ಅಂಕಣ

ಉತ್ತರಕನ್ನಡಕ್ಕೊಲಿದು ಬಂದ ಶಾಪ ‘ಕೈಗಾ ಅಣುಸ್ಥಾವರ’

ಹಸಿರು, ಸಂಸ್ಕೃತಿ ಮತ್ತು ವಿವಿಧತೆಗೆ ಪ್ರಸಿದ್ಧಿ ಹೊಂದಿದ ಜಿಲ್ಲೆ ಉತ್ತರಕನ್ನಡ. ಬಹುಶಃ ಅದಕ್ಕೆ ಇರಬೇಕು ‘ಸಮೃದ್ಧ ಉತ್ತರ ಕನ್ನಡ’ ಎಂಬ ಪದ ಈ ಜಿಲ್ಲೆಗೆ ಆಪ್ಯಾಯಮಾನವಾಗಿದೆ. ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಎಲ್ಲ ರೀತಿಯಲ್ಲಿಯೂ ವಿವಿಧತೆಯನ್ನು ಹೊಂದಿರುವ ಏಕೈಕ ಜಿಲ್ಲೆ ಉತ್ತರಕನ್ನಡ. ಮಲೆನಾಡು, ಅರೆಮಲೆನಾಡು, ಬಯಲುಸೀಮೆ, ಕರಾವಳಿ ಹೀಗೆ ಎಲ್ಲ ಬೌಗೋಳಿಕ ವಿಭಿನ್ನತೆಯನ್ನು ಹೊಂದಿರುವ ಸಮೃದ್ಧ ಜಿಲ್ಲೆ ಉತ್ತರ ಕನ್ನಡ. ಆದರೆ  ಹಸಿರನ್ನು ಹೊದ್ದು ಸಂಭ್ರಮಿಸುತ್ತಿದ್ದವಳ ಮಡಿಲಿಗೆ ಬೆಂಕಿಯುಂಡೆಯೊಂದನ್ನು ಕಟ್ಟಿಬಿಡಲಾಯಿತು. ಆ ಬೆಂಕಿಯುಂಡೆಯೇ ಕೈಗಾ ಅಣುವಿದ್ಯುತ್ ಸ್ಥಾವರ. ನೆಮ್ಮದಿಯ ಬದುಕು ಕಾಣುತ್ತಿದ್ದ ನನ್ನ ಜಿಲ್ಲೆಯ ಜನರಿಗೆ ನೋವನ್ನು ಉಡುಗೊರೆಯಾಗಿ ಆಳುವವರು ನೀಡಿದರು. ಹಾಗಾದರೆ ಯಾಕೆ ಉತ್ತರಕನ್ನಡದ ಕೈಗಾವನ್ನೇ ಈ ಅಣುವಿದ್ಯುತ್ ಕೇಂದ್ರ ಸ್ಥಾಪನೆ ಮಾಡಲು ಆಯ್ಕೆ ಮಾಡಿಕೊಂಡರು? ಪ್ರಶ್ನಿಸಲು ತಿಳಿಯದ ಮುಗ್ಧಜನರು ಉತ್ತರಕನ್ನಡದವರು ಎಂಬುದನ್ನೇ ಸರಕಾರ ಬಂಡವಾಳವನ್ನಾಗಿಸಿಕೊಂಡಿತೆ? ದಟ್ಟಅರಣ್ಯ ಮತ್ತು ಜೀವವೈವಿಧ್ಯ ತಾಣ ಎಂದೆನಿಸಿದ ಉತ್ತರಕನ್ನಡದಲ್ಲಿ ಕೈಗಾ ಅಣುವಿದ್ಯುತ್‌ ಸ್ಥಾವರ ಸ್ಥಾಪನೆಯ ಪ್ರಸ್ತಾಪವಾದಾಗಲೇ ಪ್ರತಿಭಟನೆಗಳು ಮೊದಲಾಗಿದ್ದವು. ಮೂರು ದಶಕಗಳ ನಂತರವೂ ಈ ವಿರೋಧದ ದನಿ ತಗ್ಗಿಲ್ಲ. ಅಷ್ಟೊಂದು ಹೋರಾಟದ ನಡುವೆಯೂ ನೆಲೆಯೂರಿದ ಈ ಸ್ಥಾವರ ಅದೆಷ್ಟೋ ಪ್ರಶ್ನೆಗಳನ್ನು ಇಂದಿಗೂ ಹುಟ್ಟುಹಾಕುತ್ತಿದೆಯಲ್ಲ ಯಾಕೆ?  ಕೈಗಾದಲ್ಲಿ ಏನಾಯಿತು? ಏನು ನಡೆಯುತ್ತಿದೆ? ಯಾಕೆ ಮತ್ತೆ ಹೋರಾಟ ಮುನ್ನೆಲೆಗೆ ಬಂದಿದೆ? ಇದನ್ನೆಲ್ಲ ಅರಿಯುವ ಪ್ರಯತ್ನ ಮಾಡುವುದು ಜವಾಬ್ದಾರಿಯುತ ಜನತೆಯಾದ ನಮ್ಮೆಲ್ಲರ ಕರ್ತವ್ಯವಾಗಬೇಕು ಅಲ್ಲವೇ?

1985ರಲ್ಲಿ ಪ್ರಸ್ತಾವನೆ ಬಂದಾಗಿನಿಂದಲೂ ಶುರುವಾದ ಹೋರಾಟ ಇಂದಿಗೂ ನಡೆಯುತ್ತಾ ಬಂದರೂ ಕೇಳಿಸಿಕೊಳ್ಳಬೇಕಾದವರು ಕೇಳಿಸಿಕೊಂಡರೂ ಮೂಕರಾಗಿರುವುದು ಖೇದಕರ ಸಂಗತಿಯೇ ಸರಿ. ಇವತ್ತು ಅಣುಸ್ಥಾವರವನ್ನು ಜಗತ್ತೇ ತಿರಸ್ಕರಿಸುತ್ತಿದೆ; ಪರಮಾಣು ವಿದ್ಯುತ್ತು ದುಬಾರಿ, ಅಪಾಯಕಾರಿ ಮತ್ತು ಮುಂದಿನ ಪೀಳಿಗೆಗೆ ಹೆಮ್ಮಾರಿ ಎಂಬುದನ್ನು ಬಹುತೇಕ ಎಲ್ಲ ರಾಷ್ಟ್ರಗಳೂ ಪರಿಭಾವಿಸಿವೆ. ನಮಗೆ ಪರಮಾಣು ತಂತ್ರಜ್ಞಾನವನ್ನ ಪೂರೈಸಲು ಸಜ್ಜಾಗಿರುವ ಅಮೆರಿಕ ಮತ್ತು ಬಹಳಷ್ಟು ಯುರೋಪಿಯನ್ ದೇಶಗಳು  ಹೊಸ ರಿಯಾಕ್ಟರನ್ನ ಕಟ್ಟದೆ ಎರಡು ಮೂರು ದಶಕಗಳೇ ಆಗಿವೆ. ಅಮೆರಿಕ 35 ವರ್ಷಗಳಿಂದ ಹೊಸ ಉತ್ಪಾದನಾ ಘಟಕವನ್ನು ನಿರ್ಮಿಸಿಲ್ಲ. ಅಲ್ಲಿನ ಅತಿ ದೊಡ್ಡ ವೆಸ್ಟಿಂಗ್ಹೌಸ್ ಪರಮಾಣು ಕಂಪನಿ ಮೊನ್ನೆ ಏಪ್ರಿಲ್ 2017 ರಲ್ಲಿ  ದಿವಾಳಿ ಘೋಷಿಸಿದೆ. ಅದರಲ್ಲಿ ಬಂಡವಾಳ ಹೂಡಿರುವ ಜಪಾನಿನ ತೋಶಿಬಾ ಕಂಪನಿ 600 ಶತಕೋಟಿ ಡಾಲರ್ ನಷ್ಟವನ್ನು ಅನುಭವಿಸಿದೆ. ಅಮೆರಿಕದಂತಹ ಅಮೆರಿಕಾವೇ ಪರಮಾಣು ತಂತ್ರಜ್ಞಾನದಿಂದ ದೂರ ಸರಿದಿದೆ, ಅಂದರೆ ಅದರ ಗಂಭೀರ ದುಷ್ಪರಿಣಾಮ ಎಷ್ಟಿರಬಹುದು? ಕೆನಡಾ ತನ್ನ ಸ್ಥಾವರಗಳನ್ನು ಒಂದೊಂದಾಗಿ ಮುಚ್ಚುತ್ತಿದೆ; ಅಲ್ಲಿ ಒಂದೂ ಯೋಜನೆಯನ್ನು ಸರಕಾರ ಘೋಷಿಸುತ್ತಿಲ್ಲ. ನಮಗೆ ಯುರೇನಿಯಂ ಖನಿಜವನ್ನು ಪೂರೈಸಲು ಉತ್ಸುಕತೆ ತೋರುವ ಆಸ್ಟ್ರೇಲಿಯಾ, ಕಝಾಕಿಸ್ತಾನ್ ತಮ್ಮ ದೇಶದಲ್ಲಿ ಒಂದೂ ಪರಮಾಣು ಸ್ಥಾವರ ಹಾಕಿಕೊಂಡಿಲ್ಲ. ಇವೆಲ್ಲ ಗೊತ್ತಿದ್ದರೂ ನಮ್ಮ ದೇಶದ ಅಣುಶಕ್ತಿ ಇಲಾಖೆ NCPL ಭಾರೀ ವೆಚ್ಚದಲ್ಲಿ, ಭಾರೀ ಸಮಯ ತಗಲುವ, ಭಾರೀ ವಿದೇಶೀ ಅವಲಂಬನೆಯನ್ನು ಬೇಡುವ ಪರಮಾಣು ಕೇಂದ್ರವನ್ನು ಸ್ಥಾಪಿಸಲು ಹೋರಾಡುತ್ತಿದೆ. ಪರಮಾಣು ಶಕ್ತಿಗೆ ವಿರೋಧವೇ ಇಲ್ಲವೆಂದು ಕೇಂದ್ರ ಸರಕಾರಕ್ಕೆ ತಪ್ಪು ಮಾಹಿತಿ ನೀಡಿದೆ. ಹಾಗಾದರೆ ಇದಕ್ಕೆ  ‘ವಿರೋಧ ಇದೆ’ ಎಂದು ನಮ್ಮ ಪ್ರಧಾನಿಯವರಿಗೆ ಗೊತ್ತಾಗುವಂತೆ ಮಾಡಬೇಕಾಗಿದೆ ಅಲ್ಲವೇ .

ಯುರೇನಿಯಂ ಅನ್ನು ಛೇದಿಸಿದಾಗ ಒಂದು ಶಕ್ತಿ ಉತ್ಪಾದನೆಗೊಳ್ಳುತ್ತದೆ. ಮತ್ತು ಅದರಿಂದಲೇ ಈ ಅಣುವಿದ್ಯುತ್ತನ್ನು ಉತ್ಪಾದಿಸುವುದು. ಆದರೆ ಆಗ ಕೇವಲ ವಿದ್ಯುತ್ ಶಕ್ತಿ ಮಾತ್ರ ಉತ್ಪಾದನೆಯಾಗುವುದಿಲ್ಲ. ಬದಲಾಗಿ 200 ಕ್ಕೂ ಹೆಚ್ಚು ವಿಕಿರಣಶೀಲ ಐಸೊಟೋಪ್ಗಳು ಕೂಡ ಉತ್ಪಾದಿತಗೊಳ್ಳುತ್ತವೆ. ಇದರಲ್ಲಿ ಸುಮಾರು ಐಸೊಟೋಪ್ಗಳು ವಿಷಪೂರಿತ ಮತ್ತು ಹಾನಿಕಾರಕವಾಗಿದೆ. ಇದೇ ಪ್ರಕ್ರಿಯೆಯಲ್ಲಿ ಉತ್ಪಾದನೆಗೊಳ್ಳುವ ಪ್ಲುಟೋನಿಯಮ್ ಅತಿಹೆಚ್ಚು ವಿಷಪೂರಿತ ರಾಸಾಯನಿಕವಾಗಿದೆ. ಕೇವಲ 5 KG ಪ್ಲುಟೋನಿಯಮ್ ಇಡೀ ವಿಶ್ವದಲ್ಲಿರುವ ಜನರನ್ನು ಕೊಲ್ಲಲು ಸಾಕು ಎಂದು ವಿಜ್ಞಾನ ಹೇಳುತ್ತದೆ. ಅಂದರೆ ಈ ರಾಸಾಯನಿಕದ ಭೀಕರತೆ ಎಷ್ಟಿರಬಹುದು? ಸಾಧಾರಣ ಮಧ್ಯಮ ಗಾತ್ರದ ರಿಯಾಕ್ಟರ್ ಗಳು ಸುಮಾರು 200 kg ಪ್ಲುಟೋನಿಯಮ್ ಅನ್ನು ಉತ್ಪಾದಿಸುತ್ತದೆ. ಕೈಗಾದ ನಾಲ್ಕು ರಿಯಾಕ್ಟರ್ ಗಳು ಸುಮಾರು ನಾಲ್ಕು ಮಿಲಿಯನ್ ಕೆಜಿ ಅಷ್ಟು ಉಪಪದಾರ್ಥಗಳನ್ನು ಉತ್ಪಾದಿಸುತ್ತದೆ ಅಂದರೆ ಇದರಿಂದ ಉತ್ಪತ್ತಿಯಾಗುವ ಪ್ಲುಟೋನಿಯಮ್ ನ ಪ್ರಮಾಣ ಕೂಡ ವಿಪರೀತವಾಗಿರುತ್ತದೆ. ಈ ಪ್ಲುಟೋನಿಯಮ್ ಅನ್ನು ವಿಲೇವಾರಿ ಮಾಡುವ ಪ್ರಕ್ರೀಯೆ ಕೂಡ ಹೊಸ ಹೊಸ ಚರ್ಚೆ ಮತ್ತು ವಿವಾದವನ್ನು ಹುಟ್ಟುಹಾಕುತ್ತಲೇ ಬಂದಿದೆ. ಕೈಗಾದಲ್ಲಿ ಉತ್ಪಾದನೆಯಾಗುವ ವಿದ್ಯುತ್ ಶಕ್ತಿ ಎಲ್ಲರಿಗೂ ಬೇಕು. ಆದರೆ ಇಲ್ಲಿ ಉತ್ಪಾದನೆಯಾಗುವ ಅಪಾಯಕಾರಿ ತ್ಯಾಜ್ಯವನ್ನು ಮಾತ್ರ ನಾವೇ ಇಟ್ಟುಕೊಳ್ಳಬೇಕಾಗಿದೆ. ಅದು ಉಡಿಯಲ್ಲಿ ಕೆಂಡವನ್ನಿಟ್ಟುಕೊಂಡ ಹಾಗೆ. ಸ್ಥಾವರಗಳ ಸಂಖ್ಯೆ ಹೆಚ್ಚುತ್ತ ಹೋದಷ್ಟೂ ತ್ಯಾಜ್ಯ ಮತ್ತು ವಿಕಿರಣ ಪರಿಕರಗಳ (ಕೊಳವೆ, ಪಂಪ್, ಕಂಬಿ, ಮೋಟರ್ ಯಂತ್ರಗಳ ಬಿಡಿಭಾಗಗಳ) ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಸಹಸ್ರಾರು ವರ್ಷ ವಿಕಿರಣ ಸೂಸುತ್ತಲೇ ಇರುವ ಈ ಪರಿಕರಗಳನ್ನು ಹೂತರೂ ಅವುಗಳ ಅಪಾಯದ ಬಗ್ಗೆ ದೂರಭವಿಷ್ಯದ ಪೀಳಿಗೆಗಳಿಗೆ ಹೇಗೆ ಎಚ್ಚರಿಕೆ ಕೊಡಬೇಕು ಎಂಬುದೇ ಯಾರಿಗೂ ಗೊತ್ತಿಲ್ಲ. ಭಾರೀ ಮಳೆಬೀಳುವ ಕೈಗಾದಲ್ಲಿ ಅವುಗಳ ಗತಿಸ್ಥಿತಿಯನ್ನು ಊಹಿಸುವುದೂ ಸಾಧ್ಯವಿಲ್ಲ.   ಈ ವೇಸ್ಟ್ ಗಳನ್ನು ಕೈಗಾದಲ್ಲೇ ಅತ್ಯಂತ ಪ್ರಶಸ್ತವಾದ ಜಾಗದಲ್ಲಿ ಸುಮಾರು 25 ರಿಂದ 50 ವರ್ಷಗಳ ಕಾಲ ಅದರ ವಿಕಿರಣಶೀಲತೆ ಕಮ್ಮಿ ಆಗುವವರೆಗೂ ಇಟ್ಟುಕೊಳ್ಳಬೇಕಾಗಿದೆ. ಈ ಶೇಖರಣಾ ಘಟಕದಲ್ಲಿ ಸಣ್ಣ ಸೋರಿಕೆ ಆದರೂ ಈ ವಿಷ ನಾವುಸಿರಾಡುವ ಗಾಳಿ ಮತ್ತು ಸೇವಿಸುವ ನೀರು ಆಹಾರದಲ್ಲಿ ಸೇರುವ ಎಲ್ಲ ಲಕ್ಷಣಗಳಿದೆ. ಎಷ್ಟೇ ಭದ್ರ ವ್ಯವಸ್ಥೆಯಿದ್ದರೂ ಗಾಳಿಗೆ, ನೀರಿಗೆ ವಿಕಿರಣ ಹೊರಸೂಸುತ್ತಲೇ ಇರುತ್ತದೆ ಎಂಬುದು ಜಗತ್ತಿನ ಎಲ್ಲ ಸ್ಥಾವರಗಳ ಅಧ್ಯಯನದಲ್ಲೂ ಗೊತ್ತಾಗಿದೆ.  ಕ್ಯಾನ್ಸರ್, ಕರುಳಿನ ಹುಣ್ಣು, ಯಕೃತ್ತಿನ ಊತ, ಶ್ವಾಸಕೋಶಗಳ ಹುಣ್ಣು, ಚಿತ್ತವಿಭ್ರಮೆ, ಸ್ತ್ರೀರೋಗ, ಅಪಾಂಗ ಶಿಶುಗಳ ಜನನ ಇವೆಲ್ಲ ಕೈಗಾ ಸುತ್ತ ಹೆಚ್ಚುತ್ತಲೇ ಇವೆಯೆಂಬ ಶಂಕೆ ಬಲವಾಗುತ್ತಿದೆ. 1990 ರ ಆರೋಗ್ಯ ದಾಖಲೆಗಳ ಜೊತೆ ಈಗಿನದನ್ನು ಹೋಲಿಸಿ ಅಧ್ಯಯನ ಮಾಡಲು ಯಾರೂ ಆಸಕ್ತಿ ತೋರುತ್ತಿಲ್ಲ. ಯಾಕೆ ಯಾರೂ ಈ ಕೆಲಸಕ್ಕೆ ಮುಂದಾಗುತ್ತಿಲ್ಲ? ಕನಿಷ್ಟ ಪಕ್ಷ ರಾಜ್ಯ ಸರ್ಕಾರವಾದರೂ ಇದರಲ್ಲಿ ಮೂಗುತೂರಿಸುವ ಕೆಲಸ ಮಾಡಬಹುದಿತ್ತು ಅದೂ ಆಗುತ್ತಿಲ್ಲವಲ್ಲ. ಯಾರೂ ಸ್ವತಂತ್ರ ಆರೋಗ್ಯ ಸಮೀಕ್ಷೆ ನಡೆಸದಂತೆ ಪರಮಾಣು ಇಲಾಖೆ ನಿಗಾ ವಹಿಸಿದೆ. ಹಾಗಾಗಿ  ಈ ಪರಮಾಣು ತ್ಯಾಜ್ಯ ವಿಲೇವಾರಿ ಒಂದು ದೊಡ್ಡ ಪ್ರಶ್ನಾರ್ಥಕವಾಗಿಯೇ ಉಳಿದಿದೆ. ಒಂದೊಮ್ಮೆ ಕೈಗಾದಲ್ಲೇನಾದರೂ ಸಣ್ಣ ಪ್ರಮಾಣದ ಅವಗಢವೇನಾದರೂ ನಡೆದರೆ 40 ಕಿಲೊಮೀಟರ್ ಆಸುಪಾಸಿನ ಎಲ್ಲ ಜೀವ ಸಂಕುಲ ಕ್ಷಣದಲ್ಲಿ ನಾಶವಾಗುತ್ತದೆ ಮತ್ತು ತೀವ್ರವಾದ ಅವಗಢವೇನಾದರೂ ಜರುಗಿದರೆ ಸುಮಾರು 160 ಕಿಲೋಮೀಟರ್ ವಿಸ್ತೀರ್ಣದ ಪ್ರದೇಶದ ಜೀವ ಸಂಕುಲ ನಾಶವಾಗುತ್ತದೆ  ಎಂದು ಒಂದು ವರದಿ ಹೇಳುತ್ತದೆ. ಒಂದುವೇಳೆ ತ್ಸುನಾಮಿ ಭೂಕಂಪದಂತಹ ಪ್ರಾಕೃತಿಕ ಅವಗಢಗಳೇನಾದರೂ ಜರುಗಿದರೆ ಅಕ್ಕಪಕ್ಕದ ಪ್ರದೇಶಗಳಾದ ದಕ್ಷಿಣಕನ್ನಡ, ಶಿವಮೊಗ್ಗ, ಧಾರವಾಡ ಜಿಲ್ಲೆಯ ಅನೇಕ ಪ್ರದೇಶದವರೆಗಿನ ಜೀವ ಸಂಕುಲಗಳ ಮೇಲೆ ತೀವ್ರವಾದ ಹಾನಿಯಂತೂ ಉಂಟಾಗುತ್ತದೆ. ಹೇಳಿ ಕೇಳಿ ದಟ್ಟ ಕಾನನ ಮತ್ತು ವಿಭಿನ್ನವಾದ ಜೀವ ಸಂಕುಲಗಳನ್ನು ಹೊಂದಿರುವ ಜಿಲ್ಲೆ ಉತ್ತರಕನ್ನಡ,  ನಮ್ಮ ಉತ್ತರಕನ್ನಡ  ಒಂದು ಕ್ಷಣದಲ್ಲಿ ಇಲ್ಲವಾಗಿಬಿಡಬಹುದು. ಕಲ್ಪನೆಯಲ್ಲೂ ಭಯ ಹುಟ್ಟಿಸುವ ವಿಚಾರ ಇದಲ್ಲವೇ ಸ್ನೇಹಿತರೇ?

ಈಗ ಕೈಗಾದಲ್ಲಿ ಐದು ಮತ್ತು ಆರನೇ ಘಟಕವನ್ನು ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಮತ್ತು ಅಲ್ಲಿನ ಅಧಿಕಾರಿಗಳು ಇದನ್ನು ಸ್ಪಷ್ಟಪಡಿಸಿದ್ದಾರೆ ಕೂಡ. ಆದರೆ ಈಗ ಇದನ್ನು ವಿರೋಧಿಸುವ ಕೂಗು ಮತ್ತೆ ಎದ್ದಿದೆ. ಹೋರಾಟ ತೀವ್ರಗೊಳ್ಳುವ ಮತ್ತು ತೀವ್ರಗೊಳಿಸಲೇಬೇಕಾದ ಸಮಯವೀಗ ಬಂದಿದೆ. ಇದುವರೆಗೆ ನಾಲ್ಕು ಘಟಕಗಳಿಂದ 880 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದ್ದು, ಕರ್ನಾಟಕ ಶೇ. 28ರಷ್ಟು ಪಾಲನ್ನು ಪಡೆಯುತ್ತಿದೆ. ಉಳಿದದ್ದನ್ನು ತಮಿಳುನಾಡು, ಗೋವಾ, ಮಹಾರಾಷ್ಟ್ರ, ಆಂಧ್ರ ಮತ್ತು ಕೇರಳ ರಾಜ್ಯಗಳಿಗೆ ಹಂಚಲಾಗಿದೆ. ಮುಂದೆ ಮಾಡಲುದ್ದೇಶಿಸಿರುವ  ಘಟಕಗಳಿಂದ 1400 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿಯನ್ನು ಹೊಂದಿದ್ದು, ಇದರಲ್ಲಿ ಶೇ 50ರಷ್ಟು ಪಾಲನ್ನು ನಮ್ಮ ರಾಜ್ಯ ಪಡೆಯಲಿದೆ ಎನ್ನಲಾಗಿದೆ. ಅಭಿವೃದ್ಧಿಗೆ ಶಕ್ತಿ ಬೇಕೇ ಬೇಕು. ಅಭಿವೃದ್ಧಿ ಬೇಡವೇ ಬೇಡ ಎಂದು ಯಾರೊಬ್ಬರೂ ಹೇಳುವುದಿಲ್ಲ. ಆದರೆ ಈ ಅಭಿವೃದ್ಧಿ ಎಂಬುದು ಸಮಾನತೆಯ ನೆಲೆಗಟ್ಟನ್ನು ಆಧರಿಸಿರಬೇಕು ಹಾಗು ಸುರಕ್ಷತೆಯ ಖಾತ್ರಿಯನ್ನು ನೀಡಬೇಕು. ಆದರೆ ದುರಂತದ ಸಂಗತಿಯೆಂದರೆ ಕೈಗಾ ಇರಲಿ, ತಮಿಳುನಾಡಿನ ಕುಡಂಕುಲಂ ಆಗಿರಲಿ ಸಾರ್ವಜನಿಕರಿಗೆ ಈ ಯೋಜನೆಗಳ ಕುರಿತು ದೃಢವಾದ ವಿಶ್ವಾಸ ಮೂಡಿಸುವಲ್ಲಿ ನಮ್ಮ ವಿಜ್ಞಾನಿಗಳು, ಆಡಳಿತಗಾರರು ಸಫಲವಾಗಿಲ್ಲ. ಅವರ ನಡೆಯಲ್ಲಿ ಪಾರದರ್ಶಕತೆಯ ಕೊರತೆ ಎದ್ದು ಕಾಣುತ್ತದೆ. ಈಗ ಕೆಲ ದಿನಗಳ ಹಿಂದೆ ಅಧಿಕಾರಿಗಳು ಪತ್ರಿಕಾಗೋಷ್ಠಿಯನ್ನು ನಡೆಸಿ ಪರಿಸರ ಪರಿಣಾಮ ವರದಿ ಬಂದಿದೆ. ಅದರ ಪ್ರಕಾರ ಕೈಗಾ ಅಣುಸ್ಥಾವರದಿಂದ ಪರಿಸರಕ್ಕೆ ಮತ್ತು ಜನರಿಗೆ ಯಾವುದೇ ಹಾನಿಯಿಲ್ಲ ಎಂದು ಹೇಳಿದರು. ಆದರೆ ಈಗ ಇಲ್ಲೊಂದಿಷ್ಟು ಪ್ರಶ್ನೆ ಕೂಡ ಎದ್ದಿದೆ. ಬೆಂಗಳೂರಿನ ಮೆಕಾನ್‌ ಎಂಬ ಸಂಸ್ಥೆ ಈ ಪರಿಸರ ವರದಿಯನ್ನು ಅಣುಶಕ್ತಿ ನಿಗಮದ ಪರವಾಗಿ ತಯಾರಿಸಿ ಕೊಟ್ಟಿದೆ ಎಂಬ ಸುದ್ದಿ ಕೂಡ ಹಬ್ಬಿದೆ. ಸಂಸ್ಥೆಗೆ ಅಷ್ಟೊಂದು ನಂಬಿಕೆಯಿದ್ದರೆ ಸ್ವತಂತ್ರ ಅಧ್ಯಯನ ನಡೆಸಲು ಅವಕಾಶ ಮಾಡಿಕೊಡಬೇಕು ಎಂಬುದು ಸಾಮಾನ್ಯರ ವಾದ.

ಉತ್ತರ ಕನ್ನಡ ಜಿಲ್ಲೆಯ ಪರಿಸರ ಧಾರಣ ಸಾಮರ್ಥ್ಯ ಮುಗಿದಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ-ಕೇಂದ್ರ ಸರ್ಕಾರಗಳು ಬೃಹತ್ ಅರಣ್ಯ ನಾಶೀ-ಪರಿಸರ ನಾಶೀ ಯೋಜನೆಗಳನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾರಿ ಮಾಡಬಾರದಲ್ಲವಾ ಆದರೂ ಈ ಹೊಸ ಘಟಕ ಸ್ಥಾಪನೆ ಹೇಗೆ ಸಾಧ್ಯ? ಕೈಗಾ ಅಣುಸ್ಥಾವರಗಳ ಅಣುವಿಕಿರಣ ಯುಕ್ತ ತ್ಯಾಜ್ಯ ನೀರನ್ನು ಕಾಳಿನದಿಗೆ ಬಿಡುತ್ತಿದ್ದಾರೆ ಎಂದು ಸ್ಥಳೀಯರು ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದಾರೆ. ಈ ಕುರಿತ ತನಿಖಾ ವರದಿ ಎಲ್ಲಿದೆ? ಹೀಗಾಗಿ ಕಾರವಾರ ನಗರ ಪಕ್ಕದ ಕಾಳಿನದಿ ನೀರು ಬಿಟ್ಟು 50 ಕಿ.ಮೀ ದೂರದ ಗಂಗಾವಳಿ ನದೀ ನೀರು ತರುವಂತಾಗಿದೆ. ಇದರ ಬಗ್ಗೆ ಆ ಪರಿಸರ ವರದಿಯಲ್ಲಿ ಉಲ್ಲೇಖಿಸಲಾಗಿದೆಯೇ?  ಕೈಗಾ ಮಾರ್ಗದಿಂದ ಎರಡು ಬೃಹತ್‌ ವಿದ್ಯುತ್‌ ತಂತಿ ಮಾರ್ಗಗಳಿಗೆ 2ಲಕ್ಷ ಮರಗಳ ಹನನ ಮಾಡಲಾಗಿದೆ. 1400 ಮೆ. ವ್ಯಾ. ವಿದ್ಯುತ್‌ ಉತ್ಪಾದಿಸುವ ಉದ್ದೇಶ ಹೊಂದಿದ 5-6ನೇ ಘಟಕಕ್ಕೆ ಬೃಹತ್‌ ವಿದ್ಯುತ್‌ ತಂತಿ ಮಾರ್ಗ ನಿರ್ಮಾಣ ಮಾಡಲು ಒಂದು ಲಕ್ಷ ವೃಕ್ಷ ಗಳನ್ನು ಕಟಾವು ಮಾಡಬೇಕು. ಪರಿಸರ ಹಾನಿಯನ್ನೇ ಮಾಡದೆ ಐದು ಮತ್ತು ಆರನೇ ಘಟಕ ಸ್ಥಾಪಿಸಲು ಹೊರಟವರೇ ಇದಕ್ಕೇನು ಉತ್ತರ ನಿಮ್ಮದು? ಕೈಗಾ ಸ್ಥಾಪನೆಯಾಗಿ ಮೂರು ದಶಕಗಳೇ ಕಳೆದಿದ್ದರೂ ಈ ಘಟಕಗಳ ಸುತ್ತಲಿನ 5 ಕಿ.ಮೀ ವ್ಯಾಪ್ತಿಯ ಜನರಿಗೆ ಮರುವಸತಿಯನ್ನು ಏಕೆ ಕಲ್ಪಿಸಿಲ್ಲ? ಇದರ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಿದ್ದೀರಾ? ಕೈಗಾ ಸುತ್ತಲಿನ ಹಳ್ಳಿಗಳಲ್ಲಿ ಮುಂಬಯಿಯ ಟಾಟಾ ವೈದ್ಯಕೀಯ ಸಂಶೋಧನಾ ಸಂಸ್ಥೆ ಕೈಗೊಂಡ ಆರೋಗ್ಯ ಸಮೀಕ್ಷಾ ವರದಿಯನ್ನು ಸರಕಾರ ಪ್ರಕಟಿಸಿಲ್ಲ. ಈ ಬಗ್ಗೆ ಕೈಗಾ ಪರಿಸರ ವರದಿಯಲ್ಲಿ ಉಲ್ಲೇಖವೇ ಇಲ್ಲ ಎಂದು ಅನೇಕ ಹಿರಿಯರು ಹೇಳುತ್ತಿದ್ದಾರೆ? ಹಾಗಾದರೆ ಆ ಹಳೆಯ ಟಾಟಾ ವರದಿಯನ್ನು ಬಿಡುಗಡೆ ಮಾಡಲು ಏಕೆ ಹಿಂದೇಟು ಹಾಕುತ್ತಿದ್ದೀರಿ? ಮಳೆಕಾಡಿನ ಘಟ್ಟದ ಬುಡದಲ್ಲಿ ಇರುವ ಕೈಗಾ ಕಾಳಿ ನದಿ ದಂಡೆಯಲ್ಲೇ ಇದೆ. ಕೈಗಾದಿಂದ ನದಿಯ ಮೇಲ್ಭಾಗದಲ್ಲಿ ಕೊಡಸಳ್ಳಿ ಜಲವಿದ್ಯುತ್‌ ಅಣೆಕಟ್ಟೆ ಸೇರಿ ಕಾಳಿ ನದಿಗೆ 6 ಡ್ಯಾಂಗಳಿವೆ. ಇವು ಭೂಕಂಪ ವಲಯ ವಾಪ್ತಿಯಲ್ಲಿದೆ. ಭಾರಿ ಮಳೆ, ಭೂಕುಸಿತ, ಭೂಕಂಪಗಳಂಥ ಪ್ರಕೃತಿ ವಿಕೋಪಗಳಿಂದ ಕೈಗಾ ಅಣುಸ್ಥಾವರಗಳ ಪರಿಸ್ಥಿತಿ ಏನಾಗಬಹುದು? ಕೈಗಾ-ಸದಾಶಿವಗಡ ಮಧ್ಯೆ ಇರುವ ಹಳ್ಳಿಗಳು ಉಳಿಯಲಿವೆಯೆ ? ಅಂದು ಸ್ಥಾಪನೆಗೂ ಮುಂಚೆ ಇದ್ದ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ವ್ಯತ್ಯಾಸ ತಿಳಿದುಕೊಳ್ಳಲೇ ಬೇಕಲ್ಲವಾ? ಅಂದಿನ ವರದಿಯ ಜೊತೆ ಈಗಿನ ವರದಿಯನ್ನು ಇಟ್ಟು ಪಾರದರ್ಶಕವಾಗಿ ಚರ್ಚೆ ಮಾಡಲು ಅಧಿಕಾರಿಗಳು ತಯಾರಿದ್ದಾರ?

ನಮ್ಮತನದ ಉಳಿವಿಗಾಗಿ ಹೋರಾಡುವ ಸಮಯ ಇದಾಗಿದೆ. ನಮ್ಮ ಮುಂದಿನ ಪೀಳಿಗೆಗೆ ಅತ್ಯಂತ ಕೆಟ್ಟದ್ದನ್ನು ಬಿಟ್ಟುಹೋಗಲು ನಮಗೆ ಎಲ್ಲಿಂದ ಮನಸ್ಸು ಬರುತ್ತದೆ? ಕ್ಯಾನ್ಸರ್ ಎಂಬ ಹೆಮ್ಮಾರಿಯ ಅರಿವೇ ಇರದ ನನ್ನೂರಿನಲ್ಲಿ ಈಗ ಕ್ಯಾನ್ಸರ್ ಗೆ ಬಲಿಯಾಗುವವರ ಸಂಖ್ಯೆ ವಿಪರೀತವಾಗುತ್ತಿದೆ. ಕೈಗಾ ಅಣುಸ್ಥಾವರ ಇದಕ್ಕೆ ಕಾರಣವಲ್ಲ ಎಂದು ಹೇಳಲು ಹೇಗೆ ಸಾಧ್ಯ? ಅಣುಸ್ಥಾವರದ ಇತಿಹಾಸವೇ ಭಯಂಕರವಾಗಿರುವಾಗ ಸುಳ್ಳನ್ನೇ ಸತ್ಯ ಮಾಡಲು ಹೊರಟ ಈ ಅಧಿಕಾರಿಗಳನ್ನು ಹಿಮ್ಮೆಟ್ಟಿಸುವ ಕೆಲಸ ಮಾಡಬೇಕಿರುವುದು ಕೇವಲ ನಾವು ಮಾತ್ರ. ಈಗ ಇದರ ವಿರುದ್ಧ ಹೋರಾಡಲು ಸ್ವರ್ಣವಲ್ಲಿ ಶ್ರೀಗಳು ಮತ್ತೆ ಕರೆಕೊಟ್ಟಿದ್ದಾರೆ ಮತ್ತು ಸ್ವತಃ ಅವರೇ ಹೋರಾಟದ ಮುಂಚೂಣಿಯನ್ನೂ ವಹಿಸಿಕೊಂಡಿದ್ದಾರೆ. ವೈಜ್ಞಾನಿಕವಾಗಿ ಚರ್ಚೆ ಮಾಡಲು ಅನೇಕ ವಿಜ್ಞಾನಿಗಳು ಸಾಮಾನ್ಯರ ಪರ ಬಂದಿದ್ದಾರೆ. ಪರಿಸರವಾದಿಗಳು ಅಭಿವೃದ್ಧಿ ವಿರೋಧಿಗಳು ಎಂಬ ಹಣೆಪಟ್ಟಿ ಕಟ್ಟಿ ಅವರು ಜನತೆಯ ಪರವಾಗಿ ಕೇಳುವ ನ್ಯಾಯಯುತ ಪ್ರಶ್ನೆಗಳನ್ನುಅಪಹಾಸ್ಯ ಮಾಡುವವರನ್ನು ದೂರವಿಟ್ಟು ಹೋರಾಟ ಮಾಡುವುದು ಅನಿವಾರ್ಯ ಮತ್ತು ಅವಶ್ಯಕವಾಗಿದೆ.

ಸಾಕುಮಾಡಿ ಈ ಹುಚ್ಚು ಹುಂಬತನವನ್ನು. ಮಾನವನಿಂದ ಏನನ್ನೂ ಅಪೇಕ್ಷಿಸದೇ ಶಾಂತಳಾಗಿರುವ ಈ ಪ್ರಕೃತಿ ಮಾತೆಯನ್ನು ಅದೆಷ್ಟು ಕೆಣಕುವಿರಿ? ಕಣ್ಣೆದುರಿಗೆ ಕೊಡಗು ಕೇರಳ ಎಂಬ ಎರಡೆರೆಡು ನಿದರ್ಶನಗಳಿವೆ ಸಾಕಾಗದೇ?

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!