ಅಂಕಣ

ಬೇಲಿ

 ಜನಸಾಮಾನ್ಯ ಜಾತಿಧರ್ಮಗಳ ಪರಿವೆಯನ್ನು ಮರೆತು ತನ್ನ ನಿತ್ಯದ ಜೀವನವನ್ನು ನಡೆಸುತ್ತಿರುತ್ತಾನೆ. ಮುಸ್ಲಿಮರ ಅಂಗಡಿಗಳಲ್ಲಿ ಕೊಂಡ ಬಟ್ಟೆಯನ್ನು ಉಡುತ್ತಾನೆ; ಕ್ರೈಸ್ತರ ಅಂಗಡಿಗಳಲ್ಲಿ ಕೊಂಡ ಬ್ರೆಡ್ದನ್ನು ತಿನ್ನುತ್ತಾನೆ; ದಲಿತರಿಂದ ತರಕಾರಿಗಳನ್ನು ಕೊಂಡುತಂದು ಅಡಿಗೆ ಮಾಡಿಕೊಂಡು ಉಣ್ಣುತ್ತಾನೆ. ಊದಿನಕಡ್ಡಿ, ಕರ್ಪೂರಗಳನ್ನು ಯಾರು ತಯರಿಸಿರಬಹುದು ಎಂಬ ಬಗ್ಗೆ ತುಸುವೂ ಯೋಚಿಸದೆ ಅದನ್ನು ದೇವರೆದುರು ಬೆಳಗುತ್ತಾನೆ. ಅವನಿಗೆ ಎಲ್ಲಾ ಬಗೆಯ ಸ್ನೇಹಿತರೂ ಇರುತ್ತಾರೆ. ಒಬ್ಬರ ಮನೆಗೊಬ್ಬರು ಬಂದುಹೋಗಿ ಮಾಡುವುದು ನಡೆದೇ ಇರುತ್ತದೆ. ನಿತ್ಯ ಜೀವನದಲ್ಲಿ ಜಾತಿಧರ್ಮಗಳು ಗೌಣವಾಗಿರುತ್ತವೆ. ನಮ್ಮ ನಮ್ಮ ಸಂಸ್ಕೃತಿಯೇ ಶ್ರೇಷ್ಟವೆನ್ನುವ ಭಾವನೆ ಇದ್ದರೂ ಕೂಡ, ಮಾನವೀಯತೆಯ ಜೊತೆಗೆ ಪರಸ್ಪರ ಅವಲಂಬನೆಯಿಂದಾಗಿ ತಟಸ್ಥನಂತೆಯೇ ಬದುಕಬೇಕಾಗುತ್ತದೆ. ಆದರೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಮನುಷ್ಯ ಸಮುದಾಯವನ್ನು ಜಾತಿಯಾಧಾರದ ಮೇಲೆ ವಿಂಗಡಿಸುವ ಕ್ರಿಯೆ ನಡೆದಿರುತ್ತದೆ. ಬಾಲ್ಯದಲ್ಲಿಯೇ ಜಾತಿಯ ಗೆರೆಯ ಎದುರಿಗೆ ನಿಲ್ಲಿಸಿ ಹೇಳಿಕೊಟ್ಟದ್ದನ್ನು ವಿಶ್ಲೇಷಿಸಲು ಜೀವಮಾನವೇ ಹಿಡಿಯುತ್ತದೆ. ಜಾತಿಯ ಬೇಲಿಯ ಕಲ್ಪನೆಯನ್ನು ಮುರಿದು ಹಾಕುವುದು ಸುಲಭವಲ್ಲ; ಮುರಿದಮೇಲೂ ಜಾತ್ಯಾತೀತತೆಯ ಅರ್ಥವನ್ನು ಕಂಡುಕೊಳ್ಳಲಿಕ್ಕಾಗುವುದಿಲ್ಲ.  ಅಂತಹ ಜಾತಿಯ ಬೇಲಿಯ ಅನುಭವವೊಂದು ಇಲ್ಲಿದೆ.

ಮಕ್ಕಳಿಗೆ ಆಡಿಕೊಳ್ಳಲು ಏನಾದರೂ ಆದೀತುಪಾತ್ರೆ, ಬುಟ್ಟಿ, ಕಲ್ಲು, ಮಣ್ಣು, ಹೀಗೇ ಏನಾದರೂ. ತೊಂಬತ್ತರ ದಶಕದ ಪೂರ್ವಭಾಗದ ಕಾಲದಲ್ಲೆಲ್ಲ ಹಳ್ಳಿಮನೆಯ ಮಕ್ಕಳಿಗೆ ಊರ ಜಾತ್ರೆಯಲ್ಲಿ ಐದೋ ಹತ್ತೋ ರೂಪಾಯಿಗಳನ್ನು ಕೊಟ್ಟು ಆಟಿಕೆಯನ್ನು ಕೊಂಡುಕೊಂಡರೆ ಮುಗಿಯಿತು. ಮುಂದಿನ ಜಾತ್ರೆಯವರೆಗೂ ಅದೇ ಹೊಸ ಆಟಿಕೆಯೆಂದು ಕರೆಸಿಕೊಳ್ಳುತ್ತಿತ್ತು. ಹಳ್ಳಿಗಳಿಗೆ ದಿನಪತ್ರಿಕೆ ತಲುಪುವುದೂ ಕಷ್ಟವೇ ಆಗಿದ್ದರಿಂದ, ದೋಣಿ, ಚೆಂಡು, ಗಿರಗಿಟ್ಟಲೆ, ಇತ್ಯಾದಿಗಳನ್ನು ಮಾಡಲು ಕಾಗದದ ಲಭ್ಯತೆಯೂ ದುಸ್ತರವೇ ಆಗಿತ್ತು. ಬಿಳಿಬಿಳಿ ಧರಿಸಿನಲ್ಲಿ ಮತ ಕೇಳಲು ಬರುವವರು ಕೊಟ್ಟು ಹೋಗುವ ಪ್ರಚಾರ ಪತ್ರಗಳಂತೂ ಅವರು ಗೇಟುದಾಟಿ ರಸ್ತೆಯಾಚೆಗೆ ಹೋಗುವಷ್ಟರಲ್ಲಿಯೇ ಹೊಸ ಆಕಾರವನ್ನು ಪಡೆದಿರುತ್ತಿದ್ದವು. ಹೀಗೊಂದು ದಿನ ಮನೆಯಲ್ಲೇನೋ ವಿಶೇಷವಿತ್ತು. ನೆಂಟರೆಲ್ಲ ನೆರೆದಿದ್ದರು. ಸ್ವಲ್ಪದಿನಗಳ ಹಿಂದೆ ಯಾರೋ ಕೊಟ್ಟುಹೋದ ಪ್ರಚಾರ ಪತ್ರವನ್ನು ಮಡಿಚಿ ಏನನ್ನೋ ಮಾಡಲು ಪ್ರಯತ್ನಿಸುತ್ತಿದ್ದೆ. ಮನೆಯ ಗೇಟಿನಾಚೆ ಒಂದಷ್ಟು ಬಿಳಿ ಧರಿಸಿನವರು ಓಡಾಡುವುದು ಕಂಡಿತು. ಅವರೀಗ ಬಂದು ಪ್ರಚಾರ ಪತ್ರವನ್ನು ನಮ್ಮ ಮನೆಗೂ ಕೊಟ್ಟು ಹೋಗುತ್ತಾರೆ ಎಂದು ಖುಷಿಯಾಗಿದ್ದೆ. ಆದರೆ ಅವರು ಬರಲೇಇಲ್ಲ. ಬಗ್ಗೆಯೇ ಮನೆಗೆ ಬಂದಿದ್ದ ನೆಂಟರ ನಡುವೆ ಚರ್ಚೆ ಶುರುವಾಗಿತ್ತು. ಪದೇ ಪದೇಜಾತಿಯ ಗೆರೆಎಂಬ ಪದಗಳು ಕೇಳಿಸಿದವು. ಕುಂಟಾಬಿಲ್ಲೆಗೆ ಸಂಬಂಧಿಸಿದ ಗೆರೆಯೇನಾದರೂ ಆಗಿರಬಹುದೇ ಎಂಬ ಅನುಮಾನದಲ್ಲಿ ನೆಂಟರೊಬ್ಬರನ್ನು ಕೇಳಿದೆ, “ಜಾತಿಯ ಗೆರೆ ಎಂದರೇನು?” ಎಂದು. “ನೋಡು ಅಲ್ಲಿ ಬೇಲಿ ಕಾಣಿಸುತ್ತಿದೆಯೇ? ಅಲ್ಲಿ ಒಕ್ಕಲಿಗರ ಕೇರಿ ಮತ್ತು ಬ್ರಾಹ್ಮಣನ ಮನೆಯ ನಡುವೆ ಹಾಕಿರುವ ಬೇಲಿಯೇ ಜಾತಿಯ ಗೆರೆ. ಈಗ ಬಂದಿದ್ದ ಪ್ರಚಾರಕರು ಒಕ್ಕಲಿಗರ ಓಟು ಕೇಳಲು ಬಂದವರು. ಬ್ರಾಹ್ಮಣರು ಅವರ ಪಕ್ಷಕ್ಕೆ ಓಟು ಹಾಕುವುದಿಲ್ಲವೆನ್ನುವುದು ಅವರಿಗೆ ಗೊತ್ತಿರಬಹುದು. ಅದಕ್ಕೇ ಇಲ್ಲಿಗೆ ಬರಲಿಲ್ಲ.” ಅವರ ಮಾತು ಸರಿಯಾಗಿ ಅರ್ಥವಾಗಲಿಲ್ಲ. ಆದರೆ ಅವರಾಡಿದ ಶಬ್ಧಗಳನ್ನು ಪದೇ ಪದೇ ನೆನಪಿಸಿಕೊಂಡು ಅರ್ಥಮಾಡಿಕೊಳ್ಳಲು ನೋಡಿದೆ. ಆದರೆ ವಾಕ್ಯಗಳು ಬಾಯಿಪಾಠವಾದವೇ ಹೊರತು ಸ್ವಲ್ಪವೂ ಅರ್ಥವಾಗಲಿಲ್ಲ. ವರ್ಷಗಳು ಉರುಳುತ್ತಿದ್ದವು; ಆದರೆ ಜಾತಿಯ ಬೇಲಿಯ ಬಗೆಗಿನ ಮಾತು ನೆನಪಿನಲ್ಲಿ ಉಳಿದಿತ್ತು. ಮನೆಯೆದುರಿನ ಬೇಲಿಗೆ ಹಬ್ಬಿಸಿದ ಮುಳ್ಳಿನ ಗಿಡ ಮತ್ತು ಗೊಬ್ಬರದ ಗಿಡಗಳು ಎತ್ತರಕ್ಕೆ ಬೆಳೆಯುತ್ತಿದ್ದವು; ಅವುಗಳನ್ನು ಆಗಾಗ ಕತ್ತರಿಸಲಾಗುತ್ತಿತ್ತು.

ಸದಾ ಹೊಲದಲ್ಲೋ, ತೋಟದಲ್ಲೋ ದುಡಿಯುವ ಒಕ್ಕಲಿಗರ ವಸ್ತ್ರಗಳು ಕೊಳೆಯಾಗಿರುತ್ತಿದ್ದವು; ಅದಕ್ಕೇ ಅವರು ನಮ್ಮನೆಯೊಳಗೆ ಬರುವುದಿಲ್ಲವೇನೋ ಎಂದುಕೊಂಡಿದ್ದೆ.  ಅವರ ಮಕ್ಕಳು ಗೇಟು ದಾಟಿ ನನ್ನೊಡನೆ ಆಟವಾಡಲು ಬರುತ್ತಿರಲಿಲ್ಲ; ಅವರು ಎತ್ತರದ ಬೇಲಿಯನ್ನು ನೋಡಿ ಹೆದರುತ್ತಾರೆ ಎಂದೆನ್ನಿಸಿತ್ತು. ಅವರು ತಂದುಕೊಡುತ್ತಿದ್ದ ಮಾವಿನಹಣ್ಣು, ಪೇರಲೆಗಳನ್ನು ತಿನ್ನಬಹುದಿತ್ತು. ಮನೆಗೆಲಸಕ್ಕೆ ಬಂದ ಅವರೊಡನೆ ಹರಟಬಹುದಿತ್ತು. ಅವರು ತೊಳೆದ ಬಟ್ಟೆಗಳನ್ನು  ತೊಡಬಹುದಿತ್ತು. ಅವರು ತೊಳೆದ ಪಾತ್ರೆಗಳಲ್ಲಿ ಉಣ್ಣಬಹುದಿತ್ತು. ಆದರೆ ಅವರಿಗೆ ಮನೆಯೊಳಗೆ ಪ್ರವೇಶವಿರಲಿಲ್ಲ. ಊಟವನ್ನು ಸಹಿತ ಹೊರಗಡೆಯೇ ಕೊಡಲಾಗುತ್ತಿತ್ತು. ಅವರೆಲ್ಲ ಬೇಲಿಯಾಚೆಯವರು ಎಂದುಕೊಡಿದ್ದೆ. ಶಾಲೆಯಲ್ಲಿ ಬಹುತೇಕ ಸಹಪಾಠಿಗಳು ಒಕ್ಕಲಿಗರೇ ಆಗಿದ್ದರು ಮತ್ತು ಅವರೊಡನೆ ಕೈ ಕೈ ಹಿಡಿದು ಓಡುತ್ತಿದ್ದೆವು. ಮನೆಗೆ ಬಂದಮೇಲೆ ಸ್ನಾನವನ್ನೇನೂ ಮಾಡುತ್ತಿರಲಿಲ್ಲ ಎಂಬುದನ್ನು ನೆನೆದರೆ ಆಶ್ಚರ್ಯವಾಗುತ್ತದೆ.

ವ್ಯವಸ್ಥೆಗಳೆಲ್ಲ ಏನೆಂದೇ ಅರ್ಥವಾಗುತ್ತಿರಲಿಲ್ಲ. ಅವರ ಮನೆಗಳಲ್ಲಿ ಪೂಜೆಯಿದ್ದರೆ ನಮ್ಮಮ್ಮ ಪ್ರಸಾದ ತಯಾರಿಸಿ ಕೊಡಬೇಕಿತ್ತು. ಜೊತೆಯಲ್ಲಿ ಪೂಜೆ ಮಾಡುವ ಭಟ್ಟರ ಭೋಜನಕ್ಕೂ ನಮ್ಮ ಮನೆಯಲ್ಲಿ ವ್ಯವಸ್ಥೆ ಮಾಡುವ ಕೋರಿಕೆ ಇರುತ್ತಿತ್ತು. ಪೂಜೆಯ ಹಿಂದಿನ ದಿನ ಒಕ್ಕಲಿಗರ ಹೆಂಗಸು ತಲೆಯ ಮೇಲೆ ಹೆಡಿಗೆ (ದೊಡ್ಡ ಬುಟ್ಟಿ) ಹೊತ್ತು ಬರುತ್ತಿದ್ದಳು. ಹತ್ತು ಜನರ ಅಡುಗೆಗೆ ಬೇಕಾಗುವಷ್ಟು ದಿನಸಿ ಅಲ್ಲಿರುತ್ತಿತ್ತು. “ಕಷ್ಟಪಟ್ಟು ದುಡಿಯುತ್ತೀರಿ. ಇಷ್ಟೆಲ್ಲ ಸಾಮಾನುಗಳನ್ನು ಯಾಕೆ ತಂದಿರಿ. ಉಣ್ಣುವವರು ನಾಲ್ಕು ಜನಎಂದು ಹೇಳಿ ಅಮ್ಮ ಭಾವುಕಳಾಗುತ್ತಿದ್ದಳು. ನನಗೆ ಜಾತಿ-ಧರ್ಮಗಳ ನೀತಿ ನಿಯಮಾವಳಿಗಳು ಅರ್ಥವಾಗುತ್ತಿರಲಿಲ್ಲ. ಯಾವುದನ್ನು ಸ್ವೀಕರಿಸುವುದು, ಯಾವುದನ್ನು ನಿರಾಕರಿಸುವುದು ಯಾವುದೂ ಸ್ಪಷ್ಟವಿರಲಿಲ್ಲ.

ಮತ್ತೊಂದಿಷ್ಟು ವರ್ಷಗಳು ಉರುಳಿದವು. ಪ್ರೌಢಶಾಲೆಗೆ ಹೋಗಲು ಪ್ರಾರಂಭಿಸಿದ ಮೇಲೆ ಮೊಗೇರರ ಮನೆಯ ಲಾಡು, ಮಡಿವಾಳರ ಮನೆಯ ಕೊಬ್ಬರಿ ಮಿಠಾಯಿಗಳು ರುಚಿನೋಡಲು ಸಿಕ್ಕವು. ಆದರೆ ಮಧ್ಯಾಹ್ನದ ಊಟದ ಸಮಯಕ್ಕೆಲ್ಲ ಬ್ರಾಹ್ಮಣರ ಗುಂಪು ಒಂದು ಕಡೆಗೆಇತರೆ ಜಾತಿಯವರ ಗುಂಪು ಒಂದು ಕಡೆಗೆ ಚದುರಿರುತ್ತಿತ್ತು. ಸಿಹಿತಿಂಡಿಗಿಲ್ಲದ  ಜಾತಿಯ ಮಡಿ ಲಂಚ್ ಬಾಕ್ಸಿನಲ್ಲಿರುವ ಇಡ್ಲಿದೋಸೆಗಳಿಗ್ಯಾಕೆ ಎಂಬುದು ಬಗೆಹರಿಯದ ಒಗಟಾಗಿತ್ತು. ನಿಧಾನವಾಗಿ ಜಾತಿಯ ವ್ಯಾಖ್ಯಾನ ಅರಿವಾಗತೊಡಗಿತ್ತು. ಜಾತಿಯೆಂಬುದು ಸಂಸ್ಕೃತಿ, ಆಹಾರ ಪದ್ಧತಿ, ಜೀವನ ವಿಧಾನಗಳ ಮೇಲೆ ನಿರ್ಧರಿತವಾಗಿದೆ ಎಂಬುದರ ಸ್ಥೂಲ ಪರಿಚಯ ಕಥೆ, ಕಾದಂಬರಿ, ದಿನಪತ್ರಿಕೆಗಳ ಓದಿನಿಂದ ಆಗಿತ್ತು. ಆದರೆ ನಿಜ ಜೀವನದಲ್ಲಿ ಜಾತಿಯ ಅರ್ಥ ಏನೆಂಬುದು ಗೊತ್ತಾಗಿರಲಿಲ್ಲ.

ಮತ್ತಷ್ಟು ಸಮಯ ಸರಿಯಿತು. ನಾನು ಪದವಿಗೆಂದು ಧಾರವಾಡವನ್ನು, ಬಳಿಕ ಉದ್ಯೋಗಕ್ಕೆಂದು ಬೆಂಗಳೂರನ್ನು ಸೇರಿದೆ. ಅಲ್ಲೇನೂ ಜಾತಿಧರ್ಮಗಳ ರೂಪ ಬೇರೆಯಾಗಿರಲಿಲ್ಲ.  ಆದರೂ ಜೀವನದ ಗಾಡಿ ಎಳೆಯಲು ಎಲ್ಲ ಭೇದಭಾವಗಳನ್ನು ಬದಿಗಿಟ್ಟಿದ್ದರು. ಹಳ್ಳಿಗಳಲ್ಲಾಗುತ್ತಿದ್ದ ಬದಲಾವಣೆಗಳು ಅಷ್ಟೇನೂ ಗಮನಕ್ಕೆ ಬರುತ್ತಿರಲಿಲ್ಲ. ನಮ್ಮನೆ ಬೇಲಿಯಾಚೆಯ ಒಕ್ಕಲಿಗರ ಕೇರಿಯನ್ನು ಮೊದಲಿನಿಂದಲೂ ಹೊರಗಿನಿಂದಲೇ ನೋಡುತ್ತಿದ್ದೆ; ಮತ್ತೂ ದೂರದಿಂದ ನೋಡುವಂತಾದ ಮೇಲೆ ಬೇಲಿಯ ಆಚೆಈಚೆಗಿನ ಜಗತ್ತುಗಳು ಹೇಗೆ ಬೆಸೆದುಕೊಳ್ಳುತ್ತಿವೆ ಮತ್ತು ಹೇಗೆ ಸಿಡಿದು ದೂರಾಗುತ್ತಿವೆ ಎನ್ನುವ ಸೂಕ್ಷ್ಮ ಎಳೆಯ ಸುಳುಹೂ ಸಿಗದಾಯ್ತು. ನಡುನಡುವೆ ಒಮ್ಮೊಮ್ಮೆ ಯಾರದಾದರೂ ಮದುವೆಗೆಂದು ಊರ ಕಡೆಗೆ ಹೋಗಿ ಬರುವುದಿತ್ತು. ಬ್ರಾಹ್ಮಣರ ಮದುವೆಗಳಲ್ಲಿ ಬೇರೆ ಜಾತಿಯವರಿಗೆಲ್ಲ ಬೇರೆ ಊಟದ ವ್ಯವಸ್ಥೆಯಿರುತ್ತಿತ್ತು ಮತ್ತು ಬೇರೆ ಜಾತಿಯ ಮದುವೆಗಳಲ್ಲಿ ಬ್ರಾಹ್ಮಣರಿಗೂ ಪ್ರತ್ಯೇಕ ಊಟದ ವ್ಯವಸ್ಥೆಯನ್ನು ಮಾಡಲಾಗಿರುತ್ತಿತ್ತು. ಕಾಲಚಕ್ರ ತಿರುಗುತ್ತಿದ್ದರೂ ಜಾತಿಪದ್ಧತಿಯೇನೂ ಬಹಳ ಬದಲಾಗಿಲ್ಲ ಎನ್ನಿಸುತ್ತಿತ್ತು.

ಅಪ್ಪನಿಗೆ ಅನಾರೋಗ್ಯವಾದಾಗ ಒಮ್ಮೊಮ್ಮೆ  ಯಾರಾದರೂ ಒಕ್ಕಲಿಗರು ಬೈಕಿನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗುತ್ತಿತ್ತು. ಜೀವನ ಸಹಜವಾಗಿ ನಡೆದುಕೊಂಡು ಹೋಗುತ್ತಿತ್ತು. ನಂತರ ಬಂದ ಚುನಾವಣೆಯ ಎದುರಿನಲ್ಲಿ ಕೆಲವು ಪಕ್ಷಗಳ ಪ್ರಚಾರಕರು ನಮ್ಮನೆಯ ಗೇಟು ದಾಟಿ ಒಳಬರಲಿಲ್ಲ. ನನಗೆ ಮತ್ತೆ ಜಾತಿಯ ಗೆರೆಯ ನೆನಪಾಯಿತು. ನಾವು ಬ್ರಾಹ್ಮಣರಾ? ಅವರು ಒಕ್ಕಲಿಗರಾ? ನಮ್ಮಷ್ಟಕ್ಕೆ ನಾವೆಲ್ಲ ಸೇರಿ ಒಂದು ಸುಂದರ ಸಮಾಜವನ್ನು ನಿರ್ಮಿಸಿಕೊಂಡಿರುವಾಗ ಜಾತಿಯ ಗೆರೆಯನ್ನು ಮತ್ತಷ್ಟು ಗಾಢಗೊಳಿಸುತ್ತಿರುವ ರಾಜಕೀಯವೆಂತಹುದು? ಹೊತ್ತಿನಲ್ಲಿ ಬೇಲಿಯ ಗಿಡಗಳನ್ನೆಲ್ಲ ಕಿತ್ತು ಹೊಸತು ನೆಟ್ಟಿದ್ದರು. ಬೇಲಿಯ ಮುಳ್ಳಿನ ಗಿಡಗಳು ಅಷ್ಟೇನೂ ಎತ್ತರಕ್ಕೆ ಬೆಳೆದಿರಲಿಲ್ಲ. ನಮ್ಮ ಮನೆ ದೂರದಿಂದಲೇ ಸ್ಪಷ್ಟವಾಗಿ ಕಾಣಿಸುವಂತಿತ್ತು. ನಮ್ಮ ಮನೆ ಇರುವುದು ಗೊತ್ತಿದ್ದೂ ಕೆಲವು ಪ್ರಚಾರಕರು ಒಳಗೆ ಬರದೇ ಇರುವುದು ನನಗೆ ಬೇಸರ ತರಿಸಿತ್ತು. ಆ ದಿನ ಮತ ಪ್ರಚಾರಕರ ವಾಹನಗಳೆಲ್ಲ ಧೂಳೆಬ್ಬಿಸಿಕೊಂಡು ಊರುಬಿಟ್ಟಮೇಲೆ, ನಾನು ಗೇಟು ದಾಟಿ ಹೊರಗೆ ಬಂದುನಿಂತು ನಮ್ಮ ಮನೆಯ ಕಡೆಗೆ ನೋಡಿದೆ. ಹೊರಗಿನಿಂದ ನಮ್ಮ ಮನೆಯ ಹೆಂಚುಗಳು ಎದ್ದು ಕಾಣಿಸುತ್ತಿದ್ದವು. ಗೇಟಿನ ಪಕ್ಕದ ಬೇಲಿಯ ಸಂದಿಯಿಂದ ಎರಡು ಕೋಳಿಮರಿಗಳು ನಮ್ಮನೆಯ ಪಕ್ಕದ ಹುಲ್ಲು ಗೊಣಬೆಗೆಯ ಕಡೆಗೆ ಓಡಿದವು. ಎಲ್ಲಿಂದಲೋ ಬಂದ ಎರಡು ಎಮ್ಮೆಗಳು  ಮನೆಯೆದುರಿನ ಹಸಿರು ತರಕಾರಿ ತೋಟಕ್ಕೆ ಬೇಲಿಹಾರಿ ನುಗ್ಗಲು ಪ್ರಯತ್ನಿಸುತ್ತಿದ್ದವು. ನೋಡನೋಡುತ್ತ ಬೇಲಿ ಮಾಯವಾದಂತಹ ಭ್ರಮೆ ಆವರಿಸಿತು. ನೆಲವೆಲ್ಲ ನೀರಾಗಿ ನಮ್ಮ ಮನೆ ಮತ್ತು ಒಕ್ಕಲಿಗರ ಕೇರಿಗಳೆಲ್ಲ ತೇಲತೊಡಗಿ ಒಂದಕ್ಕೊಂದು ಡಿಕ್ಕಿ ಹೊಡೆದ್ದುಕೊಳ್ಳುತ್ತ, ಆಲಂಗಿಸಿಕೊಳ್ಳುತ್ತ ನನ್ನನ್ನೂ ಭ್ರಮೆಯಲ್ಲಿ ತೇಲಿಸತೊಡಗಿದವು.  

Facebook ಕಾಮೆಂಟ್ಸ್

ಲೇಖಕರ ಕುರಿತು

ಶ್ರೀಕಲಾ ಹೆಗಡೆ ಕಂಬ್ಳಿಸರ

ಹುಟ್ಟಿದ್ದು, ಬೆಳೆದದ್ದು ಸಿರಸಿಯ ಪುಟ್ಟ ಹಳ್ಳಿಯೊಂದರಲ್ಲಿ.
ಓದಿದ್ದು ವಾಣಿಜ್ಯಶಾಸ್ತ್ರ. ಐದು ವರ್ಷಗಳು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿದ ಅನುಭವ. ಈಗ ಗೃಹಿಣಿಯಾಗಿದ್ದು, ಬರವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!