ಅಂಕಣ ಪ್ರಚಲಿತ

ಸಾಮಾಜಿಕ ಭದ್ರತೆಯೆಡೆಗೆ ಭರವಸೆಯ ಹೆಜ್ಜೆ ಆಯುಷ್ಮಾನ್ ಭಾರತ್  

ಭಾರತ ದೇಶಕ್ಕೂ ಪಾಶ್ಚ್ಯಾತ್ಯ ದೇಶಗಳಿಗೂ ಇಂದಿನ ದಿನದಲ್ಲಿ ಇರುವ ಪ್ರಮುಖ ವ್ಯತ್ಯಾಸ ಸೋಶಿಯಲ್ ಸೆಕ್ಯುರಿಟಿ. ಮುಂದುವರೆದ ದೇಶಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಎರಡೂ ಜನರಿಗೆ ಉಚಿತವಾಗಿ ಸಿಗುತ್ತದೆ. ಈ ಮಾತು ಅಮೆರಿಕಾ ದೇಶಕ್ಕೆ ಅನ್ವಯಿಸುವುದಿಲ್ಲ. ಜನ ಸಾಮಾನ್ಯ ತನ್ನ ಆರೋಗ್ಯದ ಖರ್ಚಿನ ಬಗ್ಗೆ ಹೆಚ್ಚು ಚಿಂತಿತನಾಗುವ  ಅವಶ್ಯಕತೆಯಿಲ್ಲ. ಸರಕಾರ ತನ್ನ ಪ್ರತಿಯೊಬ್ಬ ಪ್ರಜೆಯ ಆರೋಗ್ಯವನ್ನ ಕಾಪಾಡುವ ಮತ್ತು ಅದಕ್ಕೆ ಸಂಬಂಧಿಸಿದ ಖರ್ಚನ್ನ ಭರಿಸುವ ಯೋಜನೆಗಳನ್ನ ಜಾರಿಗೆ ತಂದಿವೆ. ಹೀಗಾಗಿ ಅಲ್ಲಿನ ಜನರ ಜೀವನದಲ್ಲಿ ಒಂದು ರೀತಿಯ ಭದ್ರತೆ ಇರುತ್ತದೆ. ಅಕಸ್ಮಾತ್ ಏನಾದರೂ ಆದರೆ ಸರಕಾರ ನನ್ನ ಬೆನ್ನಿಗಿದೆ; ನನ್ನ ಆರೋಗ್ಯದ ವೆಚ್ಚ ಕುಟುಂಬದ ಮೇಲೆ ಹೊರೆಯಾಗುವುದಿಲ್ಲ ಎನ್ನುವ ಆತ್ಮವಿಶ್ವಾಸ ಅಲ್ಲಿದೆ.  ಭಾರತದ ಕಥೆ ಏನು? ನಮ್ಮದು ಅತ್ಯಂತ ದೊಡ್ಡ ಸಮಾಜ. ಒಂದು ವರ್ಗ ಯೂರೋಪಿನ ಶ್ರೀಮಂತರೇ ನಾಚಬೇಕು ಅಷ್ಟು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇನ್ನೊಂದು ವರ್ಗ ಶಿಲಾಯುಗದ ಜನ ನೆನಪಿಗೆ ಬರುವಂತಹ ದಾರುಣ ಜೀವನ ಶೈಲಿಯಿಂದ ಇನ್ನೂ ಹೊರಬಂದಿಲ್ಲ. ಇಷ್ಟೊಂದು ಅಸಮಾನತೆ ಇರುವ ದೇಶವನ್ನ ಮುನ್ನಡೆಸುವುದು ಮತ್ತು ಆಯಾ ವರ್ಗದ ಜನರಿಗೆ ಬೇಕಾದ ಯೋಜನೆ ತಯಾರಿಸುವುದು ಸುಲಭದ ಮಾತಲ್ಲ. ಆ ನಿಟ್ಟಿನಲ್ಲಿ ಕೇಂದ್ರಸರಕಾರ ರಾಷ್ಟೀಯ ಸ್ವಾಸ್ಥ್ಯ ಬಿಮಾ ಯೋಜನಾ ಮತ್ತು ಸೀನಿಯರ್ ಸಿಟಿಜನ್ ಹೆಲ್ತ್ ಇನ್ಶೂರೆನ್ಸ್ ಸ್ಕೀಮ್ ಎನ್ನುವ ಎರಡು ಯೋಜನೆಯನ್ನ ಜಾರಿಗೊಳಿಸಿತ್ತ . ಆದರೆ ಇದು ಸಮಾಜದ ಬಹುಪಾಲು ಜನರನ್ನ ತಲುಪುವುದಿಲ್ಲ ಎಂದು ಮನಗಂಡು ಇತ್ತೀಚಿಗೆ ಅಂದರೆ ೧೪ ನೇ ಏಪ್ರಿಲ್ ೨೦೧೮ ರಂದು ಪ್ರಧಾನ್ ಮಂತ್ರಿ ಜನ್ ಆರೋಗ್ಯ ಯೋಜನಾ ಅಥವಾ ಆಯುಷ್ಮಾನ್ ಭಾರತ್ ಯೋಜನಾ ಎನ್ನುವ ಒಂದು ಹೊಸ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಯನ್ನ ಜಾರಿಗೆ ತಂದಿದೆ. ಈ ಯೋಜನೆ ೧೫ ನೇ ಆಗಸ್ಟ್ ೨೦೧೮ ರಿಂದ ಕಾರ್ಯರೂಪಕ್ಕೆ ಬಂದಿದೆ.

ಏನಿದು ? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ

ಮುಖ್ಯವಾಗಿ ಇಲ್ಲಿ ಎರಡು ಹಂತವಿದೆ. ಮೊದಲನೆಯದು, ನ್ಯಾಷನಲ್ ಹೆಲ್ತ್ ಪ್ರೊಟೆಕ್ಷನ್ ಸ್ಕೀಮ್. ಇದರಲ್ಲಿ ನೋಂದಾಯಿತ ರೋಗಿಗಳಿಗೆ ಐದು ಲಕ್ಷ ರೂಪಾಯಿಗಳವರೆಗೆ ಉಚಿತವಾಗಿ ಹಣಪಾವತಿ ಮಾಡದೆ ಅಂದರೆ ಕ್ಯಾಶ್ ಲೆಸ್ ಸೇವೆಯನ್ನ ನೀಡಲಾಗುತ್ತದೆ. ಎರಡನೆಯದು ವೆಲ್’ನೆಸ್ ಸೆಂಟರ್; ಇಲ್ಲಿ ರೋಗಿಗಳಿಗೆ ಬೇಕಾಗುವ ಪ್ರಾಥಮಿಕ ಸೇವೆಯನ್ನ ನೀಡಲಾಗುತ್ತದೆ.

ಈ ಸೇವೆಯನ್ನ ಪಡೆಯಲು ಮೊದಲು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಪ್ರಜೆಯ ಹಣಕಾಸು ಸ್ಥಿತಿಗತಿಯ ಆಧಾರದ ಮೇಲೆ ಈ ಸೌಲಭ್ಯವನ್ನ ನೀಡಲಾಗುತ್ತದೆ.

  • ಆಯುಷ್ಮಾನ್ ಭಾರತ್ ಯೋಜನೆ ಸೌಲಭ್ಯಗಳು ಫಲಾನುಭವಿಗಳು ಸಾಮಾನ್ಯ ದರ್ಜೆಯ ವಾರ್ಡ್’ಗಳಲ್ಲಿ ಶುಶ್ರೂಷೆ ಪಡೆಯಲಿದ್ದಾರೆ. ನೋಂದಣಿ ಶುಲ್ಕ, ವೈದ್ಯರ ಶುಲ್ಕ, ಶಸ್ತ್ರ ಚಿಕಿತ್ಸೆ, ಔಷಧಿಗಳು, ರೋಗಪತ್ತೆ ಪರೀಕ್ಷೆಗಳು  ವಿಮೆಯಡಿ ಸಿಗಲಿದೆ. ಶಸ್ತ್ರಚಿಕಿತ್ಸೆ ಹಾಗೂ ಇತರೆ ವೈದ್ಯಕೀಯ ಚಿಕಿತ್ಸಾ ಸೇವೆ ಸಿಗಲಿದ್ದು, ವಿಮೆ ಪಡೆದ ದಿನದಿಂದಲೇ ಎಲ್ಲಾ ಕಾಯಿಲೆಗಳಿಗೂ ಚಿಕಿತ್ಸೆ ಸಿಗಲಿದೆ. ದೀರ್ಘಕಾಲಿನ ರೋಗಗಳು, ಹೃದಯದ ಬೈಪಾಸ್ ಸರ್ಜರಿ, ಮಂಡಿ ಚಿಪ್ಪು ಅಳವಡಿಕೆ ಕಾಯಿಲೆಗಳಿಗೂ ಚಿಕಿತ್ಸೆ ಸಿಗಲಿದೆ.
  • ಆಯುಷ್ಮಾನ್ ಭಾರತ್ ಯೋಜನೆಯ ಸೌಲಭ್ಯ ಪಡೆಯಲು ಪಡಿತರ ಚೀಟಿ ಇರಬೇಕಾಗುತ್ತದೆ. ಈ ಯೋಜನೆಗೆ ಆಧಾರ್ ಕಾರ್ಡ್ ಕಡ್ಡಾಯ ಅಲ್ಲ. ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಚೀಟಿ ಯಾವುದಿದ್ದರೂ ಸಾಕು. ಕುಟುಂಬದ ಗಾತ್ರ ಹಾಗು  ವಯಸ್ಸಿನ  ಯಾವುದೇ ಮಿತಿ ಇರುವುದಿಲ್ಲ. ಫಲಾನುಭವಿಗಳಿಗೆ ಆಸ್ಪತ್ರೆಗೆ ಸಂಚರಿಸಲು ನಿಗದಿತ ಪ್ರಯಾಣಕ್ಕೆ ಭತ್ಯೆಯೂ ಸಿಗಲಿದೆ. ಒಮ್ಮೆ ನೋಂದಾಯಿಸಿದರೆ ಒಂದು ವರ್ಷದವರೆಗೆ ಸೌಲಭ್ಯವಿರುತ್ತದೆ.
  • ಪ್ರಸ್ತುತ ಯೋಜನೆಗೆ ನೋಂದಾಯಿಸಿಕೊಂಡಿರುವ ರಾಜ್ಯಗಳ ಆರೋಗ್ಯ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ ಫಲಾನುಭವಿಗಳು ಕೂಡ ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳಾಗಲಿದ್ದಾರೆ.

ಇಲ್ಲಿಯವರೆಗೆ ದೇಶದ ೩೩ ರಾಜ್ಯಗಳು ಮತ್ತು ಯೂನಿಯನ್ ಟೆರಿಟರಿಗಳು ಈ ಯೋಜನೆಯನ್ನ ಒಪ್ಪಿಕೊಂಡಿವೆ. ದೆಹಲಿ, ಒಡಿಶಾ ಮತ್ತು ತೆಲಂಗಾಣ ರಾಜ್ಯಗಳು ಈ ಯೋಜನೆಯನ್ನ ಇನ್ನು ತಮ್ಮದಾಗಿಸಿಕೊಂಡಿಲ್ಲ. ರಾಜ್ಯ ಸರಕಾರ ತನ್ನದೇ ಅದ ಆರೋಗ್ಯ ಯೋಜನೆ ಹೊಂದಿದ್ದರೆ ಆಯುಷ್ಮಾನ್ ಭಾರತ್ ಯೋಜನೆ ಹೊಂದುವುದು ಕಡ್ಡಾಯವಲ್ಲ.

ಈ ಯೋಜನೆಯ ಇನ್ನೊಂದು ಪ್ರಮುಖ ಅಂಶವೆಂದರೆ ಇಲ್ಲಿ ಕೇವಲ ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಸೇವೆಪಡೆಯಬೇಕೆಂಬ ಕಡ್ಡಾಯವಿಲ್ಲ. ಚಿಕಿತ್ಸೆಯನ್ನ ಖಾಸಗಿ ಆಸ್ಪತ್ರೆಯಲ್ಲೂ ಕೂಡ ಪಡೆಯಬಹುದು. ಸರಕಾರ ತನ್ನ ಆಸ್ಪತ್ರೆಗಳ ಗುಣಮಟ್ಟವನ್ನ ಹೆಚ್ಚಿಸಲು ಬೇಕಾದ ಎಲ್ಲಾ ಕಾರ್ಯವನ್ನೂ ಮಾಡುತ್ತಿದೆ. ಜೊತೆಗೆ ಖಾಸಗಿ ಆಸ್ಪತ್ರೆಗಳ ಜೊತೆಗೂ ಒಪ್ಪಂದ ಮಾಡಿಕೊಳ್ಳುತ್ತಿದೆ. ಹೀಗಾಗಿ ರೋಗಿಗೆ ಉತ್ತಮ ಚಿಕಿತ್ಸೆ ಮತ್ತು ಸೇವೆಯ ಭರವಸೆ ಹೆಚ್ಚಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಪಡೆಯುವಾಗ ಆಗುವ ಖರ್ಚಿನ ಅಂದಾಜು ಮೊದಲೇ ಮಾಡಿ ಸರಕಾರದಿಂದ ಅನುಮೋದನೆ ಪಡೆಯುವುದು ಅವಶ್ಯವಾಗಿದೆ.

ಆರೋಗ್ಯದಲ್ಲಿನ ಏರುಪೇರು ಮತ್ತು ಚಿಕಿತ್ಸೆ ಎರಡರ ನಡುವೆ ಹೆಚ್ಚು ಸಮಯ ಹಿಡಿದರೆ ಯೋಜನೆಯ ಉದ್ದೇಶ ಫಲಿಸುವುದಿಲ್ಲ. ಹೀಗಾಗಿ ಚಿಕಿತ್ಸೆ ಪಡೆವ ಆಸ್ಪತ್ರೆಗೆ ನೇರವಾಗಿ ಹಣ ಸಂದಾಯವಾಗುವ ವ್ಯವಸ್ಥೆಯನ್ನ ರಾಜ್ಯ ಸರಕಾರಗಳ ಸಹಯೋಗದೊಂದಿಗೆ ಮಾಡಲಾಗಿದೆ. ಇದೊಂದು ಬಹು ದೊಡ್ಡ ಯೋಜನೆಯಾಗಲಿದೆ.

 ಇದಕ್ಕೂ ಮುಂಚೆ ಅಂದರೆ ೨೦೦೮ರಲ್ಲಿ ರಾಷ್ಟೀಯ ಸ್ವಾಸ್ಥ್ಯ ಬಿಮಾ ಯೋಜನಾ ಎನ್ನುವ ಒಂದು ಯೋಜನೆಯನ್ನ ಜಾರಿಗೆ ತರಲಾಗಿತ್ತು. ಇದರಲ್ಲಿ ಸಮಾಜದಲ್ಲಿ ಗುರುತಿಸಲ್ಪಡದೆ ಇರುವ ಸೆಕ್ಟರ್ ಗಳಲ್ಲಿ ಕೆಲಸ ಮಾಡುವ ಜನರಿಗೆ ಮತ್ತು ಅವರ ಕುಟುಂಬಕ್ಕೆ ಆರೋಗ್ಯ ವಿಮೆಯನ್ನ ನೀಡಲಾಗುತಿತ್ತು. ೨೦೧೪ ರ ವೇಳೆಗೆ ಇದರಡಿಯಲ್ಲಿ ೩೭ ಮಿಲಿಯನ್ ಜನರನ್ನ ನೋಂದಾಯಿಸಿಕೊಳ್ಳಲಾಗಿದೆ. ಈ ಯೋಜನೆಯು ಕಾರ್ಮಿಕ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಮತ್ತು ಬಡತನದ ರೇಖೆಗಿಂತ ಕೆಳಗಿರುವ ಅಂದರೆ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರಜೆಗಳಿಗೆ ಮೂವತ್ತು ಸಾವಿರ ರೂಪಾಯಿ ಮೌಲ್ಯದವರೆಗೆ ಖರ್ಚು ಮಾಡುತಿತ್ತು. ಇದೀಗ ಇದನ್ನ ಆರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ. ಸೋಶಿಯಲ್ ಡೆವಲಪ್ಮೆಂಟ್ ಕೌನ್ಸಿಲ್ ೨೦೦೮ರಿಂದ ೨೦೧೪ರ ವೇಳೆಯಲ್ಲಿ ಇದರ ಕಾರ್ಯವನ್ನ ಗಮನಿಸಿ ನೋಡಿ, ಇದೊಂದು ನಪಾಸಾದ ಯೋಜನೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದೆ. ನೋಂದಾವಣಿಯಲ್ಲಿ ಮೋಸ ನಂತರ ಸರಿಯಾದ ಜನರನ್ನ ಗುರುತಿಸಿ ಅವರಿಗೆ ಬೇಕಾದ ಔಷಧ ಉಪಚಾರ ತಲುಪಿಸುವಲ್ಲಿ ಗೋಲ್ಮಾಲ್. ಹೀಗೆ ಹೆಜ್ಜೆ ಹೆಜ್ಜೆಗೂ ಯೋಜನೆಯಲ್ಲಿ ಸರಕಾರದ ಹಣವನ್ನ ಸರಿಯಾಗಿ ಬಳಸದೆ ಅದು ಅಪವ್ಯಯವಾಗಿದೆ ಎಂದು ಅಭಿಪ್ರಾಯ ಪಟ್ಟಿದೆ. ಯೋಜನೆಗಳನ್ನ ಘೋಷಣೆ ಮಾಡುವುದು ಮತ್ತು ಅದಕ್ಕೆ ಬೇಕಾದ ಹಣವನ್ನ ಸಂದಾಯ ಮಾಡುವುದು ಮಾತ್ರ ಮುಖ್ಯವಲ್ಲ ಅದು ಸರಿಯಾದ ರೀತಿಯಲ್ಲಿ ಅಂದು ಕೊಂಡ ದಾರಿಯಲ್ಲಿ ಸಾಗುತ್ತಿದೆಯೆ ಎನ್ನುವುದನ್ನ ಕೂಡ ನೋಡಬೇಕಾದ್ದು ಸರಕಾರದ ಕೆಲಸ.

ಕೊನೆಮಾತು: ಈ ಯೋಜನೆಯಿಂದ ೧೦ ಕೋಟಿ ಕುಟುಂಬದಲ್ಲಿ ಭರವಸೆಯ ಬೆಳಕು ಹರಿಯಲಿದೆ. ಒಂದು ಅಂದಾಜಿನ ಪ್ರಕಾರ ಇದರಿಂದ ೫೦ ಕೋಟಿ ಭಾರತೀಯರ ಬದುಕಿನಲ್ಲಿ ಆರೋಗ್ಯ ಭದ್ರತೆ ಬರಲಿದೆ. ಈಗಾಗಲೇ ಲಕ್ಷಕ್ಕೂ ಹೆಚ್ಚು ಜನ ಈ ಯೋಜನೆಯ ಫಲವನ್ನ ಪಡೆದಿದ್ದಾರೆ. ನವಂಬರ್ ೨೦೧೮ರ ಕೊನೆಯ ವೇಳೆಗೆ ಹತ್ತಿರತ್ತಿರ ಹತ್ತು ಲಕ್ಷ ನೋಂದಾವಣಿ ಈ ಯೋಜನೆಯಡಿಯಲ್ಲಿ ಆಗಿದೆ. ಈ ಯೋಜನೆಗೆ ಅಂತರರಾಷ್ಟ್ರಿಯ ಮಟ್ಟದಲ್ಲಿ ಮೋದಿಕೇರ್ ಎನ್ನುವ ಹೆಸರಿಟ್ಟಿದ್ದಾರೆ. ಈ ಯೋಜನೆ ಸಾಗಬೇಕಾದ ಹಾದಿ ಬಹಳವಿದೆ. ಆದರೆ ಸಾಗುತ್ತಿರುವ ದಾರಿ ಸರಿಯಾಗಿದೆ. ಸಾಮಾಜಿಕ ಭದ್ರತೆಯೆಡೆಗೆ ಒಂದು ಭರವಸೆಯ ಹೆಜ್ಜೆ ಇದಾಗಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!