ಅಂಕಣ

ಗೆದ್ದರೂ ಗೆಲುವಿಲ್ಲದ ಅಬ್ದಾಲಿಯ ದಂಡಯಾತ್ರೆ

           ಅಹಮದ್ ಶಾ ಅಬ್ದಾಲಿ. 1761ರ ಪಾಣಿಪತ್ ಯುದ್ಧದ ಮೂಲಕ ಚರಿತ್ರೆಯಲ್ಲಿ ದಾಖಲಾದ ಹೆಸರು. ಅಪ್ಘಾನಿಸ್ತಾನ ಒಂದು ಕಾಲದಲ್ಲಿ ಹಿಂದೂ ರಾಷ್ಟ್ರವಾಗಿದ್ದರೂ ಅಹಮದ್ ಶಾ ಅಬ್ದಾಲಿಯನ್ನು ತಮ್ಮ ರಾಷ್ಟ್ರಪಿತ ಎಂದೇ ಆಧುನಿಕ ಅಪ್ಘನ್ನರು ಭಾವಿಸಿದ್ದಾರೆ. 1762ರಲ್ಲಿ ಸಿಖ್ಖರ ಘಲ್ಲುಘಾರವನ್ನೇ (ಜನಾಂಗೀಯ ಹತ್ಯೆ) ಹಮ್ಮಿಕೊಂಡ ಈತ ಅಮೃತಸರದ ಹರ್ ಮಂದಿರ ಸಾಹಿಬವನ್ನೇ ಅಪವಿತ್ರಗೊಳಿಸಿದ. ಹಲವು ಮಂದಿರಗಳನ್ನು ನಾಶಗೊಳಿಸಿದ ಈತನ ರಕ್ತದಾಹಕ್ಕೆ ಮಥುರೆಯಲ್ಲಿ ಯಮುನೆ ಏಳು ದಿನಗಳ ಕಾಲ ಕೆಂಪಾಗಿ ಹರಿದಳಂತೆ. ಎಲ್ಲೆಂದರಲ್ಲಿ ರಕ್ತಸಿಕ್ತವಾದ ಹೆಣಗಳು! ಅಬ್ದಾಲಿಯನ್ನು ಮಹಾವೀರನೆಂದೂ, ಭಾರತವನ್ನು ಗೆದ್ದನೆಂದು ವೈಭವೀಕರಿಸಲಾಗುತ್ತದೆ. ಆದರೆ ಅದು ನಿಜವೇ ಎನ್ನುವುದನ್ನು ಹಾಗೂ ಅಬ್ದಾಲಿ ಭಾರತದ ಮೇಲೆ ದಂಡೆತ್ತಿ ಬರಲು ಕಾರಣವೇನು ಎನ್ನುವುದನ್ನು ಸ್ವಲ್ಪ ವಿಶ್ಲೇಷಿಸೋಣ.
ಮರಾಠಾ ಕೇಸರಿ ಪಡೆ ಭಾರತವನ್ನಿಡೀ ಆವರಿಸುತ್ತಾ ಸಾಗಿತ್ತು. ದಿಲ್ಲಿಯ ಗದ್ದುಗೆಯಲ್ಲಿದ್ದ ಮೊಘಲರು ಮರಾಠಾ ವೀರರೆದುರು ಹಲ್ಲು ಕಿತ್ತ ಹಾವಿನಂತಾಗಿದ್ದರು. ದಿಲ್ಲಿಯ ಗದ್ದುಗೆಯಿಂದ ಮೊಘಲರನ್ನು ಇಳಿಸಿ ತನ್ನ ಮಗನಾದ ವಿಶ್ವಾಸ್ ರಾವ್ ನನ್ನು ಕೂರಿಸುವ ಎಲ್ಲಾ ಸಿದ್ದತೆಗಳನ್ನು ಬಾಲಾಜಿ ರಾವ್ ಪೇಶ್ವೆ ಮಾಡಿದ್ದ. ಆದರೆ ಅಷ್ಟರಲ್ಲೇ ಅಫ್ಘಾನಿನ ದೊರೆ ಅಹಮದ್ ಶಾಹ್ ದುರಾನಿ (ಅಬ್ದಾಲಿ) ಭಾರತದ ಮೇಲೆ ದಂಡೆತ್ತಿ ಬಂದ. ಭಾರತದೊಂದಿಗೆ ರಾಜಕೀಯ ಸಂಬಂಧವೇ ಇರದಿದ್ದ ಅಬ್ದಾಲಿ ಭಾರತದ ಮೇಲೆ ದಾಳಿಗೆ ಬರಲು ಕಾರಣವೇನು ಎನ್ನುವುದನ್ನು ಹೊ.ವೆ. ಶೇಶಾದ್ರಿ, ಸೀತಾರಾಮ್ ಗೋಯಲರನ್ನು ಬಿಟ್ಟರೆ ಬೇರಾವ ಇತಿಹಾಸಕಾರರೂ ಗಮನಿಸಿದಂತೆ, ವಿಮರ್ಶಿಸಿದಂತೆ ಕಂಡಿಲ್ಲ. ಭಾರತವನ್ನು ಆಕ್ರಮಿಸುವಂತೆ ಅಬ್ದಾಲಿಗೆ ಆಹ್ವಾನವಿತ್ತವ ಷಾಹ್ ವಲಿಯುಲ್ಲಾ ಎಂಬ ಸೂಫಿ ಸಂತ.

ಸೂಫಿಯೊಬ್ಬ ಔರಂಗಜೇಬನ ಫತ್ವಾ-ಐ-ಆಲಂಗೀರಿಯನ್ನು ಬರೆದನಲ್ಲಾ; ಆ ಸೂಫಿ ಷಾಹ್ ಅಬ್ದುಲ್ ರಹೀಮನ ಮಗ ಷಾಹ್ ವಲಿಯುಲ್ಲಾ. ಸೂಫಿ ಪಂಥದ ಬಗೆಗೆ ಇನ್ನೂ ಒಳ್ಳೆಯ ಅಭಿಪ್ರಾಯ ಇರುವವರೆಲ್ಲಾ ಸೂಫಿ ಮನಸ್ಸಿನ ಈ ಬೃಹತ್ ಕೃತಿಯನ್ನು ಓದಬೇಕು! ವಲಿಯುಲ್ಲಾನೂ ಸೂಫಿಯೇ. ಅವನಿಗೆ ಆದರ್ಶ ಯಾವ ಸಂತನೂ ಅಲ್ಲ; ಘಜನಿ ಮೊಹಮ್ಮದನೇ ಆತನ ನಾಯಕ! ಆತನ ಪ್ರಕಾರ ಇಸ್ಲಾಮೀ ಇತಿಹಾಸದಲ್ಲಿ ನಾಲ್ವರು ಖಲೀಫರ ಬಳಿಕದ ಸರ್ವಶ್ರೇಷ್ಠ ವ್ಯಕ್ತಿಯೆಂದರೆ ಘಜನಿ! ಪ್ರವಾದಿ ಮಹಮ್ಮದರ ಜಾತಕದಂತೆಯೇ ಘಜನಿಯ ಜಾತಕವೂ ಇತ್ತು; ಪ್ರವಾದಿಯವರಷ್ಟೇ ಸಂಖ್ಯೆಯ ಮತ್ತು ಮಹತ್ತಿನ ಜಿಹಾದ್’ಗಳಲ್ಲಿ ಘಜನಿ ಜಯಗಳಿಸಿದ್ದ ಎಂದು ಕೊಂಡಾಡುತ್ತಾನೆ ವಲಿಯುಲ್ಲಾ. ಮೆಕ್ಕಾ, ಮದೀನಾಗಳಿಗೆ ಯಾತ್ರೆ ಕೈಗೊಂಡ ಹಾಗೂ ಹಲವು ಸೂಫಿ, ಮೌಲ್ವಿಗಳ ಬಳಿ ಅಭ್ಯಾಸ ಮಾಡಿದ ಬಳಿಕವಂತೂ ಈತ ಮತ್ತಷ್ಟು ಭಯಾನಕವಾಗಿದ್ದ. 1732-62ರ ಅವಧಿಯಲ್ಲಿ ಆತ ಬರೆದಿದ್ದ 43 ಗ್ರಂಥಗಳಲ್ಲಿದ್ದ ಜಿಹಾದಿಗೂ ದೇಶದ ಮೂಲೆಯ ಹಳ್ಳಿಯೊಂದರ ಮಸೀದಿಯಲ್ಲಿ ಬೊಬ್ಬೆ ಹೊಡೆವ ಮುಲ್ಲಾನ ಜಿಹಾದಿಗೂ ಏನೂ ವ್ಯತ್ಯಾಸವಿರಲಿಲ್ಲ! ವಾಸ್ತವವಾಗಿ ಅದರಲ್ಲಿದ್ದುದು ಹಾಗೂ ವಲಿಯುಲ್ಲಾ ನಡೆಸಿದ್ದು ಹಿಂದೂಗಳ ವಿರುದ್ಧ ನಡೆದು ಬಂದಿದ್ದ ಹಳೆಯ ಇಸ್ಲಾಮೀ ಮತೀಯ ಯುದ್ಧದ ಮುಂದುವರಿಕೆಯನ್ನೇ! ಭಾರತದ ಮೇಲೆ ದಾಳಿ ಮಾಡೆಂದು ಸತತ ಪತ್ರಗಳನ್ನು ಬರೆದು ಅಬ್ದಾಲಿಯನ್ನು ಆಹ್ವಾನಿಸಿದವ ಈ ವಲಿಯುಲ್ಲಾನೇ.

ವಲಿಯುಲ್ಲಾನ ಕಾಲದಲ್ಲಿ ಹಿಂದೂ ಕೇಸರಗಳ ಘರ್ಜನೆಗೆ ಮತಾಂಧ ಮುಸ್ಲಿಂ ಸಾಮ್ರಾಜ್ಯಶಾಹಿ ನಲುಗಿ ನಡುಗುತ್ತಿತ್ತು. ಭಾರತದ ಮೇಲೆ ಆಕ್ರಮಣಗೈದು ಈ ಪರಿಸ್ಥಿತಿಯನ್ನು ಬದಲಿಸುವಂತೆ ಆತ ಅಬ್ದಾಲಿಗೆ ಪತ್ರ ಬರೆದ. ಅದಕ್ಕಾಗಿ ಹಿಂದಣ ಮುಸ್ಲಿಮ್ ಆಕ್ರಮಕಕಾರರು ಅನುಸರಿಸಿದ ರೀತಿ ನೀತಿಗಳನ್ನೆಲ್ಲಾ ವಿವರಿಸಿದ. ಭಾರತವನ್ನು ವಿದೇಶೀ ನೆಲವೆನ್ನುವ, ಹಿಂದೂಸ್ಥಾನದಲ್ಲಿ ಇಸ್ಲಾಮೀ ದೊರೆಗಳಿರುವುದು ಅಲ್ಲಾನ ಅನುಗ್ರಹವೆನ್ನುವ, ಹಿಂದೂಗಳನ್ನು ಕಾಫಿರರೆಂದು ಕರೆದು ಅವರನ್ನು ಕೊಚ್ಚಿ ಹಾಕಬೇಕೆನ್ನುವ ಅವನ ಮಾತುಗಳಲ್ಲಿ ಇಸ್ಲಾಮ್ ವಿಷ ನಖಶಿಖಾಂತ ತುಂಬಿರುವುದನ್ನು ಕಾಣಬಹುದು. ಹೇಗೆ ಕೃಷಿಕರಾಗಿದ್ದ ಜಾಟರು ಶಸ್ತ್ರಾಸ್ತ್ರಗಳ ಪ್ರಯೋಗವನ್ನು ಕಲಿತು, ಪ್ರಬಲರಾಗಿ ಕೋಟೆಗಳನ್ನು ನಿರ್ಮಿಸಿ ಸೂರಜ್ ಮಲ್’ನ ನೇತೃತ್ವದಲ್ಲಿ 700 ವರ್ಷಗಳ ಕಾಲ ಮುಸ್ಲಿಮರ ಆಳ್ವಿಕೆಯಲ್ಲಿದ್ದ ಬಯಾನಾ ನಗರವನ್ನು ವಶಪಡಿಸಿಕೊಂಡು ಹಿಂದುತ್ವದ ರಕ್ಷಕರಾಗಿದ್ದಾರೆ ಎನ್ನುವುದನ್ನು ವಿವರಿಸಿದ. ಮರಾಠರು ತಮ್ಮ ಪ್ರಭಾವೀ ನಾಯಕನ ಆಜ್ಞೆಯನ್ನು ಶಿರಸಾವಹಿಸಿ ಇಡೀ ಹಿಂದೂಸ್ಥಾನದಲ್ಲಿ ಪ್ರಭಾವಶಾಲಿಯಾದ ಬಗೆಯನ್ನೂ ಬರೆದ. ಹಿಂದೂಸ್ಥಾನದಲ್ಲಿ ಮುಸ್ಲಿಮರು ತಮ್ಮೆಲ್ಲಾ ಅಧಿಕಾರವನ್ನು ಕಳೆದುಕೊಂಡು ದಟ್ಟ ದಾರಿದ್ರ್ಯದಿಂದ ಎರಡನೇ ದರ್ಜೆಯ ಪ್ರಜೆಗಳಂತೆ ಬದುಕುತ್ತಿದ್ದಾರೆ ಎನ್ನುವ ಕಪೋಲಕಲ್ಪಿತ ಕರುಣಾಜನಕ ಕಥೆಯನ್ನೂ ಬರೆದ. ಹಿಂದೂಸ್ಥಾನದ ಮೇಲೆ ದಾಳಿ ನಡೆಸಿ ಮರಾಠ, ಜಾಟರನ್ನು ಮುರಿದು ಮುಸ್ಲಿಮರಿಗೆ ಮತ್ತೆ ಅಧಿಕಾರ ಒದಗಿಸಿಕೊಡುವುದು ತಮ್ಮ ಕರ್ತವ್ಯವಾಗಿದ್ದು ನಿಮ್ಮ ಹೆಸರು ಮುಜಾಹಿದೀನ್ ಫಿ ಸಬೀಲಲ್ಲಾ(ಅಲ್ಲಾನ ಸೇವಕ ಯೋಧ)ರ ಪಟ್ಟಿಗೆ ಸೇರುತ್ತದೆ. ಅಪಾರ ಸಂಪತ್ತು ತಮ್ಮದಾಗುತ್ತದೆ ಎಂದು ಗೋಗರೆದ. ಮಾತ್ರವಲ್ಲ ಆಕ್ರಮಣ ಮಾಡುವ ವೇಳೆಗೆ ಮುಸಲರು ಹಾಗೂ ಮುಸ್ಲಿಮೇತರರು ಒಟ್ಟಾಗಿ ವಾಸಿಸುವ ಪ್ರದೇಶಗಳಲ್ಲಿ ಯಾವುದೇ ಮುಸಲ್ಮಾನರ ಆಸ್ತಿ, ಗೌರವಕ್ಕೆ ಚ್ಯುತಿಯಾಗದಂತೆ ವರ್ತಿಸಬೇಕು ಎಂದೂ ಬರೆದ. ಬಳಿಕ ಹಲವು ಮುಸ್ಲಿಮ್ ಸರದಾರರುಗಳಿಗೆ ಪತ್ರ ಬರೆದು ಅಬ್ದಾಲಿಗೆ ಸಹಾಯಕರಾಗುವಂತೆ ವಿನಂತಿಸಿದ.

ಹಾಗೆ ದಂಡೆತ್ತಿ ಬಂದ ಅಬ್ದಾಲಿಗೂ ಮರಾಠಾ ಕೇಸರಿಗಳಿಗೂ ನಿರ್ಣಾಯಕ ಕದನ ನಡೆದದ್ದು ಪಾಣಿಪತ್ತಿನಲ್ಲಿ. ಅದು ಆಧುನಿಕ ಇತಿಹಾಸದಲ್ಲಿ ದಾಖಲಾದ ಪಾಣಿಪತ್ತಿನಲ್ಲಿ ನಡೆದ ಮೂರನೆಯ ಮಹಾಯುದ್ಧ. ಮೊದಲ ಪಾಣಿಪತ್ ಯುದ್ಧ ಮೊಘಲರಿಗೆ ದೆಹಲಿಯ ಗದ್ದುಗೆಯೊದಗಿಸಿದರೆ, ಎರಡನೇಯ ಪಾಣಿಪತ್ ಯುದ್ಧದಲ್ಲಿ ಅಭಿನವ ವಿಕ್ರಮಾದಿತ್ಯ, ಅಜೇಯ ಸಾಹಸಿ ವೀರ ಹೇಮಚಂದ್ರ ಕೂದಲೆಳೆಯ ಅಂತರದಿಂದ ಸೋತ ಕಾರಣ ದೆಹಲಿ ಮತ್ತೆ ಹಿಂದೂ ಸಿಂಹಾಸನವಾಗುವುದನ್ನು ತಪ್ಪಿಸಿತು. ಅದ ಹೇಮುವಿನ ಸೋಲಲ್ಲ, ಬದಲಾಗಿ ವಿಧಿ ಕೈಕೊಟ್ಟಿತು ಎನ್ನಬಹುದು. ಮೂರನೆಯ ಪಾಣಿಪತ್ ಕದನವೂ ಹಿಂದೂಗಳು ದೆಹಲಿಯ ಗದ್ದುಗೆಯೇರುವುದನ್ನು ತಪ್ಪಿಸಿತು. ಕರ್ನಾಲ್ ಮತ್ತು ಕುಂಜಪುರಗಳ ಯಮುನಾ ನದಿಯ ದಂಡೆಯ ಮೇಲೆ ಮರಾಠರಿಗೂ ಅಪ್ಘನ್ ಸೈನ್ಯಕ್ಕೂ ಯುದ್ಧಗಳಾಗಿ ಎರಡು ತಿಂಗಳು ಮರಾಠಾ ಪಡೆ ಸರಿಯಾದ ಆಹಾರ ಸಾಮಗ್ರಿಗಳೂ ದೊರಕದೆ ದಿಗ್ಬಂಧನಕ್ಕೊಳಗಾದರೂ ಛಲದಂಕಮಲ್ಲ ಸದಾಶಿವರಾವ್ ಭಾವೂನ ನೇತೃತ್ವದಲ್ಲಿ ಅದ್ಭುತವಾಗಿ ಹೋರಾಡಿತು. ಭಾರತದಲ್ಲಿ ಮುಸ್ಲಿಂ ಆಡಳಿತದ ಅಳಿವು ಉಳಿವನ್ನು ನಿರ್ಧರಿಸಲಿದ್ದ ಈ ಯುದ್ಧದಲ್ಲಿ ಅವಧದ ನವಾಬ ಶುಜಾದ್ದೌಲಾ ಮತ್ತು ರೋಹಿಲಾಖಂಡದ ನಜೀಬುದ್ದೌಲಾ ಸೇರಿದಂತೆ ಹಲವು ಮುಸ್ಲಿಂ ದೊರೆಗಳು, ಸರದಾರರು ಅಬ್ದಾಲಿಯ ಜೊತೆ ಸೇರಿದ್ದರು. ಶುಜಾ-ಉದ್-ದೌಲಾ ಅಪ್ಘನ್ ಸೈನ್ಯಕ್ಕೆ ಬೇಕಾದ ಧನ ಸಹಾಯವನ್ನೂ ಮಾಡಿದ. ಎಷ್ಟೆಂದರೂ ಮಾತೃಭೂಮಿಯ ಕಲ್ಪನೆಯೇ ಇರದ ಅವರಿಗೆ ತಮ್ಮ ಮತಬಾಂಧವರೇ ಮುಖ್ಯರಾಗಿರುವಾಗ ಇದೇನೂ ಅಚ್ಚರಿಯ ಸಂಗತಿಯೇನಲ್ಲ. ಆದರೆ ಇದನ್ನು ಅರ್ಥ ಮಾಡಿಕೊಳ್ಳದ ಹಿಂದೂ ಪದೇ ಪದೇ ಮೋಸಕ್ಕೊಳಗಾಗುತ್ತಿರುವುದು ಮಾತ್ರ ವಿಚಿತ್ರ! ಕುಂಜಪುರದಲ್ಲಿ ನಡೆದ ಮೊದಲ ಕಾಳಗದಲ್ಲಿ ಮರಾಠಾ ಪಡೆ ಹದಿನೈದು ಸಾವಿರ ಅಪ್ಘನ್ನರನ್ನು ಕೊಚ್ಚಿ ಹಾಕಿತು. ಅಪ್ಘನ್ನರ ಇನ್ನೊಂದು ಪಡೆ ಅಬ್ದಾಲಿಯ ಜೊತೆ ಯಮುನೆಯ ಇನ್ನೊಂದು ದಡದಲ್ಲಿ ಮುಂದುವರೆಯುತ್ತಿತ್ತು. ಉಕ್ಕಿ ಹರಿಯುತ್ತಿದ್ದ ಯಮುನೆ ಶಾಂತಳಾಗುತ್ತಿದ್ದಂತೆ ಯಮುನೆಯನ್ನು ದಾಟಿದ ಅಬ್ದಾಲಿ. ಅಷ್ಟರವರೆಗೆ ಈರ್ವರೂ ಪರಸ್ಪರರ ಧಾನ್ಯಸರಬರಾಜನ್ನು ನಿಲ್ಲಿಸಲು ತಂತ್ರ ಹೂಡುತ್ತಿದ್ದರು. ಅದರಲ್ಲಿ ಅಪ್ಘನ್ ಪಡೆ ಬಹುತೇಕ ಸಫಲವಾಗಿತ್ತು. ಮುಂದಿನ ಎರಡೂ ತಿಂಗಳು ಕಣ್ಣುಮುಚ್ಚಾಲೆಯಾಟದೊಂದಿಗೆ ಮರಾಠರಿಗೆ ಸರಬರಾಜಾಗುತ್ತಿದ್ದ ಆಹಾರ ಸಾಮಗ್ರಿಗಳನ್ನು ತಪ್ಪಿಸಿತು ಅಬ್ದಾಲಿ ಪಡೆ. ಇದರಿಂದ ಡಿಸೆಂಬರ್ ಅಂತ್ಯಕ್ಕಾಗುವಾಗ ಮರಾಠಾ ಪಾಳಯದಲ್ಲಿ ಆಹಾರ ಸಾಮಗ್ರಿ ಖಾಲಿಯಾಗಿತ್ತು. ಹಸಿವಿನಿಂದ ಸಾಯುವ ಬದಲು ಯುದ್ಧಮಾಡಿ ಸಾಯುತ್ತೇವೆಂದು ಸೈನಿಕರು ಗೋಗರೆದಾಗ ಸದಾಶಿವ ಭಾವೂ ಅನುಮತಿ ನೀಡಿದ. ಹಸಿವು ನೀರಡಿಕೆಗಳನ್ನೂ ಲೆಕ್ಕಿಸದೇ ರಣಭಯಂಕರವಾಗಿ ಹೋರಾಡಿತು ಕೇಸರಿ ಪಡೆ. ಇರಲಿ ಪಾಣಿಪತ್ -3 ಯುದ್ಧ ಹಿಂದೂಗಳಿಗೆ ದೆಹಲಿಯ ಗದ್ದುಗೆಯನ್ನು ತಪ್ಪಿಸಿರಬಹುದು. ಆದರೆ ಅದು ಅಬ್ದಾಲಿಯ ವಿಜಯವೇನೂ ಆಗಿರಲಿಲ್ಲ. ಸದಾಶಿವ ಭಾವೂ ವೀರಮರಣವನ್ನಪ್ಪುವ ಮೊದಲು ಅಬ್ದಾಲಿಯ ಸೈನ್ಯವನ್ನು ನುಚ್ಚುನೂರು ಮಾಡಿದ. ಮರಾಠಾ ಕೇಸರಗಳ ಘರ್ಜನೆಗೆ ಅಬ್ದಾಲಿಯ ಸೈನ್ಯ ದಿಕ್ಕುಗೆಟ್ಟಿತ್ತು. ಎರಡೂ ಕಡೆ ಅಪಾರವಾದ ಸಾವುನೋವುಗಳು ಉಂಟಾದವು. ಅಬ್ದಾಲಿ ಜೀವ ಸಹಿತ ಉಳಿದರೂ ದೆಹಲಿಯ ಸಿಂಹಾಸನದ ಕಡೆ ಮುಖ ಮಾಡದೆ ಪೇರಿ ಕಿತ್ತ. ಇದು ಅಬ್ದಾಲಿಗಾದ ಮುಖಭಂಗವೇ ಸರಿ! ಹೆಚ್ಚಿನ ಇತಿಹಾಸಕಾರರು ಇದನ್ನು ಗುರುತಿಸಿದ್ದಾರೆ. ಸೀತಾರಾಮ ಗೋಯಲರಂತೂ ಮರಾಠರು ಹಾಗೂ ಜಾಠರನ್ನು ಅಳಿಸಿ ಹಾಕಲೆಂದು ವಲಿಯುಲ್ಲಾನಿಂದ ನೇಮಿಸಲ್ಪಟ್ಟ ಅಹ್ಮದ್ ಶಾ ಅಬ್ದಾಲಿ ಅದರಲ್ಲಿ ವಿಫಲನಾದ ಎಂದೇ ಬರೆದಿದ್ದಾರೆ.

ಪಾಣಿಪತ್ ಕದನದ ಬಳಿಕ ಅಪ್ಘಾನಿಸ್ತಾನಕ್ಕೆ ಹಿಂದಿರುಗಿದ ಅಬ್ದಾಲಿಗೆ ಪೆಟ್ಟು ಬಿದ್ದದ್ದು ಸಿಖ್ಖರಿಂದ. ಪಂಜಾಬ್ ಪ್ರಾಂತ್ಯದಲ್ಲಿ ತಮ್ಮ ಬಲವನ್ನು ವಿಸ್ತರಿಸಿಕೊಂಡ ಸಿಖ್ಖರು ಅಬ್ದಾಲಿಯ ಸರ್ದಾರ ನೂರುದ್ದೀನ್ ಬಮಜೈನ್ನು ಸೋಲಿಸಿ ಜಸ್ಸಾ ಸಿಂಗ್ ಅಹ್ಲುವಾಲಿಯಾನನ್ನು ಲಾಹೋರಿನ ಅರಸನನ್ನಾಗಿ ಘೋಷಿಸಿದರು. ಕಂದಾಹಾರದಿಂದ ಹೊರಟ ಅಬ್ದಾಲಿ ಸಟ್ಲೇಜ್ ನದಿಯನ್ನು ದಾಟಿ ಮಾಳವದ ಕಡೆಗೆ ಹೋಗುತ್ತಿದ್ದ ಸಿಖ್ ಸಮುದಾಯ ಮೇಲೆ ಆಕ್ರಮಣ ಮಾಡಿದ. ಸಿಖ್ ಸಮೂಹ ವೃದ್ಧರು, ಹೆಂಗಳೆಯರು, ಮಕ್ಕಳನ್ನೂ ಒಳಗೊಂಡಿತ್ತು. ಅನಿರೀಕ್ಷಿತ ಆಕ್ರಮಣದಿಂದ ಅಚ್ಚರಿಗೊಂಡ ಸಿಖ್ ಪಡೆ ಅಶಕ್ತರನ್ನು ಸುತ್ತುವರೆದು ನಿಂತು ಅಬ್ದಾಲಿಯನ್ನು ಎದುರಿಸಿತು. ಕೊನೆಗೂ ಅಬ್ದಾಲಿ ಆ ಚಕ್ರವ್ಯೂಹವನ್ನು ಭೇದಿಸಿ ಕಸಾಯಿಖಾನೆಯಲ್ಲಿ ಕೊಚ್ಚುವಂತೆ ಸಿಖ್ಖರನ್ನು ತರಿದು ಹಾಕಿದ. ಫೆಬ್ರವರಿ 5, 1762ರ ಒಂದೇ ದಿನ 25ಸಾವಿರ ಸಿಖ್ಖರ ಖೂನಿಯಾಯಿತು. ಆದರೆ ಅದು ಸಿಖ್ಖರನ್ನು ಧೃತಿಗೆಡಿಸುವ ಬದಲು ಮತ್ತಷ್ಟು ಗಟ್ಟಿ ಮಾಡಿತು. ಏಪ್ರಿಲ್ 1762ರಲ್ಲಿ ಆತ ಗನ್ ಪೌಡರ್ನಿಂದ ಅಮೃತಸರದ ಹರಿಮಂದಿರ ಸಾಹಿಬಾವನ್ನು ಸ್ಫೋಟಿಸಿದಾಗ ಕ್ರುದ್ಧರಾದ ಸಿಖ್ಖರು ಅಕ್ಟೋಬರಿನವರೆಗೂ ಸತತವಾಗಿ ವೀರಾವೇಶದಿಂದ ಹೋರಾಡಿ ಅವನನ್ನು ಹಿಮ್ಮೆಟ್ಟಿಸಿಬಿಟ್ಟರು!

1764ರಲ್ಲಿ ಅಬ್ದಾಲಿ ಬಲೂಚಿನ ಅಮೀರ್ ನಾಸಿರ್ ಖಾನನನ್ನು ಜೊತೆಯಾಗಿಸಿಕೊಂಡು ಅಮೃತಸರದ ಮೇಲೆ ದಾಳಿ ಮಾಡಿದ. ಈ ಬಾರಿ ಕೇವಲ ಮೂವತ್ತು ಜನ ಸಿಖ್ಖರ ಗುಂಪು ಅವನ ಸೈನ್ಯವನ್ನು ಹಣ್ಣುಗಾಯಿ ನೀರುಗಾಯಿ ಮಾಡಿ, ಸಿರ್ಹಿಂದ್ ಪ್ರದೇಶದಿಂದ ಮುಂದುವರೆಯದಂತೆ ತಡೆದು ಬಲಿದಾನಗೈದಿತು. ಜಸ್ಸಾ ಸಿಂಗ್ ಅಹ್ಲುವಾಲಿಯಾನ ನೇತೃತ್ವದಲ್ಲಿ ಸಿಖ್ ಸರ್ದಾರರು  ಸತತವಾಗಿ ಗೆರಿಲ್ಲಾ ದಾಳಿ ಮಾಡಿ ಅವನ ಸಂಪತ್ತನ್ನೆಲ್ಲಾ ಮರುವಶಪಡಿಸಿಕೊಂಡರು. ಇದರ ಜೊತೆಗೆ ಚೀನಾಬ್ ನದಿಯ ಪ್ರವಾಹಕ್ಕೆ ಅವನ ಸೈನಿಕರನೇಕರು ಕೊಚ್ಚಿ ಹೋದರು. ಇದು ಅಬ್ದಾಲಿಯನ್ನು ಅಕ್ಷರಶಃ ನಡುಗಿಸಿತು. 1766ರಲ್ಲಿ ಮತ್ತೆ ಸಿಖ್ಖರ ಮಟ್ಟ ಹಾಕಲೆಂದು ಬಂದನಾದರೂ ಅವನ 6000 ಸೈನಿಕರು ಕೊಲ್ಲಲ್ಪಟ್ಟರು. ಲಾಹೋರಿನ ಆಡಳಿತವನ್ನು ಲಹಿನಾ ಸಿಂಗ್ ಭಾಂಗಿಗೆ ಕೊಡುವ ಪ್ರಲೋಭನೆಯೊಡ್ಡಿ ಸಿಖ್ಖರನ್ನು ಒಡೆಯಲು ನೋಡಿದ ಅವನ ಆಟವೂ ನಡೆಯಲಿಲ್ಲ. ಜಸ್ಸಾ ಸಿಂಗ್ 30ಸಾವಿರ ಸಿಖ್ ಯೋಧರೊಡನೆ ತನ್ನ ಸೈನ್ಯ ಬೀಡುಬಿಟ್ಟ ಸ್ಥಳಕ್ಕೆ ಧಾವಿಸಿ ಬರುತ್ತಿರುವ ಸುದ್ದಿ ಕೇಳಿದ ಮೇಲೆ ಹಾಗೂ ಆತನ ಸೈನಿಕರು ಪಂಜಾಬಿನ ರಣಬಿಸಿಲಿಗೆ ಬಸವಳಿದುದನ್ನು ನೋಡಿ ಭಯಭೀತನಾದ ಆತ ಅಪ್ಘಾನಿಸ್ಥಾನಕ್ಕೆ ಓಟಕ್ಕಿತ್ತ!

1748-65ರ ನಡುವೆ ಅಹಮದ್ ಶಾ ಅಬ್ದಾಲಿ ಭಾರತದ ಮೇಲೆ 9 ಬಾರಿ ಆಕ್ರಮಣ ಮಾಡಿದ. ಅವನ ಈ ದಾಳಿಯ ವಿರುದ್ಧ ಸಂಘಟಿತರಾದ ಸಿಖ್ಖರು ಮಧ್ಯಾಹ್ನದ ಬಿರು ಬಿಸಿಲಿನಲ್ಲಿ ಮತ್ತು ನಟ್ಟಿರುಳಲ್ಲಿ ಆಕ್ರಮಣಕಾರರ ಮೇಲೆ ಗೆರಿಲ್ಲಾ ದಾಳಿ ನಡೆಸಿ ಅವರು ಸೂರೆಗೈದಿದ್ದ ಸಂಪತ್ತು ಹಾಗೂ ಭಾರತೀಯರನ್ನು ಬಿಡಿಸಿ ತರುತ್ತಿದ್ದರು. ಹೆಂಗಳೆಯರನ್ನು ಅವರ ಮನೆಗಳಿಗೆ ಗೌರವಪೂರ್ವಕವಾಗಿ ಕಳುಹುತ್ತಿದ್ದರು. ಸಣ್ಣ ಸಣ್ಣ ಗುಂಪುಗಳಲ್ಲಿ ಬಂದು ದಾಳಿಯೆಸಗುವ ಸಿಖ್ಖರ ಈ ಯುದ್ಧ ವೈಖರಿ ಅಪ್ಘನ್ನರನ್ನು ಅಕ್ಷರಶಃ ನಡುಗಿಸಿಬಿಟ್ಟಿತ್ತು. ಸಿಖ್ಖರು ಹನ್ನೆರಡು ಗಂಟೆಗೆ ಸರಿಯಾಗಿ ಆವೇಶಗೊಳ್ಳುತ್ತಿದ್ದ ಈ ಘಟನೆಯೇ ಇಂದಿಗೂ ಸಿಖ್ಖರನ್ನು ತಮಾಷೆ ಮಾಡುವ “ಸರ್ದಾರ್ ಜೀ ಕಾ ಬಾರಹ್ ಬಜ್ ಗಯಾ” ಎಂಬ ಮಾತಿಗೆ ಮೂಲವಾಗಿದೆ.

ಉಜ್ಜಯಿನಿಯಲ್ಲಿ ದ್ವಾರಕಾಧೀಶ ಎಂದು ಕರೆಯಲ್ಪಡುವ ಒಂದು ಗೋಪಾಲ ಮಂದಿರವಿದೆ. ಈ ದೇವಾಲಯದ ಗರ್ಭಗುಡಿಯ ಬಾಗಿಲುಗಳಿಗೆ ಬೆಳ್ಳಿಯ ಲೇಪನವಿತ್ತು. ಅಹಮದ್ ಶಾ ಅಬ್ದಾಲಿ ಈ ಮಂದಿರದ ಮೇಲೆ ಆಕ್ರಮಣ ಮಾಡಿ ಆ ಬಾಗಿಲುಗಳನ್ನು ಒಯ್ದಿದ್ದ. ಹಿಂದೂಗಳು ತಿರುಗಿ ಬಿದ್ದು ದೊಡ್ಡದಾದ ಹೋರಾಟ ಮಾಡಿ ಈ ಬಾಗಿಲುಗಳನ್ನು ಮರಳಿ ಪಡೆದರು ಎಂಬ ಒಂದು ಕಥೆಯಿದೆ. ಈಗಿರುವ ದೇವಾಲಯ ಮಹಾರಾಜಾ ದೌಲತ್ ರಾವ್ ಸಿಂಧ್ಯಾನ ಪತ್ನಿ ಬಯಾಜಿ ಬಾಯಿ ಜೀರ್ಣೋದ್ಧಾರ ಮಾಡಿದ್ದು. ಅಮೃತಶಿಲೆಯ ಮೇಲೆ ಎರಡಡಿ ಎತ್ತರದ ಬೆಳ್ಳಿಯ ಕೃಷ್ಣನ ವಿಗ್ರಹ ಇಲ್ಲಿದೆ.

ಕ್ರೂರಿ ಅಬ್ದಾಲಿಗೆ ಬುದ್ಧಿ ಕಲಿಸಿದ ಇನ್ನೊಂದು ಘಟನೆ ನಡೆದಿತ್ತು. ಹಾಗೆ ಬುದ್ಧಿ ಕಲಿಸಿದವರು ಸಾಧುಗಳು! ಹೌದು, 1757ರಲ್ಲಿ ನಡೆದ ಈ ಕದನದ ರೂವಾರಿಗಳು ನಾಗಾ ಸಾಧುಗಳು. ಅಬ್ದಾಲಿ ನಲವತ್ತು ಸಾವಿರ ಅಪ್ಘನ್ನರೊಂದಿಗೆ ಗೋಕುಲದ ಮೇಲೆ ದಾಳಿ ಮಾಡಿದ. ಗೋಕುಲನಾಥನ ದೇವಾಲಯವನ್ನು ನಾಶ ಮಾಡುವುದೇ ಆತನ ಉದ್ದೇಶವಾಗಿತ್ತು. ಈ ಸುದ್ದಿ ತಿಳಿದ ನಾಲ್ಕು ಸಾವಿರದಷ್ಟು ನಾಗಾ ಸಾಧುಗಳು ಧೀರತನದಿಂದ ದಾಳಿಗೆ ಎದೆಯೊಡ್ಡಿ ನಗರದ ರಕ್ಷಣೆ ಮಾಡಿದರು. ಸಂಖ್ಯಾತ್ಮಕವಾಗಿ ಹೆಚ್ಚಿದ್ದರೂ, ಉನ್ನತ ಯುದ್ಧ ನೈಪುಣ್ಯವನ್ನು ಹೊಂದಿದ್ದರೂ ಅಪ್ಘನ್ನರಿಗೆ ಈ ರಕ್ಷಣಾವ್ಯೂಹವನ್ನು ಭೇದಿಸಲಾಗಲಿಲ್ಲ. 2000 ನಾಗಾ ಸಾಧುಗಳು ಮಾತೃಭೂಮಿಗಾಗಿ ಬಲಿದಾನ ನೀಡಬೇಕಾಗಿ ಬಂದರೂ ಅಬ್ದಾಲಿಗೆ ದೇವಾಲಯದ, ಅಲ್ಲಿದ್ದ ಮಠಗಳ ಕೂದಲೂ ಕೊಂಕಿಸಲಾಗದೆ ಹಿಂದಿರುಗಬೇಕಾಯಿತು. ಸಾಲುಸಾಲಿಗೂ ವಿಜಯ, ಅಸಂಖ್ಯರನ್ನು ಗುಲಾಮಗಿರಿಗೆ ತಳ್ಳಿದುದು, ಸಾಮೂಹಿಕ ಕೊಲೆಗಳಿಂದ ಗುರುತಿಸಲ್ಪಟ್ಟ ಅಬ್ದಾಲಿಗೆ ಇದು ಅಪರೂಪದ ಹಿನ್ನಡೆ!

ಹೀಗೆ ಸತತವಾಗಿ ಭಾರತದ ಮೇಲೆ ದಂಡೆತ್ತಿ ಬಂದರೂ ಭಾರತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಅಬ್ದಾಲಿಯಿಂದಾಗಲಿಲ್ಲ. ಮರಾಠಾ ಹಾಗೂ ಸಿಖ್ ಕೇಸರಗಳು ಬಾರಿ ಬಾರಿಗೂ ಆತನ ಮೇಲೆ ಮುಗಿಬಿದ್ದು, ಎದೆಯೊಡ್ಡಿ ಅವನ ದಂಡಯಾತ್ರೆಗೆ ತಡೆಯೊಡ್ಡಿದವು. ಮರಾಠಾ ಹಾಗೂ ಸಿಖ್ ಸೇನೆ ಸೋಲಲು ಇಲ್ಲಿನ ಮುಸ್ಲಿಮ್ ರಾಜರು, ಸರದಾರರು ತಮ್ಮದೇ ಮತೀಯನೆಂಬ ಏಕೈಕ ಕಾರಣಕ್ಕೆ ಅಬ್ದಾಲಿಯನ್ನು ಅಪ್ಪಿಕೊಂಡುದುದು, ಅಧರ್ಮ ಯುದ್ಧ ಹಾಗೂ ಪ್ರಕೃತಿಯ ವೈಪರೀತ್ಯಗಳು ಕಾರಣವಾದವೇ ಹೊರತು ಅಬ್ದಾಲಿಯ ಪರಾಕ್ರಮವೇನಲ್ಲ. ಅಬ್ದಾಲಿ ಗೆದ್ದಂತೆ ಗೋಚರಿಸಿದರೂ ಅದು ಅಪಾರ ಸಾವುನೋವು, ಸಂಪತ್ತು ನಷ್ಟಗಳನ್ನು ಬದಿಗಿಟ್ಟು ನೋಡಿದರೆ ಮಾತ್ರ. ಆದರೆ ಆತನ ವೈಭವೀಕರಣವೇನೂ ನಿಂತಿಲ್ಲ. ಈಗಿನ ಪಾಕಿಸ್ತಾನದ ಪ್ರಾಂತ್ಯದಲ್ಲಿದ್ದ ಮುಸ್ಲಿಮ್ ಅರಸರನ್ನೂ ಅಬ್ದಾಲಿ ಬಿಟ್ಟಿರಲಿಲ್ಲ. ಆದರೆ ಪಾಕಿಸ್ತಾನಕ್ಕೆ ಅಬ್ದಾಲಿಯೇ ಆದರ್ಶ. ಅದಕ್ಕೆ ಕಾರಣವೊಂದೇ, ಭಾರತ ವಿರೋಧ! ತನ್ನ ಕ್ಷಿಪಣಿಯೊಂದಕ್ಕೆ ಪಾಕಿಸ್ತಾನ ಅಬ್ದಾಲಿಯ ಹೆಸರಿಟ್ಟಿದೆ. ಭಾರತ ವಿರೋಧಕ್ಕಾಗಿ ತನ್ನ ಪೂರ್ವಜರನ್ನು ಕೊಂದವನಾದರೂ ಪರವಾಗಿಲ್ಲ; ಅದು ಅಪ್ಪಿಕೊಳ್ಳುತ್ತದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rajesh Rao

ವೃತ್ತಿ: ವಿ ಎಲ್ ಎಸ್ ಐ ಇಂಜಿನಿಯರ್
ಪ್ರವೃತ್ತಿ: ಇತಿಹಾಸ/ಪ್ರಚಲಿತ ವಿದ್ಯಮಾನ, ಕಥೆ-ಕವನ ಬರವಣಿಗೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!