ಪ್ರಚಲಿತ

ವಿಶ್ವಾಸ, (ಅ)ವಿಶ್ವಾಸದ ನಡುವೆ ಮರೆಯಾಗುತ್ತಿದೆಯೇ ಪ್ರಜಾಪ್ರಭುತ್ವದ ಶ್ವಾಸ?

ಕರ್ನಾಟಕದ ಶಾಸಕರೆಲ್ಲ ಸೇರಿ ನೆಡೆಸಿದ ಅಮೋಘ ಹದಿನೆಂಟು ದಿನಗಳ (ವಾರಾಂತ್ಯ ಹೊರತು ಪಡಿಸಿ) ಕರಾಳ ಪ್ರಹಸನಕ್ಕೆ ಮಂಗಳ ಹಾಡಿದ್ದು  24 ಜುಲೈ ಮಂಗಳವಾರದಂದು.  ಸರ್ಕಾರ ವಿಶ್ವಾಸ ಕಳೆದುಕೊಂಡಿದ್ದನ್ನು ಖಚಿತ ಪಡಿಸಿಕೊಂಡೇ ಮುಖ್ಯಮಂತ್ರಿಗಳು  ರಾಜೀನಾಮೆ ಸಲ್ಲಿಸುವುದರೊಂದಿಗೆ ಹೊಸ ಮುಖ್ಯಮಂತ್ರಿಗಳ ಪಟ್ಟಾಭೀಷೇಕವೂ ನೆಡೆದು ಬಿಟ್ಟಿದೆ.

ಕನ್ನಡಿಗರಿಗ್ಯಾಕೋ ಈ ಸಾರಿ, ಆಷಾಢದ ಆರಂಭದಿಂದಲೇ ಕಾರ್ಮೋಡದ ಕತ್ತಲು ಆವರಿಸಿಬಿಟ್ಟಿತು. ಬರದಿಂದ ಧೃತಿಗೆಟ್ಟು ಚಿಂತಾಕ್ರಾಂತರಾಗಿದ್ದ ಕನ್ನಡಿಗರು,  ಮುಂಗಾರು ಮಳೆಯೂ ಕೈ ಕೊಟ್ಟಿತೆಂದು ತಲೆಗೆ ಕೈ ಕೊಟ್ಟು ಕೂತಾಗಲೇ ಕರ್ನಾಟಕದ ಮೈತ್ರಿ ಸರ್ಕಾರಕ್ಕೆ ಬಂದಪ್ಪಳಿಸಿದ್ದು, ಆಧುನಿಕ ವಿಜಯನಗರದ ವೀರ ಸಾಮ್ರಾಟ, ಶ್ರೀ  ಆನಂದ ಸಿಂಗ್ ರ ರಾಜೀನಾಮೆಯ ಸಿಡಿಲು! ತಾನು ಪ್ರತಿನಿಧಿಸುವ ವಿಜಯನಗರ ಜಿಲ್ಲೆಯಾಗಲೇಬೇಕು, ಜಿಂದಾಲ್ ಸಂಸ್ಥೆಗೆ ಸರಕಾರ ಕವಡೆ ಕಾಸಿಗೆ ಜಾಗ ಪರಭಾರೆ ಮಾಡಹೊರಟಿರುವುದು ಜಿಲ್ಲೆಗೆ ಸರ್ಕಾರ ಮಾಡುತ್ತಿರುವ ಬಹುದೊಡ್ಡ ದ್ರೋಹ. ಇದನ್ನು ಸಹಿಸಿ ಈ ಸರ್ಕಾರಕ್ಕೆ ಬೆಂಬಲ ಸೂಚಿಸಲು ನನಗಂತೂ ಸಾಧ್ಯವಿಲ್ಲಎಂಬುದು ಶ್ರೀ ಆನಂದ್ ಸಿಂಗ್ ರ ಸ್ಪಷ್ಟ ನುಡಿಯಾಗಿತ್ತು.  ಈ ಘಟನೆಯಿಂದ  ಬಹು ಸಮಯದಿಂದ ಸರ್ಕಾರ ಕೆಡೆವಿಯೇ ಕೆಡುವುತ್ತೇನೆಂದು ಏಕಾಂಗಿಯಾಗಿ ಬಡಿದಾಡಿ ಪೇಲವಗೊಂಡಿದ್ದ  ಬೆಳಗಾವಿಯ ಸಾಹುಕಾರ, ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ಅವರಿಗೆ ಆನಂದ್ ಸಿಂಗ್, ಮುಳುಗುತ್ತಿರುವ ಇರುವೆಗೆ  ಆಸರೆಯಾಗಬಲ್ಲ  ಹುಲ್ಲು ಕಡ್ಡಿಯಾಗಿದ್ದು ಸೋಜಿಗವೇನಲ್ಲ. ಅನಂತರ ಆರಂಭವಾಗಿದ್ದೇ, ಕರ್ನಾಟಕದ ಕರಾಳ ನಾಟಕ. 

ಆನಂದ್ ಸಿಂಗ್ ರಾಜೀನಾಮೆ, ತನಗೆ ತಲುಪಿದ್ದರೂ ರಮೇಶ್ ಜಾರಕಿಹೊಳಿ ರಾಜೀನಾಮೆ ಫ್ಯಾಕ್ಸ್ ಮಾಡಿದ್ದಕ್ಕೆ ಕೆರಳಿ ಕೆಂಡಾಮಂಡಲವಾಗಿದ್ದ ಸಭಾಧ್ಯಕ್ಷರು, ಅಂಚೆಯಲ್ಲಿ ಬಂದ ಪತ್ರ ಎಲ್ಲ ಪರಿಗಣಿಸಲು ನಾನೇನು ಪೋಸ್ಟ್ ಮ್ಯಾನ್ ಅಂದ್ಕೊಂಡಿದ್ದೀರಾ? ನಾನ್ಯಾರ ಆಳು ಅಲ್ಲರಮೇಶ್ ಜಾರಕಿಹೊಳಿ, ಮತ್ತು ಇನ್ನೋರ್ವ ಅತೃಪ್ತ ಶಾಸಕರ ಅನರ್ಹತೆಗೇ ಕಾಂಗ್ರೆಸ್ ಶಾಸಕಾಂಗ ಪಕ್ಷ ಮುಂಚೂಮ್ಮೆ ಸಲ್ಲಿಸಿದ್ದ ದೂರನ್ನು ಬಹುಕಾಲದಿಂದ ಇನ್ನೂ ವಿಚಾರಿಸದೆ ಅಡಿಗಿಟ್ಟಿದ್ದರೂ,  ನಾನಂತೂ  ನಿಷ್ಪಕ್ಷಪಾತಿ, (ಸಂ)ವಿಧಾನ ರಕ್ಷಕ, ನೇರ, ನಿಷ್ಠುರ ನಡೆ ನುಡಿಯ ಮೌಲ್ಯಾಧಾರಿತ ರಾಜಕಾರಣಿ ಎಂಬ ತಮ್ಮ ಕಿರು ಪರಿಚಯ ಸಭಾಧ್ಯಕ್ಷ ಶ್ರೀ ರಮೇಶ್ ಕುಮಾರ್ ಮಾಡುವುದರೊಂದಿಗೆ ಎರಡೂ ಕಡೆ ಖಡಕ್ ಸಂದೇಶವನ್ನೇ ಕಳುಹಿಸಿದರು.  

ರಾಜಕೀಯ ನಿಂತ ನೀರಲ್ಲ! ಮೊನ್ನೆ ಮೊನ್ನೆಯವರೆಗೆ ಹುದ್ದೆ ಸಿಗಲಿಲ್ಲ, ಮರ್ಯಾದೆ ನೀಡಲಿಲ್ಲ ಎಂದು ಆಗಾಗ  ಖ್ಯಾತೆ ತೆಗೆಯುತ್ತಾ, ನಾವೆಲ್ಲಾ ಸೇರಿಯೇ ನಿರ್ಧರಿಸಿದ ಮುಖ್ಯಮಂತ್ರಿ, ನಮ್ಮ ನಾಯಕನಲ್ಲ, ಮತ್ತಿನ್ಯಾರೋ ಆಗಬೇಕೆಂಬ ಆಶಯವನ್ನು ಅಲ್ಲಲ್ಲಿ ಊಳಿಡುತ್ತಾ ಉರಾಳಡುತಿದ್ದವರು, ಧೀಡೀರನೇ ಬಂಡೆದ್ದು ರಾಜೀನಾಮೆ ಸಲ್ಲಿಸಿ ಕಣ್ಮರೆಯಾಗುವುದರೊಂದಿಗೆ ಆರಂಭವಾದ ಈ ಕರಾಳ ನಾಟಕ, ದಿನಕ್ಕೊಂದು ತಿರುವು ಪಡೆಯುತ್ತಲೇ ಹೋಯಿತು.  ಪಾಲಿಗೆ ಬಂದಿದ್ದೇ ಪಂಚಾಮೃತವೆಂದು, ಕೆಲ ಹುದ್ದೆಗಳ ಗುದ್ದುಗೆಯ ಮೇಲೆ ಆಗಷ್ಟೇ ಪೃಷ್ಠ ಪವಡಿಸಿದ್ದ ಮಹಾನುಭಾವರೂ  ಬಂಡುಕೋರರ ಪಡೆಯ ಮಂಚೂಣಿಯಲ್ಲಿದ್ದಿದ್ದು ವಿಶೇಷವೇ ಸರಿ. ಆಕಸ್ಮಿಕವಾಗಿ ಎಚ್ಚೆತ್ತಇವರೆಲ್ಲ, ಕಳೆದೊಂದು ವರ್ಷದಿಂದ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಈ ಸರ್ಕಾರದಲ್ಲಿ ಸಾಧ್ಯವಾಗಿಲ್ಲ, ಇನ್ನಂತೂ ಸಾಧ್ಯವೇ ಇಲ್ಲ  ಎಂದು ಹಠಾತ್ತನೇ ಮನಗಂಡಿದ್ದು,  ಸಮಸ್ತ ಕನ್ನಡಿಗರ ಅದೃಷ್ಟವೋ? ದುರಾದೃಷ್ಟವೋ? ಅರಿಯಲಾಗುತ್ತಿಲ್ಲ.  

ಜುಲೈ 7ರಂದುಜೆಡಿಎಸ್ ನಿಕಟಪೂರ್ವ ರಾಜ್ಯಾಧ್ಯಕ್ಷರಾದಿಯಾಗಿ ಮೂವರು ಜೆಡಿಎಸ್ ಮತ್ತು ಹತ್ತು ಕಾಂಗ್ರೆಸ್ ಶಾಸಕರು ಸಭಾಧ್ಯಕ್ಷರ ಕಚೇರಿಗೇ  ತೆರಳಿ ರಾಜೀನಾಮೆ ಸಲ್ಲಿಸಿ, ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ರಾಜಿನಾಮೆಯನ್ನು ದೃಢಪಡಿಸಿ ಸರ್ಕಾರದ ಅಸ್ತಿತ್ವವನ್ನೇ ಅಲುಗಾಡಿಸಿಬಿಟ್ಟಿತು. ಇಷ್ಟೆಲ್ಲಾ ಪ್ರಹಸನ ನಡೆಯುತ್ತಿದ್ದರೂ,  ಅಮೆರಿಕಾ ಪ್ರವಾಸ ಮತ್ತು ದೇವತಾರಾಧನೆಯಲ್ಲಿ ತನ್ಮಯರಾಗಿದ್ದ ಸನ್ಮಾನ್ಯ   ಮುಖ್ಯಮಂತ್ರಿಗಳು, ಅವರ ಅಗ್ರಜರೂ, ಪಿತಾಮಹರೂ ದೇವರ ಮೇಲೆ ಭಾರ ಹಾಕಿ ನಿರಾಳವಾಗಿಯೇ ಇದ್ದರುಪ್ರಭಾವೀ ನಾಯಕರೂ, ಮಂತ್ರಿಗಳೂ ಮೈತ್ರಿ ಸರ್ಕಾರದ ಬೆನ್ನೆಲುಬು ಶ್ರೀ ಡಿ ಕೆ ಶಿವಕುಮಾರ್ ಸಭಾಧ್ಯಕ್ಷರ ಕೊಠಡಿಗೇ ತೆರಳಿ, ರಾಜೀನಾಮೆ ತಡೆಯುವ ಹರಸಾಹಸ ನೆಡೆಸಿ ವಿಫಲರಾದರು ಹಂತದಲ್ಲಿ ಶಾಸಕರೊಬ್ಬರ ರಾಜೀನಾಮೆ ಪತ್ರವನ್ನು ಸಭಾಧ್ಯಕ್ಷರ ಕೊಠಡಿಯಲ್ಲೇ ಕುಳಿತು ಹರಿದೇ  ಹಾಕಿದ್ದ ಶ್ರೀ ಶಿವಕುಮಾರ್, ಅದರಲ್ಲಿ ತಪ್ಪೇನು? ನನ್ನ ಆತ್ಮೀಯ ಸಖ, ಶಾಸಕ, ಅವನ ರಾಜೀನಾಮೆ ಪತ್ರ ಹರಿಯುವ ಸಲಿಗೆ ನನಗಲ್ಲದೇ ಇನ್ನ್ಯಾರಿಗೆ? ಎಂಬ ಸಮರ್ಥನೆಯನ್ನೂ ಕೊಟ್ಟರು ಹಂತದಲ್ಲಿ ವಿದೇಶ ಪ್ರವಾಸದಲ್ಲಿದ್ದ ಕಾಂಗ್ರೆಸ್ ಅಧ್ಯಕ್ಷರೂ, ತಮ್ಮ ಪಾಡಿಗಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಶ್ರೀ ಸಿದ್ದರಾಮಯ್ಯನವರ ನಡೆ,  ಕಾಂಗ್ರೆಸ್ ಒಳೊಗೊಳಗಿನ ಗುಂಪುಗಾರಿಕೆಯ ಬೆದರಿಕೆ ಮತ್ತು ನಾಯಕತ್ವ ಬದಲಾವಣೆಯ ಹಕ್ಕೊತ್ತಾಯದ ನಾಟಕವೇನೋ ಎಂಬ ಚಿತ್ರಣ ಮೂಡಿದ್ದಂತೂ ನಿಜ.   

ಅನಂತರದ ಅಂಕಣದಲ್ಲಿ ಸುಸಂಸ್ಕೃತ, ನಿಷ್ಠುರಅನುಭವಿ ರಾಜಕಾರಣಿ ಹಾಗೂ ನುರಿತ ಕಿರುತೆರೆಯ ನಟ ಶ್ರೀ ರಮೇಶ್ ಕುಮಾರರ ಸಭಾಧ್ಯಕ್ಷರ ಸ್ವ ಪಾತ್ರ ಪರಿಚಯ! ರಾಜೀನಾಮೆ ಕೊಡ ಬಂದ ಶಾಸಕರು, ಅವರ ಬರುವಿಕೆಯ ಕುರಿತಂತೆ ನನಗೆ ತಿಳಿಸಿರಲಿಲ್ಲ, ನನ್ನ ಸಮಯವನ್ನೂ ಮುಂಚಿತವಾಗಿ ಪಡೆದುಕೊಂಡಿರಲಿಲ್ಲಹೀಗಿರುವಾಗ ನಾನೇನು ಅವರ ಬರುವಿಕೆಯ ಕನಸು ಕಂಡು ಕಾಯುತ್ತಾ ಕುಳಿತಿರಬೇಕಿತ್ತೇ?, ನನ್ನನ್ನು ಶಾಸಕರ ಕಣ್ಣ ತಪ್ಪಿಸಿ ಮಾಯವಾದ ಪಕ್ಷಪಾತಿ ಎಂಬಂತೆ ಬಿಂಬಿಸಬೇಡಿ ಎಂಬ ಕಳಕಳಿಯ ಮನವಿ ಮಾಡಿಕೊಂಡರು ಸಂಧರ್ಭದಲ್ಲಿನ ಅವರ ಕೆಲ ಮಾತುಗಳು, ಅವರೇನೋ ಎಲ್ಲರೊಂದಿಗೆ ಹಂಚಿಕೊಳ್ಳಲು ಮುಜುಗರವೆನಿಸುವ, ಸಾಮಾನ್ಯರಲ್ಲಿ ಸಾಮಾನ್ಯ ಮತ್ತು ತನ್ನಂತ ಉನ್ನತ ಹುದ್ದೆಯ ವ್ಯಕ್ತಿ ವಾಸಿಸಲು ಅಸಹ್ಯವೆನಿಸುವ ಅತೀ ಚಿಕ್ಕ ಮನೆಯೊಂದರಲ್ಲಿ ಬಾಳಿ ಬದುಕುತ್ತಿರುವ, ವಿಭಿನ್ನ ಬಡ ಮಾಧ್ಯಮ ವರ್ಗದ ರಾಜಕಾರಣಿ ಎಂಬಂತೆ ಬಿಂಬಿಸಿಕೊಳ್ಳುವ ಭಾವನಾತ್ಮಕ ಪ್ರಯತ್ನವನ್ನೂ ತಕ್ಕ ಮಟ್ಟಿಗೆ ಮಾಡಿಕೊಂಡು, ತಾನು ನಿಷ್ಪಕ್ಷಪಾತಿಯಾಗಿ, ಸಂವಿಧಾನದ ರಕ್ಷಕನಾಗಿ ವಾರಾಂತ್ಯ ಮುಗಿದು ಕಛೇರಿಗೆ ಮರುಳಿದನಂತರ ಸಮರ್ಪಕ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ನಾಟಕದ ಮುಂದಿನ ಹಂತಕ್ಕೆ ಮೊಟ್ಟ ಮೊದಲ ವೀಕೆಂಡ್ ಮೆರಗು ಅಧಿಕೃತವಾಗಿ ದೊರಕಿಸಿ ಕೊಟ್ಟರು! ಸರ್ಕಾರವೊಂದರ ರಚನೆಯ ಆಧಾರ ಪ್ರಶ್ನಿಸಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಪೂರ್ವನಿರ್ಧರಿತ ಕಾರ್ಯಸೂಚಿ ಬದಲಾಯಿಸಿ, ಮರುದಿನವೇ ವಾದ ಮಂಡಿಸಿ ತೀರ್ಪು ಪಡೆದಿರುವ, ಪ್ರಭಾವೀ ರಾಜಕಾರಣಿ, ಅಧಿಕಾರಿಗಳ ಬಂಧನದ ಸಂದರ್ಭಗಳಲ್ಲಿ ನಡು ರಾತ್ರಿ ನ್ಯಾಯಾಧೀಶರ ಮನೆಯಲ್ಲೇ ಅವರನ್ನೆಬ್ಬಿಸಿ, ಪ್ರಸ್ತುತ ಪಡಿಸಿ ತ್ವರಿತಗತಿಯಲ್ಲಿ ಬೇಲ್ ಪಡೆಸಿಕೊಂಡಿರುವ ನಿದರ್ಶನವೇ ಹಲವಿರುವಾಗ, ಸೃಜನಶೀಲ, ನಿಷ್ಪಕ್ಷಪಾತಿ ಸಭಾಧ್ಯಕ್ಷರಿಗೆ ಅಲ್ಪಬಹುಮತದ ಆಧಾರದಲ್ಲೇ ಕಾರ್ಯನಿರ್ವಹಿಸುತ್ತಿದ್ದ ಸರಕಾರ ಒಂದರ ಒಟ್ಟು ಸುಮಾರು 14/15 ಶಾಸಕರ ರಾಜೀನಾಮೆ ಗಂಭೀರ ಅನಿಸದೇ ಇದ್ದದ್ದು ಆಶ್ಚರ್ಯವೆನಿಸಿದರೂ, ಅವರದ್ದೇ ಆದ ಒಂದು ಸುದೃಢ ಆಯಾಮವೂ  ಇರಬಹುದು ಎಂಬಂತೆ ಬಿಂಬಿಸುವಲ್ಲಿ ಯಶಸ್ವೀಯಾದರು

ವಿದೇಶ ಪ್ರವಾಸ ಮೊಟಕುಗೊಳಿಸಿ ಮುಖ್ಯಮಂತ್ರಿಗಳು ಸ್ವದೇಶಕ್ಕೆ ದೌಡಾಯಿಸಿ, ಸರ್ಕಾರ ಸಂಪೂರ್ಣ ಸುಭದ್ರ, ಅತೃಪ್ತರನ್ನು ತೃಪ್ತಿಗೊಳಿಸಿ ಇನ್ನೈದು ವರ್ಷ ನಮ್ಮದೇ ಸರಕಾರ ಇರುತ್ತೆ ಎಂದು ಹೇಳಿಕೆಯೂ ಕೊಟ್ಟುಬಿಟ್ಟರುಅದಾಗಲೇ ಮೈತ್ರಿ ಸರ್ಕಾರದ ಮುಂದಾಳುಗಳು ತಮ್ಮೆಲ್ಲ ಮಂತ್ರಿ ಮಹೋದಯರೆಲ್ಲರ  ರಾಜೀನಾಮೆ ಪಡೆದು, ಸಂಪೂರ್ಣ ಮಂತ್ರಿ ಮಂಡಲ ಪುನುರ್ರಚಿಸಿ ಎಲ್ಲ ಅತೃಪ್ತರಿಗೂ ಅವರವರ ಆಯ್ಕೆಯ ಖಾತೆಯೇ ದೊರಕಬಲ್ಲ ಮಹದಾವಕಾಶ ತೆರೆದಿಟ್ಟರುಎಲ್ಲಾಅಧಿಕಾರಸ್ತರಿಗೂ, ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ದ ಸಂವಿಧಾನಾತ್ಮಕ ಭರವಸೆ ಸರ್ಕಾರವೊಂದರ ನಾಯಕ ಮತ್ತು ಸಂಪುಟ ಸಹೋದ್ಯೋಗಿಗಳಿಂದ ವಿಧಾನಸೌಧದ ಮೊಗಸಾಲೆಯಿಂದಲೇ ಹೊರಡಿಸಲಾಯಿತುಅಂತೂ ಮಂಗಳವಾರ ಕಛೇರಿಗೆ ಮರುಳಿದ ಸಭಾಧ್ಯಕ್ಷರು, ಎಲ್ಲಾ ರಾಜೀನಾಮೆ ಪತ್ರವನ್ನೂ, ಎರಡೂ ಬಣದ ನಾಯಕರು ಕೊಟ್ಟ ಪತ್ರಗಳನ್ನೂ ಅಮೂಲಾಘ್ರವಾಗಿ ಪರಿಶೀಲಿಸಿ, ಕಾನೂನು ತಜ್ಞರ ಜೊತೆಗೂ ಚರ್ಚಿಸಿ ಒಟ್ಟು ಹದಿಮೂರು ರಾಜೀನಾಮೆಗಳಲ್ಲಿ ಕೇವಲ ಐದು ಕ್ರಮಬದ್ದವಾಗಿದೆ ಇನ್ನುಳಿದ   ಆಂಗೀಕಾರಾರ್ಹವಲ್ಲವೆಂಬ ತೀರ್ಮಾನ ಪ್ರಕಟ ಪಡಿಸಿದರು. ಅಂಗೀಕಾರಾರ್ಹ ರಾಜೀನಾಮೆಗಳನ್ನು ಆಂಗೀಕರಿಸುವ ಮುನ್ನವೂ ಐದು ಶಾಸಕರೊಂದಿಗೆ ಪ್ರತ್ಯಕವಾಗಿ ತಾನು ಮಾತನಾಡಿಯೇ ಮುಂದಿನ ನಿರ್ಧಾರ ಕೈಗೊಳ್ಳುವ ತಮ್ಮ ಪ್ರಕಟಣೆಯೊಂದಿಗೆ ಅತೃಪ್ತರ ಮನವೊಲಿಸಿ  ರಾಜೀನಾಮೆಯನ್ನು ಹಿಂಪೆಡೆಸುವ ಬಹುತೇಕ ಮಾಸಿಯೇ ಹೋಗಿದ್ದ ರಾಜೀ ಸೂತ್ರದ ಪ್ರಯತ್ನಕ್ಕೆ ಇನ್ನಷ್ಟು ಕಾಲಾವಕಾಶ ಸಂವಿಧಾನ ಬದ್ಧವಾಗಿಯೇ ದೊರಕಿಸಿಕೊಟ್ಟರು. ಜೊತೆ ಜೊತೆಗೆ ಶಾಸಕರ ಕ್ಷೇತ್ರದ ಮತದಾರರು ಕೂಡ ಇದರಿಂದ ತಮಗೆ ಅನ್ಯಾಯವಾಗುತ್ತಿದೆ ಎಂಬ ದೂರು ಕೊಟ್ಟಿದ್ದಾರೆ, ಅದನ್ನೂ ತಾನು ಪರಿಶೀಲಿಸಿ, ವಿಮರ್ಶಿಸಿ ತೀರ್ಮಾನ ತೆಗೆದುಕೊಳ್ಳುವ ಬಹುದೊಡ್ಡ ಜವಾಬ್ದಾರಿಯೂ  ತನ್ನದೇ ವ್ಯಾಪ್ತಿಯಲ್ಲಿ ಬರಬಹುದು ಎಂಬ ಸುಳಿವನ್ನೂ ನೀಡಿ ನೀರಾಳರಾಗಿ ಬಿಟ್ಟರು.  

ಇದನ್ನು ನೋಡಿದರೆಬುದ್ದಿವಂತ ಸಹಪಾಠಿಯ ಉತ್ತರಪತ್ರಿಕೆ ಯಥಾ ನಕಲು ಮಾಡಿಯೂ, ನಕಲು ಮಾಡಿದವ ಮಾತ್ರ ತೇರ್ಗಡೆಯಾಗಿ; ಬುದ್ದಿವಂತ ಮಿತ್ರ ಅನುತ್ತೀರ್ಣವಾದ ಸೋಜಿಗ ಶಾಸಖರ ರಾಜೀನಾಮೆಯ ಪ್ರಸಂಗಕ್ಕೂ ತಟ್ಟಿದಂತೆ ಭಾಸವಾಯಿತುಹಿರಿಯರೊಬ್ಬರ ರಾಜೀನಾಮೆ ಯಥಾ ನಕಲು ಮಾಡಿದ್ದರೂ, ಸಭಾಪತಿಗಳು ಕೆಲವರ ರಾಜೀನಾಮೆ ಮಾತ್ರ ಅಂಗೀಕರಿಸಿ, ಇನ್ನುಳಿದವರದ್ದು ಕ್ರಮಬದ್ಧವಲ್ಲ ಎಂದು ಘೋಷಿಸಿದ್ದು ಹೇಗೆಂಬ ಕಸಿವಿಸಿಯೂ ಅಲ್ಲಲ್ಲಿ ಹರಿದಾಡಿತು! ರಾಜ್ಯದ ಹಿತ ಮತ್ತು ಕ್ಷೇತ್ರದ ಅಭಿವೃದ್ಧಿಯ ಕುರಿತು ಮೊನ್ನೆಯಿಂದ ಜಪಿಸುತ್ತಿರುವ ಶಾಸಕರು ರಾಜೀನಾಮೆ ಪತ್ರದ ಕೊನೆಯಲ್ಲಿ ಸಹಿ ಕೂಡಾ ನಕಲು ಮಾಡಿರಲೂ ಬಹುದು, ಏನಂತೀರಿ ? 

ಯಾವುದರಲ್ಲೂ ಭಾಗಿಯಲ್ಲದ(?) ಬಿಜೆಪಿಯವರೇನೂ ಕಮ್ಮಿ ಇಲ್ಲ ಬಿಡಿಕ್ರಮಬದ್ಧವಾದ ರಾಜೀನಾಮೆ ಹೇಗಿರಬೇಕೆಂಬ ಟ್ಯೂಷನ್ ಕೊಟ್ಟು ಎಲ್ಲ ಅತೃಪ್ತರನ್ನೂ ರೀಎಕ್ಸಾಮ್ ಅಲ್ಲಿ ತೇರ್ಗಡೆ ಮಾಡಿಸುವ ಹೊಣೆ ಹೊತ್ತುಮಾಜಿ ಸ್ಪೀಕರ್ ಸಾಹೇಬರನ್ನೇ ಅತೃಪ್ತರ ಸಹಾಯಕ್ಕೆ ರವಾನಿಸಿ, ಅತೃಪ್ತಿಯಲ್ಲಿ ತಮ್ಮ ಕೈವಾಡ ಏನೂ ಇಲ್ಲ ಎಂಬುದನ್ನೂ ಜಗಜ್ಜಾಹೀರು ಪಡಿಸಿತು.  

ನಂತರ ಆರಂಭವಾಗಿದ್ದು, ಆರಂಭದಲ್ಲಿ ಜೊತೆಗಿದ್ದು, ಮಧ್ಯದಲ್ಲಿ ಹೊರ ನೆಡೆದು, ಮೊನ್ನೆಯಷ್ಟೇ ಪುನಃ ಮಂತ್ರಿಗಿರಿ ಪಡೆದುಕೊಂಡು ನಾವೇ ಮೈತ್ರಿ ಸರ್ಕಾರದ ನಿಜವಾದ ಜೋಡೆತ್ತು ಎಂದಿದ್ದ ಪಕ್ಷೇತರರ ಶಾಸಕದ್ವಯರ ಪುನರ್ನಿರ್ಗಮನ ಪ್ರಹಸನ. ಅವರಿಗ್ಯಾಕೋ ಪುನಃ ತಮ್ಮ (ಕ್ಷೇತ್ರ)  ಅಭಿವೃದ್ಧಿಗೆ ಅಗತ್ಯವಾಗಿದ್ದ ಮೇವು  ಸರ್ಕಾರದಲ್ಲಿ ದೊರೆಯುತ್ತಿಲ್ಲ ಅನ್ನಿಸಿಬಿಟ್ಟಿತುಬರಡಾದ ಮೈತ್ರಿ ಸರ್ಕಾರದ ಬದಲಿಗೇ ಇನ್ನೂ ಸಮೃದ್ಧ ಹುಲ್ಲುಗಾವಲು  ಬಿಜೆಪಿ ಯವರು ರಚಿಸಬಹುದಾದ ಸರ್ಕಾರದಲ್ಲಿ ಕಂಡುಕೊಳ್ಳುವ ಅಚಲ ವಿಶ್ವಾಸವನ್ನೂ ವ್ಯಕ್ತಪಡಿಸಿಯೇ ಬಿಟ್ಟರು.  ಅತೃಪ್ತರನ್ನು ವಿಶೇಷ ವಿಮಾನದಲ್ಲಿ ಮುಂಬೈಗೆ ರವಾನೆ ಮಾಡುವಲ್ಲಿ, ಕೆಲ ಬಿಜೆಪಿ ಬೆಂಬಲಿಗರು  ಮಾಧ್ಯಮದ ಕಣ್ಣಲ್ಲಿ ಸೆರೆಯಾಗಿದ್ದರೂ, ತಮ್ಮದೇನಿದ್ದರೂ ಪ್ರಜಾ ಪ್ರಭುತ್ವದ ರಕ್ಷಣೆಯ ಹೊಣೆಯಷ್ಟೇ, ಯಾದವೀ ಕಲಹದಲ್ಲೇ ಮೈತ್ರಿ ಮುರಿದು ಬಿದ್ದಾಗಲೇ ನಾವು ನಮ್ಮ ಬಲ ಪ್ರದರ್ಶಿಸುವುದು ಎನ್ನುವ, ನಂಬಲೇಬೇಕಾದ ವಾದವನ್ನು ಮಂಡಿಸುತ್ತಲೇ ಇತ್ತು!

ಅಷ್ಟರಲ್ಲಿ ವಿಧಾನಸೌಧದಲ್ಲಿ ನೆಡೆದೇ ಬಿಡ್ತು ನೋಡಿ, ಇನ್ನೊಬ್ಬ ಶಾಸಕನ ದಶಮಿಯ ಮೆರವಣಿಗೆ! ಅತೃಪ್ತರ ಮನಒಲಿಕೆಗೆ ಬೆವರು ಸುರಿಸುತ್ತಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯರ ನೆರಳಿನಂತಿದ್ದು, ಅವರ ಬೆವರಿರೋಸುತ್ತಿದ್ದ ಶಾಸಕ ಡಾ ।। ಸುಧಾಕರ್ ಮತ್ತು ಎರಡು ದಿನದ ಹಿಂದೆ ಅತೃಪ್ತ್ರರಿಗೆ ಜಾಗ ಮಾಡಿಕೊಡುವ ಔದಾರ್ಯದೊಂದಿಗೆ ತನ್ನ ವಸತಿ  ಖಾತೆಯ ಮಂತ್ರಿಗಿರಿಗೆ ರಾಜೀನಾಮೆ ಕೊಟ್ಟಿದ್ದ ಶ್ರೀ ಎಂ ಟಿ ಬಿ ನಾಗರಾಜ್, ರಾತ್ರಿ  ಬೆಳಾಗಾಗುವದರಲ್ಲಿ ತಮ್ಮ ಸರ್ಕಾರದ ಮೇಲೆ ಹಠಾತ್ತನೆ ನಂಬಿಕೆ ಕಳೆದುಕೊಂಡುಜುಲೈ 10, 2019ರ ಬೆಳಿಗ್ಗೆ ಸಭಾಧ್ಯಕ್ಷರ ಕೊಠಡಿಗೆ ರಾಜೀನಾಮೆ ಸಲ್ಲಿಸಲು ಧಾವಿಸಿಯೇ ಬಿಟ್ಟರು. ಸುದ್ದಿ ತಿಳಿದ ಕಾಂಗ್ರೆಸ್   ಕೆಲ ನಾಯಕರು, ಮಂತ್ರಿಗಳು ವಿಧಾನ ಸೌಧಕ್ಕೆ ದೌಡಾಯಿಸಿದರು.  ಮಾಜಿ ಸಚಿವ ಎಂ ಟಿ ಬಿ ನಾಗರಾಜ್ ರಾಜೀನಾಮೆ ಸಲ್ಲಿಸಿ ರಾಜಭವನಕ್ಕೆ ತೆರಳಿಬಿಟ್ಟರೆ, ರಾಜೀನಾಮೆ ಸಲ್ಲಿಸಿ ಸಭಾಧ್ಯಕ್ಷರ ಕೊಠಡಿಯಿಂದ ವಾಪಾಸಾಗುತ್ತಿದ್ದ ಡಾ।। ಸುಧಾಕರ್ ಅವರನ್ನು ಯುವ ಮಂತ್ರಿ, ಕಾಂಗ್ರೆಸ್ ರಾಜ್ಯಾಧ್ಯಕ್ಷರು ಮತ್ತು ಕೆಲ ನಾಯಕರು ಕತ್ತು, ಕೈ , ಕಾಲು, ಸೊಂಟ  ಹಿಡಿದು ಅತ್ಯಂತ ಪ್ರೀತ್ಯಾದರಗಳಿಂದ ಸಭಾಧ್ಯಕ್ಷರ ಕಛೇರಿ ಎದುರಿಗಿನ ತಮ್ಮ ಪಕ್ಷದ ಮಂತ್ರಿಯೊಬ್ಬರ ಕಛೇರಿಗೆ  ತಳ್ಳಿಕೊಂಡು ಹೋಗಿ ಬಾಗಿಲು ಹಾಗಿಕೊಂಡರು. ಅವರ ಪಕ್ಷದ ಶಾಸಕರನ್ನು ಅವರದೇ ಸಹೋದ್ಯೋಗಿ ಮಿತ್ರರು ಅಷ್ಟೊಂದು ಪ್ರೀತ್ಯಾದರದಿಂದ ಕರೆದುಕೊಂಡು ಹೋಗಿದ್ದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ ಬಿಡಿ! ಆದರೆ ಅಧಿಕ ಪ್ರಸಂಗಿ ಬಿಜೆಪಿಗರು ಬಿಡಬೇಕಲ್ಲ, ಪ್ರಜಾಪ್ರಭುತ್ವ ರಕ್ಷಿಸಲು ಪಣತೊಟ್ಟು ಸುಧಾಕರ್ ತಮ್ಮ ಅತ್ಯಾಪ್ತ ಮಿತ್ರರೊಂದಿಗೆ ಬಾಗಿಲು ಹಾಕಿ ಚರ್ಚಿಸುತ್ತಿದ್ದ ಮಂತ್ರಿ ಕಛೇರಿಯ ಕದ  ತಟ್ಟಿ, ಧರಣಿ ಕೂತರು. ಸುಧಾಕರ್ ಪತ್ನಿ ಆತಂಕ ಗೊಂಡಿದ್ದಾರೆಂದು ರಾಜ್ಯಪಾಲರಿಗೆ ದೂರು ಸಲ್ಲಿಸಿ ರಾಜ್ಯಪಾಲರ  ಆದೇಶ ಪಡೆದು ಪೊಲೀಸ್ ಮಹಾನಿರ್ದೇಶಕರು ಪೂರ್ಣ ರಕ್ಷಣೆಯೊಂದಿಗೆ ಸುಧಾಕರ್ ಅವರನ್ನು ದರ ದರನೇ ಎಳೆದೊಯ್ಯುವ ಚಿತ್ರಣ ಎಲ್ಲ ಮಾಧ್ಯಮಗಳಲ್ಲೂ  ಪ್ರಸಾರ ಗೊಂಡು ದಶಮಿಯ ಮೆರವಣಿಗೆ ಮುಕ್ತಾಯ ವಾಯಿತು. ನಂತರ ಮಾಧ್ಯಮದವರಿಗೆ ವಿವರಣೆ ಕೊಟ್ಟ ಸಿದ್ದರಾಮಯ್ಯನವರು, ಸುಧಾಕರ್, ಬಿಜೆಪಿ ಒತ್ತಡ ಇದೆ ಎಂದೇನೂ ಹೇಳಿಲ್ಲವೆಂದು ಪ್ರಾಮಾಣಿಕವಾಗಿ ಒಪ್ಪಿಕೊಂಡರೂ, ಇದಕ್ಕೆಲ್ಲ ಕಾರಣ ಲಜ್ಜೆಗೆಟ್ಟ ಸಂವಿಧಾನ ವಿರೋಧಿ ಬಿಜೆಪಿ ಕೇಂದ್ರ ಸರ್ಕಾರ, ಅಮಿತ್ ಶಾ, ನರೇಂದ್ರ ಮೋದಿಯೇ ಕಾರಣ ಎಂದು ಘಂಟಾಘೋಷವಾಗಿ ಇನ್ನೊಮ್ಮೆ ಘೋಷಿಸಿಯೇ ಬಿಟ್ಟರು. ದಶಮಿಯ ದಿನ ಇಷ್ಟೆಲ್ಲಾ ಸಭಾಧ್ಯಕ್ಷರ ಕೊಠಡಿಯ ಮುಂದೆಯೇ ನೆಡೆದು ಎಲ್ಲ ಟಿವಿ ಚಾನೆಲ್ ಗಳೂ ನಿರಂತರ ಪ್ರಸಾರ ಮಾಡಿದರೂ, ಸಭಾಧ್ಯಕ್ಷರಿಗ್ಯಾಕೋ ಇದು ತಲುಪೇ ಇಲ್ಲಅವರೆಲ್ಲೋ ಪೂರ್ವ ನಿರ್ಧರಿತ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಿರಬೇಕು. ಶ್ರೀ ಸಾಮಾನ್ಯನ ಜೀವನ ನಡೆಸುತ್ತಿರುವ ಅವರ ಮನೆಯಲ್ಲಿ ಕೇಬಲ್ ಕನೆಕ್ಷನ್ ಇರುವುದೂ ಅನುಮಾನಾಸ್ಪದವೇ! ಹಾಗಾಗಿ ಪುನಃ ಸುಧಾಕರ್ ಸ್ವತಃ ಬಂದು ದೂರು ಕೊಡುವ ತನಕ ಅವರಿಗದು ತಿಳಿಯುವುದು ಕಷ್ಟಕರ!

ಈ ನಡುವೆ ಇನ್ನೊಂದು ಮನಕಲಕುವ ದೃಶ್ಯ ಕಾಂಗ್ರೆಸ್   ಧೀಮಂತ ನಾಯಕ ಡಿ ಕೆ ಶಿ ಅವರ ಸಿಮೋಲ್ಲಂಘನ! ಅತೃಪ್ತ ಶಾಸಕ ()ರನ್ನು ಖುದ್ದು ಭೇಟಿಯಾಗಿ, ಅವರ ನೋವುಗಳನ್ನು ಆಲಿಸಿ ತನ್ನ ಹೃದಯ ಬಗೆದು ಅವರೆಡೆಗೆ ತನ್ನಲ್ಲಿರುವ ಪ್ರೀತ್ಯಾಧರಗಳನ್ನು ಅರ್ಥಮಾಡಿಸಿ ಅವರನ್ನು ಮರಳಿ ಕರೆ ತರುವ ಪ್ರಯತ್ನದ ಬೀದಿ ನಾಟಕ. ಅವರನ್ನು ಬಾಗಿಲಿನಲ್ಲೇ ತಡೆ ಹಿಡಿದು ಯಶಸ್ವೀ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ ಮುಂಬೈ ಪೊಲೀಸರು.  

ಇಷ್ಟೆಲ್ಲಾ ಪ್ರಹಸನದ ನಂತರವೂ ಘನತೆವೆತ್ತ ಮುಖ್ಯಮಂತ್ರಿಗಳದ್ದು, ನಾನ್ಯಾಕೇ ರಾಜೀನಾಮೆ ಕೊಡಬೇಕೆಂಬ ಪ್ರಾಮಾಣಿಕ ಪ್ರಶ್ನೆ. ಪಾಪ! ಸುಪ್ರೀಂ ಕೋರ್ಟ್ ಆದೇಶದಂತೆ ಓಡೋಡಿ ಬಂದ ಅತೃಪ್ತರು ಕ್ರಮಬದ್ದವಾಗಿ ಸಭಾಧ್ಯಕ್ಷರ ಎದುರೇ ಬಂದುಪುನಃ ರಾಜೀನಾಮೆ ಸಲ್ಲಿಸುವುದರ ಮೂಲಕ ತಮ್ಮ ಹಿಂದಿನ ರಾಜೀನಾಮೆ ನಿರ್ಧಾರಕ್ಕೆ ತಾವಿನ್ನೂ ಬದ್ಧವಿದ್ದೇವೆ ಎಂದು ಸ್ಪೀಕರ್ ಸಮ್ಮುಖದಲ್ಲೇ ಸಾಬೀತು ಪಡಿಸಿದರು. ಸಭಾಧ್ಯಕ್ಷರು ಇದು ನಿಮ್ಮ ಸ್ವಂತ ನಿರ್ಧಾರವೇ?, ಇದರ ಪರಿಣಾಮದ ಅರಿವು ನಿಮಗಿದೆಯೇ ಅನ್ನುವ ತನಕದ ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡರೂ ತೃಪ್ತರಾಗಲಿಲ್ಲ! ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬ ಬರೆದ ಉತ್ತರ ಸರಿ ಎನಿಸಿದರೂ, ಆತ ನಕಲು ಮಾಡಿಲ್ಲ ಅನ್ನುವುದನ್ನು ದೃಢಪಡಿಸಕೊಳ್ಳದೇ ಆತನ ಉತ್ತರಕ್ಕೆ ಅಂಕ ಕೊಡೊಲೊಲ್ಲೆ!, ಎಂದು ಹಠಕ್ಕೆ ಬಿದ್ದ ಮೌಲ್ಯಮಾಪಕರಂತೆ ಕಾಣಿಸಿತು ಸಭಾಧ್ಯಕ್ಷರ ವರ್ತನೆ!

ಅಮೆರಿಕಾದಿಂದ, ದೆಹಲಿ ತಲುಪಿದ ಮುಖ್ಯಮಂತ್ರಿಗಳು ಮತ್ತು ಅವರೊಂದಿಗಿನ ಆಪ್ತ ಮಂತ್ರಿಗಳ ಬಳಗ ದೆಹಲಿಯಿಂದ ಬೆಂಗಳೂರಿಗೆ ತೆರಳಲು ಬಳಸಿದ ವಿಶೇಷ ವಿಮಾನ ಭೂಮಿ ಪರಭಾರೆಯ ಫಲಾನುಭವಿ ಜಿಂದಾಲ್ ಸಂಸ್ಥೆಯ ಪಾಲುದಾರಿಕೆಯ ಮೊನ್ನೆಟ್ ಕಂಪನಿಯದ್ದು  ಎಂಬ ಸುದ್ದಿ ಈ ಬೃಹನ್ನಾಟಕದಲ್ಲಿ ಮರೆಯಾಗಿ ಬಿಟ್ಟಿತು.   ಜಿಂದಾಲ್  ಸಂಸ್ಥೆಗೆ ಭೂಮಿ ಪರಭಾರೆ ಮಾಡಲು ಸರ್ವ ಪ್ರಯತ್ನವೂ ಸರಕಾರದ ಸಹ ಸಮಿತಿ ಮತ್ತು ಪೂರ್ಣಪ್ರಮಾಣದಲ್ಲಿ ರಾಜೀನಾಮೆ ಕೊಟ್ಟಿದ್ದ ಸಚಿವ ಸಂಪುಟದಿಂದ ತೆರೆ ಮರೆಯಲ್ಲಿ ಪ್ರಯತ್ನಿಸಲಾಯಿತು.   ಸರ್ಕಾರದ ಎಲ್ಲಾ ಮಂತ್ರಿಗಳು ರಾಜೀನಾಮೆ ಸಲ್ಲಿಸಿದ್ದರೂ ನೆಡೆದ ಕ್ಯಾಬಿನೇಟಿನ ಮೀಟಿಂಗ್!, ರಾತ್ರೋ ರಾತ್ರಿ ನಿರ್ಧಾರವಾದ ಸಾಮೂಹಿಕ ಪ್ರಮೋಷನ್, ವರ್ಗಾವಣೆಯ  ನಿರ್ಧಾರಗಳಿಂದ ಅಧಿಕಾರ ದುರುಪಯೋಗ, ಭ್ರಷ್ಟಾಚಾರದ ವಾಸನೆ ಹರಡಿದ್ದಂತೂ ನಿಜ. ಸಂಧರ್ಭದಲ್ಲಿ ಯಾವ್ಯಾವ ಮಹತ್ವದ ನಿರ್ಧಾರ ತೆಗೆದುಕೊಂಡು ಬಿಡುತ್ತಾರೋ ಎಂಬ ಆತಂಕ ವಿರೋಧ ಪಕ್ಷದ ಆದಿಯಾಗಿ, ಕೂಲಂಕುಷವಾಗಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ ಸಂವಿಧಾನಬದ್ಧ ಸಭಾಧ್ಯಕ್ಷರೂ ಸೇರಿದಂತೆ ಯಾರಿಗೂ ಬೇಡವಾಗಿದ್ದು, ತಡೆ ಒಡ್ಡದಿರುವುದು ಮೂರೂ ರಾಜಕೀಯ ಪಕ್ಷಗಳ ಒಮ್ಮತದ  ಜಾಣ ಕುರುಡನ ಜಾಣ್ಮೆಯೇ

ಇದಕ್ಕೆಲ್ಲ ಮತದಾರನೊಬ್ಬನೇ ಹೊಣೆಗಾರನೇ? ಬೇರೆಲ್ಲ ಸಂಧರ್ಭದಲ್ಲೂ ಧ್ವನಿಯೆತ್ತುವ ಸ್ವತಂತ್ರ ಮನೋಪ್ರವೃತ್ತಿಯ  ಬುದ್ಧಿಜೀವಿಗಳು ಯಾಕೋ ಕುರುಡರು ಆಗಿಬಿಟ್ಟರೆರಾಜಕೀಯ ಪಕ್ಷಗಳ ಆದಿಯಾಗಿ, ಯಾವುದೇ ಸಂವಿಧಾನಬದ್ದ ಅಧಿಕಾರವುಳ್ಳ ಹುದ್ದೆ, ಸಂಸ್ಥೆ ಇಂತಹ ಸನ್ನಿವೇಶವನ್ನು ವಿಮರ್ಶಿಸುವ ಹೊಣೆ ಹೊಂದಿಲ್ಲವೇ? ಅಧಿಕಾರದ ಆಸೆಯೊಂದೇ ಅಲ್ಲದೇ ಅಧಿಕಾರದ ಹೊಣೆಗಾರಿಕೆ ಯಾರಿಗೂ ಇಲ್ಲವಾಯಿತೇ. ಈ ಎಲ್ಲಾ ನಾಟಕಗಳ ನಡುವೆ ಹೆಚ್ಚಾಗಿ ಸುರಿದ ಮುಂಗಾರು, ಐ ಎಂ ಎ ವಂಚಕ ಮನ್ಸೂರ್ ನಿಂದ ಪಡೆದ ಮಾಹಿತಿಗಳು, ಈ ಪ್ರಕರಣದಲ್ಲಿ ಬಂದಿಸಿಬಿಡುಗಡೆಗೊಂಡ ಶಾಸಕ ರೋಷನ್ ಬೇಗ್ ನೀಡಿರಬಹುದಾದ ಮಾಹಿತಿ, ಚಂದ್ರಯಾನ ದ ಯಶಸ್ಸಿನ ಸಂಭ್ರಮ, ಕಾರ್ಗಿಲ್ ವಿಜಯ ದಿವಸದಂತಹ ಹಲವು ಮಹತ್ವದ ಸಂಗತಿಗಳನ್ನು “ನಮ್ಮಲ್ಲೇ ಮೊದಲು” ಎಂದು ಎದೆ ತಟ್ಟಿ ಬೊಬ್ಬಿಡುವ  ಕನ್ನಡದ ಮಾಧ್ಯಮಗಳು ನುಂಗಿ ನೀರು ಕುಡಿದು ಕರ್ನಾಟಕದ ಜನತೆಯನ್ನು ಕತ್ತಲಲ್ಲಿಟ್ಟವು.  

ಈ ಎಲ್ಲದರ ಮಧ್ಯೆ ಕರ್ನಾಟಕ ಇತ್ತೀಚಿಗೆ ಕಂಡ ಧೀಮಂತ, ದಕ್ಷ, ಪ್ರಾಮಾಣಿಕ, ಮತ್ತು ಸಮರ್ಥ ಪೊಲೀಸ್ ಅಧಿಕಾರಿ ಶ್ರೀ ಅಣ್ಣಾಮಲೈ ಅತೀ ಚಿಕ್ಕ ವಯಸ್ಸಿನಲ್ಲೇ ಸ್ವಯಂ ನಿವೃತ್ತಿ ಘೋಷಿಸಿದ್ದರು. ನಿಮಗೇನು ಬೇಕು ಹೇಳಿ? ನಿಮಗಾದ ತೊಂದರೆ ಏನು? ನಿಮ್ಮಂತ ದಕ್ಷ ಪ್ರಾಮಾಣಿಕರ ಸೇವೆ ನಮಗಿನ್ನೂ ಬೇಕಾಗಿದೆ, ನಿಮ್ಮೊಂದಿಗೆ ನಾವಿದ್ದೀವಿ ಎಂಬ ಬೆಂಬಲ ಕೊಡಲು ಯಾರೂ ಮುಂದೆ ಬಂದಿಲ್ಲ.  ಅತೃಪ್ತ ಶಾಸಕರನ್ನು ಪರಿ ಪರಿಯಾಗಿ ಬೇಡಿಕೊಂಡಿದ್ದ ಮುಖ್ಯಮಂತ್ರಿ ಮತ್ತವರ ಸಂಪುಟವಾಗಲೀ, ಅತೃಪ್ತರ ಸ್ವಾತಂತ್ರ್ಯಕ್ಕೆ ಧಕ್ಕೆ ತರಬೇಡಿ ಎಂದು ಬೆಂಬಲಿಸಿದ್ದ ವಿರೋಧ ಪಕ್ಷದವರಾಗಲೀ, ಸರ್ವೋಚ್ಚ ನ್ಯಾಯಾಲಯವಾಗಲೀ, ಅಲ್ಲಿನ ಸುಪ್ರಸಿದ್ದನ್ಯಾಯವಾದಿಗಳಾಗಲೀ,  ಸಮಸ್ಯೆ ಬಗೆಹರಿಸುವಲ್ಲಿ ಶಕ್ತಿಮೀರಿ ಪ್ರಯತ್ನಿಸಿದ್ದ ರಾಜಕೀಯ ಪಕ್ಷಗಳ ರಾಷ್ಟ್ರೀಯ ಮುಖಂಡರುಗಳಾಗಲೀ, ತಾವೊಬ್ಬರೇ ಪ್ರಜಾಪ್ರಭುತ್ವದ ನಿಜ ರಕ್ಷಕರು ಎನ್ನುವ ಮಾಧ್ಯಮವಾಗಲೀ, ಎಲ್ಲ ವಿಷಯಗಳ ಮೇಲೆ ತಮ್ಮ ಅಭಿಪ್ರಾಯ, ಹೋರಾಟ ಪ್ರಚುರ ಪಡಿಸುವ ಸೋಶಿಯಲ್ ಮೀಡಿಯಾದ ಸೈನಿಕರುಗಳಾಗಲೀ  ಯಾರೂ ಇಂತಹ ಸಮರ್ಥ ನಿಸ್ವಾರ್ಥ ಸಮಾಜ ಸೇವಕರ ಬೆಂಬಲಕ್ಕೆ ನಿಲ್ಲದೇ ಸಮಾಜ ಸೇವೆಯ ಸೋಗಿನಲ್ಲಿ ಪ್ರಜಾಪ್ರಭುತ್ವವನ್ನೇ ವಂಚಿಸುತ್ತಿರುವ ರಾಜಕೀಯ ನಾಯಕರ ಹಿಂದೆ ಬಿದ್ದು ಉರುಳಾಡುವುದು ನಮ್ಮ ಸಮಾಜದ ಇಂದಿನ ದುಸ್ಥಿತಿ ಎನಿಸಿವುದು ನನಗೊಬ್ಬನಿಗೇ ಏನು?

ಜಿ. ಪ್ರತಾಪ್ ಕೊಡಂಚ 

ಫಿಲಡೆಲ್ಫಿಯಾ, ಯು, ಎಸ್,   

pratap.kodancha@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!