ಅಂಕಣ ಜೇಡನ ಜಾಡು ಹಿಡಿದು..

ಜೇಡಕ್ಕೆ ಬಾಲವಿದೆಯಾ?

ಇಷ್ಟು ಕಂತುಗಳಲ್ಲಿ ತಾವು ಮನೆಯೊಳಗಣ ಜೇಡಗಳ ಬಗೆಗೆ ತಿಳಿದುಕೊಂಡಿರುವಿರಿ. ನನಗೆ ತಿಳಿದ ಮಟ್ಟಿಗೆ ನಮ್ಮಲ್ಲಿ ಕಾಣಸಿಗುವ ಮನೆಯೊಳಗಣ ಹೆಚ್ಚಿನ ಜೇಡಗಳನ್ನು ಪರಿಚಯಿಸಿರುವೆ. ಇನ್ನು ಕೆಲವು ಆಯಾಯ ಪ್ರಾಂತ್ಯಕ್ಕಾನುಸಾರ ಇರಬಹುದು. ನನಗೆ ತಿಳಿಯದ ಜೇಡಗಳೂ ಇರಬಹುದು. ಅವುಗಳನ್ನು ನಾನು ಪರಿಚಯಿಸಿಲ್ಲ. ಕೆಲ ಜೇಡಗಳು, ನಾವು ತರುವ ವಸ್ತುಗಳ ಮೂಲಕ ಅಥವಾ ನಮ್ಮ ಬಾಗಿಲಿನ ಮೂಲಕ ಕುತೂಹಲಕ್ಕೆಂದು ಮನೆಯ ಒಳ ಹೊಕ್ಕಿರಬಹುದು. ಅದು ಅವುಗಳ ಆವಾಸಸ್ಥಾನವಲ್ಲದಿರುವುದರಿಂದ ಮತ್ತು ನಿಮ್ಮ ಮನೆಗೆ ಯಾವ ಜೇಡ ಬಂದಿದೆ ಎಂದು ನನಗೆ ನಿರ್ಧಿಷ್ಟವಾಗಿ ಹೇಳಲಾಗದಿರುವುದರಿಂದ ಅವುಗಳನ್ನೂ ಮನೆಯೊಳಗಣ ಜೇಡಕ್ಕೆ ನಾನು ಸೇರಿಸಿಲ್ಲ. ಪ್ರತೀ ಮನೆಗೂ ಅವರವರದೇ ಆದ ಅತಿಥಿ ಜೇಡಗಳಿರುತ್ತವೆ. ಮುಂದೆ ಒಂದೊಂದೇ ಜೇಡವನ್ನು ವಿವರಿಸುತ್ತಾ ಹೋದಂತೆ ನಿಮ್ಮ ಮನೆಗೆ ಅತಿಥಿಯಾಗಿ ಬಂದ ಜೇಡಗಳ ಪಟ್ಟಿಯನ್ನು ನೀವು ಮಾಡಬಹುದು.

ಇವಲ್ಲದೇ ಇನ್ನೂ ಕೆಲವು ಜೇಡಗಳಿವೆ. ಅವು ನಮ್ಮ ಮನೆಯ ಗೋಡೆಯ ಜೇಡಗಳು. ಗೋಡೆಯು  ಮನೆಯೊಳಗೂ ಇದೆ,  ಹೊರಗೂ ಇದೆ . ಅಂತೆ ಈ ಜೇಡಗಳು. ಹಾಗಾಗಿ ಇವನ್ನು ನಿಮ್ಮ ನಿಮ್ಮ ಅನುಕೂಲಕ್ಕನುಸಾರ ಮನೆಯೊಳಕ್ಕೂ,ಹೊರಕ್ಕೂ ಸೇರಿಸಬಹುದು. ಆದರೆ ಮನೆಯೊಳಗಣ ಗೋಡೆಯು ಶುಚಿಯಾಗಿ ಮತ್ತು ನೊಂಪಾಗಿರುವುದರಿಂದ ಇವು ಮನೆಯ ಹೊರಗಿನ ಗೋಡೆಯನ್ನೇ ನೆಚ್ಚಿಕೊಂಡಿವೆ. ಹಾಗಾಗಿ ನಾನು ಇವನ್ನು ಮನೆಯ ಹೊರಗಡೆ ಇಟ್ಟಿದ್ದೇನೆ!

ಅವುಗಳನ್ನು ಮುಂದಿನೆರಡು ಕಂತುಗಳಲ್ಲಿ ನಿಮಗೆ ಪರಿಚಯಿಸುವೆ.

. ಎರಡುಬಾಲದ ಜೇಡ :

ಜೇಡನ ಪಳೆಯುಳಿಕೆಗಳ (Fossil) ಬಗೆಗೆ ನಮಗೆ ಇನ್ನೂ ಅಷ್ಟಾಗಿ ಮಾಹಿತಿಯಿಲ್ಲ. ಕೀಟಗಳ ಸಾವಿರ ಪಳೆಯುಳಿಕೆಗಳಲ್ಲಿ ಒಂದು ಮಾತ್ರ ಜೇಡದ್ದಂತೆ. ಹಾಗಾಗಿ ವಿಜ್ಞಾನಿಗಳಿಗೆ ಈ ಜೇಡನ ಉಗಮವನ್ನು ಇನ್ನೂ ನಿರ್ದಿಷ್ಟವಾಗಿ  ಹೇಳಲಿಕ್ಕೆ ಸಾಧ್ಯವಾಗುತ್ತಿಲ್ಲ. ಈಗ ಲಭ್ಯವಿರುವ ಅಪರೂಪದ ಪಳೆಯುಳಿಕೆಗಳಲ್ಲಿ ಒಂದು, ನಾನೀಗ ಪರಿಚಯಿಸುವ ಜೇಡ. ಪ್ರತಿಯೊಬ್ಬರ ಮನೆಯ ಗೋಡೆಯಲ್ಲಿರುವ ಜೇಡ, ಪ್ರತಿ ಮರದ ಕಾಂಡದಲ್ಲಿರುವ ಜೇಡ, ಅದೇ ಎರಡುಬಾಲದ ಜೇಡ.

ಡೊಮೈಕನ್ ರಿಪಬ್ಲಿಕ್ಕಿನಲ್ಲಿ ಸಿಕ್ಕ ಎರಡುಬಾಲದ ಜೇಡದ ಪಳೆಯುಳಿಕೆ ಸುಮಾರು ೨೦ ಮಿಲಿಯ ವರ್ಷಗಳಷ್ಟು ಹಳೆಯದು . ೧೪೦ ಮಿಲಿಯದ ಇತಹಾಸ ಜೇಡಗಳಿಗಿರಬಹುದೆಂದು ಒಂದು ಅಂದಾಜು ಇದೆಯಾದರೂ (Attercopus fimbriungis from Devonian period of north America) ಸಿಕ್ಕ ಕೆಲವೇ ಕೆಲವೇ ಪಳೆಯುಳಿಕೆಗಳಲ್ಲಿ ಈ ೨೦ ಮಿಲಿಯ ವರ್ಷದ ಎರಡುಬಾಲದ ಜೇಡದ ಪಳೆಯುಳಿಕೆಯೂ ಒಂದು!

ಅರೆ ಅಷ್ಟು ಹಳೆಯ ಜೇಡ, ಯುಗ ಯುಗಗಳನ್ನು ಕಂಡ ಜೇಡ ನಮ್ಮಲ್ಲಿ ಇದೆಯೇ?

ಹೌದು.

ಹೆರ್ಸೀಲಿಡೇ (Hersiliidae) ಕುಟುಂಬದ ಹೆರ್ಸೀಲಿಯಾ (Hersilia) ಪ್ರಭೇದದ ಜೇಡವೇ ಈ ಎರಡು ಬಾಲದ ಜೇಡ. ಪಳಿಉಳಿಕೆಯ ದ್ರುಷ್ಟಿಯಲ್ಲಿ ಹಳೆಯ ಜೇಡವಾದರೂ, ೧೮೨೬ರಲ್ಲಿ ಜೀನ್ ವಿಕ್ಟೋರ್ ಅಡೋಯಿನ್ ಜಗತ್ತಿಗೆ ಪರಿಚಯಿಸುವವರೆಗೆ ಇದು ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಅಂದಿನಿಂದ ಇಂದಿನವರೆಗೆ ೭೮ ಪ್ರಭೇದದ ಹೆರ್ಸೀಲಿಯಾ ಜೇಡಗಳು ಜಗತ್ತಿನಾಧ್ಯಂತ ದಾಖಲಾಗಿದೆ. ನಮ್ಮ ಭಾರತದಲ್ಲಿ ಹೆರ್ಸೀಲಿಡೇ ಕುಟುಂಬದಿಂದ ಹನ್ನೆರಡು ಪ್ರಭೇದಗಳು ದಾಖಲಾಗಿದೆಯಾದರೂ  ಹೆರ್ಸೀಲಿಯಾ ಗಣದಲ್ಲಿರುವುದು ಏಳು ಪ್ರಭೇಡಗಳು ಮಾತ್ರ. ಮಿಕ್ಕವು ಮುರ್ರಿಸಿಯ (Murricia) ಮತ್ತು ನಿಯೋಟಮ (Neotama) ಗಣದ ಜೇಡಗಳು.

ನಮ್ಮ ಗೋಡೆಗಳಲ್ಲಿ ಕಾಣಿಸುವ ಹೆಚ್ಚಿನವು ಹೆರ್ಸೀಲಿಯಾ (Hersilia) ಗಣದ ಜೇಡಗಳು. ಮರದ ಹಲಿಗೆಗಳು ಅಥವಾ ಪಕ್ಕಾಸಿನ ಮನೆಯಿದ್ದರೆ ಅಲ್ಲಿ ಮುರ್ರಿಸಿಯ (Murricia) ಗಣದ ಜೆಡಗಳು ತೀರಾ ಅಪರೂಪಕ್ಕೆ ಇರಬಹುದು.

ಹೆರ್ಸೀಲಿಯಾ ಜೇಡಗಳನ್ನು ಯಥೇಚ್ಚವಾಗಿ ನಮ್ಮ ಗೋಡೆಗಳಲ್ಲಿ ಕಾಣಬಹುದು. ಮಣ್ಣಿನ ಮನೆ,ಸಿಮೆಂಟು ಬಳಸದ ಗೋಡೆ, ಆಧುನಿಕ ಬಣ್ಣ ಹಚ್ಚದೆ ಸುಣ್ಣ ಮಾತ್ರ ಬಳಸಿರುವ ಗೋಡೆಗಳಲ್ಲಿ ಇವುಗಳ ಸಂಖ್ಯೆ ಹೆಚ್ಚು. ನಮ್ಮ ಮನೆಯ ಗೋಡೆಯನ್ನು ೨೦ ವರ್ಷಗಳ ಹಿಂದೆ ಡೆಸ್ಟೆಂಪರ್ ಬಣ್ಣದಿಂದ ಬಳಿಯಲ್ಪಟ್ಟಿತ್ತು. ಏನಿಲ್ಲವೆಂದರೂ ಇಪ್ಪತ್ತು ಅಡಿಗಳಿಗೆ ಒಂದರಂತೆ ಈ ಜೇಡಗಳಿವೆ. ಅದೇ ಪಟ್ಟಣದ ನನ್ನ ಚಿಕಿತ್ಸಾಲಯದ ಕಟ್ಟಡವು ಮೂರು ವರ್ಷಗಳ ಹಿಂದೆ ನಿರ್ಮಾಣವಾದದ್ದು. ಆಯಿಲ್ ಪೈಂಟ್, ಅಲ್ಲಿ ವಾಸಿಸುತ್ತಿರುವ ಗೋಡೆಯ ಜೇಡನ ಸಂಖ್ಯೆ ತೀರಾ ಕಡಿಮೆ. ಇತ್ತೀಚೆಗೆ ನನ್ನ ಮಗನ ಗೆಳೆಯನ ಮನೆಗೆ ಹೋಗಿದ್ದೆ. ಅವರದ್ದು ದೊಡ್ಡ ಮನೆ, ಆದರೆ ಸಿಮೆಂಟು ಬಳಸದ ಮನೆ. ಆದರ್ಶಕ್ಕೆಂದು ಮಣ್ಣಿನ ಗೋಡೆಯನ್ನೇ ಮಾಡಿದವರು. ಸುಣ್ಣವನ್ನು ಬಳಿದವರು.  ಅಲ್ಲಿ ಪ್ರತಿ ಐದು ಅಡಿಗೊಂದರಂತೆ ಈ ಹೆರ್ಸೀಲಿಯಾ ಜೇಡವನ್ನು ನಾನು ಕಂಡೆ. ಅಷ್ಟೊಂದು ಸಾಂದ್ರತೆಯಲ್ಲಿ ಕಂಡು ಆಶರ್ಯ ಪಟ್ಟು, ಅದನ್ನು ಮನೆಯ ಮಾಲಿಕರಲ್ಲಿ ಹಂಚಿಕೊಂಡೆ. ಅವರಿಗೋ, ಇನ್ನೂ ಆಶರ್ಯ. ಇಷ್ಟು ವರ್ಷಗಳಿಂದ ಇಲ್ಲೇ ವಾಸವಿದ್ದರೂ ಈ ಜೇಡಗಳೂ ಇಲ್ಲೇ  ಇದ್ದವು ಎಂದು ನಮಗೆ ತಿಳಿಯಲಿಲ್ಲವಲ್ಲ!

ಅದು ಒಂದಲ್ಲ ಎರಡಲ್ಲ, ಸಾವಿರಾರು !

ಜೇಡಗಳಷ್ಟೇ ಅಲ್ಲ. ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಜೇಡದ ಮೊಟ್ಟೆಗಳಿರುವ ಗುಚ್ಚಗಳು!

ಇಷ್ಟೆಲ್ಲಾ ಇದ್ದರೂ ಆ ಮನೆಯೊಡನಿಗೆ ಅದರ ಅರಿವಿಲ್ಲ! ಮತ್ತು ಆ ಜೇಡಗಳಿಂದ ಯಾವ ತೊಂದರೆಯೂ ಇಲ್ಲ, ಹಾಗಾಗಿ ಅದರತ್ತ ಗಮನವಿಲ್ಲ. ಅವರಿಗೇ ಅರಿವಿಲ್ಲದೆ ಆ ಜೇಡಗಳು ಎಷ್ಟೋ ಸಂಖ್ಯೆಯ ಕೀಟಗಳನ್ನು, ಇರುವೆಗಳನ್ನು ತಿಂದು ಅವರನ್ನು, ಅವರ ಮನೆಯ ಗೋಡೆಯನ್ನು ರಕ್ಷಿಸುತ್ತಿದ್ದ ಜೇಡನ ಅರಿವಿಲ್ಲ!

ಎರಡು ಬಾಲದ ಜೇಡಗಳು ( ಉಳಿದ ಜೇಡಗಳು ಕೂಡಾ) ಎಂದೂ ತಮ್ಮ ಪ್ರದರ್ಶನದಿಂದ ಅರಿವಿಗೆ ಬರುವುದಿಲ್ಲ.ಅವು ಸದಾ ತಮ್ಮ ಕೆಲಸದಿಂದಲೇ ಅರಿವಿಗೆ ಬರುವ ಜೀವಿಗಳು. ತೋರಿಕೆಯಿಂದ,ಬಡಾಯಿ ಕೊಚ್ಚುವುದರಿಂದ ಬರುವಂತ ಕೀರ್ತಿ ಶಾಶ್ವತವಲ್ಲ. ತಮ್ಮ ಕಾರ್ಯದಿಂದ ಅರಿವಿಗೆ ಬರುವುದು ತಡವಾಗಬಹುದು,ಆದರೆ ಅದು ಶಾಶ್ವತ. ಈ ಜೇಡಗಳು ನನ್ನ ಅರಿವಿಗೆ ಬರಲು ಕಾರಣವೇ ಅದರ ಕಾಯಕ. ಅದರಲ್ಲೂ ಈ ಎರಡುಬಾಲದ ಜೇಡಗಳು ನಮ್ಮ ಗೋಡೆಯ ಮತ್ತು ಮರದ ಕಾಂಡದಲ್ಲಿ ಓಡಾಡುವ ಇರುವೆಗಳನ್ನು,ಕಂಬಳಿಹುಳಗಳನ್ನು, ಕಾಂಡಕೊರಕ ದುಂಬಿಗಳನ್ನು ಹಿಡಿದು ತಿನ್ನುವ ಮೂಲಕ. ಕೀಟನಿಯಂತ್ರಣವನ್ನು ಮಾಡುವ ಮೂಲಕ, ಪರಿಸರದ ಸಮತೋಲನವನ್ನು ಕಾಪಾಡುವ ಮೂಲಕ.

ಹೀಗೆ ಪರಿಸರದ ಸಮತೋಲನವನ್ನು ಕಾಪಾಡುವ ಈ ಜೇಡಗಳು ಮೋದಲೇ ತಿಳಿಸಿದಂತೆ ಎಂದೂ ತಮ್ಮನ್ನು ತಾವು ಪ್ರದರ್ಶಿಸಿಕೊಳ್ಳುವುದಿಲ್ಲ. ಗೋಡೆಯಲ್ಲಾದರೂ ಇರಲಿ, ಮರದ ಕಾಂಡದಲ್ಲಾದರೂ ಇರಲಿ, ಅವುಗಳ ಇರುವಿಕೆ ಗೊತ್ತಾಗುವುದಿಲ್ಲ. ತಾವು ನೆಲೆಸಿರುವ ಜಾಗದ ಬಣ್ಣವೇ, ತಮ್ಮ ಮೈ ಬಣ್ಣವಾಗಿರುತ್ತದೆ. ಆ ಜಾಗದಲ್ಲಿ ಬೆರೆತು ಬಿಟ್ಟಿರುತ್ತದೆ. ಅಂಥಾ ವರ್ಣತಾದ್ರೂಪ್ಯತೆ(camouflage) .

ಗಮನವಿಟ್ಟು ನೋಡದಿದ್ದರೆ ಅವುಗಳ ಇರುವಿಕೆಯೇ ಗೊತ್ತಾಗದು. ಇಂಥಾ ವರ್ಣತಾದ್ರೂಪ್ಯತೆಯ ಕಾರಣದಿಂದಾಗಿಯೇ ಆ ಮಣ್ಣಿನ ಮನೆಯ ಒಡೆಯರಿಗೆ ಇದರ ಅರಿವಾಗಲಿಲ್ಲ. ಅವುಗಳ ಕೆಲಸ ಅಪಾರವಾದರೂ, ಕೆಲಸ ಮಾತ್ರದಿಂದ ಗಮನಕ್ಕೆ ಬರುವುದು ತಡವಾಗುತ್ತದೆ. ಅಪಾರವಾಗಿ ಹಾನಿಮಾಡುವ ಕೀಟಗಳು,ನಮ್ಮ ದೈನಂದಿನ ಜೀವನೆಕ್ಕೆ ತೊಂದರೆ ಕೊಡುವುದರಿಂದ ಪಕ್ಕನೆ ಅರಿವಿಗೆ ಬರುವುದು. ಆದರೆ ಅದೇ ಕೀಟಗಳನ್ನು ನಮಗೆ ತಿಳಿಯದಂತೆ ನಿಯಂತ್ರಣ ಮಾಡುವ ಜೇಡಗಳನ್ನು ನಾವು ಗುರುತಿಸುವುದಿಲ್ಲ. ಆದರೆ ಕೀಟನಾಶಕಗಳು ತಮ್ಮ ಪ್ರದರ್ಶನದಿಂದಾಗಿ ಮತ್ತು ಭಾರೀ ಪ್ರಮಾಣದ ಕೀಟಗಳನ್ನು ಒಮ್ಮೆಲೆ ಕೊಲ್ಲುವುದರಿಂದ,ಅವು ನಮ್ಮ ಕಣ್ಣಿಗೆ ಕಾಣುವುದರಿಂದ ಅವಕ್ಕೆ ಎಲ್ಲಿಲ್ಲದ ಮನ್ನಣೆ! ಕೀಟನಾಶಕದ ಪರಿಣಾಮಗಳ  (ದುಷ್ಪರಿಣಾಮ) ಚರ್ಚೆ ನಾನಿಲ್ಲಿ ಮಾಡುವುದಿಲ್ಲ.

ಹಾಗಾದರೆ ಪ್ರದರ್ಶನವಿಲ್ಲದೆ ಕೇವಲ ಕಾಯಕದಿಂದ ಯಾರೂ ಗುರುತಿಸಲಾರರೇ? ಕಾಯಕಯೋಗಿಗಳಿಗೆ ಗುರುತಿಸುವಿಕೆಯ ಈರ್ಷೆ ಇರುವುದಿಲ್ಲ. ತಮ್ಮ ಮಾಡಿಗೆ ತಾವು ,ಮನ್ನಣೆಯ ದಾಹವಿಲ್ಲದೆ ಕೆಲಸ ಮಾಡುತ್ತಲೇ ಇರುತ್ತಾರೆ. ಅಪರೂಪಕ್ಕೆ ಕೆಲವರಿಗೆ ಈ ಎಲೆಯಮರೆಯ ಕಾಯಿಗಳು ಕಂಡುಬಿಡುತ್ತವೆ. ಅಂತವುಗಳನ್ನು ಪರಿಚಯಿಸುವ ಅವಶ್ಯಕತೆ  ಮತ್ತು ಅಗತ್ಯ ಇದೆ.  ಹಾಗಾಗಿ ನಾನು ಕಂಡ ಸತ್ಯವನ್ನು ಅಂದು ನಾನು ಆ ಮಣ್ಣಿನ ಮನೆಯ ಮಾಲಿಕರಿಗೆ ತೋರಿಸಿದೆ. ಅವರ ಆಶ್ಚರ್ಯಕ್ಕೆ ಪಾರವೇ ಇರಲಿಲ್ಲ. ಇಷ್ಟು ವರ್ಷ ತಮಗರಿವಿಲ್ಲದೇ ತಮಗೆ ಉಪಕಾರ ಮಾಡುತ್ತಿದ್ದ ಊರ್ಣನಾಭಿಗೆ ಮನಸಲ್ಲೇ ನಮಿಸಿದ್ದರು.

ಯಾಕಿದು ಎರಡುಬಾಲದ ಜೇಡ?

ಸಾಮಾನ್ಯವಾಗಿ ಯಾವ ಜೇಡಗಳಿಗೂ ಬಾಲವಿರುವುದಿಲ್ಲ. ಈ ಜೇಡಕ್ಕೂ ಕೂಡಾ ಬಾಲವಿಲ್ಲ. ಆದರೆ ಇದರ ದೇಹದ ಹಿಂಬದಿಯಲ್ಲಿರುವ  ಆರು ತಂತುಕಗಳಲ್ಲಿ ( ಬಲೆ ಬಿಡುವ ಸ್ಥಳ) ಎರಡು ಹಿಂಬದಿಯ ತಂತುಕಗಳು ಇತರೆ ತಂತುಕಗಳಿಂದ ತೀರಾ ಉದ್ದವಾಗಿರುತ್ತದೆ (Elongated posterior lateral spinnerets) ಹಾಗಾಗಿ ಇದನ್ನು long spinneret spider ಎಂದೂ ಕರೆಯುತ್ತಾರೆ. ಈ ತಂತುಕಳು ಪಕ್ಕನೆ ಬಾಲದಂತೆ ಕಾಣುವುದರಿಂದ ಇದನ್ನು Two-tailed spider(ಎರಡು ಬಾಲದ ಜೇಡ) ಎನ್ನುವರು. ಉದ್ದನೆಯ ತಂತುಕದ ಒಳಮೈಯಲ್ಲಿ ಹಣಿಗೆಯ ರೀತಿ ಇರುತ್ತದೆ.

Hersilia leg with web attached

ಎಂಟು ಕಾಲುಗಳ ಈ ಜೇಡಕ್ಕೆ ಮೂರನೇ ಜೊತೆಯ ಕಾಲುಗಳು ಉಳಿದವಕ್ಕಿಂತ ತುಂಬಾ ಕಿರಿದಾಗಿರುತ್ತದೆ. ಬಹುಷಃ ಸೆರೆಸಿಕ್ಕ ಬೇಟೆಯನ್ನು ತನ್ನ ಬಲೆಯನೂಲಲ್ಲಿ ಸುರುಳಲು ಇದನ್ನು ಬಳಸಬಹುದು. ಉಳಿದ ಆರು ಕಾಲುಗಳು ಗೋಡೆಗೆ/ಕಾಂಡಕ್ಕೆ ಚಾಚಿರುತ್ತದೆ. ಪ್ರತಿ ಕಾಲಿನ ತುದಿಯಲ್ಲಿ ಬಲೆಯ ಎಳೆ ಇರುತ್ತದೆ. ಆ ಬಲೆಯ ಎಳೆಯು ಗೋಡೆಯಲ್ಲಿ/ಕಾಂಡದಲ್ಲಿ ಸುತ್ತುವರಿದಿರುತ್ತದೆ. ಯಾವುದೇ ಬೇಟೆಯು ಬಲೆಯ ಎಳೆಯ ಸಂಪರ್ಕಕ್ಕೆ ಬಂದರೆ ಸಾಕು ,ಜೇಡಕ್ಕೆ ಅದರ ಚಲನೆಯು ತಿಳಿದುಬಿಡುತ್ತದೆ (ಈ ಬಲೆಯನ್ನು Silk trapline ಎನ್ನುತ್ತಾರೆ).ಕೂಡಲೇ ಬೇಟೆಯತ್ತ ಬಂದು ತನ್ನ ತಂತುಕಗಳಿಂದ ಬಲೆಯನ್ನು ಬಿಟ್ಟು, ಆ ಬೇಟೆಯನ್ನು ಸುರುಳಿಸುತ್ತುತ್ತದೆ. ಈ ಜೇಡವು ಇತರೆ ಜೇಡಗಳಂತೆ ಬೇಟೆಯನ್ನು ಕಾಲಲ್ಲಿ ಹಿಡಿಯದೆ, ಬೇಟೆಯ ಸುತ್ತ ಬಲೆ ಬಿಟ್ಟುಕೊಂಡು ತಿರುಗಿ ಅದನ್ನು ನಿಶ್ಚಲಗೊಳಿಸುತ್ತದೆ.

Hersilia feeding ant

ಎಂಟು ಕಣ್ಣುಗಳು, ನಾಲ್ಕು ಕಣ್ಣುಗಳು ದೊಡ್ಡದಿದ್ದು ಉಳಿದವು ಸಣ್ಣವು. ಕಣ್ಣಿನ ಸುತ್ತ ಕಪ್ಪು/ ಮಾಸಲು ಬಣ್ಣ. ಈ ಬಣ್ಣ ಕಣ್ಣಿನ ಹೊಳಪನ್ನು ಕಡಿಮೆ ಮಾಡಲು ಅನುಕೂಲ ಮಾಡುತ್ತದೆ. ಹಕ್ಕಿ/ ಇತರೆ ದೊಡ್ಡ ಜೇಡದ ಕಣ್ಣಿಗೆ ಬೀಳದಂತೆ ಕಣ್ಪಟ್ಟಿ ಸಹಾಯ ಮಾಡುತ್ತದೆ. ಈ ಚಿತ್ರದಲ್ಲಿ ನೀವು ಬೇಟೆಗಾರ ಜೇಡ ಮತ್ತು ಎರಡು ಬಾಲದ ಜೇಡವನ್ನು ಒಟ್ಟಿಗೆ ಕಾಣಬಹುದು. ಎರಡುಬಾಲದ ಜೇಡವು ಬೇರೆಯಕ್ಕೆ ಆಹಾರವಾಗುವುದು ತುಂಬಾ ಅಪರೂಪ. Phaeacius ಎಂಬ ಜಿಗಿಯುವ ಜೇಡ ಇವನ್ನು ಹಿಡಿದು ತಿಂದದನ್ನು ನಾನು ಒಮ್ಮೆ ದಾಖಲಿಸಿರುವೆ.

Hersilia eye pattern

ಬೇಟೆಗಾರ ಜೇಡ ಮತ್ತು ಎರಡು ಬಾಲದ ಜೇಡ

ಸಂತಾನ:

ಗಂಡು ಮತ್ತು ಹೆಣಿನ ನಡುವೆ ಹೆಚ್ಚಿನ ವೆತ್ಯಾಸವಿಲ್ಲ. ಹೆಣ್ಣಿಗಿಂತ ಗಾತ್ರದಲ್ಲಿ ತೆಳ್ಳಗಿರುತ್ತದೆ. ತೆಳ್ಳಗಿನ ಮೈಕಟ್ಟಿನಿಂದ ಚುರುಕು ಜಾಸ್ತಿ. ಎಲ್ಲಾ ಜೇಡಗಳಂತೆ ಗಂಡಿನ ಪೆಡಿಪಾಲ್ಪ್ ಬಲ್ಬಿನಂತಿರುತ್ತದೆ.

Hersilia mating

Hersilia with egg case

ಹೆಣ್ಣು ಜೇಡ, ಮೊಟ್ಟೆಗಳ ಗುಚ್ಚವನ್ನೇ ಮಾಡುತ್ತದೆ. ಎಂಥಾ ಹವಾಮಾನ ವೈಪರೀತ್ಯಕ್ಕೂ ಮೊಟ್ಟೆಗಳಿಗೆ ಯಾವ ಹಾನಿಯೂ ಸಂಭವಿಸದಂತ ಬಲೆಯ ಲೇಪವನ್ನು ಮೊಟ್ಟೆಯ ಮೇಲೆ ಮಾಡುತ್ತದೆ. ಆ ಲೇಪಕ್ಕೆ ನೀರನ್ನು ಮತ್ತು ಗಾಳಿಯನ್ನು ತಡೆಯುವ ಗುಣ ಹೊಂದಿದೆ. ತಿಂಗಳಿಗೊಂದು ಮೊಟ್ಟೆಯ ಗುಚ್ಚ ಇಡುವುದನ್ನು ನಾನು ದಾಖಲಿಸಿದ್ದೇನೆ. ಒಂದೊಂದು ಗುಚ್ಚದಲ್ಲಿ ೩೦ ರಿಂದ ೫೦ ಮರಿಗಳು. ಕೆಲದಿನಗಳನ್ನು ಅಮ್ಮನ ಆಸರೆಯಲ್ಲಿ ಕಳೆದು ಸ್ವತಂತ್ರವಾಗುತ್ತವೆ.

ಮುಂದಿನ ಸಂಚಿಕೆಯಲ್ಲಿ ಇನ್ನಷ್ಟು.

Facebook ಕಾಮೆಂಟ್ಸ್

ಲೇಖಕರ ಕುರಿತು

Dr. Abhijith A P C

ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!