ಎಲ್ಲಿ ಹೋಗುವಿರಿ ನಿಲ್ಲಿ ಜನತೆಯೇ ಅದೋ ಬರುತ್ತಿದೆ ಚುನಾವಣೆ
ಗಲ್ಲಿಗಲ್ಲಿಗಳ ಸೇಂದಿ ಅಂಗಡಿಗಳೇ
ಹೆಚ್ಚುವುದು ನಿಮ್ಮ ಚಲಾವಣೆ
ಗಡಿಪಾರಾಗಿ ಹೋದಂತಿದ್ದ
ಜನನಾಯಕರ ಮತ್ತೆ ಮುಖದರ್ಶನ
ಯಾರ ಭಾಗ್ಯವೋ ಏನೋ ನಾನಂತೂ ಕಾಣೆ
ಉಚಿತ ಸೀರೆ ದುಡ್ಡುಗಳ ಮಹಾದಾನ
ಕುಂಭಕರ್ಣನಂತೆ ಮಲಗಿ ನಿದ್ರಿಸುತ್ತಿದ್ದ
ಸರಕಾರ ಎದ್ದಿದೆ ನೋಡಲ್ಲಿ
ಜನರ ಕಷ್ಟಕೆ ಮೊಸಳೆ ಕಣ್ಣೀರ ಸುರಿಸಿ
ಪೊಳ್ಳು ಭರವಸೆಯ ನೀಡುತಿಹರಿಲ್ಲಿ
ಗುಡಿ, ಚರ್ಚು, ಮಸೀದಿಗಳ ಏಕತಾನತೆ ಹಾಡಿ
ಕೋಮುವಾದವ ಮರೆವಂತೆ ಭಾಷಣವ ನೀಡಿ
ಎಲ್ಲರಲಿ ಬಾಂಧವ್ಯವ ತೋರಿ
ಮರೆಸುವರು ಅವರು ನಡೆದಂತ ದಾರಿ!
ಬರಿದು ಮಾಡುವರು ಸರ್ಕಾರದ ಬೊಕ್ಕಸವ
ತಿಳಿದಿಲ್ಲವೇ ಅದು ಜನತೆಯ ಬೆವರು
ಕುರ್ಚಿಯ ಆಸೆಗೆ ಕೈಕಾಲು ಹಿಡಿವರು
ಪಾದಯಾತ್ರೆಯ ಮಾಡುವರು ಊರೂರು
ಚುನಾವಣೆಯ ಸಮಯ ಬಡವರಿಗೆ ಹಬ್ಬ
ಆಗುವುದಲ್ಲ ದರ ಇಳಿಕೆಯ ಅಬ್ಬರ
ಯೋಗ್ಯನಲ್ಲದವ ಗೆದ್ದರೆ
ದರಗಳೆಲ್ಲ ಏರುವುದು ಬಾನೆತ್ತರ
ನಿಮ್ಮ ಸುಖವೇ ನಮ್ಮ ಸುಖ ಎಂದೆಲ್ಲ ಹೇಳಿ
ಕೈಕಾಲು ಹಿಡಿವರು ಮತದಾನಿಯ
ಫಲಿತಾಂಶ ಬಂದೊಡನೆ ತಮ್ಮ ಸುಖ ಹೆಚ್ಚಿಸಲು
ಹಿಡಿವರು ವಿದೇಶದ ರಹದಾರಿಯ
ಹೊಡೆದಂತೆ ಜೇನುಗೂಡಿಗೆ ಕಲ್ಲು
ಹಳ್ಳಿಹಳ್ಳಿಗೆ ಬರುವುದು ನಾಯಕರ ದಂಡು
ಜಲ, ವಿದ್ಯುತ್ ಎಲ್ಲಾ ಅಭಾವಗಳ ಪೂರೈಸುವೆವೆಂದು
ಬಿಡುವರೊಂದು ಗಾಳಿಗುಂಡು
ಎದ್ದೇಳಿ ಜನಗಳೇ ಕಣ್ತೆರೆದು ನೋಡಿ
ನಿಜವಾದ ಜನನಾಯಕ ಯಾರೆಂದು
ಮೂರ್ಖರಿಗೆ ಕೊಡಬೇಡಿ ದೇಶದ ಚುಕ್ಕಾಣಿ
ಮತದಾನ ಮಾಡಿ ಯೋಗ್ಯರಿಗೆ ಎಂದೂ
- Anisha Thendulkar