ಅಂಕಣ

ಇವರನ್ನು  ಬೈಯುವುದಕ್ಕೆ ನಮಗೆ ಮನಸಾದರೂ ಹೇಗೆ ಬಂದೀತು?

ನನ್ನ ನೆರೆಹೊರೆಯವರಲ್ಲೊಬ್ಬ ಲೈನ್ ಮ್ಯಾನ್ ಇದ್ದಾನೆ. ಮಧ್ಯವಯಸ್ಕ. ಹೆಂಡತಿ-ಎರಡು ಮಕ್ಕಳ ಜೊತೆಗೆ ಸುಖ ಸಂಸಾರ. ಅವನು ಒಮ್ಮೆ ಕೆಲಸದಲ್ಲಿ ನಿರತನಾಗಿದ್ದಾಗ ತೀವ್ರತರವಾದ ವಿದ್ಯುತ್ ಶಾಕ್ ತಗುಲಿ ಕಂಬದಲ್ಲೇ ನೇತಾಡಿಕೊಂಡಿದ್ದ. ದೇಹದ ಬಹಳಷ್ಟು ಭಾಗಗಳು ಸುಟ್ಟು ಹೋಗಿತ್ತು. ನಾಲ್ಕೈದು ತಿಂಗಳುಗಳ ಕಾಲ ಕೋಮಾದಲ್ಲಿದ್ದು ಬಳಿಕ ನಿಧಾನಕ್ಕೆ ಚೇತರಿಸಿಕೊಂಡ. ಮತ್ತೆ ಡ್ಯೂಟಿಗೆ ಸೇರಿಕೊಂಡ. ಅವನ ಗ್ರಹಚಾರವೋ ಏನೋ… ಎರಡು ವರ್ಷಗಳಲ್ಲಿ ಮತ್ತೊಮ್ಮೆ ಶಾಕ್ ತಗುಲಿ ಕಂಬದಿಂದ ಕೆಳಕ್ಕೆ ಎಸೆಯಲ್ಪಟ್ಟ. ಈ ಭಾರಿಯೂ ತೀವ್ರತರವಾದ ಗಾಯಗಳಾಗಿ ಮೂರು ತಿಂಗಳುಗಳಿಗೂ ಹೆಚ್ಚು ಕಾಲ ತೀವ್ರ ನಿಗಾ ಘಟಕದಲ್ಲಿದ್ದ. ಮತ್ತೆ ಚೇತರಿಸಿಕೊಂಡು ಕೆಲಸಕ್ಕೆ ಹಾಜರಾದ. ಈ ಭಾರಿ ಆತನಿಗೆ ಫೀಲ್ಡ್ ಕೆಲಸಗಳನ್ನು ಕೊಡದೆ ಬರೀ ಕಛೇರಿ  ಕೆಲಸಗಳ ಉಸ್ತುವಾರಿಯನ್ನು ಕೊಟ್ಟರು. ಅಬ್ಬಾ.. ಮತ್ತೊಮ್ಮೆ ಇವನ ಜೀವಕ್ಕೆ ಅಪಾಯವಿಲ್ಲ ಅಂತ ಮನೆಯವರು ನಿಟ್ಟುಸಿರು ಬಿಟ್ಟರು. ಮೊನ್ನೆ ನೋಡುತ್ತೇನೆ, ಈ ವ್ಯಕ್ತಿ ದೊಪ್ಪನೆ ಸುರಿಯುತ್ತಿರುವ ಮಳೆಯಲ್ಲಿ ಸಹಾಯಕರನ್ನು ಕಟ್ಟಿಕೊಂಡು ಕಂಬವೇರಲು ಸಿದ್ಧನಾಗುತ್ತಿದ್ದಾನೆ!!

ಇದರರ್ಥವೇನು?! ಒಂದು, ಮೆಸ್ಕಾಂನಲ್ಲಿ ವಿಪರೀತ ಗಾಳಿ ಮಳೆಯ ಕಾರಣದಿಂದಾಗಿ ವಿಪರೀತ ಕೆಲಸದ ಒತ್ತಡವಿದೆ. ಇನ್ನೊಂದು, ಈ ಒತ್ತಡ ನಿಭಾಯಿಸುವಂತಹಾ ಮ್ಯಾನ್ ಪವರ್ ಮೆಸ್ಕಾಂನಲ್ಲಿಲ್ಲ. ತಾತ್ಕಾಲಿಕ ನೆಲೆಯಲ್ಲಿರುವ ಹೊರಗುತ್ತಿಗೆಯವರು ಈ ಜಡಿಮಳೆಗೆ ಬಂದರೂ ಆಯಿತು; ಬರದಿದ್ದರೂ ಆಯಿತು.  ಹಾಗಾಗಿ ಇಲಾಖೆಯಲ್ಲಿ ಯಾರು ಇದ್ದಾರೋ ಅವರನ್ನು ಕಟ್ಟಿಕೊಂಡು ಕೆಲಸಕ್ಕಿಳಿಯುವ ಸಾಹಸ ಮೆಸ್ಕಾಂನದ್ದು. ಹಾಗಾಗಿ ಫೀಲ್ಡ್ ಕೆಲಸಕ್ಕೆ ಕರೆದೊಯ್ಯಬಾರದವನನ್ನೂ ಫೀಲ್ಡ್’ಗೆ ಕಳುಹಿಸಿದೆ ಮೆಸ್ಕಾಂ; ಹದಗೆಟ್ಟಿರುವ ವ್ಯವಸ್ಥೆಯನ್ನು ಸರಿಪಡಿಸುವುದಕ್ಕಾಗಿ!

ವಿದ್ಯುತ್ ಎನ್ನುವುದು ನಮ್ಮ ಜೀವನದ ಅವಿಭಾಜ್ಯ ಅಂಗ ಹೌದು. ಅಕ್ಕಿ ಹಿಟ್ಟು ಮಾಡಲು ಕರೆಂಟ್ ಬೇಕು, ಬಟ್ಟೆ ಒಗೆಯಲು ಕರೆಂಟ್ ಬೇಕು, ಇಸ್ತ್ರಿ ಮಾಡಲು ಕರೆಂಟ್ ಬೇಕು. ಕುಡಿಯುವ ನೀರಿಗೂ ಕರೆಂಟ್ ಬೇಕು. ಜಂಗಮವಾಣಿಯಲ್ಲಿ ಚಾರ್ಜ್ ಇಲ್ಲದೇ ಇದ್ದರೆ ಆಕಾಶವೇ ಕಳಚಿ ಬಿದ್ದಂತೆ ಆಡುವ ಜಮಾನ ನಮ್ಮದು.. ಮಳೆಗೆ ಒದ್ದೆಯಾಗಿ ಬಂದಾಗ ಬಿಸಿಬಿಸಿ ನೀರಿನಲ್ಲಿ ಸ್ನಾನ ಮಾಡಬೇಕಾದರೆ ಕರೆಂಟ್ ಬೇಕು. ಫ್ಯಾನು ತಿರುಗದೇ ಇದ್ದರೆ ನಿದ್ದೆ ಬರದು, ಟಿವಿ ಆನ್ ಆಗದೇ ಇದ್ದರೆ ಸಮಯ ಸಾಗದು. ಇದು ನಮ್ಮ ದಿನನಿತ್ಯದ ಚಟುವಟಿಕೆಯಷ್ಟೇ, ವ್ಯಾಪಾರ ವಹಿವಾಟಿನ ಕಥೆ ಬಿಟ್ಟು ಬಿಡೋಣ.  ದಿನದ ಒಂದು ಘಂಟೆಯೂ ಕರೆಂಟಿಲ್ಲದಿದ್ದರೆ ನಮ್ಮ ಕೈ ಕಾಲು ಅಲ್ಲಾಡುವುದಿಲ್ಲ. ಅಷ್ಟರ ಮಟ್ಟಿಗೆ ನಾವು ವಿದ್ಯುತ್ತನ್ನು ಅವಲಂಬಿಸಿದ್ದೇವೆ. ಬಿಲ್ಲು ಎಷ್ಟಾದರೂ ಬರಲಿ, ಮೇಲಿನ ಯಾವ ಕೆಲಸವೂ ಕರೆಂಟಿಲ್ಲದಿದ್ದರೆ ನಡೆಯದು. 

ಆದರೆ ಎಲ್ಲಾ ಸಮಯದಲ್ಲಿ ಪರಿಸ್ಥಿತಿ ಒಂದೇ ಇರುವುದಿಲ್ಲ. ಬೇಸಗೆಯಲ್ಲಿ ನೀರಿನ ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತದೆ. ಆವಾಗ ಅನಿವಾರ್ಯವಾಗಿ ಲೋಡ್ ಶೆಡ್ಡಿಂಗ್ ಮಾಡಬೇಕಾಗುತ್ತದೆ. ಆದರೆ ಅದೆಲ್ಲ ತಾತ್ಕಾಲಿಕ. ಕರೆಂಟ್ ಹೋದರೆ ಒಂದೆರಡು ಘಂಟೆ  ಹೋಗಬಹುದು ಅಷ್ಟೇ. ಅದಕ್ಕೂ ನಮ್ಮಲ್ಲಿ ಇನ್’ವರ್ಟರ್ ಎನ್ನುವ ಸಾಧನ ಇರುವುದರಿಂದ ಕರೆಂಟ್ ಹೋದರೆ ನಮಗೇನು ತೊಂದರೆಯಾಗುವುದಿಲ್ಲ. ಆದರೆ ನಿಜವಾದ ಸಮಸ್ಯೆಯಾಗುವುದೇ ಮಳೆಗಾಲದಲ್ಲಿ. 

ಮಳೆಗಾಲದಲ್ಲಿ  ಬೀಸುವ ಸುಂಟರಗಾಳಿ ನೂರಾರು ಮರಗಳನ್ನು ಉರುಳಿಸಿಬಿಡುತ್ತದೆ. ಹಾಗೆ ಬಿದ್ದ ಅವೆಷ್ಟೋ ಮರಗಳು ಮೊದಲು ತಬ್ಬಿಕೊಳ್ಳುವುದು ವಿದ್ಯುತ್ ತಂತಿಗಳನ್ನು. ಮತ್ತೆ ಕೆಲವು ಸಲ ಕರೆಂಟ್ ಕಂಬಗಳನ್ನೇ ಬುಡಮೇಲು ಮಾಡುವ ಗಾಳಿ ಬೀಸುತ್ತದೆ. ಸಿಡಿಲು ಬಡಿದು ಅದೆಷ್ಟೋ  ಸಬ್’ಸ್ಟೇಷನ್’ಗಳು, ಟ್ರಾನ್ಸ್’ಫಾರ್ಮರ್’ಗಳು, ವಿದ್ಯುತ್ ಕಂಬಗಳು ಹಾನಿಗೀಡಾಗುತ್ತವೆ. ಒಂದು ಕಡೆ, ಎರಡು ಕಡೆ ಹೀಗಾದರೆ ಪರವಾಗಿಲ್ಲ, ಏನೋ ಒಂದು ಪೂರಕ ವ್ಯವಸ್ಥೆಯನ್ನು ತಕ್ಷಣ ಮಾಡಿಬಿಡಬಹುದು. ಆದರೆ ಹತ್ತಾರು ಕಡೆ ಒಮ್ಮೆಯೇ ಹೀಗಾದರೆ? ಒಬ್ಬ ಲೈನ್ ಮ್ಯಾನಿನ ವ್ಯಾಪ್ತಿಯಲ್ಲಿ ಹತ್ತು ಕಂಬಗಳು ಒಂದೇ ದಿನ ಮುರಿದು ಬಿದ್ದರೆ ಅವನಾದರೂ ಏನು ಮಾಡುವುದಕ್ಕೆ ಸಾಧ್ಯ? ಹಲವು ಕಡೆ ತಂತಿಗಳು ಮುರಿದು ಬಿದ್ದಾಗ ಆತನೊಬ್ಬನೇ ಎಷ್ಟೂಂತ ಸರಿ  ಮಾಡಲು ಸಾಧ್ಯವಿದೆ? ಕಂಬಗಳು ಮುರಿದ ಕಡೆಗಳಲ್ಲಿ ಅತ್ಯಂತ ಭಾರದ ಕಂಬಗಳನ್ನು ನಿಲ್ಲಿಸಬೇಕು. ಅದೂ ಅಲ್ಲದೆ, ಬಿಡುವಿಲ್ಲದೆ ಬಿರುಸಾಗಿ ಸುರಿಯುತ್ತಿರುವ ಮಳೆ ಬೇರೆ! ಜೊತೆಗೆ ಗಾಳಿ! ಅದರ ನಡುವೆಯೇ ಕೆಲಸ ಮಾಡಬೇಕು. ಮಳೆಗೆ ಅದಾಗಲೇ ಮರಗಳು, ವಿದ್ಯುತ್ ಕಂಬಗಳು ನೆನೆದು ಹೋಗಿ ಜಾರುತ್ತಿರುತ್ತವೆ. ಅಂತಹಾ ಮರಗಳಿಗೆ, ಕಂಬಗಳಿಗೆ ಬಿರುಸಾಗಿ ಸುರಿಯುತ್ತಿರುವ ಮಳೆಯ ಮಧ್ಯೆಯೇ ಹತ್ತುವುದೆಂದರೆ ಸಾವಿನೊಂದಿಗೆ ಸರಸವಾಡಿದಂತೆಯೇ ಸರಿ. ಆದರೂ ಅಂತಹಾ ಸಂದರ್ಭಗಳಲ್ಲಿ ಎದೆಗುಂದಂತೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ನಮ್ಮ ಮನೆ ಬೆಳಗುವುದಕ್ಕಾಗಿ ಕಂಬ ಹತ್ತುತ್ತಾನಲ್ಲಾ?; ಆತನ ಧೈರ್ಯವನ್ನು ಮೆಚ್ಚಲೇಬೇಕು! ಈ ದೃಷ್ಟಿಕೋನದಲ್ಲಿ ನೋಡಿದರೆ ಪ್ರತಿಯೊಬ್ಬ ಲೈನ್ ಮ್ಯಾನ್ ಮಾಡುವ ಕೆಲಸವೂ ವಿಪತ್ತಿನ ಸಂದರ್ಭದಲ್ಲಿ NDRF ನವರು, ಸೇನೆಯ ಜವಾನರು  ಮಾಡುವ ಕೆಲಸಕ್ಕೆ ಯಾವ ದಿಕ್ಕಿನಲ್ಲೂ ಕಡಿಮೆಯಿಲ್ಲದ್ದು!

ಇನ್ನು ಕೆಲವು ಕಡೆಗಳಲ್ಲಿ  ಎಲ್ಲೋ ಹಳ್ಳಿ ಮೂಲೆಗಳಲ್ಲಿ, ತೋಟಗಳಲ್ಲಿ, ಅರಣ್ಯ ಪ್ರದೇಶದೊಳಗೆ ಮರ ಬಿದ್ದು ವಿದ್ಯುತ್ ಕಂಬಗಳಿಗೆ, ಟ್ರಾನ್ಸ್’ಫಾರ್ಮರ್’ಗಳಿಗೆ ಹಾನಿಯಾಗಿರುತ್ತದೆ. ಕೆಲವೆಡೆ ಅಂತಹ ಜಾಗಗಳನ್ನು ತಲುಪುವುದಕ್ಕೆ ಸರಿಯಾದ ರಸ್ತೆ ಸಂಪರ್ಕವೂ ಇರುವುದಿಲ್ಲ. ಅಂತಹಾ ಜಾಗಕ್ಕೆ ಬರಲು ಕಾರ್ಮಿಕರೂ ಮನಮಾಡುವುದಿಲ್ಲ. ಹೊತ್ತೊತ್ತಿಗೆ ಸರಿಯಾದ ಊಟ ತಿಂಡಿ ಸಿಗುವುದಿಲ್ಲ.  ಕೆಲವೆಡೆಗಳಲ್ಲಿ ಒಮ್ಮೆ ಆ ಪ್ರದೇಶವನ್ನು ಹೊಕ್ಕರೆ ಕೆಲಸ ಮುಗಿಸಿ ಹಿಂತಿರುಗುವವರೆಗೂ ಸರಿಯಾಗಿ ಅನ್ನ ನೀರು ಸಿಕ್ಕದು. ಆದರೂ ಆತ ತನ್ನ ಕೆಲಸ ಮುಗಿಸದೇ ಅರ್ಧಕ್ಕೆ ಬಿಟ್ಟು ಬರುವುದಿಲ್ಲ! ಒಂದು ವೇಳೆ ಅರ್ಧಕ್ಕೇ ಬಂದನೆಂದಾದರೆ ಜನರ ಬೈಗುಳ, ಮೆಲಾಧಿಕಾರಿಗಳ ಒತ್ತಡ ಗ್ಯಾರಂಟಿ!

ಇದರ ಮಧ್ಯೆ ಬಿಟ್ಟು ಬಿಡದೆ ಬರುವ ಫೋನ್ ಕರೆಗಳು.. “ಅಣ್ಣಾ ನಮ್ ಏರಿಯಾದಲ್ಲಿ ಕರೆಂಟಿಲ್ಲ, ಎಷ್ಟೊತ್ತಿಗೆ ಬರುತ್ತದೆ?, ಕರೆಂಟ್ ಬರುತ್ತೋ ಇಲ್ವೋ, ಬೇಗ ಸರಿ ಮಾಡ್ತೀರಾ, ಅಲ್ಲಾ ಕಂಪ್ಲೇಂಟ್ ಕೋಡ್ಬೇಕೋ?” ಇತ್ಯಾದಿ ಇತ್ಯಾದಿ.. ಕೆಲವರು ಸ್ವಲ್ಪ ಸಂಯಮದಿಂದ ಮಾತನಾಡಿದರೆ ಮತ್ತೆ ಕೆಲವರು ಅಹಂಕಾರದಿಂದ,ಧಿಮಾಕಿನಿಂದ ಮಾತನಾಡುತ್ತಾರೆ. ಲೈನ್’ಮ್ಯಾನ್ ಒಂದು ಕಡೆ ಕಂಬದ ಮೇಲೆ ಕುಳಿತುಕೊಂಡು  ನಿರಂತರವಾಗಿ ರಿಪೇರಿ ಕೆಲಸವನ್ನು ಮಾಡಬೇಕು. ಮತ್ತೊಂದು ಕಡೆ ಬೆಂಬಿಡದೆ ಬರುವ ಸಾರ್ವಜನಿಕರ ಕರೆಗೆ ಉತ್ತರಿಸಬೇಕು. ಜೊತೆಗೆ ಅಧಿಕಾರಿಗಳ ಕರೆಗಳನ್ನು ಸ್ವೀಕರಿಸಬೇಕು. ಕೆಲಸ ಮಾಡೋದಾ? ಅಲ್ಲಾ ಈ ಫೋನ್ ಕರೆಗಳನ್ನು ಉತ್ತರಿಸುವುದಾ? ಕರೆಂಟ್ ಹೋದಾಗ ಎಲ್ಲರೂ ಅವನಿಗೆ ಕರೆ ಮಾಡಿದರೆ ಅದನ್ನು ಉತ್ತರಿಸುವುದಕ್ಕೇ ಒಬ್ಬ ಸಿಬ್ಬಂದಿಯನ್ನು ಒದಗಿಸಬೇಕಾಗಬಹುದು! ಒಂದು ವೇಳೆ ಈ ಕಿರಿಕಿರಿಯೇ ಬೇಡ ಅಂತ ಮೊಬೈಲ್ ಸ್ವಿಚ್ ಆಫ್ ಮಾಡಿ ಇಟ್ಟನೆಂದರೆ “ಎಂತ ಸಾವು ಇವನದ್ದು, *** ಮಗ ಫೋನ್ ಸ್ವಿಚ್ ಆಫ್ ಮಾಡಿ ಇಟ್ಟಿದ್ದಾನೆ” ಎನ್ನುವ ಬೈಗುಳವನ್ನೂ ಪರೋಕ್ಷವಾಗಿ ಕೇಳಬೇಕಾಗುತ್ತದೆ.  

ಇನ್ನು ಮಳೆಗಾಲದಲ್ಲಿ ಲೈನ್’ಮ್ಯಾನ್’ಗಳಿಗೆ ರಜೆ ಎನ್ನುವುದು ಕನಸಿನ ಮಾತೇ ಬಿಡಿ. ಆದಿತ್ಯವಾರ ಎನ್ನುವುದಿಲ್ಲ, ಸ್ವಾತಂತ್ಯ್ರ್ಯ ದಿನ ಎನ್ನುವುದಿಲ್ಲ, ನಾಗರ ಪಂಚಮಿ, ಗಣೇಶ ಹಬ್ಬಗಳಿಲ್ಲ. ಯಾವ ಸಮಯದಲ್ಲಿ ಎಲ್ಲಿಂದ ಕರೆ ಬರಬಹುದೆನ್ನುವ ಅಂದಾಜಿಲ್ಲ.  ರಜೆಯ ಮಾತು ಬಿಡಿ, ದಿನದಲ್ಲಿ ಒಮ್ಮೆಯಾದರೂ ಹೊತ್ತಿಗೆ ಮನೆಗೆ ಬಂದು ಹೆಂಡತಿ ಮಕ್ಕಳ ಜೊತೆ ಸ್ವಲ್ಪ ಸಮಯ ಕಳೆದು ಹಾಯಾಗಿರೋಣ, ಅವರನ್ನೂ ಸಂತೋಷಪಡಿಸೋಣ ಎನ್ನಲು ಸಾಧ್ಯವಾಗದ ಅಂತರ್ಪಿಶಾಚಿ ಜೀವನ ಈ ಲೈನ್’ಮ್ಯಾನ್’ಗಳದ್ದು. 

ಹೋಗಲಿ, ಅವರಿಗೆ ಆಧುನಿಕ ವ್ಯವಸ್ಥೆಗಳನ್ನಾದರೂ ಕೊಟ್ಟಿದ್ದೇವಾ? ಅತಿಭಾರದ ಕಂಬಗಳನ್ನು ಎತ್ತುವುದಕ್ಕಾಗಿ ಕಡಿಮೆ ಸಾಮರ್ಥ್ಯದ ಕ್ರೇನುಗಳು ತಾಲೂಕು ಕೇಂದ್ರಕ್ಕೆ ಒಂದೇ ಇದೆ. ಇದೇ ಕ್ರೇನುಗಳಲ್ಲಿ ನಿಂತು ಕೆಲವೆಡೆ ಲೈನ್ ಮ್ಯಾನ್ ಕಂಬದ ಮೇಲಕ್ಕೇರಿ ದುರಸ್ತಿ ಕೆಲಸವನ್ನು ಮಾಡುತ್ತಾನೆ. ಕ್ರೇನು ಇದ್ದ ಕಡೆ ಕೆಲಸ ಸುಲಭವಾಗಿ ಸಾಗುತ್ತದೆ. ಉಳಿದ ಕಡೆ ಏಣಿಗಳನ್ನೇ ಅವಲಂಬಿಸಬೇಕಾಗಿದೆ. ಇತ್ತೀಚೆಗೆ ಲೈನ್ ಮ್ಯಾನ್’ಗಳಿಗೆ ಶಾಕ್ ಪ್ರೂಫ್ ಕೈಗವಸು, ಹೆಲ್ಮೆಟ್, ಜಾಕೆಟ್’ಗಳನ್ನು ಕೊಟ್ಟಿರುವುದು ಸಮಾಧಾನದ ಸಂಗತಿಯಾದರೂ ಮತ್ತಷ್ಟು ಆಧುನಿಕ ಉಪಕರಣಗಳನ್ನು ಲೈನ್ ಮ್ಯಾನ್’ಗಳಿಗೆ ಒದಗಿಸದ ವಿನಹ ಅವನ ಜೀವಕ್ಕೂ ಭದ್ರತೆಯಿರದು, ನಮ್ಮ ಕೆಲಸವೂ ಶೀಘ್ರಗತಿಯಲ್ಲಿ ಸಾಗದು. 

ಹೌದು.. ಯಾಂತ್ರಿಕ ಜಗತ್ತಿನಲ್ಲಿ  ಕರೆಂಟ್ ಇಲ್ಲದಿದ್ದರೆ ನಮ್ಮ ಜೀವನ ಮುಂದೆ ಹೋಗುವುದಿಲ್ಲ ನಿಜ. ನನಗಾದರೂ ಅಷ್ಟೇ, ನಿಮಗಾದರೂ ಅಷ್ಟೇ.. ಆದರೆ ಕಂಬವನ್ನೇರಿ ರಿಪೇರಿಗೆ ಕೈ ಹಾಕುವ ವ್ಯಕ್ತಿ ನಮ್ಮಂತೆಯೇ ಮಾನವನೇ ಹೊರತು ಸೂಪರ್ ಮ್ಯಾನ್ ಅಲ್ಲ ಎನ್ನುವುದು ನಮಗೆ ಯಾವತ್ತಿಗೂ ನೆನಪಿರಲಿ. ನಾವೇನೋ ಕರೆಂಟ್ ಹೋದ ತಕ್ಷಣ ಹಿಡಿ ಶಾಪ ಹಾಕುತ್ತೇವೆ, ಆದರೆ ನಮಗೆ ತಕ್ಷಣವೇ ಕರೆಂಟ್ ನೀಡಬೇಕೆಂಬ ಭರದಲ್ಲಿ ಆತನಿಗೇನಾದರೂ ಅಪಾಯ ಸಂಭವಿಸಿದರೆ ಪ್ರಾಣವನ್ನೇ ಕಳೆದುಕೊಳ್ಳಬೇಕಾದೀತು.. ತೀವ್ರತರವಾದ ಗಾಯಗೊಂಡರೆ ಜೀವನಪೂರ್ತಿ ಮಲಗಬೇಕಾದೀತು, ಇಲ್ಲಾ ಐದಾರು ತಿಂಗಳು ಆಸ್ಪತ್ರೆಯಲ್ಲಿ ಮಲಗಬೇಕಾದೀತು. ಮೆಸ್ಕಾಂನ ಕಡೆಯಿಂದ ಐದತ್ತು ಲಕ್ಷ ಪರಿಹಾರವೇನೋ ಸಿಗಬಹುದು. ಆದರೆ ಎಲ್ಲರಂತೆಯೇ, ನಮ್ಮನ್ನು ಅವಲಂಬಿಸಿರುವ ಹೆಂಡತಿ ಮಕ್ಕಳು, ತಂದೆ ತಾಯಿ ಆತನಿಗೂ ಇರುತ್ತಾರಲ್ಲಾ? ಪ್ರೀತಿಪಾತ್ರರು, ಸ್ನೇಹಿತರಿರುತ್ತಾರಲ್ಲಾ? ನಾವೇನೋ ಒಂದಷ್ಟು ಹಣ ಪರಿಹಾರ ಕೊಡಬಹುದು, ಅವನ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ತೆಗೆದುಕೊಳ್ಳಬಹುದು, ಮನೆಯನ್ನೇ ಕಟ್ಟಿಸಿಕೊಡಬಹುದು. ಆದರೆ ಆತನ ಕುಟುಂಬಕ್ಕೆ, ಬಂಧುಮಿತ್ರರಿಗೆ  ವೈಯಕ್ತಿಕವಾಗಿ ಆಗುವ ನಷ್ಟವನ್ನು ತುಂಬಲು ನಮಗಾರಿಗಾದರೂ ಸಾಧ್ಯವಿದೆಯಾ? ನಮ್ಮ ಮನೆಯಲ್ಲಿ ಬಲ್ಬ್ ಉರಿಸುವುದಕ್ಕೆ ಹೋಗಿ ಆತನ ಬದುಕು ನಂದಿ ಹೋಗಬಾರದಲ್ವಾ? ಅಂತವನಿಗೆ ಬೈಯ್ಯುವುದಕ್ಕೆ, ಶಾಪ ಹಾಕುವುದಕ್ಕೆ ನಮಗೆ ಮನಸಾದರೂ ಹೇಗೆ ಬಂದೀತು?

ಮೊನ್ನೆಯಿಂದ ಹಲವರ ವಾಟ್ಸಾಪಿನಲ್ಲಿ “ಲೈನ್ ಮ್ಯಾನ್’ಗಳನ್ನು ಬೈಯ್ಯುವ ಮೊದಲು ಆಲೋಚಿಸಿ, ಅವರಿಗೂ ನಮ್ಮಂತೆ ಕುಟುಂಬವಿದೆ” ಎನ್ನುವ ಮೆಸ್ಸೇಜೊಂದು ಹರಿದಾಡುತ್ತಿದೆ. ವಾಟ್ಸಾಪಿನಲ್ಲಿ ಬರುವ ಅನಗತ್ಯ ವಿಷಯಗಳನ್ನು ಮನಸ್ಸಿನಿಂದ ತೆಗೆದು ಹಾಕಿ ಇಂತಹಾ ಸಕಾರಾತ್ಮಕ ವಿಷಯಗಳನ್ನು ಅಳವಡಿಸಿಕೊಳ್ಳೋಣ.  ಇವತ್ತಿನಿಂದ ಕರೆಂಟ್ ಹೋದಾಗ ಲೈನ್ ಮ್ಯಾನ್’ನ್ನು ಬೈಯ್ಯುವುದನ್ನು ಬಿಟ್ಟುಬಿಡೋಣ. ಸ್ವಲ್ಪ ತಾಳ್ಮೆ, ಸಂಯಮವನ್ನು ಬೆಳೆಸಿಕೊಳ್ಳೋಣ. !

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!