ಅಂಕಣ

ಕೈತೋಟದೊಳಗೆ ಅಲಸಂಡೆ

ಅಲಸಂಡೆ ನಮ್ಮ ಅಡುಗೆ ಮನೆಗೆ ಸುಲಭದಲ್ಲಿ ಒದಗುವ ತರಕಾರಿ. ಬಹುಶಃ ಎಲ್ಲ ವಯೋಮಾನದವರು ಇಷ್ಟಪಡುವ ತರಕಾರಿ. ಇದು ಎಲ್ಲ ಋತುಗಳಲ್ಲೂ ಬೆಳೆಯಬಲ್ಲುದು. ಅಲಸಂಡೆಯ ತಳಿ ವೈವಿಧ್ಯ ಅನೇಕ. ಬೆರಳಿನಷ್ಟು ಉದ್ದದ ಅಲಸಂಡೆಯಿಂದ ಹಿಡಿದು ಮೀಟರ್ ಉದ್ದದ ಅಲಸಂಡೆಯವರೆಗೆ ಅನೇಕ ಬಣ್ಣದ ಮತ್ತು ಗಾತ್ರದ ಅಲಸಂಡೆಗಳಿವೆ. ಬಳ್ಳಿಯಾಗಿ ಹಬ್ಬುವ ಅಲಸಂಡೆಯ ಜೊತೆಗೆ ಎರಡಡಿ ಮಾತ್ರ ಬೆಳೆಯ ಬಲ್ಲ ಗಿಡ ಅಲಸಂಡೆ ತಳಿಗಳಿವೆ. ಇವುಗಳನ್ನು ಚಟ್ಟಿಯಲ್ಲೂ ಬೆಳೆಯಬಹುದು. ವಿವಿಧ ತಳಿಯ ಅಲಸಂಡೆಗಳು ರುಚಿಯಲ್ಲೂ  ಅನ್ಯಾನ್ಯ ವೈವಿಧ್ಯಗಳನ್ನು ಕಾಯ್ದುಕೊಂಡಿವೆ. ಕೆಲವು ಅಲಸಂಡೆಗಳು ಎರಡೇ ದಿನಗಳಲ್ಲಿ ಬೆಳೆದು ನಾರು ಬೆಳೆಸಿ ಉಪಯೋಗಕ್ಕಿಲ್ಲದಂತಾಗುತ್ತದೆ. ಆದರೆ ಇದರ ಬೀಜಗಳನ್ನು ಅಡುಗೆಯಲ್ಲಿ ಬಳಕೆ ಮಾಡಲು ಅಡ್ಡಿಯಿಲ್ಲ. ಇನ್ನೂ ಒಂದು ಉಪಯೋಗ ಇದರಲ್ಲಿದೆ. ಬೆಳೆದ ಅಲಸಂಡೆಯನ್ನು ಹಾಗೆಯೇ ಕೆಂಡದಲ್ಲಿ ಹಾಕಿ ಬೇಯಿಸಿ ಬಿಸಿಯಿರುವಾಗಲೆ ತಿನ್ನಲು ರುಚಿಯೋ ರುಚಿ.

ಬಿತ್ತನೆ

ಮಳೆಗಾಲದಲ್ಲಿ ಅಲಸಂಡೆ ಬೆಳೆಯುವಾಗ ಸಾಲನ್ನು ಹೊಂಡ ಮಾಡಬಾರದು. ಚೆನ್ನಾಗಿ ಮಣ್ಣನ್ನು ಕೊಚ್ಚಿ ಬಿತ್ತನೆ ಮಾಡಿದರೆ ಸಾಕು. ಆದರೆ ಬೇಸಿಗೆಯಲ್ಲಿ ಒಂದಡಿಯಷ್ಟು ಹೊಂಡ ಮಾಡಿ ಅದರಲ್ಲಿ ಬಿತ್ತನೆ ಮಾಡುವುದು ಅಗತ್ಯ. ಚಟ್ಟಿಗಳಲ್ಲಿ, ಗೋಣ ಚೀಲಗಳಲ್ಲಿ ಮತ್ತು ತೂತಾದ ಬಕೆಟ್ ಗಳಲ್ಲಿ ಅಲಸಂಡೆ, ಅದರಲ್ಲೂ ಗಿಡ ಅಲಸಂಡೆ ಕೃಷಿ ಸುಲಭ. ಇಲ್ಲಿಯೂ ಇವುಗಳಲ್ಲಿ ಪೂರ್ತಿ ಮಣ್ಣು ತುಂಬದೆ ಅರ್ಧದಷ್ಟು ತುಂಬಿ ಬಿತ್ತನೆ ಮಾಡಬೇಕು. ಗೋಣ ಚೀಲವಾದರೆ ಅರ್ಧದ ಮೇಲಿನ ಗೋಣ ಯ ಭಾಗವನ್ನು ಸುರುಟಿ ಇಡುವುದು ಅಗತ್ಯ. ಇಲ್ಲವಾದರೆ ಮೊಳಕೆ ಸದೃಢವಾಗಿ ಬೆಳೆಯದು. ಅದಕ್ಕೆ ಸರಿಯಾಗಿ ಬೆಳೆಕು ಮತ್ತು ಗಾಳಿಯಾಡಿದರೆ ಮಾತ್ರ ಸದೃಢವಾಗಿ ಬೆಳೆಯಲು ಸಾಧ್ಯ.

ಅಲಸಂಡೆಗೆ ಬಹಳ ಕಡಿಮೆ ಗೊಬ್ಬರ ಸಾಕಾಗುವುದರಿಂದ ಬಿತ್ತನೆ ಸಮಯದಲ್ಲಿ ಮಣ ಗೆ ಯಾವುದೆ ಗೊಬ್ಬರ ಹಾಕಿ ಬಿತ್ತನೆ ಮಾಡುವ ಅಗತ್ಯ ಇಲ್ಲ. ಬಿತ್ತನೆ ಮಾಡುವಾಗ ಒಂದೇ ಕಡೆ ಎರಡು ಅಥವ ಮೂರು ಬೀಜಗಳನ್ನು ಬಿತ್ತನೆ ಮಾಡಬಹುದು. ಬುಡದಿಂದ ಬುಡಕ್ಕೆ ಒಂದು ಮೀಟರ್ ಅಂತರ ಕೊಡಬಹುದು. ಅಂತರ ಕೊಟ್ಟಷ್ಟು ಬಳ್ಳಿ ಚೆನ್ನಾಗಿ ಕವಲು ಕೊಡಲು ಅನುಕೂಲವಾಗುತ್ತದೆ. ಕೆಲವರು ಅಡಿಗೊಂದರಂತೆ ಬಿತ್ತನೆ ಮಾಡುತ್ತಾರೆ. ಇದರಿಂದ ಬಳ್ಳಿ ದಪ್ಪವಾಗಿ ಸರಿಯಾದ ಫಸಲು ಲಭ್ಯವಾಗದು. ಬಿತ್ತನೆ ಮಾಡಿದ ಎರಡೇ ದಿನದಲ್ಲಿ ಮೊಳಕೆ ಕಂಡುಬರುತ್ತದೆ. ಅದಕ್ಕಿಂತಲೂ ಬೇಗನೆ ಮೊಳಕೆ ಬರಿಸಲು ಬೆಳಗ್ಗೆ ಬೀಜಗಳನ್ನು ನೀರಿನಲ್ಲಿ ನೆನೆಹಾಕಿ ಸಂಜೆ ನೀರು ಬಸಿಯಬೇಕು. ಸಂಜೆಯೇ ಬಿತ್ತನೆ ಮಾಡಿದರೆ ಮರುದಿವಸ ಮೊಳಕೆಯೊಡೆಯುತ್ತದೆ.

ಗೊಬ್ಬರ

ಗಿಡಗಳು ಒಂದಡಿಯಷ್ಟು ಬೆಳೆದಾಗ ಸಪ್ಪು ಕೊಟ್ಟು ನಂತರ ಹಟ್ಟಿಗೊಬ್ಬರ, ಇತರ ಜೈವಿಕ ಗೊಬ್ಬರಗಳಾದ ಹರಳಿಂಡಿ, ನೆಲಗಡಲೆ ಹಿಂಡಿ, ಕಹಿಬೇವಿನ ಹಿಂಡಿ, ಸ್ಲರಿ ಮುಂತಾದವುಗಳನ್ನು ಅಲಸಂಡೆ ಕೃಷಿಯಲ್ಲಿ ಬಳಕೆ ಮಾಡಬಹುದು. ಯಾವುದಿದ್ದರೂ ಅಲಸಂಡೆಗೆ ಗೊಬ್ಬರ ಕಡಿಮೆ ಪ್ರಮಾಣದಲ್ಲಿ ಕೊಡಬೇಕು. ಹೆಚ್ಚಾದರೆ ಸಪ್ಪು ತುಂಬಿ ಪಸಲು ಕಡಿಮೆಯಾಗುತ್ತದೆ. ಹಿಂಡಿಗಲನ್ನು ಗೊಬ್ಬರವಾಗಿ ಕೊಡುವಾಗ ನೇರವಾಗಿಯೂ ಕೊಡಬಹುದು ಇಲ್ಲವೆ ಸ್ಲರಿಯಲ್ಲಿ ಮೂರು ದಿವಸಗಳ ಕಾಲ ನೆನೆಸಿಟ್ಟು ಕೊಳೆತ ಮೆಲೆ ಕೊಡಬಹುದು. ನೇರವಾಗಿ ಕೊಡುವುದಿದ್ದರೆ ಹಿಂಡಿಯನ್ನು ಬುಡದಿಂದ ಅರ್ಧ ಅಡಿಯಾದರೂ ದೂರ ಹಾಕಿ ಅದಕ್ಕೆ ಮಣ್ಣು ಅಥವ ಸಪ್ಪು ಮುಚ್ಚಿದರೆ ಪ್ರಯೋಜನ ಹೆಚ್ಚು. ಇದರಿಂದ ಗೊಬ್ಬರ ಗಾಳಿಗೊಡ್ಡಿ ಹೊರಹೋಗುವುದು ತಪ್ಪುತ್ತದೆ.

ಆಧಾರ ಕೋಲು

ಬಳ್ಳಿ ಅಲಸಂಡೆ ಬೆಳೆದರೆ ಅದಕ್ಕೆ ಆಧಾರ ಕೋಲು ಅಗತ್ಯ. ಕೆಲವೆಡೆ ಈಗ ಚಪ್ಪರಕ್ಕೂ ಅಲಸಂಡೆಯನ್ನು ಹಬ್ಬಿಸಲು ಆರಂಭಿಸಿದ್ದಾರೆ. ನೈಲಾನ್ ಹಗ್ಗ ಜೋತು ಬೀಳುವಂತೆ ಕಟ್ಟಿ ಅದಕ್ಕೂ ಬಳ್ಳಿಯನ್ನು ಹಬ್ಬಿಸಬಹುದು. ಆಧಾರ ಕೋಲು ಅಥವ ನೈಲಾನ್ ಬಳ್ಳಿಗೆ ಅಲಸಂಡೆ ಬಳ್ಳಿಯ ತುದಿ ಆಧರಿಸಿ ಮೇಲೇರುವಂತೆ ಮಾಡುವ ಶ್ರಮವನ್ನು ನಾವೆ ವಹಿಸಿಕೊಳ್ಳುವುದು ಅನಿವಾರ್ಯ. ನಿತ್ಯ ಇದನ್ನು ಗಮನಿಸಿಕೊಂಡಿದ್ದರೆ ಬಳ್ಳಿ ಬಹಳ ಬೇಗನೆ ಹಬ್ಬುತ್ತದೆ.

ಸಪ್ಪು ಕೀಳುವುದು

ಅಲಸಂಡೆ ಬಳ್ಳಿಯಲ್ಲಿ ಸಪ್ಪು ತುಂಬಿದರೆ ಅದರಲ್ಲಿ ಖಂಡಿತ ಒಳ್ಳೆಯ ಫಸಲು ಬರದು. ಸಪ್ಪು ತುಂಬಿದರೆ ಅದನ್ನು ಚಿವುಟಿ ತೆಗೆಯಬೇಕು. ಅದನ್ನು ಜಾನುವಾರುಗಳು ತಿನ್ನುತ್ತವೆ. ಇಲ್ಲದೆ ಹೋದರೆ ಅಲಸಂಡೆಯ ಬುಡಕ್ಕೆ ಸಪ್ಪು ಆಗಿ ಬಳಕೆ ಮಾಡಬಹುದು. ಸಪ್ಪು ತುಂಬಿದಾಗ ಅದಕ್ಕೆ ಕೀಟಗಳ ಹಾವಳಿಯೂ ಹೆಚ್ಚು. ಎಲೆ ಕೊರಕಗಳು ಸಪ್ಪನ್ನು ನಾಶಮಾಡಲು ಈ ಸಮಯವನ್ನೆ ಕಾದಿರುತ್ತವೆ. ಸಪ್ಪು ಕಿತ್ತರೆ ಸರಿಯಾಗಿ ಬೆಳಕು, ಗಾಳಿ ಸಿಕ್ಕಿ ಫಸಲು ಚೆನ್ನಾಗಿ ಬರುತ್ತದೆ.

ಕೀಟಗಳು

ಅಲಸಂಡೆಗೆ ಹೇನುಗಳು, ಬಂಬುಚ್ಚಿಯಂತಹ ಕೀಟಗಳ ಹಾವಳಿ ಅಧಿಕ. ನಿತ್ಯ ಗಮನಿಸುತ್ತಿದ್ದರೆ ಹಾವಳಿಯ ತೀವ್ರತೆಯನ್ನು ತಡೆಯಬಹುದು. ಬಂಬುಚ್ಚಿಯ ಹಾವಳಿ ಆರಂಭವಾಗುವ ಹೊತ್ತಿಗೆ ಅವುಗಳನ್ನು ಜಾಗ್ರತೆಯಿಂದ ಹಿಡಿದು ನಾಶಮಾಡಿದರೆ ಸಂತಾನ ಅಭಿವೃದ್ಧಿಯನ್ನು ಬಹಳ ಮಟ್ಟಿಗೆ ತಡೆಯಬಹುದು. ಇವುಗಳು ತುಂಬಿದರೆ ಅಲಸಂಡೆಯ ಮೇಲೆ ಕುಳಿತು ಅದರ ರಸ ಹೀರಿ ಸತ್ವಹೀನಗೊಳಿಸುತ್ತವೆ. ಇನ್ನೊಂದು ದೊಡ್ಡ ಸಮಸ್ಯೆ ಹೇನುಗಳದ್ದು. ಬಳ್ಳಿಯ ತುದಿಗಳಲ್ಲಿ, ಮೊಗ್ಗು ಮತ್ತು ಮಿಡಿಗಳಲ್ಲಿ ಇದು ಹೆಚ್ಚು ಕಂಡುಬರುತ್ತದೆ. ಕೆಂಪಿರುವೆಗಳನ್ನು ಅಲಸಂಡೆ ಬಳ್ಳಿಯಲ್ಲಿ ವಾಸಿಸಲು ಅನುವುಮಾಡಿಕೊಟ್ಟರೆ ಅನೇಕ ಹೇನು ಮತ್ತು ಕೀಟಗಳನ್ನು ಅದು ನಾಶಮಾಡುತ್ತದೆ. ಅಲಸಂಡೆಯ ಮೇಲೆ ಸದಾ ಇದ್ದು ರಕ್ಷಕನಂತೆ ವರ್ತಿಸುತ್ತದೆ. ನಮಗೆ ಅಲಸಂಡೆ ಕೊಯ್ಯಲು ಒಂದಿನಿತು ಕಷ್ಟವಾದರೂ ಅದನ್ನು ಸಹಿಸಿಕೊಂಡರೆ ಲಾಭ ಹೆಚ್ಚು. ಆದರೆ ಕೆಲವೊಮ್ಮೆ ಕೆಲವೊಂದು ಹೇನುಗಳನ್ನು ಅದುವೆ ರಸ ಹೀರಲು ಸಾಕುವುದಿದೆ. ಹೀಗಾದಾಗ ಬೇಲಿಯೇ ಹೊಲ ಮೇಯ್ದ ಗಾದೆ ನೆನಪಾಗುತ್ತದೆ.

ಕೊಯ್ಲು

ಕೆಲವೊಂದು ತಳಿಯ ಅಲಸಂಡೆಗಳನ್ನು ನಿತ್ಯ ಕೊಯ್ಲು ಮಾಡದಿದ್ದರೆ ಅದು ಬೆಳೆದು ಪದಾರ್ಥ ಮಾಡಲು ಕಷ್ಟವಾಗುವುದಿದೆ. ಕೆಲವು ತಳಿಯ ಅಲಸಂಡೆಗಳನ್ನು ಎರಡು ದಿವಸಕ್ಕೊಮ್ಮೆ ಕೊಯ್ಲು ಮಾಡಿದರೆ ಸಾಕು. ಒಳ್ಳೆಯ ಅಲಸಂಡೆಗಳನ್ನು ಬೆಳೆಸಿ ಅದು ಬಳ್ಳಿಯಲ್ಲಿಯೆ ಒಣಗಿದ ನಂತರ ಬೀಜಕ್ಕಾಗಿ ತೆಗೆದಿರಿಸಬಹುದು. ಒಂದು ಬಳ್ಳಿಯ ಅಲಸಂಡೆ ಫಸಲು ಕಡಿಮೆ ಮಾಡಿದಾಗ ಹೊಸದಾಗಿ ಅದರ ಪಕ್ಕದಲ್ಲೆ ಇನ್ನೊಂದು ಸಾಲು ಬೆಳೆಯಬಹುದು. ಬಳ್ಳಿಯಲ್ಲಿ ಹಣ್ಣಾದ ಅಲಸಂಡೆಗಳಿದ್ದರೆ ಅದರ ಬೀಜವೇ ಬಿತ್ತನೆಗೆ ಒದಗುತ್ತವೆ. ಬೀಜ ಒಣಗಬೇಕಾದ ಅಗತ್ಯ ಇಲ್ಲ.

ಚಿತ್ರ: ರುಚಿರುಚಿ ಅಡುಗೆ ಬ್ಲಾಗ್

Facebook ಕಾಮೆಂಟ್ಸ್

ಲೇಖಕರ ಕುರಿತು

ಶಂ.ನಾ. ಖಂಡಿಗೆ

ಕನ್ನಡದಲ್ಲಿ ಎಂ.ಎ ಬಳಿಕ ಹೊಸದಿಗಂತ ಪತ್ರಿಕೆಯ ಸಾಪ್ತಾಹಿಕ ಪುರವಣಿಯ ಸಂಪಾದಕರಾಗಿ ಐದು ವರ್ಷ ಕಾರ್ಯನಿರ್ವಹಿಸಿದ ಬಳಿಕ ಮರಳಿ ಮಣ್ಣಿಗೆ ಎನ್ನುವಂತೆ ಪೂರ್ಣ ಪ್ರಮಾಣದಲ್ಲಿ ಕೃಷಿಯತ್ತ ಒಲವು. ಜೊತೆಗೇ ಹೊಸದಿಗಂತ ಪತ್ರಿಕೆಯಲ್ಲಿ ಹತ್ತು ವರ್ಷಗಳಿಂದ “ಕೃಷಿಯೊಸಗೆ” ಎಂಬ ಅಂಕಣವನ್ನು ಬರೆಯುತ್ತಿದ್ದಾರೆ. ಮಕ್ಕಳ ಕಥೆ ಕವನ – ಪುಸ್ತಕ ವಿಮರ್ಶೆ – ವ್ಯಕ್ತಿತ್ವ ವಿಕಸನ ಬರಹ ಹೀಗೆ ಬರಹದ ಒಲವು. ಪ್ರಸ್ತುತ, ಪ್ರತಿಷ್ಟಿತ ಕ್ಯಾಂಪ್ಕೋದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!