ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಅಮೆರಿಕೆಯಲ್ಲಿ ಕೆಲಸ

ಈ ಹಿಂದೆ: ನಾವು ಅವರ ದೃಷ್ಟಿಗೆ ಬೀಳುತ್ತಲೇ ಓಡಿ ಬಂದು ಮುಖವಿಡೀ ನಗುತ್ತ ತಳ್ಳುಗಾಡಿಯನ್ನು ಎಳೆದುಕೊಂಡಾಗಲೆ ಸೇತುವೆಯನ್ನು ದಾಟಿದೆವು ಎಂದು ಮನಸ್ಸು ಹಗುರ. ಹಲವು ವರ್ಷಗಳ ನಂತರ ಮಕ್ಕಳ ಬಿಸಿ ಮೈ ತಡವಿ ಸುಖಿಸಿದ ಬೆಚ್ಚಗಿನ ಭಾವನೆ. ಚಳಿಗಾಳಿ ಬೀಸುತ್ತಿದ್ದರೂ ಮನಸ್ಸು ಖುಶಿಯಿಂದ ಬೆಚ್ಚಗಾಗಿತ್ತು. ತೂಗು ಸೇತುವೆಯಲ್ಲಿ

 

ನನಗೆ, ನನ್ನಂತೆ ಹಲವರಿಗೆ ಕಲ್ಪನೆ. ಅಮೆರಿಕೆಯಲ್ಲಿ ಕೆಲಸ ಸಿಕ್ಕಿದರೆ ಏನು ಭಾಗ್ಯ, ಅವರೆಂತಹ ಅದೃಷ್ಟ ಪುತ್ರರು. ದಿನಾ ಸಾವಿರಗಟ್ಟಲೆ ಡಾಲರು ಸಂಪಾದಿಸಿ ಜೇಬು ತುಂಬಿಕೊಂಡು ಕಾರಿನಲ್ಲೇ ತಿರುಗಾಡಿಕೊಂಡು ಮಜವಾಗಿರುವ ಸೌಭಾಗ್ಯ ಅದೆಂತಹದು. ನನ್ನ ಮಗನನ್ನು ಇನ್ಫೋಸಿಸ್ ನವರು ಅಮೆರಿಕೆಗೆ ಕಳುಹಿಸಿದ್ದಾರೆ. ಅಲ್ಲಿಯ ಸಂಬಳ ಅಲ್ಲಿಗೆ, ಇಲ್ಲಿ ಪ್ರತ್ಯೇಕ, ನನ್ನ ಮಗಳನ್ನು ವಿಪ್ರೋದವರು ಅಮೆರಿಕೆಗೆ ಕಳುಹಿಸುತ್ತಾರೆ. ಅವಳಿಗೆ ಒಳ್ಳೆ ಗಂಡು ಸಿಗಲು ಸುಲಭವೇ ಆಯಿತು. ಈ ಇನ್ಫಿ, ವಿಪ್ರೋಗಳ ತಂದೆ ತಾಯಿಯರ ಹೆಮ್ಮೆಯ ಮಾತುಗಳನ್ನು ಕೇಳಿದಾಗ, ಅಮೆರಿಕೆಯಲ್ಲಿ ಕಾಲಿಟ್ಟರೆ ಸಾಕು ವಿಮಾನ ನಿಲ್ದಾಣದಿಂದಲೇ ಹಿಡಿದೆಳೆದುಕೊಂಡು ಹೋಗಿ ಕಾಡಿ ಬೇಡಿ ಸಾವಿರಗಟ್ಟಲೆ ಡಾಲರು ಕೊಟ್ಟು  ನೌಕರಿಗೆ ಸೇರಿಸುತ್ತಾರೋ ಎಂದು ಅನಿಸುತಿತ್ತು. ಮತ್ತೆ ಲೆಕ್ಕಾಚಾರ ಮಾಡುವುದು ಡಾಲರು- ರುಪಾಯಿ, ಅದೆಷ್ಟು ಲಕ್ಷ ರುಪಾಯಿ!

ಮಕ್ಕಳೊಂದಿಗಿದ್ದಾಗ ಈ ಭ್ರಮೆಯನ್ನು ಹತ್ತಿರದಿಂದಲೇ ನೋಡುವ ಅವಕಾಶ. ಪಕ್ಕದ ಮನೆಯಲ್ಲೊಂದು ಯುವ ಜೋಡಿ  ಜೋನ್, ಲೂಸಿ. ಅಮೇರಿಕಾದ ಹೆಚ್ಚಿನವರಂತೆ ಅವರೂ ವಲಸೆ ಬಂದವರು. ಏನೇನೋ ಕನಸು ಕಟ್ಟಿ ಬಂದಿರಬೇಕು. ಉನ್ನತ ಶಿಕ್ಷಣ ಹೊಂದಿ ಬಂದವರೇ ಇನ್ನೂ ಹೆಚ್ಚಿನ ಅರ್ಹತೆಗೆ ಇನ್ನೂ ಕಲಿತರು. ಜೋನ್ ನ ದೃಷ್ಟಿ ಬಲು ದೂರ, ಶ್ರೇಷ್ಟ ಶಿಕ್ಷಣಕ್ಕೆ ಮನಸ್ಸು ಮಾಡಿದ. ಇಬ್ಬರೂ ಅಧ್ಯಯನ ಮಾಡುವಾಗ ಸಂಸಾರದ ಗಾಡಿ ಓಡಬೇಕಲ್ಲ. ಅಲ್ಲಿಂದ ಶುರುವಾಯಿತು ನೌಕರಿಯ ಬೇಟೆ. ಆದರೂ ಸಾಹಸವಂತರು. ಜೋನ್ ಅಧ್ಯಯನ ಮಾಡುತ್ತಲೇ ಗೌರವ ಧನ ಗಳಿಸಿದರೆ ಲೂಸಿಯದು ಕುಳಿತಲ್ಲಿಂದಲೇ ಅಂತರ್ಜಾಲದಲ್ಲಿ ನೌಕರಿಯ ಹುಡುಕಾಟ.

ನನ್ನ ತಲೆಮಾರಿನಲ್ಲಿ ಅರ್ಜಿ ಗುಜರಾಯಿಸುವುದು, ಅರ್ಹರಾಗಿದ್ದರೆ ಪ್ರವೇಶ ಪರೀಕ್ಷ್ಷೆಗೆ ಕುಳಿತುಕೊಳ್ಳುವುದು, ನೌಕರಿ ಗಿಟ್ಟಿಸಿಕೊಂಡರೆ ನಿವೃತ್ತಿಯ ತನಕ ನಿಶ್ಚಿಂತೆ. ಅಮೇರಿಕಾದ ಪರಿಸ್ಥಿತಿಯಲ್ಲಿ ಲೂಸಿಯೇನೊ ಅಂತರ್ಜಾಲದಲ್ಲೇ ಎಲ್ಲಾ ಪೂರೈಸುತ್ತಿದ್ದಳೋ ಏನೋ. ನನ್ನಂತಹರಿಗೆ ಆಕೆ ಮನೆಯಲ್ಲೇ ಉಳಿದುಕೊಳ್ಳುವಾಗ ಅಮೆರಿಕೆಯ ಮಾತಿನ ಹೋಮ್ ಮೇಕರ್ ಆಗಿಯೇ ಕಂಡರೂ ಎಷ್ಟೋ ಉದ್ಯೋಗಗಳಿಗೆ ಅಂತರ್ಜಾಲದಲ್ಲೇ ಜಾಲಾಡುತ್ತಿದ್ದಳು. ಆಕೆ ನೌಕರಿಗೆ ಸೇರಿದ್ದೆಂದು ಗೊತ್ತಾದುದು ಒಂದು ದಿನ ಚೊಕ್ಕ ದಿರಸಿನಲ್ಲಿ ಹೊರಗೆ ಹೋಗಿ ಬಂದು ಮತ್ತೊಂದು ದಿನ ಬೆಳಗ್ಗೆನೇ ಮನೆಬಿಡುವುದನ್ನು ಕಂಡು. ಮನೆಯಲ್ಲಿ ನಿತ್ಯ ಕೇಳಿಸುತ್ತಿದ್ದ ಸಂಗೀತ ನಿಶ್ಯಬ್ದ, ರಾತ್ರಿಯಲ್ಲಿ ಬೆಳಕು. ಅಂದುಕೊಂಡೆ ಯಾವುದೋ ಕೆಲಸಕ್ಕೆ ಸೇರಿಕೊಂಡಿರಬೇಕೆಂದು. ಮುಂದಿನ ಭಾನುವಾರ ವಾರ್ನರ್ ಪಾರ್ಕಿನಲ್ಲಿ ವಾಕಿಂಗ್ ಹೋಗುತ್ತಿದ್ದಾಗ ದಾರಿಯಲ್ಲೇ ಸಿಕ್ಕಿದವಳು  ಹಿ, ನೌಕರಿಗೆ ಸೇರಿಕೊಂಡಿದ್ದೇನೆ ಎಂದು ಹಿಗ್ಗಿನಿಂದಲೇ ಹೇಳಿದಳು.

ಕೆಲವು ವಾರಗಳ ನಂತರ ಗೂಗಲ್ ನಲ್ಲಿ ವಾರ್ತೆ ಓದುತ್ತಿದ್ದವನಿಗೆ ಕಂಡುದು ಯಾವುದೋ ಕಂಪೆನಿಯ ಮುಖ್ಯಸ್ಥ  ವಿಮಾನಾಫಘಾತದಲ್ಲಿ ಮೃತನಾದನೆಂದು. ಇದಾದ ಕೆಲವು ದಿನಗಳಲ್ಲಿ ಲೂಸಿಯ ಮನೆಯಲ್ಲಿ ಮೊದಲಿನ ಸ್ಥಿತಿಯೇ. ಮಕ್ಕಳಿಂದ ಗೊತ್ತಾಯಿತು ಆಕೆಯ ಕಂಪೆನಿಯ ಮುಖ್ಯಸ್ಥನೇ ಮೃತನಾದ ವ್ಯಕ್ತಿಯೆಂದು. ಅವನ ನಿರ್ಗಮನದಿಂದ ಹೂಡಿಕೆದಾರರಿಗೆ ಕಂಪೆನಿಯಲ್ಲಿದ್ದ ವಿಶ್ವಾಸ ಕಳೆದು ಮುಳುಗುವ ಸ್ಥಿತಿ ಬಂದಾಗ ಲೂಸಿಯಂತವರಿಗೆ ಮನೆಗೇ ಹೋಗಲು ಅಪ್ಪಣೆ. ನೆಮ್ಮದಿಯಿಂದ, ಸಂತೋಷವಾಗಿದ್ದಾಕೆಗೆ ಎರಡು ಹೊಡೆತ. ಈಕಡೆ ನೌಕರಿ ಹೋಗಿ ಆರ್ಥಿಕ ನಷ್ಟ, ಮತ್ತೊಂದು ಕಡೆ ಆಕೆ ವಲಸೆ ಬಂದವಳಾದ ಕಾರಣ ಆಕೆಯ ವೀಸಾವು ಅತಂತ್ರದಲ್ಲಿ. ಮತ್ತೆ ನೌಕರಿ ಬೇಟೆ.

ಈ ಹಂತದಲ್ಲಿ ಜೋನನೂ ಅಧ್ಯಯನ ಮುಗಿಸಿ ನೌಕರಿ ಬೇಟೆಗೆ ಶುರು. ಗಂಡ ಹೆಂಡತಿ ಇಬ್ಬರೂ ಒಂದೇ ದೋಣ ಯಲ್ಲಿ. ಇಬ್ಬರ ವಿದ್ಯಾರ್ಹತೆ ಭಿನ್ನವಾಗಿದ್ದಂತೆ ನೌಕರಿ ದೊರಕಿಸಿಕೊಳ್ಳುವ ಸಾಧ್ಯತೆಯೂ ಭಿನ್ನ. ಆದರೆ ಸಾಮಾನ್ಯ ಅಮೇರಿಕನರಿಂದ ಉನ್ನತ ಶಿಕ್ಷಣ ಪಡೆದವರಾದ ಕಾರಣ ಮತ್ತೆ ಇಬ್ಬರಿಗೂ ನೌಕರಿ ದೊರೆಯಿತು. ಜಾನನ ನೌಕರಿಗೆ ಸರಕಾರದ ಅನುದಾನದ ಅಗತ್ಯವಿದ್ದರೆ ಲೂಸಿ ನೌಕರಿ ವೈಯಕ್ತಿಕ ಕಂಪೆನಿಯಲ್ಲಿ. ಇಬ್ಬರೂ ಅನಿಶ್ಚಿತತೆಯ ನೆರಳಲ್ಲೇ. ಅನಿಶ್ಚಿತತೆ ಎಷ್ಟರ ಮಟ್ಟಿಗೆ ಅಂದರೆ ನನ್ನ ಈ ವಾಕ್ಯ ಪೂರ್ಣಗೊಳ್ಳುವಷ್ಟರಲ್ಲಿ ಲೂಸಿಗೆ ಪುನಃ ಮನೆ ದಾರಿ. ನಮ್ಮ ಕಂಪೆನಿಗೆ ನಿಮಗೆ ಪೂರ್ಣ ಮೊತ್ತದ ಸಂಬಳ ಕೊಡಲಾಗುತ್ತಿಲ್ಲ. ಆದ್ದರಿಂದ ನಿಮ್ಮನ್ನು ಬಿಡುಗಡೆ ಮಾಡುತ್ತಿದ್ದೇವೆ. ನಿಮ್ಮ ಸಹಕಾರಕ್ಕಾಗಿ ಧನ್ಯವಾದಗಳು. ಪತ್ರದೊಂದಿಗೆ ಸಂಬಂಧ ಮುಗಿಯಿತು!

ಸಂಪಾದನೆ ಇಲ್ಲದಿದ್ದರೆ ಭಾರತದಲ್ಲೂ, ಅಮೇರಿಕಾದಲ್ಲೂ ಪರಿಸ್ಥಿತಿ ಒಂದೇ. ಹಾಗೇ ಪರಿಸ್ಥಿತಿಯನ್ನೂ, ಬದುಕನ್ನೂ ಎದುರಿಸಲು ಲೂಸಿಯ ಯತ್ನ, ಅದೇ ಕಂಪೆನಿಯಲ್ಲಿ ಹೇಗಾದರೂ ಮುಂದುವರಿಯುವ ಸಾಧ್ಯತೆ ಇದೆಯಾ ಎಂದು. ನಿಮ್ಮ ಸೇವೆ ನಮಗೆ ತುಂಬಾ ಹಿತವಾಗಿದೆ. ಹಾಗಾಗಿ ದಿನಕ್ಕೆ ಕೆಲವು ಗಂಟೆಗಳ ಕೆಲಸ ಮಾಡಬಹುದು. ಜತೆಗೆ ನಿಮ್ಮ ಕೆಲಸದಲ್ಲಿ ನಮ್ಮನ್ನೂ ತರಬೇತುಗೊಳಿಸಿ. ಕಂಪೆನಿಯ ಮೇನೇಜರ್ ರವರಿಂದ ಆಮಂತ್ರಣ. ಮತ್ತೆ ಪ್ರತಿದಿನ ಗಂಟೆ ಲೆಕ್ಕದಲ್ಲಿ ಕೆಲಸ. ಜೊತೆಗೆ ಬೇರೆ ನೌಕರಿಗೆ ಬೇಟೆ. ಚೂರು ಪಾರು ಖರ್ಚಿಗಾದರೂ ಸಂಪಾದನೆಯಾಯಿತಲ್ಲ ಎಂದುಕೊಳ್ಳುತ್ತಿದ್ದ ಲೂಸಿಯ ಕಣ್ಣೆದುರೇ ಮತ್ತೆ ಹಲವರು ಮನೆಗೆ. ಅಮೇರಿಕಾದಲ್ಲಿ ನೌಕರರೆಂದರೆ ಕಂಪೆನಿಯ ಲಾಭಕ್ಕೆ ಮಾತ್ರ. ಅವರಿಲ್ಲದೆ ನಡೆಯುವುದಿಲ್ಲ ಎಂಬ ಪರಿಸ್ಥಿತಿಯಲ್ಲಿ ನೌಕರರೂ ಬೇಕು ಅವರ ಚಾಕರಿಯೂ ಬೇಕು.

ನೀವಿಲ್ಲದೆ ಕಂಪೆನಿ ನಡೆಯುವುದಿಲ್ಲ ಎಂದು ಹೇಳಿಸಿಕೊಂಡು ಎಷ್ಟೋ ವರ್ಷದಿಂದ ಕೆಲಸ ಮಾಡುತ್ತಿದ್ದವರಿಗೂ ಬೆಳಗ್ಗೆ ಕಂಪೆನಿಗೆ ಬಂದವರಿಗೆ ಸದ್ಯ ನಿಮ್ಮ ಅಗತ್ಯವಿಲ್ಲ, ಧನ್ಯವಾದ ಚೀಟಿ ತಪ್ಪಿದ್ದಲ್ಲ. ಲೂಸಿಯಂತವರು ಇನ್ನೂ ಕೈಕಾಲು ಬಲಿಯದವರು, ವೀಸಾ, ಕೆಲಸದ ಪರವಾನಗಿ ಎಂದೆಲ್ಲಾ ತಿರುಗಾಡುವವರಿಗೆ ಯಾವಾಗಲೂ ಅತಂತ್ರ ಸ್ಥಿತಿಯೇ. ಅದಕ್ಕೇ ತಮ್ಮ ತಮ್ಮ ಸ್ಥಾನ ಬಲಪಡಿಸಿಕೊಂಡವರು ಅಗತ್ಯತೆಯನ್ನೇ ಅಸ್ತ್ರವಾಗಿಟ್ಟುಕೊಂಡು ಇನ್ನೂ ಹೆಚ್ಚಿನ ಸ್ಥಾನ, ಧನ, ಸವಲತ್ತಿಗಾಗಿ ವ್ಯವಹರಿಸುತ್ತಿರುತ್ತಾರೆ.

ಅಮೇರಿಕಾದಲ್ಲಿಯೂ ನಿರುದ್ಯೋಗ ಇದೆ. ಬಡತನ ಇದೆ. ಯಾವ ಸ್ಥಾನ ಮಾನ ಇಲ್ಲದ ಜನರೂ ಇದ್ದಾರೆ. ಮಾಲುಗಳ ಎದುರೋ, ರಸ್ತೆಯ ಪಕ್ಕವೋ ನಿಂತು ಸಹಾಯ ಮಾಡಿ, ನಿರ್ಗತಿಕ ಅಥವಾ ಸೂರಿಲ್ಲದವ ಎಂದೋ ಫಲಕ ಹಿಡಿದುಕೊಂಡು ತಟ್ಟೆ ಮುಂದಿಡುವ ಭಿಕ್ಷುಕರೂ ಇದ್ದಾರೆ. ಸರಕಾರ ಅನುಕೂಲ ಕಲ್ಪಿಸಿದರೂ ಬೇಡುವುದೇ ಇಷ್ಟ ಪಡುವವರು. ಮೆಕ್ಸಿಕೊ ಇತ್ಯಾದಿ ದೇಶಗಳಿಂದ ನುಸುಳಿ ಬಂದವರು ಯಾವ ಸ್ಥಾನಮಾನವಿಲ್ಲದೆ ನಗದಿ ವ್ಯವಹಾರದಲ್ಲೆ ಬದುಕುವವರು ಅಲ್ಲಿ ದಿನಗೂಲಿಗೆ (ಗಂಟೆ ಲೆಕ್ಕದಲ್ಲಿ) ಸಿಗುವವರು. ಆದರೂ ಯೋಗ್ಯತೆ ಉಳ್ಳವರಿಗೆ ನೌಕರಿ  ತಾತ್ಕಾಲಿಕದ್ದಾಗಲೀ, ಖಾಯಂದಾಗಲೀ ಸಿಕ್ಕಿಯೇ ಸಿಗುತ್ತದೆ. ಏನೂ ಇಲ್ಲದಿದ್ದರೆ ಲೈಬ್ರರಿಗಳಲ್ಲಿ, ಕಾಫೀ ಬಾರುಗಳಲ್ಲಿ, ಮಾಲುಗಳಲ್ಲಿ ತಾತ್ಕಾಲಿಕ ಕೆಲಸ ಗಿಟ್ಟಿಸಿಕೊಳ್ಳಬಹುದು. ತಾಂತ್ರಿಕ ಶಿಕ್ಷಣ ಪಡೆದವನಾದರೂ ವ್ಯವಹಾರಕ್ಕಾದರೂ ತಯಾರಾಗಿರಬೇಕು ನೌಕರಿಯ ಮಾನದಂಡ ಇಟ್ಟುಕೊಳ್ಳದೆ. ಲೂಸಿ ಜೇಡರ ಹುಳುವಿನಂತವಳು ಕೆಲವು ಪ್ರಯತ್ನದಲ್ಲಿ ಸೋತರೂ ನಾವು ಅಮೆರಿಕೆ ಬಿಡುವುದಕ್ಕಿಂತ ಮುಂಚೆ ಒಳ್ಳೇ ಕಂಪೆನಿಗೇ ಸೇರಿಕೊಂಡಳು. ಬೆಳಗ್ಗೆ ಅವಳು ಕಾರು ಏರಿ ಹೊರಟು ನಮಗೆ ಕೈ ಬೀಸಿದಾಗ ಅವಳ ಬಗ್ಗೆ ನಮಗೇ ಹೆಮ್ಮೆ ಎನಿಸುತಿತ್ತು.

Facebook ಕಾಮೆಂಟ್ಸ್

ಲೇಖಕರ ಕುರಿತು

A. Ramachandra Bhat

ಕೇರಳ-ಕರ್ನಾಟದ ಗಡಿಯ ಊರು ಅಡ್ಯನಡ್ಕ, ನನ್ನ ಹುಟ್ಟೂರು. ಸ್ವಾತಂತ್ರ್ಯ ಪೂರ್ವದ ವ್ಯಕ್ತಿ ನಾನು. ನನ್ನ ತಂದೆಯವರಿಂದ ತೊಡಗಿ ಅಧ್ಯಾಪನವೇ ಜೀವನೋಪಾಯವಾಗಿದ್ದ ನನ್ನ ದೊಡ್ಡ ಕುಟುಂಬದಲ್ಲಿ ಕವಲು ದಾರಿ ಹಿಡಿದು ಆ ದಾರಿ ಬಿಟ್ಟು ಜೀವ ವಿಮಾ ನಿಗಮದಂತಹ ಸಂಸ್ಥೆಯಲ್ಲಿ ದುಡಿಯುವ ದಾರಿ ಕಂಡುಕೊಂಡ ಪ್ರಥಮ ಕುಟುಂಬ ಸದಸ್ಯ. ಅಡ್ಯನಡ್ಕ, ಕಾಸರಗೋಡು, ಹಾಗು ಪುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ವಿದ್ಯಾಭ್ಯಾಸ. ಎಲ್ಲರಂತೆ ನೌಕರಿಸೇರಿ ದುಡಿದು, ಈಗ ನಿವೃತ್ತನಾಗಿರುವವ. ಜೀವನದುದ್ದಕ್ಕೂ ಹೊಸ ಜಾಗ, ಜನ, ಘಟನೆ, ಚಟುವಟಿಕೆಗಳ ಬಗ್ಗೆ ಕುತೂಹಲ, ಅನುಭವಿಸುವ ಹಾಗೂ ದಾಖಲಿಸುವ ಹಂಬಲ ಇದ್ದವ. ಹಾಗಾಗಿ ಈಗ ಬಯಸಿದ್ದನ್ನು ಬರೆದು ಹಂಚಿಕೊಳ್ಳುವ ಹವ್ಯಾಸದವ. ಜೀವ ವಿಮಾ ನಿಗಮದಿಂದ ನಿವೃತ್ತಿಯ ನಂತರ ಈ ಹವ್ಯಾಸಕ್ಕೆ ದಾರಿ ಕಂಡುಕೊಂಡಿದ್ದೇನೆ. ಈಗ ಹುಟ್ಟೂರು ಬಿಟ್ಟು ವೃತ್ತಿಯಿಂದ ನಿವೃತ್ತಿಯಾದ ಉಡುಪಿಯಲ್ಲೇ ನನ್ನ ಕನಸುಗಳನ್ನು ನೇಯುತಿದ್ದೇನೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!