ಅಂಕಣ

ಎಪ್ಪತ್ತರ ಬಳಿಕ ಸಿಕ್ಕಿತು ನಿಜ ಸ್ವಾತಂತ್ರ್ಯದ ಸಿಹಿ

          ಸ್ವಾತಂತ್ರ್ಯ. ಅದರಿಚ್ಛೆ ಯಾರಿಗಿಲ್ಲ? ಕಟ್ಟಿ ಹಾಕಿದ ಮೂಕ ಪ್ರಾಣಿಯೂ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ನಿಯಮಿತ ಆಹಾರ, ಒತ್ತಡವಿಲ್ಲದ ಸ್ವಸ್ಥ ಸ್ಥಳ, ಕಾಲಕಾಲಕ್ಕೆ ಬಿಡುಗಡೆ ಸಿಗುವ ಅವಕಾಶ ದೊರಕಿದರಷ್ಟೇ ಸುಮ್ಮನುಳಿಯುತ್ತದೆ. ಅಥವಾ ನಿತ್ಯರೂಢಿಯಿಂದ ಅದೇ ಅಭ್ಯಾಸವಾಗಿಬಿಡುವ ಕಾರಣ ಸುಮ್ಮನುಳಿಯುತ್ತದೆ. ಜಗತ್ತಿನ ಮೂಲೆ ಮೂಲೆಗಳಲ್ಲೂ ನಿತ್ಯ ಪ್ರತಿಧ್ವನಿಸುವ ಪದ ಸ್ವಾತಂತ್ರ್ಯ. ಪ್ರತಿಜೀವಿಗಳಲ್ಲೂ ಈ ಮೂರು ಪದವನ್ನು ತನ್ನದಾಗಿಸಿಕೊಳ್ಳುವ ಹಪಹಪಿ ಅದೆಷ್ಟು? ಈ ಪದ ಸ್ಫುರಿಸುವ ಭಾವವದೆಷ್ಟು? ಪ್ರತಿಯೊಬ್ಬರ ಅದರೆಡೆಗಿನ ಭಾವವೂ ಬೇರೆ ಬೇರೆಯೇ. ಪ್ರತಿಯೊಬ್ಬರಿಗೂ ಅದು ದಕ್ಕಿದ ಪ್ರಮಾಣವೂ ಬೇರೆ ಬೇರೆಯೇ. ಪ್ರತಿಯೊಬ್ಬರಿಗೂ ಅದು ಅರ್ಥವಾಗುವ ರೀತಿಯೂ ಬೇರೆ ಬೇರೆಯೇ! ಅದರ ಪ್ರಾಪ್ತಿಗಾಗಿ ಜೀವಿ ಪಡುವ ಪಾಡೆಷ್ಟು? ನಡೆದ ಯುದ್ಧಗಳೆಷ್ಟು? ಆದ ಬಲಿದಾನಗಳೆಷ್ಟು? ಅದರ ಪ್ರಾಪ್ತಿಗಾಗಿ ಹೆಣಗಾಡಿದ ಅದೆಷ್ಟು ಜೀವಗಳು ದನಿಯೂ ಹೊರಬರದಂತೆ ಹೆಣವಾಗಿ ಹೋದವು? ಅದರ ಉಳಿಕೆ-ಗಳಿಕೆಗಾಗಿ ಅದೆಷ್ಟು ಕಣ್ಣೀರಿನ ಕೋಡಿ ಹರಿಯಿತು; ಅದೆಷ್ಟು ರಕ್ತ ಮಣ್ಣಿಗಿಳಿಯಿತು. ಕೆಲವರು ತಾವು ಪಟ್ಟ ಪಾಡಿಗೆ ತಕ್ಕ ಪ್ರತಿಫಲವನ್ನಾದರೂ ಉಂಡರು. ಕೆಲವರಿಗೆ ತಮ್ಮ ಪಾಡನ್ನು ಅಕ್ಷರರೂಪಕ್ಕಿಳಿಸಿ ಇತರರ ನೆರವಿಂದ ಪ್ರತಿಫಲವೋ, ಕಾಲಗರ್ಭದಲ್ಲಿ ಅನುಕಂಪದ ಅಲೆಯಾದರೂ ಲಭಿಸಿತು. ಈ ವಿಶಾಲ ದಿಗಂತದಲ್ಲಿ ಅಂತಹಾ ಯಾವುದೇ ಪ್ರತಿಫಲವಿಲ್ಲದೆ, ಜೀವಿಯ, ಕಾಲದ ನೆರವಿಲ್ಲದೆ, ಕನಿಷ್ಟ ತನ್ನ ಕಿರುಚಾಟ-ಕಣ್ಣೀರಿಗೂ ಎಡೆ ಸಿಗದೆ ಗತಪ್ರಾಣರಾದವರೆಷ್ಟೋ?
ಭಾರತ ಇದೆಲ್ಲವನ್ನೂ ಕಂಡಿದೆ. ಸ್ವಾತಂತ್ರ್ಯೇಚ್ಛೆ ಬರಿಯ ವ್ಯಕ್ತಿಯದ್ದಲ್ಲ. ಒಂದು ಸಮೂಹದ್ದೂ ಆಗಿರಬಹುದು; ಒಂದು ದೇಶದ್ದೂ ಆಗಿರಬಹುದು. ಆ ಇಚ್ಛೆಯಿಂದಲೇ ಹಲವು ಕಾಲ ಈ ದೇಶ ಹೋರಾಡಿತು. ಅದೆಷ್ಟು ಬಗೆಯ ಹೋರಾಟಗಳು; ಅದೆಷ್ಟು ರಣ ಕಲಿಗಳು; ಅದೆಷ್ಟು ಬಲಿದಾನಗಳು. ಆ ಸ್ವಾತಂತ್ರ್ಯ ಪ್ರಾಪ್ತಿಯ ಮನಸ್ಥಿತಿಯ ಉದ್ದೀಪನಕ್ಕೆ ಅದೆಷ್ಟು ಮಂತ್ರಗಳು, ತಂತ್ರಗಳು, ಮಾರ್ಗಗಳು! ಅವೆಲ್ಲದರ ಮೂಲ ಸ್ರೋತ ಯಾವುದು? ನಿಸ್ಸಂಶಯವಾಗಿ ವಂದೇ ಮಾತರಂ. ಭಾವಾವೇಶದ ದಿವ್ಯ ಸ್ಥಿತಿಯಲ್ಲಿ ಋಷಿ ಬಂಕಿಮರಿಗೆ ಅಪ್ರಯತ್ನವಾಗಿ ಆದ ಮಂತ್ರ ದರ್ಶನವದು. ಇಡಿಯ ಹಿಂದೂಸ್ಥಾನದಲ್ಲಿ ಮಿಂಚಿನ ಸಂಚಾರ ಮೂಡಿಸಿದ ಗೀತೆಯದು. ಅದರ ಪ್ರತಿಯೊಂದು ಶಬ್ಧವೂ ಸ್ವಾತಂತ್ರ್ಯದ ಅಪೇಕ್ಷಿಗಳಿಗೆ ರೋಮಾಂಚನವನ್ನುಂಟುಮಾಡಿತು. ಅದರಿಂದೆದ್ದ ಜ್ವಾಲಾಮುಖಿ ದಾಸ್ಯರಕ್ಕಸನನ್ನು ಸುಟ್ಟು ಹಾಕಿತು.

ದೇಶವೇ ತಾಯಿ ಎನ್ನುವ ಭಾವ ಭಾರತೀಯರಿಗೇನೂ ಹೊಸದಾಗಿರಲಿಲ್ಲ. ಆದರೆ ಆ ಕಾಲಘಟ್ಟದಲ್ಲಿ ಪಾಶ್ಚಾತ್ಯಂಧಾನುಕರಣೆಯ ಸುಳಿಯಿಂದ ಜನತೆಯನ್ನು ತಪ್ಪಿಸಿ ರಾಷ್ಟ್ರವೆಂಬ ಭಾವಸಾಗರದಲ್ಲಿ ಈಜಲು ಅನುವು ಮಾಡಿಕೊಡಬೇಕಿತ್ತು. ಜೊತೆಗೆ ಪರಂಪರೆಯ ಸೊಬಗಿಗೆ ಆಧುನಿಕತೆಯ ಸ್ಪರ್ಷ ಬೇಕಿತ್ತು. ಸರಿಯಾದ ಸಮಯದಲ್ಲಿ ಪ್ರಕೃತಿ ಬಂಕಿಮರ ಚಿತ್ತಭಿತ್ತಿಯಲ್ಲಿ ಪ್ರತ್ಯಕ್ಷಳಾಗಿ ಅವರ ಭಾವದಲ್ಲಿ ಹೊನಲಾಗಿ ಕವನವಾಗಿ ಹರಿದಳು. ಅಮ್ಮಾ ಎನುವ ಭಾವೋದ್ದೀಪನವನ್ನು ವಂದೇ ಮಾತರಂ ಒದಗಿಸಿತು. ಭಾಷೆಯ ಹಂಗಿಲ್ಲದೆ ಭಾರತೀಯರನ್ನು ಬೆಸೆಯಿತು. ರಾಷ್ಟ್ರಧರ್ಮವೇ ಪರಮೋಧರ್ಮ ಎನ್ನುವುದು ಬುದ್ಧಿಗಿಂತಲೂ ಭಾವವಾಗಿ ಹರಿದುದರಿಂದ ಅದು ಬಂಕಿಮರ ಮಾತಿನಂತೆ ಕೆಲವೇ ವರ್ಷಗಳಲ್ಲಿ ಬಂಗಾಳವೇಕೆ ಇಡಿಯ ಭಾರತವನ್ನೇ ಹುಚ್ಚೆಬ್ಬಿಸಿತು. ರವೀಂದ್ರರಿಗೆ ಜ್ವಾಲಾಮುಖಿಯೆನಿಸಿತು. ಋಷಿಕಲ್ಪ ಅರವಿಂದರಿಗೆ ದರ್ಶನವೆನಿಸಿತು. ವೀರ ಸಾವರ್ಕರರ “ಸ್ವಾತಂತ್ರ್ಯ ಲಕ್ಷೀ ಕೀ ಜೈ”ಯ ಜೊತೆ ಸೇರಿತು. ಕ್ರಾಂತಿ ಸಂಘಟನೆಗಳನ್ನು ಪ್ರೇರೇಪಿಸಿತು. ಸ್ವಾಭಿಮಾನವನ್ನು ಉದ್ದೀಪಿಸಿತು. ರಾಷ್ಟ್ರಧ್ವಜದ ಪರಿಕಲ್ಪನೆಗೂ ಸೇರಿತು. ಪತ್ರಿಕೆ, ಸಂಘಟನೆಗಳಿಗೆ ಬೀಜರೂಪವಾಯಿತು. ಹಲವು ಭಾಷೆಗಳಲ್ಲಿ ಹಲವು ಕವಲುಗಳಾಗಿ ಹರಿಯಿತು. ಗಂಡುಗಲಿ ಚಂದ್ರಶೇಖರ ಆಜಾದನ ಗುಂಡುಗಳಲ್ಲಿ ಮೊರೆಯಿತು. ಭಗತ್-ಬಟುಕೇಶ್ವರರು ಎಸೆದ ಬಾಂಬುಗಳಲ್ಲಿ ಭೋರ್ಗರೆಯಿತು. ಸುಭಾಷರ “ಜೈ ಹಿಂದ್”ಗೆ ಸ್ಪೂರ್ತಿಯಾಯಿತು. ಆತ್ಮಹತ್ಯೆ ಮತ್ತು ಆತ್ಮಾಹುತಿಯ ನಡುವಿನ ವ್ಯತ್ಯಾಸವನ್ನು ತಿಳಿಯಪಡಿಸಿ ಸ್ವಾತಂತ್ರ್ಯ ಪ್ರಾಪ್ತಿಗೂ ಕಾರಣವಾಯಿತು. ಇಂದಿಗೂ ಅದು ಸತ್ತಂತಿಹರನು ಬಡಿದೆಚ್ಚರಿಸುತ್ತಲೇ ಇದೆ.

ಒಟ್ಟಿಗೆ ಬಾಳಲು ಜನರು ತಾಳುವ ಇಚ್ಛಾಶಕ್ತಿ ರಾಷ್ಟ್ರವೊಂದನ್ನು ರೂಪಿಸುತ್ತದೆ. ಆದರೆ ರಾಷ್ಟ್ರವೆಂದರೆ ಬರಿಯ ಭೂಮಿಯ ತುಂಡಾಗಲೀ, ಜನಸಮೂಹವಾಗಲೀ ಅಲ್ಲವಲ್ಲ. ಅಂದರೆ ರಾಜ್ಯ ಮತ್ತು ರಾಷ್ಟ್ರವನ್ನು ಸಮಾನ ವ್ಯಾಪ್ತಿಯಲ್ಲಿ ನೋಡಿದ ಆಂಗ್ಲ ಮಾನಸಿಕತೆ ನಮ್ಮಲ್ಲೂ ನೆಲೆಯೂರಿ, ರಾಷ್ಟ್ರ ಸ್ವಾತಂತ್ರ್ಯಕ್ಕಿಂತಲೂ, ದೇಶ ಸ್ವಾತಂತ್ರ್ಯವೇ ಮೇಲಾಗಿ, ಕೆಲವರ ಹಿತಾಸಕ್ತಿಗೆ ಬಲಿಯಾಗಿ ರಾಜಕೀಯ ಸ್ವಾತಂತ್ರ್ಯವಷ್ಟೇ ನಮ್ಮ ಪಾಲಿಗಾಯಿತು. ಅದಕ್ಕಿಂತಲೂ ಹೆಚ್ಚಾಗಿ ಅದೇ ಕೆಲವರ ದುರಾಸೆಯಿಂದ ತಾಯಿ ಭಾರತಿ ತನ್ನ ಮುಕುಟಮಣಿಯನ್ನೂ ತನ್ನ ಹಲವು ಅಂಗಾಂಗಗಳನ್ನು ಕಳೆದುಕೊಂಡು ನಿಸ್ತೇಜಳಾದಳು. ಅಲ್ಲದೆ ನಮ್ಮದೇ ಬಂಧು ಬಾಂಧವರ ಅತ್ಯಾಚಾರ, ದುರ್ಮರಣ; ಸೂತಕ! ಹೀಗೆ ಸ್ವಾತಂತ್ರ್ಯ ದಿನವೆಂಬುದು ಸ್ವಾತಂತ್ರ್ಯದ ಸಂಭ್ರಮದ ಜೊತೆಗೆ ನಮ್ಮ ಅದೆಷ್ಟೋ ಬಂಧು ಭಗಿನಿಯರ ಶ್ರಾದ್ಧವನ್ನೂ ಮಾಡಬೇಕಾಗಿ ಬಂದ ದ್ವಂದ್ವದ ದಿನ! ರಾಜಕೀಯ ಸ್ವಾತಂತ್ರ್ಯವಾದರೂ ಉಳಿಯಿತೇ? ಅದೂ ಅದೇ ಕೆಲವರ ಕುಟುಂಬದ ಸೊತ್ತಾಯಿತು! ಚುಕ್ಕಾಣಿ ಹಿಡಿದವರ ಪಾಶ್ಚಾತ್ಯೀಕೃತ ಮಾನಸಿಕತೆಯಿಂದಾಗಿ ಪರೋಕ್ಷ ವಸಾಹತುಶಾಹಿ ಮುಂದುವರಿಯಿತು. ವಿಕೃತ ಜಾತ್ಯಾತೀತತೆ, ಮತ ಬ್ಯಾಂಕ್ ರಾಜಕಾರಣ, ರಾಷ್ಟ್ರ ವಿರೋಧಿ ನಡವಳಿಕೆ, ಇತಿಹಾಸದ ತಿರುಚುವಿಕೆ, ರಾಷ್ಟ್ರಭಾವ ತುಂಬದ ಶಿಕ್ಷಣ, ಧರ್ಮ-ನೀತಿಗಳಿಲ್ಲದ ವ್ಯವಹಾರ, ಭ್ರಷ್ಟಾಚಾರ, ವಿದೇಶನಿಷ್ಠೆ, ವಂಚಕ, ದೇಶದ್ರೋಹಿಗಳಿಗೆ ಕುಮ್ಮಕ್ಕು ಇವೆಲ್ಲವೂ ಅದೇ ಪರೋಕ್ಷ ವಸಾಹತುಶಾಹಿಯ ಫಲಶ್ರುತಿಗಳು!

2014; ಈ ಎಲ್ಲಾ ಅಪಸವ್ಯಗಳನ್ನು ಮೆಟ್ಟಿ ನಿಂತು ನಿಜವಾದ ಸ್ವಾತಂತ್ರ್ಯವನ್ನು ಪಡೆಯಲು ಭಾರತ ಮುಂದಡಿಯಿಟ್ಟಿತು. ಅಂದಿನಿಂದ ಸೇನೆಯೂ ಸ್ವಾತಂತ್ರ್ಯದ ಸಂಭ್ರಮವನ್ನು ಸವಿಯಿತು. ಆಡಳಿತ, ರಾಜಕೀಯ, ಸಾಮಾಜಿಕ ಜೀವನದಲ್ಲಿ ನಿಧಾನವಾಗಿ ಬದಲಾವಣೆಯ ಗಾಳಿ ಬೀಸಲಾರಂಭಿಸಿತು. ಸ್ವಾಭಿಮಾನವನ್ನು ಗಳಿಸಿಕೊಂಡ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾತಿಯಿಂದ ವರ್ತಿಸಿ ತನ್ನ ಶತಶತಮಾನಗಳ ಹಿಂದಿನ ಘನತೆಯನ್ನು ಮತ್ತೆ ಪಡೆಯುವತ್ತ ಸಾಗಿತು. ಭಯೋತ್ಪಾದನೆಯ ಮೂಲಕ ತನ್ನನ್ನು ನಾಶ ಮಾಡಲು ಯತ್ನಿಸುವವರಿಗೆ ಎರಡೆರಡು ಬಗೆಬಗೆಯ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ತನ್ನ ಶಕ್ತಿಯನ್ನೂ, ಬದಲಾವಣೆಗೊಂಡ ನೀತಿಯನ್ನು ನಿರೂಪಿಸಿತು. ಒಂದು ಕಾಲದಲ್ಲಿ ಜಗತ್ತಿಗೆ ಧನಾತ್ಮಕವಾದ ಎಲ್ಲವನ್ನೂ ಕೊಡುತ್ತಿದ್ದ ದೇಶ ಎಲ್ಲವನ್ನೂ ಪಡೆದುಕೊಳ್ಳಬೇಕಾದ ಸ್ಥಿತಿಗೆ ತಲುಪಿತ್ತು. ಆ ಪರಿಸ್ಥಿತಿಯೂ ಬದಲಾಯಿತು. ಇವೆಲ್ಲವೂ ಕಳೆದ ಐದು ವರ್ಷಗಳ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಹೆಚ್ಚಿಸಿದ್ದವು.

ಏನೇ ಬದಲಾದರೂ ಹಲವು ಕೊರಗುಗಳು ಉಳಿದು ಬಿಟ್ಟಿದ್ದವು. ಜಾತ್ಯತೀತ ರಾಷ್ಟ್ರ ಎಂಬ ಹಣೆಪಟ್ಟಿ ಹೊತ್ತುಕೊಂಡಿದ್ದರೂ ಸಮುದಾಯವೊಂದರ ಸ್ತ್ರೀಯರ ಸ್ವಾತಂತ್ರ್ಯ ಮರೀಚಿಕೆಯಾಗಿತ್ತು. ಟ್ರಿಪಲ್ ತಲಾಖ್ ಅನ್ನು ನಿಷೇಧಿಸುವ ಮೂಲಕ ಆ ಸ್ವಾತಂತ್ರ್ಯವನ್ನು ದೊರಕಿಸಿಕೊಡುವಲ್ಲಿ ಮಾತ್ರ ಸರಕಾರ ಮೊದಲ ಹೆಜ್ಜೆಯಿಟ್ಟದ್ದಲ್ಲ; ಸಮಾನ ನಾಗರಿಕ ಸಂಹಿತೆಯನ್ನು ದೇಶದಲ್ಲಿ ಜಾರಿಗೊಳಿಸಲೂ ಇದು ಮೊದಲ ಉಪಕ್ರಮವೇ. ಒಂದು ದೇಶದಲ್ಲಿ ಸ್ವಾತಂತ್ರ್ಯವೆಂಬುದು ಕೆಲವರಿಗೆ ಹೆಚ್ಚು, ಕೆಲವರಿಗೆ ಕಡಿಮೆ ಎಂಬಂತಿದ್ದ ಸ್ಥಿತಿಯನ್ನು ಸರಿಪಡಿಸಲೂ ಸರಕಾರ ತೆಗೆದುಕೊಂಡ ಮೊದಲ ಹೆಜ್ಜೆ. ಚಂದ್ರಯಾನ-2ಕ್ಕೆ ಯಶಸ್ವಿಯಾಗಿ ಚಾಲನೆ ನೀಡುವ ಮೂಲಕ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಲ್ಲ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿತು ಭಾರತ. ಎಪ್ಪತ್ತು ವರ್ಷಗಳ ಹಿಂದೆ ತನ್ನ ಮುಕುಟಮಣಿಯ ಅರ್ಧಭಾಗವನ್ನು ಕಳೆದುಕೊಂಡಿತ್ತು ಭಾರತ. ನೆಹರೂ ಎಂಬ ಮೂರ್ಖನ ನಿರ್ಧಾರದಿಂದ 370 ಎಂಬಾ ವಿಧಿಯಡಿಗೆ ಸಿಲುಕಿ, ಮೂರು ಪರಿವಾರಗಳ ಖಜಾನೆಯಾಗಿ, ಪ್ರತ್ಯೇಕತಾವಾದಿಗಳ ಸ್ವರ್ಗವಾಗಿ, ಭಯೋತ್ಪಾದಕರ ಅಡ್ಡೆಯಾಗಿ, ಹಿಂದೂಗಳಿಗೆ ನರಕವಾಗಿ ನಲುಗಿದ್ದ ಕಶ್ಯಪನ ಭೂಮಿಯ ಉಳಿದರ್ಧ ಭಾಗ ಸ್ವತಂತ್ರಗೊಂಡು ತಾಯಿ ಭಾರತಿಯ ತೆಕ್ಕೆಗೆ ಸೇರಿತು. ವಿಧಿ 370 ಎಂಬ ಷರೀಯತ್ಗೆ ಸಮನಾದ ರಕ್ಕಸನಿಗೆ ಬಲಿಯಾಗಿ ಸಿಕ್ಕಿದ ಅಪಾರ ಸಂಪತ್ತನ್ನು ತಿಂದುಂಡು ದುಂಡಾಗಿ ಬೆಳೆದು, ತರುಣರನ್ನು ಕಲ್ಲೆಸೆಯಲು ಕಳುಹುತ್ತಿದ್ದ, ಕಾಶ್ಮೀರಿ ಪಂಡಿತರ, ಸೈನಿಕರ ಕೊಲೆಗೆ ಕಾರಣರಾದ, ಜಮ್ಮು ಕಾಶ್ಮೀರವನ್ನು ನರಕಕ್ಕೆ ತಳ್ಳಿದ ಮೂರು ಪರಿವಾರಗಳ ದಾಸ್ಯಕ್ಕೆ ತುತ್ತಾಗಿ; ಅಭಿವೃದ್ಧಿಯೂ ಮರೀಚಿಕೆಯಾಗಿ; ತಾಯ್ನೆಲವನ್ನು ಅಮ್ಮಾ ಎನ್ನುವ ಸೌಭಾಗ್ಯವೂ ಸಿಗದೆ; ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸ್ವಾತಂತ್ರ್ಯವೂ ಇಲ್ಲದೆ ನಲುಗಿದ್ದ ನಮ್ಮ ಬಂಧುಗಳು ಮುಕ್ತಿ ಪಡೆದು ಮುಖ್ಯಭೂಮಿಕೆಯಲ್ಲಿ ಸೇರುವ ಅಭೂತಪೂರ್ವ ಕ್ಷಣ ಮಹತ್ತರವಲ್ಲದೆ ಇನ್ನೇನು? ನಕಲಿ ಮಾನವೀಯತೆಯೆಂಬ ಮುಖ ಹೊಂದಿ ಲೇಖನಿಯ ತುದಿಯಲ್ಲಿ ನಲಿದು ಜಗದ ಜನರ ಮನಸ್ಸಿನಲ್ಲಿ ಆಶ್ರಯ ಪಡೆದಿದ್ದ ಕೆಲವೇ ಜನರ ಸ್ವಾರ್ಥದ ಪ್ರತ್ಯೇಕತೆಯ ಹೋರಾಟವು ಇದರಿಂದ ಕೊನೆಗೊಂಡು ಕಾಲಗರ್ಭದಲ್ಲಿ ಮುಚ್ಚಿಹೋಗಿದ್ದ ಬಹುಜನರ ಒಂದಾಗುವ ಬೇಡಿಕೆ ಈಡೇರಿದ ಪುಣ್ಯ ಕ್ಷಣವದು.

ಈ ಘನ ಕಾರ್ಯದ ಹಿಂದೆ “ಏಕ್ ದೇಶ್ ಮೇ ದೋ ಪ್ರಧಾನ್, ದೋ ವಿಧಾನ್, ದೋ ನಿಶಾನ್ ನಹಿ ಚಲೇಗಾ” ಎನ್ನುತ್ತಾ ಹೋರಾಡಿದ ಶ್ಯಾಮ್ ಪ್ರಸಾದ್ ಮುಖರ್ಜಿಯಂತಹಾ ರಾಷ್ಟ್ರಭಕ್ತರ ಬಲಿದಾನದ ಪಾಲಿದೆ. ಅಸಂಖ್ಯ ಯೋಧರ ರಕ್ತದ ಕಲೆಯಿದೆ. ತಮ್ಮ ಮಗನನ್ನು ಕಳೆದುಕೊಂಡ ಯೋಧ ಕುಟುಂಬದ ಕಣ್ಣೀರಿನ ಹನಿಯಿದೆ. ತಮ್ಮದೇ ನೆಲದಿಂದ ಒದ್ದೋಡಿಸಲ್ಪಟ್ಟ, ತಮ್ಮ ನೆರೆಕರೆಯ ಮತಾಂಧರಿಂದಲೇ ಅತ್ಯಾಚಾರಕ್ಕೊಳಗಾದ, ಕೊಲೆಯಾದ, ದೇಶದ ಸರ್ಕಾರಗಳಿಂದ ವಿಶ್ವಾಸ ದ್ರೋಹಕ್ಕೊಳಗಾದ ಕಾಶ್ಮೀರ ಪಂಡಿತರ ಅಸಹಾಯಕತೆಯ ನಿಟ್ಟುಸಿರು ಇದೆ. ದಶಕಗಳ ಕಾಲ ಕಾದು ಕುಳಿತ, ನಡೆಯುತ್ತಿದ್ದ ಅನ್ಯಾಯವನ್ನು ಜಗತ್ತಿನೆಲ್ಲೆಡೆ ಸಾರಿ ಹೇಳಿ ಪ್ರತಿಭಟಿಸಿದ ಅಸಂಖ್ಯ ಸಂಘ, ಸಂಸ್ಥೆ ಮತ್ತು ವ್ಯಕ್ತಿಗಳ ಪರಿಶ್ರಮವಿದೆ. ಇವೆಲ್ಲದರ ಪ್ರತಿಯೊಂದು ಅಂಶವನ್ನು ಹೊತ್ತು ಹುಟ್ಟಿದ ದೇಶಭಕ್ತ ಕೇಂದ್ರ ಸರಕಾರದ ರಾಷ್ಟ್ರೀಯತೆಯ ಪರವಾದ ನಿಲುವು, ನೀತಿ, ಕಾರ್ಯಗಳಿವೆ. ಪಾಕಿಸ್ತಾನ ಆಕ್ರಮಿಸಿಕೊಂಡ ಉಳಿದ ಭಾಗಗಳನ್ನು ಮರಳಿ ಪಡೆಯಲೂ ಈ ಮಹಾನ್ ಕಾರ್ಯ ವಿಶ್ವಾಸ ತುಂಬಿದೆ. ಕೇಸರಿಯ ಘಮಲಿನೊಂದಿಗೆ ಶಾರದೆಯ ಗುಣಗಾನ ಕೇಳುವ ದಿನಗಳೂ ಹತ್ತಿರವಾಗಿವೆ. ಭಾರತ ಮನಸ್ಸು ಮಾಡಿದರೆ ಏನು ಸಾಧಿಸಬಹುದು ಎನ್ನುವುದನ್ನೂ ಈ ಐತಿಹಾಸಿಕ ನಡೆ ಜಗತ್ತಿಗೆ ತೋರಿಸಿದೆ. ಬಲೂಚಿಗಳು, ಸಿಂಧಿಗಳ ಹೃದಯದಲ್ಲಿ ಸ್ವಾತಂತ್ರ್ಯದ ಭಾವನೆಯನ್ನು ತೀವ್ರಗೊಳಿಸಿದೆ. ಅಖಂಡ ಭಾರತದ ಸಾಕ್ಷಾತ್ಕಾರಕ್ಕೆ ದೇಶ ಮೊದಲ ಹೆಜ್ಜೆಯೆನ್ನಿರಿಸಿದೆ. ಅದೇ ಕಾರಣಕ್ಕೆ ಇಷ್ಟು ವರ್ಷವಿಲ್ಲದಿದ್ದ ವಿಶೇಷ ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ಬಂದಿದೆ. ಎಲ್ಲಾ ಭಾರತೀಯರು ಈ ಸವಿಯನ್ನುಂಡು ಪಾವನರಾಗೋಣ.

ಪ್ರತಿಯೊಂದು ಶತಮಾನಗಳಲ್ಲೂ ಸ್ವಾತಂತ್ರ್ಯದ ಉಳಿಕೆಗೆ-ಗಳಿಕೆಗೆ ಮಹಾಯುದ್ಧಗಳೇ ನಡೆದವು. ಈಗಲೂ ನಡೆಯುತ್ತಲೇ ಇವೆ. ತನ್ನ ಲಾಭಕ್ಕಾಗಿ ಇನ್ನೊಬ್ಬರನ್ನು ತನ್ನ ಅಧೀನದಲ್ಲಿಟ್ಟುಕೊಳ್ಳುವುದು ವೀರರ ಲಕ್ಷಣವಂತೂ ಅಲ್ಲ. “ಮಾರಕ ಯಂತ್ರಗಳು, ಧನಬಲ, ಸರಕುರಾಶಿಗಳಿಂದ ಮೆರೆಯುವ ವಣಿಕರ ಜಗತ್ತಿನಲ್ಲಿ ಭಿಕ್ಷಾಪಾತ್ರೆಗೆ ಸ್ಥಾನವಿರದು. ಆ ಬಲದೆದುರು ಮಹಾಮಾಯೆಯ ವಾಣಿಯ, ಎಂದರೆ ಮಾನವನ ಅಂತಸ್ಥಶಕ್ತಿಯ ಸ್ಫೋಟ ಮಾತ್ರ ಮಾನವಗತಿಗೆ ಹೊಸ ದಿಕ್ಕನ್ನು ನೀಡೀತು” ಎಂದ ವಿವೇಕ ವಾಣಿ ಯಾರ ಕಿವಿಯಲ್ಲಿ ಮೊಳಗುತ್ತದೆಯೋ ಆತ ಸ್ವಾತಂತ್ರ್ಯದೆಡೆಗೆ ತೀವ್ರಗತಿಯಲ್ಲಿ ಸಾಗುತ್ತಾನೆ. ಅಲ್ಲದೆ ಆತ್ಮವಿಸ್ಮೃತಿಯಿಂದ ಹೊರಬಂದು ಆತ್ಮವಿಶ್ವಾಸದಿಂದ ಕೂಡಿರುವ ಆತ್ಮಜಾಗೃತ ಸಮಾಜವನ್ನು ಯಾರಿಗೂ ಎಂದಿಗೂ ಗುಲಾಮಗಿರಿಯಲ್ಲಿಡಲು ಸಾಧ್ಯವಿಲ್ಲ. ಭಾರತ ತನ್ನ ಆತ್ಮವನ್ನು ಸದಾ ಜಾಗೃತ ಸ್ಥಿತಿಯಲ್ಲಿಟ್ಟುಕೊಳ್ಳಲಿ ಎಂದು ಆಶಿಸೋಣ.

(ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟಿತ ಬರಹ)

Facebook ಕಾಮೆಂಟ್ಸ್

ಲೇಖಕರ ಕುರಿತು

Rajesh Rao

ವೃತ್ತಿ: ವಿ ಎಲ್ ಎಸ್ ಐ ಇಂಜಿನಿಯರ್
ಪ್ರವೃತ್ತಿ: ಇತಿಹಾಸ/ಪ್ರಚಲಿತ ವಿದ್ಯಮಾನ, ಕಥೆ-ಕವನ ಬರವಣಿಗೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!