Featured ಅಂಕಣ

ದೇಶದ ಉಳಿವಿಗಾಗಿ ನೆತ್ತರ ಸಂಬಂಧ ಕತ್ತರಿಸಿಕೊಂಡ ವಿಜಯಲಕ್ಷ್ಮಿ ಪಂಡಿತ್ – ತೆರೆಮರೆಗೆ ಸರಿದು ಐವತ್ತು ವರ್ಷ

ಶ್ರೀಮತಿ ಗಾಂಧಿಯವರ ಬಗ್ಗೆ ನಿಮ್ಮ ಅಭಿಪ್ರಾಯ ಏನು? – ಪತ್ರಕರ್ತ ಆಕೆಯ ಬಳಿ ಕೇಳಿದ. ಉತ್ತರಿಸಲಿದ್ದ ಆಕೆಗೆ 78ರ ವೃದ್ಧಾಪ್ಯ. ಬೆಳ್ಳಿಗೂದಲು. ನೆರಿಗೆಗಟ್ಟಿದ ಹಣೆ. ಪುಟ್ಟ ಕಣ್ಣು. ಕುಗ್ಗಿದ ದೇಹ. ಆದರೆ ಆಕೆಯ ಉತ್ತರದಲ್ಲಿ ಅಂಥ ವೃದ್ಧಾಪ್ಯದ ಲಕ್ಷಣಗಳೊಂದೂ ಇರಲಿಲ್ಲ. ಅತ್ಯಂತ ಖಚಿತ ಧ್ವನಿಯಲ್ಲಿ, ಯಾವ ನಡುಕವೂ ಇಲ್ಲದೆ ಆ ವೃದ್ಧೆ ಹೇಳಿದರು: “ಆಕೆ ಅಧಿಕಾರಕ್ಕೆ ಮರಳುವುದನ್ನು ಬಿಟ್ಟು ಮತ್ತ್ಯಾವುದನ್ನಾದರೂ ಯೋಚಿಸುತ್ತಿದ್ದಾಳೆಂದು ನನಗನ್ನಿಸುವುದಿಲ್ಲ. ಆಕೆ ತನ್ನನ್ನು ತಾನು ಆರಾಧಿಸಿಕೊಳ್ಳುವ ಸ್ವರತಿಸಂಪ್ರೀತೆ. ಆ ಸ್ವಮೋಹವೇ ಎಲ್ಲ ತೊಂದರೆಗಳಿಗೂ ಕಾರಣ. ಅಧಿಕಾರಪೀಠದಿಂದ ಕೆಲವೇ ಕೆಲವು ದಿನಗಳ ಕಾಲವೂ ಆಕೆಗೆ ದೂರ ಉಳಿಯುವುದು ಸಾಧ್ಯವಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಆಕೆಯ ಬಳಿ ಹೆಚ್ಚು ಗೆಳೆಯರಿಲ್ಲ. ಆದರೂ ಯಾವುದೇ ಪರಿಸ್ಥಿತಿಯಲ್ಲೂ ತಗ್ಗಿ ಬಗ್ಗಿ ನಡೆಯುವ ಜಾಯಮಾನ ಆಕೆಯದಲ್ಲ. ನೆಹರೂ ಆಕೆಯನ್ನು ಹೀಗೆ ಬೆಳೆಸಿದರೆಂಬುದನ್ನು – ಆಕೆಯ ಬಾಲ್ಯವನ್ನು ತುಂಬ ಹತ್ತಿರದಿಂದ ನೋಡಿದವಳಾಗಿ – ನನಗೆ ಒಪ್ಪುವುದು ಕಷ್ಟವಾಗುತ್ತದೆ. ನೆಹರೂ ಮಾತನ್ನು ಆಕೆ ಕೇಳುತ್ತಿದ್ದಳು ಎಂದು ನನಗನ್ನಿಸುವುದಿಲ್ಲ. ಆಕೆಯನ್ನು ತರಬೇತಿಗೊಳಿಸುವ ವ್ಯಕ್ತಿತ್ವ ನೆಹರೂಗಿರಲಿಲ್ಲ; ಯಾರಿಂದಾದರೂ ತರಬೇತಿ ಪಡೆದು ಬದಲಾಗುವ ವ್ಯಕ್ತಿತ್ವ ಆಕೆಯದ್ದೂ ಆಗಿರಲಿಲ್ಲ. ಎಮರ್ಜೆನ್ಸಿಯ ನಂತರ ಹೊಸ ಸರಕಾರ ಅಧಿಕಾರಕ್ಕೆ ಬಂದಾಗ ಆಕೆ ಹೇಗೆ ನಡೆದುಕೊಂಡಳೆಂಬುದನ್ನೂ ಈ ಸಂದರ್ಭದಲ್ಲಿ ಗಮನಿಸಬಹುದು. ಆಕೆ ಹೊಸ (=ಜನತಾ) ಸರಕಾರವನ್ನು ಕೆಣಕಿದಳು. ಆಕೆಯ ವರ್ತನೆಯ ಹಿಂದಿನ ಮರ್ಮವನ್ನು ಅರ್ಥ ಮಾಡಿಕೊಳ್ಳದ ಸರಕಾರ, ಆಕೆಯನ್ನು ಬಂಧಿಸಿ ಎಡವಿತು. ಬಂಧಿಸಿದ್ದು ಕೂಡ ಯಾವ ಕಾರಣಕ್ಕಾಗಿ? ಎಮರ್ಜೆನ್ಸಿಯಲ್ಲಿ ಆಕೆ ಮಾಡಿದ ತಪ್ಪುಗಳಿಗಾಗಿ ಅಲ್ಲ! ಸರಕಾರದಲ್ಲಿ ಆಕೆ ನಡೆಸಿದ ಭ್ರಷ್ಟಾಚಾರದ ಕಾರಣಕ್ಕಾಗಿ ಮಾತ್ರ! ತನ್ನ ಸೆರೆವಾಸವನ್ನು ಕೂಡ ರಾಜಕೀಯದ ಏಣ ಯ ಮೆಟ್ಟಿಲುಗಳಾಗಿ ಮಾಡಿಕೊಳ್ಳುವುದು ಹೇಗೆಂಬುದು ಆಕೆಗೆ ಗೊತ್ತು. ಆಕೆ ಈ ಅವಕಾಶವನ್ನು ಉಪಯೋಗಿಸಿಕೊಂಡೇ ತೀರುತ್ತಾಳೆ.”

ಪತ್ರಕರ್ತನ ಪ್ರಶ್ನೆಗೆ ಹಾಗೆ ಉತ್ತರಿಸಿದ್ದು ನೆಹರೂ ಸೋದರಿ, ಇಂದಿರೆಯ ಅತ್ತೆ, ವಿಜಯಲಕ್ಷ್ಮಿ ಪಂಡಿತ್. ಏನನ್ನು ಆಕೆ ಭವಿಷ್ಯದಲ್ಲಿ ನಡೆಯಬಹುದೆಂದು ಊಹಿಸಿದ್ದರೋ ಅದು ನಂತರದ ಎರಡು ವರ್ಷಗಳಲ್ಲಿ ನಡೆದೇ ನಡೆಯಿತು. 1980ರ ಚುನಾವಣೆಯಲ್ಲಿ ಇಂದಿರಾ ಪ್ರಚಂಡ ಬಹುಮತದಿಂದ ಗೆದ್ದುಬಂದು ಮತ್ತೆ ಪ್ರಧಾನಿ ಗದ್ದುಗೆಯಲ್ಲಿ ಕೂತರು. ಇಂದಿರೆಯನ್ನು ಬಂಧಿಸಿದ್ದ ಜನತಾ ಸರಕಾರ ತನ್ನ ತಪ್ಪಿಗೆ ತೆತ್ತ ಬೆಲೆ ದೊಡ್ಡದೇ.

ಇಂದು ಕಾಂಗ್ರೆಸ್‍ನ ಯಾವುದೇ ಬ್ಯಾನರುಗಳನ್ನು ನೋಡಿ. ಅಲ್ಲಿ ನೆಹರೂ, ಇಂದಿರಾ, ರಾಜೀವ್, ಸೋನಿಯಾ ಮತ್ತು ಆ ವಂಶದ ಈಗಿನ ಮಹಾರಾಜ ರಾಹುಲ್‍ಗೆ ಮಾತ್ರ ಸ್ಥಾನ. ತೀರಾ ಇತ್ತೀಚೆಗೆ, ಕಾಂಗ್ರೆಸ್ ಮಧ್ಯಪ್ರದೇಶದ ಚುನಾವಣಾ ಪ್ರಚಾರ ಸಭೆಗಳಲ್ಲಿ ನೇತಾಡಿಸುತ್ತಿರುವ ಬ್ಯಾನರ್‍ಗಳಲ್ಲಿ ಶಾಸ್ತ್ರೀಜಿ, ಸರ್ದಾರ್ ಪಟೇಲ್, ಡಾ. ಅಂಬೇಡ್ಕರ್ ಮತ್ತು ನೇತಾಜಿಗೆ ಕೂಡ ಸ್ಥಾನ ಕಲ್ಪಿಸಿದೆ! ಏನೇ ಆದರೂ ಅದು ನೆಹರೂ ಅವರ ಖಾಸಾ ಸೋದರಿಯಾಗಿದ್ದ ಮತ್ತು ಕಾಂಗ್ರೆಸ್‍ನೊಳಗಿದ್ದೂ ರೆಬೆಲ್ ಆಗಿದ್ದ ವಿಜಯಲಕ್ಷ್ಮಿ ಪಂಡಿತ್ ಅವರಿಗೆ ಮಾತ್ರ ಸ್ಥಾನ ಕಲ್ಪಿಸಲಾರದು. ಹಾಗೆ ನೋಡಿದರೆ ಇಡೀ ನೆಹರೂ ಕುಟುಂಬದಲ್ಲಿ ರಾಜಕೀಯ ಮುತ್ಸದ್ದಿ ಎಂದು ಹೇಳಬಹುದಾಗಿದ್ದ ಏಕೈಕ ಅರ್ಹವ್ಯಕ್ತಿ ವಿಜಯಲಕ್ಷ್ಮಿ ಮಾತ್ರ ಎಂಬುದು ವಿಚಿತ್ರ, ಸತ್ಯ.

ವಿಜಯಲಕ್ಷ್ಮಿ ಹುಟ್ಟಿದ್ದು 1900ರಲ್ಲಿ. ಆಕೆಗೂ ಅಣ್ಣ ಜವಾಹರ್’ಗೂ 11 ವರ್ಷಗಳ ಅಂತರ. ನೆಹರೂರಂತೆ ವಿಜಯಲಕ್ಷ್ಮಿಯ ಶಿಕ್ಷಣದ ಗ್ರಾಫ್‍ನಲ್ಲಿ ಅಸ್ಪಷ್ಟತೆಗಳಿರಲಿಲ್ಲ. ಶಾಲೆ-ಕಾಲೇಜುಗಳ ಶಿಕ್ಷಣ ಮುಗಿದ ಮೇಲೆ ತನ್ನ 21ನೆಯ ವಯಸ್ಸಿನಲ್ಲಿ ಆಕೆ ಮುಂಬೈಯಲ್ಲಿ ಪ್ರಸಿದ್ಧ ವಕೀಲರಾಗಿ ಹೆಸರಾಗಿದ್ದ ಮತ್ತು ವಕೀಲಿಕೆ ಜೊತೆಗೇ ಸಾಹಿತ್ಯದಲ್ಲೂ ಆಸಕ್ತಿಯಿದ್ದ ರಂಜಿತ್ ಸೀತಾರಾಮ್ ಪಂಡಿತರನ್ನು ಮದುವೆಯಾದರು. ಹುಟ್ಟಿದ ಮನೆ ಮತ್ತು ಮದುವೆಯಾಗಿ ಸೇರಿದ ಮನೆ ಎರಡೂ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿದ್ದವಾದ್ದರಿಂದ ಸಹಜವಾಗಿಯೇ ಆಕೆಗೆ ರಾಜಕೀಯಾಸಕ್ತಿಗಳಿದ್ದವು. 1937ರಲ್ಲಿ, ಕೇವಲ 37 ವರ್ಷ ವಯಸ್ಸಿನ ವಿಜಯಲಕ್ಷ್ಮಿ, ಆ ಕಾಲದಲ್ಲಿ ಪ್ರತಿಷ್ಠಿತ ರಾಜ್ಯವಾಗಿದ್ದ ಯುನೈಟೆಡ್ ಪ್ರಾವಿನ್ಸಸ್ (ಈಗಿನ ಉತ್ತರ ಪ್ರದೇಶ)ನಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಶಾಸಕಿಯಾಗಿ ಗೆದ್ದುಬಂದರು. ಮಾತ್ರವಲ್ಲ ಎರಡೆರಡು ಖಾತೆಗಳನ್ನು ನಿಭಾಯಿಸುವ ಕ್ಯಾಬಿನೆಟ್ ದರ್ಜೆಯ ಸಚಿವೆಯೂ ಆದರು. ಭಾರತದಲ್ಲಿ ಚುನಾಯಿತ ಸರ್ಕಾರವೊಂದರಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ ಮೊದಲ ಮಹಿಳೆಯೆಂಬ ಹೆಗ್ಗಳಿಕೆ ಆಕೆಯದಾಯಿತು.

ಆದರೆ, ಒಲಿದುಬಂದ ಸಚಿವ ಸ್ಥಾನಕ್ಕೆ ದೀರ್ಘಾಯುಷ್ಯವಿರಲಿಲ್ಲ. 1939ರಲ್ಲಿ, ಬ್ರಿಟಿಷ್ ಸರಕಾರ, ಭಾರತೀಯರ ಇಚ್ಛೆಗೆ ವಿರುದ್ಧವಾಗಿ ಭಾರತೀಯರನ್ನು ಎರಡನೆ ಮಹಾಯುದ್ಧದಲ್ಲಿ ತೊಡಗಿಸಿಕೊಂಡಾಗ ಅದನ್ನು ಪ್ರತಿಭಟಿಸಿ ಯುನೈಟೆಡ್ ಪ್ರಾವಿನ್ಸಸ್‍ನ ರಾಜ್ಯ ಸಾಮೂಹಿಕ ರಾಜೀನಾಮೆಯಿತ್ತು ಬರಖಸ್ತಾಯಿತು. ಸರಕಾರ ವಿಸರ್ಜನೆಯಾದ ಬಳಿಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಪಂಡಿತ್‍ರನ್ನು 1940ರಲ್ಲಿ ಬಂಧಿಸಲಾಯಿತು. ಕ್ವಿಟ್ ಇಂಡಿಯಾ ಚಳವಳಿಯ ಪ್ರಖರತೆ ತೀವ್ರವಾಗಿದ್ದ ಸಂದರ್ಭದಲ್ಲಿ ಮತ್ತೊಮ್ಮೆ ಆಕೆಯನ್ನು (ಈ ಸಲ, ಆಕೆಯ ಪತಿಯನ್ನೂ ಸೇರಿಸಿ) ಎರಡು ವರ್ಷಗಳ ಕಾಲ ಸೆರೆಯಲ್ಲಿಡಲಾಯಿತು. 1945ರಲ್ಲಿ ವಿಜಯಲಕ್ಷ್ಮಿ ಹಲವಾರು ಸ್ವಾತಂತ್ರ್ಯ ಹೋರಾಟಗಾರರ ನಿಯೋಗ ಕಟ್ಟಿಕೊಂಡು ಅಮೆರಿಕೆಗೆ ಹೋಗಿ ಅಲ್ಲಿ ನಡೆಯುತ್ತಿದ್ದ ಪೆಸಿಫಿಕ್ ರಿಲೇಷನ್ಸ್ ಕಾನ್ಫರೆನ್ಸ್ ಎಂಬ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದರು. ಭಾರತವಿರಲಿ ಯಾವುದೇ ವಸಾಹತು ಇರಲಿ, ಅವುಗಳನ್ನು ಪ್ರತಿನಿಧಿಸಿ ವಿಶ್ವಸಂಸ್ಥೆಯಲ್ಲಿ ಮಾತಾಡುವ ಬಿಳಿಯರಿಗೆ ವಸಾಹತುಗಳಲ್ಲಿ ಆಳಿಸಿಕೊಳ್ಳುತ್ತಿರುವವರ ದುಃಖ ಹೇಗೆ ಅರ್ಥವಾಗಲು ಸಾಧ್ಯ ಎಂದು ಪ್ರಶ್ನಿಸಿದ ಗಟ್ಟಿಗಿತ್ತಿ ಪಂಡಿತ್.

ಭಾರತ ಸ್ವತಂತ್ರಗೊಂಡ ಮೇಲೆ ವಿಜಯಲಕ್ಷ್ಮಿ ಪಂಡಿತ್ ಮೊದಲು ಸೋವಿಯೆಟ್ ರಷ್ಯಕ್ಕೆ (1947-49), ನಂತರ ಯುಎಸ್‍ಎ ಮತ್ತು ಮೆಕ್ಸಿಕೋಗಳಿಗೆ (1949-51) ಭಾರತದ ರಾಯಭಾರಿಯಾಗಿ ಹೋದರು. 1953ರಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯಸಭೆಯ ಅಧ್ಯಕ್ಷತೆ ವಹಿಸುವ ಮೂಲಕ, ಆ ಸ್ಥಾನ ನಿಭಾಯಿಸಿದ ಮೊದಲ ಮಹಿಳೆ ಎಂಬ ಗೌರವಕ್ಕೂ ಪಾತ್ರರಾದರು. 1954ರಿಂದ 61ರವರೆಗೆ ಯುನೈಟೆಡ್ ಕಿಂಗ್‍ಡಂಗೆ ಭಾರತದ ಹೈ ಕಮಿಷನರ್ ಆಗಿ ಕಾರ್ಯನಿಭಾಯಿಸಿದರು. ನಡುವೆ ಮೂರು ವರ್ಷ ಸ್ಪೇನ್‍ಗೆ ಭಾರತದ ರಾಯಭಾರಿಯಾಗಿದ್ದರು. 60ರ ದಶಕದಲ್ಲಿ ವಿದೇಶಾಂಗ ವ್ಯವಹಾರಗಳಿಂದ ನಿವೃತ್ತರಾಗಿ ಭಾರತಕ್ಕೆ ವಾಪಸಾದ ಪಂಡಿತ್, 62ರಿಂದ 64ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದರು. 64ರಲ್ಲಿ ನೆಹರೂ ತೀರಿಕೊಂಡ ಮೇಲೆ ರಾಜಕೀಯ ಪ್ರವೇಶ ಮಾಡಿ, ನೆಹರೂ ಪ್ರತಿನಿಧಿಸುತ್ತಿದ್ದ ಫೂಲ್‍ಪುರ್ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು (ಬಹುತೇಕ ಅನುಕಂಪದ ಅಲೆಯಲ್ಲಿ) ಗೆದ್ದುಬಂದು ಸಂಸತ್ತು ಪ್ರವೇಶಿಸಿದರು. ಪಂಡಿತ್, ರಾಷ್ಟ್ರೀಯ ರಾಜಕಾರಣಕ್ಕೆ ಇಳಿದದ್ದು ಆಕೆಯ ಸೋದರಸೊಸೆ ಇಂದಿರೆಗೆ ಮಾತ್ರ ಸರಿಬೀಳಲಿಲ್ಲ. ಇಬ್ಬರ ನಡುವೆ ಕೋಳಿಜಗಳ, ಶೀತಲಸಮರ ಶುರುವಾದವು. ತನ್ನ ಸೋದರತ್ತೆಯನ್ನು ಶತಾಯಗತಾಯ ರಾಜಕೀಯದಿಂದ ದೂರವಿಡಬೇಕೆಂದು ಯತ್ನಿಸಿದ ಇಂದಿರಾ ಘಂಡಿ, 68ರಲ್ಲಿ ಫೂಲ್‍ಪುರದ ಟಿಕೆಟನ್ನು ವಿ.ಪಿ. ಸಿಂಗ್‍ಗೆ ಕೊಡುವ ಮೂಲಕ ಸ್ಪಷ್ಟಸಂದೇಶ ರವಾನಿಸಿದರು. ಅತ್ತೆ-ಸೊಸೆಯ ನಡುವಿನ ವೈಮನಸ್ಯ ನಂತರದ ದಿನಗಳಲ್ಲಿ ಹೆಚ್ಚುತ್ತ, ನಡುವಿನ ಬಾಂಧವ್ಯ ಹಳಸುತ್ತ, ಪರಿಸ್ಥಿತಿ ಬಿಗಡಾಯಿಸುತ್ತ ಹೋಯಿತು. 1975ರಲ್ಲಿ ಇಂದಿರಾ ತುರ್ತು ಪರಿಸ್ಥಿತಿ ಘೋಷಣೆ ಮಾಡಿದಾಗ ವಿಜಯಲಕ್ಷ್ಮಿ ಪಂಡಿತರ ಕ್ರೋಧದ ಆಸ್ಫೋಟಕ್ಕೆ ತಕ್ಕ ವೇದಿಕೆ ಸಿಕ್ಕ ಹಾಗಾಯಿತು. ತನ್ನ ಸೋದರಸೊಸೆಯ ವಿರುದ್ಧ ಪಂಡಿತ್ ಅತ್ಯಂತ ಗಟ್ಟಿಯಾಗಿ ಸ್ಪಷ್ಟವಾಗಿ ರಾಷ್ಟ್ರೀಯ ಮಟ್ಟದಲ್ಲಿ ದನಿ ಎತ್ತಿದರು. ಯಾವ ಕಾರಣಕ್ಕೂ ಇಂದಿರಾ ಮಾಡಿದ ತಪ್ಪನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್‍ನೊಳಗಿಂದ ಹೇಳಿದ ವ್ಯಕ್ತಿಗಳಲ್ಲಿ ಬಹುಶಃ ವಿಜಯಲಕ್ಷ್ಮಿಯೇ ಮೊದಲಿಗರೆನ್ನಬೇಕು.

ಇಂದಿರೆಗೆ ಹೀಗೆ ತನ್ನತ್ತೆಯೇ ತನ್ನ ವಿರುದ್ಧ ಕತ್ತಿ ಮಸೆಯುತ್ತಿದ್ದುದು ನುಂಗಲೂ ಆಗದ ಉಗುಳಲೂ ಆಗದ ಬಿಸಿತುಪ್ಪವಾಯಿತು. ಉಳಿದ ರಾಜಕೀಯ ನಾಯಕರನ್ನು ಬಂಧಿಸಿ ಜೈಲಿಗಟ್ಟಿದಂತೆ ಈಕೆಯನ್ನು ಏಕಾಏಕಿ ಕೋಳ ತೊಡಿಸಿ ಸೆರೆಗಟ್ಟುವುದು ಸಾಧ್ಯವಿರಲಿಲ್ಲ. ಹಾಗೇನಾದರೂ ಮಾಡಿದ್ದರೆ ಇತಿಹಾಸ ಇಂದಿರೆಯನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಚಿತ್ರಿಸುವುದು ಶತಸ್ಸಿದ್ಧವಾಗಿತ್ತು. ವಿಜಯಲಕ್ಷ್ಮಿ ಪಂಡಿತ್ ತನ್ನ ಒಟ್ಟು ರಾಜಕೀಯ ಮತ್ತು ರಾಜತಾಂತ್ರಿಕ ವೃತ್ತಿಬದುಕಿಗೆ ವಿರಾಮ ಘೋಷಿಸಿದ್ದು 1968ರಲ್ಲಿ. ಅಂದರೆ ಇಂದಿಗೆ ಸರಿಯಾಗಿ ಐವತ್ತು ವರ್ಷಗಳ ಹಿಂದೆ. ಫೂಲ್‍ಪುರದಿಂದ ಸಂಸತ್ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ ಬಳಿಕ ಆಕೆ ಮತ್ತೆ ಚುನಾವಣೆಗೆ ನಿಲ್ಲಲಿಲ್ಲ; ರಾಜತಾಂತ್ರಿಕ ಹುದ್ದೆಗಳನ್ನೂ ಬೇಡಲಿಲ್ಲ. ತನ್ನ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿಕೊಂಡ ಬಳಿಕ ಆಕೆ ನೆಹರೂ ಕುಟುಂಬದ ನೆರಳಿನಲ್ಲಿ ಬದುಕು ಕಟ್ಟಿಕೊಳ್ಳದೆ ದೂರದ ಡೆಹರಾಡೂನ್‍ನಲ್ಲಿ ಸ್ವಂತ ಖರ್ಚಿನಲ್ಲಿ ಮನೆ ಕಟ್ಟಿಕೊಂಡರು. ಅಣ್ಣ ನೆಹರೂ ಆನಂದಭವನವನ್ನು ತನ್ನ ಹೆಸರಿಗೆ ಬರೆದುಕೊಟ್ಟರೂ ಅದನ್ನು ವಿಜಯಲಕ್ಷ್ಮಿ ಸ್ವೀಕರಿಸಲಿಲ್ಲ ಎಂಬುದನ್ನು ನಾವು ಇಲ್ಲಿ ಮುಖ್ಯವಾಗಿ ಗಮನಿಸಬೇಕು. ಇಷ್ಟು ಸ್ವಾಭಿಮಾನದಿಂದ ಬದುಕುತ್ತಿದ್ದ; ರಾಜಕೀಯದಿಂದ ಬಹುದೂರ ಉಳಿದಿದ್ದ ವಿಜಯಲಕ್ಷ್ಮಿ ಪಂಡಿತ್‍ರನ್ನು ಮತ್ತೆ ರಾಜಕೀಯದ ಮುಖ್ಯ ಅಖಾಡಕ್ಕೆ ಧುಮುಕುವಂತೆ ಪ್ರೇರೇಪಿಸಿದ್ದು ತುರ್ತು ಪರಿಸ್ಥಿತಿ. ತನ್ನ ಕುಟುಂಬದವರೇ ಮಾಡಿರುವ ಕಾನೂನು ಎಂಬುದಕ್ಕಿಂತ ಹೆಚ್ಚಾಗಿ ಆಕೆಗೆ, ಇದರಿಂದ ದೇಶ ಹಾಳಾಗುತ್ತದೆ ಎಂಬ ಕಾಳಜಿಯೇ ಮುಖ್ಯವಾಗಿತ್ತು. ಮೂರು ದಶಕಗಳ ಕಾಲ ರಾಜತಾಂತ್ರಿಕ ಜಗತ್ತಿನಲ್ಲಿ ಕೆಲಸ ಮಾಡಿದ್ದ ಪಂಡಿತ್‍ರಿಗೆ, 1975ರಲ್ಲಿ ಹೊರಗಿನ ದೇಶಗಳಿಂದ ಭಾರತಕ್ಕೆ ಯಾವ ಬಗೆಯ ಆತಂಕಗಳೂ ಇರಲಿಲ್ಲವೆಂಬುದು ಅತ್ಯಂತ ಸ್ಪಷ್ಟವಿತ್ತು. ಹಾಗಾಗಿ ಇಂದಿರಾ ತುರ್ತು ಪರಿಸ್ಥಿತಿಗೆ ಕೊಟ್ಟ ಕಾರಣಗಳಲ್ಲಿ ಹುರುಳಿಲ್ಲವೆಂಬುದನ್ನು ವಿಜಯಲಕ್ಷ್ಮಿಯವರು ಯಾವ ವೇದಿಕೆಯಲ್ಲೇ ಆದರೂ ಅತ್ಯಂತ ಖಚಿತಧ್ವನಿಯಲ್ಲಿ ಹೇಳಬಲ್ಲವರಾಗಿದ್ದರು.

1977ರಲ್ಲಿ ಇಂದಿರಾ ಘಂಡಿ ತುರ್ತುಪರಿಸ್ಥಿತಿಯನ್ನು ತೆರವುಗೊಳಿಸಿದ ಮೇಲೆ ವಿಜಯಲಕ್ಷ್ಮಿ ಪಂಡಿತ್ ತನ್ನ ಇಳಿವಯಸ್ಸನ್ನೂ ಲೆಕ್ಕಿಸದೆ ದೇಶಾದ್ಯಂತ ಸಂಚರಿಸುತ್ತ ಸಿಕ್ಕ ಸಿಕ್ಕ ವೇದಿಕೆಗಳಲ್ಲಿ ತನ್ನ ಸೊಸೆ ನಡೆಸಿದ ಸರ್ವಾಧಿಕಾರವನ್ನು ಕಟುಶಬ್ದಗಳಲ್ಲಿ ಟೀಕಿಸತೊಡಗಿದರು. ಜಯಪ್ರಕಾಶ ನಾರಾಯಣರಿಗೆ, ಮೊರಾರ್ಜಿ ದೇಸಾಯಿಗೆ ಪಂಡಿತ್ ಮುಕ್ತವಾಗಿ ಬೆಂಬಲ ಸೂಚಿಸಿದರು ಕೂಡ. ಅಧಿಕಾರಕ್ಕೆ ಬಂದ ಜನತಾ ಸರಕಾರ, ಭ್ರಷ್ಟಾಚಾರದ ಕೇಸಿನಲ್ಲಿ ಇಂದಿರೆಯನ್ನು ಆರೋಪಿಯಾಗಿ ನಿಲ್ಲಿಸಿ ಜೈಲಿಗೆ ಹಾಕಲುಹೋದಾಗ ಸರಕಾರದೊಳಗಿದ್ದ ಎಲ್ಲರೂ ಅತ್ಯುತ್ಸಾಹದಿಂದ ಆ ಕ್ರಮವನ್ನು ಚಪ್ಪಾಳೆ ತಟ್ಟಿ ಸ್ವಾಗತಿಸಿದರೆ ವಿರೋಧಿಸಿದವರು ವಿಜಯಲಕ್ಷ್ಮಿ ಒಬ್ಬರೇ. ಇಂದಿರಾ ಘಂಡಿಯನ್ನು ಬಂಧಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಯಾಕೆಂದರೆ ಆ ಬಂಧನದ ಘಟನೆಯನ್ನೇ ತನ್ನ ರಾಜಕೀಯ ದಾಳವಾಗಿ ಬಳಸಿಕೊಳ್ಳುವ ತಾಕತ್ತು, ಬುದ್ಧಿ ಇಂದಿರೆಗಿದೆ; ಆಕೆಯನ್ನು ಸೆರೆಗಟ್ಟುವುದು ಜನತಾ ಸರಕಾರಕ್ಕೆ ದುಬಾರಿಯಾಗಬಹುದು ಎಂದು ವಿಜಯಲಕ್ಷ್ಮಿ ಎಚ್ಚರಿಸಿದರು. ದುರದೃಷ್ಟವಶಾತ್ ಆಕೆ ಹೇಳಿದಂತೆಯೇ ಆಯಿತು! ಇಂದಿರೆಯನ್ನು ಅಧಿಕಾರದಿಂದ ದೂರವಿಡಲು ವಿಜಯಲಕ್ಷ್ಮಿ ಪಟ್ಟ ಪ್ರಯತ್ನವೆಲ್ಲ ನೀರಲ್ಲಿ ಹುಣಸೇಹಣ್ಣು ತೊಳೆದಂತಾಯಿತು.

“ಆಕೆ ಸ್ವಕೇಂದ್ರಿತ ವ್ಯಕ್ತಿ. ತಾನು, ತನ್ನದು ಎಂಬುದರ ಹೊರತಾಗಿ ಮತ್ತೇನನ್ನೂ ಯೋಚಿಸದ ಲೋಭಿ ಆಕೆ. ನಾನು ಸಂಸತ್ತು ಪ್ರವೇಶಿಸಿದಾಗ, ನಾನು ಆಕೆಯ ಪ್ರತಿಸ್ಪರ್ಧಿಯಾಗಬಹುದು ಎನ್ನುವುದು ಆಕೆಯ ಚಿಂತೆಯಾಗಿತ್ತು. ನನಗೂ ಆಕೆಗೂ ಮೂರು ದಶಕಗಳ ಅಂತರ. ಆಕೆಯ ದಾರಿಗೆ ಅಡ್ಡಬರುವ ಅಪಾಯಕಾರಿ ಶಕ್ತಿ ಖಂಡಿತ ನಾನಾಗಿರಲಿಲ್ಲ. ಆದರೆ ಅದನ್ನು ಅರ್ಥ ಮಾಡಿಕೊಳ್ಳಲು ಆಕೆ ಸಿದ್ಧಳಿರಲಿಲ್ಲ. ನನ್ನನ್ನು ರಾಜಕೀಯವಾಗಿ ಮುಗಿಸಿಬಿಡಲು ಆಕೆ ಸರ್ವವಿಧದಲ್ಲೂ ಶ್ರಮಿಸಿದಳು” ಎಂದು ನೇರಾನೇರ ಹೇಳಿಕೊಂಡಿದ್ದರು ವಿಜಯಲಕ್ಷ್ಮಿ. ಇಂದಿರೆಗೆ ತನ್ನ ಈ ಅತ್ತೆಯ ಮೇಲೆ ಎಷ್ಟರಮಟ್ಟಿಗೆ ದ್ವೇಷವಿತ್ತೆಂದರೆ, ನೆಹರೂ ತನ್ನ ಹೆಸರಲ್ಲಿದ್ದ ಆನಂದಭವನವನ್ನು ತಂಗಿ ವಿಜಯಲಕ್ಷ್ಮಿಯ ಹೆಸರಿಗೆ ಮಾಡಿಕೊಟ್ಟಾಗ, ಅದನ್ನು ಸಹಿಸದೆ ಇಂದಿರಾ ಘಂಡಿ, ಅದನ್ನು ಸರಕಾರದ ಸೊತ್ತು ಎಂದು ಘೋಷಿಸಿದರು. ಅದು ನಾನು ಬಾಳಿಬದುಕಿದ ಮನೆ; ಅಲ್ಲಿ ಒಂದೇ ಒಂದು ರಾತ್ರಿಯನ್ನು ಕಳೆಯಲು ಅವಕಾಶ ಕೊಡು ಎಂದು ವಿಜಯಲಕ್ಷ್ಮಿ ಕೇಳಿಕೊಂಡಾಗಲೂ ಇಂದಿರೆ ಕರಗಿರಲಿಲ್ಲ ಎಂದರೆ ಆಕೆಯ ದ್ವೇಷ, ಛಾತಿ ಎಂಥದಿತ್ತು ಲೆಕ್ಕ ಹಾಕಬಹುದು. ಇಂದಿರೆಯ ದುಷ್ಟಕೂಟದ ಬಗ್ಗೆ ವಿಜಯಲಕ್ಷ್ಮಿಗೆ ಬೇಸರ, ದುಃಖ, ಸಿಟ್ಟು ಎಲ್ಲವೂ ಇದ್ದವು. ಎಲ್ಲಕ್ಕಿಂತ ಮಿಗಿಲಾಗಿ ಇಂದಿರೆ ತನ್ನ ಮಗ ಸಂಜಯನನ್ನು ಬೆಳೆಸಿದ ರೀತಿಯ ಬಗ್ಗೆ ವಿಜಯಲಕ್ಷ್ಮಿಗೆ ಆಕ್ಷೇಪಗಳಿದ್ದವು. “ಆತ ಬಾಲ್ಯದಿಂದಲೂ ಉಡಾಳನಾಗಿದ್ದ. ಅತ್ಯಂತ ದರ್ಪ, ಪೊಗರು, ಒರಟುತನಗಳಿದ್ದ ವ್ಯಕ್ತಿ ಅವನು. ಅವನನ್ನು ಸರಿಯಾಗಿ ತಿದ್ದಿ ತೀಡಿ ಬೆಳೆಸುವ ಕೆಲಸವನ್ನು ಇಂದಿರಾ ಮಾಡಲಿಲ್ಲ. ಅದಕ್ಕೂ ಮಿಗಿಲಾಗಿ ಆತನೇ ತನ್ನ ಉತ್ತರಾಧಿಕಾರಿ ಎಂದು ಬಿಂಬಿಸಿಕೊಂಡದ್ದು ಅತ್ಯಂತ ಹೇಯ. ಯಾವ ಹುಡುಗನಿಗೆ ಜವಾಬ್ದಾರಿ ಎಂಬ ಪದದ ಅರ್ಥವೇ ಗೊತ್ತಿರಲಿಲ್ಲವೋ ಅಂಥವನಿಗೆ ಈ ದೇಶದ ಚುಕ್ಕಾಣ  ಕೊಡಲು ಇಂದಿರಾ ಬಯಸಿದ್ದಳು” – ಎಂದಿದ್ದರು ವಿಜಯಲಕ್ಷ್ಮಿ. ಅಂಥ ಸ್ಪಷ್ಟತೆಯಿದ್ದ ವ್ಯಕ್ತಿಯ ಮಗಳಾಗಿ ನಯನತಾರಾ ಸೆಹಗಲ್, ಮತ್ತದೇ ನೆಹರೂ ಕುಟುಂಬದ ಭಟ್ಟಂಗಿಯಾದದ್ದು ಮಾತ್ರ ಇತಿಹಾಸದ ವ್ಯಂಗ್ಯ ಎಂದೇ ಹೇಳಬೇಕು!

ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಜನತಾ ಸರಕಾರವನ್ನು ಬೆಂಬಲಿಸಿದ ಕಾರಣಕ್ಕೆ ವಿಜಯಲಕ್ಷ್ಮಿ ಪಂಡಿತರನ್ನು ನೆಹರೂ ಕುಟುಂಬದಿಂದ ಬಹಿಷ್ಕರಿಸಲಾಯಿತು. ಆಕೆಯನ್ನು ಕುಟುಂಬದ ಎಲ್ಲ ಕಾರ್ಯಕ್ರಮಗಳಿಂದ ಹೊರಗಿಡಲಾಯಿತು. ಒಂದು ಬಗೆಯಲ್ಲಿ ಆಕೆಗೆ ಅಜ್ಞಾತವಾಸವನ್ನು ದಯಪಾಲಿಸಲಾಯಿತು. ಆಕೆಗೆ ಸರಕಾರದ ಯಾವ ಸಹಕಾರ ಸಿಗದಂತೆ ನೋಡಿಕೊಳ್ಳಲಾಯಿತು. ಇನ್ನು ಪ್ರಶಸ್ತಿ, ಪುರಸ್ಕಾರ ಇತ್ಯಾದಿ? ಅದಕ್ಕೆ ಬೇಕಿದ್ದ ಮುಖ್ಯ ಅರ್ಹತೆಯನ್ನೇ ಆಕೆ ಕಳೆದುಕೊಂಡುಬಿಟ್ಟಿದ್ದರಲ್ಲ! ಇಂದಿರೆಯನ್ನು ಹಾಡಿಹೊಗಳುವ ಭಟ್ಟಂಗಿಗಳ ಸಾಲು ಆ ಕಾಲದಲ್ಲಿ ಬಹಳ ಉದ್ದ ಬೆಳೆದಿದ್ದುದರಿಂದ ಅದೇ ಇಂದಿರೆಯನ್ನು ಪ್ರಶ್ನಿಸುವ ವ್ಯಕ್ತಿಗೆ ಯಾವ ಪ್ರಶಸ್ತಿ ಸಿಕ್ಕೀತು! ಇಂದಿರಾ ಘಂಡಿ ತೀರಿಕೊಂಡ ಮೇಲೂ ವಿಜಯಲಕ್ಷ್ಮಿ 6 ವರ್ಷಗಳ ಕಾಲ ಬದುಕಿದ್ದರು. 1990ರಲ್ಲಿ, ತನ್ನ 90ನೇ ವಯಸ್ಸಿನಲ್ಲಿ ಆಕೆ ತೀರಿಕೊಂಡರು. ತೀರಿಕೊಳ್ಳುವ ಕೆಲವೇ ತಿಂಗಳ ಮುಂಚೆ ಅವರು 90ನೇ ವರ್ಷಾಚರಣೆಯ ಕಾರ್ಯಕ್ರಮಕ್ಕೆ ನೆಹರೂ ಕುಟುಂಬದ ಎಲ್ಲರನ್ನೂ ತನ್ನ ಡೆಹ್ರಾಡೂನಿನ ಪುಟ್ಟ ಮನೆಗೆ ಆಮಂತ್ರಿಸಿದ್ದರು. ಕುಟುಂಬ ಸೌಹಾರ್ದ ಮತ್ತು ರಾಜಕಾರಣ ಎರಡೂ ಬೇರೆ ಬೇರೆ; ಅವನ್ನು ಬೆರೆಸಬಾರದು ಎಂಬ ಸ್ಪಷ್ಟತೆಯನ್ನು ಆಕೆ ಕೊನೆಯುಸಿರಿನವರೆಗೆ ಉಳಿಸಿಕೊಂಡರು. ಆಕೆಗಿದ್ದ ಆ ಸ್ಪಷ್ಟತೆಯೇ ಕಾಂಗ್ರೆಸ್‍ನ ಬ್ಯಾನರುಗಳಲ್ಲಿ ಇಂದಿಗೂ ಆ ರಾಜಕೀಯ ಮುತ್ಸದ್ದಿಯ ಹೆಸರು, ಚಿತ್ರಗಳು ಕಾಣಿಸಿಕೊಳ್ಳದಿರಲು ಕಾರಣ ಎಂಬುದು ಮಾತ್ರ ಇತಿಹಾಸದ ಚೋದ್ಯ.

(‘ವಿಕ್ರಮ’ ವಾರಪತ್ರಿಕೆಯಲ್ಲಿ ಪ್ರಕಟಿತ ಬರಹ)

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!