ಚೊಕ್ಕಾಡಿ ಸುಳ್ಯದ ಒಂದು ಪುಟ್ಟ ಹಳ್ಳಿ. ಇಲ್ಲಿ ವರ್ಷದ ಆರು ತಿಂಗಳು ಬಸಿರಿನ ಹೆಂಗಸಿನ ಏದುಸಿರಿನಂತೆ ನದಿ-ತೊರೆಗಳು ಉಕ್ಕಿ ಹರಿದರೆ ಮಿಕ್ಕ ಆರು ತಿಂಗಳು ಅವು, ಪೋಷಣೆಯಿಲ್ಲದೆ ಸೊರಗಿದ ತೆಳು ಜಡೆಯಂತೆ ಕಾಣುತ್ತವೆ. ಕುಮಾರನ ಹೆಸರಿದ್ದರೂ ಇಲ್ಲಿನ ಬೆಟ್ಟ, ಹತ್ತಿ ಬರುವ ಚಾರಣಿಗರಿಗೆ ನೀರಿಳಿಸದಿದ್ದರೆ ಕೇಳಿ! ಇನ್ನು ಮಳೆಗಾಲದಲ್ಲಿ ಮುಗಿಲ ಮುಸುಕಿನ ಮರೆಯಲ್ಲಿ ಆಕಾಶ ಬಿಕ್ಕುತ್ತಿರಬೇಕು ಅನ್ನಿಸುವ ಗುಡುಗು, ಧೋ ಎನ್ನುತ್ತ ಸಶಬ್ದ ಸುರಿಯುವ ವರ್ಷಧಾರೆ, ಕಣ್ಣು ಹಾಯಿಸಿದಲ್ಲೆಲ್ಲ ಗಿಳಿ ಪಚ್ಚೆಯ ಪೈರು, ನೇಜಿ ನೆಡುತ್ತ ಹಾಡುವ ಗೊರಬು ಹೊತ್ತ ಮಹಿಳೆಯರು, ಮೈತುಂಬ ಮಕ್ಕಳನ್ನು ಹೊತ್ತ ಮಹಾಮಾತೆಯಂಥ ಹಲಸಿನ ಮರ, ಚಳಿಗಾಲದ ರಾತ್ರಿಯಡುಗೆಗೆಂದು ಭರಣಿಯಲ್ಲಿ ಕೂಡಿಟ್ಟ ಉಪ್ಪಿನಕಾಯಿ, ಉಪ್ಪು ನೀರಲ್ಲಿ ಬೇಯಿಸಿಟ್ಟ ಮಾವಿನಕಾಯಿ – ಇವೆಲ್ಲ, ಇನ್ನೂ ಕಾಣಲು ಸಿಗುವ ಈ ದೇಶದ ಸುಂದರ, ಪುಟ್ಟ, ಪ್ರಶಾಂತ ಹಳ್ಳಿ ಈ ಚೊಕ್ಕಾಡಿ. ಭಾರತದ ನೂರಾರು ಹಳ್ಳಿಗಳ ಪೈಕಿ ತಾನೂ ಒಂದೆಂಬಂತೆ ಬಾಳಿ ಬದುಕಿ ಮರೆತು ಹೋಗಲಿದ್ದ ಇದನ್ನು ತನ್ನ ಹೆಸರಲ್ಲಿ ಹೊತ್ತು ಸುಬ್ರಾಯ ಚೊಕ್ಕಾಡಿ ನಮಗೆ, ಮತ್ತು ಊರಿಗೆ ದೊಡ್ಡ ಉಪಕಾರ ಮಾಡಿದರು. ಕರಾವಳಿಯ ಕಡೆಯ ಮಚ್ಚಿನ, ಪೊಳಲಿ, ಉಜಿರೆ, ಬೊಳುವಾರು, ಕಡೆಂಗೋಡ್ಲು, ಮುಳಿಯ, ವಿಟ್ಲ ಮುಂತಾದ – ಸಾಧಾರಣವೆನಿಸಬಹುದಾಗಿದ್ದ ಊರುಗಳು ನಮಗೆ ಹೆಚ್ಚು ಹತ್ತಿರವಾದದ್ದು ಅವನ್ನು ತಮ್ಮ ಹೆಸರುಗಳಲ್ಲಿ ಹೆಮ್ಮೆಯಿಂದ ಧರಿಸಿದ ಅಸಾಧಾರಣ ಮನುಷ್ಯರಿಂದಲೇ ಅಲ್ಲವೆ? ಚೊಕ್ಕಾಡಿಯ ಸುಬ್ರಾಯರು ಅಂಥ ಒಬ್ಬ ಅಸಾಧಾರಣರು.
“ನಡುರಾತ್ರಿಯಲ್ಲಿ ಥಟ್ಟನೆಚ್ಚರವಾಯ್ತು
ಎಲ್ಲೋ ಹಕ್ಕಿಯ ಮರಿಗೆ ಚುಕ್ಕು ತಟ್ಟುವ ಸದ್ದು
ಮರಗಿಡಗಳಲ್ಲಿ ಚಿಗುರು ಒಡೆಯುವ ಸದ್ದು
ನೆಲದೊಡಲಿನಲಿ ಬೀಜವು ಬಿರಿದು ಮೊಳಕೆ ಮೂಡುವ ಸದ್ದು
ಮಲ್ಲಿಗೆಯ ಮೊಗ್ಗರಳಿ ಬೆಳದಿಂಗಳನು ಹೀರಿ
ಬೆಳ್ಳಗಾಗುವ ಸದ್ದು”
– ಇಂಥ ಸಾಲುಗಳನ್ನು ಚೊಕ್ಕಾಡಿ ಮಾತ್ರ ಬರೆಯುವುದಕ್ಕೆ ಸಾಧ್ಯ. ಹಳ್ಳಿಯ ಮನೆಯಲ್ಲಿ ನಡು ರಾತ್ರಿ ಎದ್ದರೆ ನರಿಗಳು ಊಳಿಡುವ ಸದ್ದು ಕೇಳುತ್ತದೇನೋ ಸಾಮಾನ್ಯರಿಗೆ! ಆದರೆ, ಮಲ್ಲಿಗೆ ಬೆಳ್ಳಗಾಗುವ ಸದ್ದು? ಅಭಿಜಾತ ಕವಿಗೆ ಮಾತ್ರ ಸಾಧ್ಯವಾಗಬಲ್ಲ ಸಂಗತಿ ಅದು.
ಚೊಕ್ಕಾಡಿಯವರು ಚೊಕ್ಕಾಡಿ ಬಿಟ್ಟು ಹೊರ ಬರಲಿಲ್ಲ. ತನ್ನ ಪದವಿಯನ್ನೂ ಅವರು ಆ ಊರಲ್ಲೇ ಉಳಿದು ಅಂಚೆ-ತೆರಪಿನ ಶಿಕ್ಷಣದ ಮೂಲಕ ಪಡೆದುಕೊಂಡರು. ಅವರ ತಂದೆ ಗಣಪಯ್ಯ ಯಕ್ಷಗಾನ ಭಾಗವತರು. ಊರೂರಿಗೆ ಪ್ರಯಾಣಿಸುತ್ತಿದ್ದವರು. ಯಕ್ಷಗಾನದ ಮನೆತನದವರಿಗೆ ಮನೆಯಲ್ಲಿ ಹಾಡು ಪುರಾಣಗಳಿಗೆ ಕೊರತೆಯಿರುವುದಿಲ್ಲ. ಹಾಗೆಯೇ ಭೂಮಂಡಲದ ಸಮಸ್ತ ವರ್ಣರಂಜಿತ ಸುದ್ದಿಯನ್ನು ಹಜಾರದಲ್ಲೇ ಕೂತು ಕೇಳುವ ಭಾಗ್ಯವೂ! ಹೀಗೆ ಯಕ್ಷಗಾನದ ಹಿನ್ನೆಲೆಯನ್ನು ಅದರ ಎಲ್ಲ ಭಾವ ಶ್ರೀಮಂತಿಕೆಯೊಂದಿಗೆ ಸಾಹಿತ್ಯಕ್ಕೆ ಬಳಸಿಕೊಂಡ ಚೊಕ್ಕಾಡಿ, ಅಂಥಾದ್ದೇ ಹಿನ್ನೆಲೆಯಿಂದ ಬಂದಿದ್ದ ಅಡಿಗರಿಗಿಂತ ಭಿನ್ನ ದಾರಿ ಹಿಡಿದದ್ದು ವಿಶೇಷ ಮತ್ತು ಕನ್ನಡಿಗರ ಭಾಗ್ಯ. ಹೇಳುವುದೆಲ್ಲವನ್ನೂ ವೇದಿಕೆ ಹತ್ತಿ ನಿಂತ ಮುತ್ಸದ್ಧಿಯ ಭಾಷಣದ ಶೈಲಿಯಲ್ಲೇ ಹೇಳಬೇಕೆ? ಅಕ್ಕಪಕ್ಕದಲ್ಲಿ ಕೂತ ಗೆಳೆಯರ ಸಂಗಡ ಮಾತಾಡುವ ಆಪ್ತತೆಯಲ್ಲಿ ಹೇಳಬಾರದೆ? ಚೊಕ್ಕಾಡಿಯವರ ಅನುಭವ, ಅನುಭಾವವೆಲ್ಲ ಈ ತಾರ್ಕಿಕ ಚೌಕಟ್ಟಿನಲ್ಲಿ ಮೈದಳೆದದ್ದು. ಅವರ ವ್ಯಕ್ತಿತ್ವದಂತೆಯೇ ಅವರ ಕಾವ್ಯವೂ ಪರಿಶುದ್ಧ ಮತ್ತು ಸುಲಭ ಗ್ರಾಹ್ಯ. ಯೋಚಿಸಿ ನೋಡಿದರೆ ಮೈ ಹರವಿ ನಿಂತ ಒಂದು ಮರ ಮತ್ತು ಅದರ ಕೊಂಬೆಯ ಮೇಲೆ ಕೂತ ಹಕ್ಕಿ – ಇವೆರಡನ್ನೇ ಇಟ್ಟುಕೊಂಡು ಅತ್ಯಂತ ಸಂಕೀರ್ಣ ಗ್ರಹಿಕೆಗಳನ್ನೂ ದಾಖಲಿಸಬಹುದು ಎಂದು ಚೊಕ್ಕಾಡಿ ಕವಿತೆಗಳ ಮೂಲಕ ತೋರಿಸಿಕೊಟ್ಟರು.
“ಹಾರಿ ಹೋಗುತ್ತವೆ ನಸುಕಿನಲ್ಲೇ ಹಕ್ಕಿಗಳು ಗಾಳಿ ಬೀದಿಯಲಿ
ಜಗತ್ತನ್ನೇ ಆವರಿಸಿಕೊಳ್ಳುತ್ತ
ಮರ ಮಾತ್ರ ಅಲ್ಲೆ ನಿಂತಿರುತ್ತದೆ ನೆಲದಲ್ಲಿ ಕಾಲೂರಿ, ದಿಗಂತದತ್ತ
ಕೊಂಬೆ ರೆಂಬೆಗಳ ಚಾಚಿ ಜಗವನ್ನು ಒಳಗೊಳ್ಳುತ್ತ”
– ಎಂದು ಬರೆದ ಚೊಕ್ಕಾಡಿ, ತಮ್ಮ ಬದುಕನ್ನು ಮರಕ್ಕೆ ಸಮೀಕರಿಸಿಕೊಂಡು ಬದುಕಿದರೆಂದು ಕಾಣುತ್ತದೆ. ಸ್ಥಾವರವಾಗಿ ನಿಂತರೂ ಮರ ಸುತ್ತಲಿನ ಜಗತ್ತಿನೊಂದಿಗೆ ಬೆರೆತಿರುತ್ತದೆ; ಅಲ್ಲಿಂದ ನಿರಂತರವಾಗಿ ತನಗೆ ಬೇಕಾದ್ದನ್ನು ಹೀರಿಕೊಳ್ಳುತ್ತದೆ; ಮಾತ್ರವಲ್ಲ ಅವನ್ನು ತನ್ನದೇ ವಿಶಿಷ್ಟ ರೀತಿಯಲ್ಲಿ ಮರಳಿ ಕೊಡುತ್ತದೆ ಎಂಬುದು ಅವರ ನಂಬಿಕೆ. ಕವಿತೆ ಹೀಗೆ ಮುಂದುವರಿಯುತ್ತದೆ:
‘’ಸಂಜೆ ಹಿಂದಿರುಗಿದ ಹಕ್ಕಿಗಳು ತೂಗು ಹಾಕುತ್ತವೆ ಮರಕ್ಕೆ ತಮ್ಮ
ಹಾಡುಗಳನ್ನು, ನೆಲ ಮುಗಿಲನೊಳಗೊಂಡ ಜಗದ ಪಾಡುಗಳನ್ನು
ಬೆಳಗೆದ್ದು ನೋಡಿದರೆ, ಮರವೋ ಮಿಟುಕಿಸುತ್ತದೆ – ಮೈ ತುಂಬಿರುವ
ಹೊಸ ಚಿಗುರು, ಹೂವು, ಹಣ್ಣುಗಳ ಕಣ್ಣುಗಳನ್ನು.”
ಸ್ಥಾವರದಂತೆ ಕಾಣುವ ಚಲನಶೀಲತೆ ಮತ್ತು ಎಲ್ಲ ಬಗೆಯ ಚಲನೆಯ ಸಾಧ್ಯತೆಯಿದ್ದೂ ತನ್ನ ಅಸ್ತಿತ್ವವನ್ನು ದಾಖಲಿಸಿಕೊಳ್ಳಲಾರದ ಜಂಗಮತೆಗಳ ತುಲನೆ ಅವರ ಕವಿತೆಗಳಲ್ಲಿ ಮತ್ತೆ ಮತ್ತೆ ಬರುತ್ತದೆ. ಇಡೀ ದೇಹ ಹೆಜ್ಜೆಯಂತೂರಿ ಸಾಗುವ ಮೀನು; ಆ ಗುರುತನೊಡನೆಯೇ ಒರೆಸಿ ಹಾಕುವ ನೀರು – ಎಂಬ ಸಾಲುಗಳಲ್ಲೂ ಮತ್ತೆ ಅದೇ ಜಿಜ್ಞಾಸೆ. ಯಾವುದು ಶಾಶ್ವತ, ಯಾವುದು ನಶ್ವರ?
ಸುಬ್ರಾಯ ಚೊಕ್ಕಾಡಿಯವರ ಬಗ್ಗೆ ಇಷ್ಟವಾಗುವ ಒಂದು ಸಂಗತಿಯೆಂದರೆ, ಅವರು ಅಡಿಗ, ಬೇಂದ್ರೆ, ಪುತಿನ, ಕೆಎಸ್‍ನ, ನಿಸಾರ್ ಅಹಮದ್ ಮುಂತಾದವರಂತೆ ಕಾವ್ಯಕ್ಕೆ ತನ್ನ ಜೀವನವನ್ನು ಕೊಟ್ಟು ಕೊಂಡರು. ಉಳಿದೆಲ್ಲವನ್ನು ಬರೆದು ನಡು ನಡುವೆ ಕಾವ್ಯ ಬರೆದವರು ಇದ್ದಾರೆ. ಆದರೆ, ಕಾವ್ಯವನ್ನೇ ಮುಖ್ಯ ಸಾಹಿತ್ಯೋದ್ಯೋಗ ಮಾಡಿಕೊಂಡವರಿಗೆ ಅದರ ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಕಷ್ಟವೆಂದು ಕಾಣುತ್ತದೆ. ತೆರೆ, ಬೆಟ್ಟವೇರಿದ ಮೇಲೆ, ಮೊನ್ನೆ ಸಿಕ್ಕವರು, ನಿಮ್ಮವೂ ಇರಬಹುದು, ಇದರಲ್ಲಿ ಅದು, ಇನ್ನೊಂದು ಬೆಳಗು, ಮಾಗಿಯ ಕೋಗಿಲೆ, ಹಾಡಿನ ಲೋಕ, ಬಂಗಾರದ ಹಕ್ಕಿ – ಹೀಗೆ ಅವರ ಲೇಖನಿಯಿಂದ ಬಂದ ಕಾವ್ಯ/ಗೀತಗಳ ಸಂಕಲನಗಳು ಹಲವು. ಚೊಕ್ಕಾಡಿಯ ಹಕ್ಕಿಗಳು – ಅವರ ಸಮಗ್ರ ಕಾವ್ಯ. ಅದರಲ್ಲಿ ಅನಂತಮೂರ್ತಿ ಬರೆಯುತ್ತಾರೆ: “ಚೊಕ್ಕಾಡಿಯವರ ಎಲ್ಲ ಪದ್ಯಗಳಲ್ಲೂ ಸ್ಪಷ್ಟತೆಗಾಗಿ ಕೆಲಸ ಮಾಡುವ ಕಸುಬುಗಾರಿಕೆ ಇರುತ್ತದೆ. ತಾನು ಹೇಳಿದ್ದು ಕೊನೆಯ ಪಕ್ಷ ತನಗಾದರೂ ಸ್ಪಷ್ಟವಾಗಿ ಇರಬೇಕೆಂದು ಬಯಸುವುದು ಶಿಷ್ಟಾಚಾರದ ಒಂದು ಅಗತ್ಯ ನಡವಳಿಕೆ ಎಂದು ನಾನು ತಿಳಿದಿದ್ದೇನೆ. ಚೊಕ್ಕಾಡಿ ಈ ಶಿಷ್ಟಾಚಾರವನ್ನು ಎಲ್ಲಿಯೂ ಬಿಡುವುದಿಲ್ಲ. ಇದಕ್ಕೆ ಕಾರಣ ಅವರಲ್ಲಿ ನಾವು ಕಾಣುವ ಎರಡು ದೊಡ್ಡ ಗುಣಗಳು: ವಿನಯ ಮತ್ತು ಪ್ರಾಮಾಣಿಕತೆ. ಈ ಎರಡು ಗುಣಗಳು ಇವೆ ಎಂದು ಗ್ಯಾರಂಟಿ ಆದ ಮೇಲೆಯೇ ನಾವು ಕವಿಯನ್ನು ನಮ್ಮ ಒಳಗಿಂದ ಆಲಿಸಲು ತಯಾರಾಗುತ್ತೇವೆ.”
ಬಹುಶಃ ಈ ವಿನಯ ಮತ್ತು ಪ್ರಾಮಾಣಿಕತೆಯನ್ನು ಕಳೆದುಕೊಳ್ಳಬಾರದೆಂಬ ಎಚ್ಚರಕ್ಕೋ ಏನೋ, ಅವರು ಎಂದೂ ನಗರಕೇಂದ್ರಿತವಾಗಲಿಲ್ಲ. ಬೆಂಗಳೂರಿನ ಅಪಾರ್ಟ್‍ಮೆಂಟಿನಲ್ಲಿ ಕೂತು ಹಳ್ಳಿಗಾಡಿನ ನೆನಪುಗಳ ಬಗ್ಗೆ ಬರೆಯುವವರ ಖೊಟ್ಟಿ ಭಾವುಕತೆಗಳನ್ನು ಮೀರಬೇಕೆಂದೇ ಬಹುಶಃ ಅವರು ವರ್ಡ್ಸ್’ವರ್ತ್‍ನಂತೆ ಹಳ್ಳಿಯನ್ನು ಅಪ್ಪಿಕೊಂಡು, ಹಳೆ ನೆನಪುಗಳನ್ನು ಒಕ್ಕಿ ತೆಗೆಯುತ್ತ ಬರೆದರು. ಸುಮಾರು ನಾಲ್ಕು ದಶಕಗಳ ಕಾಲ ಅವರು ಸುಳ್ಯ, ಪೈಲೂರು, ಕುಕ್ಕುಜಡ್ಕಗಳ ಶಾಲೆಗಳಲ್ಲಿ ಕನ್ನಡ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿದರು. ಹಳ್ಳಿಯ ಪರಿಸರದಲ್ಲಿ ಕಾವ್ಯ ಜಗತ್ತನ್ನು ಅರಳಿಸಿರುವ ಚೊಕ್ಕಾಡಿ ಮತ್ತು ಕಾಂತಾವರಗಳೇ ಸದ್ಯಕ್ಕೆ ಕನ್ನಡದ ಎರಡು ಕಣ್ಣುಗಳು ಎನ್ನಬೇಕು.
ಕನ್ನಡದ ಸುಗಮ ಗೀತೆಗಳನ್ನು ಮೆಚ್ಚುವ ಸಹೃದಯರನ್ನು ಸದಾ ಕಾಡುವ ಎರಡು ನವಿರಾದ ಕವಿತೆಗಳನ್ನು ಬರೆದವರು ಚೊಕ್ಕಾಡಿ. ಒಂದು – ಎಂಥಾ ದಿನಗಳವು ಮರೆಯಾಗಿ ಹೋದವು, ಮಿಂಚಂಥ ಕ್ಷಣಗಳವು ಇನ್ನೆಂದೂ ಬಾರವು – ಎಂಬ ಕವಿತೆ. ಏಕಾಂತ ಹೆಪ್ಪುಗಟ್ಟಿದ ಸಂಜೆ ಬಾಲ್ಕನಿಯಲ್ಲೋ ಹಳ್ಳಿಯ ಅನಾಥ ಜಗಲಿಯಲ್ಲೋ ವಿಶ್ರಾಂತ ಜೀವನಕ್ಕೆ ಸಂದಿರುವ ರಾಟೆಯ ಪಕ್ಕದ ಬಾವಿ ಕಟ್ಟೆಯಲ್ಲೋ ಕೂತು ಈ ಕವಿತೆಯನ್ನು ಓದುವುದು, ಇಲ್ಲವೇ ಸಂಗೀತಾ ಕಟ್ಟಿಯವರ ಧ್ವನಿಯಲ್ಲಿ ಕೇಳುವುದು ಒಂದು ವಿಚಿತ್ರ ಅನುಭವ.
“ಸುರಿವ ಮಳೆಗೆ ದೋಣಿಯನ್ನು ತೇಲಿ ಬಿಟ್ಟೆವು,
ಚಿಟ್ಟೆ ಹೂವ ಗೊಂದಲದಲಿ ನಕ್ಕು ನಲಿದೆವು,
ಮುಗಿಲ ಬಣ್ಣ ಚಂದ್ರ ತಾರೆ ಹಾಡ ಹಿಡಿದೆವು
ಮುಂದೆ ನುಗ್ಗಲೇನೋ ಬಡಿದು ಕೆಳಗೆ ಕುಸಿದೆವು”
ಸಂಜೆಯ ತಂಗಾಳಿಯ ಅನುಭೂತಿ ಕೊಡುವ ಈ ಸಾಲುಗಳಿಗೆ ಯಾವ ವಿಮರ್ಶೆಯ ಬಹುಪರಾಕುಗಳ ಹಂಗೂ ಇಲ್ಲ. ಚೊಕ್ಕಾಡಿಯವರು ಬರೆದ ಇನ್ನೊಂದು ಸೊಗಸಾದ ಗೀತೆ – ಮುನಿಸು ತರವೇ ಮುಗುದೆ, ಹಿತವಾಗಿ ನಗಲು ಬಾರದೆ? – ಎಂಬುದು. ಬಹುಶಃ ಇದನ್ನು ಒಮ್ಮೆಯಾದರೂ ಕೇಳಿ ಕಣ್ಮುಚ್ಚಿ ತನ್ನ ಇನಿಯೆಯನ್ನು ನೆನೆಯದ ಕನ್ನಡಿಗ ಇರಲಾರ.
ಚೊಕ್ಕಾಡಿಯವರು ಇಂಥ ಗೇಯ ಕವಿತೆಗಳನ್ನು ಬರೆದರೆಂದೋ ಏನೋ ಅವರನ್ನು ನವ್ಯ ಕಾವ್ಯದ ಬ್ರಿಗೇಡ್‍ನಿಂದ ಹೊರಗಿಡಲಾಯಿತು. ಅಕ್ಷರ ಹೊಸ ಕಾವ್ಯದಲ್ಲಿ ಅವರಿಗೆ ಸ್ಥಾನ ಸಿಕ್ಕಲಿಲ್ಲ. ಚೊಕ್ಕಾಡಿ ಈ ಪಂಥಭೇದವನ್ನು ಜಾಡಿಸಲೋ ಎಂಬಂತೆ ಒಂದು ತಿಳಿ ಪದ್ಯವನ್ನೂ ಬರೆದರು. ಅದರ ಎರಡು ಚರಣಗಳು ಹೀಗಿವೆ:
“ಕವೀಂತಂದ್ರೆ ಹಾಕ್ಕೊಂಡ್ ಜುಬ್ಬಾ
ಚಷ್ಮಾ, ಸಿಗರೇಟ್ ಡಬ್ಬಾ
ತಾರೆಗಳನ್ನ ಎಣಿಸ್ತಿರ್ಬೇಕು
ಏರಿಸ್ಕೊಂಡು ಹುಬ್ಬ.
ಕವೀಂತಂದ್ರೆ ಕೊರೀತಿರ್ಬೇಕು
ಕಾಮೂ ಕಾಫ್ಕಾ ಬ್ಲೇಕು
ಪ್ರತಿಮೆ ಪ್ರತೀಕ ಜೀವನಮೌಲ್ಯ
ಎಲ್ಲೂ ಹಾಕದೆ ಬ್ರೇಕು.”
1975ರ ಎಮರ್ಜೆನ್ಸಿ ಸಮಯದಲ್ಲಿ ಎಲ್ಲ ಪತ್ರಿಕೆಗಳ ಮೇಲೆ ಸರಕಾರದ ಕಾಕ ದೃಷ್ಟಿ ಬಿದ್ದು, ಆಜಾದಿ ಬೇಕೆಂದವರೆಲ್ಲ ಸೆರೆಮನೆಯ ಹಿಂದೆ ತಳ್ಳಲ್ಪಟ್ಟಾಗ ಕರಾವಳಿಯ ಈ ಪುಟ್ಟ ಹಳ್ಳಿಯಲ್ಲಿ “ಅಜ್ಞಾತ ಪರ್ವ” ಎಂಬ ಪತ್ರಿಕೆಯನ್ನು ಭೂಗತವಾಗಿದ್ದುಕೊಂಡೇ ನಡೆಸಿ ಮನೆ ಮನೆಗೆ ಹಂಚಿ ಜನರನ್ನು ಸಂಘಟಿಸಿದ್ದ ಚೊಕ್ಕಾಡಿ ಒಂದು ಕಾಲದ ಕ್ರಾಂತಿಕಾರಿಯೂ ಹೌದು! ಆದರೆ, ಅಲ್ಲಿಂದೀಚೆಗೆ ನೇತ್ರಾವತಿಯಲ್ಲಿ ಸಾಕಷ್ಟು ನೀರು ಹರಿದಿದೆ. ಹದಿ ಹರೆಯದ ಬಿಸಿರಕ್ತದ ಚೊಕ್ಕಾಡಿ ಈಗ ಮೆತ್ತಗಾಗಿದ್ದಾರೆ. ಯಾವುದೇ ವಿವಾದಗಳನ್ನು ಮೈಮೇಲೆಳೆದುಕೊಳ್ಳದೆ ಐದು ದಶಕಗಳಿಂದ ಬೆಟ್ಟದಲ್ಲಿ ಕೂತ ಯೋಗಿಯ ನಿಷ್ಠೆಯಲ್ಲಿ ಕಾವ್ಯೋದ್ಯೋಗವನ್ನು ಮಾಡಿಕೊಂಡು ಬಂದಿದ್ದಾರೆ. ಚೊಕ್ಕಾಡಿಯ ಮರ, ಚೊಕ್ಕಾಡಿಯ ಹಕ್ಕಿ ಅವರ ಕಾವ್ಯದಲ್ಲಿ ದಿನ ದಿನವೂ ನವಾವತಾರ ಹೊತ್ತು ಬರುತ್ತಿವೆ, ಹೊಸ ಅರ್ಥ ಹೊತ್ತು ತರುತ್ತಿವೆ. ಈ ಹಕ್ಕಿ ಹೀಗೆಯೇ ಚಿಲಿಪಿಲಿಗುಟ್ಟುತ್ತ ನಮ್ಮನ್ನು ಎಚ್ಚರವಾಗಿಟ್ಟಿರಲಿ.
ಚಿತ್ರ: ಶಿವಸುಬ್ರಹ್ಮಣ್ಯ