ಚಾವಣಿಜೇಡದ ಬಗೆಗೆ ನೀವು ನನ್ನ ಮೊದಲ ಅಂಕಣದಲ್ಲೇ ಓದಿ ತಿಳಿದಿರುವಿರಿ (https://kannada.readoo.in/2020/03/cellar-spiders-1) . ಹಾಗಾದರೆ ಮನೆಯೊಳಗೆ ನಾವು ಶುಚಿಗೊಳಿಸುವ ಬಲೆ ಚಾವಣಿ ಜೇಡದ್ದು ಮಾತ್ರವೇ?
ನಮ್ಮ ಮನೆಯಲ್ಲಿನ ಹೆಚ್ಚಿನ ಬಲೆಗಳ ಒಡೆಯ ಚಾವಣಿ ಜೇಡವೇ. ಅದರೂ ಅಲ್ಲಲ್ಲಿ ಕೆಲವು ಬಲೆಗಳ ವಾರಸುದಾರಿಕೆ ಉಳಿದ ಜೇಡಗಳದ್ದಾಗಿದೆ.
ಅವುಗಳೆಂದರೆ
೧. ಉಬ್ಬು ಜೇಡ (Zosis )
೨. ಮನೆ ಜೇಡ (Parasteatoda)
೩. ಡೇರೆ ಜೇಡ (Cyrtophora)
ಈ ಮೇಲಿನ ಜೇಡಗಳಲ್ಲದೆ ಇನ್ನೂ ಕೆಲವು ಜೇಡಗಳು ಅವರವರ ಮನೆಯ ಶುಚಿತ್ವದ ಸಾಮರ್ಥ್ಯಕ್ಕೆ ಅನುಸಾರ ಮತ್ತು ಆಯಾಯ ಪ್ರದೇಶಕ್ಕಾನುಸಾರ ಇರಬಹುದು. ಇದಲ್ಲದೆ ಕೆಲವು ಜಿಗಿಯುವ ಜೇಡಗಳು ನಮ್ಮನೆಯೊಳಗಿರುತ್ತದೆ. ಆದರೆ ಈ ಜಿಗಿಯುವ ಜೇಡಗಳು ಮನೆಯೊಳಗೆಗಿಂತ ಹೆಚ್ಚಗಿ ಮನೆಯ ಹೊರಗಿನ ಗೋಡೆಯಲ್ಲಿ ಕಾಣಸಿಗುವ ಕಾರಣ ನಾನು ಅವುಗಳನ್ನು ಈ ಅಂಕಣದ ವ್ಯಾಪ್ತಿಗೆ ಒಳಪಡಿಸುತ್ತಿಲ್ಲ. ಅವನ್ನು ಮುಂದಿನ ಕಂತಿಗೆ ಮೀಸಲಿಡುತ್ತಿದ್ದೇನೆ.
೧. ಉಬ್ಬು ಜೇಡ (Zosis )
ನನ್ನ ಚಿಕ್ಕಪ್ಪನ ಮಗ (ತಮ್ಮ) ಹೊಸದಾಗಿ ಮದುವೆಯಾಗಿದ್ದ. ನನ್ನ ತಮ್ಮನೂ ಅವನ ಹೆಂಡತಿಯೂ ಫೋಟೋ ತೆಗೆಸಿಕೊಳ್ಳಲು ಬಲು ಉತ್ಸಾಹಿಯಾಗಿದ್ದರು. ಅವರ ಫೋಟೋವನ್ನು ವಿಷಿಷ್ಟವಾಗಿ ತೆಗೆಯುವ ಬಯಕೆ ನನ್ನದಾಗಿತ್ತು. ಬೇರೆ ಛಾಯಾಚಿತ್ರಣವನ್ನು ಬಿಟ್ಟು ಕೇವಲ ಜೇಡಗಳ ಛಾಯಾಚಿತ್ರಣದಲ್ಲೇ ನಾನು ತೊಡಗಿದ್ದರಿಂದ ನವದಂಪತಿಗಳ ಛಾಯಾಚಿತ್ರ ತೆಗೆಯಲು ಬಲು ಹೆಣಗಿದೆ. ಇವರ ಛಾಯಾಚಿತ್ರವನ್ನು ಜೇಡದೊಂದಿಗೇ ತೆಗೆದರೆ ಸರಿ ಎನ್ನಿಸಿತು. ಕೂಡಲೇ ಅವರ ಮನೆಯ ಅಟ್ಟವನ್ನೇರಿಸಿದೆ. ಪುತ್ತೂರಿನ ಮನೆಯ ಅಟ್ಟವೆಂದರೆ ಅದು ಸಾಮಾನ್ಯವೇ. ಅಡಿಕೆ ಶೇಖರಣೆಯ ಪತ್ತಾಯ, ದೊಡ್ಡ ದೊಡ್ಡ ಅಡುಗೆಗೆ ಬೇಕಾದ ಪಾತ್ರೆಗಳ ಸಂಗ್ರಹ. ಅಟ್ಟವೇರುವುದೇ ಅಪರೂಪ, ಇನ್ನು ಅಲ್ಲಿರುವ ಜೇಡಗಳ ಬೆಲೆ ಗುಡಿಸುವುದಂತೂ ಬಲು ವಿರಳ! ಅಂಥಾ ಅಟ್ಟವನ್ನೇರಿದ ದಂಪತಿಗಳ ಫೋಟೊವನ್ನು ಚಾವಣಿ ಜೇಡಗಳ ಬಲೆಯ ಎಡೆಯಲ್ಲಿ ಅವರನ್ನು ನಿಲ್ಲಿಸಿ ತೆಗೆದೆ. ಅವರದ್ದು ಹಂಚಿನ ಮನೆ, ಹಾಗಾಗಿ ಅಟ್ಟ ಬಹುತೇಕ ಕತ್ತಲೆ. ಪೂರ್ಣ ಕತ್ತಲಾಗಬಾರದೆಂದು ಅಲ್ಲಲ್ಲಿ ಬೆಳಕು ತೂರಬಲ್ಲ ಗಾಜಿನ ಹಂಚು ಇರುತ್ತದೆ. ಅಂಥಾ ಒಂದು ಹಂಚು ನನ್ನ ನಯನಗಳನ್ನು ಸೆಳೆದವು. ಅಲ್ಲಿಂದ ಬರುವ ಬೆಳಕು ಮತ್ತು ಆ ಬೆಳಕಿನ ಸುತ್ತ ಹೆಣೆದ ಜೇಡನ ಬಲೆ ಅಟ್ಟಕ್ಕೊಂದು ವಿಶೇಷ ಸೌಂದರ್ಯವನ್ನು ಕೊಡುತ್ತಿತ್ತು. ಆ ಜೇಡನ ಬಲೆಯೂ ನನಗೆ ವಿಶೇಷವಾಗಿತ್ತು. ನಮ್ಮ ಮೈಸೂರಿನಲ್ಲಿ, ಅದರಲ್ಲೂ ನಮ್ಮ ತೋಟದಲ್ಲಿ ಆ ಜೇಡವನ್ನು ಕಂಡಿರಲಿಲ್ಲ. ಹೆಸರದರದ್ದು Zosis. ಅಥವಾ ಉಬ್ಬು ಜೇಡ. ತನ್ನ ಹೊಟ್ಟೆಯ ಬಾಗದಲ್ಲಿ ಉಬ್ಬಿರುವುದರಿಂದ ಈ ಹೆಸರು. ಪ್ರಪಂಚದಾದ್ಯಂತ ಈ ಜೇಡ ಕಾಣಸಿದುತ್ತದೆ. ಹೆಚ್ಚಿನವು ಬೂದು ಬಣ್ಣದಲ್ಲಿರುವುದರಿಂದ. ಬೂದು ಮನೆ ಜೇಡವೆಂದೂ ಕರೆಯುವರು.
ಉಲೊಬೋರಿಡೆ (Uloboridae) ಕುಟುಂಬಕ್ಕೆ ಸೇರಿದ ಈ ಉಬ್ಬು ಜೇಡ ನನ್ನ ಜೇಡನ ಸಂಗ್ರಹಕ್ಕೆ ಸೇರಿದ್ದಲ್ಲದೇ ನವದಂಪತಿಗಳ ಸುಂದರ ಛಾಯಾಚಿತ್ರಕ್ಕೂ ಸ್ಫೂರ್ತಿಯಾಗಿತ್ತು. ಜೇಡದೊಂದಿಗೆ ಫೋಟೋ ತೆಗೆಸಿಕೊಂಡು, ಜೇಡನಲ್ಲಿ ಭಯಬೇಡ, ಪ್ರೀತಿ ಇರಲಿ ಎಂದು ಅವರು ಸಾರಿದ್ದರು!
ಈ ಉಬ್ಬು ಜೇಡವನ್ನು ಮೈಸೂರಿನಲ್ಲಿ ಹುಡುಕುವ ಪ್ರಯತ್ನ ಮತ್ತೆ ಮಾಡಿದೆ. ಇಂದಿನವರೆಗೂ ಅದು ಫಲಿಸಲಿಲ್ಲ. ಇಲ್ಲಿ ಅದೇ ಕುಟುಂಬದ ಉಲಬೋರಸ್ (Uloborus) ಪ್ರಭೇದ ಸರ್ವೇ ಸಾಮಾನ್ಯ. ಈ ಉಲಬೋರಸ್ ಪ್ರಭೇದ ಕೂಡಾ ಪ್ರಪಂಚದಾದ್ಯಂತ ಎಲ್ಲೆಡೆ ಕಾಣಸಿಗುತ್ತದೆ. ಆದರೆ ಇದು ಮನೆಯೊಳಗೆ ಬಲೆ ಮಾಡುವುದಿಲ್ಲ. ಮನೆಯ ಹೊರಗಿನ ಹೂತೋಟ ಇದರ ನೆಚ್ಚಿನ ತಾಣ. ಪೇಟೆ ಮನೆಯ ಹೊರಗೆಗಡೆ ಕುಂಡದಲ್ಲಿ ಗಿಡವಿದ್ದರೆ ಸಾಕು, ಅಲ್ಲಿ ಈ ಉಲಬೋರಸ್ ತನ್ನ ಆಧಿಪತ್ಯವನ್ನು ಅಲ್ಲಿ ಸ್ತಾಪಿಸಿರುತ್ತದೆ.
ಉಬ್ಬು ಜೇಡದ (Zosis ) ಹುಡುಕಾಟದಲ್ಲಿದ್ದ ನನಗೆ ಮುಂದೆ ಅದು ಬೆಂಗಳೂರಿನಲ್ಲಿ ಕಾಣಿಸಿತು. ಬೆಂಗಳೂರಿನ ಹೃದಯ ಭಾಗವಾದ ಮೆಜೆಸ್ಟಿಕ್ಕಿನಲ್ಲಿ! ಅಲ್ಲಿನ ಕಲುಷಿತ ನೀರು ಹರಿಯುವ ಚರಂಡಿಗಳಲ್ಲಿ! ಮೂಗು ಮುಚ್ಚಿಕೊಂಡು ನೋಡಿದ್ದೇನೆ! ಉಬ್ಬು ಜೇಡನ ಇರುವಿಕೆಯನ್ನು ಖಾತ್ರಿ ಪಡಿಸಿಕೊಂಡಿದ್ದೇನೆ! ನನ್ನ ಗೆಳೆಯ ಸುಮುಖ ಹೇಳುವ ಪ್ರಕಾರ ಈ ಉಬ್ಬು ಜೇಡ ರಾಜಧಾನಿಯ ಹೆಚ್ಚಿನ ನಿವೇಶನಗಳಲ್ಲಿ ಕಾಣಸಿಗುವ ಬಲು ಸಾಮಾನ್ಯ ಜೇಡವಂತೆ.
ಈ ಜೇಡವನ್ನು ಗುರುತಿಸುವುದು ಬಲು ಸುಲಭ. ಓವೆಲ್ ಆಕಾರದ ಬಲೆಯ ಮಧ್ಯದಲ್ಲಿ ಅದೇ ಆಕಾರದ ಬಿಳಿಯ ಪ್ರಭಲ/ದಟ್ಟ ಬಲೆಯನ್ನು ಮಾಡುತ್ತದೆ. ಮಧ್ಯದ ಬಲೆ ಎದ್ದು ಕಾಣುತ್ತದೆ. ಅದನ್ನು ಸ್ಟಾಬಲ್ಲಿಮೆಂಟಮ್ (Stabalimentum ) ಎನ್ನುತ್ತಾರೆ. ಈ ಸ್ಟಾಬಲ್ಲಿಮೆಂಟಮ್ ಬಗೆಗೆ ಮುಂದೊಂದು ದಿನ ವಿವರವಾಗಿ ತಿಳಿಸುತ್ತೇನೆ. ಈ ಸ್ಟಾಬಲ್ಲಿಮೆಂಟಮ್ಮಿನ ಮಧ್ಯದಲ್ಲಿ, ಬಹುತೇಕ ಅದೇ ಬಣ್ಣದಲ್ಲಿರುವ ಉಬ್ಬು ಜೇಡ ಕುಳಿತಿರುತ್ತದೆ. ಬಲೆಯ ಬಣ್ಣ ಮತ್ತು ಜೇಡದ ಬಣ್ಣ ಬಹುತೇಕ ಒಂದೇ ಇರುವುದರಿಂದ ಜೇಡವು ಇತರೆ ಜೀವಿಗೆ ಆಹಾರವಾಗುವ ಸಾಧ್ಯತೆ ಕಡಿಮೆ. ಉಲಬೋರಸ್ ಮತ್ತು ಉಬ್ಬು ಜೇಡ ಪಕ್ಕನೆ ಒಂದೇ ತರಃ ಕಾಣಬಹುದು. ಆದರೆ ಉಲಬೋರಸ್ ಜೆಡದ ಬಲೆಗೆ ಹೆಚ್ಚಾಗಿ ಸ್ಟಾಬಲ್ಲಿಮೆಂಟಮ್ ಇರುವುದಿಲ್ಲ ಮತ್ತು ಉಬ್ಬು ಜೇಡದ ಮುಂದಿನ ಎರಡು ಕಾಲುಗಳು ಇತರೆ ಕಾಲುಗಳಿಗಿಂತ ಉದ್ದವಿರುತ್ತದೆ.
ಈ ಕುಟುಂಬದ ಎಲ್ಲಾ ಜೇಡಗಳಿಗೆ ಆರು ಕಣ್ಣುಗಳಿರುತ್ತದೆ ಮತ್ತು ವಿಷದ ಗ್ರಂತಿಯ ಅನುಪಸ್ಥಿತಿ ಇದರ ವಿಶೇಷ. ಹಾಗಾಗಿ ಇವು ಬಲೆಯಲ್ಲಿ ಬಿದ್ದ ಬೇಟೆಯನ್ನು ನೇರವಾಗಿ ಕಚ್ಚುವುದಿಲ್ಲ. ಬದಲಾಗಿ ಇವು ತಮ್ಮ ತಂತುಕಗಳಿಂದ ಬಲೆಯನು ಬಿಟ್ಟು ಬೇಟೆಯನ್ನು ಬಂಧಿಸಿ, ಉಸಿರುಗಟ್ಟಿ ಸಾಯಿಸುತ್ತದೆ. ನಂತರ ತಮ್ಮ ಕಿಣ್ವರಸವನ್ನು ಬೇಟೆಯ ಮೇಲೆರಚುತ್ತದೆ. ಈ ರಸದ ಸಂಪರ್ಕದಿಂದ ಬೇಟೆಯು ಕರಗುತ್ತದೆ. ನಂತರದಲ್ಲಿ ಕರಗಿದ ಬೇಟೆಯನ್ನು ಉಬ್ಬು ಜೇಡ ಹೀರಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತದೆ.
೨. ಮನೆ ಜೇಡ (Parasteatoda)
ಮನೆಯೊಳಗೊಂದು ಮನೆ ಮಾಡುವ ಜೇಡವಿದು. ತೆರಿಡಿಡೇ (Theridide ) ಕುಟುಂಬಕ್ಕೆ ಸೇರುವ ಈ ಜೇಡ ನಿಮ್ಮ ಬಚ್ಚಿಲಲ್ಲಿ ಕಾಣಿಸಬಹುದು ಅಥವಾ ಮನೆಯ ಹಿಂಬದಿಯ ಕಾಲಿಜಾಗದಲ್ಲಿ ಮನೆಮಾಡಿರಬಹುದು. ಒಡ್ಡೊಡ್ಡು ಬಲೆ ಇದರದ್ದಾದರಿಂದ ಹೆಸರಿದಕ್ಕೆ Tangled web spider. ತನ್ನ ಬಲೆಯ ಒಳಗೆ ಒಂದು ಎಲೆಯ ತುಂಡನ್ನು ಕೋನಾಕಾರದಲ್ಲಿ ಇರಿಸಿ ಅದರ ಮರೆಯಲ್ಲಿ ಮೊಟ್ಟೆ ಇಡುತ್ತದೆ. ಬಲೆಯೊಳಗೊಂದು ಮನೆ ಮಾಡುವುದರಿಂದ ಇದು ಮನೆ ಜೇಡ(House spider). ಈ ಮನೆ ಜೇಡ ಒಮ್ಮೆ ಗರ್ಭವತಿಯಾದರೆ ಸಾಕು, ಮನೆ ತುಂಬಾ ಮಕ್ಕಳು. ಒಮ್ಮೆಲೆ ೨೦ ರಿಂದ ೩೦ ಮೊಟ್ಟೆಗಳನ್ನು ತನ್ನ ಬಲೆಯ ಕವಚದಲ್ಲಿ ಇರಿಸಿ ನಂತರ ಅದನ್ನು ಮೊಟ್ಟೆಗಳ ಗುಚ್ಚ ಮಾಡುತ್ತದೆ. ಕೆಲ ದಿನಗಳಲ್ಲಿ ಮತ್ತೆ ಇನೊಂದು ಗುಚ್ಚ!
ಹೀಗೆ ಸತತ ೧೫ರಿಂದ ೧೮ ಗುಚ್ಚಗಳನ್ನು ಮಾಡಿ ಒಂದರ ಕೆಳಗೊಂದರಂತೆ ಪೋಣಿಸುತ್ತದೆ. ಹೀಗೆ ಮಾಡುವಾಗ ಮೊದಲ ಮೊಟ್ಟೆಗಳ ಗುಚ್ಚಗಳಿಂದ ಮರಿಗಳು ಹುರಬರುತ್ತವೆ. ಮಕ್ಕಳು ಹೊರಬರುತ್ತಿರುವಾಗ ಕೂಡಾ ಅಮ್ಮ ಜೇಡ ಮೊಟ್ಟೆಗನ್ನು ಇಡುತ್ತಲೇ ಇರುತ್ತವೆ. ಆದರೆ ಇದು ತಾಯಿಯ ಕರ್ತವ್ಯವನ್ನು ಮರೆಯುವುದಿಲ್ಲ. ತನ್ನ ಬಲೆಯಲ್ಲಿ ಬಿದ್ದ ಕೀಟಗಳನ್ನು ತನ್ನ ಮರಿಗಳತ್ತ ಎಳೆದು ತರುತ್ತದೆ. ಮರಿಗಳು ಬೇಟೆಯನ್ನು ಮುತ್ತಿಕ್ಕಿ ತಿನ್ನುತ್ತದೆ. ನನ್ನ ಸೀಮಿತ ಅವಧಿಯ ವೀಕ್ಷ್ಣೆಯ ಪ್ರಕಾರ ಈ ಮನೆ ಜೇಡವು ಹದಿನೈದನೇ ಮೊಟ್ಟೆಯ ಗುಚ್ಚದಿಂದ ಮರಿಗಳು ಹೊರಬರುತ್ತಿದ್ದಂತೆ ಅಸು ನೀಗುತ್ತದೆ. ಆಮೇಲೆ ಉಳಿದ ಮೊಟ್ಟೆಗಳ ಗುಚ್ಚಗಳಿಂದ ಮರಿಗಳು ಹೊರಬರುವುದನ್ನು ನಾನು ಕಂಡಿಲ್ಲ. ಬಲೆಯೊಳಗೊಂದು ಮನೆಮಾಡುವ, ಸಾಲು ಸಾಲು ಮರಿಗಳನ್ನು ಮಾಡಿ ಅವುಗಳಿಗೆ ಆಹಾರ ನೀಡಿ ಸಲಹುವ ಕೆಲವೇ ಕಲ ಆದರ್ಶ ಜೇಡಗಳಲ್ಲಿ ಮನೆ ಜೇಡವೂ ಒಂದು.
ತೆರಿಡಿಡೇ ಕುಟುಂಬದ ಜೇಡಗಳನ್ನು comb-footed spiders ಎನ್ನುತ್ತರೆ. ತಮ್ಮ ಮೊದಲೆರಡು ಕಾಲುಗಳ ತುದಿಯಲ್ಲಿ ಬಾಚಣಿಗೆಯ ತರಃ ಕೂದಲಿರುತ್ತದೆ. ಹಾಗಾಗಿ ಈ ಹೆಸರು. ಈ ಮನೆ ಜೆಡಕ್ಕೂ ಅಂತಃ ಕಾಲುಗಳಿವೆ. ಅದಲ್ಲದೆ ಎಂಟು ಕಣ್ಣುಗಳು. ಸದಾ ತಲೆ ಮತ್ತು ಹೊಟ್ಟೆಯನ್ನು ಭೂಮಿ ಎಡೆಗೆ ಚಾಚಿರುತ್ತದೆ. ಹೊಳಪಿನ ಮೈ. ನಮ್ಮ ಇರುವಿಕೆ ಗೊತ್ತದ ಕೂಡಲೆ ಇದು ಅವಸರವಸರದಲ್ಲಿ ಬಲೆಯ ಮಧ್ಯೆ ಇರುವ ಎಲೆಗಳ ಎಡೆಗೆ ಹೋಗಿ ಅವಿತುಕೊಳ್ಳುತ್ತದೆ.
ನೊಣ, ಗೆದ್ದಲು ಹಾತೆ, ಚಿಟ್ಟೆ ಮತ್ತು ಪತಂಗಗಳು ಇವುಗಳ ಪ್ರಮುಖ ಆಹಾರ. ಇವನ್ನು ನಾನು ಮೊದಲು ತಿಳಿಸಿದ ಜಾಗಗಳಲ್ಲದೆ ಗಿಡಗಳ ಎಡೆಯಲ್ಲೂ ಕಾಣಬಹುದು.
೩. ಡೇರೆ ಜೇಡ (Cyrtophora)
ಅರೇನಿಡೇ (Araneidae) ಕುಟುಂಬದ ವಿಶಿಷ್ಟ ಜೇಡವಿದು. ಮನೆ ಜೇಡಗಳ ಆವಾಸ ಸ್ಥಾನಗಳೇ ಇವುಗಳ ಆವಾಸ ಸ್ಥಾನ. ಯಾವ ಜೇಡ ಮೊದಲು ಆಧಿಪತ್ಯ ಸ್ಥಾಪಿಸುತ್ತದೋ ,ಆ ಜಾಗ ಆ ಜೇಡನದು! ಇವು ಚಾವಣಿಯಲ್ಲಿ ಬಲೆಯನ್ನು ಮಾಡುವುದಕ್ಕಿಂತ ಹೆಚ್ಚು ಅಟ್ಟಗಳಲ್ಲಿ ಹರಡಿದ ಸಾಮಾನಿನ ಮೇಲೆ ಬಲೆ ಮಾಡುತ್ತವೆ. ಮನೆ ಜೇಡನಂತೆ ಮೊದಲ ಪದರದಲ್ಲಿ ಅಡ್ಡಾದಿಡ್ಡಿ ಬಲೆ ಮಾಡುವ ಇವು ಒಳಗಿನ ಪದರವನ್ನು ಬಲು ನಾಜೂಕಾಗಿ ಮಾಡುತ್ತವೆ. ನಮ್ಮ ನುಸಿ ಬಲೆಯನ್ನು ಹೋಲುವಷ್ಟು ಒತ್ತೊತ್ತಿಗೆ ಬಲೆಯನ್ನು ಮಾಡಿ ಅದರ ಮಧ್ಯೆ ಕುಳಿತುಕೊಳ್ಳುತ್ತದೆ. ಹಸಿರು ಬಣ್ಣದ ಮೊಟ್ಟೆಗಳ ಗುಚ್ಚವನ್ನು ಒಂದರ ಕೆಳಗೊಂದು ಜೆಡೆಯಂತೆ ಹೆಣದಿರುತ್ತದೆ. ಈ ಬಲೆಯ ರೂಪ ಡೇರೆಯನ್ನು ಹೋಲುವುದರಿಂದ ಇದಕ್ಕೆ ಡೇರೆ ಜೇಡವೆಂದು (Tent spider)ಹೆಸರು .
Cyrtophora cicatrosa ಪ್ರಭೇದವು ನಮ್ಮಲ್ಲಿ ಕಾಣುವ ಬಲು ಸಾಮಾನ್ಯ ಜೇಡ. ಮನೆಯ ಹೊರಗೆ ಸಾಗುತ್ತಿದ್ದಂತೆ ಸಿರ್ಟೋಫೋರಾ ಗಣದ ಅನೇಕ ಜೇಡಗಳನ್ನು ಕಾಣಬಹುದು.
ಎರಡೆರಡು ಪದರದ ಬಲೆ ಇದಕ್ಕೆ ಇರುವುದರಿಂದ , ಈ ಬಲೆಗೆ ಬಿದ್ದ ಕೀಟಗಳು ತಪ್ಪಿಸಿಕೊಳ್ಳುವುದು ಅಸಾಧ್ಯದ ಮಾತು. ಬೇರೆ ಜೇಡಗಳ ಬಲೆಗೆ ಹೋಲಿಸಿದರೆ ಇದರ ಬಲೆಗೆ ಬಲಿಯಾಗುವ ಕೀಟಗಳ ಸಂಖೆ ಹೆಚ್ಚು.
ಚಾವಣಿ ಜೇಡದಿಂದ ಹಿಡಿದು ಡೇರೆ ಜೇಡದವರೆಗೆ ಎಲ್ಲಾ ಜೇಡಗಳು ಮಾಡುವ ಕೆಲಸ ಒಂದೇ!
ಕೀಟ ನಿಯಂತ್ರಣ!
ಇಂತು ಕೀಟ ನಿಯಂತ್ರಣ ಮಾಡುವ ಈ ಸಾಲಿಗಗಳು ನಮ್ಮ ನಿಮ್ಮ ಮಿತ್ರರಲ್ಲದೆ ಇನ್ನೇನು?