ಅಂಕಣ

ಸಾಕ್ಷರತಾ ಆಂದೋಲನ

ಅದು ತೊಂಬತ್ತರ ದಶಕದ ಮಧ್ಯಭಾಗ. ದೇಶ ಆಗಷ್ಟೇ ಹೊಸ ಅರ್ಥಿಕ ನೀತಿಗಳಿಗೆ(ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ) ತೆರೆದುಕೊಳ್ಳುತ್ತಿತ್ತು. ವಸ್ತುಗಳ ಬೆಲೆಯಲ್ಲಿನ ಚಿಕ್ಕ ಪುಟ್ಟ ಏರುಪೇರುಗಳಿಗೂ ಜನರು ಆರ್ಥಿಕ ಒಪ್ಪಂದವನ್ನೇ ಗುರಿಯಾಗಿಸಿ ಅವಲತ್ತುಕೊಳ್ಳುತ್ತಿದ್ದರು. ನಾನು ಆಗಿನ್ನೂ 7-8 ವರ್ಷದ ಹಸುಳೆ. ದೇಶದ ಪ್ರಧಾನಿ ಯಾರೆಂಬುದನ್ನೂ ಕಂಠಪಾಠ ಮಾಡಿ ನೆನಪಿಟ್ಟುಕೊಳ್ಳಬೇಕಾದ ವಯಸ್ಸು. ಸಮಯದಲ್ಲಿ ನಡೆಯುತ್ತಿದ್ದ ಸಾಕ್ಷರತಾ ಆಂದೋಲನಗಳು ಮತ್ತು ಅದರ ಸುತ್ತ ನಡೆದ ಘಟನೆಗಳು ವಿದ್ಯೆಯ ಬಗೆಗಿನ ಮತ್ತು ಜಾತಿಯ ಬಗೆಗಿನ ನನ್ನ ನಿಲುವನ್ನೇ ಬದಲಿಸಿದಂತವು. ಮಲೆನಾಡಿನ ಪುಟ್ಟ ಪುಟ್ಟ ಹಳ್ಳಿಗಳ ಸಮುಚ್ಛಯದಲ್ಲಿ ನಡೆದ ಮತ್ತು ಈಗಲೂ ನಡೆಯುತ್ತಿರುವ ನಾಟಕಗಳ ನಿರ್ದೇಶಕ ಆರ್ಥಿಕ ನೀತಿಯೇ ಆಗಿದೆ.

ಮಲೆನಾಡಿನ ಹತ್ತಿಪ್ಪತ್ತು ಹಳ್ಳಿಗಳ ನಡುವೆ ಒಂದು ಶಾಲೆ. ಶಾಲೆಗೆ ಬರುತ್ತಿದ್ದವರಲ್ಲಿ ಎರಡೇ ಜಾತಿಒಂದು ಬ್ರಾಹ್ಮಣರು, ಇನ್ನೊಂದು ಒಕ್ಕಲಿಗರು; ಉಳಿದ ಜಾತಿಯ ಜನರ ಪ್ರಮಾಣ ಶೂನ್ಯವೆನ್ನುವಷ್ಟು. ಶಿಕ್ಷಕರು ಬಹುತೇಕ ಮಂದಿ ಕುಮಟಾ, ಕಾರವಾರ, ದಕ್ಷಿಣ ಕನ್ನಡದ ಕಡೆಯವರುಉಪ್ಪು ನೀರಿನ ಚುರುಕು. ಕೋಲಿನಿಂದ ಹೊಡೆದೇ ಪಾಠ ಕಲಿಸುವ ಕಾಲವದು. ಒಕ್ಕಲಿಗರ ಮಕ್ಕಳೇ ಹೆಚ್ಚು ಪೆಟ್ಟು ತಿನ್ನುತ್ತಿದ್ದುದು. ಬ್ರಾಹ್ಮಣ ಮಕ್ಕಳೂ ಪೆಟ್ಟು ತಿನ್ನುವವರೇ ಆಗಿದ್ದರೂ, ಒಕ್ಕಲಿಗರ ಮಕ್ಕಳು ಪಡೆಯುತ್ತಿದ್ದ ಪೆಟ್ಟಿನ ಪ್ರಮಾಣದಲ್ಲಲ್ಲ. ದೈಹಿಕ ಶ್ರಮಿಕರಾದ ಒಕ್ಕಲಿಗರಿಗೆ ಪಾಠವನ್ನು ಗೃಹಿಸುವುದು, ನೆನಪಿಟ್ಟುಕೊಳ್ಳುವುದು  ಕಠಿಣವಾಗಿತ್ತು ಎನ್ನುವುದಕ್ಕಿಂತ, ವಿದ್ಯೆಯ ಬಗ್ಗೆ ಅವರಲ್ಲಿ ಪ್ರೀತಿಯನ್ನು ಹುಟ್ಟಿಸುವ ಕಾರ್ಯವೇ ಆಗಿರಲಿಲ್ಲ.

ಬಹಳಷ್ಟು ಮಂದಿ ಒಕ್ಕಲಿಗರ ಮಕ್ಕಳು ಶಾಲೆ ಮುಗಿಸಿ ಬ್ರಾಹ್ಮಣರ ಮನೆಗಳಿಗೆ ಅಡಿಕೆ ಸುಲಿಯಲು ಹೋಗುತ್ತಿದ್ದರು; ಇಲ್ಲವಾದರೆ ತಮ್ಮದೇ ಮನೆಯಲ್ಲಿ ಏನಾದರೂ ಕೆಲಸ ಮಾಡುವುದೂ ಇತ್ತು. ಇನ್ನು ರಜಾ ದಿನಗಳಲ್ಲಂತೂ ಯಾರ ಮನೆಗಾದರೂ ಅರ್ಧ ಬೆಲೆಯ ಕೂಲಿಯಾಗಿ ಹೋಗುವುದು; ಒಮ್ಮೊಮ್ಮೆ ನನ್ನ ಮನೆಗೇ ಕೂಲಿಯಾಗಿ ಬಂದ ನನ್ನ ಸಹಪಾಠಿಯೆದುರು ಕಾಣಿಸಿಕೊಳ್ಳಲು ಅವಮಾನವಾದಂತಾಗಿ ನಾನು ಅಡಗಿಕೊಳ್ಳುವುದು ಸಾಮಾನ್ಯವಾಗಿತ್ತು. ದಿನದ ದುಡಿಮೆಯನ್ನಷ್ಟೇ ಗಮನದಲ್ಲಿ ಇಟ್ಟುಕೊಂಡಿದ್ದ ಮಕ್ಕಳಿಗೆ ವಿದ್ಯಾವಂತರಾದರೆ ಮುಂದೆ ಜೀವನದಲ್ಲಿ ಏನಾದರೂ ಉಪಯೋಗವಿರಬಹುದು ಎಂಬುದರ ಕಲ್ಪನೆಯೇ ಇದ್ದಂತಿರಲಿಲ್ಲ. ಇಂಥ ಬಹುತೇಕ ಮಂದಿ ಫೇಲಾಗಿ ಶಾಲೆ ಬಿಡುತ್ತಿದ್ದುದೇ ಹೆಚ್ಚು.

ಆದರೆ ಇಂತವರಲ್ಲಿ ಒಂದಿಷ್ಟು ಮಂದಿ ಕ್ರೀಡೆಯಲ್ಲಿ ಮುಂದಿರುತ್ತಿದ್ದರು. ಅಂತವರು ಫ಼ೇಲಾದರೆ ಶಿಕ್ಷಕರೇ ಹೇಗಾದರೂ ಒತ್ತಯ ಮಾಡಿ ಅವರು ಶಾಲೆ ಬಿಡುವುದನ್ನು ತಡೆಯುತ್ತಿದ್ದರು.  ಪಿಟಿ ಉಶಾ ಮನೆಮಾತಾಗಿದ್ದ ಸಮಯ ಅದು. ವಿದ್ಯೆಯಂತೂ ತಲೆಗೆ ಹತ್ತುವುದಿಲ್ಲ, ಕ್ರೀಡೆಯಲ್ಲಾದರೂ ಏನನ್ನಾದರೂ ಸಾಧಿಸೋಣ ಎಂಬ ಹುಮ್ಮಸ್ಸಿನಿಂದ ಹಲವರು ಶಿಕ್ಷಕರ ಏಟನ್ನು ಸಹಿಸಿಕೊಂಡು ಪರೀಕ್ಷೆಯಲ್ಲಿ ಪಾಸಾಗುವ ಕಷ್ಟದ ಪ್ರಯತ್ನದಲ್ಲಿ ಇರುತ್ತಿದ್ದರು.

ಸಮಯದಲ್ಲಿ ನಮ್ಮ ಊರಿನ ಆಸುಪಾಸಿನಲ್ಲಿ ಕಾಲೇಜಿನ ಮೆಟ್ಟಿಲೇರುವ ಒಕ್ಕಲಿಗರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಆದರೆ ಹೊಸ ಅರ್ಥಿಕ ನೀತಿಗಳನ್ನು ಒಪ್ಪಿಕೊಂಡ ಸರ್ಕಾರದ ಮುಂದೆ ಇಂತಹ ಹಿಂದುಳಿದ ಗುಂಪುಗಳನ್ನು ಮಾನವ ಸಂಪನ್ಮೂಲವಾಗಿ ಪರಿವರ್ತಿಸುವ ಜವಾಬ್ಧಾರಿಯಿತ್ತು. ಭವಿಷ್ಯದಲ್ಲಿ ಅಭಿವೃಧ್ಧಿ ಹೊಂದುವ ಕೈಗಾರಿಕೆಗಳಿಗೂ, ಸೇವಾ ಕೌಶಲ್ಯದ ವ್ಯವಹಾರಗಳಿಗೂ ದೇಶವನ್ನು ಸಜ್ಜುಗೊಳಿಸಬೇಕಿತ್ತು. ಅನಕ್ಷರತೆಯಿಂದ ಜನರು ಮೋಸವಂಚನೆಗೊಳಗಾಗುವುದನ್ನು ತಡೆಯಬೇಕಿತ್ತು. ಹೀಗಾಗಿಯೇ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿತ್ತು.

ಶಿಕ್ಷಕರು ಶಾಲೆಯ ವ್ಯಾಪ್ತಿಯಲ್ಲಿ ಬರುವ ಪ್ರತೀ ಮನೆಗೂ ಹೋಗಿ, ಶಾಲೆಯಿಂದ ಹೊರಗುಳಿದ ಮಕ್ಕಳ ದಾಖಲಾತಿ ಮಾಡಿಕೊಳ್ಳುತ್ತಿದ್ದರು. ಹೀಗೆ ಒತ್ತಾಯಪೂರ್ವಕವಾಗಿ ಶಾಲೆಗೆ ದಾಖಲಾದ ಮಕ್ಕಳು ಒಂದೆರಡು ವರ್ಷಗಳಲ್ಲಿಯೇ ಶಾಲೆಗೆ ವಿದಾಯ ಹೇಳುತ್ತಿದ್ದರು. 1995ರ ಹೊತ್ತಿಗೆ ಸಾಕ್ಷರತಾ ಆಂದೋಲನ ಪ್ರಾರಂಭವಾಯಿತುವರ್ಷಕ್ಕೆರಡು ಬಾರಿ ಶಾಲೆಯ ವಿದ್ಯಾರ್ಥಿಗಳೆಲ್ಲ ಕೈಯಲ್ಲಿ ಬೋರ್ಡ್ ಹಿಡಿದು, ಘೋಷಣೆ ಕೂಗುತ್ತ ಸುತ್ತಲಿನ ಊರುಗಳಿಗೆ ಹೋಗುವುದು.

ನಮ್ಮೂರಿನ ವ್ಯಂಗ್ಯಚಿತ್ರ ಕಲಾವಿದರೊಬ್ಬರು ಪೇಪರಿನ ಮೇಲೆ ಘೋಷಣಾ ವಾಕ್ಯಗಳನ್ನು ಸುಂದರ ಅಕ್ಷರಗಳಲ್ಲಿ ಬರೆದು ಕೊಡುತ್ತಿದ್ದರು. ‘ಅಕ್ಷರ ಕಲಿಯಿರಿ ಸಾಕ್ಷರರಾಗಿರಿ’, ‘ಬೇಕೇ ಬೇಕು ಶಿಕ್ಷಣ ಬೇಕು’, ‘ಅಕ್ಷರ ಕ್ರಾಂತಿ ದೇಶಕೆ ಶಾಂತಿಇನ್ನೂ ಹಲವಾರು. ಇನ್ನು ಕೆಲವು ಮಕ್ಕಳು ತಾವೇ ದೊಡ್ಡ ದೊಡ್ಡ ಅಕ್ಷರಗಳಲ್ಲಿ ವಕ್ರವಕ್ರವಾಗಿ ಬರೆದುಕೊಂಡು ಬರುತ್ತಿದ್ದರು.

ಹೀಗೆ ಬರೆಸಿಕೊಂಡ ಪೇಪರಿಗೆ ಒಂದು ರಟ್ಟನ್ನು ಅಂಟಿಸಿ, ಬಚ್ಚಲು ಒಲೆಗೆಂದು ತಂದಿಟ್ಟ ಕೋಲುಗಳಲ್ಲೇ ಒಳ್ಳೆಯದೊಂದನ್ನು ಆರಿಸಿ ಜೋಡಿಸಿಬಿಟ್ಟರೆ ಆಂದೋಲನಕ್ಕೆ ತಯಾರಿ ಆದಂತೆಯೇ. ಪೇಪರಿಗೆ ಅಂಟು ಹಾಕಿ ರಟ್ಟು ಅಂಟಿಸಿ, ಕೋಲನ್ನು ಜೋಡಿಸುವ ಕೆಲಸ ಅಪ್ಪನದಾಗಿತ್ತು. ಹೀಗೆ ಜೋಡಿಸುವಾಗ ಅಪ್ಪ ಹೇಳುತ್ತಿದ್ದರು- “ಒತ್ತಾಯ ಮಾಡಿ ಯಾವ ವಿದ್ಯೆಯನ್ನೂ ಕಲಿಸಲಾಗುವುದಿಲ್ಲ.” ಅದು ಹೌದೆನ್ನಿಸುತ್ತದೆ. ನನ್ನ ಸಹಪಾಠಿಗಳೆಷ್ಟೋ ಜನ ಏಳನೇ ತರಗತಿಯನ್ನೋ, ಹತ್ತನೇ ತರಗತಿಯನ್ನೋ ಕಷ್ಟಪಟ್ಟು ಪಾಸು ಮಾಡಿಯೋ, ಫೇಲ್ ಆಗಿಯೋ ತಮಗೆ ತೋಚಿದ ಜೀವನೋಪಾಯಕ್ಕೆ ಹೊರಟು ಹೋಗಿದ್ದಾರೆ. ಅದರಲ್ಲೇ ಜೀವನವನ್ನು ಕಂಡುಕೊಂಡಿದ್ದಾರೆ. ಅದಕ್ಕೆ ವ್ಯತಿರಿಕ್ತವಾಗಿ, ನಾನು ಮತ್ತು ನನ್ನಂತಹ ಹಲವರು ಉನ್ನತ ಶಿಕ್ಷಣದ ಮೊರೆಹೋಗಿ, ಕಲಿತದಕ್ಕೆ ಹೊಂದಬಹುದಾದ ಉದ್ಯೋಗದ ಹುಡುಕಾಟದ ಪ್ರಕ್ರಿಯೆಯಲ್ಲೇ ಸವೆದು ಹೋಗಿದ್ದೇವೆ.

ಶಾಲೆಯಲ್ಲಿ ಹಾಜರಾತಿ ತೆಗೆದುಕೊಳ್ಳುವುದು ಮುಗಿಯುತ್ತಿದ್ದಂತೆಯೇ ಎಲ್ಲರೂ ಸಾಲಾಗಿ ಬೋರ್ಡ್ ಹಿಡಿದು ನಿಗದಿ ಪಡಿಸಲಾದ ಊರಿನ ಕಡೆಗೆ ಹೊರಡುತ್ತಿದ್ದೆವು. ಶಾಲೆಯಿಂದ 2-3 ಕಿಲೋಮೀಟರ್ ದೂರವಿರುತ್ತಿದ್ದ ಊರುಗಳನ್ನು ಪ್ರವೇಶಿಸುವವರೆಗೂ ಘೋಷಣೆಗಳನ್ನು ಕೂಗುತ್ತಲೇ ಹೋಗಬೇಕಿತ್ತು. ಬ್ರಾಹ್ಮಣರ ಕೇರಿಗಳಲ್ಲೇನು ಬಿರುಸಾಗಿ ನಡೆಯುತ್ತಿರಲಿಲ್ಲ. ಆದರೆ, ಒಕ್ಕಲಿಗರ ಕೇರಿಗಳನ್ನು ಪ್ರವೇಶಿಸುತ್ತಿದ್ದಂತೆಯೇ ಕೇರಿಯ ಮೂಲೆ ಮೂಲೆಯೂ ಮೊಳಗುವಂತೆ ಕೂಗಬೇಕಿತ್ತು. ಮಕ್ಕಳೆಲ್ಲ ರಸ್ತೆಯಲ್ಲೇ ನಿಂತು ಕೂಗುವುದು, ಶಿಕ್ಷಕರು ಪ್ರತೀ ಮನೆಗೂ ಹೋಗಿ ಪುಸ್ತಕದಲ್ಲಿ ಏನನ್ನೋ ನಮೂದಿಸಿಕೊಂಡು ಬರುವುದು ನಡೆಯುತ್ತಿತ್ತು.

ಬಯಲು ಸೀಮೆಗಳ ಹಳ್ಳಿಗಳಿಗೆ ಹೋಲಿಸಿದರೆ ಮಲೆನಾಡಿನ ಹಳ್ಳಿಗಳು ತುಂಬಾ ಶುಚಿಯಾಗಿರುತ್ತವೆ. ಜಗತ್ತನ್ನೇ ನೋಡಿರದ ನಮಗೆ, ಆಗ ಒಕ್ಕಲಿಗರ ಕೇರಿಗಳು ಕೊಳಕಾಗಿ ಕಾಣಿಸುತ್ತಿದ್ದವು. ಸಾಮನ್ಯವಾಗಿ ಹೊಳೆಯ ಅಂಚು, ನೀರಿನ ಹೊಂಡ ಅಥವಾ ತೋಟದ ಬದಿಯ ಹಳ್ಳಗಳ ಆಸುಪಾಸಿನಲ್ಲಿ ಅವರ ಕೇರಿಗಳು ಇರುತ್ತಿದ್ದುದರಿಂದ, ಮನೆಯೆದುರಿನ ಅಂಗಳ ಮತ್ತು ರಸ್ತೆಗಳೆಲ್ಲ ಜವುಗು ನೆಲದಂತೆಯೇ ಇರುತ್ತಿದ್ದವು. ಇನ್ನು ಮಳೆಗಾಲದಲ್ಲಂತೂ ಕೇಳುವುದೇ ಬೇಡ. ಸಾಕ್ಷರತಾ ಆಂದೋಲನಗಳೆಲ್ಲ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲೇ ಹೆಚ್ಚಾಗಿ ಇರುತ್ತಿದ್ದುವು. ಕಾಲೆಲ್ಲಾ ಕೆಸರಾದರೂ ಬೋರ್ಡ್ ಹಿಡಿದು, ಘೋಷಣೆ ಕೂಗುತ್ತ ಸಾಗುವುದು ಮಕ್ಕಳಿಗೆ ಸಂತೋಷದ ಸಂಗತಿಯೇ ಆಗಿರುತ್ತಿತ್ತು. ಹೇಸಿಗೆ ಮುಖ ಮಾಡಿಕೊಂಡು ತುದಿಗಾಲಲ್ಲಿ ನಡೆಯುವವರೂ ಒಬ್ಬಿಬ್ಬರು ಇರುತ್ತಿದ್ದರು.

ಅವಧಿಯಲ್ಲಿ ಬ್ರಾಹ್ಮಣರ ಗುಂಪುಗಳೆಲ್ಲ ಕಳೆಗುಂದಿದ ಮುಖ ಹೊತ್ತು ಚರ್ಚೆ ನಡೆಸುತ್ತಿದ್ದವು. ಚರ್ಚೆಯ ಸಾರಾಂಶ ಏನೆಂದರೆಒಕ್ಕಲಿಗರೆಲ್ಲ ಸಾಕ್ಷರರಾದ ಮೇಲೆ ಕೂಲಿ ಮಾಡುವುದು ಅವಮಾನವೆನ್ನಿಸಿ ತಮ್ಮ ತೋಟಗಳಿಗೆ ಕೂಲಿ ಕೆಲಸಕ್ಕೆ ಬರುವುದನ್ನು ನಿಲ್ಲಿಸಬಹುದು. ಅವರೆಲ್ಲ ಪರ್ಯಾಯ ಉದ್ಯೋಗವನ್ನು ಹುಡುಕಿಕೊಂಡು ಹೋಗಬಹುದು. ಮುಂದೆ ವ್ಯವಸಾಯವನ್ನು ಮಾಡುವುದು ಹೇಗೆ? ತಮ್ಮ ಮಕ್ಕಳಲ್ಲಿ ತಾವು ಈಗಾಗಲೇ ವಿದ್ಯೆಯ ಮಹತ್ತ್ವಾಕಾಂಕ್ಷೆಯನ್ನು ತುಂಬಿ ಆಗಿದೆ. ತಮ್ಮಲ್ಲಾಗಲೀ, ತಮ್ಮ ಮಕ್ಕಳಲ್ಲಾಗಲೀ ದೈಹಿಕ ಶ್ರಮಕ್ಕೆ ಬಲವಿಲ್ಲ. ಈ ಸಾಕ್ಷರತೆಯೇ ಮುಂದೆ ಕೃಷಿಯ ಅಧೋಗತಿಗೆ ಕಾರಣವಾಗುತ್ತದೆ ಎಂದು ಭವಿಷ್ಯವನ್ನೂ ನುಡಿದವರಿದ್ದರು.

ಆದರೆ ಯಾವ ಬ್ರಾಹ್ಮಣನೂ ಒಕ್ಕಲಿಗರು ಸಾಕ್ಷರರಾಗುವುದನ್ನು ತಡೆಯುವ ಪ್ರಯತ್ನವನ್ನು ಮಾಡಲಿಲ್ಲ; ಹಾಗೊಮ್ಮೆ ಮಾಡಿದ್ದರೂ ಅದು ಫಲಿಸುತ್ತಿರಲಿಲ್ಲ. ಎಲ್ಲವನ್ನೂ ವಿಧಿಗೇ ಬಿಟ್ಟು ಸುಮ್ಮನಾದರು.  ಹಲವು ವರ್ಷ ಸಾಕ್ಷರತಾ ಆಂದೋಲನಗಳು ನಡೆದವು. ನಂತರದ ವರ್ಷಗಳಲ್ಲಿ ಇನ್ನಷ್ಟು ಸುಧಾರಣೆಗಳಾಗಿ, ಬಹಳಷ್ಟು ಮಂದಿ ಶಾಲೆಕಾಲೇಜುಗಳೆಂದು ಮುಂದೆ ಬರತೊಡಗಿದರು. ಒಕ್ಕಲಿಗರೇ ಪ್ರೀತಿಯಿಂದ ಮತ್ತು ಆಸಕ್ತಿಯಿಂದ ತಮ್ಮ ಮಕ್ಕಳನ್ನು ಓದಿಸತೊಡಗಿದರು. ಮುಂದಿನ ದಿನಗಳಲ್ಲಿ ಶಿಕ್ಷಣ ನೀತಿಯಲ್ಲಿನ ಬಿಗಿ ಸಡಿಲವಾಗಿ, ಪಠ್ಯ ಮತ್ತು ಪರೀಕ್ಷೆಗಳಲ್ಲಿನ ಕಠಿಣತೆ ಕಡಿಮೆಯಾಗಿ ಎಲ್ಲರೂ ಕಾಲೇಜಿನ ಮೆಟ್ಟಿಲೇರುವಂತಾಯಿತು ಎಂದು ಬಹಳ ಜನ ಮಾತನಾಡಿಕೊಳ್ಳುವುದನ್ನು ಕೇಳಿಸಿಕೊಂಡಿದ್ದೇನೆ. ಅದೆಷ್ಟರ ಮಟ್ಟಿಗೆ ಸರಿ ಎಂಬುದು ವಿಮರ್ಶೆಗೆ ನಿಲುಕದ ವಿಚಾರ. ಒಟ್ಟಿನಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಾಯಿತು. ಜಾತಿ ಭೇದವಿಲ್ಲದೇ ಎಲ್ಲರೂ ಪದವಿಗೋ, ವೃತ್ತಿಪರ ಕೋರ್ಸ್ ಗಳಿಗೋ ಮುಗಿಬೀಳತೊಡಗಿದರು.

ವಿದ್ಯಾವಂತರಾದ ಒಕ್ಕಲಿಗರಲ್ಲಿ ಬಹುತೇಕ ಮಂದಿ ತಮ್ಮ ಸ್ವಂತ ಊರುಗಳಲ್ಲಿಯೇ ಸ್ವಯಂ ಉದ್ಯೋಗವನ್ನು ಕಂಡುಕೊಳ್ಳುವುದು, ಸರಕಾರೀ ಉದ್ಯೋಗಕ್ಕೆ ಪ್ರಯತ್ನಿಸುವುದು, ಗುಡಿ ಕೈಗಾರಿಕೆ  ಮತ್ತಿತರ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಾನಗರಗಳಲ್ಲೋ, ವಿದೇಶಗಳಲ್ಲೋ ಉದ್ಯೋಗಸ್ಥರಾಗಿರುವವರೂ ಹಲವರಿದ್ದಾರೆ. ಬ್ರಾಹ್ಮಣರ ಮಕ್ಕಳಲ್ಲಿ ಬಹುತೇಕ ಮಂದಿ ಮಹಾನಗರಗಳನ್ನೋ, ವಿದೇಶಗಳನ್ನೋ ಸೇರಿದ್ದಾರೆ. ಕೃಷಿಯ ಕೆಲಸಗಳನ್ನು ಮಾಡಿಸುವ ಮತ್ತು ಕೃಷಿಗಾಗಿ ಮೈ ಬಗ್ಗಿಸಿ ದುಡಿಯುವ ಹೊಸ ತಲೆಮಾರು ಇಂದು ಇಲ್ಲವಾಗಿದೆ. ಮಲೆನಾಡಿನ ಗುಡ್ಡಗಾಡು ಪ್ರದೇಶಗಳಲ್ಲಿ ಯಾಂತ್ರೀಕರಣವೂ ಸಾಧ್ಯವಾಗುತ್ತಿಲ್ಲ. ಕೃಷಿ ಕೂಲಿ ಕಾರ್ಮಿಕರ ಕೊರತೆಯಿಂದ ನರಳುತ್ತಿದೆ. ದಿನವೂ ಚುಟುವಟಿಕೆ ಇರಬೇಕಾಗಿದ್ದ ಅಡಿಕೆ ತೋಟಗಳು ಮತ್ತು ಭತ್ತದ ಗದ್ದೆಗಳು ಒಂಟಿಯಾಗಿ ಹಳ್ಳಿಗಳಲ್ಲಿ ಜೀವನ ದೂಡುತ್ತಿರುವ ಮುದುಕರಂತೆ ಸೊರಗುತ್ತಿವೆ. 6-8 ತಾಸಿನ ಕೆಲಸಕ್ಕೆ 500-600 ರೂಪಾಯಿ ದಿನಗೂಲಿ ಸಿಗುತ್ತದಾದರೂ ಯಾರೂ ಕೂಲಿ ಮಾಡುವವರೇ ಇಲ್ಲ. 4-5 ಎಕರೆ ಬಂಗಾರ ಬೆಳೆಯಬಹುದಾದ ತೋಟವಿದ್ದರೂ, ಬ್ರಾಹ್ಮಣರ ಮಕ್ಕಳು ಮಹಾನಗರದಲ್ಲಿ ಕುಳಿತು “ಕೃಷಿಯ ಕಷ್ಟಗಳಿಗಿಂತ ಈ ಮಹಾನಗರಗಳ ಮಾಲಿನ್ಯವೇ ಲೇಸು” ಎನ್ನುತ್ತಿದ್ದಾರೆ.

Facebook ಕಾಮೆಂಟ್ಸ್

ಲೇಖಕರ ಕುರಿತು

ಶ್ರೀಕಲಾ ಹೆಗಡೆ ಕಂಬ್ಳಿಸರ

ಹುಟ್ಟಿದ್ದು, ಬೆಳೆದದ್ದು ಸಿರಸಿಯ ಪುಟ್ಟ ಹಳ್ಳಿಯೊಂದರಲ್ಲಿ.
ಓದಿದ್ದು ವಾಣಿಜ್ಯಶಾಸ್ತ್ರ. ಐದು ವರ್ಷಗಳು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿದ ಅನುಭವ. ಈಗ ಗೃಹಿಣಿಯಾಗಿದ್ದು, ಬರವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!