ಅಂಕಣ

ಚಳಿಗಾಲದ ಕಥೆ

ಸುಂದರವಾದ ಹಳ್ಳಿಯ ಸುಂದರವಾದ ಮುಂಜಾನೆ ಹೇಗಿರಬಹುದು?
ಮಂಜಿನಿಂದ ಮುಚ್ಚಿಕೊಂಡ ಊರು, ಮಂಜಿನ ಮಬ್ಬಿನಲ್ಲಿ ಅಳಿಸಿಹೋದ ಕಾಲುದಾರಿಗಳು, ಇಬ್ಬನಿಯಲ್ಲಿ ಮಿಂದ ಹುಲ್ಲು ದಾರಿಯ ಕಡೆಗೆ ಬಾಗಿ ಸ್ವಾಗತಿಸುವ ಪರಿ, ಮರದ ಎಲೆಯಿಂದ ಎಲೆಗೆ ಧುಮುಕುವ ಇಬ್ಬನಿಯ ಹನಿಗಳ ಪಟಪಟ ಸದ್ದು, ರಾತ್ರಿಯೆಲ್ಲ ಉಪವಾಸ ಮಾಡಿದ ಪಕ್ಷಿಗಳು ಹಸಿವಿನ ಸಂಕಟಕ್ಕೋ, ಆಹಾರ ದೊರಕುವ ಸಂತೋಷಕ್ಕೋ ಹಾಡಿಕೊಳ್ಳುವುದು, ‘ಬಾ ನನ್ನನ್ನು ಕನ್ನಡಿಯನ್ನಾಗಿ ಮಾಡಿಬಿಡು’ ಎಂದು ಕರೆಯುವ ಒದ್ದೆಯಾದ ಜೇಡರ ಬಲೆಗಳು, ಸಣ್ಣಮಳೆಯಲ್ಲಿ ನೆನೆದಂತೆ ಇಬ್ಬನಿಯಲ್ಲಿ ನೆನೆದರೆ ಸಿಗುವ ಸುಖವನ್ನು ಬಯಸಿ ನಡಿಗೆಯನ್ನು ಒತ್ತಾಯಿಸುವ ಕಾಲುಗಳು. ಆದರೆ ಇದೆಲ್ಲ ಸಾಧ್ಯವಾಗುವುದು ನೀವು ಯಾವುದಾದರೂ ಹಳ್ಳಿ ಮನೆಯ ಅತಿಥಿಯಾಗಿ ಹೋಗಿದ್ದರೆ ಅಥವಾ ಯಾವುದಾದರೂ ಹೋಂಸ್ಟೇಯಲ್ಲೋ, ಚಾರಣ ಕ್ಯಾಂಪಿನಲ್ಲೋ ಇದ್ದರೆ ಮಾತ್ರ.

ಮಲೆನಾಡಿನಲ್ಲಿ ವಾಸವಾಗಿರುವ ಗೆಳತಿಯೊಬ್ಬಳು ಬಹಳ ವರ್ಷಗಳಿಂದ ಬೆಳದಿಂಗಳ ಊಟಕ್ಕೆ ಆಹ್ವಾನಿಸುತ್ತಲೇ ಇದ್ದಳು. ಬಾಯಿಮಾತಿನಲ್ಲಿ ಆಹ್ವಾನ ಸ್ವೀಕರಿಸುತ್ತಿದ್ದೆನೇ ಹೊರತು ಹೋಗಿಬರಲಿಕ್ಕೆ ಆಗಿರಲಿಲ್ಲ. ಕಡೆಗೂ ಈ ವರ್ಷ ಹೋಗಲು ಅನುಕೂಲಗಳು ಕೂಡಿಬಂದಿದ್ದವು. ಬೆಳದಿಂಗಳ ರಾತ್ರಿಯಲ್ಲಿ ಬೆಟ್ಟದ ತುದಿಯ ಚಳಿಯಲ್ಲಿ ಉಂಡು, ಹರಟಿ ಅವಳ ಮನೆಗೆ ಹೋಗಿ ಮಲಗುವಷ್ಟರಲ್ಲಿ ತಡರಾತ್ರಿ ಆಗಿತ್ತಾದರೂ, ಮಾರನೆಯ ದಿನ ಬೆಳಿಗ್ಗೆ ಸ್ವಲ್ಪ ಬೇಗನೆಯೇ ಎದ್ದು ತೋಟ, ಬಯಲು, ಗುಡ್ಡಗಳನ್ನು ಸುತ್ತಲು ಹೋಗಿದ್ದೆ. ಹೀಗೆ ಸುತ್ತುವಾಗ, ಅದೇ ಊರಿನ ಪರಿಚಯಸ್ಥರೊಬ್ಬರು ಸಿಕ್ಕರು. ಸುಮಾರು ಎಪ್ಪತ್ತರ ಪ್ರಾಯ. ಅವರ ಮಕ್ಕಳೆಲ್ಲ ಓದಿಕೊಂಡು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದರೂ, ಅವರು ಮಾತ್ರ ಕೃಷಿಯನ್ನು ಹಿಡದೂಬಿಡದೇ ನಡೆಸಿಕೊಂಡು ಹೋಗುತ್ತಿದ್ದಾರೆ. ಹೀಗೇ ಮಾತು ಮುಂದುವರಿದು, ಅವರು ತಮ್ಮ ಕಷ್ಟಗಳನ್ನು ಬಿಚ್ಚಿಟ್ಟರು.

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ಹಳ್ಳಿಯ ಬದುಕು ದೂರದ ಶಹರಗಳಿಂದ ಕಾಣುವಷ್ಟೇನೂ ಸುಂದರವಾಗಿರುವುದಿಲ್ಲ. ಶುದ್ಧವಾದ ಗಾಳಿ, ನೀರುಗಳಿಗೆ ಕೊರತೆಯಿಲ್ಲದೇ ಇದ್ದರೂ ನಗರದಂತಹುದೇ ತರಾತುರಿಯ ಬದುಕು, ಕೃಷಿಯ ಜೂಜಾಟದ ಗೋಳುಗಳ ನಡುವೆ ಸುತ್ತಲಿನ ಸುಂದರ ಪರಿಸರವನ್ನು ಸವಿಯುವ ಶಕ್ತಿಯೂ ಕುಂದಿಹೋಗಿರುತ್ತದೆ. ಇತ್ತೀಚೆಗೆ ವೃದ್ಧಾಶ್ರಮಗಳಾಗುತ್ತಿರುವ ಹಳ್ಳಿಗಳು ಅಲ್ಲಿನ ಕಷ್ಟಗಳನ್ನು ಇಮ್ಮಡಿಗೊಳಿಸಿವೆ. ನಗರ ಸೇರುತ್ತಿರುವ ಯುವ ಜನಾಂಗ ಕೃಷಿಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ.

ಅಂತಹ ಮಲೆನಾಡಿನ ಹಳ್ಳಿಯೊಂದರ ಚಳಿಗಾಲವನ್ನು ಅವರು ನನಗೆ ಬೇರೆ ರೀತಿಯಲ್ಲಿಯೇ ಪರಿಚಯಿಸಿದರು.

ಬಹುತೇಕ ಮನೆಗಳಲ್ಲಿ ವಯಸ್ಸಾದ ತಂದೆ ತಾಯಿ ಮಾತ್ರ ಇರುತ್ತಾರೆ. ಅವರು ಕೃಷಿಯಲ್ಲೇ ಬದುಕಿದವರು. ಅದೇ ಆದಾಯದಲ್ಲೇ ಮನೆ ಕಟ್ಟಿಸಿ, ಮಕ್ಕಳನ್ನು ಓದಿಸಿದವರು. ಈ ಇಳಿವಯಸ್ಸಿನಲ್ಲೂ ಅವರಿಗೆ ಬೆಳಿಗ್ಗೆ ಐದಕ್ಕೋ, ಆರಕ್ಕೋ ಏಳುವ ರೂಢಿಯನ್ನು ತಪ್ಪಿಸಿಕೊಳ್ಳಲಿಕ್ಕೆ ಆಗುವುದಿಲ್ಲ. ಏಕೆಂದರೆ ಹಳ್ಳಿಯ ಕೆಲಸಗಳೇ ಅಂಥವು. ಏನಿಲ್ಲವೆಂದರೂ ಆರು ಗಂಟೆಗಾದರೂ ಎದ್ದು ಒಲೆಗೆ ಬೆಂಕಿ ಮಾಡಿ ಹಂಡೆಯಲ್ಲಿ ನೀರು ಕಾಯಿಸಬೇಕು. ಅವರ ಸ್ನಾನಕ್ಕಲ್ಲದಿದ್ದರೂ, ಕೊಟ್ಟಿಗೆಯಲ್ಲಿನ ಹಸುಗಳ ಕಲಗಚ್ಚಿಗೆ ಬೆರೆಸಲಾದರೂ ಬೆಚ್ಚಗಿನ ನೀರು ಬೇಕು. ಹಸುಗಳ ಸಗಣಿಯನ್ನು ಬಾಚಿ ಒಟ್ಟುಮಾಡಿ ಬೆರಣಿ ತಟ್ಟುವುದು ಅಥವಾ ನೀರಿನೊಂದಿಗೆ ಕರಡಿ ಗೋಬರ್ ಗ್ಯಾಸ್ ಪೆಟ್ಟಿಗೆಗೆ ಸುರಿಯುವ ಕೆಲಸ ಆಗಬೇಕು. ಕೊಟ್ಟಿಗೆಯನ್ನು ತೊಳೆದು ಶುಚಿಗೊಳಿಸಬೇಕು. ಹಸುವಿನ ಹಾಲು ಹಿಂಡಬೇಕು. ಇವೆಲ್ಲ ಕೆಲಸಗಳನ್ನು ದಪ್ಪನೆಯ ಜಾಕೆಟ್ ಅಥವಾ ಸ್ವೆಟ್ಟರ್ ಧರಿಸಿಕೊಂಡು ಮಾಡಲಿಕ್ಕಾಗುವುದಿಲ್ಲ. ಮುಂಜಾವಿನಲ್ಲಿಯೇ ಹಾಲಿನ ಡೈರಿಗೆ ಹಾಲು ಹಾಕಿ ಬರಬೇಕು. ಚಳಿಯಲ್ಲಿನ ನಡಿಗೆಗೆ ಕಾಲುಗಳು ಸುಲಭವಾಗಿ ಸಹಕರಿಸುವುದಿಲ್ಲ. ಇನ್ನು ಮನೆಯನ್ನು ಗುಡಿಸುವುದು, ಒರೆಸುವುದು, ರಂಗೋಲಿ ಹಾಕುವುದು, ಅಂಗಳವನ್ನು ಶುಚಿಗೊಳಿಸುವುದು, ಇತ್ಯಾದಿ ಕೆಲಸಗಳ ಬಗ್ಗೆ ಬೇರೆ ಹೇಳಬೇಕಾದ್ದಿಲ್ಲ. ಆ ಕೆಲಸಗಳನ್ನು ಬೆಳಿಗ್ಗೆಯೇ ಮುಗಿಸದಿದ್ದರೆ ಮನೆಗೆ ಕೇಡು ಎಂಬ ನಂಬಿಕೆಗೆ ಹೆದರುವ ಜನರು ಚಳಿಯನ್ನೂ ಎದುರಿಸಲೇಬೇಕಗುತ್ತದೆ. ಇಷ್ಟು ಕೆಲಸ ಮಾಡಿ ಮುಗಿಸುವಷ್ಟರಲ್ಲಿ ಕೈ ಮರಗಟ್ಟಿ, ಸೊಂಟ ಗೂನಾಗಿ, ಸೋತುಹೋಗುತ್ತಾರೆ. ಇಳಿವಯಸ್ಸಿನಲ್ಲಿ ಚಳಿಗಾಲ ಅಸಹನೀಯವಾಗುತ್ತದೆ. ಕೃಷಿ ಕೆಲಸಕ್ಕೇ ಕಾರ್ಮಿಕರ ಕೊರತೆ ಇರುವಲ್ಲಿ, ಮನೆಕೆಲಸಗಳಿಗೆ ಎಲ್ಲಿಂದ ಜನರನ್ನು ತರುವುದು. ಹೇಗೋ ತಳ್ಳುತ್ತಾರೆ.

ಒಟ್ಟೂ ಕೆಲಸಗಳಲ್ಲಿ ಮನೆಯನ್ನು ಶುಚಿಗೊಳಿಸುವುದು ಮತ್ತು ಅಡಿಗೆ ಮಾಡುವುದನ್ನಂತೂ ಬಿಡುವಂತಿಲ್ಲ. ಆದರೆ ಹಸುಗಳನ್ನು ಮಾರಿ ಕೊಟ್ಟಿಗೆಯ ಕೆಲಸವನ್ನೊಂದನ್ನಾದರೂ ಕಡಿಮೆ ಮಾಡಿಕೊಳ್ಳಬಹುದಲ್ಲ, ಹತ್ತಿರದಲ್ಲೆಲ್ಲಾದರೂ ಹಾಲನ್ನು ಕೊಂಡರಾಯಿತು ಎನ್ನುವ ಉಪದೇಶವನ್ನು ಯಾರೂ ಕೇಳಿಸಿಕೊಳ್ಳುವುದಿಲ್ಲ. ಅವರಿಗೆಲ್ಲ ಹಸು ಹಾಲು ಕೊಡುವ ಪ್ರಾಣಿ ಎಂಬುದಕ್ಕಿಂತ, ಅದು ಮನೆಯ ಮಗು ಅಥವಾ ದೇವರು ಎನ್ನುವ ಭಾವವೇ ಗಾಢವಾಗಿದೆ. ಕೊಟ್ಟಿಗೆ ಕೆಲಸದಿಂದ ಮರಗಟ್ಟಿದ ಬೆರಳುಗಳನ್ನು ಹಸುವಿನ ಮೈಸವರಿ, ಹಣೆಯನ್ನು ನೇವರಿಸಿ ಸರಿಪಡಿಸಿಕೊಳ್ಳುತ್ತಾರೆ.

ಜೀವನವೆಲ್ಲಾ ತೋಟದಲ್ಲಿ ಅಥವಾ ಹೊಲದಲ್ಲಿ ದುಡಿದು ಮೈ ಒರಟಾಗಿಸಿಕೊಂಡವರಿಗೂ ಇಳಿದು ಹೋಗುತ್ತಿರುವ ವಯಸ್ಸಿನ ವಿರುದ್ಧ ಈಜಲಾಗದು. ಕೆಲಸ ಮಾಡುವ ತಾಕತ್ತು ಕಡಿಮೆಯಾದರೂ ಅವರು ನಿವೃತ್ತಿಯನ್ನು ಬಯಸುವುದಿಲ್ಲ. ನಡೆಸಿಕೊಂಡು ಬಂದ ಕೃಷಿ ಅವರನ್ನು ಕುಸಿಯಲು ಬಿಡುವುದಿಲ್ಲ. ಚಳಿಗೆ ಮರಗಟ್ಟಿ ಹೋದವರು ಬಿಸಿಲೇರುತ್ತಿದ್ದಂತೆ ಸುಧಾರಿಸಿಕೊಳ್ಳುತ್ತಾರೆ. ಮಧ್ಯಾಹ್ನದ ಹೊತ್ತು ಅಂಗಳದ ತುದಿಯಲ್ಲಿ ಕಂಬಳಿ ಹಾಸಿ ಕುಳಿತು ಕೈಕಾಲುಗಳನ್ನು ತಿಕ್ಕಿಕೊಳ್ಳುತ್ತ ಒಂದಿಷ್ಟು ಹುರುಪನ್ನು ಪಡೆದುಕೊಳ್ಳುತ್ತಾರೆ. ಸಂಜೆಯಾಗುತ್ತಿದ್ದಂತೆ ಮತ್ತೆ ಏರುವ ಚಳಿಗೆ ಬೆಂಕಿಯ ಮುಂದೆ ಕುಳಿತುಕೊಳ್ಳುವುದೂ ತಾತ್ಕಾಲಿಕ ಸುಖವಷ್ಟೇ. ಮನೆಯ ಬಾಗಿಲು ಕಿಟಕಿಗಳನ್ನು ಮುಚ್ಚಿದರೂ ಹೆಂಚಿನ ಮಾಡಿನಿಂದ, ನಡುಮನೆಯ ಮೇಲಿನ ಗಾಳಿ ಸರಳುಗಳಿಂದ ಚಳಿ ನುಸುಳಿಕೊಂಡು ಬರುತ್ತದೆ.

ವಯಸ್ಸು ಎಷ್ಟೇ ಆಗಿದ್ದರೂ ಬದುಕಿರುವ ವರೆಗೆ ಊಟ ಮಾಡುವುದು ಅನಿವಾರ್ಯ. ಚಳಿಯಿಂದಾಗಿ ಪಾತ್ರೆಯಲ್ಲಿನ ಹನಿ ತೈಲದ ಪಸೆಯೂ ಗಟ್ಟಿಯಾಗಿ ಅಂಟಿರುತ್ತದೆ. ಜೋರಾಗಿ ಉಜ್ಜಿ ತೊಳೆಯುವ ತೋಳ್ಬಲ ಮುದುಕರಿಗೆ ಇಲ್ಲದಿರುವ ಕಾರಣದಿಂದಾಗಿ ಪಾತ್ರೆಗಳ ಶುದ್ಧತೆ ಕಷ್ಟದ್ದೇ. ಇನ್ನು ಬಿಸಿನೀರು ಅಥವಾ ಬೆಚ್ಚಗಿನ ನೀರನ್ನು ಬಳಸಿ ಪಾತ್ರೆಯನ್ನು ತೊಳೆಯುವುದೆಂದರೆ ಅದು ಬೇರೆಯದೇ ಕತೆಯಾಗುತ್ತದೆ. ನೀರು ಕಾಯಿಸಲು ಕಟ್ಟಿಗೆ ಬೇಕು. ಕಟ್ಟಿಗೆಯನ್ನು ಕಡಿಯುವುದು ಅಥವಾ ಒಟ್ಟು ಮಾಡುವುದೊಂದು ಕೆಲಸವಾದರೆ, ಅದನ್ನು ಮನೆಗೆ ಹೊತ್ತು ತರುವುದೊಂದು ಕೆಲಸ. ದಿನನಿತ್ಯದ ಕೆಲಸ ಮತ್ತು ಕೃಷಿ ಕೆಲಸಗಳನ್ನು ನಿರ್ವಹಿಸುವುದೇ ಕಷ್ಟವಾಗಿರುವ ವಯಸ್ಸಿನಲ್ಲಿ ಕಟ್ಟಿಗೆ ಕಡಿದು ಹೊತ್ತು ತರುವುದು ಸಾಧ್ಯವಾಗದ ಮಾತು.

ಶೀತ ಪ್ರದೇಶಗಳಿಗೆ ಹೋಲಿಸಿದರೆ ಮಲೆನಾಡಿನ ಚಳಿ ತಾಳಿಕೊಳ್ಳಬಹುದಾದ ಚಳಿಯೇ ಆಗಿದ್ದರೂ, ಇವೆಲ್ಲ ಕಷ್ಟಗಳೇ ಅಲ್ಲ ಎನ್ನಿಸಿದರೂ- ಶಕ್ತಿ ಕುಂದುತ್ತಿರುವ ವಯಸ್ಸಿನಲ್ಲಿ ನಿತ್ಯದ ಸಣ್ಣಪುಟ್ಟ ರಗಳೆಗಳೂ ಗೋಳುಗಳಂತೆಯೇ ಭಾಸವಾಗುತ್ತವೆ. ತಂತ್ರಜ್ಞಾನದಲ್ಲಿನ ಕ್ರಾಂತಿಯಿಂದಾಗಿ, ಕೈಗಾರಿಕೆಗಳ ಬೆಳವಣಿಗೆಯಿಂದಾಗಿ ‘ಹಳ್ಳಿಗಳಿಗೆ ಭವಿಷ್ಯವಿಲ್ಲ’ ಎಂದು ಮುದುಕರು ನೋಯುತ್ತಿದ್ದಾರೆ ಮತ್ತು ಅದಕ್ಕೆ ಸಾಕ್ಷಿಯೆಂಬಂತೆ ನಗರಗಳ ಬಹುತೇಕ ಮಂದಿ ಹಳ್ಳಿಗಳಿಂದಲೂ, ಕೃಷಿ ಮೂಲದಿಂದಲೂ ಬಂದವರಾಗಿದ್ದಾರೆ.

ಕೈಗಾರಿಕೆಗಳು ಎಷ್ಟೇ ಬೆಳೆದರೂ, ತಂತ್ರಜ್ಞಾನ ಯಾವ ಎತ್ತರಕ್ಕೇರಿದರೂ ಮನುಷ್ಯ ಜೀವಿ ಬದುಕಲು ತಿನ್ನಬೇಕಾಗಿರುವುದು ಅನ್ನವೇ ಆಗಿದೆ. ಹಿಂದೆ ಅದೆಷ್ಟೋ ನಾಗರೀಕತೆಗಳು ಮುರಿದುಬಿದ್ದರೂ, ಕೃಷಿಯನ್ನು ಮತ್ತು ಕಾಡನ್ನು ನಂಬಿ ಬದುಕಿದವರು ಅಷ್ಟೇನೂ ಏರಿಳಿತಗಳಿಲ್ಲದ ಜೀವನವನ್ನು ನಡೆಸಿದ್ದಾರೆ. ಮಾನವನ ಭವಿಷ್ಯ ಇರುವುದು ಕೃಷಿಯಲ್ಲೇ- ಇಲ್ಲದಿದ್ದರೆ ವಿಜ್ಞಾನಿಗಳ್ಯಾಕೆ ಅಂತರಿಕ್ಷದಲ್ಲಿ ಮತ್ತು ಚಂದ್ರನ ಮೇಲೆ ಬೀಜಗಳನ್ನು ಮೊಳೆಸುವ ಪ್ರಯತ್ನ ಮಾಡುತ್ತಿದ್ದರು?

Facebook ಕಾಮೆಂಟ್ಸ್

ಲೇಖಕರ ಕುರಿತು

ಶ್ರೀಕಲಾ ಹೆಗಡೆ ಕಂಬ್ಳಿಸರ

ಹುಟ್ಟಿದ್ದು, ಬೆಳೆದದ್ದು ಸಿರಸಿಯ ಪುಟ್ಟ ಹಳ್ಳಿಯೊಂದರಲ್ಲಿ.
ಓದಿದ್ದು ವಾಣಿಜ್ಯಶಾಸ್ತ್ರ. ಐದು ವರ್ಷಗಳು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿದ ಅನುಭವ. ಈಗ ಗೃಹಿಣಿಯಾಗಿದ್ದು, ಬರವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!