್ರಿಸಿ ನಡೆದಾಡಲು ಅಸಹ್ಯ ಪಡುವಂತೆ ಮಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ, ತಂಬಾಕು ಸೇವಿಸಿ ಉಳಿದವರಿಗೂ ವಾಕರಿಕೆ ಬರಿಸುವುದು, ಜನರ ಓಡಾಟಕ್ಕೆ ಅಡ್ಡಿಯಾಗುತ್ತದೆನ್ನುವ ಪ್ರಜ್ಞೆಯಿಲ್ಲದೆ ಫುಟ್ ಫಾತ್ ಮೇಲೆಯೇ ಗುಂಪು ಗುಂಪಾಗಿ ಹರಟುವುದು, ಸಭೆಯ ಸಭ್ಯತೆಯನ್ನೂ ಮೀರಿ ರಿಂಗಿಣಿಸುವ ಮೊಬೈಲ್ ಗಳು, ಮೊಬೈಲ್ ಬಳಸಲು ನಿರ್ಬಂಧವಿರುವ ಜಾಗದಲ್ಲೂ ಅರಚುತ್ತಾ ಇತರರ ಏಕಾಗ್ರತೆಗೆ, ಆ ಪರಿಸರದ ಪ್ರಶಾಂತತೆಗೆ ಭಂಗ ತರುವುದು, ಇಂತಹ ಅತಿಸೂಕ್ಷ್ಮ ಕಸಗಳನ್ನು ಸ್ವಚ್ಚಗೊಳಿಸಲು ಯಾವ ಸರಕಾರದಿಂದಲೂ ಸಾಧ್ಯವಿಲ್ಲ, ಅದಕ್ಕೆ ನಮ್ಮ ಮನಸ್ಸುಗಳು ಸ್ವಚ್ಚಗೊಳ್ಳಬೇಕಿದೆ. ನಮ್ಮ ಮನಸ್ಸು ಮಲಿನಗೊಂಡದ್ದರ ಪರಿಣಾಮವೇ ಸಾರ್ವಜನಿಕ ಶೌಚಾಲಯಗಳು, ಸಾರ್ವಜನಿಕ ಸ್ಥಳಗಳು ಅತೀಹೆಚ್ಚು ಮಲಿನಗೊಂಡಿವೆ, ಮಾತ್ರವಲ್ಲ ಪವಿತ್ರವಾದ ಗಂಗೆ ಮಲಿನಗೊಂಡಿರುವುದು ಕೂಡ ನಮ್ಮ ಮನಸ್ಸಿನ ಮಲಿನತೆಯ ಕಾರಣದಿಂದಲೇ.!

ಆಧುನಿಕತೆಯ ಹೆಸರಿನಲ್ಲಿ ನಮ್ಮ ಸಂಸ್ಕೃತಿಯ ಮೇಲಾಗುತ್ತಿರುವ ಹೊಡೆತಗಳು, ಹೆಣ್ಣುಮಕ್ಕಳ ಮೈಕಾಣಿಸುವ ಉಡುಪುಗಳು, ಗಂಡಸರ ಸೊಂಟದಿಂದ ಆಗಲೋ ಈಗಲೋ ಉದುರುವಂತಹ ಶೈಲಿಯಲ್ಲಿರುವ ಪ್ಯಾಂಟುಗಳು, ಇವೆಲ್ಲಾ ಸಭ್ಯತೆಯ ದೃಷ್ಟಿಯಿಂದ ಕಸಗಳೇ ತಾನೇ? ಜಗತ್ತು ಪ್ರೀತಿಸುತ್ತಿರುವುದು ಭಾರತದೊಳಗಿನ ಭಾರತದ ಸಂಸ್ಕೃತಿಯನ್ನೇ ಹೊರತು ಭಾರತದೊಳಗಿರುವ ಪಾಶ್ಚಾತ್ಯ ಸಂಸ್ಕೃತಿಯನ್ನಲ್ಲವೆಂದು ಆ ಕುರಿತು ಯೋಚಿಸಿದ್ದೇವೆಯೇ.? ಪಾಶ್ಚಾತ್ಯೀಕರಣದ ಕಸಕ್ಕೆ ಬೆಂಕಿಯಿಟ್ಟು ನಮ್ಮತನವನ್ನು ಸ್ವಚ್ಚಗೊಳಿಸಬೇಕಲ್ಲವೇ? ಆಗ ಮಾತ್ರ ‘ಸ್ವಚ್ಚತೆ’ಯ ಜೊತೆ ‘ಭಾರತ’ವೂ ಉಳಿದುಕೊಂಡು ‘ಸ್ವಚ್ಚ ಭಾರತ’ ನಿರ್ಮಾಣವಾಗಬಹುದು.! ಮೋದೀಜೀಯವರ ಕನಸು ಸಾಕಾರವಾಗಬಹುದು.!

ಉದಯಭಾಸ್ಕರ್ ಸುಳ್ಯ.

Facebook ಕಾಮೆಂಟ್ಸ್

ಲೇಖಕರ ಕುರಿತು

Udayabhaskar Sullia

ಮಡಿಕೇರಿ ತಾಲೂಕಿನ ಪೆರಾಜೆಯಲ್ಲಿ ಜನಿಸಿದ್ದು ಪ್ರಸ್ತುತ ಸುಳ್ಯದಲ್ಲಿ ವಾಸ್ತವ್ಯ. ಜೀವನ ನಿರ್ವಹಣೆಗಾಗಿ ಸ್ವ ಉದ್ಯೋಗ ಹೊಂದಿರುತ್ತೇನೆ. ದೇಶಭಕ್ತಿಯ ಭಾಷಣ, ಅಧ್ಯಾತ್ಮಿಕ ಪ್ರವಚನಗಳನ್ನು ಕೇಳುವುದು, ಹಳೆಯ ಸಿನೆಮಾ ಹಾಡು, ಭಾವಗೀತೆ, ಭಕ್ತಿಗೀತೆಗಳನ್ನು ಆಲಿಸುವುದು, ಸಮಾಜಸೇವೆ, ಸದ್ವಿಚಾರ ಪ್ರಸಾರ... ಇವು ನನ್ನ ಆಸಕ್ತಿಯ ಕ್ಷೇತ್ರಗಳು. ಭಜನೆ ಹಾಡುವುದು, ಕವನ ರಚನೆ, ಸಾಮಾಜಿಕ-ದೇಶಭಕ್ತಿ- ಸಂಸ್ಕೃತಿಗಳ ಕುರಿತಾದ ಚಿಕ್ಕಪುಟ್ಟ ಲೇಖನಗಳನ್ನು ಬರೆಯುವುದು ಹಾಗೂ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ಸದ್ಗ್ರಂಥಗಳ ಅಧ್ಯಯನ.. ಇವು ನನ್ನ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!