ಅಂಕಣ

ಭಾರತೀಯ ರಾಜನ ವಿದೇಶೀ ಮಕ್ಕಳು – ಹುದುಗಿಹೋದ ಚರಿತ್ರೆ

ಅದು ಎರಡನೇ ಜಾಗತಿಕ ಯುದ್ಧದ ಸಮಯ. ಹಿಟ್ಲರ್’ನ ಸೈನ್ಯ ಸೋವಿಯತ್ ಒಕ್ಕೂಟದ ಮೇಲೆ ಯುದ್ಧ ಹೊರಟ ಮಾಹಿತಿ ದೊರೆತು ಸೋವಿಯತ್ ರಾಷ್ಟಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಪೋಲಿಂಡಿನ ಜನರನ್ನು ಬಲವಂತವಾಗಿ ಹೊರದಬ್ಬಲಾಯಿತು. ಸೋವಿಯತ್ ಒಕ್ಕೂಟದ ಸೈಬೀರಿಯಾ ಮುಂತಾದ ಶೀತಪ್ರದೇಶಗಳಿಂದ ದಕ್ಷಿಣಏಷ್ಯಾದ ಉಷ್ಣಪ್ರದೇಶಗಳ ಕಡೆ ಸೋವಿಯತ್ ರಾಷ್ಟ್ರಗಳಲ್ಲಿ ಡೇರೆ ಹೂಡಿದ್ದ ಆ ಪೋಲೆಂಡಿನ ಜನರು ದಿಕ್ಕುದೆಸೆ ಕಾಣದೆ ನಿರಾಶ್ರಿತರಾಗಿ ಬರತೊಡಗಿದರು. ಇದು ಮಾನವ ಸಹಿಷ್ಣುತೆಯ ಮೇಲೆ ಒಡ್ಡಿದ ಪ್ರಯೋಗ ಮಾತ್ರವಲ್ಲ ಅತ್ಯಂತ ಅಮಾನವೀಯ ಘಟನೆಯೂ ಆಗಿತ್ತು. ನೂರಾರು ಸಾವಿರಾರು ಕಿಲೋಮೀಟರ್ ದೂರದ ಪ್ರಯಾಣದಲ್ಲಿ ಹಲವರು ಹಸಿವಿಗೆ, ಚಳಿಗೆ, ಬಿಸಿಲಿನ ಧಗೆಗೆ ಸಿಲುಕಿ ಅಸುನೀಗಿದರು. ಬದುಕುಳಿದ ಹಲವರು ತಮ್ಮ ಕುಟುಂಬವನ್ನು, ಪ್ರೀತಿಪಾತ್ರರನ್ನು ಕಳೆದುಕೊಂಡರು. ಎಲ್ಲೇ ಹೋದರೂ, ಎಷ್ಟೇ ದೂರ ಕ್ರಮಿಸಿದರೂ ಇವರಿಗೆ ಆಶ್ರಯ ಸಿಗಲೇ ಇಲ್ಲ. ಆಗಿನ ಕಾಲಘಟ್ಟವೂ ಹಾಗೆಯೇ. ಎಲ್ಲೆಲ್ಲೂ ಯುದ್ಧ ಭೀತಿಯ ಸಮಯ, ಅರಾಜಕತೆ ತಾಂಡವವಾಡುತ್ತಿತ್ತು. ತಮಗೆ ತಾವು ಬದುಕುಳಿದರೆ ಸಾಕು ಎಂಬ ಭಾವ ಎಲ್ಲಡೆ ಕಂಡುಬರುವ ಸಮಯದಲ್ಲಿ ಇತರರಿಗೆ ಆಶ್ರಯ ನೀಡುವ ಮಾತೆಲ್ಲಿ.

ಪೋಲೆಂಡಿನ ಆ ನಿರಾಶ್ರಿತರು ತಿರುಗದ ದೇಶವಿಲ್ಲ, ಆದರೆ ಎಲ್ಲಿಯೂ ಅವರಿಗೆ ನೆಲೆ ಸಿಗಲಿಲ್ಲ. ರಷ್ಯಾದಿಂದ ಆರಂಭಗೊಂಡು ಈಗಿನ ಕಝಕಿಸ್ತಾನ, ಉಝ್ಬೇಕಿಸ್ತಾನ್, ಟರ್ಕಮೇನಿಸ್ತಾನ್, ಇರಾನ್, ತಝಕಿಸ್ತಾನ್, ಅಫ್ಘಾನಿಸ್ತಾನದ ವರೆಗೂ ಇವರ ಅಲೆಮಾರಿ ಪಯಣ ಸಾಗಿಬಂದರೂ, ಎಲ್ಲರೂ ಇವರನ್ನು ಹೊರದಬ್ಬಿದವರೇ. ಕೊನೆಗೆ ಇವರ ಪಯಣ ಈಗಿನ ಪಾಕಿಸ್ತಾನದ ಕರಾಚಿಯ ಭಾಗದಿಂದ ಜಲಮಾರ್ಗವಾಗಿ ಮುಂಬೈಗೆ ಬಂದಿತು ಭಾರತದಲ್ಲಿ ಆಶ್ರಯ ಬಯಸಿ. ಎಲ್ಲಡೆ ತಿರಸ್ಕೃತರಾದವರಿಗೆ ಇಲ್ಲಿ ನೆಲೆ ಸಿಕ್ಕೀತೇ? ಇಲ್ಲಿಯೂ ಅಷ್ಟೇ ನಮ್ಮ ಪ್ರದೇಶದಲ್ಲಿ ನಿಮ್ಮನ್ನು ಸೇರಿಸಿಕೊಳ್ಳುವುದಿಲ್ಲ ಎಂಬ ಆದೇಶ ನೀಡಿ ಇಲ್ಲಿಂದ ಹೊರಟು ಹೋಗಲು ಸೂಚನೆ ನೀಡಿಯಾಯಿತು. ಕಾರಣ,ಇಲ್ಲಿ ಬ್ರಿಟೀಷರ ಆಳ್ವಿಕೆ ಇತ್ತು. ಜಾಗತಿಕ ಯುದ್ಧದ ಬಿಸಿ ಬ್ರಿಟಿಷರನ್ನೂ ತಟ್ಟಿತ್ತು. ಜೊತೆಗೆ ಇಲ್ಲಿ ಹಲವಾರು ವರ್ಷಗಳಿಂದ ಕೊಳ್ಳೆ ಹೊಡೆದು ಇಲ್ಲಿಯ ಸಂಪತ್ತು ಬರಿದಾಗುತ್ತಾ ಬಂದಿತ್ತು. ಅಷ್ಟೇ ಅಲ್ಲದೆ ಇಲ್ಲಿ ಸ್ವಾತಂತ್ರ ಸಂಗ್ರಾಮದ ಕಿಚ್ಚು ಅದಾಗಲೇ ಹತ್ತಿಯಾಗಿತ್ತು. ಇದೆಲ್ಲದರ ಮಧ್ಯೆ ಬರಿಗಯ್ಯಲ್ಲಿ ಸಹಾಯ ಕೇಳಿಕೊಂಡು ಬಂದ ಆ ನಿರಾಶ್ರಿತರಿಂದ ಸಿಗುವ ಲಾಭವಾದರೂ ಏನು? ಹಾಗಾಗಿ ಇಲ್ಲಿಯ ಬ್ರಿಟೀಷ್ ಗವರ್ನರ್‌ ಇಲ್ಲಿಂದ ತೆರಳಲು ಆದೇಶ ನೀಡಿದನು. ಆದರೆ ಈ ನೆಲದಲ್ಲಿ ಅನಾದಿಕಾಲದಿಂದಲೂ ಇರುವ ಧರ್ಮದ ಪ್ರಭಾವ ದಿಕ್ಕೆಟ್ಟು ಬಂದ ಆ ಪೋಲೆಂಡಿನ ನಿರಾಶ್ರಿತರಿಗೆ ಭಾಗ್ಯದಾಯಕವಾದ ಹೊಸ ಜೀವನವನ್ನು ಮರು ನಿರ್ಮಾಣ ಮಾಡಲು ಸಹಾಯ ಮಾಡಿತು.

ಹೌದು.. ಚರಿತ್ರೆಯ ಇಂತಹ ಪುಟಗಳು ಎಲ್ಲರಿಗೂ ತಿಳಿಯದೇ ಕಾಲಪ್ರವಾಹದಲ್ಲಿ ಕೊಚ್ಚಿಹೋಗುವುದೇ ಹೆಚ್ಚು. ಸಹಾಯ ಯಾಚಿಸಿದವರಿಗೆ ಶಕ್ತಿಮೀರಿ ಸಹಾಯ ಮಾಡುವುದು, ಬೇಡಿದವರಿಗೆ ತನ್ನಲ್ಲಿರುವುದೆಲ್ಲವನ್ನೂ ನೀಡುವುದು, ರಕ್ಷಣೆ ಬಯಸಿ ಬಂದವರಿಗೆ ಅಭಯ ಹಸ್ತ ನೀಡುವುದು ಇಲ್ಲಿಯ ಮಣ್ಣಿನ ಗುಣ. ತನ್ನವರಿಂದ ಹೊರದೂಡಲ್ಪಟ್ಟು ಕಾಡಲ್ಲಿ ಅಲೆಯುತ್ತಿದ್ದ ಸುಗ್ರೀವನಿಗೆ ಅಭಯಹಸ್ತ ನೀಡಿ ರಕ್ಷಿಸಿದ ರಾಮನ ಕಥೆಯಾಗಲೀ, ಮೋಸದಿಂದ ವನವಾಸ ಅನುಭವಿಸಿದ ಪಾಂಡವರಿಗೆ ಬೆಂಬಲ ನೀಡಿ ಮರಳಿ ರಾಜ್ಯ ಪಡೆಯಲು ಸಹಾಯ ಮಾಡಿದ ಕೃಷ್ಣನ ಕಥೆಯಾಗಲೀ, ಇಂತಹ ಕಥೆಗಳೇ ಇಲ್ಲಿಯ ಜನರಿಗೆ ಸ್ಫೂರ್ತಿ. ಇಂತಹ ಮಣ್ಣಿನ ರಾಜನೊಬ್ಬನಿಂದ ಇವರೆಲ್ಲರಿಗೂ ಮರುಹುಟ್ಟು ದೊರಕಿತು.

ಪ್ರಪಂಚವೆಲ್ಲಾ ಅಲೆದಾಡಿ ಎಲ್ಲೂ ನೆಲೆ ಸಿಗದೆ ಅತಂತ್ರ ಸ್ಥಿತಿಯಲ್ಲಿದ್ದ ಆ ನಿರಾಶ್ರಿತರು ಮುಂಬೈಗೆ ಬಂದ ವಿಷಯ, ಅವರನ್ನು ಬ್ರಿಟೀಷ್ ಗವರ್ನರ್‌ ಹಿಂದಟ್ಟಲು ಆದೇಶಿಸಿದ ವಿಷಯ ಆ ರಾಜನಿಗೆ ತಿಳಿಯಿತು. ಅವರ ಕರುಣಾ ಜನಕ ಸ್ಥಿತಿಯ ತಿಳಿದು ಆ ರಾಜನೇ ಸ್ವತಃ ಬ್ರಿಟೀಷ್ ಗವರ್ನರ್‌ ನ ಭೇಟಿಮಾಡಿ ಅವರಿಗೆ ಆಶ್ರಯ ಕೊಡಲು ವಿನಂತಿಸಿಕೊಂಡನು. ಆದರೆ ವ್ಯಾಪಾರಿ ಮನೋಭಾವದ ಅವರಿಗೆ ಹೃದಯ ಶ್ರೀಮಂತಿಕೆ ಎಲ್ಲಿಂದ ಬರಬೇಕು. ಅವರು ರಾಜನ ವಿನಂತಿಯನ್ನು ತಿರಸ್ಕರಿಸಿದರು. ಅವರ ನಿಶ್ಕಾರುಣ್ಯ ನಿಲುವಿನಿಂದ ಬೇಸರಗೊಂಡ ರಾಜ ನಿರಾಶ್ರಿತರೆಲ್ಲರನ್ನೂ ತನ್ನ ರಾಜ್ಯದೊಳಗೆ ಬರಮಾಡಿಕೊಂಡನು. ಭಾರತದೊಳಗೊಂದು ಪುಟ್ಟ ಪೋಲೆಂಡ್ ಉಗಮವಾಯಿತು.

ಆ ರಾಜನೇ “ನವನಗರದ ರಾಜ ಶ್ರೀ ಜಮ್ ಸಾಹೆಬ್ ದಿಗ್ವಿಜಯ್ ಸಿಂಗ್ ರಂಜಿತ್ ಸಿಂಗ್ ಜೀ ಜಡೇಜಾ”. ಈಗಿನ ಗುಜರಾತ್ ರಾಜ್ಯದ ಜಾಮ್ ನಗರ್ ಆತನ ರಾಜಧಾನಿಯಾಗಿತ್ತು. ಬ್ರಿಟೀಷರ ಆಳ್ವಿಕೆಗೆ ಒಳಪಟ್ಟ ಸಂಸ್ಥಾನಗಳಲ್ಲಿ ಇವನ ಸಂಸ್ಥಾನವೂ ಒಂದು. ನವನಗರದ ಆ ರಾಜನಿಂದಾಗಿ ಅದೆಷ್ಟೋ ಪೋಲೆಂಡಿನ ಜನರು ನವಜೀವನವನ್ನು ಕಂಡರು. ಆ ರಾಜನ ಹೃದಯ ಶ್ರೀಮಂತಿಕೆ ಎಷ್ಟಿತ್ತೆಂದರೆ ಆ ನಿರಾಶ್ರಿತರನೆಲ್ಲಾ ತನ್ನ ರಾಜ್ಯಕ್ಕೆ ಬರಮಾಡಿಕೊಳ್ಳಲು ತಾನೇ ಸ್ವತಃ ಹೋಗಿದ್ದನು. ಹಾಗೆಂದ ಮಾತ್ರಕ್ಕೆ ಇವನ ರಾಜ್ಯವೇನು ಸಂಪದ್ಭರಿತವಾಗಿರಲಿಲ್ಲ. ಇವನ ರಾಜ್ಯದಲ್ಲೂ ಭೀಕರ ಬರ ತಾಂಡವವಾಡುತ್ತಿತ್ತು. ಆದರೂ ಅವರಿಗೆಲ್ಲರಿಗೂ ಆಶ್ರಯ ನೀಡುವುದರ ಮೂಲಕ ಮಾನವೀಯತೆ ಮೆರೆದನು. ಅವರಿಂದ ಯಾವುದೇ ಲಾಭವಿಲ್ಲದಿದ್ದರೂ ಅವರನ್ನೆಲ್ಲಾ ರಕ್ಷಿಸುವ ಹೊಣೆಯನ್ನು ವಹಿಸಿಕೊಂಡನು. ಹೆಂಗಸರು ಮಕ್ಕಳೇ ಅಧಿಕವಿದ್ದ ಮೊದಲ ತಂಡದಲ್ಲೇ ಸುಮಾರು 600ಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಅದರ ಸಂಖ್ಯೆ ನಂತರದಲ್ಲಿ 60,00 ಕ್ಕೂ ಹೆಚ್ಚು ಬೆಳೆಯಿತು.

ಈತನ ಈ ಕ್ರಮವನ್ನು ಬ್ರಿಟೀಷ್ ಸರ್ಕಾರ ಕಟುವಾಗಿ ವಿರೋಧಿಸಿತು. ವಿದೇಶೀ ನಿರಾಶ್ರಿತರಿಗೆ ಆಶ್ರಯ ನೀಡಬಾರದೆಂದು, ಅವರೆಲ್ಲರನ್ನೂ ತನ್ನ ರಾಜ್ಯದಿಂದ ಹೊರಹಾಕಬೇಕೆಂದು ರಾಜನಿಗೆ ತಾಕೀತು ಮಾಡಿತು. ಬ್ರಿಟೀಷರ ಈ ಆದೇಶದಿಂದ ಬೇಸರಗೊಂಡ ರಾಜ ಅವರ ಆದೇಶವನ್ನು ವಿರೋಧಿಸಲು ಯಾರೂ ಊಹಿಸಿರದ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡನು. ಆಶ್ರಯ ಪಡೆಯುತ್ತಿರುವ ನಿರಾಶ್ರಿತರೆಲ್ಲರೂ ನನ್ನ ಮಕ್ಕಳು. ಅವರೆಲ್ಲರಿಗೂ ನಾನೇ ತಂದೆ. ಅವರೆಲ್ಲರೂ ನವನಗರದ ಅವಿಭಾಜ್ಯ ಅಂಗ ಎಂದು ಬ್ರಿಟೀಷರಿಗೆ ಪ್ರತ್ಯುತ್ತರ ನೀಡಿದ್ದಲ್ಲದೇ “ಎಲ್ಲ ನಿರಾಶ್ರಿತರಿಗೂ ದತ್ತು ಮಕ್ಕಳಾಗಿ ಸ್ವೀಕರಿಸಿದ ಪ್ರಮಾಣ ಪತ್ರ ವಿತರಿಸಿಬಿಟ್ಟನು.” ರಾಜನ ಇಂತಹ ದಿಟ್ಟ ಹೆಜ್ಜೆಯಿಂದ ಬ್ರಿಟೀಷ್ ಸರ್ಕಾರಕ್ಕೆ ಬಾಯಿ ಕಟ್ಟಿಹಾಕಿದಂತಾಯಿತು. ಭೀಕರ ಕ್ಷಾಮದ ಪರಿಸ್ಥಿತಿಯಲ್ಲೂ ರಾಜನು ಅವರಿಗೆ ಟಾಟ ಮುಂತಾದ ಉದ್ಯಮಿಗಳ ಸಹಾಯದಿಂದ ಊಟ, ವಸತಿ, ಶಿಕ್ಷಣ, ಆರೋಗ್ಯ ಮುಂತಾದ ಎಲ್ಲ ಸೌಕರ್ಯಗಳನ್ನು ಮಾಡಿಕೊಟ್ಟು ಅವರ ಮರುಹುಟ್ಟಿಗೆ ಕಾರಣನಾದನು. ಆತ ಸ್ವತಂತ್ರ ವಿಚಾರಗಳಿಗೆ ಎಷ್ಟು ಬೆಲೆ ಕೊಡುತ್ತಿದ್ದನೆಂದರೆ ತಾನು ಹಿಂದೂ ಧರ್ಮದವನಾದರೂ ಅವರ ಮೇಲೆ ತನ್ನ ಧಾರ್ಮಿಕ ಆಸ್ತೆಯನ್ನು ಹೇರದೆ, ಅವರ ಧರ್ಮವನ್ನು ಅನುಸರಿಸಲು, ಅವರ ಧರ್ಮ ಶಿಕ್ಷಣ ಕಲಿಯಲು ಪಾದ್ರಿಯನ್ನೂ ನೇಮಿಸಿದನು. ಸ್ವಾತಂತ್ರ್ಯಾ ನಂತರ ಅವರೆಲ್ಲಾ ಭಾರತದಿಂದ ತಮ್ಮ ದೇಶಕ್ಕೆ ಮರಳುತ್ತಾರೆ. ಹೀಗೆ ಸಂತ್ರಸ್ತರ ಸರ್ವತೋಮುಖ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತ ನವನಗರದ ರಾಜ ಜೆಮ್ ಸಾಹೆಬ್ ದಿಗ್ವಿಜಯ ಸಿಂಗ್ ರಂಜಿತ್ ಸಿಂಗ್ ಜಡೇಜರವರನ್ನು ಇಂದಿಗೂ ಪೋಲೆಂಡಿನ ಜನರು ಸ್ಮರಿಸುತ್ತಾರೆ. ಅವರ ನೆನಪಿನಲ್ಲಿ ಪೋಲೆಂಡಿನಲ್ಲಿ ಶಾಲೆಯನ್ನೂ ತೆರೆಯಲಾಗಿದ್ದು, ಅಲ್ಲಿ ಭಾರತೀಯ ಸಂಸ್ಕೃತಿಯ ಪರಿಚಯ ಮಾಡಿಕೊಡುವುದಲ್ಲದೇ, ಪ್ರಪಂಚದ ನಾನಾ ದೇಶಗಳ ಅನಾಥ ಮಕ್ಕಳಿಗೆ ಶಿಕ್ಷಣವನ್ನೂ ನೀಡಲಾಗುತ್ತಿದೆ. ರಾಜನಿಗೆ ಪೋಲೆಂಡಿನ ಅತ್ಯುನ್ನತ ಗೌರವವನ್ನು ನೀಡಿ ಪುರಸ್ಕರಿಸಲಾಗಿದೆ.

ಇಂದಿಗೂ ಪೋಲೆಂಡಿನ ಅನೇಕ ಜನರು ತಾವು, ತಮ್ಮ ಪೂರ್ವಜರು ಬದುಕಿದ ಸ್ಥಳಗಳಿಗೆ ಭೇಟಿನೀಡಿ ಭಾವುಕರಾಗುತ್ತಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆ ನಿಃಸ್ವಾರ್ಥ ಹೃದಯ ಶ್ರೀಮಂತಿಕೆ ಮೆರೆದ ರಾಜನ ಕಾರ್ಯ ಎಂದೆಂದಿಗೂ ಶ್ಲಾಘನೀಯ.

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Jois

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!