ಜೇಡನ ಜಾಡು ಹಿಡಿದು..

ಗೋಡೆಯ ಮೇಲಿನ ಜಿಗಿಯುವ ಜೇಡಗಳು

ನೀವಿಷ್ಟು ದಿನ ಓದಿದ /ನೋಡಿದ ಜೇಡಗಳಿಗಿಂತ ಭಿನ್ನ ಜೇಡಗಳನ್ನು ನಾನು ಈ ಕಂತಿನಲ್ಲಿ ಪರಿಚಯಿಸುವೆ. ಈ ಜೇಡಗಳನ್ನು ಕೂಡಾ ನೀವು ನಿಮ್ಮ ಮನೆಯ ಗೋಡೆಯಲ್ಲೇ ನೋಡಬಹುದು.

ಇವು ಜೇಡಪ್ರಪಂಚದಲ್ಲಿ ಕಾಣಸಿಗುವ ಅತಿ ಚುರುಕಿನ ಮತ್ತು ಬುದ್ದಿವಂತಿಕೆಯ ಜೇಡಗಳಲ್ಲಿ ಒಂದು.ನಡೆಯುವುದಕ್ಕಿಂತ ಜಿಗಿಯುವುದೇ ಜಾಸ್ತಿ. ಹಾಗಾಗಿ ಇವಕ್ಕೆ ಹೆಸರೇ ಜಿಗಿಯುವ ಜೇಡಗಳು (jumping spider).  ಜೇಡ ಪ್ರಪಂಚದಲ್ಲಿ ಇದುವರೆಗೆ ಒಟ್ಟು ನೂರಇಪ್ಪತ್ತು ಕುಟುಂಬಗಳನ್ನು ಪತ್ತೆ ಹಚ್ಚಿದ್ದಾರೆ. ಅಷ್ಟೂ ಕುಟುಂಬಗಳನ್ನು ಅವುಗಳ ಕಣ್ಣಿನ ರಚನೆ ಮತ್ತು ಜೋಡಣೆಯ ವ್ಯತ್ಯಯದಿಂದ ಮತ್ತು ಜನನಾಂಗದ ವಿಭಿನ್ನತೆಯಿಂದ ಗುರುತಿಸಲಾಗುವುದು. ಈ ೧೨೦ ಕುಟುಂಬದಿಂದ ಒಟ್ಟು ೪೮೦೦೦ ಪ್ರಭೇದದ ಜೇಡಗಳನ್ನು ಇದುವರೆಗೆ ದಾಖಲಿಸಿರುತ್ತಾರೆ. ಇಷ್ಟೂ ಕುಟುಂಬಗಳಲ್ಲಿ ಪ್ರಮುಖ ಸ್ಥಾನ ಜಿಗಿಯುವ ಜೇಡಗಳಿಗೆ. ಸಾಲ್ಟಿಸಿಡೇ (Salticidae) ಎಂಬ ಕುಟುಂಬಕ್ಕೆ ಸೇರಿದ ಜೇಡಗಳಿವು. ೬೦೦೦ಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಈ ಕುಟುಂಬ, ಜೇಡ ಲೋಕದ ಅಗ್ರಜ. ಮಿಕ್ಕೆಲ್ಲಾ ಕುಟುಂಬಗಳಿಗಿಂತ ಅಧಿಕ ಸದಸ್ಯರನ್ನು ಹೊಂದಿರುವ ಹೆಗ್ಗಳಿಕೆ. ೨೦೧೯ರೊಂದರಲ್ಲೇ ೬೦೦ ಸದಸ್ಯರು ಈ ಕುಟುಂಬಕ್ಕೆ ಸೇರ್ಪಡೆಯಾಗಿದಾರೆ ಎಂದರೆ ಇದರ ಸಾಂದ್ರತೆಯನ್ನು ಊಹಿಸಿ. ನಮ್ಮ ಮನೆಯ ಗೋಡೆಗಳಲ್ಲೇ ಏನಿಲ್ಲವೆಂದರು ಇಪ್ಪತ್ತು ಪ್ರಭೇದದ ಜಿಗಿಯುವ ಜೇಡಗಳನ್ನು ಕಾಣಬಹುದಾದರೂ, ಸಾಮಾನ್ಯವಾಗಿ ಕಾಣುವ ನಾಲ್ಕು ಜಿಗಿಯುವ ಜೇಡಗಳನ್ನು ಮಾತ್ರ ನಾನು ಈ ಅಂಕಣಕ್ಕೆ ಸೀಮಿತಗೊಳಿಸುವೆ.
ಅವುಗಳೆಂದರೆ
೧.Plexippus paykulli
೨.Plexippus petersi
೩.Hasarius adansoni,
೪.Menemerus
Plexippus paykulli ಮತ್ತು Plexippus petersi


ಈ ಜಿಗಿಯುವ ಜೇಡವು ನನಗೆ ನನ್ನ ಬಾಲ್ಯದಿಂದಲೇ ಪರಿಚಿತ. ಚಿಕ್ಕವನಾಗಿದ್ದಾಗ ಬೇಸಿಗೆ ರಜೆಯಲ್ಲಿ ಪ್ರತಿವರ್ಷ ನಾನು ಪುತ್ತೂರಿಗೆ ಹೋಗುತ್ತಿದ್ದೆ. ರಜೆ ಪೂರ್ತಿ ಸಂಭದಿಕರ ಮನೆಗಳಿಗೆ ತಿರುಗುವುದೆಂದರೆ ಸಂಭ್ರಮವೋ ಸಂಭ್ರಮ. ನಾನೋ ನನ್ನ ಅಪ್ಪನೊಂದಿಗೆ ಬಾಲ್ಯದಿಂದಲೂ ಕೃಷಿಯಲ್ಲಿ ತೊಡಗಿದವನು, ನಮ್ಮ ತೋಟದ ಕಾರ್ಮಿಕರೊಂದಿಗೆ ಬೆರೆತವನು.ರಜೆಯಲ್ಲಿ ಊರಿಗೆ ಹೋದಾಗಲೂ ಅಲ್ಲಿನ ಕೃಷಿ ಕಾರ್ಮಿರೊಂದಿಗೆ ಬೆರೆಯುತ್ತಿದ್ದೆ. ಅವರೊಂದಿಗೆ ಅಡಿಕೆ ಸುಲಿಯುತ್ತಿದ್ದೆ. ನನ್ನ ಕೈ ಬೆರಳಿಗೆ ಅಡಿಕೆ ಸುಲಿಯುವಾಗ ಪೆಟ್ಟಾಯಿತು. ನೆತ್ತರು ಸುರಿಯಿತು. ನನ್ನ ಚಿಕ್ಕಪ್ಪನ ಬಲಗೈ ಕಾರ್ಮಿಕ ಅಂಗಾರ, ಅಡಿಕೆ ಸಲಿಕೆಯ ಎಡೆಯಲ್ಲಿ ಹತ್ತಿಯ ಮುದ್ದೆಯಂತಿದ್ದ ಜೇಡನ ಬಲೆಯನ್ನು/ಗೂಡನ್ನು ತೆಗೆದು ನನ್ನ ಕೈ ಬೆರಳಿಗೆ ಇರಿಸಿದ. ಹರಿಯುತ್ತಿದ್ದ ನೆತ್ತರು,ಹಾಗೆ ಹೆಪ್ಪುಗಟ್ಟಿತು. ನನ್ನ ಪ್ರಾಯ ಆಶ್ಚರ್ಯ ವ್ಯಕ್ತಪಡಿಸುವದ್ದಾಗಿರಲಿಲ್ಲ,ಹಾಗಾಗಿ ಅಂತಾ ಪುಳಕಿತನೂ ಆಗಿರಲಿಲ್ಲ. ಬಹುಶಃ ಅಂದು ಅಂಗಾರ ನನ್ನ ಮನದಲ್ಲಿ ಬಲೆಂಗಾರನ (ತುಳುವಿನಲ್ಲಿ ಜೇಡಕ್ಕೆ ಬಲೆಂಗಾರ ಎನ್ನುವರು)ಬೀಜ ಬಿತ್ತಿದ್ದ. ಇಂದು ನನ್ನ ಜೇಡಾಸಕ್ತಿ ಮರವಾಗಿ ಫಲಕೊಡುತ್ತಿದೆ.

 

ವಿಜ್ಞಾನ ಮುಂದುವರಿದಂತೆ,ಪಾರಂಪರಿಕ ಜ್ಞಾನ ಮಾಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ. ಅದಕ್ಕೆ ನಾನೂ ಹೊರತಲ್ಲ. ರಕ್ತ ಸುರುಯುವ ಗಾಯಕ್ಕೆ ಜೇಡನ ಬಲೆ ಮದ್ದೆಂದು ತಿಳಿದರೂ,ನಾನದರ ಉಪಯೋಗ ಪಡೆದರೂ ಮತ್ತೆ ಮತ್ತೆ ತಾಗಿಸಿಕೊಂಡಾಗ,ರಕ್ತ ಸುರಿದಾಗ ನನಗೆ ಅದರ ನೆನಪಾಗಲೇ ಇಲ್ಲ. ಏಳು ವರ್ಷಗಳ ಹಿಂದೆ ಪುತ್ತೂರಿನಿಂದ ನಮ್ಮ ಮೈಸೂರಿನ ತೋಟಕ್ಕೆ ನವೀನನೆಂಬ ಕಾರ್ಮಿಕ ಬಂದಿದ್ದ. ಎರಡು ವರ್ಷ ನಮ್ಮೊಂದಿಗಿದ್ದ. ಅವನು ಕೆಲಸ ಮಾಡುವಾಗ ಆಗುತ್ತಿದ್ದ ಗಾಯಕ್ಕೆ ಜೇಡನ ಬಲೆಯನ್ನೇ ಬಳಸುತ್ತಿದ್ದ. ನನಗೆ ಮತ್ತೆ ಆ ಜೇಡದ ಬಲೆಯನ್ನು ನೆನಪಿಸಿದ. ಅಂಗಾರ ಬಿತ್ತಿದ ಬೀಜವನ್ನು ಪೋಷಿಸಿದ. ಅಷ್ಟೇ ಅಲ್ಲದೆ ನಮ್ಮ ತೋಟದ ಎಲ್ಲಾ ಕಾರ್ಮಿಕರಿಗೂ ಬಲೆಯ ಮಹತ್ತ್ವವನ್ನು ಪರಿಚಯಿಸಿದ. ನನಗೂ ಪ್ರಾಯ ಮೂವತ್ತಾಗಿತ್ತು. ಆಶ್ಚರ್ಯ ವ್ಯಕ್ತವಾಗಿತ್ತು. ಕುತೂಹಲ ಜಾಸ್ತಿಯಾಯಿತು. ಬಲೆಯ ಬೆಲೆ ಗೊತ್ತಾಯಿತು.

ಮುಂದೆ ಈ ಬಲೆಯ ಉಪಯೋಗ ಅದೆಷ್ಟೋ ಸಲ ಪಡೆದಿದ್ದೆ. ಆದರೆ ಪ್ರತಿ ಸಲ ಕೀಳುವಾಗಲೂ ಆ ಬಲೆಯ ಒಳಗೆ ಯಾವ ಜೇಡನೂ ಇರುತ್ತಿರಲಿಲ್ಲ. ಮನೆಯ ಗೋಡೆಯಲ್ಲಿದ್ದ ಎಲ್ಲಾ ಹತ್ತಿ ಉಂಡೆಯ ತರಹದ ಜೇಡನ ಬಲೆಯನ್ನು ಪರೀಕ್ಷಿಸಿದೆ. ಹತ್ತರಲ್ಲಿ ಒಂದು ಬಲೆಯೊಳಗಿಂದ ಮರಿಗಳು ಅಥವಾ ಹೆಣ್ಣು/ಗಂಡು ಜೇಡ ಹೊರಬರುತ್ತಿತ್ತು. ಈ ಜೇಡಗಳು ಸಂತಾನೋತ್ಪತ್ತಿ ಮಾಡಿಯಾದಮೇಲೂ ಅದರ ಬಲೆ/ಗೂಡು ಕೆಲವು ವರ್ಷ ಹಾಗೆಯೇ ಇರುತ್ತದೆ. ನಾವುಗಳು ಅದನ್ನು ಸ್ವಚ್ಚಗೊಳಿಸುವ ತನಕವೂ ಅಲ್ಲೇ ಅಂಟಿರುತ್ತದೆ. ಹಾಗೆ ನೋಡಿದರೆ ನಮ್ಮ ಗಾಯದ ಔಷಧಿ ಸದಾ ನಮ್ಮನೆ ಗೋಡೆಯಲ್ಲಿ ಅಂಟಿರುತ್ತದೆ! ಈ ರೀತಿಯಾಗಿ ನಮ್ಮನೆ ಗೋಡೆಯಲ್ಲಿ ಹತ್ತಿಯ ಉಂಡೆಯನ್ನು ಅಂಟಿಸುವ ಜೇಡನೇ Plexippus paykulli ಮತ್ತು Plexippus petersi .

ಈ ಪ್ಲೆಕ್ಸಿಪಸ್ ಗಣದ ಜೇಡಗಳು ಪ್ರಪಂಚದಾದ್ಯಂತ ಉಷ್ಣವಲಯದಲ್ಲಿ ಕಾಣಸಿಗುವ ಬಲು ಸಾಮಾನ್ಯ ಜೇಡ . ಹಾಗಾಗಿ ಇದನ್ನು pantropical jumping spider ಎಂದು ಕರೆಯುವರು. ನಾವಿದನ್ನು ಉಷ್ಣವಲಯದ ಜಿಗಿಯುವ ಜೇಡ ಎನ್ನಬಹುದು,ಅಥವಾ ಹೆಸರು ಬಲು ಉದ್ದವಾದ್ದರಿಂದ ಪ್ಲೆಕ್ಸಿಪಸ್ ಎಂದೇ ಕರೆಯೋಣ.

ಮೇಲೆ ತಿಳಿಸಿದ ಎರಡೂ ಪ್ಲೆಕ್ಸಿಪಸ್ ಗಣಗಳು ಕಾಣಲು ಪಕ್ಕನೆ ಒಂದೇ ತರ ಕಾಣುತ್ತದೆ. ಇವುಗಳ ಹೆಣ್ಣನ್ನು ಬೇರ್ಪಡಿಸಲು ಸಾಧ್ಯವೇ ಇಲ್ಲ. ಗಂಡಿನ ಜೊತೆ ಹೆಣ್ಣು ಕಾಣಿಸಿಕೊಂಡಾಗ ಮಾತ್ರ ಅದು ಯಾವ ಗಣದ ಹೆಣ್ಣು ಎಂದು ಪತ್ತೆ ಹಚ್ಚಬಹುದು. ಅಥವಾ ಹೆಣ್ಣನ್ನು ಹಿಡಿದು ಅದರ ಜನನಾಂಗವನ್ನು ಪರಿಶೀಲಿಸಿದರೆ ಅದರ ಪ್ರಭೇದ ಪತ್ತೆ ಹಚ್ಚಬಹುದು. ಎಂದರೆ ಪ್ಲೆಕ್ಸಿಪಸ್ ಪಾಯಕುಲಿ ಮತ್ತು ಪ್ಲೆಕಿಪಸ್ ಪೆಟರ್ಸಿ ಗಂಡು ಜೇಡಗಳು ನೋಡಲು ಭಿನ್ನವಾಗಿರುತ್ತದೆ. ನಮ್ಮ ಮನೆಯ ಗೋಡೆಯ ಅಧಿಪತ್ಯಕ್ಕೆ ಇವುಗಳ ಜಗಳ ನಿರಂತರ.

plexipus-paikuli-female

plexipus-paikuli-female

ಪಯಕುಲಿ ಮತ್ತು ಪೆಟಾರ್ಸಿ ಎರಡಕ್ಕೂ ತಲೆಯ ಬಾಗ ಉದ್ದಗಿರುತ್ತದೆ. ಪಯಕುಕಿಯ ಗಂಡಿಗೆ ತಲೆ ಕಪ್ಪಗಿದ್ದು ಮಧ್ಯೆ ಬಿಳಿಯ ಪಟ್ಟಿ ಇರುತ್ತದೆ ಮತ್ತು ಇದು ಹೊಟ್ಟೆಯ ಭಾಗದವರೆಗೂ ಮುಂದುವರಿಯುತ್ತದೆ. ಅಲ್ಲದೆ ಕಣ್ಣಿನ ಮೇಲ್ಬಾಗದಲ್ಲಿ ಕೆಂಪು ಪಟ್ಟಿ ಇದ್ದು ಅದರ ಪಕ್ಕದಲ್ಲಿ ಬಿಳಿಯ ಪಟ್ಟಿ ಇರುತ್ತದೆ.ಈ ಪಟ್ಟಿಯು ಜೇಡದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಪೆಟಾರ್ಸಿಯ ಗಂಡಿನಲ್ಲಿ ದೇಹದ ಕಪ್ಪು ಪಟ್ಟಿಗಳು ಬಹಳ ಘಾಡವಾಗಿರುತ್ತದೆ ಮತ್ತು ಕಣ್ಣಿನ ಮೇಲಿನ ಕೆಂಪುಪಟ್ಟಿಗಳು ಇರುವುದಿಲ್ಲ. ಕಣ್ಣಿನ ಕೆಳಗೆ ತೆಳ್ಳಗಿನ ಪಟ್ಟಿ ಇದರ ಚಂದವನ್ನು ಹೆಚ್ಚಿಸುವುದು.
ಎರಡರ ಹೆಣ್ಣುಜೇಡಗಳೂ ಒಂದೇ ತರಹ ಇರುವುದರಿಂದ ಗಂಡು ಜೇಡ ಹೇಗೆ ತಮ್ಮ ಪ್ರಭೇದದ ಹೆಣ್ಣನ್ನು ಗುರುತಿಸುತ್ತವೆ ಎಂಬುದೇ ಒಂದು ವಿಸ್ಮಯ. ಬರಿಗಣ್ಣಿಗೆ ತಿಳಿಯದ, ಫೆರಮೋನ್ ಅಥವಾ ಹಾರ್ಮೋನಿನ ಚಮತ್ಕಾರಗಳ ಬಗೆಗೆ ಇನ್ನೂ ಅಧ್ಯಯನಗಳು ಆಗಬೇಕಿದೆ.

ಹಾಂ.. ಈ ಜೇಡನ ಕಣ್ಣಿನ ಬಗೆಗೆ ನಾನೇನೂ ಬರೆಯಬೇಕಾಗಿಲ್ಲ. ಇದರ ಚಿತ್ರವೇ ನನ್ನ ವಿವರಣೆಯ ಸಾಲನ್ನು ಉಳಿಸುತ್ತದೆ. ಆದರೂ ಹೇಳುವುದಾದರೆ ಮಧ್ಯದಲ್ಲಿರುವ ದೊಡ್ಡ ಕಣ್ಣುಗಳು ಇವುಗಳ ದ್ರುಷ್ಟಿಗಿರುವ ಮುಖ್ಯಕಣ್ಣುಗಳು. ಪಕ್ಕದಲ್ಲಿರುವ ಇನ್ನೆರಡು ಕಣ್ಣುಗಳು ಬೆಳಕನ್ನು ಗ್ರಹಿಸಲು ಅನವು ಮಾಡುತ್ತದೆ. ಹಿಂಬದಿಯ ಕಣ್ಣುಗಳ ಅಗತ್ಯತೆಯ ಬಗೆಗೆ ಇನ್ನೂ ಯಾರಿಗೂ ತಿಳಿದಿಲ್ಲ. ಉದ್ದೇಶವಿಲ್ಲದೆ ಯಾವ ಸ್ರುಷ್ಟಿಯೂ ಇಲ್ಲ. ಹಾಗಾಗಿ ಇದರ ಬಗೆಗೆ ಅಧ್ಯಯನಗಳು ನಿರಂತರ ಸಾಗುತ್ತಲೇ ಇದೆ. ಕಣ್ಣುಗಳು ಹೇಗೆ ಈ ಜೇಡಗಳಲ್ಲಿ ಕೆಲಸ ಮಾಡುತ್ತವೆ ಎಂದು ಹೇಳಹೊರಟರೆ ಅದುವೇ ಒಂದು ಅಧ್ಯಾಯವಾಗಿಬಿಡಿತ್ತದೆ. ಅದು ಇನ್ನೊಂದು ದಿನ ವಿವರಿಸುವೆ.

ಈ ಎರಡೂ ಪ್ಲೆಕ್ಸಿಪಸ್ಸುಗಳು ಗೋಡೇಯಲ್ಲಿ, ಸಂದುಗಳಲ್ಲಿ, ಬಿಳಿಯ ಹತ್ತಿಯ ಉಂಡೆಯ ತರಹದ ಗೂಡನ್ನು ಮಾಡುತ್ತವೆ, ಈ ಗೂಡು ಮೊಟ್ಟೆಗಳಿಗೆ ಮತ್ತು ಅದರಿಂದ ಹೊರಬರುವ ಮರಿಗಳಿಗೆ ಹಾಸಿಗೆಯ ಕೆಲಸವನ್ನು ಮಾಡುತ್ತದೆ. ಸಂತಾನೋತಪತ್ತಿಯ ಬಳಿಕ ಅದೇ ಗೂಡು ನಮ್ಮ ಗಾಯಕ್ಕೆ ಔಷಧಿಯಾಗುತ್ತದೆ. ಈ ಗೂಡಿಗೆ ಸೋಂಕು ನಿವಾರಕ ಗುಣವಿದೆ ಎಂದು ಎಲ್ಲಾ ಅದ್ಯಯನಗಳಿಂದ ಖಚಿತಗೊಂಡಿದೆ, ಇದು ಆಂಟೀ ವೈರಲ್(Antiviral) ಮತು ಆಂಟಿ ಬ್ಯಾಕ್ಟೀರಿಯಲ್ (Antibacterial) ಗುಣ ಹೊಂದಿದೆ, ಅಷ್ಟೇ ಅಲ್ಲದೆ ಕೊವಾಗುಲೆಂಟ್(coagulant) , ಅಂದರೆ ರಕ್ತ ಹೆಪ್ಪು ಗೊಳಿಸುವ ಗುಣವನ್ನೂ ಹೊಂದಿದೆ. ಇದರ ಮೇಲೆ ಇನ್ನೂ ಅಧ್ಯಯನಗಳು ಆಗುತ್ತಿದೆಯಲ್ಲದೆ, ಮುಂದೊಂದು ದಿನ ಪ್ಲ್ಯಾಸ್ಟಿಕ್ ಸರ್ಜರಿಗೂ ಜೇಡನ ಬಲೆಯನ್ನೇ ಬಳಸುವ ದಿನ ಬರಲಿದೆ. ಇಂಥಾ ಮಹತ್ತ್ವದ ಜೇಡನ ಬಲೆಯ ಬಳಕೆ ನಮ್ಮ ಪಾರಂಪರಿಕ ಜ್ನಾನದಿಂದ ಅಭಿವೃದ್ಧಿಯ ಕಾರಣದಿಂದಲೇ ಹೊರಬಂದು ಮತ್ತೆ ಅದೇ ಅಭಿವೃದ್ಧಿಯ ಕಾರಣಕ್ಕಾಗಿ ಚಾಲ್ತಿಗೆ ಬರುತ್ತಿದೆ.

ಎಲ್ಲಾ ಜೇಡಗಳಂತೆ ಈ ಜೇಡವೂ ಕೀಟಾಹಾರಿಯೇ. ಆದರೆ ಈ ಜೇಡಗಳಿಗೆ ನೊಣ ಮತ್ತು ವಿಶೇಷವಾಗಿ ಸೊಳ್ಳೆಗಳೆಂದರೆ ಬಲು ಪ್ರೀತಿ, ಸೊಳ್ಳೆಗಳನ್ನು ಕೊಲ್ಲುವ ಯಾವ ಜೀವೆಗಳೇ ಆದರೂ ಅದರತ್ತ ಮಾನವನಿಗೆ ಪ್ರೀತಿ ಅನಿವಾರ್ಯ. ಹಾಗಾಗಿ ಈ ಜೇಡಕ್ಕೂ ನಮ್ಮ ಮನಸ್ಸಿನಲ್ಲೊಂದು ವಿಶೇಷ ಸ್ಥಾನವನ್ನಿಡೋಣ.

ಸಂತಾನೋತ್ಪತ್ತಿ
ಗಂಡು ಜೇಡ ಹೆಣ್ಣನ್ನು ಆಕರ್ಷಿಸಲು ಬಲು ಕಷ್ಟಪಡುತ್ತದೆ. ಗಂಟೆಗಟ್ಟಲೆ ಹೆಣ್ಣನ್ನು ಹಿಂಬಾಲಿಸಿ ಅದರ ಚಿತ್ತವನ್ನು ಸೆಳೆಯುವ ಪ್ರಯತ್ನ ಮಾಡುತ್ತದೆ. ಗಂಡಿಗೆ ಇಲ್ಲಿ ಪೈಪೋಟಿ ಇರುತ್ತದೆ. ಯಾವ ಗಂಡು ಗಮನ ಸೆಳೆಯುತ್ತದೋ ಅದು ಹೆಣ್ಣಿನೆದುರು ನೃತ್ಯ ಮಾಡುತ್ತದೆ. ನೃತ್ಯ ಇಷ್ಟವಾದರೆ ಹೆಣ್ಣು ಗಂಡಿನೊಂದಿಗೆ ಮಿಲನವಾಗುತ್ತದೆ. ಗಂಡು ಜೇಡ ಕೆಲವೊಮ್ಮೆ ದಿನಗಟ್ಟಲೆ ಹೆಣ್ಣಿನ ಮನೆಗೆ ಅಂಟಿಕೊಂಡಂತೇ ಮನೆಮಾಡಿ ಕಾಯುವುದುಂಟು. ಎಲ್ಲಿ ಬೇರೆ ಗಂಡು ಜೇಡ ಬಂದು ತನ್ನಾಕೆಯನ್ನು ಆಕರ್ಷಿಸಿಬಿಟ್ಟೀತೋ ಎಂಬ ಆತಂಕ!


ಹೆಣ್ಣು ಒಮ್ಮೆಗೆ ೫೦ ರಿಂದ ೬೦ ಮೊಟ್ಟೆಯನ್ನಿಟ್ಟು ತಿಂಗಳಕಾಲ ಆ ಮೊಟ್ಟೆಯೊಂದಿಗೇ ಬಲೆಯೊಳಗೆ ಅವಿತಿರುತ್ತದೆ. ತಿಂಗಳ ಬಳಿಕ ಮರಿಗಳ ಆಗಮನ. ಪ್ಲೆಕ್ಸಿಪಸ್ ಪೆಟಾರ್ಸಿ ಮನೆಯ ಗೋಡೆಯಲ್ಲೇ ಬಹುತೇಕ ವಾಸ, ಆದರೆ ಪ್ಲೆಕ್ಸಿಪಸ್ ಪಾಯಕುಲಿ ಗೋಡೆಯನ್ನು ಬಿಟ್ಟು, ಮರದ ತೊಗಟೆಯಲ್ಲಿ, ನೆಲದಲ್ಲೂ ವಾಸಿಸುತ್ತದೆ.

plexipus-eggsac

ಉಳಿದ ಇನ್ನೆರಡು ಜೇಡಗಳ ಕುರಿತಾದ ನನ್ನ ಅನುಭವಗಳನ್ನು ಮುಂದಿನ ಸಂಚಿಕೆಯಲ್ಲಿ ತಿಳಿಸುವೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Dr. Abhijith A P C

ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!