Featured ಅಂಕಣ

ಅಶ್ರುತರ್ಪಣದ ನಮನ

ನಿನ್ನೆ (೧೪-೦೨-೨೦೧೯) ನಡೆದ CRPF ಯೋಧರ ಹತ್ಯೆ ಅತ್ಯಂತ ಅಮಾನುಷ. ಲೇಖನ ಬರೆಯುವ ಸಮಯದಲ್ಲಿ 40ಕ್ಕೂ ಹೆಚ್ಚು ಯೋಧರ ವೀರಮರಣದ ದುಃಖದ ವಾರ್ತೆಯಿಂದ ಮೈಬಿಸಿ ಏರಿತ್ತು. ಅದರ ಆಕ್ರೋಶ ಲೇಖನಿಯ ಮೂಲಕ ತಿಳಿಸ ಹೊರಟರೆ ಲೇಖನಿ ಹಿಡಿಯುವ ರೀತಿಯೇ ಮರೆತು ಹೋಗಿ ಕೈ ತಾನಾಗಿ ಆಯುಧವನ್ನು ಹಿಡಿದುಕೊಳ್ಳುವ ಹಾಗೆ  ಹಿಡಿದುಕೊಂಡು ಬಿಡುತ್ತಿದೆ. ಯಾರ ರಕ್ತ ಕುದಿಯುವುದಿಲ್ಲ ಹೇಳಿ. ಇಂತಹ ಪೈಶಾಚಿಕ ಕೃತ್ಯಕ್ಕೆ ನೀಡುವ ಶಿಕ್ಷೆಯಲ್ಲಿ ಯಾವುದೇ ರಿಯಾಯಿತಿ ನೀಡಬಾರದು. ಹೀಗೆಯೇ ಮುಂದುವರೆದರೆ ಇಂದು ದೂರದ ಕಾಶ್ಮೀರದಲ್ಲಿ ದಾಳಿಯಾಗಿದೆ ನಾಳೆ ನಮ್ಮಲ್ಲಿ. ಸರ್ಕಾರ ಇದಕ್ಕೆ ತಕ್ಕ ಉತ್ತರ ನೀಡಲೇಬೇಕು. ಆಗಲೇ ಅದಕ್ಕೊಂದು ಸಮಾಧಾನ, ಹುತಾತ್ಮರಾದ ಸೈನಿಕರಿಗೆ ಸಲ್ಲಿಸಲಾಗುವ ಗೌರವ. ಹಾಗಾದರೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಆಗಬೇಕೆಂದೇ ಎಲ್ಲರೂ ಹೇಳುತ್ತಿರುವುದು. ಎಲ್ಲರ ಆಕ್ರೋಶವೂ ಸರ್ಜಿಕಲ್ ಸ್ಟ್ರೈಕ್ ಮೂಲಕವೇ ಪರಿಹಾರ ದೊರಕಲಿ ಎಂಬ ಆಶಯದಲ್ಲಿ ಕೊನೆಗೊಳ್ಳುತ್ತಿದೆ. ಸತ್ಯ ಸಂಗತಿ ಎಂದರೆ ಸರ್ಜಿಕಲ್ ದಾಳಿ ಮಾಡಿದಾಗಲೂ ಜನರ ಬಾಯಲ್ಲಿ ಇಷ್ಟೊಂದು ಪ್ರಚಾರ ಪಡೆದಿರಲಿಲ್ಲ. “ಉರಿ” ಚಲನಚಿತ್ರ ಬಂದ ಬಳಿಕವಷ್ಟೇ ಎಲ್ಲರ ಮನದಲ್ಲಿ ಭಾರತೀಯ ಯೋಧರ ಸರ್ಜಿಕಲ್ ಸ್ಟ್ರೈಕ್ ಬೇರೂರಿಬಿಟ್ಟಿದೆ. ಇಂದು ನಡೆದ ಬರ್ಬರ ಕೃತ್ಯಕ್ಕೆ ರಾತ್ರೋ ರಾತ್ರಿ ನುಗ್ಗಿ ಮಾಡುವ ಸರ್ಜಿಕಲ್ ಸ್ಟ್ರೈಕ್ ಸಾಲದು. ಅದಕ್ಕಿಂತ ಮಿಗಿಲಾಗಿ ಮೂಲದಿಂದಲೇ ಉಗ್ರರ ಬೇರನ್ನು ಕಿತ್ತುಹಾಕುವ ಕಾರ್ಯ ಜರುಗಿಸಬೇಕು. ಬುಡಕ್ಕೇ ಕೊಡಲಿ ಹಾಕಬೇಕು ಎನ್ನುವ ಹಾಗೆ ಪಾಕಿಸ್ತಾನದಲ್ಲಿರುವ ಉಗ್ರರ ತಯಾರುಮಾಡುವ ಎಲ್ಲ ಶಿಬಿರಗಳನ್ನು ಸುಟ್ಟುಬೂದಿ ಮಾಡಬೇಕಾಗಿದೆ.

ಒಮ್ಮೆ ನೆನಪಿಸಿಕೊಳ್ಳಿ ಒಸಾಮಾ ಬಿನ್ ಲಾಡೆನ್ ನೇತೃತ್ವದ ತಾಲಿಬಾನ್ ಉಗ್ರರು ಅಮೇರಿಕಾದ ಪೆಂಟಗನ್ ಕಟ್ಟಡದ ಮೇಲೆ ವೈಮಾನಿಕ ಬಾಂಬ್ ದಾಳಿ ಮಾಡಿದ್ದರು. ಸಹಸ್ರಾರು ಜನರು ಆ ದಾಳಿಯಲ್ಲಿ ಅಸುನೀಗಿದ್ದರು. ಇದಕ್ಕೆ ಪ್ರತೀಕಾರವಾಗಿ ಅಮೇರಿಕಾ ಮುಂದಾಳತ್ವದಲ್ಲಿ ಯು.ಎನ್.ರಾಷ್ಟ್ರಗಳು ತಮ್ಮ ಸೈನ್ಯವನ್ನು ನೇರವಾಗಿ ಅಫ್ಘಾನಿಸ್ತಾನದಲ್ಲಿಯೇ ಜಮಾಯಿಸಿ, ಅಲ್ಲಿಯೇ ನೆಲೆನಿಂತು ಸಂದಿಮೂಲೆಗಳಲ್ಲಿ ಅಡಗಿದ್ದ ಉಗ್ರರ ಹುಡುಕಿ ಸದೆಬಡೆಯಿತು. ಈಗ ಭಾರತವೂ ಮಾಡಬೇಕಾದದ್ದು ಇದನ್ನೇ. ಅದೇ ಯು.ಎನ್. ಸಮೂಹ ರಾಷ್ಟ್ರಗಳ ಬೆಂಬಲ ಪಡೆದು ಪಾಕಿಸ್ತಾನದಲ್ಲಿಯೇ ನೇರವಾಗಿ ಸೇನಾ ಜಮಾವಣೆ ಮಾಡಿ ಅದರ ಮೂಲೆಮೂಲೆಗಳಲ್ಲೂ ನೆಲೆನಿಂತಿರುವ ಉಗ್ರರರನ್ನು ಒಂದಿನಿತೂ ಬಿಡದಂತೆ ಸರ್ವನಾಶ ಮಾಡಬೇಕು. ಉಗ್ರರನ್ನು ಮೂಲದಲ್ಲಿಯೇ ನಿರ್ಣಾಮ ಮಾಡಬೇಕಾದುದು ಮೊದಲ ಆದ್ಯತೆಯಾಗಬೇಕು. ಹಾಗಿದ್ದರೆ ಮಾತ್ರವೇ ಮುಂದೆ ಶಾಂತಿಯುತವಾಗಿ ಜೀವಿಸಲು ಸಾಧ್ಯ. ಇನ್ನುಮುಂದಾದರೂ ಯೋಧರು, ಈ ದೇಶದ ಜನರು ಉಗ್ರವಾದದ ಕಾರಣದಿಂದಾಗಿ ಪ್ರಾಣಕಳೆದುಕೊಳ್ಳದಿರಲಿ ಎಂಬ ಆಶಯವಷ್ಟೇ. ಧಮನಿ ಹರಿಸಿದ ಯೋಧರಿಗೆ ಅಶ್ರು ತರ್ಪಣದ ನಮನ.

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Jois

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!