ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ತೂಗು ಸೇತುವೆಯಲ್ಲಿ

ಏಳು ಸಮುದ್ರ ದಾಟುವುದೆಂದು ನಿಶ್ಚಯಿಸಿದಾಗ ಹೇಗೆ, ಯಾವಾಗ ಎಂದೆಲ್ಲಾ ನಿಗದಿಪಡಿಸಬೇಕಲ್ಲ. ನಿಶ್ಚಯ ಮಾಡಿದವರು ಮಕ್ಕಳು, ಕಾರ್ಯರೂಪಕ್ಕೆ ತರುವವರೂ ಮಕ್ಕಳು. ನಾವು ಕೀಲುಗೊಂಬೆಗಳು. ನಮಗೇನು ಗೊತ್ತಾಗಬೇಕು ಈ ಸಮುದ್ರ ದಾಟುವ ಪರಿ. ನಮ್ಮ ಕಲ್ಪನೆಯಲ್ಲಿ ನಾವು ಅಂದುಕೊಳ್ಳಬಹುದು,  ಊರು-ಪರಊರು ಎರಡನ್ನೂ ಜೋಡಿಸುವ ಒಂದು ತೂಗು ಸೇತುವೆ ಇದ್ದರೆ ಯಾವ ಜಂಜಾಟವೂ ಇಲ್ಲದೆ ಕೈಚೀಲ ಬುತ್ತಿ ಹಿಡಕೊಂಡು ನಡೆದೇ ಹೊರಡಬಹುದಲ್ಲಾ ಎಂದು! ಒಂದು ರೀತಿಯಲ್ಲಿ ನಾವು ತೂಗು ಸೇತುವೆಯಲ್ಲಿ ಪ್ರಯಾಣಿಸಿದಂತೆಯೇ – ಬೆಂಗಳೂರಿನಿಂದ ಲಾಸ್ ಏಂಜಲೀಸ್ ಗೆ. ಅಲ್ಲೆರಡು ಕಂಬಗಳು, ಇಲ್ಲೆರಡು ಕಂಬಗಳಿಗೆ ಮಧ್ಯೆ ಹೆಣೆದು ತೂಗುಹಾಕಿದ ಆತ್ಮೀಯತೆಯ ಸೇತುವೆಯಲ್ಲಿಯೇ ನಮ್ಮ ಪ್ರಯಾಣ. ಕಡಲಾಚೆಯ ಮಗ ಸೊಸೆ, ಕಡಲ ತಡಿಯ ಮಗ ಸೊಸೆಯರು  ಸೇರಿ ಹೆಣೆದ ಕಲ್ಪನೆಯ ತೂಗು ಸೇತುವೆಯೆ ಇದಾದೀತು. ಎಲ್ಲಾ ಗಡಿದಾಟಿದ ಮಕ್ಕಳ ಹೆತ್ತವರಿಗೂ ಇಂತವೇ ಇರಬೇಕು.

ಯಕ್ಷಿಣಿಯರ ಊರಿಗೆ (ಲಾಸ್ ಏಂಜಲೀಸ್ ಗೆ) ಹೋಗುವುದೆಂದಾಗ ಎಲ್ಲಾ ವಿದೇಶೀ ಭಾರತೀಯರ ಹೆತ್ತವರಂತೆ ನಮ್ಮ ತಯಾರಿಯೂ ಶುರುವಾಯಿತು. ನಮ್ಮ ತಯಾರಿ ಎಂದರೇನು? ಮಕ್ಕಳಿಗೆ ಅಪರೂಪವಾದ ವ್ಯಂಜನಗಳ ತಯಾರಿ ಹಾಗೂ ಜೋಡಣೆ. ಮನಸ್ಸಿನಲ್ಲಿ ತೋಚಿದ್ದನ್ನೆಲ್ಲಾ ತೆಗೆದುಕೊಂಡು ಹೋಗುವಾ ಎಂದಿದ್ದರೂ ನಿಯಮ, ಮಿತಿ ಮೀರುವ ಹಾಗಿಲ್ಲವಲ್ಲ. ಮಕ್ಕಳು ಒದಗಿಸಿದ ಟಿಕೆಟಿನಲ್ಲೇ ನಮೂದಿಸಿದ ತೂಕ ಮೀರದಂತೆ ಅವರ ಇಷ್ಟದ ನಮ್ಮ ಕಲ್ಪನೆಯ ತಿನಸು ವ್ಯಂಜನಗಳ ಜೋಡಣೆ. ಇವುಗಳೊಂದಿಗೆ ನಮ್ಮ ಹಾಗೂ ಪ್ರಯಾಣದ ದಾಖಲೆ ಪತ್ರಗಳ ಕೂಲಂಕಷ ಪರೀಕ್ಷೆ. ಜತೆಗೆ ನಾವು ಪ್ರಯಾಣ ಹೋಗುತ್ತೇವೆಂದು ಗೊತ್ತಾಗಿ ನಮ್ಮ ತಯಾರಿಗೆ ಹಿಂದೆ ಪ್ರಯಾಣಿಸಿದವರು  ನೀಡಿದ ಅನುಭವಗಳ ಕೊಡುಗೆಗಳು.

ಪ್ರಯಾಣಕ್ಕೆ ಬೇಕು ಬೇಡದವುಗಳು ಯಾವುವು?

ಪ್ರಯಾಣ, ಪ್ರವಾಸಕ್ಕೆ ಬೇಕಾದ ಸಾಮಗ್ರಿಗಳನ್ನು ಅಚ್ಚುಕಟ್ಟಾಗಿ ಸಂಗ್ರಹಿಸಿ ಜೋಡಿಸುವುದೂ ಒಂದು ಕಲೆಯೇ. ನಿಷ್ಣಾತರಾದ ಕಿರಿಯ ಮಗ-ಸೊಸೆ ತೂಗಿ ಸುರಿದು ಭೀಮಗಾತ್ರದ ಚೀಲಗಳಲ್ಲಿ ಸಾಮಾನು ಸರಂಜಾಮುಗಳನ್ನು ತುಂಬಿದರೂ ಕೃಶಕಾಯರಾದ ನಾವು ಒಳಗೇ ನಡುಗಿ ಕುಗ್ಗಿದೆವು. ಆದರೂ ನನ್ನಾಕೆ ಕೈಯಾರೆ ಮಾಡಿದ, ಅವರ ಪ್ರೀತಿಯ, ಇವರ ಇಷ್ಟದ ಎಂದು ಅವರಿವರ ಕೊಡುಗೆಗಳನ್ನು ಮಕ್ಕಳಿಗೆಂದೇ ತುಂಬುವಾಗ ಖುಶಿಯೆ. ಎಲ್ಲಿಯೂ ಎತ್ತ ಬೇಕಾಗಿಲ್ಲ, ಈ ದೂಡು ಪೆಟ್ಟಿಗೆಯ ಜುಟ್ಟು ಹಿಡಿದು ಎಳೆದರಾಯಿತು. ಕೈಗಾಡಿಗೆ ಎಳೆದು ಹಾಕಿ ಊರಿಡೀ ಸುತ್ತಬಹುದು. ಯೋಚನೆ ಬೇಡ ಎಂದು ಕಿರಿಯವರು ಅಂದರೆ, ಬೆಂಗಳೂರಿನಲ್ಲಿ ಒಮ್ಮೆ ತುಂಬಿದರಾಯಿತು ಲಾಸ್ ಏಂಜಲೀಸಿನಲ್ಲೇ ಇಳಿಸಿಕೊಳ್ಳುವುದು ಎಂದು ಹಿರಿಯ ಮಕ್ಕಳ ಧೈರ್ಯದ ನುಡಿ.

ಮಕ್ಕಳಂದಿದ್ದರು ಏಳು ಸಮುದ್ರ ದಾಟುವವರೆಲ್ಲಾ ನಿಶಾಚರಿಗಳೆಂದು. ನಮ್ಮದೂ ಅದೇ ಪಾಡು. ಕಗ್ಗತ್ತಲಲ್ಲಿ ಊರ ಹೊರಗೆ ಅನತಿ ದೂರದಲ್ಲಿರುವ ವಿಮಾನ ನಿಲ್ದಾಣಕ್ಕೆ ಗಂಟೆಗಟ್ಟಲೆ ಮುಂದಾಗಿ ಕಾಯಲು, ಅಲ್ಲಿಯ ಶಿಷ್ಟಾಚಾರಗಳಿಗೆ ಹೊಂದಿಕೊಳ್ಳಲು ತಲಪಿದೆವು. ವಿಮಾನ ನಿಲ್ದಾಣ ತಲಪಿ ಅಲ್ಲಿಯ ಥಳಕು, ಬೆಳಕು ಕಂಡಾಗ ನನಗನಿಸಿದುದು ಈ ತರಹದ ಪ್ರಯಾಣ ಜನಸಾಮಾನ್ಯನಿಗಲ್ಲ ಎಂದೇ. ಮನಸ್ಸು ಪೆಚ್ಚಾಯಿತು. ಜತೆಗೆ ಈ ವಯಸ್ಸಿನಲ್ಲಿ ಕಾಣದ ನಾಡಿಗೆ ಮೊದಲ ಬಾರಿಗೆ ಹೋಗುವುದು ಹೇಗೋ, ಏನೋ ಎಂಬ ಸಣ್ಣ ಆತಂಕ. ಮಕ್ಕಳು ಅತ್ಯಂತ ನಿಖರ, ವಿವರದ ಮಾರ್ಗದರ್ಶನ ನೀಡಿದ್ದರೂ ಒಂದು ನಮೂನೆಯ ಅಳುಕು.

ಮಕ್ಕಳು ಶಾಲೆಗೆ ಹೋಗುವಾಗ ಕಿರಿಯವ, ಹಿರಿಯವ ಇಬ್ಬರೂ ಕೈಹಿಡಿದುಕೊಂಡೇ ಹೋಗುತ್ತಿದ್ದರು. ಮೊದ ಮೊದಲಿಗೆ ಅವರ ಕೈಹಿಡಕೊಂಡೋ, ಎತ್ತಿಕೊಂಡೋ ನಾನೋ ನನ್ನಾಕೆಯೋ ಶಾಲೆಗೇ ಹೋಗುತ್ತಿದ್ದೆವು. ಶಾಲೆಯಲ್ಲಿ ಬಿಟ್ಟು ಬರುವಾಗ ನಮ್ಮ ಮಕ್ಕಳನ್ನು ಹಂತ ಹಂತವಾಗಿ ಹೊರ ಪ್ರಪಂಚಕ್ಕೆ ಪರಿಚಯಿಸುತ್ತಿದ್ದೇವೆ ಎಂದುಕೊಳ್ಳುತ್ತಿದ್ದರೂ ಅದೇ ಹಂತಗಳಲ್ಲಿ ಅವರೂ ನಮ್ಮ ತೆಕ್ಕೆಗಳಿಂದ ಜಾರುತ್ತಿದ್ದಾರೆಂಬ ಕಿರುಯಾತನೆಯೂ ಇದ್ದು ಒಂದು ನಮೂನೆಯ ನೋವು, ಸುಖದ ಹಿತವನ್ನು ಅನುಭವಿಸುತ್ತಿದ್ದೆವು. ಮಕ್ಕಳನ್ನು ಶಾಲೆಗೆ ಬಿಟ್ಟು ಒಳಗೆ ಹೋಗುವುದನ್ನು ನೋಡಲು ಗೇಟಿನ ಬಳಿ ನಿತ್ತರೆ ದುಃಖ ಉಮ್ಮಳಿಸಿ ಬಂದರೂ ಅಳದೆ ನೀನು ಮನೆಗೆ ಹೋಗಮ್ಮ, ಅಪ್ಪಾ ಹೋಗಿ ಎಂದು ಅಳದೆ ಕೂಗಿ ಹೇಳುತ್ತಿದ್ದರು. ಈ ಮಕ್ಕಳು ಮಧ್ಯಾಹ್ನ, ಸಾಯಂಕಾಲ ಮರಳಿ ಬರುವ ಹೊತ್ತಿಗೆ ಮನೆಯ ಚಿಟ್ಟೆಯಲ್ಲಿ ನಿಂತು ರಸ್ತೆಯ ಮೂಲೆಯನ್ನೇ ಎಲ್ಲಾ ಕೆಲಸ ಬಿಟ್ಟು ಕಾಯುತ್ತಾ ಇರುವುದು ಈ ದಿನವೂ ಮರುಕಳಿಸಿದ ಚಿತ್ರ.

ಇವತ್ತು ವಿಮಾನ ನಿಲ್ದಾಣದಲ್ಲಿ ಪಾತ್ರಗಳೆಲ್ಲ ತಿರುವುಮುರುವು. ಹೊರಲಾರದ ಚೀಲಗಳನ್ನು ಕೈಗಾಡಿಯಲ್ಲಿ ಹೇರಿ ವಿಮಾನ ನಿಲ್ದಾಣದಲ್ಲಿ ಸಾಗುವ ತನಕ ದೂಡಿ ಸಾವಿರ ಬಾರಿ ಸಾವಿರ ಎಚ್ಚರಿಕೆ ನೀಡಿ ಕಿರಿಯ ಮಗ ಸೊಸೆ ಬಿಳ್ಕೊಟ್ಟಾಗ ಅಂದಿನ ಶಾಲೆಯ ಚಿತ್ರ ನೆನಪಾಯಿತು. ವಿಮಾನ ನಿಲ್ದಾಣದೊಳಬಂದು ವಿಮಾನ ಸಂಸ್ಥೆಯವರನ್ನು ಭೇಟಿಯಾದಾಗ ಅವರ ಕೆಲವು ಅನಿರೀಕ್ಷಿತ ಪ್ರಶ್ನೆಗಳಿಂದ ಚಡಪಡಿಸುವಂತಾಯಿತು. ಕಿರಿಯ ಮಗ ಸೊಸೆ ಹೊರಗೆ ನಿಂತೇ ಗಮನಿಸುತ್ತಿದ್ದು ಮೊಬೈಲು ಹಚ್ಚಿ ಸಮಾಧಾನ ಮಾಡಿದರು. ಮುಂದೆ ಎಲ್ಲ ಸುಗಮವಾಗಿ ನಾವು ಒಳಸೇರಿದ ಮೇಲಷ್ಟೆ ಅವರು ಆ ರಾತ್ರಿ ಮನೆಗೆ ಮರಳಿದುದು. ನಾವು ತೂಗು ಸೇತುವೆ ದಾಟಲು ತಯಾರು.

ನಮ್ಮಂತೆಯೇ ಹಲವಾರು ಮಂದಿ ಮೊದಲು ವಿದೇಶ ಪ್ರಯಾಣ ಮಾಡಿದವರು, ಮೊದಲಿಗೇ ಹೋಗುವವರು ಎಲ್ಲರೂ ಒಟ್ಟಿಗೆ. ಸರಿ ರಾತ್ರಿ ಕಳೆದು ಬೆಳಗಿನ ಜಾವ ನಾನು, ನನ್ನಾಕೆ ವಿಮಾನ ಏರಿದೆವು. ಚೀನಾ ಮಾಲಕತ್ವದ ಡ್ರ್ಯಾಗನ್ ವಿಮಾನಯಾನ ಸಂಸ್ಥೆ ಇರಬೇಕು. ಸೌಜನ್ಯಕ್ಕೆ ಕುಳಿತವರೆಲ್ಲರನ್ನೂ ಧ್ವನಿವರ್ಧಕದಲ್ಲಿ ಕನ್ನಡದಲ್ಲೇ ಸ್ವಾಗತಿಸಿ, ಗಗನಸಖಿಯರು ಎಲ್ಲರನ್ನೂ ಅವರವರಿಗೆ ನಿಗದಿಸಿದ ಆಸನ ವ್ಯವಸ್ಥೆ ಮಾಡಿದರು. ಒಟ್ಟಾರೆ ಬೆಪ್ಪಾಗಿದ್ದ ನಾವು ಹೇಳಿದಲ್ಲಿ ಕುಳಿತು ಸೊಂಟ ಪಟ್ಟಿ ಬಿಗಿದು ತೆಪ್ಪಗಾದೆವು. ಒಮ್ಮೆಲೆ ನಾವು ಕುಳಿತ ಆಸನ ಜರಗಿದಂತಾದಾಗ ಅಂದುಕೊಂಡೆ ಸೇತುವೆಯಲ್ಲಿ ನಮ್ಮ ಪಯಣ ಆರಂಭವಾಯಿತೆಂದು. ನನ್ನಾಕೆಯ ಕಿವಿ ತಮ್ಮಟೆ ಬಡಿದುಕೊಳ್ಳಲಾರಂಭಿಸಿ ಮುನ್ನೆಚ್ಚರಿಕೆಯ ಕ್ರಮವೆಂದು ಕಲ್ಲು ಸಕ್ಕರೆ ಬಾಯಿಗೆ ಹಾಕಿಕೊಂಡಳು. ನಾನು ನೀರು ಕುಡಿದುಕೊಂಡೆ, ಹಾಗೇ ಕಣ್ಣು ಮುಚ್ಚಿಕೊಂಡೆ.

ತೂಗುಸೇತುವೆಯಲ್ಲಿ ಒಮ್ಮೆ ಉಸಿರು ಬಿಡಲು ಅವಕಾಶ ದೊರೆತುದು ಹಾಂಗ್’ಕಾಂಗ್’ನಲ್ಲಿ. ಇಲ್ಲಿ ವಿಮಾನ ಬದಲಾವಣೆ, ಹಾಗು ಸಮಯಾವಕಾಶ ಕಡಿಮೆಯಾದ ಕಾರಣ ಏನಾಗುತ್ತದೋ ಎಂಬ ಆತಂಕ. ಈ ತುಮುಲಗಳ ಮಧ್ಯೆ ಸುತ್ತ ಕಣ್ಣು ಹಾಯಿಸಿದಾಗ ಕಂಡುದು ನಿಂತ ತಾಣ ತುಂಬಾ ಸುಂದರವಾದುದೆಂದು. ಮಕ್ಕಳೊಂದಿಗೆ ಕಾರವಾರದಲ್ಲಿ ಕಳೆದ ದಿನಗಳ ನೆನಪು ಮರುಕಳಿಸಿತು. ಸಮುದ್ರ ಮತ್ತು ದಟ್ಟ ಕಾಡು ಬೆಟ್ಟಗಳ ನಡುವಿನ ನಿಲ್ದಾಣ. ಮುಂದಿನ ಯಾನಕ್ಕೆ ಅಮೇರಿಕ, ಆಸ್ಟ್ರೇಲಿಯಗಳ ಜಂಟಿ ಯತ್ನದ ಕ್ಯಾತೇ ಪೆಸಿಫಿಕ್’ನಲ್ಲಿ ಇಲ್ಲಿಂದ ಹೊರಡುವುದು. ಏನೋ ಹಿಂದಿನ ವಿಮಾನಕ್ಕಿಂತ ಇದು ಹೆಚ್ಚು ಹಿತವಾಗಿ ಕಂಡಿತು. ನೆಮ್ಮದಿಯಲ್ಲಿದ್ದೆವು. ಯಾವುದೇ ಓದಲು ಉತ್ಸಾಹ ಇಲ್ಲ. ಎದುರಿನ ಆಸನದ ಅಡ್ಡ ಅಂಟಿಸಿದ್ದ ಟಿವಿಯಲ್ಲಿ ನೋಡಲೂ ಉತ್ಸಾಹವಿಲ್ಲ. ಸುಮ್ಮನೆ ವಿಮಾನ ಪಥವನ್ನು ಗಮನಿಸಿದೆನಷ್ಟೆ. ಆದರೂ ಈ ವಿಮಾನದ ಒಳಗಿನ ಪರಿಸರವೇ ಖುಶಿ ತುಂಬುವಂತಹದು. ಒಳಗೆ ಹದ ಬೆಳಕನ್ನು ಹರಡಿದಾಗ ಕುಳಿತವರೆಲ್ಲಾ ಅವರವರ ಕಾರ್ಯದಲ್ಲಿ ಮಗ್ನ. ಹೆಚ್ಚಿನವರು ಟಿವಿ ವೀಕ್ಷಣೆಯಲ್ಲೇ ತಲ್ಲೀನ. ಅವರವರ ಕಡ್ಡಿಗಣಕವನ್ನು ತುರುಕಿ ಸಿನೇಮ, ನಾಟಕ, ಆಟಗಳಲ್ಲಿ ಮಗ್ನ. ಮತ್ತೆ ಕೆಲವರು ಪರೀಕ್ಷೆಗೋ ಇನ್ಯಾವುದಕ್ಕೋ ತಯಾರಿಯಲ್ಲಿ. ಎಲ್ಲಾ ಆಸನಗಳ ಹಿಂಭಾಗ ಕತ್ತಲಲ್ಲಿ ಬೆಳಗಿದ್ದರಿಂದ ಒಂದು ರೀತಿಯ ಜುಗಾರಿ ಅಡ್ಡೆಯ ಚಿತ್ರ. ಮನಸ್ಸು ಇವುಗಳಿಂದ ಬದಲಿದಾಗ ಯೋಚನೆಗೆ ಬರುವುದು ನಾವು ಎಷ್ಟು ಎತ್ತರದಲ್ಲಿ ಇದ್ದೇವೆ ಶಾಂತ ಸಮುದ್ರದ ಮೇಲೆ! ಒಮ್ಮೆಲೆ ವಿಮಾನದ ಯಂತ್ರ ನಿತ್ತರೆ?. ಹುಚ್ಚು ಅನಿಸಿಕೆ. ಮಂದಿ ಮಧ್ಯೆ ಮಧ್ಯೆ ಎದ್ದು ಹಿಂಬದಿಯ ಅಡುಗೆ ಮನೆಗೆ ಭೇಟಿ. ಅಲ್ಲಿ ತಿಂಡಿ ತೀರ್ಥಗಳ ಧಾರಾಳ ಸೇವನೆ. ನನ್ನ ತಮ್ಮ ಅಂದಿದ್ದ ದ್ರವ ಸೇವನೆ ಧಾರಾಳ ಆಗದಿದ್ದರೆ ಫ್ರಿಜ್ ನೊಳಗಣ ಬದನೆಕಾಯಿಯಂತೆ ಹಿಂಡಿ ಹಿಪ್ಪೆಯಾಗ ಬಹುದೆಂದು. ಮತ್ತೆ ಆಗಾಗ ಎದ್ದು ನಡೆದಾಡುವುದು, ಕಾಲಿಗೆ ಚಲನೆಯೂ ಅಗತ್ಯ ಎಂದು. ಹಾಗೇ ನಾನೂ ಧಾರಳ ನೀರು, ಸೇಬಿನ ರಸ ಕುಡಿದೆ. ಹಿಂದು ವೆಜಿಟೇರಿಯನ್ ಫುಡ್ ಎಂದು ಮೊದಲೇ ಸೂಚಿಸಿದ್ದರಿಂದ ವಿಮಾನ ಸಂಸ್ಥೆ ಒದಗಿಸಿದ ಊಟವೂ ಚೆನ್ನಾಗಿಯೇ ಇತ್ತು. ಇಷ್ಟ ಬಂದಾಗ ಎದ್ದು ಶೌಚಾಲಯಕ್ಕೆ ಹೋದೆ. ಹಿರಿಯ ಮಗ ಅಂದಿದ್ದ ಶೌಚಾಲಯದ ರಚನೆಯೇ ವಿಶಿಷ್ಟವಾದುದೆಂದು. ಕೊಳೆ ವಿಸರ್ಜಿಸಿ ಕವಾಟ ಅದುಮಿದೊಡನೆ ಹನಿ ನೀರಿನೊಂದಿಗೆ ಸಿಡಿಲಿನ ಶಬ್ದದಿಂದ ಕೊಳೆಯನ್ನು ಶೌಚಾಲಯವು ಎಳೆದುಕೊಳುವಾಗ ಮೊದಲ ಬಾರಿಗೆ ಯಾವು ಯಾವುದನ್ನೊ ಅದುಮಿ ಎಡವಟ್ಟಾಯಿತೋ ಎಂದು ಗಾಬರಿಯೇ ಆಗುತ್ತದೆ. ಆದರೂ ನೀರಿಲ್ಲದೆ ಪರದಾಡುವಲ್ಲಿ ಈ ಪ್ರಯೋಗ ಅನುಕೂಲವಾಗಬಹುದೋ ಏನೋ ಅಂದುಕೊಂಡೆ. ಈ ಗಡಿಬಿಡಿಯ ಮಧ್ಯೆ ಸಮಯವಲಯ ಯಾವಾಗ ದಾಟಿದೆವೋ ಗೊತ್ತಾಗಲಿಲ್ಲ.

ತೂಗು ಸೇತುವೆಯ ಮತ್ತೊಂದು ಕೊನೆ ತಲಪಲು ಇನ್ನೂ ಒಂದೆರಡು ಗಂಟೆಗಳಿವೆ ಎಂದಾಗ ಉಪಹಾರದ ಬಟವಾಡೆ ಮಾಡಿದರು. ಊಟ ತಿಂಡಿ ಸರಬರಾಜು ಮಾಡುವಾಗ ನಮ್ಮಲ್ಲಿಯ ಹೋಟೇಲ್ ಮಾಣ ಯ ತರ ತಾರಕದಲ್ಲಿ ಕೂಗಿ ತಯಾರಿಗೆ ಹೇಳುವ ಪ್ರಮೇಯವೇಇಲ್ಲ. ಎಲ್ಲಾ ಮೊದಲೇಸಿದ್ದ ಪಡಿಸಿಟ್ಟದ್ದನ್ನ ಬಿಸಿ ಮಾಡಿ ಕೊಡುವುದಷ್ಟೆ. ಸದ್ದು ಗದ್ದಲವಿಲ್ಲ, ಮೆದು ಮಾತು ನಗು ಮಾತ್ರ. ಉಪಾಹಾರ ಸೇವಿಸುತ್ತಿದ್ದಾಗ ಯೋಚನೆಯಾದುದು  ವಿಮಾನ ನಿಲ್ದಾಣದಲ್ಲಿ ಇಳಿದ ಮೇಲೆ ಏನು ಪರಿಸ್ಥಿತಿಯೋ? ಹಿರಿಯ ಮಗ ಸೊಸೆಯರಿಗೆ ಮರೆತು ಅಥವಾ ದಿನಗಳ ಲೆಕ್ಕ ತಪ್ಪಿ ನಿಲ್ದಾಣಕ್ಕೆ ಬರಲಿಕ್ಕಾಗ ದಿದ್ದರೋ, ವಲಸೆ ಖಾತೆಯವರು ಕ್ಯಾತೆ ಎತ್ತಿದರೋ ಇತ್ಯಾದಿ. ಈ ಎಲ್ಲಾ ಯೋಚನೆಗಳು ಒಂದಾದ ಮೇಲೆ ಒಂದು ಮನಃ ಪಟಲದಲ್ಲಿ ತೋರುತ್ತಿದ್ದಂತೆ ವಿಮಾನ ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಕ್ಲಪ್ತ ಸಮಯದಲ್ಲಿ ಬಂದಿಳಿಯಿತು. ಅಂತೂ ತೂಗು ಸೇತುವೆಯ ಮತ್ತೊಂದು ತುದಿಯನ್ನು ತಲಪಿದೆವು. ಆರ್ಮಸ್ಟ್ರೋಂಗ್ ನಿಗೆ ಚಂದ್ರನ ಮೇಲೆ ಇಳಿದಾಗ ಆದ ಥ್ರ್ರಿಲ್ ನಂತಹದಲ್ಲವಾದರೂ ಹೊಸ ನೆಲ ಹೊಸ ಪರಿಸರಕ್ಕೆ ಮನತುಂಬಾ ಕುತೂಹಲವೇ. ಇದೇ ಗುಂಗಿನಲ್ಲಿ ನಡೆಯುತ್ತಿದ್ದಾಗ ಡೋಂಟ್ ಸ್ಟೋಪ್, ಮುವ್ ಓನ್ ಮುವ್ ಓನ್ ರಕ್ಷಣಾ ದಳದವರಿಂದ ಆಗಾಗ ಸೂಚನೆ. ಹಾಗೆ ಮುಂದೆ ಬಂದು ಪಕ್ಕದಲ್ಲೇ ಕಂಡ ಸಾಲನ್ನು ವಿಚಾರಿಸಿದಾಗ ನಾವು ವಲಸೆ ಅಧಿಕಾರಿಗಳ ಸಮಕ್ಷಮವೇ ಇದ್ದೇವೆಂದು ಗೊತ್ತಾದುದು.

ನೀವು ಯಾತಕ್ಕೆ ಬಂದಿದ್ದೀರಿ? ಎಷ್ಟು ಸಮಯ ಇರುತ್ತೀರಿ? ಎಂಬ ಪ್ರಶ್ನೆಗಳಿಗೆ ಮೊದಲೇ ತಯಾರಿದ್ದ ಉತ್ತರ ಕೊಟ್ಟು ವಲಸೆ ಮಾಹಿತಿ ಕೊಟ್ಟು ನಮ್ಮ ಚೀಲ ಸಂಗ್ರಹಿಸಲು ಹೋದೆವು. ಇಲ್ಲೇ ನಾವು ಸೋತದ್ದು. ನಮ್ಮ ಚೀಲಗಳ ಪರಿಚಯಕ್ಕೆಂದು ಕೆಂಪು ದಾರ, ಬಿಳಿ ಪಟ್ಟಿ ಎಲ್ಲ ಕಟ್ಟಿದ್ದೆವು. ಆದರೆ ನಮ್ಮಂತೆಯೇ ಬುದ್ಧಿವಂತರಿದ್ದರೇನೋ. ಹಲವು ಚೀಲಗಳಿಗೆ ಅಂತಹುದೇ ತಾಯತ! ತಪ್ಪಾಗಿ ಚೀಲ ಎತ್ತಿ ಪುನಃ ತಿರುಗುವ ಪಟ್ಟಿಯಲ್ಲಿ ಇಡಬೇಕಾಯಿತು. ಕೊನೆಗೂ ನಮ್ಮದೇ ಚೀಲ ಸಿಕ್ಕಿದಾಗ ಅದರ ದುರವಸ್ಥೆ ನಂಬಲಾಗಲಿಲ್ಲ. ಮೈಯೆಲ್ಲಾ ಪುಡಿಯಾಗಿದ್ದರೂ ಹರಿದಿರಲಿಲ್ಲ! ನಮ್ಮ ಚೀಲಗಳನ್ನು ಪರೀಕ್ಷಿಸುವಲ್ಲಿಗೆ ಗಾಡಿಯಲ್ಲಿ ದೂಡಿಕೊಂಡು ಹೋದಾಗ ನಮ್ಮ ಮುಖ ನೋಡುತ್ತಲೇ ಆಸಾಮಿ ಆಹಾ. . . . ದಾಲ್, ಸಾಂಬಾರ್, ಸ್ವೀಟ್ಸ್. . .ಹಣ್ಣುಗಳನ್ಯಾಕೆ ತಂದಿಲ್ಲ? ಎಂದೇ ನಗೆಯಾಡುತ್ತಾ ಚೀಲಗಳನ್ನು ಕ್ಷ ಕಿರಣ ಪೆಟ್ಟಿಗೆಯಲ್ಲಿ ಸಾಗ ಹಾಕಿದ. ಮುಂದೆ ನಮ್ಮ ದಾರಿ ಸರಳ. ತಳ್ಳು ಗಾಡಿಯಲ್ಲಿ ಚೀಲಗಳನ್ನು ಹೇರಿ ದೂಡಿಕೊಂಡು ಸುರಂಗ ಮಾರ್ಗವಾಗಿ ಹೊರ ಹೊರಟೆವು.

ಸುರಂಗದಲ್ಲೇ ನಾವು ಹೊರಬರುವುದನ್ನು ನನ್ನ ಹಿರಿಯ ಮಗ ಸೊಸೆ ನಿರೀಕ್ಷಿಸುತ್ತಲೇ ಇದ್ದಿರಬೇಕು. ಹಿರಿಯವನು ಕಿರಿಯವನ ಕೈಹಿಡಿದು ಶಾಲೆಯಿಂದ ಮನೆಗೆ ಬರುವುದನ್ನೇ ನಿರೀಕ್ಷಿಸುತ್ತಿದ್ದಾಗಿನ ಪರಿಸ್ಥಿತಿಯ ನನ್ನಾಕೆಯ ಸ್ಥಾನವನ್ನು ಇವರು ತುಂಬಿ ನಮ್ಮನ್ನೇ ಕಾಯುತ್ತಿದ್ದರು. ನಾವು ಅವರ ದೃಷ್ಟಿಗೆ ಬೀಳುತ್ತಲೇ ಓಡಿ ಬಂದು ಮುಖವಿಡೀ ನಗುತ್ತ ತಳ್ಳುಗಾಡಿಯನ್ನು ಎಳೆದುಕೊಂಡಾಗಲೆ ಸೇತುವೆಯನ್ನು ದಾಟಿದೆವು ಎಂದು ಮನಸ್ಸು ಹಗುರ. ಹಲವು ವರ್ಷಗಳ ನಂತರ ಮಕ್ಕಳ ಬಿಸಿ ಮೈ ತಡವಿ ಸುಖಿಸಿದ ಬೆಚ್ಚಗಿನ ಭಾವನೆ. ಚಳಿಗಾಳಿ ಬೀಸುತ್ತಿದ್ದರೂ ಮನಸ್ಸು ಖುಶಿಯಿಂದ ಬೆಚ್ಚಗಾಗಿತ್ತು.

Facebook ಕಾಮೆಂಟ್ಸ್

ಲೇಖಕರ ಕುರಿತು

A. Ramachandra Bhat

ಕೇರಳ-ಕರ್ನಾಟದ ಗಡಿಯ ಊರು ಅಡ್ಯನಡ್ಕ, ನನ್ನ ಹುಟ್ಟೂರು. ಸ್ವಾತಂತ್ರ್ಯ ಪೂರ್ವದ ವ್ಯಕ್ತಿ ನಾನು. ನನ್ನ ತಂದೆಯವರಿಂದ ತೊಡಗಿ ಅಧ್ಯಾಪನವೇ ಜೀವನೋಪಾಯವಾಗಿದ್ದ ನನ್ನ ದೊಡ್ಡ ಕುಟುಂಬದಲ್ಲಿ ಕವಲು ದಾರಿ ಹಿಡಿದು ಆ ದಾರಿ ಬಿಟ್ಟು ಜೀವ ವಿಮಾ ನಿಗಮದಂತಹ ಸಂಸ್ಥೆಯಲ್ಲಿ ದುಡಿಯುವ ದಾರಿ ಕಂಡುಕೊಂಡ ಪ್ರಥಮ ಕುಟುಂಬ ಸದಸ್ಯ. ಅಡ್ಯನಡ್ಕ, ಕಾಸರಗೋಡು, ಹಾಗು ಪುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ವಿದ್ಯಾಭ್ಯಾಸ. ಎಲ್ಲರಂತೆ ನೌಕರಿಸೇರಿ ದುಡಿದು, ಈಗ ನಿವೃತ್ತನಾಗಿರುವವ. ಜೀವನದುದ್ದಕ್ಕೂ ಹೊಸ ಜಾಗ, ಜನ, ಘಟನೆ, ಚಟುವಟಿಕೆಗಳ ಬಗ್ಗೆ ಕುತೂಹಲ, ಅನುಭವಿಸುವ ಹಾಗೂ ದಾಖಲಿಸುವ ಹಂಬಲ ಇದ್ದವ. ಹಾಗಾಗಿ ಈಗ ಬಯಸಿದ್ದನ್ನು ಬರೆದು ಹಂಚಿಕೊಳ್ಳುವ ಹವ್ಯಾಸದವ. ಜೀವ ವಿಮಾ ನಿಗಮದಿಂದ ನಿವೃತ್ತಿಯ ನಂತರ ಈ ಹವ್ಯಾಸಕ್ಕೆ ದಾರಿ ಕಂಡುಕೊಂಡಿದ್ದೇನೆ. ಈಗ ಹುಟ್ಟೂರು ಬಿಟ್ಟು ವೃತ್ತಿಯಿಂದ ನಿವೃತ್ತಿಯಾದ ಉಡುಪಿಯಲ್ಲೇ ನನ್ನ ಕನಸುಗಳನ್ನು ನೇಯುತಿದ್ದೇನೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!