ಅಂಕಣ ಜೇಡನ ಜಾಡು ಹಿಡಿದು..

ಪ್ರತಿ ಮನೆಯಲ್ಲೂ ಬೇಟೆಗಾರರಿದ್ದಾರೆ

ನಮ್ಮ ಮನೆಯಲ್ಲಿ ಪ್ರತಿದಿನ ನನ್ನಪ್ಪ ಯೋಗಾಭ್ಯಾಸ, ಪ್ರಾಣಾಯಾಮ ಮಾಡಿ ನಿತ್ಯಪೂಜೆ ಮಾಡುತ್ತಾರೆ. ಪ್ರತಿನಿತ್ಯ ಅಮ್ಮ, ನಾನು ಅಥವಾ ನನ್ನ ಮಡದಿ ಮಕ್ಕಳು ದೇವರ ಅಲಂಕಾರಕ್ಕೆಂದು ತರತರದ ಹೂವುಗಳನ್ನು ತಂದುಕೊಡುತ್ತೇವೆ. ಪ್ರತಿನಿತ್ಯ ವಿನೂತನ ಅಲಂಕಾರ ನಡೆಯುತ್ತದೆ. ನಮಗಂತೂ ಇದು ಪ್ರಕೃತಿಯ ಆರಾಧನೆ. ಅಪರೂಪಕ್ಕೊಮ್ಮೆ ನಾನು ದೇವರ ಗೂಡಿನ ಮೂಲೆಯಲ್ಲಿರುವ ಶಂಖ ಊದುವುದುಂಟು. ವರ್ಷದಲ್ಲೆರಡು ಬಾರಿ ಮಾತ್ರ ನೆನಪಾಗುವ ಕಾರಣ ಅದು ಚನ್ನಾಗಿಯೇ ಧೂಳು ಹಿಡಿದಿರುತ್ತದೆ. ಹಾಗಾಗಿ ಅದನ್ನು ಚೆನ್ನಾಗಿ ತೊಳೆದು, ಒರಸಿ ಆಮೇಲೆ ಊದಬೇಕು. ಎರಡು ವರ್ಷಗಳ ಹಿಂದೆ ನನಗೆ ಶಂಖ ಊದುವ ಉತ್ಸಾಹ ಬಂತು. ಚೆನ್ನಾಗಿ ತೊಳೆದದ್ದೂ ಆಯಿತು. ಶಂಖವನ್ನು ಬಾಯಲ್ಲಿ ಹಿಡಿದ ನಾನು, ಒಮ್ಮೆಲೆ ಗಾಳಿಯನ್ನು ಎಳೆಯತೊಡಗಿದೆ. ಶಂಖದ ಹೊರಗೇನೋ ಶಬ್ದವಾಗಿತ್ತು. ಆದರೆ ಅದರೊಳಗೆ ಎಕ್ಕಲೆ ಪಿಟ್ಟೆ (ಜಿರಳೆಯ ಪಿಕ್ಕೆ) ಇತ್ತು. ಬಾಯ್ತುಂಬ ತುಂಬಿತ್ತು. ವ್ಯಾಕ್… ಅದರ ಅನುಭವ ಅವರ್ಣನೀಯ. ಇಂಥಾ ಅನುಭವ ಕೆಲವರಿಗಿರಬಹುದು. ಅಂದಿನಿಂದ ಇಂದಿನ ವರೆಗೆ ಶಂಖದ ಅಂತರಂಗ ಮತ್ತು ಬಹಿರಂಗವೆರಡನ್ನೂ ಶುದ್ದಗೊಳಿಸಿ, ಉಸಿರನ್ನು ಮೊದಲೇ ಶೇಖರಿಸಿಕೊಂಡು ಊದುವುದು.
ಅಬ್ಬಾ.. ಈ ಜಿರಳೆಯ ಕಾಟ ಸಾಮಾನ್ಯವೇ!

ಶಂಖದೊಳಗಣ ಪ್ರಸಾದ ಮುಕ್ಕಿದ ನನಗೆ ಅದರ ಪಿಕ್ಕೆಯ ದುರ್ನಾಥದ ಅನುಭವವಿದೆ. ಇಂಥಾ ಜಿರಳೆ ನಾವು ತಿನ್ನುವ ಆಹಾರದ ಮೇಲೆ ಪಿಕ್ಕೆ ಹಾಕಿದರೆಂಥಿರಬಹುದು. ತಿನ್ನಲಸಾಧ್ಯ. ಎಷ್ಟೋ ಅಡುಗೆಗಳನ್ನು ನಾಶ ಮಾಡಿದ ಖ್ಯಾತಿ ಈ ಜಿರಳೆಗಳಿಗಿವೆ. ಇನ್ನು ಈ ಜಿರಳೆಗಳ ಪ್ರಭಾವದಿಂದ ಉಬ್ಬಸ ಖಾಯಿಲೆಗೊಳಗಾದವರು ಅದೆಷ್ಟೋ. ಅಮೆರಿಕಾದ ಚಿಕಾಗೋ ಒಂದರಲ್ಲೇ ೬೦% ಜನ ಈ ಜಿರಳೆಗೆ ಅಲೆರ್ಝಿಕ್ ಇದ್ದಾರೆ. ನೀವೆಷ್ಟೇ ನಿಯಂತ್ರಣ ಮಾಡಿದರೂ, ಈ ಜಿರಳೆಗಳು ತಿಂಗಳುಗಟ್ಟಲೆ ಉಪವಾಸ ಕೂತು ನಾವ್ಯಾರೂ ತೂರದ ಜಾಗದಲ್ಲಿ ಅವಿತಿರುತ್ತದೆ. ನಮ್ಮನೆಯ ಬಚ್ಚಲು ಮನೆ. ಪಾಯಿಖಾನೆಗಳೇ ಇವುಗಳ ನೆಚ್ಚಿನ ತಾಣ. ಓಡಬಾರದ ಜಾಗಗಳಲ್ಲಿ ಓಡಾಡುವ ಇವು ನಮ್ಮ ಮಕ್ಕಳ ಕಿವಿಯೊಳಗೂ ತೂರಿ, ನೋವು ಬರಿಸುವುದು ತುಸು ಸಾಮಾನ್ಯವೇ. ಜಿರಳೆಗಳನ್ನು ನೋಡಿ ಬೆಚ್ಚಿಬೀಳುವ ಜನರೂ ನನ್ನ ಕುಟುಂಬದಲ್ಲೇ ಇದ್ದರೆ. ಇಂಥಾ ದುಃಸ್ವಪ್ನದಾಯಕ ಜಿರೆಳೆಗಳು ಅನೇಕ ಕಂಪೆನಿಗಳ ಮಾರಾಟದ ಸರಕು. ಲಕ್ಷ್ಮಣರೇಖೆಯಿಂದ ಹಿಡಿದು ಹಿಟ್ ವರೆಗೆ ಜಿರಳೆಗಳ ನಿಯಂತ್ರಣಕ್ಕೆ ಪಣತೊಟ್ಟವರೇ. ಇದೆಲ್ಲದರ ನಡುವೆ ಸ್ವಾಭಾವಿಕವಾಗಿ ಜಿರಳೆಗಳನ್ನು ಹಿಡಿದು ತಿನ್ನುವ ಬೇಟೆಗಾರನು ನಮ್ಮ ನಿಮ್ಮ ಮನೆಯಲ್ಲಿ ನಮ್ಮರಿವಿಗೇ ಬರದಂತೆ ಇದ್ದಾನೆ. ಪರಿಣಾಮಕಾರಿಯಾಗಿ ಜಿರಳೆಗಳ ನಿಯಂತ್ರಣವನ್ನು ಮಾಡುತ್ತಿದ್ದಾನೆ. ಜಿರಳೆಗಳು ನಮ್ಮನೆಯಲ್ಲಿ ಸಮತೋಲನದಲ್ಲಿರಲು ಈ ಬೇಟೆಗಾರನೇ ಕಾರಣ.

ಯಾರವನು?
ಅವನೇ ಸಾಲಿಗರಾಯ ಅಲಿಯಾಸ್ ಬೇಟೆಗಾರ ಜೇಡ ಅಲಿಯಾಸ್ Huntsman spider!
ಸ್ಪಾರಸಿಡೇ (Sparassidae) ಕುಟುಂಬದ ಹೆಟಿರೋಪೋಡಾ (Heteropoda)ದಳದ ಸದಸ್ಯನೇ ನಮ್ಮ ಮನೆ ಒಳಗಿರುವ ಬೇಟೆಗಾರ. ಮನೆಯ ಹೊರಗಡೆ ಇದೇ ಕುಟುಂಬದ ಸಾವಿರಾರು ಬೇಟೆಗಾರರಿದ್ದಾರೆ. ನಾನು ಸುಮಾರು ಹತ್ತು ಬೇಟೆಗಾರರನ್ನು ಗುರುತಿಸಿದ್ದೇನೆ. ಅವರ ಪರಿಚಯ ಸದ್ಯಕ್ಕೆ ಬೇಡ.

Heteropoda

ಈ ಜೇಡಕ್ಕೂ ಉಳಿದ ಜೇಡಗಳಿಗಿದ್ದಂತೆ ಎಂಟು ಕಣ್ಣುಗಳು. ಪ್ರಪಂಚದಾದ್ಯಂತ ಈವರೆಗೆ ಒಟ್ಟು ೧೨೦ ಕುಟುಂಬದ ಜೇಡಗಳನ್ನು ಗುರುತಿಸಿದ್ದಾರೆ. ಹೆಚ್ಚಿನ ಕುಟುಂಬಗಳಿಗೆ ಎಂಟು ಕಣ್ಣುಗಳಿವೆ. ಇನ್ನುಳಿದ ಜೇಡಗಳಲ್ಲಿ ಹೆಚ್ಚಿನವು ಆರು ಕಣ್ಣಿನವಾದರೆ,ಕೆಲವಕ್ಕೆ ನಾಲ್ಕು ಮತ್ತೆ ಕೆಲವು ಎರಡು ಕಣ್ಣಿನವು ಮತ್ತು ಮಿಕ್ಕವಕ್ಕೆ ಕಣ್ಣೇ ಇಲ್ಲವಂತೆ. ಪ್ರತೀ ಕುಟುಂಬದ ಕಣ್ಣಿನ ಸ್ಥಾನಮಾನವು ವಿಭಿನ್ನ, ೧೨೦ ಕುಟುಂಬಗಳಲ್ಲಿ ೧೨೦ ತರಹದ ಕಣ್ಣುಗಳ ಜೋಡಣೆಯನ್ನು ನಾವು ಕಾಣಬಹುದು. ನಮಗೆ ಕುತೂಹಲದ ಕಣ್ಣಿರಬೇಕು ಅಷ್ಟೇ!


ಈ ನಮ್ಮ ಬೇಟೆಗಾರ ಸಾಲಿಗನಲ್ಲಿ ನಾಲ್ಕು ಕಣ್ಣುಗಳು ಒಂದು ಸಾಲಲ್ಲಿದ್ದರೆ ಅದರ ಮೇಲೆ ಇನ್ನುಳಿದ ನಾಲ್ಕು ಕಣ್ಣುಗಳು. ಅಷ್ಟ ನಯನಗಳು ಎರಡು ಸಾಲಲ್ಲಿ ಒಂದರ ಮೇಲೊಂದರಂತೆ ಜೋಡಿಸಿರುವುದರಿಂದ ಎದುರಿಗೆ ಓಡಾಡುವ ಜೀವಿಗಳನ್ನು ಬಲು ಬೇಗನೇ ಗುರುತಿಸುವುದು. ಹೆಚ್ಚಿನ ಕೀಟಗಳಂತೆ /ಜೇಡಗಳಂತೆ ಹಗಲಲ್ಲಿ ಇವೂ ವಿಶ್ರಮಿಸುತ್ತವೆ. ರಾತ್ರಿ ನಮ್ಮ ವಿಧ್ಯುದ್ದೀಪಗಳು ಆರುತ್ತಿದ್ದಂತೆ ಇವು ಹೊರಬರಲಾರಂಭಿಸುತ್ತವೆ. ನಮ್ಮನೆಯಲ್ಲಿ ನೇತಾಡಿಸಿದ ಫೋಟೋಫ್ರೇಮಿನ ಅಡಿಯಿಂದ,ಕಪಾಟಿನ ಹಿಂಬದಿಯಿಂದ, ಕಿಟಕಿಯ ಸೆರೆಯಿಂದ, ಬಚ್ಚಲು ಮನೆಯೊಳಗಿಂದ ಹೊರಬರಲಾರಂಭಿಸುತ್ತವೆ. ಜಿರಳೆಗಳು ಎಂತು ನಾವು ತೂರದ ಜಾಗದಲ್ಲಿ ತೂರಿರುತ್ತವೋ ಅಂಥಾ ಜಾಗಗಳಿಗೆ ಇವು ತೂರಿ ಅವುಗಳನ್ನು ಹಿಡಿದು ತಿನ್ನುತ್ತವೆ. ಜಿರಳೆಗಳ ಪಾಲಿಗೆ ಈ ಬೇಟೆಗಾರ ಜೇಡನಂತೂ ಯಮ ಸಮಾನ!
ಈ ಜೇಡಗಳು ಮೇಲೆ ತಿಳಿಸಿದ ಕೀಟನಾಶಕಗಳಂತೆ ಒಮ್ಮೆಲೆ ಜಿರಳೆಗಳನ್ನು ನಾಶಮಾಡುವುದಿಲ್ಲ. ಹಾಗೆ ಮಾಡಿದರೆ ಇವೂ ಬದುಕಬೇಕಲ್ಲ! ಇವುಗಳ ಸಂತಾನವೂ ಬೆಳೆಯಬೇಕಲ್ಲ. ಮತ್ತೆ ಜಿರಳೆಗಳೇನು ಸಾಮಾನ್ಯವೇ? ನಮಗದನ್ನು ಕಂಡು ಅಸಹ್ಯವಾಗಬಹುದು, ಆದರೆ ಇವು ಕೀಟಲೋಕದ ರಣಹದ್ದುಗಳು. ಈ ಜಿರಳೆಗಳು ಎಂದೂ ಸ್ವಂತ ಬೇಟೆಯಾಡುವುದಿಲ್ಲ. ಅಲ್ಲಲ್ಲಿ ಸತ್ತು ಬಿದ್ದಿರುವ ನೊಣ, ಸೊಳ್ಳೆಗಳಮೇಲೆ ಇವುಗಳ ಅವಲಂಬನೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ನಮ್ಮ ಮಲಮೂತ್ರಗಳ ಮೇಲೆ ಇವುಗಳ ಬದುಕು. ಜಿರಳೆ ಒಂದಿರದಿರುತ್ತಿದ್ದರೆ ನಮ್ಮನೆಯೊಳಗೆ ಗಬ್ಬು ನಾರುತ್ತಿತ್ತು. ಹಾಗೆಂದು ಜಿರಳೆಯೂ ಅತಿಯಾಗಬಾರದು. ಅದಕ್ಕೆ ಪರಿಹಾರವೆಂದು ಈ ಬೇಟೆಗಾರ.

ಬೇಟೆಗಾರ ಜೇಡನ ಆಹಾರ ವ್ಯಾಪ್ತಿ ಜಿರಳೆಗಷ್ಟೇ ಸೀಮಿತವಲ್ಲ ಮತ್ತು ನಮ್ಮನೆಯೊಳಗೇ ಕೂರುವವನೂ ಅಲ್ಲ. ಆಗಿಂದ್ದಗ್ಗೆ ಮನೆಯ ಹೊರಗೂ ಸುತ್ತಾಡುತ್ತದೆ. ಹಾಗಾಗಿ ಇವುಗಳು ಮಿಡತೆ, ಹಲ್ಲಿ, ಪತಂಗಗಳತ್ತಲೂ ಬಾಯಿ ಆಡಿಸುತ್ತದೆ. ಒಟ್ಟಿನಲ್ಲಿ ಹಾನಿಕಾರಕ ಕೀಟಗಳೆಂದು ನಾವು ಗುರುತಿಸಿದ್ದರ ಮೇಲೆ ತನ್ನ ಅಧಿಕಾರ ಚಲಾಯಿಸುತ್ತದೆ. ಇನ್ನು ಹೆಣ್ಣು ಜೇಡಕ್ಕೆ ಹಸಿವು ಜಾಸ್ತಿಯಾದರೆ ಗಂಡಿನ ಕಥೆ ಮುಗಿಯಿತು. ಮಿಲನದ ನಂತರ ಗಂಡು ಹೆಣ್ಣಿನ ಆಹಾರ.

ಈ ಜೇಡ ಬೇಟೆಗಾರನಾದದ್ದು ಹೇಗೆ?
ಈ ಜೇಡಕ್ಕೆ ನಯನ ಬಲ ಚೆನ್ನಾಗಿದೆಯೆಂದು ನಾನು ಮೊದಲೇ ನಿಮಗೆ ತಿಳಿಸಿರುವೆ. ಇದರೊಂದಿಗೆ ಈ ಜೇಡಕ್ಕೆ ಕಾಲ್ಬಲವೂ ಚೆನ್ನಾಗಿದೆ. ಜೇಡಗಳಲ್ಲೇ ದೊಡ್ಡದಾದ ಹುಲಿಸಾಲಿಗದ(ಟೆರೆಂಟುಲಾ) ಸಮಕ್ಕೆ ಬೆಳೆಯುವ ಈ ಜೆಡಗಳ ಎಂಟೂ ಕಾಲುಗಳು ಉದ್ದವಿದೆ ಮತ್ತು ಮುಂದಿನ ನಾಲ್ಕು ಕಾಲುಗಳು ದೇಹದ ಎದುರಿಗೆ ಚಾಚಲ್ಪಟ್ಟಿರುತ್ತದೆ. ಜೇಡಗಳಲ್ಲಿನ ರಕ್ತ ಸಂಚಾರವೇ ವಿಭಿನ್ನ. ಹ್ರುದಯದಿಂದ ರಕ್ತನಾಳಗಳ ಮೂಲಕ (ಅಪಧಮನಿ) ರಕ್ತವು ಸಂಚರಿಸಿ ಕೊನೆಗೆ ಕಾಲುಗಳತ್ತ ಬರುತ್ತದೆ. ಕಾಲಿನ ಕಡೆಯ ಬಾಗದಲ್ಲಿ ಈ ರಕ್ತನಾಳವು ತೆರೆಯಲ್ಪಡುತ್ತದೆ. ನಮಗಿರುವಂತೆ ಹ್ರುದಯಕ್ಕೆ ರಕ್ತವನ್ನು ಮತ್ತೆ ತೆಗೆದುಕೊಂಡು ಹೋಗುವ ನಾಳದ ವ್ಯವಸ್ಥೆ (venus system) ಜೇಡಗಳಿಗಿರುವುದಿಲ್ಲ. ಹಾಗಾಗಿ ಹ್ರುದಯದಿಂದ ಬಂದ ರಕ್ತವು ಕಾಲುಗಳ ಕೊನೆಯಲ್ಲಿ ಚೆಲ್ಲಲ್ಲ್ಪಡುತ್ತದೆ. ಇದರಿಂದಾಗಿ ಅಲ್ಲಿ ಒತ್ತಡ (hydrolic pressure) ಏರ್ಪಡುತ್ತದೆ (ಚೆಲ್ಲಿದ ರಕ್ತವು ಶರೀರದೆಲ್ಲೆಡೆ ವ್ಯಾಪಿಸಿ ಕೊನೆಗೆ ಪುಸ್ತಕದ ಹಾಳೆಗಳಂತೆ ಜೋಡಿಸಲ್ಪಟ್ಟ ಶ್ವಾಸಕೋಶದ ಮೂಲಕ ಮತ್ತೆ ಹೃದಯವನ್ನು ಸೇರುತ್ತದೆ). ಎಲ್ಲಾ ಜೇಡಗಳ ಶರೀರಶಾಸ್ತ್ರ ಹೀಗೇ ಇದ್ದರೂ, ಕಾಲುಗಳು ಸಣ್ಣಗಿರುವುದರಿಂದ ಬೇಟೆಗಾರ ಜೇಡನಲ್ಲಿ ಉಂಟಾಗುವಷ್ಟು ಒತ್ತಡ ಇರುವುದಿಲ್ಲ. ಉದ್ದನೆಯ ಕಾಲಿನಿಂದ ಒತ್ತಡವು ತುಸು ಜಾಸ್ತಿ ಏರ್ಪಡುವುದರಿಂದ ಈ ಜೇಡವು ಎದುರಿಗೆ ಯಾವುದಾದರೂ ತನ್ನಿಷ್ಟದ ಕೀಟಗಳನ್ನು ಕಂಡರೆ ಭಾರೀ ವೇಗದಲ್ಲಿ ಓಡುತ್ತದೆ.
ಇದರ ವೇಗಕ್ಕೆ ಜಿರಳೆಗಳಂಥಾ ಕೀಟಗಳು ಬಲು ಸುಲಭವಾಗೇ ಸಿಕ್ಕಿಹಾಕಿಕೊಳ್ಳುತ್ತದೆ.

ಸಂಸಾರ
ನಮ್ಮ ಸಂಸಾರ ಪುಟ್ಟು ಸಂಸಾರ, ಆನಂದ ಸಾಗರ!
ಆದರೆ ಈ ಜೇಡಕ್ಕೆ ಹಾಗಲ್ಲ. ಮಿಲನದ ನಂತರ ಹಸಿವಿದ್ದರೆ ಗಂಡು ಜೇಡವನ್ನೇ ತಿನ್ನುವ ಹೆಣ್ಣು ೩ ವಾರಗಳಲ್ಲಿ ಮೊಟ್ಟೆ ಇಡುತ್ತದೆ. ತನ್ನ ಮೊಟ್ಟೆಗಳನ್ನು, ತಾನೇ ಮಾಡಿದೆ ಬಲೆಯ ಕವಚದೊಳಗೆ ಜೋಡಿಸುತ್ತದೆ. ಆ ಕವಚವು ಬಿಸಿಲು, ಗಾಳಿ ಮತ್ತು ನೀರಿನಿಂದ ರಕ್ಷಣೆ ನೀಡುತ್ತದೆ. ಮೊಟ್ಟೆ ಇಟ್ಟ ನಂತರ ತಾಯಿಯು ತನ್ನ ಮರಿಗಳ ನಿರೀಕ್ಷೆಯಲ್ಲಿರುತ್ತದೆ. ಆಹಾರಕ್ಕೆಂದು ಎತ್ತ ಹೋದರೂ ಮತ್ತೆ ತನ್ನ ಮೊಟ್ಟೆಗಳ ಗುಚ್ಚಕ್ಕೆ ಹಿಂತಿರುಗಿ ಬರುತ್ತದೆ. ನಮ್ಮ ತೋಟದಲ್ಲಿನ ಸ್ಪ್ರಿಂಕ್ಲರ್ ( ನೀರಿನ ವ್ಯವಸ್ಠೆ) ಪಾಯಿಂಟ್ ಗಳಲ್ಲಿ ಈ ಜೇಡಗಳು ಮೊಟ್ಟೆ ಇಡುವುದುಂಟು. ಜೇಡನ ಬಗೆಗೆ ನನ್ನಲ್ಲಿ ತುಸು ಅರಿವಿರುವುದರಿಂದ ಬಚಾವ್. ಇಲ್ಲದಿದ್ದರೆ ನೂರಾರು ಮೊಟ್ಟೆಗಳು ಭೂಮಿಪಾಲು!
ನೂರಾರು ಸಂಖೆಯಲ್ಲಿ ಹೊರಬರುವ ಮರಿಗಳು ಅಮ್ಮನ ಅವಲಂಭನೆಯನ್ನು ಬಯಸದೆ ಕೆಲದಿನಗಳಲ್ಲೇ ಜಿರಳೆಗಳನ್ನರಸಿಕೊಂಡು ಹೊರನಡೆಯತ್ತವೆ.

ಇವೂ ನಮ್ಮ ಹೆದರಿಕೆಗೆ ಹೊರತಲ್ಲ.
ಜಿರಳೆಗಳನ್ನು ಕಂಡು ಹೆದರಿದಂತೆ, ನಮ್ಮ ಬಚ್ಚಿಲಲ್ಲಿ ಸಾಮಾನ್ಯವಾಗಿ ಕಾಣಸಿಗುವ ಬೇಟೆಗಾರ ಜೇಡನಿಗೂ ಬೆಚ್ಚಿ ಬೀಳುವವರಿದ್ದಾರೆ. ಸಣ್ಣ ಜೇಡಗಳು ಪಕ್ಕನೆ ನಮ್ಮ ಕಣ್ಣೋಟಕ್ಕೆ ಬೀಳದಿರುವುದರಿಂದ ಅವು ನಮ್ಮ ಹೆದರಿಕೆಯಿಂದ ಪಾರು! ಆದರೆ ಈ ಬೇಟೆಗಾರನಂತಲ್ಲವಲ್ಲ!
ಈ ಭಯವನ್ನು Arachnophobia ಎನ್ನುತ್ತಾರೆ.
ಆಂಗ್ಲದಲ್ಲೊಂದು ನುಡಿಯಿದೆ “Seeing a spider isn’t a problem. It becomes a problem when it disappears.”
ಜೇಡಗಳಿಲ್ಲದ ಲೋಕವನ್ನು ಒಮ್ಮೆ ಊಹೆ ಮಾಡಿ.

ಅದರಲ್ಲೂ ಈ ಬೇಟೆಗಾರನನ್ನು ಸದ್ಯಕ್ಕೆ ಯೋಚಿಸಿ!
ಇದಲ್ಲದಿದ್ದರೆ…………?
ಎಲ್ಲೆಲ್ಲೂ ಜಿರಳೆಗಳು. ಹೇಗಿರಬಹುದು?

(ಮುಂದಿನ ಕಂತಿನಲ್ಲಿ ಇನ್ನಷ್ಟು ಜೇಡ ವಿಶೇಷ)

Facebook ಕಾಮೆಂಟ್ಸ್

ಲೇಖಕರ ಕುರಿತು

Dr. Abhijith A P C

ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!