ಅಂಕಣ

ಶಿರಡಿಯನ್ನು ಆಧ್ಯಾತ್ಮಿಕ ಶಿಖರವಾಗಿಸಿದ ಸಾಯಿಬಾಬಾ

ಮಹಾರಾಷ್ಟ್ರದ ಅಹಮದ್ ನಗರದ ಗೋದಾವರಿ ತೀರವು ಅನೇಕ ಮಹಾತ್ಮರು ಆಗಿಹೋದ ಪುಣ್ಯಸ್ಥಳ. ಇಲ್ಲಿನ ಕೋಪರ್ಗಾಂುವ್ ಜಿಲ್ಲೆಯ ಶಿರಡಿಯು ಸಾಯಿನಾಥರಿಂದಾಗಿ ಅಧ್ಯಾತ್ಮಕೇಂದ್ರವಾಗಿ ಬೆಳೆಯಿತು.

ದತ್ತಾತ್ರೇಯರ ಮೊದಲ ಅವತಾರವಾದ ಶ್ರೀಪಾದ ವಲ್ಲಭರ ಚರಿತ್ರೆಯಲ್ಲಿ 45 ಅಧ್ಯಾಯದಲ್ಲಿ ಸಾಯಿನಾಥರ ಅವತಾರದ ಬಗ್ಗೆ ಉಲ್ಲೇಖವಿದೆ. ಆ ಪ್ರಕಾರ ಹನುಮಂತನು ಅಗ್ನಿಬೀಜವಾದ ‘ರಾಂ’ಅನ್ನು ಅನಂತಕೋಟಿಯಷ್ಟು ಜಪಿಸಿದ್ದನ್ನು ಹೇಳುತ್ತಾ, ಕಲಿಯುಗದಲ್ಲಿ ಇಂದ್ರೀಯಪ್ರವೃತ್ತಿಗಳನ್ನು ಶಾಂತಗೊಳಿಸುವುದರಲ್ಲಿ ಸಮರ್ಥನಿರುವುದರಿಂದ ಸಾಯಿನಾಮದಿಂದ ಪ್ರಸಿದ್ಧನಾಗು ಎಂದು ಹನುಮಂತನಿಗೆ ಆದೇಶಿಸುತ್ತಾರೆ. ಅಗ್ನಿಯೋಗದಲ್ಲಿ ಪರಿಪೂರ್ಣನಾಗಿದ್ದು ತಾನು ಯಾವ ರೂಪದಲ್ಲಿ ಅವತಾರವೆತ್ತಬೇಕೆಂದು ಕೇಳುತ್ತಾನೆ. ಹನುಮಂತ ಶಿವಾಂಶ ಸಂಭೂತನಾದರೂ ರಾಮಭಕ್ತನಾಗಿದ್ದು, ಅರಬ್ಬಿ ಭಾಷೆಯಲ್ಲಿ ಅಲ್ ಎಂದರೆ ಶಕ್ತಿ, ಅಹ್ ಎಂದರೆ ಶಾಕ್ತ. ಅಲ್ಲಾಹೋ ಎಂದರೆ ಶಿವಶಕ್ತಿಗಳ ಸಂಯುಕ್ತಸ್ವರೂಪ. ಜಾನಕಿವಲ್ಲಭರೂಪದಿಂದ ತನ್ನನ್ನು ಆರಾಧಿಸಿದ ನೀನು ಮ್ಲೇಚ್ಚ ಜನರಿಗೆ ಅಂಗೀಕಾರಯೋಗ್ಯ ಶಿವಶಕ್ತಿಸ್ವರೂಪವಾದ ಅಲ್ಲಾನಾಮವನ್ನು ಸ್ಮರಿಸುತ್ತ ನನ್ನನ್ನು ಶಿವಶಕ್ತಿಯಾಗಿ ಆರಾಧಿಸು ಎನ್ನುತ್ತಾರೆ. ಆಗ ಹನುಮಂತನು ತಾನು ಅವರಿಂದ ಬೇರೆಯಾಗಿರಲು ಇಷ್ಟಪಡದೇ ಅವರದೇ ಗೋತ್ರವಾದ ಭಾರದ್ವಾಜಗೋತ್ರವನ್ನು ಧರಿಸವಂತಾಗಬೇಕೆಂದು ಕೋರುತ್ತಾನೆ. ಶ್ರೀಪಾದರು ನೀನು ನನ್ನ ಅಂಶವೆಂದು ಹೇಳಿದಾಗ ನಾನು ನಿಮ್ಮ ಅಂಶ. ಅಂಶಾವತಾರಗಳು ಈ ಭೂಮಿಯಲ್ಲಿ ತಮ್ಮ ಕೆಲಸ ಮುಗಿದ ಮೇಲೆ ಮೂಲತತ್ತ್ವದೊಡನೆ ಬೆರೆತುಹೋಗಿ ಅಸ್ತಿತ್ವವೇ ಇರದಂತಾಗುತ್ತದೆ. ಆದ್ದರಿಂದ ನಾನು ಧರಿಸುವ ಅಂಶಾವತಾರವು ಮೂಲತತ್ತ್ವದಲ್ಲಿ ನಿರಂತರವಾಗಿ ಬೆರೆತುಹೋಗಿದ್ದರೂ ಆದಿಮೂಲವಾದ ನಿಮ್ಮ ತತ್ತ್ವದ ಶಕ್ತಿ, ಸಂಪತ್ತು, ಎಲ್ಲವನ್ನೂ ಧರಿಸಿ ಇರಬೇಕು ಎಂದು ಕೋರುತ್ತಾನೆ. ತಮ್ಮ ಮೂರು ಅವತಾರದ ನಂತರ ಶರೀರ ಬಿಡುವ ಸಮಯದಲ್ಲಿ ಸಾ¬ರೂಪದಲ್ಲಿರುವ ನಿನ್ನೊಳಗೆ ಪ್ರವೇಶಿಸುತ್ತೇನೆ ಎಂದು ಶ್ರೀಪಾದರು ಹೇಳಿದಾಗ, ನನಗೆ ಅದ್ವೈತಸ್ಥಿತಿ ಬೇಕು, ದತ್ತಸಾಯುಜ್ಯವನ್ನು ಪ್ರವರ್ತಿಸಿ ಎಂದು ಹನುಮನು ಕೇಳುತ್ತಾನೆ. ಬಳಿಕ ‘ಶೀಲಧಿ’ ಎಂಬ ಊರಿನಲ್ಲಿ ಮುಂದುವರಿಯುವಂತೆ ಆದೇಶಿಸಿ, ವೆಂಕೂಸಾ ಎಂಬ ಗುರುಗಳನ್ನೂ ದಯಪಾಲಿಸುತ್ತಾರೆ. ಶ್ರೀಪಾದರ ಆದೇಶದಂತೆ ಅನಸೂಯಾಮಾತೆಯಿಂದ ಸಾಯಿನಾಥರ ಜನನವಾಗುತ್ತದೆ ಎಂದಿದೆ.

ಸಾಯಿನಾಥರಿಗೆ ತಮ್ಮ ಪಾಲಕರು ಯಾರೆಂದೇ ಗೊತ್ತಿರಲಿಲ್ಲ ಎನ್ನುವ ಮಾತಿದೆಯಾದರೂ ಅವರು ಬ್ರಾಹ್ಮಣದಂಪತಿಗಳಿಗೆ ಜನಿಸಿ, ಮುಂದೆ ಫಕೀರರೊಬ್ಬರ ಆಶ್ರಯದಲ್ಲಿ ದೊಡ್ಡವರಾಗಿ ಫಕೀರ ದಂಪತಿಗಳು ಅವರನ್ನು ವೆಂಕೂಸಾ ಎನ್ನುವ ಗುರುಗಳ ಬಳಿಗೆ ಬಿಡುತ್ತಾರೆ. ಮುಂದೆ ವೆಂಕೂಸಾ ಅವರೇ ಸಾಯಿನಾಥರ ಆಶ್ರಯದಾತರಾಗಿ, ಗುರುಗಳಾಗಿ, ಬಂಧುವಾಗಿ, ಮಾರ್ಗದರ್ಶಕರಾಗಿ ಅವರನ್ನು ಅವರ ಹುಟ್ಟಿನ ಉದ್ದೇಶದವರೆಗೆ ತಲಪಿಸುತ್ತಾರೆ.

‘ಸಾಯಿ ಸಚ್ಚರಿತ್ರೆ’ಯಲ್ಲಿ ಸಾಯಿನಾಥರ ಈ ಸ್ಥಳಕ್ಕೆ ಬಂದ ಬಗೆಗಿನ ಒಂದು ಘಟನೆ. ಔರಂಗಾಬಾದ್ ಜಿಲ್ಲೆಯಲ್ಲಿ ದೂಪ್ ಗ್ರಾಮದಲ್ಲಿ ಚಾಂದ್ ಪಾಟೀಲ್ ಎಂಬವರು ಸಿರಿವಂತರು. ಒಮ್ಮೆ ಅವರು ಕಾರ್ಯನಿಮಿತ್ತ ಔರಂಗಾಬಾದಿಗೆ ಹೊರಟರು. ದಾರಿಯಲ್ಲಿ ತಮ್ಮ ಕುದುರೆಯನ್ನು ಕಳೆದುಕೊಳ್ಳುತ್ತಾರೆ. ಸಮೀಪದ ಬೇವಿನಮರದ ಬುಡದಲ್ಲಿ ತೇಜಸ್ವೀ ಯುವಫಕೀರನೊಬ್ಬ ಕುಳಿತಿದ್ದ. ಆತನ ಬಳಿ ತಮ್ಮ ಕುದುರೆಯ ಬಗ್ಗೆ ವಿಚಾರಿಸಿದಾಗ ಸಮೀಪದ ಹಳ್ಳದ ಬಳಿ ಇದೆ ಎನ್ನುತ್ತಾನೆ. ಅದು ನಿಜವಾಗಿರುತ್ತದೆ. ಅದೇ ಫಕೀರ ತನ್ನ ಸಟಿಕಾದಿಂದ ನೆಲಕ್ಕೆ ಹೊಡೆದು ಬೆಂಕಿ ಹೊತ್ತಿಸುತ್ತಾನೆ, ಇನ್ನೊಮ್ಮೆ ಹೊಡೆದು ನೀರು ಬರಿಸಿಕೊಂಡು ತನ್ನ ಬಟ್ಟೆಯನ್ನು ಅದ್ದಿ ಹುಕ್ಕಾ ಹೊತ್ತಿಸುವುದನ್ನು ಕಂಡ ಚಾಂದ್ ಪಾಟೀಲರು ಆ ಫಕೀರನಿಗೆ ಆತಿಥ್ಯ ನೀಡಬಯಸುತ್ತಾರೆ. ತಮ್ಮ ಮನೆಯ ಮದುವೆ ದಿಬ್ಬಣದ ಜೊತೆಗೆ ಊರಾದ ಶಿರಡಿಗೆ ಕರೆದುಕೊಂಡು ಬರುತ್ತಾರೆ. ಊರಿನ ಖಂಡೋಬಾ ದೇವಾಲಯದ ಬಾಗಿಲ ಬಳಿ ಕಂಡ ಫಕೀರನನ್ನು ಅರ್ಚಕರು ‘ಯಾ ಸಾಯಿ’ (ಬನ್ನಿ ಸ್ವಾಮಿ) ಎಂದು ಸ್ವಾಗತಿಸಿದ ಪದವೇ ಆ ಫಕೀರನ ಹೆಸರಾಗುತ್ತದೆ. ಆ ಊರಿನ ಮಸೀದಿಯೊಂದರಲ್ಲಿ ವಾಸಿಸತೊಡಗಿದ ಸಾಯಿನಾಥರ ಜೊತೆ ಕೆಲವು ಸಾಧುಗಳೂ ಇರುತ್ತಾರೆ. ಖಂಡಯೋಗದಲ್ಲಿ (ಅವಯವಗಳನ್ನೆಲ್ಲ ಕಳಚಿ ದೂರವಿಡಬಲ್ಲವರು) ಸಿದ್ಧಹಸ್ತರಾಗಿದ್ದ ಸಾಯಿನಾಥರು ಕಫನಿ ಧರಿಸಿ ತಲೆಗೆ ಬಟ್ಟೆ ಸುತ್ತುತ್ತಿದ್ದರು; ತಮ್ಮೊಡನೆ ಚಿಲುಮೆ, ಕೋಲು, ಭಿಕ್ಷಾಪಾತ್ರೆ ಇಟ್ಟುಕೊಳ್ಳುತ್ತಿದ್ದರು. ದಕ್ಷಿಣದಿಕ್ಕಿಗೆ ಅಗ್ನಿ ಉರಿಸುತ್ತಿದ್ದು, ಅದು ಸದಾ ಉರಿಯುತ್ತಿತ್ತು. ಆಗ ಉರಿಸಿದ ಅಗ್ನಿ ಈಗಲೂ ಆರಿಲ್ಲ. ‘ಅಲ್ಲಾಹ್ ಮಾಲಿಕ್’ ಎನ್ನುತ್ತಿದ್ದರು. ಅವರು ಮಲಗುವ ರೀತಿ ವಿಚಿತ್ರವಾಗಿದ್ದು ಇಟ್ಟಿಗೆಯ ಮೇಲೆ ಕೈಯೂರಿ ಮಲಗುತ್ತಿದ್ದರು. ಒಮ್ಮೆ ಅದನ್ನು ಕಸಗುಡಿಸುತ್ತಿದ್ದ ಹುಡುಗ ಆ ಇಟ್ಟಿಗೆಯನ್ನು ಸ್ವಚ್ಚಗೊಳಿಸುತ್ತಿದ್ದಾಗ ಬಿದ್ದು ಒಡೆದುಹೋಗಿ ಬಾಬಾ ಕಣ್ಣೀರು ಹಾಕಿದ್ದರಂತೆ. ಆ ಬಳಿಕವೇ ಸಾಯಿನಾಥರು ಇಹಲೋಕ ತ್ಯಜಿಸಿದರು.

ತಮ್ಮ ಮೊರೆ ಹೊಕ್ಕ ಭಕ್ತರನ್ನು ಎಂತಹ ಪರಿಸ್ಥಿತಿಯಿಂದಲೂ ಕಾಪಾಡುವ ಸಾಯಿರಾಂ ‘ನಾನು ಪರಮಾತ್ಮನ ಸೇವಕ’ ಎನ್ನುತ್ತಿದ್ದರು. ಜನರನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದ ಅವರು ಮೂಢರನ್ನೂ, ಧರ್ಮಶ್ರದ್ಧೆ ಇಲ್ಲದವರನ್ನೂ ಒಳ್ಳೆಯ ದಾರಿಗೆ ಸೇರಿಸುತ್ತಿದ್ದರು ಎನ್ನುವುದಕ್ಕೆ ಇದೊಂದು ಘಟನೆ ಸಾಕು; ಬಾಬಾರ ಕೀರ್ತಿ ಎಲ್ಲೆಡೆ ಹರಡಿತ್ತು. ಸಿರಿವಂತ ಗೃಹಸ್ಥರೊಬ್ಬರು ಬ್ರಹ್ಮಜ್ಞಾನ ಪಡೆದುಕೊಂಡರೆ ಇನ್ನೂ ಸುಖಿಗಳಾಗಬಹುದು ಎಂದು ಯೋಚಿಸಿ ಶಿರಡಿಗೆ ಬಂದನು. ಬರುವಾಗಲೇ ಆತನ ಸ್ನೇಹಿತರು “ನಿನ್ನಂಥ ಕಡುಜಿಪುಣನಿಗೆ ಯಾರು ಬ್ರಹ್ಮಜ್ಞಾನ ನೀಡುತ್ತಾರೆ” ಎಂದು ಹೇಳಿದ್ದರು. ಮಸೀದಿಗೆ ಬಂದು ಬಾಬಾರ ಕಾಲಿಗೆರಗಿ “ಬಾಬಾ ನನಗೆ ಬ್ರಹ್ಮನನ್ನು ತೋರಿಸುವಿರಾ? ಬ್ರಹ್ಮಜ್ಞಾನ ದೊರೆತರೆ ಪರಮಸುಖಿಯಾಗಬಹುದು” ಎಂದು ಕೇಳಿದನು. ಬಾಬಾ “ಅವಸರ ಯಾಕೆ? ಈವರೆಗೂ ಯಾರೂ ಇದನ್ನು ಕೇಳಿಲ್ಲ. ನಾನು ಐಹಿಕ ಸುಖವನ್ನು ನೀಡುವವನು. ನನ್ನ ವ್ಯವಹಾರ ನಗದುಹಣ. ಅದನ್ನು ಕೊಡು” ಎಂದರು. ಬಳಿಕ ಒಬ್ಬ ಹುಡುಗನನ್ನು ಕರೆದು “ನಂದೂಲಾಲನ ಬಳಿ ಹೋಗಿ 5 ರೂ. ತೆಗೆದುಕೊಂಡು ಬಾ, ನಾನು ಕೇಳಿದೆನೆಂದು ಹೇಳು” ಎಂದರು. ಹಿಂದಿರುಗಿ ಬಂದ ಆ ಹುಡುಗ ನಂದೂಲಾಲನ ಮನೆಗೆ ಬೀಗ ಹಾಕಿಕೊಂಡಿದೆ ಎಂದ. ಪುನಃ ಬಾಳಾನ ಅಂಗಡಿಗೆ ಕಳುಹಿಸಿದರು. ಅಲ್ಲೂ ಹಣ ಸಿಗಲಿಲ್ಲ. ಎಲ್ಲೂ ಹಣಸಿಗಲಿಲ್ಲ. ಆ ಸಿರಿವಂತನ ಬಳಿ ಕಂತೆಕಂತೆ ನೋಟು ಇದ್ದದ್ದು ಬಾಬಾರಿಗೆ ಗೊತ್ತಿತ್ತು. ಆತನ ಪರೀಕ್ಷೆಗೆಂದು ಅವರು ಈ ರೀತಿ ಮಾಡಿದ್ದರು. ಬ್ರಹ್ಮಜ್ಞಾನ ಬೇಕೆನ್ನುವವನಿಗೆ ಬಾಬಾರಿಗೆ 5 ರೂ. ಕೊಡಲು ಮನಸ್ಸಿರಲಿಲ್ಲ. ಕೊನೆಗೆ ಬಾಬಾ ಆತನಿಗೆ “ನಾನು 5 ರೂ. ಬೇಡಿದ್ದು ಹಣಕ್ಕಾಗಿ ಅಲ್ಲ, ಪಂಚೇಂದ್ರಿಯಗಳನ್ನು ನನಗೆ ಅರ್ಪಿಸು ಎಂದು. ಬ್ರಹ್ಮಜ್ಞಾನ ಅಷ್ಟು ಸುಲಭವೇ. ಕತ್ತಿಯ ಅಲಗಿನ ಹಾಗೆ ಹರಿತವೂ ಅಪಾಯಕಾರಿಯೂ ಆಗಿರುವುದು” ಎನ್ನುತ್ತಾರೆ. ಅರ್ಹತೆ ಸಂಪಾದಿಸಿದರೆ ಮಾತ್ರ ಬ್ರಹ್ಮಜ್ಞಾನ ದೊರಕುತ್ತದೆ.

ಸಾಯಿನಾಥರು ದಾನದ ಮಹತ್ತ್ವವನ್ನೂ ತಿಳಿಸಲು ಭಕ್ತರಿಂದ ದಕ್ಷಿಣೆಯನ್ನು ಬೇಡುತ್ತಿದ್ದರು. ಭಕ್ತರಿಂದ ಅವರು ದಕ್ಷಿಣೆ ಬೇಡುವುದನ್ನು ನೋಡಿ ‘ಫಕೀರನಿಗೆ ದಕ್ಷಿಣೆ ಏಕೆ?’ ಎಂದೂ ಕೆಲವರು ಎಂದುಕೊಳ್ಳುತ್ತಿದ್ದರು. ದಾನ ಮಾಡುವುದೇ ಧರ್ಮ ಎನ್ನುವ ಮಾತಿದೆ. ಹಿಂದೆಲ್ಲ ಗುರುವೂ ಸಹ ಶಿಷ್ಯರಿಗೆ ‘ದಾನ ಮಾಡುವುದನ್ನು ರೂಢಿಸಿಕೊಳ್ಳಿ’ ಎನ್ನುವ ಉಪದೇಶವನ್ನು ನೀಡುತ್ತಿದ್ದರು. ಗುರು, ಯೋಗಿ ಹಾಗೂ ಆಚಾರ್ಯರನ್ನು ಕಾಣಲು ಬರಿಗೈಯಲ್ಲಿ ಹೋಗಬಾರದೆಂದು ಹೇಳುತ್ತಾರೆ. ಬಾಬಾ ಯಾವಾಗಲೂ “ನಾನು ಭಕ್ತರಿಂದ ಹತ್ತು ರೂ. ತೆಗೆದುಕೊಂಡರೆ ನೂರರಷ್ಟನ್ನು ಅವರಿಗೆ ಕೊಡಬೇಕಾಗುತ್ತದೆ” ಎನ್ನುತ್ತಿದ್ದರು. ಒಮ್ಮೆ ಅವರು ಭಕ್ತರೊಬ್ಬರಿಗೆ ‘15 ರೂ. ಕೊಡು’ ಎಂದರು. ಆತ ‘ಇಲ್ಲ’ವೆಂದಾಗ ‘ಯೋಗವಾಸಿಷ್ಠದಿಂದ ಕೊಡು’ ಎಂದರು. ‘ಯೋಗವಾಸಿಷ್ಟ ಓದು’ ಎಂದು ಅದರ ಅರ್ಥವಾಗಿತ್ತು. ‘6 ರೂ. ಕೊಡು’ ಎಂದರೆ ‘ಅಂತರಂಗದ ಆರು ಶತ್ರುಗಳನ್ನು ನನಗೆ ಅರ್ಪಿಸು’ ಎಂದರ್ಥ. ‘ಎರಡು ಕಾಸು ದಕ್ಷಿಣೆ ನೀಡು’ ಎಂದರೆ ತಾಳ್ಮೆ, ಶ್ರದ್ಧೆ(ಸಬೂರಿ)ಯೇ ಅವೆರಡು ದಕ್ಷಿಣೆಗಳಾಗಿದ್ದವು.

‘ಹಸಿದು ದೇವರನ್ನು ಕಾಣಲಾಗದು’ ಎನ್ನುತ್ತಿದ್ದ ಸಾಯಿನಾಥರು ಎಷ್ಟೋ ವೇಳೆ ತಾವೇ ಸ್ವತಃ ಅಡುಗೆ ಮಾಡಿ ಭಕ್ತರಿಗೆ ಬಡಿಸಿ ಸಂತಸಪಡುತ್ತಿದ್ದರು. ಈರುಳ್ಳಿ, ಬೆಳ್ಳುಳ್ಳಿ ಎಲ್ಲದರ ಬಳಕೆಯನ್ನೂ ಅಡುಗೆಯಲ್ಲಿ ಮಾಡಲಾಗುತ್ತಿತ್ತು. ಇದರಿಂದ ಕೆಲವೈಷ್ಣವ ಭಕ್ತರು ಮೂಗುಮುರಿದಾಗ ತಮ್ಮ ನಿಜಸ್ವರೂಪವನ್ನು ತೋರುತ್ತಿದ್ದರು. ಭಕ್ತರ ರೋಗವನ್ನು ಗುಣಪಡಿಸುವ ಹೊಣೆಯನ್ನೂ ಹೊತ್ತು ಅನೇಕರಿಗೆ ರೋಗಗುಣಪಡಿಸಿ ಅನುಗ್ರಹಿಸುತ್ತಿದ್ದರು.

ಅಕ್ಷರಕ್ಕೆ ನಿಲುಕದ ಕೇವಲ ಅನುಭವವೇದ್ಯ ಸಾಯಿಅವತಾರದ ಬಗ್ಗೆ ಪದಗಳಲ್ಲಿ ವರ್ಣಿಸುವುದೆಂದರೆ ಸಮುದ್ರದ ನೀರನ್ನು ಅಳೆದಂತೆ. ‘ಯಾರು ನನ್ನನ್ನು ಪ್ರೀತಿಯಿಂದ ನೋಡಬಯಸುವರೋ ಅವರು ಮಾತ್ರ ನನ್ನನ್ನು ಕಾಣಬಲ್ಲರು’ ಎನ್ನುತ್ತಿದ್ದ ಬಾಬಾ ಅವರು ‘ನನ್ನ ಭಕ್ತರು ಎಷ್ಟೇ ದೂರವಿರಲಿ, ಅವರನ್ನು ಹುಡುಗರು ಗುಬ್ಬಿಯ ಕಾಲಿಗೆ ದಾರ ಕಟ್ಟಿ ಎಳೆಯುವಂತೆ ಎಳೆಯುತ್ತೇನೆ’ ಎಂದು ಭಕ್ತರಿಗೆ ಭರವಸೆ ನೀಡಿದ್ದರು. 1918ರ ಅಕ್ಟೋಬರ್ 15ರಂದು ಬಾಬಾ ಭೌತಿಕದೇಹ ತೊರೆದಾಗ ಭಕ್ತಜನಸಮೂಹ ಶೋಕಸಾಗರದಲ್ಲಿ ಮುಳುಗಿತು. ಈಗಲೂ ಸಾಯಿನಾಥರನ್ನು ನಂಬಿದವರ ಪಾಪ, ಕಷ್ಟಗಳೆಲ್ಲ ದೂರಾಗುವುದರಲ್ಲಿ ಸಂಶಯವಿಲ್ಲ.

Facebook ಕಾಮೆಂಟ್ಸ್

ಲೇಖಕರ ಕುರಿತು

Saroja Prabhakar

‘ಉತ್ಥಾನ ‘ಪತ್ರಿಕೆಯ ಕಾರ್ಯಕರ್ತೆ. ಓದು, ಬರವಣಿಗೆ, ಸಂಗೀತ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!