ಅಂಕಣ

ಕನ್ನಡದ ನಗು – ಕನ್ನಡದ ಅಳು

ಮಾತೃಭಾಷೆ ಅಥವಾ ತಾಯ್ನುಡಿ ಎಂದರೇನು ಎಂದು  ನಿಘಂಟಿನಲ್ಲಿ ಹುಡುಕಿದರೆ ತಾಯಿ ಹೇಳಿಕೊಟ್ಟ ಭಾಷೆ ಅಥವಾ ಪ್ರಥಮವಾಗಿ ಕಲಿತ ಭಾಷೆ ಎಂಬ ಅರ್ಥ ಸಿಗುತ್ತದೆ. ಪರಭಾಷೆಯಲ್ಲಿ ಕೇಳಿದ, ಓದಿದ ವಿಷಯಗಳನ್ನು ಮಾತೃಭಾಷೆಯ ಮೂಲಕವೇ ಅರ್ಥೈಸಿಕೊಳ್ಳುತ್ತೇವೆ. 19,000 ಕ್ಕೂ ಹೆಚ್ಚು ಭಾಷೆಗಳಿರುವ ಭಾರತದ ನಗರಗಳ ಇಂದಿನ ಯುವ ಜನಾಂಗ ಇಂಗ್ಲೀಷನ್ನು ಮಾತೃಭಾಷೆಯಾಗಿ ಬಳಸುತ್ತಿರುವುದು ದುರಂತವೇ ಸರಿ. ಹೊರಜಗತ್ತಿನೊಡನೆ ಸಂವಹನಕ್ಕಾಗಿ ಅನಿವಾರ್ಯವಾಗಿ ಇಂಗ್ಲೀಷ್ ಎಂಬ ಭಾಷೆಗೆ ಜೋತುಬೀಳುವುದನ್ನು ಸ್ವೀಕರಿಸಬೇಕಾಗಿ ಬಂದರೂ, ಅದನ್ನು ಮಾತೃಭಾಷೆಯಾಗಿ ಒಪ್ಪಿಕೊಳ್ಳುವುದು ಕಷ್ಟವೇ. ದೇಶದ ನಾನಾ ಭಾಗಗಳಿಂದ ಬಂದ ಜನರು ವಾಸಿಸುವ ನಗರಗಳಲ್ಲಿ ಅನಿವಾರ್ಯವಾಗಿ ಇಂಗ್ಲೀಷನ್ನು ಸಂವಹನ ಭಾಷೆಯಾಗಿ ಸ್ವೀಕರಿಸಬೇಕಿದೆ. ಆದರೂ ಇಂಗ್ಲೀಷನ್ನು ಮಾತೃಭಾಷೆಯಾಗಿ ಕಾಣುವುದು ಭಾರತೀಯನ ಹೃದಯಕ್ಕೊಪ್ಪದ ವಿಚಾರ. ಹಾಗೆ ನೋಡಿದರೆ ಹಳ್ಳಿ ಪಟ್ಟಣಗಳೇ ದೇಶದ ಪ್ರಾದೇಶಿಕ ಭಾಷೆಗಳನ್ನು ಉಳಿಸಿಕೊಂಡಿವೆ. ಆದರೂ ಅವು ಕೂಡ ಇತ್ತೀಚಿನ ದಿನಗಳಲ್ಲಿ ಶಿಕ್ಷಣಕ್ಕೆ ಇಂಗ್ಲೀಷನ್ನೇ ನೆಚ್ಚಿಕೊಳ್ಳುತ್ತಿವೆ. ಶಿಕ್ಷಣದ ಭಾಷೆಯಿಂದಾಗಿ ಆಡುಭಾಷೆ ಅಳಿವಿನತ್ತ ಹೋಗಿ, ಅಂತಹ ಭಾಷೆಗಳ ಉಳಿವಿಗಾಗಿ ಜಾಗೃತಿಯ ಆಂದೋಲನಗಳ ಅಗತ್ಯವೂ ಕಂಡುಬರುತ್ತಿದೆ.

ಖಾಸಗಿ ಶಾಲೆಗಳಲ್ಲಿ ಇಂಗ್ಲೀಷ ಮಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೂ ಕಡ್ಡಾಯವಾಗಿ ಕನ್ನಡವನ್ನು ಭಾಷಾವಿಷಯವಾಗಿ ಕಲಿಯಬೇಕೆಂಬ ನಿಯಮ ಜಾರಿಯಾಗಿರುವುದು ಸಂತೋಷದ ವಿಷಯವೇ. ಆದರೆ ಅದರ ಅನುಷ್ಠಾನ ಯಾವ ಬಗೆಯಲ್ಲಿ ಆಗುತ್ತಿದೆ ಎನ್ನುವುದನ್ನು ಪರಾಮರ್ಶಿಸಲು ಯಾವ ನಿಯಮಗಳೂ ಇಲ್ಲವಾಗಿವೆ. ಒಂದು ಭಾಷೆಯನ್ನು ಹೇಗೆ ಕಲಿಯಬೇಕು/ಕಲಿಸಬೇಕು? ಮೊದಲು ಭಾಷೆಯ ಅಕ್ಷರಗಳನ್ನು ಓದಲು ಮತ್ತು ಬರೆಯಲು ಕಲಿಯುವುದು; ನಂತರ ಒತ್ತಕ್ಷರಗಳ ಪರಿಚಯ; ಸುಲಭದ ಶಬ್ಧಗಳು ಮತ್ತು ಸುಲಭದ ವಾಕ್ಯಗಳ ಪರಿಚಯ; ಆಮೇಲೆ ಪಾಠಗಳು ಮತ್ತು ಪದ್ಯಗಳನ್ನು ಕಲಿಯುವುದು ಸರಳವಾದ ವಿಧಾನ. ಕನ್ನಡ ಪರೀಕ್ಷೆಯ ಹಿಂದಿನ ದಿನ ಅಂದಾಜಿನ ಪ್ರಶ್ನೆಪತ್ರಿಕೆಯನ್ನು ಹಿಡಿದು ಅಕ್ಕ ಪಕ್ಕದ ಮನೆಯ ಪರಭಾಷೆಯ ಮಕ್ಕಳು ನನ್ನ ಬಳಿಗೆ ಬರುತ್ತಾರೆ. ಪ್ರತೀ ಶಬ್ಧಗಳ ಉಚ್ಛಾರಣೆಯನ್ನು ಇಂಗ್ಲೀಷಿನಲ್ಲಿ ಬರೆಸಿಕೊಂಡು ಹೋಗುತ್ತಾರೆ. ಏಕೆಂದರೆ ಅವರಿಗೆ ಅಕ್ಷರಗಳನ್ನು ಸರಿಯಾಗಿ ಓದಲಿಕ್ಕೇ ಕಲಿಸಿರುವುದಿಲ್ಲ. ‘ತಾವ್ಯಾರೂ ಹಿಂತಿರುಗಿ ತಮ್ಮ ತಮ್ಮ ಊರುಗಳಿಗೆ ಹೋಗಿ ನೆಲೆಸುವವರಲ್ಲ, ಬೆಂಗಳೂರಿನಲ್ಲಿಯೇ ಬಾಳಿ ಬದುಕುವವರುಬಸ್ಸಿನ ಬೋರ್ಡನ್ನು ಓದಲೆಂದೋ, ಇನ್ಯಾವುದೋ ತೊಂದರೆಯ ಸಂದರ್ಭಗಳಲ್ಲಿ ಅನುಕೂಲವಾಗಲೆಂದೋ ಕನ್ನಡವನ್ನು ತಿಳಿದಿಟ್ಟುಕೊಳ್ಳಿಎಂಬ ನನ್ನ ಉಪದೇಶಕ್ಕೆ ಮಕ್ಕಳ ಉತ್ತರ– ’ ಊರಿನಲ್ಲಿ ಹಿಂದಿಯೋ, ಇಂಗ್ಲೀಷೋ ಬಂದರೆ ಸಾಕುಎಂಬುದಾಗಿರುತ್ತದೆ. ಸಾಹಿತ್ಯವನ್ನು ಓದುವಷ್ಟೋ ಅಥವಾ ನಿರರ್ಗಳವಾಗಿ ಸಂಭಾಷಣೆ ಮಾಡುವಷ್ಟೋ ಭಾಷೆಯನ್ನು ಕಲಿಯಲು ದಶಕಗಳೇ ಹಿಡಿಯಬಹುದು. ಆದರೆ, ಅಕ್ಷರ ಜ್ಞಾನ ಮತ್ತು ರೂಢಿಯ ಪದಗಳ ಜ್ಞಾನ ಅಥವಾ ವ್ಯಾವಹಾರಿಕ ಕನ್ನಡ ಕಲಿಯಲು ಕೆಲವೇ ತಿಂಗಳುಗಳು ಸಾಕು. ಇಷ್ಟಾಗಿಯೂ ಕನ್ನಡ ಕಲಿಯದ ಅದೆಷ್ಟೋ ಪರಭಾಷಿಕರು ನಮ್ಮ ನೆಲದಲ್ಲಿ ಕೋಟಿ ಕೋಟಿ ಆಸ್ತಿಯ ಒಡೆಯರಾಗಿ ನೆಮ್ಮದಿಯಿಂದಿದ್ದಾರೆ ಎಂಬ ಸತ್ಯ ಸಂಕಟವನ್ನು ಜೊತೆಗೇ ಅಚ್ಚರಿಯನ್ನೂ ಉಂಟುಮಾಡುತ್ತದೆ. ದೇಶವನ್ನು ಭಾಷಾವಾರು ವಿಂಗಡಣೆ ಮಾಡಿದ್ದರೂ ದೇಶದ ಪ್ರತೀ ಪ್ರಜೆಗೂ ದೇಶದ ಯಾವ ಸ್ಥಳದಲ್ಲಾದರೂ ನೆಲೆಸುವ ಹಕ್ಕಿದೆ ಎಂಬ ಕಾರಣ ಮಾತ್ರವೇ ಕನ್ನಡಿಗನಿಗೆ ಹುಸಿ ಸಮಾಧಾನ ನೀಡೀತು!! ಇನ್ನು ಗಡಿನಾಡಿನ ಕನ್ನಡದ ಗೋಳಂತೂ ಸಂಕಟ ತರಿಸುವಂತದ್ದು. ಜಾಗತೀಕರಣದ ಕಾಲದಲ್ಲಿ ಕನ್ನಡಿಗನೂ ವಿಶ್ವದ ಪ್ರಜೆಯಾಗಿ ಬದುಕನ್ನು ಸ್ವೀಕರಿಸಿಯಾಗಿದೆ.

ಬೆಂಗಳೂರಿನಲ್ಲಿ ಪರಭಾಷಿಕರಿಗೆ ಹಲವಾರು ಕನ್ನಡದ ತರಗತಿಗಳು ನಡೆಯುತ್ತವಾದರೂ ಎಲ್ಲರಿಗೂ ಅವುಗಳ ಉಪಯೋಗ ಪಡೆಯುವ ಅನುಕೂಲತೆಗಳಿರುವುದಿಲ್ಲ. ನಾವು ಮೊದಲೆಲ್ಲ ಯಾವುದಾದರೂ ರೆಸ್ಟೋರೆಂಟ್ ಗಳಿಗೆ ಹೋದಾಗ ಅಲ್ಲಿನ ವೇಟರ್ ನನ್ನುಕನ್ನಡ ಬರುವುದೋ?’ ಎಂದು ಕೇಳಿನಹೀ/ನೋಎಂಬ ಅವನ ಉತ್ತರಕ್ಕೆಕನ್ನಡ ಕಲಿತುಕೋಎಂಬ ಉಪದೇಶವನ್ನು ನೀಡಿ, ನಮಗೆ ಬೇಕಾದ ಆಹಾರವನ್ನು ಹಿಂದಿಯಲ್ಲಿಯೋ ಇಂಗ್ಲಿಷಿನಲ್ಲಿಯೋ ಮಾತನಾಡಿ ತರಿಸಿಕೊಂಡು ಉಂಡು ಕೈತೊಳೆದುಕೊಂಡು ಬರುತ್ತಿದ್ದೆವು. ಆದರೆ ಇತ್ತೀಚೆಗೆ ಕನ್ನಡ ಬಾರದ ವೇಟರ್ ಗಳಿಗೆ ಒಂದಿಷ್ಟು ಸುಲಭದ ಮತ್ತು ಅವಶ್ಯಕವಾದ ಕನ್ನಡದ ಪದಗಳನ್ನು ಸಿಗುವ ಸಮಯದಲ್ಲೇ (ಊಟ ತಂದಿಡುವಾಗ, ಊಟ ಬಡಿಸುವಾಗ) ಕಲಿಸಿ ಬರುತ್ತೇವೆ. ಬನ್ನಿ, ಕುಳಿತುಕೊಳ್ಳಿ, ಏನು ಬೇಕು, ಯಾರಿಗೆ, ನೀರು, ಅನ್ನ, ಊಟ ಹೇಗಿತ್ತುಹೀಗೇ ಹಲವಾರು ಪದಗಳು. ಹಾಗೆಯೇ ಅಕ್ಕಪಕ್ಕದ ಮನೆಯವರಿಗೂ, ಸ್ನೇಹಿತರಿಗೂ ಕನ್ನಡದ ಅವಶ್ಯಕ ಶಬ್ಧಗಳನ್ನು ಕಲಿಸುತ್ತೇವೆ. ಕನ್ನಡದಿಂದ ಅವರಿಗೊಂದಿಷ್ಟು ಅನುಕೂಲವಾಗಿ, ಮತ್ತಷ್ಟು ಕನ್ನಡ ಕಲಿಯೋಣ ಎಂಬ ಯೋಚನೆ ಹುಟ್ಟಿದರೆ ಸಾಕು.

ಭಾಷೆಯ ಕಲಿಕೆ ಸುಲಭದ್ದಲ್ಲ. ಅದು ವ್ಯಕ್ತಿಯ ಬುದ್ದಿಮತ್ತೆ, ವ್ಯವಹರಿಸುವ ಪರಿಸರ ಮತ್ತು ಅನಿವಾರ್ಯತೆಗಳ ಮೇಲೆ ಆಧರಿತವಾದುದಾಗಿದೆ. ನಾನೊಬ್ಬ ಮಲಯಾಳಿ ಮುದುಕಿಯನ್ನು ನೋಡಿದ್ದೇನೆಬೆಂಗಳೂರಿಗೆ ಬಂದ ಒಂದು ವರ್ಷದಲ್ಲಿಯೇ ಸಮಾನ್ಯ ಸಂವಹನಕ್ಕೆ ಬೇಕಾಗುವಷ್ಟು ಕನ್ನಡವನ್ನು ಕಲಿತಿದ್ದಾಳೆ. ಇದಕ್ಕೆ ವ್ಯತಿರಿಕ್ತವೆಂಬಂತೆ, ಐಐಟಿಯಲ್ಲಿ ಓದಿದ ದೆಹಲಿಯ ಗಂಡಸೊಬ್ಬನಿಗೆ ಬೆಂಗಳೂರಿನಲ್ಲಿ ಹತ್ತು ವರ್ಷಗಳಿಂದ ವಾಸವಾಗಿದ್ದರೂ ಕನ್ನಡ ಬರುವುದಿಲ್ಲ. ದೆಹಲಿಯ ವ್ಯಕ್ತಿಗೆ ಕನ್ನಡ ಕಲಿಯುವ ಅನಿವಾರ್ಯವಾಗಲೀ, ಅನುಕೂಲಗಳಾಗಲೀ ಇಲ್ಲ. ಅವನ ವ್ಯವಹಾರಗಳೆಲ್ಲ ಹಿಂದಿಯಲ್ಲೋ ಇಂಗ್ಲೀಷಿನಲ್ಲೋ ನಡೆಯುವಂಥವು. ಅವನಿರುವ ಪರಿಸರವೂ ಕನ್ನಡೇತರರದ್ದೇ. ಆದರೆ ಹಿಂದಿಯಾಗಲೀ, ಇಂಗ್ಲೀಷಾಗಲೀ ಬಾರದ ಮಲಯಾಳಿ ಮುದುಕಿಗೆ ಇಲ್ಲಿನ ಜನರೊಡನೆ ಮಾತನಾಡಲು ಮತ್ತು ನಿತ್ಯದ ವ್ಯವಹಾರಗಳಿಗಾಗಿ ಪ್ರಾದೇಶಿಕ ಭಾಷೆಯನ್ನು ಅನಿವಾರ್ಯವಾಗಿ ಸ್ವೀಕರಿಸಿ ಕಲಿಯಬೇಕಿದೆ. ಭಾಷೆಯೇ ಇಲ್ಲದೇ ಬದುಕುವುದಾದರೂ ಹೇಗೆ?

ಭಾಷೆಯೇ ಇಲ್ಲದೇ ಬದುಕಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ, ಮಾತೃಭಾಷೆಯಿಂದ ಬಹುಕಾಲ ದೂರವಾಗಿ ಬದುಕುವುದೂ ಕಷ್ಟವೇ. ಹೊಟ್ಟೆಯೊಳಗಿನ ಸಂಕಟವನ್ನು ಹೊರಹಾಕಲಾದರೂ ತಾಯ್ನುಡಿ ಬೇಕೇಬೇಕು. ಒಮ್ಮೆ ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದ ಬಹುಭಾಷಾ ಪಂಡಿತನೊಬ್ಬ ತನ್ನ ಮಾತೃಭಾಷೆಯನ್ನು ಪತ್ತೆಮಾಡಿರೆಂದು ಸವಾಲು ಹಾಕಿದ. ವಿದವಿದವಾದ ಪರೀಕ್ಷೆಗಳನ್ನೊಡ್ಡಿದರೂ ಅವನ ಮಾತೃಭಾಷೆ ಯಾವುದೆಂಬ ಗುಟ್ಟನ್ನು ಹೊರಗೆಡವಲಾಗಲಿಲ್ಲ. ಆಗ ತೆನಾಲಿ ರಾಮ ಒಂದು ತಂತ್ರ ಹೂಡಿದ. ಪಂಡಿತ ಸುಖನಿದ್ರೆಯಲ್ಲಿರುವಾಗ ಅವನಿಗೆ ಜೋರಾದ ಗುದ್ದನ್ನು ಕೊಟ್ಟ. ನೋವಿನಿಂದಾಗಿಯೂ, ಗಾಬರಿಯಿಂದಾಗಿಯೂ ಪಂಡಿತನ ಬಾಯಿಯಿಂದ ಹೊರಟ ಉದ್ಘಾರ ಅವನ ಮಾತೃಭಾಷೆಯ ಪದವೇ ಆಗಿತ್ತು. ಅತ್ತು ಹಗುರಾಗುವ ಹಾಗೆಯೇ, ನಮ್ಮೊಳಗಿನ ನೋವು ಸಂಕಟಗಳೆಲ್ಲ ಮಾತೃಭಾಷೆಯಲ್ಲಿ ಹೊರಬಂದು ನಾವು ನಿರಾಳರಾಗುವುದು. ಪರದೇಶಗಳಲ್ಲಿ ನೆಲೆಸಿರುವವರೂ, ಪರಭಾಷಿಕರನ್ನು ಮದುವೆಯಾದವರೂ ಜೀವನದ ಒಂದಲ್ಲಾ ಒಂದು ಸಂದರ್ಭಗಳಲ್ಲಿ ತಮ್ಮ ಮಾತೃಭಾಷೆಗಾಗಿ ಹಪಹಪಿಸುವುದನ್ನು ನೋಡಿದ್ದೇನೆ. ಮನಸ್ಸಿಗೆ ತೋಚಿದ್ದನ್ನೆಲ್ಲ ತಮಗೆ ಅನ್ನಿಸಿದ ರೀತಿಯಲ್ಲಿ ಪರರಲ್ಲಿ ಹೇಳಿಕೊಳ್ಳಲಾಗದೇ, ತಮ್ಮಷ್ಟಕ್ಕೇ ತಮ್ಮ ಮಾತೃಭಾಷೆಯಲ್ಲಿ ಗೊಣಗಿಕೊಳ್ಳುವುದು ಅಥವಾ ಪಿಸುಮಾತುಗಳನ್ನು ಆಡಿಕೊಂಡು ಸಂಕಟಪಡುವವರೂ ಇದ್ದಾರೆ. ಕಷ್ಟದಲ್ಲೋ ದುಃಖದಲ್ಲೋ ಇರುವವರು ಪರಭಾಷೆಯಲ್ಲಿ ಹೇಳಿಕೊಳ್ಳುವ ತೊಡುಕಿಲ್ಲದಿದ್ದರೂ ಸಹ ಮಾತೃಭಾಷೆಯಲ್ಲಿ ಹಲುಬಿಕೊಳ್ಳುವುದನ್ನು ನೋಡಿದ್ದೇನೆ. ಅಳುವಿಗೆ ಯಾವ ಭಾಷೆಯ ಹಂಗಿಲ್ಲವಾದರೂ, ಅಳುವನ್ನು ನಮ್ಮೊಳಗೇ ಇಟ್ಟುಕೊಳ್ಳುವುದು ಕಠಿಣವೇ. ತಾಯ್ನುಡಿಯ ಮೂಲಕ ಒಳಗಿರುವ ಸಂಕಟವನ್ನೆಲ್ಲ ಹೇಳಿಕೊಂಡು ನಿರಾಳವಾಗುವುದು ಸಹಜ ಮತ್ತು ಸರಳ ಕ್ರಿಯೆ.

ಒಂದು ಭಾಷೆಯನ್ನು ನಮ್ಮದೆಂದು ಸ್ವೀಕರಿಸಿಯಾದ ಮೇಲೆ ಭಾಷೆಯಲ್ಲಿ ಅತ್ತು ಹಗುರಾಗುವ ಹಕ್ಕನ್ನು ಹೇಗೆ ಪಡೆದುಕೊಂಡೆವೋ ಹಾಗೆಯೇ, ಭಾಷೆಯ ಉಳಿವು ಮತ್ತು ಬೆಳವಣಿಗೆಯ ಕರ್ತವ್ಯವನ್ನೂ ನಿರ್ವಹಿಸಲೇ ಬೇಕು. ಇಂಗ್ಲೀಷ್ ಎಂಬುದು ಜ್ಞಾನದ ಹೆಬ್ಬಾಗಿಲು ಎಂಬುದನ್ನು ಗಮನದಲ್ಲಿಟ್ಟುಕ್ಕೊಂಡು ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವವರು, ಮಕ್ಕಳ ಕನ್ನಡ ಕಲಿಕೆಯ ಜವಾಬ್ಧಾರಿಯನ್ನು ಹೊರಬೇಕೆನ್ನುವ ವಿವೇಚನೆ ಇಟ್ಟುಕೊಳ್ಳಬೇಕಿದೆ. ಕನ್ನಡ ಭಾಷೆಯನ್ನು ಉಳಿಸುವುದು ಮತ್ತು ಕನ್ನಡದ್ದೇ ಆದ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ನಮ್ಮ ಮುಂದಿನ ತಲೆಮಾರುಗಳಿಗೆ ಕನ್ನಡವನ್ನೇ ಮಾತೃಭಾಷೆಯಾಗಿ ಕಲಿಸುವುದರಲ್ಲಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

ಶ್ರೀಕಲಾ ಹೆಗಡೆ ಕಂಬ್ಳಿಸರ

ಹುಟ್ಟಿದ್ದು, ಬೆಳೆದದ್ದು ಸಿರಸಿಯ ಪುಟ್ಟ ಹಳ್ಳಿಯೊಂದರಲ್ಲಿ.
ಓದಿದ್ದು ವಾಣಿಜ್ಯಶಾಸ್ತ್ರ. ಐದು ವರ್ಷಗಳು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿದ ಅನುಭವ. ಈಗ ಗೃಹಿಣಿಯಾಗಿದ್ದು, ಬರವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!