ಅಂಕಣ

ಮಿಥಾಲಜಿ ಎಂದು ಬೇಕಾದಹಾಗೆ ಬಳಸಿಕೊಳ್ಳಬಹುದೇ?

ರಾಮಾಯಣ ಮತ್ತು ಮಹಾಭಾರತ ಕೇವಲ ಮಹಾಕಾವ್ಯಗಳಷ್ಟೆ ಅಲ್ಲ, ನಮ್ಮ ಮಣ್ಣಿನ ಇತಿಹಾಸವೂ ಹೌದು. ಅದನ್ನು ಇಟ್ಟುಕೊಂಡು ಸಾಕಷ್ಟು ಲೇಖಕರು ತಮ್ಮದೇ ರೀತಿಯಲ್ಲಿ ಕೃತಿಗಳನ್ನು ರಚಿಸುತ್ತಾ ಹೋದರೆ ಮೂಲಕಥೆ ಅಥವಾ ಇತಿಹಾಸ ವಿರೂಪಗೊಳ್ಳುವುದಿಲ್ಲವೇ ಎನ್ನುವ ಪ್ರಶ್ನೆ ಮೊದಲಿನಿಂದಲೂ ನನ್ನನ್ನು ಕಾಡುತ್ತಿತ್ತು. ಅದಕ್ಕೆ ಕಾರಣವೂ ಇದೆ. ನಾನು ಮೊದಲು ಓದಿದ್ದು, ತ.ರಾ.ಸು ಅವರ ವಚನ ರಾಮಾಯಣ. ಅದರಲ್ಲಿ ಸೀತಾ ಪರಿತ್ಯಾಗದ ಯಾವ ಉಲ್ಲೇಖವೂ ಇಲ್ಲ. ರಾಮ ಪಟ್ಟಾಭಿಷೇಕದೊಂದಿಗೆ ಕೃತಿ ಕೊನೆಗೊಳ್ಳುತ್ತದೆ. ಎಷ್ಟೊ ಸಮಯದವರೆಗೆ ರಾಮಾಯಣ ಎಂದರೆ ಅಷ್ಟೇ ಎಂದು ಭಾವಿಸಿದ್ದೆ. ನಂತರವೇ ತಿಳಿದದ್ದು ರಾಮಾಯಣ ಅಷ್ಟಕ್ಕೇ ಮುಗಿಯುವುದಿಲ್ಲ ಎಂದು. ಅಲ್ಲಿಂದ ಪ್ರತಿ ಬಾರಿ ರಾಮಾಯಣ ಮಹಾಭಾರತವನ್ನು ಕಥಾವಸ್ತುವನ್ನಾಗಿಸಿಕೊಂಡು ರಚಿಸಿದ ಕೃತಿಗಳನ್ನು ಓದಿದಾಗಲೆಲ್ಲ ಮೂಲಕಥೆಯನ್ನು ವಿರೂಪಗೊಳಿಸುವುದಿಲ್ಲವೇ? ಜನ ಇದನ್ನೇ ಸತ್ಯ ಎಂದು ನಂಬಿಕೊಳ್ಳುವುದಿಲ್ಲವೇ, ಎಂಬ ಪ್ರಶ್ನೆಗಳು ಕಾಡುತ್ತಿತ್ತು. ಅದಕ್ಕೆಲ್ಲ ಉತ್ತರ ಸಿಕ್ಕಿದ್ದು ಅಮಿಶ್ ತ್ರಿಪಾಠಿಯವರಿಂದ.

ಅಮಿಶ್ ಅವರ ಹೆಸರು ಯಾರು ತಾನೇ ಕೇಳಿಲ್ಲ. ಅವರ ‘ಶಿವ ಟ್ರಿಲಾಜಿ’ (ಮೂರು ಪುಸ್ತಕಗಳ ಸಿರೀಸ್) ಅಪಾರ ಜನಮನ್ನಣೆ ಗಳಿಸಿತ್ತು. ಈಗ ಅವರ ರಾಮಚಂದ್ರ ಸೀರೀಸ್ ಬರುತ್ತಿದೆ. ರಾಮಚಂದ್ರ ಸಿರೀಸ್’ನ ಮೊದಲ ಪುಸ್ತಕ ‘ಸಿಯನ್ ಆಫ್ ಇಕ್ಷ್ವಾಕು’ ಪುಸ್ತಕದ ಟ್ರೇಲರ್ ಬಂದಾಗ ಸಾಕಷ್ಟು ಪ್ರಶಂಸೆ ಬಂದಿದ್ದು ನಿಜ. ಆದರೆ ಅದರೊಂದಿಗೆ ಒಂದಿಷ್ಟು ವಿರೋಧವೂ ವ್ಯಕ್ತವಾಗಿತ್ತು. ಮೂಲ ರಾಮಾಯಣದ ಕಥೆಯನ್ನು ವಿರೂಪಗೊಳಿಸಲಾಗುತ್ತಿದೆ. ನಿಮ್ಮ ಕಾದಂಬರಿಗೆ ರಾಮಾಯಣವೇ ಆಗಬೇಕೇ ಎಂಬೆಲ್ಲಾ ಟೀಕೆಗಳು ಬಂದಿದ್ದವು. ಎರಡು ಮಹಾನ್ ಗ್ರಂಥಗಳನ್ನು ಮಿಥಾಲಜಿ ಎಂದು ಕರೆದು, ಹೇಗೆ ಬೇಕೋ ಹಾಗೆ ಬಳಸಿಕೊಳ್ಳಬಹುದೇ ಎಂಬ ಪ್ರಶ್ನೆ ಈಗಲೂ ಇದೆ. ಇದಕ್ಕೆ ಅಮಿಶ್ ಅವರು ತಮ್ಮ ಒಂದು ವೀಡಿಯೋನಲ್ಲಿ ಉತ್ತರಿಸಿದ್ದಾರೆ. “ಈ ಎರಡು ಗ್ರಂಥಗಳ ಮೇಲೆ ಈಗಲ್ಲ ಬಹಳ ಹಿಂದಿನಿಂದಲೂ ಕೃತಿಗಳು ರಚನೆಯಾಗುತ್ತಲೇ ಇದೆ. ಯಾವುದೋ ದುರುದ್ದೇಶಕ್ಕಲ್ಲ, ಅವು ನಮ್ಮ ಬದುಕಿನಲ್ಲಿ ಅಷ್ಟೊಂದು ಮಹತ್ತ್ವವನ್ನು ಹೊಂದಿರುವ ಕಾರಣಕ್ಕಾಗಿ. ಅವುಗಳನ್ನು ಇಟ್ಟುಕೊಂಡು, ಅವುಗಳ ಹೇಳುವ ತತ್ತ್ವ ಸಿದ್ಧಾಂತವನ್ನು ಹಾಗೇ ಇಟ್ಟು ಅದರ ಸುತ್ತ ಕಾಲ್ಪನಿಕ ಕಥೆ ಹೆಣೆಯುವುದರಲ್ಲಿ ಅಥವಾ ಆ ಸಿದ್ಧಾಂತಗಳಿಗೆ ಚ್ಯುತಿ ಬರದಂತೆ ಅಲ್ಲಲ್ಲಿ ಸ್ವಲ್ಪ ಬದಲಾವಣೆ ಮಾಡಿ ಬರೆಯುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು.” ಈ ಉತ್ತರ ಸಮಂಜಸವೂ ಎನಿಸಿತು. ಅಮಿಶ್ ಅವರ  ರಾಮಚಂದ್ರ ಸಿರೀಸ್’ನಲ್ಲಿ ಈಗ ಬಿಡುಗಡೆಗೊಂಡಿರುವ ಮೊದಲೆರಡು ಪುಸ್ತಕಗಳನ್ನ ಓದಿದಾಗ ನಮ್ಮ ಪರಂಪರೆ, ಆ ಕಾಲದಲ್ಲಿ ಸಮಾಜ ಇದ್ದ ರೀತಿ, ಆಗಿನ ಆಡಳಿತ ಇದೆಲ್ಲದರ ಮೇಲೆ ಹೆಮ್ಮೆಯೇ ಆಗುವುದು.

ಅಮಿಶ್ ಅವರ ಪುಸ್ತಕಕ್ಕೂ ರಾಮಾಯಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಸಿರೀಸ್’ನ ಎರಡನೇ ಪುಸ್ತಕ ‘ಸೀತಾ’ ಜಲ್ಲಿಕಟ್ಟು ಸಂಪ್ರದಾಯವನ್ನು ಉಲ್ಲೇಖಿಸುತ್ತದೆ.  ವಾಲಿ ಜಲ್ಲಿಕಟ್ಟುವಿನಲ್ಲಿ ಭಾಗವಹಿಸುವ ಸನ್ನಿವೇಶ ಸುಮಾರು ನಾಲ್ಕು ಪುಟಗಳಷ್ಟಿದ್ದು, ಅದನ್ನು ಓದಿದಾಗ ಎಲ್ಲಿಯ ರಾಮಾಯಣ, ಎಲ್ಲಿಯ ಜಲ್ಲಿಕಟ್ಟು ಎಂದೆನಿಸದೇ ಇರದು. ಆದರೆ ತಲೆಮಾರುಗಳಿಂದ ಬಂದ ಪ್ರಾದೇಶಿಕ ಸಂಪ್ರದಾಯವೊಂದನ್ನು, ಅದರ ಮಹತ್ತ್ವವನ್ನು ಇಂತಹ ಪುಸ್ತಕವೊಂದು ವಿವರಿಸಿದಾಗ ಓದುಗರ ಮೇಲಾಗುವ ಪರಿಣಾಮವೇ ಬೇರೆ.

ಇತ್ತೀಚೆಗೆ ದೇವದತ್ ಪಟ್ನಾಯಕ್ ಅವರ ‘ಜಯ: ಆನ್ ಇಲ್’ಸ್ಟ್ರೇಟೆಡ್ ರೀಟೆಲ್ಲಿಂಗ್ ಆಫ್ ದ ಮಹಾಭಾರತ್’ ಎನ್ನುವ ಪುಸ್ತಕವನ್ನು ಓದಿದೆ. ಅವರು ಮೊದಲೇ ಹೇಳುವಂತೆ ಇಡೀ ಪುಸ್ತಕವು ವ್ಯಾಸರ ಮಹಾಭಾರತ ಹಾಗೂ ಜೈಮಿನಿ ಭಾರತ ಮೇಲೆ ಆಧರಿಸಿ ಬರೆದಿದ್ದು. ಇದರೊಂದಿಗೆ, ಪ್ರದೇಶದಿಂದ ಪ್ರದೇಶಕ್ಕೆ ಮಹಾಭಾರತ ರೂಪಾಂತರಗೊಂಡು ಮೂಲದಲ್ಲಿ ಇಲ್ಲದ ಹಲವು ಕಥೆಗಳು ಹುಟ್ಟಿಕೊಂಡಿವೆ. ಅವುಗಳನ್ನು ಉಲ್ಲೇಖಿಸಲಾಗಿದೆ. ಜೊತೆಗೆ ಇಂದಿನ ವಿಚಾರವಾದಿಗಳನ್ನು ಗಮನದಲ್ಲಿಟ್ಟುಕೊಂಡು ಒಂದಿಷ್ಟು ಚರ್ಚೆಯನ್ನು ಕೂಡ ಮಾಡಲಾಗಿದೆ.

ಈ ಪುಸ್ತಕದಲ್ಲಿ ಬರ್ಬರೀಕನ ಕಥೆ ಕೂಡ ಬರುತ್ತದೆ. ದೇವದತ್ ಅವರು ಹೇಳುವಂತೆ ಈ ಕಥೆ ಕೇರಳ ಹಾಗೂ ಆಂಧ್ರಪ್ರದೇಶದಲ್ಲಿ ಹೆಚ್ಚು ಪ್ರಚಲಿತದಲ್ಲಿರುವುದು. ರಾಜಸ್ಥಾನದಲ್ಲಿ ಇದೇ ಬರ್ಬರೀಕನನ್ನು ‘ಖಟು ಶ್ಯಾಮ್’ಜಿ’ ಎಂದು ಕರೆಯುತ್ತಾರೆ. ಮಹಾನ್ ವೀರ ಬರ್ಬರೀಕ ಕುರುಕ್ಷೇತ್ರಕ್ಕೆ ಯುದ್ಧದಲ್ಲಿ ಭಾಗವಹಿಸಲು ಬಂದಾಗ, ಕೃಷ್ಣನ ಬಳಿ ತಾನು ಸೋಲುವ ಕಡೆ ಯುದ್ಧ ಮಾಡುತ್ತೇನೆಂದು ಹೇಳುತ್ತಾನೆ. ಪಾಂಡವರು ಇನ್ನೇನು ಸೋಲುತ್ತಾರೆ ಎನ್ನುವಾಗ ಅವರ ಕಡೆಗೆ ಯುದ್ಧ ಮಾಡಿ, ಆ ಕಡೆ ಕೌರವರು ಸೋಲುತ್ತಾರೆ ಎನ್ನುವ ಹಂತ ಬಂದಾಗ ಅವರ ಪಕ್ಷಕ್ಕೆ ಸೇರಿ ಯುದ್ಧ ಮಾಡುತ್ತಾ ಹೋದರೆ ಈ ಯುದ್ಧ ಅಂತ್ಯ ಕಾಣುವುದೇ ಇಲ್ಲ ಎಂದು ತಿಳಿದು ಕೃಷ್ಣ ಬರ್ಬರೀಕನ ಬಳಿ ತನ್ನನ್ನು ತಾನೇ ಕೊಂದುಕೊಳ್ಳುವಂತೆ ಆಜ್ಞೆ ನೀಡುತ್ತಾನೆ. ಆತನ ಮಾತನ್ನು ಮೀರದೆ, ಯುದ್ಧವನ್ನು ನೋಡುವುದು ತನ್ನ ಆಶೆಯೆಂದು ತಿಳಿಸಿ ಬರ್ಬರೀಕ ತನ್ನ ತಲೆಯನ್ನು ಕತ್ತರಿಸಿಕೊಳ್ಳುತ್ತಾನೆ. ಆತನ ಕೊನೆ ಆಸೆಯಂತೆ ಬರ್ಬರೀಕನ ತಲೆಗೆ ಜೀವ ತುಂಬಿ ಸಂಪೂರ್ಣ ಯುದ್ಧವನ್ನು ನೋಡುವಂತೆ ಮಾಡುತ್ತಾನೆ ಕೃಷ್ಣ. ಯುದ್ಧ ಮುಗಿದ ನಂತರ ಸೈನಿಕರೆಲ್ಲ ಯಾರು ಹೆಚ್ಚು ಪರಾಕ್ರಮಿ ಭೀಮನೋ ಅಥವಾ ಅರ್ಜುನನೋ ಎಂದು ಮಾತನಾಡಿಕೊಳ್ಳುವಾಗ, ಕೃಷ್ಣ ಬರ್ಬರೀಕನನ್ನು ಕೇಳುವಂತೆ ಹೇಳುತ್ತಾನೆ. ಆಗ ಆತ ಹೇಳುವ ಉತ್ತರ ಇದು: “ನನಗೆ ಭೀಮ ಅರ್ಜುನ ಯಾರು ಯುದ್ಧ ಮಾಡುವುದೂ ಕಾಣಿಸಲಿಲ್ಲ, ಕೃಷ್ಣನ ಸುದರ್ಶನ ಚಕ್ರವೊಂದೇ ಕಂಡಿದ್ದು. ಅದೇ ಎರಡೂ ಪಕ್ಷದಲ್ಲಿದ್ದ ಅಧರ್ಮಿಗಳನ್ನು ಕೊಲ್ಲುತ್ತಿತ್ತು.” ಈ ಕಥೆಯು ಮೂಲದಲ್ಲಿರದಿದ್ದರೂ ದೈವಬಲದ ಮಹತ್ತ್ವವನ್ನು ಸಾರುತ್ತದೆ. ಮೂಲದ ಆ ತತ್ತ್ವವನ್ನು ಹಾಗೇ ಇಡುತ್ತದೆ.   

ಇಷ್ಟೆಲ್ಲಾ ಹೇಳಿದಮೇಲೆ ಇನ್ನೊಂದು ಕೃತಿಯ ಬಗ್ಗೆ ಹೇಳಲೇಬೇಕು. ಆನಂದ ನೀಲಕಂಠನ್ ನಮ್ಮ ದೇಶದ ಬೆಸ್ಟ್ ಸೆಲ್ಲಿಂಗ್ ಲೇಖಕರಲ್ಲಿ ಒಬ್ಬರು. ಅವರ ‘ಅಸುರ’ ಎನ್ನುವ ಕೃತಿ ರಾವಣನ ಬಗ್ಗೆ ಬರೆದಿರುವುದು. ಕೃತಿಯನ್ನು ಕೈಗೆತ್ತಿಕೊಂಡಾಗ ರಾವಣನನ್ನು ಪ್ರಶಂಸಿಸಿ ಬರೆದಿದ್ದೇನೋ ಎನ್ನುವ ಭಾವ ಇತ್ತು. ಆದರೆ ಮೊದಲು ಆ ತರಹದ್ದೇನಿರಲಿಲ್ಲ. ದೇವತೆಗಳ ದಬ್ಬಾಳಿಕೆಗೆ ಒಳಗಾದ ತನ್ನ ಪಂಗಡದವರಿಗಾಗಿಯೇ ಒಂದು ಸಾಮ್ರಾಜ್ಯ ಕಟ್ಟುವ ರಾವಣ. ಆತ ಅಧಿಕಾರದ ಲಾಲಸೆಯಲ್ಲಿ, ತನ್ನ ಅಹಂನಲ್ಲಿ ಎಸೆಗುವ ಒಂದೊಂದು ತಪ್ಪುಗಳನ್ನು ತೋರಿಸುತ್ತಾ ಹೋಗುತ್ತದೆ. ಒಂದು ಕಥೆಯನ್ನು ಅದ್ಭುತವಾಗಿ ನಿರೂಪಿಸಿವುದು ಹೇಗೆ ಎನ್ನುವುದನ್ನು ಆನಂದ್ ನೀಲಕಂಠನ್ ಅವರಿಂದ ಕಲಿಯಬೇಕು. ಮನುಷ್ಯನ ಭಾವನೆಗಳು, ತನ್ನದೇ ಅಹಂನಲ್ಲಿ ಮುಳುಗಿ ಮಾಡಿಕೊಳ್ಳುವ ಕೃತ್ಯಗಳು ಅದರ ಪರಿಣಾಮಗಳನ್ನು ಅದ್ಭುತವಾಗಿ ವಿವರಿಸಿದ್ದಾರೆ. ಇಡೀ ಕಥೆಯನ್ನು ರಾವಣ ಹಾಗೂ ಭದ್ರ ಎನುವ ಒಬ್ಬ ಸಾಮಾನ್ಯ ಅಸುರನ ಮೂಲಕ ಹೇಳಿಸಿದ್ದಾರೆ. ಆದರೆ ರಾಮ ಬರುವಷ್ಟರಲ್ಲಿ ನಮ್ಮ ನಿರೀಕ್ಷೆಗಳಿಗೆ ತಣ್ಣೀರೆರೆಚಿದ ಹಾಗಾಗುತ್ತದೆ. ‘ಶೂರ್ಪನಖಿಯನ್ನು ಅವಮಾನಿಸಿದ್ದಲ್ಲದೇ ಆಕೆಯ ಮೇಲೆ ಅತ್ಯಾಚಾರವೆಸೆಗಿದ್ದ ಲಕ್ಷ್ಮಣ. ಆ ಕಾರಣಕ್ಕೆ ಸೀತೆಯ ಅಪಹರಣ, ಯುದ್ಧ ಎಲ್ಲವೂ ಸರಿ ಎನ್ನುವಂತಹ ಮಾತುಗಳನ್ನು ಸಾಮಾನ್ಯ ಅಸುರರು ಬೀದಿಗಳಲ್ಲಿ ಮಾತನಾಡಿಕೊಳ್ಳುತ್ತಿದ್ದರು’ ಎಂದು ಬಂದಾಗ ಒಮ್ಮೆ ಇದೇಕೋ ಸ್ವಲ್ಪ ಜಾಸ್ತಿಯಾಯಿತೇನೋ ಎಂದುಕೊಂಡರೂ, ಜನ ಹಾಗೆ ಮಾತನಾಡಿಕೊಳ್ಳುತ್ತಿದ್ದರು ಎಂದು ಸಮಾಧಾನ ಪಟ್ಟುಕೊಳ್ಳಬಹುದು. ಆದರೆ ಅಂಗದ ಮಂಡೋದರಿಯ ಮಾನಭಂಗ ಮಾಡುತ್ತಾನೆ ಎಂದು ಬಂದಾಗ ಜಿಗುಪ್ಸೆ ಬಂದುಬಿಡುತ್ತದೆ. ಅದಷ್ಟೇ ಅಲ್ಲ, ರಾಮ ಧರ್ಮ ಎನ್ನುವ ರೂಲ್ ಬುಕ್ ಅನುಸರಿಸುವ ಒಬ್ಬ ಅಸಹಾಯಕ ರಾಜನಿಗಿಂತ ಹೆಚ್ಚಾಗಿ ಬೇರೇನೋ ಕಾಣುವುದಿಲ್ಲ. ಅದರ ಜೊತೆಗೆ ಶೂದ್ರನೊಬ್ಬ ವೇದ ಕಲಿಯಬಾರದು, ಅದು ಧರ್ಮವಲ್ಲ ಎನ್ನುವ ಕಾರಣಕ್ಕೆ ಪುಟ್ಟ ಬಾಲಕ ಶಂಭೂಕನನ್ನು ಸಂಹರಿಸುತ್ತಾನೆ ರಾಮ ಎಂದು ಅವನನ್ನು ಜಾತಿವಾದಿಯೂ ಮಾಡಿಯಾಗುತ್ತದೆ. ಶಂಭೂಕನ ಕಥೆ ಇದರಲ್ಲಿ ಮಾತ್ರವಲ್ಲ ಇತರ ಕೆಲವು ರಾಮಾಯಣದಲ್ಲಿಯೂ ಉಲ್ಲೇಖವಾಗುತ್ತದೆ. ಕೆಲವೊಂದರಲ್ಲಿ ಇದೇ ಕಥೆಯನ್ನು ಹೇಳಿದರೆ, ಇನ್ನು ಕೆಲವೊಂದರಲ್ಲಿ ಶಂಭೂಕ ಒಬ್ಬ ರಾಕ್ಷಸ ಆತ ಪಾರ್ವತಿಯನ್ನು ಪಡೆಯಲು ತಪಸ್ಸನ್ನಾಚರಿಸುತ್ತಿದ್ದ ಆ ಕಾರಣಕ್ಕಾಗಿ ರಾಮ ಕೊಲ್ಲುತ್ತಾನೆ ಎನ್ನುವುದಿದೆ. ‘ರಾಮ ನಿಜವಾಗಿಯೂ ಜಾತಿವಾದಿಯೇ? ಆತ ನಿಜವಾಗಿಯೂ ಶಂಭೂಕನನ್ನು ಕೊಂದಿದ್ದನೇ ಎನ್ನುವುದರ ಕುರಿತು ಉದಯ್’ಲಾಲ್ ಪೈ ಅವರು ಒಂದು ದೊಡ್ಡ ಲೇಖನವನ್ನೇ ಬರೆದಿದ್ದಾರೆ. ವಾಲ್ಮೀಕಿ ರಾಮಾಯಣದಲ್ಲಿ ಎಲ್ಲೂ ಕೂಡ ಶಂಭೂಕನ ಉಲ್ಲೇಖವಿಲ್ಲ. ಶ್ರೀಮದ್ ಭಾಗವತಮ್’ನಲ್ಲಾಗಲಿ ಅಥವಾ ಮಹಾಭಾರತದ ವನಪರ್ವದಲ್ಲಿ ರಾಮಾಯಣವನ್ನು ಹೇಳುವಾಗಲೂ ಶಂಭೂಕನ ಉಲ್ಲೇಖವಾಗುವುದಿಲ್ಲ ಎನ್ನುತ್ತಾರೆ. ಶಂಭೂಕನ ಕಥೆ ನಂತರದ ದಿನಗಳಲ್ಲಿ ಸೇರಿಸಲಾಗಿದೆ ಎನ್ನುತ್ತಾರೆ. ಸರಿ ನಮ್ಮಂಥವರು ರಾಮನನ್ನು ಪೂಜ್ಯ, ಆದರ್ಶ ಎಂದೆಲ್ಲ ಅಂದುಕೊಂಡಿರುವ ಕಾರಣಕ್ಕೆ, ಆ ಪೂರ್ವಾಗ್ರಹಗಳನ್ನು ಇಟ್ಟುಕೊಂಡು ಓದುವುದಕ್ಕೆ ಇದೆಲ್ಲ ಜೀರ್ಣಿಸಿಕೊಳ್ಳುವುದ ಕಷ್ಟ ಅಂತಲೇ ಅಂದುಕೊಳ್ಳೋಣ. ಆದರೆ ವರ್ಣ ಪದ್ಧತಿ ಇನ್ನೊಂದು ರೀತಿಯ ಜಾತಿ ಪದ್ಧತಿಯಷ್ಟೇ ಎಂದು ಬಿಂಬಿಸುವಾಗ ಏನನ್ನುವುದು? ರಾಜ ರಾಮನಾಗಲಿ ರಾವಣನಾಗಲಿ ಬಡವ, ದೀನ ಎನಿಸಿಕೊಂಡವನ ಬದುಕು ಬದಲಾಗುವುದಿಲ್ಲ ಎಂದು ಬಂದು ನಿಲ್ಲುವಾಗ ಏನನ್ನುವುದು. ನಾವು ಓದುವ ಕಥೆಗಳು, ನಾವು ಜಗತ್ತನ್ನ ಹೇಗೆ ನೋಡುತ್ತೇವೆ ಎನ್ನುವುದನ್ನ ರೂಪಿಸುತ್ತದೆ. ಆ ಕಾರಣಕ್ಕಾಗಿಯೇ ನಮ್ಮಲ್ಲಿ ಅಷ್ಟೊಂದು ನೀತಿ ಕಥೆಗಳಿರುವುದು. ಈ ಕೃತಿ ಯಾವ ತತ್ವವನ್ನು, ನೀತಿಯನ್ನು ಹೇಳಿಕೊಡುವ ಪ್ರಯತ್ನ ಮಾಡಿದೆ? ಒಂದು ವೇಳೆ ಇಂತಹ ಕೃತಿಗಳನ್ನ ಕೇವಲ ಕಾಲ್ಪನಿಕ ಕಥೆ ಎಂದಷ್ಟೇ ನೋಡಬೇಕು ಎನ್ನುವುದಾದರೆ, ಇತಿಹಾಸದಲ್ಲಿನ, ನಮ್ಮ ಪರಂಪರೆಯಲ್ಲಿ ಅಷ್ಟೊಂದು ಪ್ರಾಮುಖ್ಯತೆಯನ್ನು ಹೊಂದಿರುವ ಹೆಸರುಗಳೇ ಯಾಕೆ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುವುದಿಲ್ಲವಾ? ಬಹುಶಃ ಈ ಕಾರಣಕ್ಕೆ ಇರಬೇಕು ಇಂದು ಎಷ್ಟೋ ಜನ, ರಾಮ ಸೀತೆಯನ್ನು ಹುಡುಕಲು ಹೋಗಿದ್ದು ತನ್ನ ಅಹಂಗಾಗಿ, ಆತ ಇನ್’ಸೆಕ್ಯೂರ್ ಆಗಿದ್ದ ಅದಕ್ಕಾಗಿಯೇ ಆಕೆಯನ್ನು ತ್ಯಜಿಸಿದ್ದು ಎನ್ನುವಂತಹ ಮಾತನ್ನಾಡುವುದು.

ಮಿಥಾಲಜಿ ಎನ್ನುವುದು ಮಿಥ್ ಎನ್ನುವುದರಿಂದ ಬಂದಿದ್ದು, ರಾಮಾಯಣ ಹಾಗೂ ಮಹಾಭಾರತವನ್ನು ಮಿಥಾಲಜಿ ಎನ್ನುತ್ತಾರೆ. ಹಾಗಾದರೆ ಅವು ನಡೆದಿಲ್ಲವೇ ಎಂದು ದೇವದತ್ ಅವರನ್ನು ಕೇಳಿದಾಗ ಅವರು ಮಿಥಾಲಜಿ ಎನ್ನುವುದು ಸಬ್ಜೆಕ್ಟಿವ್ ಟ್ರುಥ್ ಎಂದುಬಿಟ್ಟರು.  ಕೆಲವರಿಗೆ ಅದು ಸತ್ಯ, ಕೆಲವರಿಗೆ ಅಲ್ಲ ಎಂದು. ರಾಮಾಯಣ ಮಹಾಭಾರತದ ಕುರಿತಾಗಿ, ಸಾಕಷ್ಟು ಪುಸ್ತಕಗಳನ್ನು ಬರೆದಿರುವ ದೇವದತ್ ಅವರು ಹಾಗೆ ಹೇಳಿದ್ದು ನಿರಾಸೆಯನ್ನುಂಟುಮಾಡಿದ್ದು ನಿಜ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅದು ಕೇವಲ ಸಬ್ಜೆಕ್ಟಿವ್ ಟ್ರುಥ್ ಆಗಿ ಮಾತ್ರ ಉಳಿದಿರುವುದು ನಿಜವೂ ಹೌದು, ಖೇದಕರವೂ ಹೌದು.  ಯಾರು ಅವುಗಳನ್ನು ಸತ್ಯ ಎಂದು ನಂಬಿದ್ದಾರೋ ಅವರು ಆ ಮೂಲ ಸಿದ್ಧಾಂತಗಳಿಗೆ ಚ್ಯುತಿ ಬರದಂತೆ ಬರೆಯುತ್ತಿದ್ದಾರೆ, ಯಾರಿಗೆ ಅದು ಮಿಥ್ಯೆಯಾಗಿದೆಯೋ ಅವರು ತಮಗೆ ಬೇಕಾದಹಾಗೆ ಅವುಗಳನ್ನು ಬಳಸಿಕೊಳ್ಳುತ್ತಿದ್ದಾರೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!