ಅಂಕಣ

ಬಹೂಪಯೋಗಿ ಹೀರೇಕಾಯಿ ಕೃಷಿ

ತರಕಾರಿ ಕೃಷಿ ಮಾಡುವ ಮನಸ್ಸು ಇದ್ದವರಿಗೆ ಒಂದಲ್ಲ ಒಂದು ತರಕಾರಿ ಬೆಳೆಯುತ್ತಾನೆ ಇರಬೇಕು. ಅಂತವರಿಗೆ ಪಟ್ಟಣದಿಂದ ತಂದ ವಿಷಯುಕ್ತ ತರಕಾರಿ ಇಷ್ಟವಿಲ್ಲ. ತಾವೇ ಬೆಳೆದು ಕೊಯ್ದು ತಾಜಾತನದ ಹಸಿಯಿರುವಾಗಲೆ ಪದಾರ್ಥ ಮಾಡಿ ಸವಿಯುವ ಅಭ್ಯಾಸ. ಹಳ್ಳಿಗಳಲ್ಲಿ ಕೆಲವೊಂದು ಮನೆಗಳ ಪರಿಸರವನ್ನು ನೋಡುವಾಗ ಆಶ್ಚರ್ಯ ಮತ್ತು ಖುಷಿ. ಎಷ್ಟೊಂದು ವೈವಿಧ್ಯದ ತರಕಾರಿಗಳು. ಮನೆಯ ಗೃಹಿಣಿಯರಿಗೆ ಯಾವುದನ್ನು ಮೊದಲು ಅಡುಗೆ ಮಾಡುವುದು ಎಂಬಷ್ಟು ಗೊಂದಲ. ಬೆಂಡೆಕಾಯಿ ಬಂದಿದೆ, ಹಾಗಲಕಾಯಿ ರಾಶಿ ಬೀಳುತ್ತಿದೆ, ಸೋರೆಕಾಯಿ ಮೊನ್ನೆಯೆ ಬಂದು ಕುಳಿತಿದೆ, ಪಡುವಲಕಾಯಿ ರಾಶಿಯೂ ಸಣ್ಣದಲ್ಲ. ಎಲ್ಲವನ್ನೂ ಅವಿಲು ಮಾಡಿದರೆ ಹೇಗೆ? ಬೆಂಡೆಕಾಯಿ ಸಾಂಬಾರೇ ಖುಷಿ. ಹೀಗೆ ಗೊಂದಲಗಳು, ಉತ್ಸಾಹಗಳು. ಯಾಕೆಂದರೆ ಸಾವಯವ ರೀತಿಯಲ್ಲಿ ಹಳ್ಳಿಗಳಲ್ಲಿ ಬೆಳೆದ ತರಕಾರಿಗಳಿಗೆ ಸರಿಸಾಟಿಯಾದ ತರಕಾರಿ ನಗರಗಳಲ್ಲಿ ಖಂಡಿತ ಸಿಗದು. ಕೆಲವು ತರಕಾರಿಗಳಿಗೆ ಮಳೆಗಾಲದ ಹವಾಮಾನ ಒಪ್ಪುತ್ತದೆ. ಇನ್ನು ಕೆಲವು ತರಕಾರಿಗಳಿಗೆ ಬೇಸಿಗೆ ಹಿತ. ಹೀರೇಕಾಯಿ ಮಳೆಗಾಲ ಮತ್ತು ಬೇಸಿಗೆ ಎರಡೂ ಕಾಲಕ್ಕೆ ಸೂಕ್ತವಾಗಿ ಒಗ್ಗುತ್ತದೆ. ಬೆಳೆಯೂ ಸುಲಭ. ಎರಡು ಮೂರು ಬಳ್ಳಿಯಿದ್ದರೆ ಒಂದು ಸಂಸಾರಕ್ಕೆ ಯಥೇಚ್ಛ ಹೀರೇಕಾಯಿ ಲಭ್ಯ.

ತಳಿಗಳು

ಹೀರೇಕಾಯಿಯಲ್ಲಿ ನಾಲ್ಕಾರು ವಿಧಗಳಿವೆ. ಕೆಲವು ಬಹಳ ಗಿಡ್ದ. ಇನ್ನು ಕೆಲವು ಗೊಂಚಲು. ಮತ್ತೆ ಹಲವು ಮಧ್ಯಮ ಗಾತ್ರದ್ದಾದರೆ ಕೆಲವು ಎರಡು ಎರಡೂವರೆ ಅಡಿಯಷ್ಟು ಉದ್ದಕ್ಕೆ ಬೆಳೆಯುತ್ತವೆ. ಎಲ್ಲವೂ ತರಕಾರಿ ಕೃಷಿಗೆ ಸೂಕ್ತವಾದವುಗಳೆ. ಕೆಲವು ಹೈಬ್ರಿಡ್ ತಳಿಗಳಿವೆ. ಒಂದು ಘಟನೆ ನೋಡಿ. ನಮ್ಮದೆ ಅನುಭವ. ಪೇಟೆಯಿಂದ ಬೀಜ ತಂದು ಬೆಳೆದ ಉದ್ದನೆಯ ಹೀರೇಕಾಯಿ ಒಮ್ಮೆ ನಮ್ಮನ್ನೆಲ್ಲ ಪೇಚಿಗೆ ಸಿಲುಕಿಸಿತು. ಮೂರು ನಾಲ್ಕು ಬೀಜ ಬಿತ್ತಿ ಬೆಳೆದಾಯಿತು. ಬಳ್ಳಿ ಬೆಳೆಯಿತೆಂದು ಗಟ್ಟಿಗೆ ಚಪ್ಪರವೂ ಹಾಕಿಯಾಯಿತು. ಚಪ್ಪರ ತುಂಬ ಬಳ್ಳಿ ಬಹಳ ಸೊಗಸಾಗಿ ಹಬ್ಬಿತು. ಗಂಡು ಹೂವು ಬಿಟ್ಟಿತು. ಮಿಡಿ ಹೂವರಳಿ ಪರಾಗಸ್ಪರ್ಶವಾಗಿ ಮಿಡಿಯುಳಿಯಿತು. ಬೆಳೆಯಿತು. ಖುಷಿಯಿಂದ ಕೊಯ್ದು ಒಗ್ಗರಣೆ ಕೊಟ್ಟು ಪಲ್ಯ ಮಾಡಿದ್ದಾಯಿತು. ಊಟದ ಹೊತ್ತಿಗೆ ಒಂದು ತುತ್ತು ಬಾಯಿಗಿಡುವಾಗ ಪಲ್ಯ ಹಾಗಲಕಾಯಿಗಿಂತಲೂ ಕಹಿಯೋ ಕಹಿ. ಕಷ್ಟಪಟ್ಟು ಬೆಳೆದ ಬಳ್ಳಿ, ಹೊಂಡದ ತೋಟದಿಂದ ಅಡಿಕೆ ಮರ ಕಡಿದು ತಂದು ಚಪ್ಪರ ಹಾಕಿದ ಶ್ರಮವೆಲ್ಲ ಕಹಿಯಲ್ಲಿ ಮುಳುಗಿಹೋಯಿತು. ಮತ್ತೆ ಆ ಬಳ್ಳಿಯನ್ನು ತುಂಡರಿಸಿ ತೆಗೆದು ಅದೆ ಜಾಗದಲ್ಲಿ ಬೇರೆ ತಳಿಯ ಹೀರೇಕಾಯಿ ಬೆಳೆದು ಉಂಡೆವು. ಇಂತಹ ಅನುಭವಗಳು ಜಾಗೃತಿಯನ್ನೂ ಕಲಿಸುತ್ತವೆ.

ಗೊಂಚಲು ಹೀರೇಕಾಯಿ ಪದಾರ್ಥಕ್ಕೆ ಹಚ್ಚಲು ಕಷ್ಟ. ಸಣ್ಣಸಣ್ಣದಾಗಿರುವುದರಿಂದ ತುಂಬ ಸಮಯ ಬೇಕು. ಆದರೆ ಇವುಗಳ ಪದಾರ್ಥ ರುಚಿ ಮತ್ತು ಪರಿಮಳ. ಕೆಲವರಿಗೆ ಮಧ್ಯಮ ಗಾತ್ರದ್ದಾದರೆ ಒಳ್ಳೆಯದು. ಕೆಲವು ಚಪ್ಪರಗಳಿಂದ ಹಕ್ಕಿಗಳು, ಇಲಿಗಳು ಮಿಡಿಗಳನ್ನು ತಿಂದು ಹಾಳುಮಾಡುತ್ತವೆ. ಇಂತಹ ಸಮಯದಲ್ಲಿ ಮಿಡಿಗಳಿಗೆ ಪ್ಲಾಸ್ಟಿಕ್ ತೊಟ್ಟೆಗಳನ್ನು ಕಟ್ಟುವುದಾದರೆ ಮಧ್ಯಮ ಗಾತ್ರದ್ದೇ ಸೂಕ್ತ. ಈ ರಗಳೆಗಳೆಲ್ಲ ಇಲ್ಲದವರು ಉದ್ದನೆಯ ತಳಿಯನ್ನೂ ಬೆಳೆಯಬಹುದು.

ಸೂಕ್ತ ಜಾಗ

ಹೀರೇಕಾಯಿ ಬಳ್ಳಿಯನ್ನು ಚಪ್ಪರಕ್ಕೆ ಹಬ್ಬಿಸಿ ಬೆಳೆಯುವುದು ಬಹಳ ಒಳ್ಳೆಯದು. ನೆಲದಲ್ಲಿ ಅಥವ ಚಿಕ್ಕ ಮರಗಳಿಗೆ ಹಬ್ಬಿಸಿಯೂ ಬೆಳೆಯಬಹುದು. ಕೆಲವರು ಬೇಲಿಗೂ ಹಬ್ಬಿಸುತ್ತಾರೆ. ಬೆಳೆಯಲು ಸೂಕ್ತ ಜಾಗ ಅಗತ್ಯ. ಮರದ ಅಡಿಯಲ್ಲಿ, ನೆರಳಿನಲ್ಲಿ ಬೆಳೆಯುವುದು ಬೇಡ. ಮರದಡಿಯಲ್ಲಿ ಮಳೆಗಾಲದಲ್ಲಿ ಬೆಳೆದರೆ ಮಳೆ ನೀರು ತೊಟ್ಟಿಕ್ಕಿ ಬಳ್ಳಿ ಹಾಳಾಗುತ್ತದೆ. ಬೇಸಿಗೆಯಲ್ಲಿ ಬಿಸಿಲು ತಾಗದೆ ಬಳ್ಳಿ ಸೊಕ್ಕಿ ಫಸಲು ಕಡಿಮೆಯಾಗುತ್ತದೆ. ಮಳೆಗಾಲದಲ್ಲಿ ಬಿತ್ತನೆಗೆ ಹೊಂಡ ಮಾಡುವ ಅಗತ್ಯ ಇಲ್ಲ. ಆದರೆ ಬೇಸಿಗೆಯಲ್ಲಿ ಒಂದು ಅಡಿಯಷ್ಟು ಹೊಂಡದ ಸಾಲುಗಳನ್ನು ಮಾಡಿಯೇ ಬಿತ್ತನೆ ಮಾಡುವುದು ಅಗತ್ಯ.

ಬಿತ್ತನೆ

ತೂತಾದ ಗೆರಟೆಯಲ್ಲಿ ಮಣ್ಣು ತುಂಬಿ ಅದರಲ್ಲಿ ಬಿತ್ತನೆ ಮಾಡಿ ಸಸಿ ನಾಲ್ಕು ಎಲೆಯಷ್ಟು ಬೆಳೆದ ನಂತರ ನಮಗೆ ಸೂಕ್ತ ಜಾಗದಲ್ಲಿ ನಡಬಹುದು. ಇಲ್ಲವೆ ಬೆಳೆಯಲು ಸೂಕ್ತ ಜಾಗದಲ್ಲಿ ಬಿತ್ತನೆ ಮಾಡಬಹುದು. ಹಟ್ಟಿಗೊಬ್ಬರದ ಹುಡಿಯನ್ನು ಮಣ್ಣಿಗೆ ಮಿಶ್ರಮಾಡಿ ಅದರಲ್ಲಿ ಬಿತ್ತನೆ ಮಾಡಿದರೆ ಮೊಳಕೆ ಬರುವಾಗಲೆ ಗಿಡಕ್ಕೆ ಸೂಕ್ತ ಪೋಷಕಾಂಶಗಳು ಲಭ್ಯವಾಗುತ್ತವೆ. ಮೊಳಕೆ ಬಂದು ನಾಲ್ಕು ಎಲೆಗಳು ಕಂಡುಬರುವಾಗ ಹಸಿರು ಸಪ್ಪುಕೊಡಬಹುದು. ಸಣ್ಣಸಣ್ಣ ಎಲೆಗಳಿರುವ ಎಂಜಿರದಂತಹ ಪೊದೆಯ ಸೊಪ್ಪಾದರೆ ಅನುಕೂಲ. ಸೊಪ್ಪು ಎಳೆಯ ಗಿಡವನ್ನು ಮುಚ್ಚದಂತೆ ನಿಗಾ ಬೇಕು. ಈ ಹಂತದಲ್ಲಿ ಹಟ್ಟಿಗೊಬ್ಬರವನ್ನೂ ತೆಳುಪದರದಲ್ಲಿ ಕೊಡಬಹುದು. ಹಟ್ಟಿಗೊಬ್ಬರದ ಬಿಸಿ ಆರಿದ ನಂತರ ಬುಡಕ್ಕೆ ಕೊಡದಿದ್ದರೆ ಅದರ ಖಾರಕ್ಕೆ ಎಳೆಯ ಹೀರೇಕಾಯಿ ಗಿಡಗಳು ಬೆಂದುಹೋಗಬಹುದು. ಗೊಬ್ಬರ ಕೊಟ್ಟು ನಾಲ್ಕೈದು ದಿವಸದಲ್ಲಿ ತೆಳುವಾಗಿ ಮಣ್ಣುಕೂಡಬಹುದು. ಮಣ್ಣು ಗಿಡದ ಬುಡಕ್ಕೆ ತಾಗದಂತೆ ಈ ಹಂತದಲ್ಲಿ ಜಾಗ್ರತೆಯಿರಲಿ. ಬಳ್ಳಿ ಬೆಳೆದ ನಂತರ ಬಳ್ಳಿಗೆ ತಾಗಿದರೆ ಒಳ್ಳೆಯದು.  ಬುಡಕ್ಕೆ ಮಣ್ಣು ಕೊಡುವಾಗ ದೊಡ್ಡ ಕಲ್ಲುಗಳಿಲ್ಲದ ಮಣ್ಣು ಹಾಕುವುದು ಒಳ್ಳೆಯದು. ಗಿಡ ಬೆಳೆದು ಬಳ್ಳಿ ಹೊರಡಲು ಶುರುವಾದರೆ ಆಧಾರ ಕೋಲು ಕೊಟ್ಟು ಹತ್ತಿಸುವುದು. ಆಧಾರ ಕೋಲಿನಲ್ಲಿ ಮೇಲೆ ಏರಿ ತುದಿಗೆ ಬಳ್ಳಿ ಮುಟ್ಟುವಾಗ ಚಪ್ಪರ ತಯಾರಾದರೆ ಸರಿಹೋಗುತ್ತದೆ.

ಗೊಬ್ಬರ

ಸಾವಯವ ಗೊಬ್ಬರ ಮಾತ್ರ ಸಾಕು. ಹಟ್ಟಿಗೊಬ್ಬರ, ಹರಳಿಂಡಿ ಅಥವ ಬೇವಿನ ಹಿಂಡಿ, ನೆಲಗಡಲೆ ಹಿಂಡಿ, ಬೂದಿ ಇವಿಷ್ಟು ಉತ್ತಮವಾಗಿ ತರಕಾರಿ ಬೆಳೆದು ಕೊಡಬಹುದು. ವಾರಕ್ಕೊಮ್ಮೆ ಯಾವುದಾದರೂ ಗೊಬ್ಬರ ಕೊಡುತ್ತಿದ್ದರೆ ಫಸಲು ನಿರಂತರವಾಗಿ ಬರುತ್ತದೆ. ನಿತ್ಯ ಬಳ್ಳಿಗಳನ್ನು ಗಮನಿಸಿ ಕೀಟಗಳಿದ್ದರೆ ಅವನ್ನು ಕೈಯಿಂದಲೆ ಹಿಸುಕಿ ಸಾಯಿಸುವುದು ಅಥವ ಕೋಲಿನಿಂದ ಚುಚ್ಚಿ ನಿವಾರಿಸುವುದು ಸೂಕ್ತ. ಆರಂಭದಲ್ಲೇ ಕೀಟಗಳನ್ನು ಗುರುತಿಸಿದರೆ ಹತೋಟಿ ಸಾಧ್ಯ. ಈ ರೀತಿ ನಿತ್ಯ ಗಮನಿಸುತ್ತಿದ್ದರೆ ರೋಗವೂ ಬರುವುದಿಲ್ಲ, ಆದ ಫಸಲು ಸರಿಯಾಗಿ ಕೈಸೇರುತ್ತದೆ. ಹೆಚ್ಚು ಬೆಳೆಯುವುದಕ್ಕೆ ಮುಂಚೆ ಕೊಯ್ದು ಬಿಡಿ. ಹದವಾಗಿ ಬೆಳೆದ ಹೀರೇಕಾಯಿಗಳನ್ನು ತಿರುಳು ಬೀಜ ಸಮೇತ ಪದಾರ್ಥ ಮಾಡಬಹುದು. ಆರೋಗ್ಯ ಹಿತಕಾರಿಯಾಗುತ್ತದೆ. ಇದಕ್ಕೆ ಒಪ್ಪುವ ಮನಸ್ಸು ನಾವು ಬೆಳೆಸಿಕೊಳ್ಳಬೇಕು.  ನಮ್ಮ ಅನ್ನಕ್ಕೆ ಬೇಕಾದ ಪದಾರ್ಥವನ್ನು ನಾವೇ ಬೆಳೆದ ತರಕಾರಿಗಳಿಂದ ಮಾಡುತ್ತೇವೆ ಎಂಬ ಶಪಥ ಮಾಡಿಕೊಳ್ಳಬೇಕು.

Facebook ಕಾಮೆಂಟ್ಸ್

ಲೇಖಕರ ಕುರಿತು

ಶಂ.ನಾ. ಖಂಡಿಗೆ

ಕನ್ನಡದಲ್ಲಿ ಎಂ.ಎ ಬಳಿಕ ಹೊಸದಿಗಂತ ಪತ್ರಿಕೆಯ ಸಾಪ್ತಾಹಿಕ ಪುರವಣಿಯ ಸಂಪಾದಕರಾಗಿ ಐದು ವರ್ಷ ಕಾರ್ಯನಿರ್ವಹಿಸಿದ ಬಳಿಕ ಮರಳಿ ಮಣ್ಣಿಗೆ ಎನ್ನುವಂತೆ ಪೂರ್ಣ ಪ್ರಮಾಣದಲ್ಲಿ ಕೃಷಿಯತ್ತ ಒಲವು. ಜೊತೆಗೇ ಹೊಸದಿಗಂತ ಪತ್ರಿಕೆಯಲ್ಲಿ ಹತ್ತು ವರ್ಷಗಳಿಂದ “ಕೃಷಿಯೊಸಗೆ” ಎಂಬ ಅಂಕಣವನ್ನು ಬರೆಯುತ್ತಿದ್ದಾರೆ. ಮಕ್ಕಳ ಕಥೆ ಕವನ – ಪುಸ್ತಕ ವಿಮರ್ಶೆ – ವ್ಯಕ್ತಿತ್ವ ವಿಕಸನ ಬರಹ ಹೀಗೆ ಬರಹದ ಒಲವು. ಪ್ರಸ್ತುತ, ಪ್ರತಿಷ್ಟಿತ ಕ್ಯಾಂಪ್ಕೋದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!