Featured ಅಂಕಣ

“ಭಾರತ ನಿಜಕ್ಕೂ ಇಂದು ಜೀವಂತವಾಗಿ ಉಳಿದುಕೊಂಡಿದ್ದರೆ ಅದು ಹಳ್ಳಿಗಳಿಂದಾಗಿ ಮಾತ್ರ.” – ಸೀತಾರಾಮ ಕೆದಿಲಾಯ

ಪ್ರಶ್ನೆ: ಈಚಿನ ಮಾರುಕಟ್ಟೆ ಪ್ರಭಾವದ ಒತ್ತಡಗಳನ್ನು ಗ್ರಾಮೀಣ ಸಮುದಾಯಗಳು ಸಮರ್ಪಕವಾಗಿ ಎದುರಿಸುತ್ತಿವೆಯೇ?

ಉತ್ತರ: ಬಹಳ ಒಳ್ಳೆಯ ಪ್ರಶ್ನೆ. ಇಂದಿನ ಮಾರುಕಟ್ಟೆಯ ಪ್ರಭಾವವನ್ನು ಸಾಮಾನ್ಯ ಗ್ರಾಮೀಣಪ್ರದೇಶದ ಜನರು ಎದುರಿಸುವುದು ಬಹಳ ಕಷ್ಟವಾಗಿದೆ. ಏಕೆಂದರೆ ಈವತ್ತಿನ ಮಾರುಕಟ್ಟೆಯ ಪ್ರಭಾವಗಳು ಎಲ್ಲವೂ ವಿದೇಶೀ ಕಂಪೆನಿಗಳ ವಾಣಿಜ್ಯಸಾಮ್ರಾಜ್ಯಗಳ ಮೂಲದ್ದಾಗಿವೆ. ಹಾಗಾಗಿ ವಿದೇಶೀ ಕಂಪೆನಿಗಳ ಪ್ರಭಾವವನ್ನು ಸರ್ವಸಾಮಾನ್ಯ ಹಳ್ಳಿಯ ಜನ ಎದುರಿಸುವುದು ಕಷ್ಟ. ಅದನ್ನು ಎದುರಿಸುವುದಕ್ಕೋಸ್ಕರ, ನಮಗೆಲ್ಲ ತಿಳಿದಿರುವಂತೆ ಬಾಬಾ ರಾಮ್‍ದೇವ್ ಅವರು ಸವಾಲು ಸ್ವೀಕರಿಸಿ ಬಹಳ ದೊಡ್ಡ ಸಡ್ಡುಹೊಡೆದಿದ್ದಾರೆ. ಇಂತಹ ದೊಡ್ಡ ಮಟ್ಟಿನ ಸಡ್ಡುಹೊಡೆದಿರುವುದರಿಂದ ಮಾರುಕಟ್ಟೆಯ ಪ್ರಭಾವ ಸ್ವಲ್ಪಮಟ್ಟಿಗೆ ಬಾಗುತ್ತಿದೆ ಎನ್ನಬಹುದು; ಇವರನ್ನೇ ಬಾಗಿಸಲು ವಿದೇಶೀ ಕಂಪೆನಿಗಳು ಪ್ರಯತ್ನಪಟ್ಟರೂ ಸಾಫಲ್ಯ ಸಾಧಿಸಲಾಗಿಲ್ಲ. ಇಷ್ಟು ದೊಡ್ಡ ಮಟ್ಟಿಗೆ ಪ್ರಭಾವ ಬೀರುವ ಶಕ್ತಿ ಬಾಬಾ ಅವರಲ್ಲಿದೆ, ಅವರು ಮಾಡಬಲ್ಲರು. ಆದರೆ ಇದೇ ಶಕ್ತಿ ನಮ್ಮ ಹಳ್ಳಿಹಳ್ಳಿಯಲ್ಲಿರುವ ಜನರಲ್ಲಿ ಇದೆ ಎನ್ನಲಾಗುವುದಿಲ್ಲ. ಹಾಗಾಗಿ ಇಂದು ಮಾರುಕಟ್ಟೆ ಬಹುಮಟ್ಟಿಗೆ ವಿದೇಶೀ ಕಂಪೆನಿಗಳÀ ಕಪಿಮುಷ್ಟಿಯಲ್ಲಿ ಇದೆ. ಇದನ್ನು ಮೀರಿ ನಿಲ್ಲಲು ಇರುವ ಏಕೈಕ ಉಪಾಯವೆಂದರೆ ನಮ್ಮ ಹಳ್ಳಿಯ ಜನರೆಲ್ಲರು ಪುನಃ ಒಂದಾಗಿ ನಿಂತು, ಸಡ್ಡುಹೊಡೆದು ನಿಂತಿರುವ ಬಾಬಾ ರಾಮ್‍ದೇವ್‍ರಂತಹ ಸಮರ್ಥ ಶಕ್ತಿಗಳ ಜೊತೆ ಕೈಜೋಡಿಸಿದಾಗ ಮಾರುಕಟ್ಟೆಯಲ್ಲಿ ವಿದೇಶೀ ಕಂಪೆನಿಗಳ ಪ್ರಭಾವ ಕಡಮೆಯಾಗಬಹುದು. ಇದಕ್ಕಾಗಿ ಕೆಲವಷ್ಟು ಪ್ರಯತ್ನಗಳು ಆಗಬೇಕಿವೆ.

ಪ್ರಶ್ನೆ: ಪ್ರಚಲಿತ ಪರಿಸರದಲ್ಲಿ ಹಿಂದೆ ಇದ್ದಂತಹ ಗ್ರಾಮಕೇಂದ್ರಿತ ಜೀವನವನ್ನು ಗ್ರಾಮೀಣರು ಬಯಸುತ್ತಿದ್ದಾರೆಯೇ?

ಉತ್ತರ: ಅವಶ್ಯವಾಗಿ ಬಯಸುತ್ತಿದ್ದಾರೆ. ಯಾಕೆಂದರೆ ಭಾರತದ ಜೀವನ ಶೇ. 80 ಭಾಗ ಬದುಕಿ ನಿಂತಿರುವುದು ಹಳ್ಳಿಗಳ ಮೇಲೆ. ನಗರಪ್ರದೇಶಗಳ ಪ್ರಭಾವಕ್ಕೆ ಒಳಗಾಗದೆ ಇರತಕ್ಕಂತಹ, ನಗರದ ಪ್ರಭಾವದಿಂದ ದೂರ ನಿಂತಿರುವಂತಹ ಸಾವಿರಾರು ಹಳ್ಳಿಗಳು ಇವೆಯಲ್ಲ, ಆ ಹಳ್ಳಿಗಳು ತಮ್ಮತನವನ್ನು ಈಗಲೂ ಉಳಿಸಿಕೊಂಡಿವೆ. ಉಳಿಸಿಕೊಂಡಿದ್ದು ಮಾತ್ರವಲ್ಲ; ಉಳಿಸಿಕೊಂಡಿದ್ದಕ್ಕೆ ಸಂತೋಷಪಡುತ್ತಿವೆ. ಇದೇ ರೀತಿಯಲ್ಲಿ ಉಳಿಯಬೇಕು, ಉಳಿಸಬೇಕು ಎನ್ನುವ ಸಂಕಲ್ಪ ಅವರಲ್ಲಿದೆ. ಅವರು ಯಾರೂ ಈ ನಗರದ ಪ್ರಭಾವಕ್ಕೆ ಒಳಗಾದ ಹಳ್ಳಿಯ ಜನಜೀವನವನ್ನು ಬಯಸುವುದಿಲ್ಲ. ಉದಾಹರಣೆಗೆ ನಮ್ಮ ದೇಶದಲ್ಲಿ ಲಕ್ಷಾಂತರ ಹಳ್ಳಿಗಳನ್ನು ಆದಿವಾಸಿ, ವನವಾಸಿಪ್ರದೇಶಗಳು ಎಂದು ಕರೆಯುತ್ತೇವೆ. ಅಲ್ಲಿನ ಜನರಿಗೆ ಇದಾವುದರ ಆಕರ್ಷಣೆ-ಅಪೇಕ್ಷೆ-ಆಸೆ ಇಲ್ಲ. ಅವರ ಪಾಡಿಗೆ ಅವರು ಹಳ್ಳಿಯ ಜೀವನದಲ್ಲಿ ಸಂತುಷ್ಟರಾಗಿದ್ದಾರೆ. ನಮ್ಮ ಭಾರತ ಹೇಳುತ್ತದೆ: ‘Simple living and high thinking’ ‘ಸಾದಾ ಸರಳವಾಗಿರತಕ್ಕಂತಹ ಜೀವನ, ಉದಾತ್ತವಾದ ಚಿಂತನ’; ಇದನ್ನು ನಿಜವಾಗಿಯೂ ಪಾಲಿಸಿಕೊಂಡು ಬದುಕುತ್ತಿರುವಂತಹ ಜನರನ್ನು ನೋಡಲು ಸಾಧ್ಯವಿರುವುದು ಭಾರತದ ನಗರಜೀವನದ ಪ್ರಭಾವ ಹೆಚ್ಚಾಗಿ ಆಗದಿರುವಂತಹ ಇಂತಹ ಹಳ್ಳಿಗಳಲ್ಲಿ ಮಾತ್ರ. ಇವರನ್ನು ನೋಡಿ ಕಲಿಯುವುದು ಬಹಳಷ್ಟಿದೆ. ಇಂತಹ ಜನ ಭಾರತದಲ್ಲಿ ಇಂದಿಗೂ ಬಹಳ ದೊಡ್ಡಪ್ರಮಾಣದಲ್ಲಿ ಇದ್ದಾರೆ, ಇನ್ನೂ ಹೀಗೆಯೇ ಉಳಿಯಬೇಕು ಎನ್ನುವುದು ಅವರ ಆಶಯವೂ ಆಗಿದೆ. ಅವರು ಈ ನಗರದ ತೆಕ್ಕೆಗೆ ಬರಲು ಬಯಸುವುದಿಲ್ಲ, ಯಾವ ಹೆಚ್ಚಿನ ಆಸೆಯೂ ಅವರಿಗಿಲ್ಲ. ನೀವು ಆಸೆ ತೋರಿಸಿದರೂ, “ನಮಗೆ ಅದು ಬೇಡ; ಇವುಗಳೆಲ್ಲ ಇಲ್ಲದೆಯೂ ನಾವು ಸುಖವಾಗಿದ್ದೇವೆ” ಎನ್ನುವುದು ಅವರಲ್ಲಿ ಹೆಚ್ಚಿನವರಿಂದ ಸಿಗುವ ಉತ್ತರ. ಹಾಗಾಗಿ ಒಂದು ದೃಷ್ಟಿಯಲ್ಲಿ ನಿಮ್ಮ ಪ್ರಶ್ನೆಗೆ ಅನುಕೂಲಕರವಾದಂತಹ ವಾತಾವರಣ ಈವತ್ತಿಗೂ ಭಾರತದ ಹಳ್ಳಿಗಳಲ್ಲಿ ಉಳಿದುಕೊಂಡು ಬಂದಿರುವುದರಿಂದ; ಇದರಲ್ಲಿ ಆಸಕ್ತಿ ಇರುವಂತಹ, ಹಳ್ಳಿಜೀವನದ ಪ್ರೀತಿ ಇರುವಂತಹ ಭಾರತದ ಎಲ್ಲ ಜನರು ಅಂತಹ ಜನಜೀವನವನ್ನು ಉಳಿಸಿ-ಬೆಳೆಸುವುದಕ್ಕೋಸ್ಕರ ಹೇಗೆ ಕೆಲಸ ಮಾಡಬೇಕು ಎನ್ನುವ ಚಿಂತನೆ ಮಾಡಬೇಕಾಗಿದೆ.

ಪ್ರಶ್ನೆ: ಅಂತಹ ಜೀವನಕ್ರಮಕ್ಕೆ ಮರಳುವುದು ಸಾಧ್ಯವೆನಿಸುತ್ತದೆಯೇ?

ಉತ್ತರ: ಖಂಡಿತವಾಗಿ ಮರಳಬಹುದು. ಮರಳಬೇಕು ಎನ್ನುವ ಮನಸ್ಸಿದ್ದರೆ, ಇಂತಹ ಜನಜೀವನ ನಡೆಸುತ್ತಿರುವವರ ಜೊತೆ ಹೋಗಿ ಬೆರೆತು ಕಲಿಯಬೇಕು.

ಭಾರತದ ಆತ್ಮ ಎಂದು ನಾವು ಕರೆಯುವ ಅಧ್ಯಾತ್ಮ; ಅದನ್ನು ಬಿಟ್ಟರೆ ಭಾರತ ಇಲ್ಲ. ಇದನ್ನು ಭಾರತದ ಎಲ್ಲ ಋಷಿ-ಮುನಿಗಳು, ಸಾಧು-ಸಂತರು ಮೊನ್ನೆಮೊನ್ನೆಯವರೆಗೂ ಹೇಳುತ್ತಾ ಬಂದಿದ್ದಾರೆ. ಉದಾಹರಣೆಗೆ ಗಾಂಧಿಯವರು ರಾಜಕೀಯಕ್ಕೆ ಪ್ರವೇಶಿಸಿದ ಬಳಿಕ ಗೋಪಾಲಕೃಷ್ಣ ಗೋಖಲೆಯವರನ್ನು ಭೇಟಿ ಮಾಡಿದರು. ಆ ಸಂದರ್ಭದಲ್ಲಿ ಗಾಂಧಿಯವರು ಗೋಖಲೆಯವರನ್ನು ಉದ್ದೇಶಿಸಿ: “ನೀವು ರಾಜಕೀಯದಲ್ಲಿ ತುಂಬ ಹಳಬರು. ನಾನು ಹೊಸಬ. ನನಗೆ ಮಾರ್ಗದರ್ಶನ ಮಾಡಿ” ಎಂದು ಕೇಳಿಕೊಂಡರು. ಆಗ ಗೋಖಲೆಯವರು: “ನಾನು ರಾಜಕೀಯದಲ್ಲಿ ಹಿರಿಯನಿರಬಹುದು. ಆದರೆ, ನೀನು ಭಾರತದ ನಿಜವಾದ ಆಧಾರ, ಆತ್ಮ ಎಂದು ಕರೆಯುವ ಅಧ್ಯಾತ್ಮದಲ್ಲಿ ಬಹಳ ಮುಂದೆ ಇದ್ದೀಯ. ಆದ್ದರಿಂದ ರಾಜಕೀಯವನ್ನು ಅಧ್ಯಾತ್ಮನಿಷ್ಠಗೊಳಿಸು ಎನ್ನುವುದೇ ನನ್ನ ಸಲಹೆ” ಎನ್ನುತ್ತಾರೆ. ಈ ಮಾತನ್ನು ನಾವು ಕೇಳುವಾಗ ಅಧ್ಯಾತ್ಮನಿಷ್ಠ ಚಿಂತನೆಯಿಂದಲೇ ಅಂದು ಗಾಂಧಿಯವರು ಹೇಳಿದ್ದು, “ಭಾರತ ನಿಜವಾಗಿಯೂ ಭಾರತವಾಗಿ ಉಳಿಯಬೇಕೆಂದಿದ್ದರೆ, ಭಾರತ ರಾಮರಾಜ್ಯ ಆಗಬೇಕೆಂದಿದ್ದರೆ, ಅದು ಗ್ರಾಮರಾಜ್ಯದಿಂದ ಮಾತ್ರ ಸಾಧ್ಯ” ಎಂದು. ದೊಡ್ಡದೊಡ್ಡ ಕೈಗಾರಿಕೆಗಳನ್ನು ಹೂಡುವ ಬದಲಾಗಿ, ವಿದೇಶೀ ಕಂಪೆನಿಗಳ ತೆಕ್ಕೆಗೆ ಹೋಗುವ ಬದಲಾಗಿ; ನಮ್ಮ ಭಾರತದಲ್ಲಿ ಪ್ರಾಚೀನವಾಗಿ ಇದ್ದಂತಹ ಸಣ್ಣಕೈಗಾರಿಕೆಗಳಿಗೆ ನಾವು ಬೆಲೆ ಕೊಡಬೇಕು, ಬೆಂಬಲ ಕೊಟ್ಟು ಅವುಗಳನ್ನು ಮೇಲೆತ್ತಬೇಕು. ಆಗ ನಿಜವಾಗಿ ಭಾರತ ಮೇಲೇಳುತ್ತದೆ. ಇದನ್ನು ಏಕೆ ಹೇಳುತ್ತಿದ್ದೇನೆ ಎಂದರೆ, ಈ ಜೀವನವನ್ನು ಅದೇ ರೀತಿಯಲ್ಲಿ ಬದುಕುತ್ತಿರುವಂತಹ ಹಳ್ಳಿಯ ಜನಜೀವನ ಈವತ್ತೂ ಇದೆ. ಈ ಬದುಕು ಬೇಕು ಎನ್ನುವವರೆಲ್ಲರೂ ಅವರ ಜೊತೆ ಹೋಗಿ ಕನಿಷ್ಠ ಒಂದು ತಿಂಗಳ ಕಾಲ ಒಡನಾಟದಲ್ಲಿ ಇದ್ದರೆ ಸಾಕು, ಪುನಃ ಮಣ್ಣಿನ ಸಂಗಡಿಕೆಗೆ ಮರಳಬೇಕು ಎಂಬ ಭಾವನೆ ಖಂಡಿತವಾಗಿಯೂ ಅಂಥವರ ಮನಸ್ಸಿನಲ್ಲಿ ಮೂಡುತ್ತದೆ.

ಪ್ರಶ್ನೆ: 40-50 ವರ್ಷಗಳ ಆಂದೋಲನಗಳ ತರುವಾಯ ಜನತೆಯಲ್ಲಿ ಅಗತ್ಯವಾದ ಮಟ್ಟದ ಪರಿಸರಪ್ರಜ್ಞೆ ಮೂಡಿದೆ ಎನಿಸುತ್ತದೆಯೇ?

ಉತ್ತರ: ಅಗತ್ಯವಾದ ಪರಿಸರಪ್ರಜ್ಞೆ 40-50 ವರ್ಷಗಳ ಕಾರಣದಿಂದ ಮೂಡಿಲ್ಲ. ಅದರ ಬದಲಾಗಿ ಕೆಟ್ಟಿದೆ, ದಾರಿತಪ್ಪಿದೆ ಎನ್ನಬಹುದು. ಕಳೆದ ಎಪ್ಪತ್ತು ವರ್ಷಗಳಲ್ಲಿ ಸ್ವತಂತ್ರ ಭಾರತದಲ್ಲಿ ನಾವು ಕೊಟ್ಟಂತಹ ದಿಕ್ಕುದಿಸೆಗಳು ಬೇರೆ; ಒಂದುವೇಳೆ ಗಾಂಧಿಯವರು ಹೇಳಿದ್ದ ದಾರಿಯಲ್ಲಿ ಹೋಗಿದ್ದಿದ್ದರೆ ನಿಮ್ಮ ಪ್ರಶ್ನೆಗೆ ಉತ್ತರ ಸರಿಯಾಗಿ ಸಿಗುತ್ತಿತ್ತು. ನಾವು ಗಾಂಧಿಯವರು ಕೊಟ್ಟ ದಾರಿಯಲ್ಲಿ ನಡೆಯದೆ, ಯಾರು ಭಾರತದ ಮೊದಲ ಪ್ರಧಾನಿಯಾಗಿದ್ದರೊ ಅವರ ಚಿಂತನೆಯ ವಿಚಾರದ ಹಾದಿಯಲ್ಲಿ ಮುಂದೆ ಹೋದದ್ದರಿಂದ, ಈವತ್ತು ಒಂದು ದೃಷ್ಟಿಯಲ್ಲಿ ದಾರಿ ತಪ್ಪಿದೆ. ಹಾಗಾಗಿ ನಾನು ಹೇಳುವುದೇನೆಂದರೆ, ನಾವು ದಾರಿ ತಪ್ಪಿದ್ದೇವೆ ಎಂದು ಈಗಲಾದರೂ ಅರಿತುಕೊಂಡು; ಗಾಂಧಿಯವರು ಕೊಟ್ಟಂತಹ, ಅಂದರೆ ಭಾರತದ ಪ್ರಾಚೀನ ಋಷಿಮುನಿಗಳ ಪರಂಪರೆಯ ಹಾದಿಯಲ್ಲಿ ಪುನಃ ಮುನ್ನಡೆಯುವ ಸಂಕಲ್ಪವನ್ನು ಮಾಡಿದರೆ ಆಗ ನಿಶ್ಚಿತವಾಗಿ ಬದಲಾವಣೆಯನ್ನು ತರಬಹುದು.

ಪ್ರಶ್ನೆ: ಕೃಷಿಯನ್ನು ಒಂದು ಜೀವನಕ್ರಮವಾಗಿ ಸ್ವೀಕರಿಸಿ ಅದನ್ನು ಹೇಗಾದರೂ ಸಾಧಿಸುವ ಪ್ರವೃತ್ತಿ ಉಳಿದಿದೆ ಎನಿಸುತ್ತದೆಯೇ?

ಉತ್ತರ: ಉಳಿದಿದೆ. ಉಳಿದಿರುವ ಕಾರಣಕ್ಕಾಗಿಯೇ ನಾವು ಇಂದು ಊಟ ಮಾಡುತ್ತಿದ್ದೇವೆ. ಈವತ್ತು ಭಾರತದ ಜನರಿಗೆ ಅನ್ನ ಕೊಡುತ್ತಿರುವವರು ಯಾರು ಎಂದರೆ, ಅದನ್ನು ಉಳಿಸಬೇಕು ಎನ್ನುವ ಕಾರಣಕ್ಕೆ ಉಳಿಸಿ ಬೆಳೆಸುತ್ತಿರುವವರೇ. ಅನ್ನ ಕೊಡುತ್ತಿರುವುದು ಹೇಗೋ ಕಷ್ಟಪಟ್ಟು ಅಲ್ಲ. ಒಂದಾನೊಂದು ಕಾಲದಲ್ಲಿ ಭಾರತದಲ್ಲಿ ಅನ್ನದ ಕೊರತೆ ಎನ್ನುವುದಿತ್ತು, ಅದೇ ಇಂದು ಸಾಕಷ್ಟು ಮಟ್ಟಿಗೆ ಉತ್ಪಾದನೆ ಮಾಡಿ ಇನ್ನೊಂದು ಕಡೆಗೂ ಕೊಡುವಷ್ಟು ಬೆಳೆದಿದ್ದೇವೆ ಎನ್ನುವುದರ ಅರ್ಥವೇ  ಭಾರತದ ಹಳ್ಳಿಯ ಜನ ಅದನ್ನು ಪ್ರೀತಿಸಿದ್ದಾರೆ ಎನ್ನುವುದಾಗಿದೆ.

ಪ್ರಶ್ನೆ: ಈಚಿನ ವರ್ಷಗಳಲ್ಲಿ ಸಾಕಷ್ಟು ಪ್ರಚಾರ ಪಡೆದಿರುವ ಸಾವಯವ ಕೃಷಿಯ ಬಗೆಗೂ ಸಹಜ ಕೃಷಿಯ ಬಗೆಗೂ ಸಾಮಾನ್ಯ ರೈತರಲ್ಲಿ ಉತ್ಸಾಹ ಮೂಡುತ್ತಿದೆ ಎನಿಸುತ್ತದೆಯೇ?

ಉತ್ತರ: ಸಾಮಾನ್ಯ ರೈತರಲ್ಲಿ ಉತ್ಸಾಹ ಮೂಡುತ್ತಿದೆ ಎಂದು ಖಂಡಿತವಾಗಿಯೂ ಹೇಳಬಹುದು. ಪ್ರಮಾಣ ಸ್ವಲ್ಪಮಟ್ಟಿಗೆ ಕಡಮೆ ಇರಬಹುದು. ಆದರೆ ಇಲ್ಲಿಯ ತನಕ ಸಾಗಿದ ದಿಕ್ಕಿನಲ್ಲಿ ದಾರಿತಪ್ಪಿದ್ದೇವೆ ಎಂದು ತಿಳಿದು ಸರಿದಾರಿಯಲ್ಲಿ ಹೋಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಅದಕ್ಕಾಗಿ ಭಾರತದ ಅನೇಕ ರಾಜ್ಯಗಳಲ್ಲಿ ಸಾವಯವ ಕೃಷಿ ಮಾಡುವಂತಹ ಜನ ತಮ್ಮದೇ ಆದ ತಂಡವನ್ನು ಕಟ್ಟಿಕೊಂಡು ಆಂದೋಲನವನ್ನು ಆರಂಭಿಸಿದ್ದಾರೆ.

ಉದಾಹರಣೆಗೆ, ಕರ್ನಾಟಕದಲ್ಲಿ ‘ಕೃಷಿ ಪ್ರಯೋಗ ಪರಿವಾರ’ ಸಂಘಟನೆ ಇದೆ. ಕಳೆದ ಸುಮಾರು 12 ವರ್ಷಗಳಲ್ಲಿ ಈ ಸಂಘಟನೆ ಮಾಡಿದ ಪ್ರಯತ್ನದ ಪರಿಣಾಮವಾಗಿ ಈವತ್ತು ಕರ್ನಾಟಕದ ಸುಮಾರು ಇಪ್ಪತ್ತು ಸಾವಿರ ಹಳ್ಳಿಗಳಲ್ಲಿ ಸಾವಯವ ಕೃಷಿಕರಿದ್ದಾರೆ. ಐದು ಲಕ್ಷಕ್ಕಿಂತಲೂ ಹೆಚ್ಚು ಕೃಷಿಕರು ಸಾವಯವ ಕೃಷಿಯೇ ನಿಜವಾದ ಆಧಾರ ಎನ್ನುವುದನ್ನು ನಂಬಿ ನಡೆಯುತ್ತಿದ್ದಾರೆ. ಮಾತ್ರವಲ್ಲ, ಭಾರತದ ಉಳಿದ ಜನರಿಗೆ ಆ ದಿಕ್ಕಿನಲ್ಲಿ ನಡೆಯಲು ಪ್ರೇರÀಣೆ ಕೊಡುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ‘ಲೋಕಭಾರತಿ’ ಸಂಘಟನೆ, ಕಳೆದ 15 ವರ್ಷಗಳಿಂದ ಇದೇ ನಿಟ್ಟಿನಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಅದೇ ರೀತಿ ಭಾರತದಲ್ಲಿ ‘ಸಾವಯವ ರಾಜ್ಯ’ ಎಂದು ಘೋಷಿಸಲ್ಪಟ್ಟ ಏಕೈಕ ರಾಜ್ಯ ಎಂದರೆ ಅದು ಸಿಕ್ಕಿಂ. ಸ್ವತಃ ಅಲ್ಲಿಯ ಸರ್ಕಾರವೇ ಅಭಿಮಾನದಿಂದ ಹೇಳಿದೆ, ನಮ್ಮದು ಸಂಪೂರ್ಣ ಸಾವಯವ ರಾಜ್ಯ ಎಂದು. ಇದನ್ನು ಭಾರತದ ಎಲ್ಲಾ ರಾಜ್ಯಗಳು ಘೋಷಿಸುವಂತಹ ಸ್ಥಿತಿ ನಿರ್ಮಾಣವಾಗಬೇಕು ಎನ್ನುವುದು ನಮ್ಮ ಅಪೇಕ್ಷೆ; ಮುಂದಿನ ದಿನಗಳಲ್ಲಿ ಅಂತಹ ಸ್ಥಿತಿ ಬರುತ್ತದೆ ಎನ್ನುವುದು ವಿಶ್ವಾಸ.

ಪ್ರಶ್ನೆ: ಗ್ರಾಮಗಳಲ್ಲಿ ಕೆಲವು ದಶಕಗಳ ಹಿಂದೆ ಇದ್ದಂತಹಹಂಚಿಕೊಂಡು ಬದುಕುವಪ್ರವೃತ್ತಿ ಈಗ ಕಾಣುತ್ತಿದೆಯೇ?

ಉತ್ತರ: ನಾನು ಹೇಳಿದಂತೆ, ಈವತ್ತಿಗೂ ನಗರಪ್ರದೇಶದ ಪ್ರಭಾವ ಹರಡದೆ ಇರುವ, ನಗರಪ್ರದೇಶದಿಂದ ದೂರಾಗಿ ತಾನು ತಾನಾಗಿ ಉಳಿದಿರುವ ಹಳ್ಳಿಗಳಲ್ಲಿ ‘ಹಂಚಿಕೊಂಡು ಬದುಕುವ’ ಜೀವನಕ್ರಮ ಇಂದಿಗೂ ಜೀವಂತವಾಗಿ ಇದೆ.

ಸ್ವತಃ ನಾವು ಅನೇಕ ಹಳ್ಳಿಗಳಲ್ಲಿ ನೋಡಿಕೊಂಡು ಬಂದಿದ್ದೇವೆ. ಹಳ್ಳಿಯ ಒಬ್ಬ ಬಡಗಿ ತಾನು ಮಾಡುವಂತಹ ಮರದ ಕೆಲಸವನ್ನು ಊರಿಗೆ ಬೇಕಾದ ಎಲ್ಲ ಮನೆಗಳಿಗೆ ಮಾಡಿಕೊಡುತ್ತಾನೆ. ಅವನ ಮನೆಗೆ ಬೇಕಾದಂತಹ ಕಬ್ಬಿಣದ ಕೆಲಸವನ್ನು ಮತ್ತೊಬ್ಬ ಮಾಡಿಕೊಡುತ್ತಾನೆ. ಹೀಗೆ ಒಬ್ಬರ ಕೆಲಸವನ್ನು ಮತ್ತೊಬ್ಬರ ಕೆಲಸದ ಮೂಲಕವೇ ಹಂಚಿಕೊಂಡು ಬದುಕುವಂತಹ ಜೀವನ ಇಂದಿಗೂ ಇದೆ. ತಾವು ಬೆಳೆದಂತಹ ಅನ್ನವನ್ನು ಹೀಗೆ ಅಗತ್ಯವಿರುವವರಿಗೆ ಹಂಚಿ ಬದುಕುತ್ತಿರುವ ದೃಶ್ಯವನ್ನೂ ನೋಡಿದ್ದೇವೆ. ನಗರೀಕರಣ, ಆಧುನಿಕೀಕರಣ ತಟ್ಟದೇ ಇರುವ ಹಳ್ಳಿಗಳಲ್ಲಿ ಇಂತಹದ್ದು ಇದೆ.

ಪ್ರಶ್ನೆ: ರೈತ ಜನರು ಸಂಘಟಿತರಾದರೆ ಈಗಿನ ಸಮಸ್ಯೆಗಳಿಗೆ ಪರಿಹಾರ ದೊರೆತೀತು ಎನಿಸುತ್ತದೆಯೇ?

ಉತ್ತರ: ಹೌದು, ದೊರೆಯುತ್ತದೆ. ತಾವು ಸಂಘಟಿತರಾಗಬೇಕು ಎಂದು ರೈತರು ಅಪೇಕ್ಷೆ ಪಡುತ್ತಾರೆ. ರೈತರಷ್ಟೆ ಅಲ್ಲ, ಹಳ್ಳಿಯವರೆಲ್ಲ ಜೊತೆಯಾಗಿ ಬದುಕಬೇಕೆಂದು ಬಯಸುತ್ತಾರೆ, ಬದುಕುತ್ತಾರೆ ಸಹ. ದುರ್ದೈವ ಎಂದರೆ, ಕಳೆದ ಇನ್ನೂರು ವರ್ಷಗಳ ಕಾಲ ಬ್ರಿಟಿಷರು ನಮಗೆ ಕೊಟ್ಟುಹೋದಂತಹ ಒಂದು ಕೆಟ್ಟ ಚಾಳಿ ಇದೆ, ಅದುವೇ ಒಡೆದು ಆಳುವ ನೀತಿ. ಆ ಒಡೆದು ಆಳುವ ನೀತಿಯನ್ನು ಈವತ್ತಿಗೂ ರಾಜ್ಯ ಆಳುವ ಜನ ತಮ್ಮ ಸ್ವಾರ್ಥದ ರಾಜಕೀಯ ಲಾಭಕ್ಕಾಗಿ ಹಳ್ಳಿಗಳನ್ನು ಬೇರೆ ಬೇರೆ ರೀತಿಯಲ್ಲಿ ಒಡೆಯುತ್ತಿರುವುದನ್ನು ನಾವು ನೋಡಬಹುದು. ಈ ಹಿನ್ನೆಲೆಯಲ್ಲಿ ರೈತರನ್ನು ಒಡೆಯುವ ಪ್ರಯತ್ನ ಮಾಡುತ್ತಿವೆ. ಇದು ಬಹಳ ದೌರ್ಭಾಗ್ಯದ ಸ್ಥಿತಿ. ರೈತರೇನೋ ತಾವು ಒಂದಾಗಬೇಕು ಎಂದು ಅಪೇಕ್ಷೆ ಪಡುತ್ತಾರೆ, ಹಲವು ಸಂಘಟನೆಗಳೂ ಇದಕ್ಕಾಗಿ ಪ್ರಯತ್ನ ಮಾಡುತ್ತಾರೆ. ಎಲ್ಲೆಲ್ಲಿ ಒಂದಾಗಬೇಕೆಂದು ಪ್ರಯತ್ನ ಮಾಡುತ್ತಿದ್ದಾರೋ ಅಲ್ಲೆಲ್ಲಾ ಒಡೆಯುವ ಪ್ರಯತ್ನವೂ ನಡೆಯುತ್ತಿದೆ. ಕರ್ನಾಟಕದಲ್ಲಿ ವೀರಶೈವ, ಲಿಂಗಾಯತ ಬೇರೆ ಎಂದು ನಾವು ಈವತ್ತಿನವರೆಗೂ ನೋಡಿಲ್ಲ. ಅವರೆಲ್ಲರೂ ಒಂದಾಗಿ, ಪರಸ್ಪರ ಸಂಘಟಿತರಾಗಿದ್ದರು. ಎಲ್ಲರಿಗೂ ಬಸವಣ್ಣ ಆದರ್ಶ. ಬಸವಣ್ಣ ಹೇಳಿರತಕ್ಕಂತಹ ಚಿಂತನೆಯನ್ನು ಭೇದವಿಲ್ಲದೆ ಮುಂದುವರಿಸಿಕೊಂಡು ಹೋಗುತ್ತಿದ್ದರು. ಯಾರು ವಿಷ ಬೆರೆಸಿದರು ಎನ್ನುವುದು ತೆರೆದಿಟ್ಟ ಪುಸ್ತಕದಂತೆ ಇದೆ. ಇದು ಒಂದು ಉದಾಹರಣೆ. ರೈತರ ಕಥೆಯೂ ಹೀಗೆಯೇ ಇದೆ. ಅದಕ್ಕೋಸ್ಕರ ನಮ್ಮ ದೇಶದ ರೈತವರ್ಗ ಮಾತ್ರವಲ್ಲ, ಯಾರಾದರೂ ಸರಿಯೇ ಸಂಘಟಿತರಾಗಬೇಕೆಂದು ಮನಸ್ಸಿದ್ದರೆ ರಾಜಕೀಯ ವ್ಯಕ್ತಿಗಳ ದುಷ್ಟಚಾಳಿಯನ್ನು ಅರ್ಥಮಾಡಿಕೊಂಡು ರಾಜಕೀಯದಿಂದ ದೂರವಿದ್ದು, ನಮ್ಮ ಕೆಲಸವನ್ನು ನಾವು ಮಾಡಿಕೊಂಡು ಹೋಗುತ್ತೇವೆ ಎನ್ನುವ ಸಂಕಲ್ಪ ಮಾಡಿದ್ದೇ ಆದರೆ ನಿಶ್ಚಿತವಾದ ರೂಪದಲ್ಲಿ ಬೆಳೆಯಬಹುದು.

ಪ್ರಶ್ನೆ: ಹಿನ್ನೆಲೆಯಲ್ಲಿ ಮೊನ್ನೆ ಮಹಾರಾಷ್ಟ್ರದಲ್ಲಿ ಆದ ಚಳವಳಿಯ ಬಗ್ಗೆ ಏನು ಹೇಳುತ್ತೀರಿ?

ಉತ್ತರ: ಅದೂ ಅಷ್ಟೆ. ಅಲ್ಲಿ ಮರಾಠಿಗರ ಚಳವಳಿಯಂತಹ ಕೆಲವು ಚಳವಳಿಗಳಾದವು. ಅದಕ್ಕೆ ಮೂಲಕಾರಣವೇ ವಿಷಬೆರೆಸಿದ್ದು. ಎಲ್ಲೆಲ್ಲಿ ಯಾವಾವ ಕಾರಣವನ್ನು ಇಟ್ಟುಕೊಂಡು ಒಡೆಯಬಹುದು ಎಂದು ಪ್ರಯತ್ನ ಮಾಡುತ್ತಾರೆ. ಮೊನ್ನೆ ಮೊನ್ನೆ ನಡೆದ ದಲಿತರ ಸಂಘರ್ಷಣೆ ಅದಕ್ಕೊಂದು ಉದಾಹರಣೆ. ಅದಕ್ಕೆ ಸುಪ್ರೀಂಕೋರ್ಟ್ ಹೇಳಿದ್ದೇನು? ಕೊಟ್ಟ ತೀರ್ಪನ್ನು ಸರಿಯಾಗಿ ಓದದೇ ಇದ್ದ ಪರಿಣಾಮ ಇದು – ಎಂದು. ಇದು ಹೇಗೆ ಎಂದರೆ, ಒಂದು ತೀರ್ಪು ಬಂದ ತಕ್ಷಣ ಪುನಃ ಒಡೆಯುವುದಕ್ಕೆ ಏನು ಮಾಡಬೇಕು, ಜಗಳವನ್ನು ಹೇಗೆ ತರಬೇಕು ಎಂಬ ರೀತಿಯಲ್ಲೆ ರಾಜಕೀಯ ಪಕ್ಷಗಳು ಕೆಲಸ ಮಾಡುತ್ತಿರುತ್ತವೆ. ಇದು ದೌರ್ಭಾಗ್ಯ ಎನ್ನಬೇಕಷ್ಟೆ. ಆದ್ದರಿಂದ ನಾನು ಎಲ್ಲರಲ್ಲಿ ಪ್ರಾರ್ಥನೆ ಮಾಡುವುದಿಷ್ಟೆ: “ದಯವಿಟ್ಟು, ಈ ಒಡೆದು ಆಳುವ ನಮ್ಮ ವಿರೋಧಿಗಳ ನೀತಿಯನ್ನು ನಾವು ಪಾಲಿಸದೆ; ವೈಚಾರಿಕವಾದ ಭಿನ್ನಾಭಿಪ್ರಾಯಗಳಿದ್ದರೂ ಅದು ವ್ಯವಹಾರದಲ್ಲಿ ಕಾಣದೆ, ಒಟ್ಟು ದೇಶದ ಹಿತವನ್ನು ಕಣ್ಮುಂದೆ ಇಟ್ಟುಕೊಂಡು ಎಲ್ಲರೂ ಅವರವರ ಕ್ಷೇತ್ರದಲ್ಲಿ ತೊಡಗಿಕೊಂಡು ಸರ್ವಹಿತಕ್ಕಾಗಿ ಪರಸ್ಪರ ಕೂಡಿ ಬಾಳಬೇಕು.”


‘ಓದಿ ಉಳುಮೆಗೆ ಬಂದವರು’

ಪ್ರಶ್ನೆ: ವಿದ್ಯಾವಂತರಾಗಿ ಪೇಟೆಯಲ್ಲಿ ಉತ್ತಮ ಆದಾಯ ತರುವ ಉದ್ಯೋಗದಲ್ಲಿದ್ದ ಯುವಕರು ಅದನ್ನು ಬಿಟ್ಟು ಹಳ್ಳಿಗೆ ಬಂದು ಕೃಷಿಯಲ್ಲಿ ತೊಡಗುವ ಉದಾಹರಣೆಗಳು ಕೇವಲ ಬೆರಳೆಣಿಕೆಯವೆ? ಅಥವಾ ಎಲ್ಲಾದರೂ ದೊಡ್ಡ ಪ್ರಮಾಣದಲ್ಲಿ ಆಗಿದೆಯೆ?

ಉತ್ತರ: ಕೆಲವೊಂದು ಪ್ರದೇಶಗಳಲ್ಲಿ ಬೆರಳೆಣಿಕೆಯದ್ದು. ಆದರೆ ಉತ್ತಮ ವಿದ್ಯಾಭ್ಯಾಸ ಮಾಡಿ, ಸಾಕಷ್ಟು ಹಣಗಳಿಸುವ ಉದ್ಯೋಗದಲ್ಲಿದ್ದು, ಅದನ್ನು ಬಿಟ್ಟುಬಂದು ‘ಕೃಷಿಯಲ್ಲಿ ಖುಷಿ’ ಪಡುವುದೂ ಬೆಳೆಯುತ್ತಿದೆ. ಅದು ಬೆರಳೆಣಿಕೆಯಿಂದ ಆರಂಭವಾಗಿತ್ತು, ಇಂದು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಉದಾಹರಣೆಗೆ ಮೊನ್ನೆಯಷ್ಟೆ ಸಾಗರದಲ್ಲಿ ‘ಕೃಷಿ ಪ್ರಯೋಗ ಪರಿವಾರ’ದ ಕಡೆಯಿಂದ ‘ಓದಿ ಉಳುಮೆಗೆ ಬಂದವರು’ ಎನ್ನುವ ಕಾರ್ಯಕ್ರಮ ಯೋಜಿಸಲಾಗಿತ್ತು. ಸುಮಾರು ನಾಲ್ಕುನೂರು ಜನರನ್ನು ಕರೆದಿದ್ದರು, ಅದರಲ್ಲಿ 150 ಕೃಷಿಕರು ಬಂದಿದ್ದರು. ಎಲ್ಲರೂ ಉತ್ತಮ ವಿದ್ಯಾಭ್ಯಾಸವನ್ನು ಮಾಡಿದ್ದವರೇ ಆಗಿದ್ದರು. ಉತ್ತಮ ಅನುಭವವೂ ಅವರಲ್ಲಿತ್ತು. ವಿದ್ಯಾವಂತರೇ ದೊಡ್ಡದೊಡ್ಡ ಕೃಷಿಕರಾಗುತ್ತಿದ್ದಾರೆ.


ಪ್ರಶ್ನೆ: ಕ್ರಮೇಣ ನಷ್ಟವಾಗುತ್ತಿರುವ ಬಗೆಬಗೆಯ ಗ್ರಾಮೀಣ ವೃತ್ತಿಕೌಶಲಗಳಿಗೆ (ಮರಗೆಲಸ, ಕಮ್ಮಾರಿಕೆ, ಇತ್ಯಾದಿ) ಈಗ ಭವಿಷ್ಯ ಇದೆಯೇ?

ಉತ್ತರ: ಭವಿಷ್ಯವನ್ನು ತಂದುಕೊಡುವ ಸಂಕಲ್ಪವನ್ನು ನಾವು ಮಾಡಿದ್ದಾದರೆ ಇಂದಿಗೂ ಇದಕ್ಕೆಲ್ಲ ಭವಿಷ್ಯವಿದೆ. ಯಾಕೆ ಎಂದು ಕೇಳಿದರೆ, ಈವತ್ತು ಅನೇಕ ಜನ ಮನೆಕಟ್ಟಬೇಕು ಎಂದಾಗ ಮರದ ಕೆಲಸ ಮಾಡದಿದ್ದರೆ, ಮರದ ಕೆಲಸ ಮಾಡಲಾಗುವುದಿಲ್ಲ. ಅದೇ ರೀತಿ ಕಬ್ಬಿಣದ ಕೆಲಸವೂ ಕೂಡ. ಇಂತಹ ಕೆಲಸಗಳನ್ನು ನಾವು ಲೆಕ್ಕಹಾಕಿದ್ದೇ ಆದರೆ, ಪ್ರತಿಯೊಬ್ಬರಿಗೂ ಆ ಕೆಲಸದ ಆವಶ್ಯಕತೆ ಉಂಟು. ಆದರೆ ಅದಕ್ಕೆ ಪೆÇ್ರೀತ್ಸಾಹ ಕೊಡುವ ಕೆಲಸ ಆಗಬೇಕಿದೆ.

ಉದಾಹರಣೆಗೆ ಹೇಳುವುದಾದರೆ: ತಮಿಳುನಾಡಿನಲ್ಲಿ ಯಾತ್ರೆ ಹೋಗುತ್ತಿದ್ದ ಸಂದರ್ಭ, ಕುಂಭಕಾರ ಸಮಾಜದ ಮಧ್ಯದಲ್ಲಿ ನಮ್ಮ ವಸತಿಯಿತ್ತು. ಆಗ ಸಮಾಜದ ಜನರು ಬಂದು ನಮ್ಮ ಹತ್ತಿರ ತಮ್ಮ ಕಷ್ಟಗಳನ್ನು ತೋಡಿಕೊಂಡರು. “ನೋಡಿ ಸ್ವಾಮಿ, ಈವತ್ತು ನಾವು ಒಂದು ಸಮಾಜವಾಗಿ ಬದುಕಿದ್ದಾದರೆ ಅದು ನಮ್ಮ ವೃತ್ತಿಯಿಂದ. ಈವತ್ತು ನಮ್ಮ ವೃತ್ತಿಯನ್ನು ನಾವೆಲ್ಲಾ ಮರೆತಿದ್ದೇವೆ. ನಮ್ಮೆಲ್ಲರ ದೇಹವು ನಿರ್ಮಾಣವಾಗಿದ್ದು ಮಣ್ಣಿನಿಂದ ಎನ್ನುವ ಅರಿವನ್ನೂ ಕಳೆದುಕೊಂಡಿದ್ದೇವೆ. ದೇವರು ಈ ದೇಹವನ್ನು ಸೃಷ್ಟಿಮಾಡುವಾಗ ಬೇರೆ ಯಾವುದರಿಂದಲೂ ಅಲ್ಲ, ಮಣ್ಣಿನಿಂದಲೇ ಮಾಡಿದ. ಹಾಗಾಗಿ ಈ ದೃಷ್ಟಿಯಲ್ಲಿ ನೋಡುವುದಾದರೆ, ದೊಡ್ಡ ಕುಂಭಕಾರ ಯಾರು ಎಂದರೆ ಮೇಲಿರತಕ್ಕಂತಹ ದೇವರು ಎನಿಸಿಕೊಳ್ಳುವವನೇ ಆಗಿದ್ದಾನೆ. ಅವನು ಮಾಡಿರತಕ್ಕಂತಹ ದೇಹ ನಮಗೆ ಬೇಕು. ಆದರೆ ದೇವನೆಂಬ ಕುಂಭಕಾರ ಮಾಡಿರುವ ದೇಹವನ್ನು ಆರೋಗ್ಯವಾಗಿ ಇಡಬೇಕು ಎಂದಿದ್ದರೆ, ಈ ಕುಂಭಕಾರನ ಕೆಲಸ ಯಾಕೆ ಬೇಡ? ಅಂದರೆ ಮಣ್ಣಿನ ಮಡಕೆಯಲ್ಲಿ ಇಟ್ಟಂತಹ ತಣ್ಣಗಿನ ನೀರು ಕುಡಿದರೆ ಆರೋಗ್ಯ ಎಂದು ಎಲ್ಲರಿಗೆ ತಿಳಿದಿದ್ದರೂ, ಆ ಮಣ್ಣಿನ ಮಡಕೆಯ ನೀರು ನಮಗೇಕೆ ಬೇಡ? ಫ್ರಿಡ್ಜ್‍ನ ನೀರೇ ಏಕೆ ಬೇಕು? ಬುದ್ಧಿವಂತರು ಎಂದು ಹೇಳಿಕೊಳ್ಳುವವರು ನಮ್ಮನ್ನೇ ಮೆಟ್ಟಿ ತುಳಿಯುತ್ತ ಯಾವುದೋ ಹೊರದೇಶದ ಕಂಪೆನಿಗಳು ಪ್ರವರ್ತಿಸಿದ ವಿಧಾನಗಳನ್ನು ಅಳವಡಿಸಿಕೊಳ್ಳುತ್ತ, ಅವರನ್ನು ಕೋಟ್ಯಧಿಪತಿಗಳನ್ನಾಗಿ ಮಾಡುತ್ತಾರೆ. ಇದು ಬುದ್ಧಿಯೋ, ಅಥವಾ ಬುದ್ಧಿಹೀನತೆ ಎಂದು ಹೇಳವುದೊ?” ಎಂದು ಕುಂಭಕಾರರು ಪ್ರಶ್ನಿಸುತ್ತಾರೆ.

ಮಣ್ಣಿನ ಮಡಕೆಯಲ್ಲಿ ಮಾಡಿದ ಮೊಸರಿಗೂ, ಫ್ರಿಡ್ಜ್‍ನಲ್ಲಿ ಇಟ್ಟಂತಹ ಮೊಸರಿಗೂ ಏನು ವ್ಯತ್ಯಾಸ ಎನ್ನುವುದನ್ನು ನಿಜವಾದ ಆಹಾರವಿಜ್ಞಾನಿಗಳು ಪರೀಕ್ಷೆ ಮಾಡಿದರೆ ತಿಳಿಯುತ್ತದೆ. ಮಣ್ಣಿನ ಪಾತ್ರದಲ್ಲಿ ಮಾಡಿದ ಅಡುಗೆಯ ಶಕ್ತಿ ಎಷ್ಟು, ಸಾಮಾನ್ಯವಾದ ಅಲ್ಯುಮಿನಿಯಂ ಪಾತ್ರೆಯಲ್ಲಿ ಮಾಡಿದ ಆಹಾರದ ಶಕ್ತಿ ಎಷ್ಟು ಎಂದು ಲೆಕ್ಕಹಾಕಿದರೆ; ನಮ್ಮ ಆರೋಗ್ಯ ಹೇಗೆ ಸುಲಭವಾಗಿ ಕಾಪಿಟ್ಟುಕೊಳ್ಳಬಹುದು ಎನ್ನುವುದನ್ನು ತಿಳಿಯಬಹುದು.

ನಿಮಗೆ ಆರೋಗ್ಯ ಬೇಕು, ಕಡಮೆ ದುಡ್ಡಿನಲ್ಲಿ ಅದು ಸಾಧ್ಯವಾಗಬೇಕು ಎನ್ನುವುದಿದ್ದರೆ ಅದಕ್ಕೆ ನಮ್ಮ ಗ್ರಾಮೀಣ ಮೂಲದ ಸಣ್ಣ ಸಣ್ಣ ಉದ್ಯೋಗಗಳಿಗೆ ಮಹತ್ತ್ವವನ್ನು ಕೊಡಿ ಎಂದು ಅವರು ವಿನಮ್ರವಾಗಿ ನನ್ನಲ್ಲಿ ಕೇಳಿಕೊಂಡರು. ಜನ ಬಯಸುತ್ತಾರೆ, ಆದರೆ ಅದಕ್ಕೆ ಸರಿಯಾಗಿ ಪುಷ್ಟಿ ಕೊಡುವಂತಹ, ಬೆನ್ನುತಟ್ಟುವ ಕೆಲಸವನ್ನು ಸರ್ಕಾರ ಮಾಡಬೇಕು. ಹೊರದೇಶದ ಕಂಪೆನಿಗಳನ್ನು ನಿಯಂತ್ರಿಸುವ ಕೆಲಸಕ್ಕೆ ಪ್ರಯತ್ನಿಸಬೇಕು, ನಮ್ಮ ದೇಶದಲ್ಲಿರತಕ್ಕಂತಹ ಕುಟೀರ ಕೆಲಸಗಳನ್ನು ಎಲ್ಲರು ಸೇರಿ ಮಾಡಬೇಕು. ಜನ ಬಯಸುತ್ತಿದ್ದಾರೆ, ಪರಿಶ್ರಮಕ್ಕೂ ತಯಾರಿದ್ದಾರೆ ಪ್ರೋತ್ಸಾಹ ಸಿಗಬೇಕು ಅಷ್ಟೆ.

ಪ್ರಶ್ನೆ: ಬೇರೆ ಬೇರೆ ಪ್ರಮಾಣದ ಮಳೆ, ಹವಾಮಾನ ಪರಿವರ್ತನೆ ಮೊದಲಾದವನ್ನು ಎದುರಿಸಲು ಹಿಂದೆ ಇದ್ದ ಅನುಭವದ ತಳಹದಿ ಈಗ ಕಾಣುತ್ತಿದೆಯೇ?

ಉತ್ತರ: ಸಿಗುತ್ತದೆ. ನಮ್ಮ ಹಳ್ಳಿಜನರು ಪೇಟೆಯವರಿಗಿಂತ ಹೆಚ್ಚು ಬುದ್ಧಿವಂತರು. ಯಾಕೆಂದರೆ, ಅನುಭವ ಎನ್ನುವುದು ಓದಿದ ವಿದ್ಯೆಗಿಂತ ಹೆಚ್ಚು ಶಕ್ತಿಯುತವಾದದ್ದು. ಹಳ್ಳಿಯ ಜನ ಶಾಲೆಗೆ ಹೋಗಿ ಓದದಿರಬಹುದು. ಆದರೆ ಆನುವಂಶಿಕವಾಗಿ ಪಡೆದಂತಹ ಅನುಭವದ ಆಧಾರದ ಮೇಲೆ ಬದುಕುತ್ತಿರುವಂತಹದ್ದನ್ನು ಈವತ್ತಿಗೂ ನೋಡಬಹುದು. ಉದಾಹರಣೆಗೆ, ಹಳ್ಳಿಗಳಲ್ಲಿ ಸಾವಿರಾರು ಕೆರೆಗಳು, ಬಾವಿಗಳನ್ನು ನಾವು ನೋಡುತ್ತೇವೆ. ಇದನ್ನು ತೋಡಿದವರು ಹಿಂದಿನವರು. ಹಳ್ಳಿಜನರಿಗೆ ಅದು ಬೇಕು, ಮತ್ತು ಅನೇಕ ಕಡೆ ಕೆರೆಬಾವಿಗಳನ್ನು ಉಳಿಸಿಕೊಂಡಿದ್ದಾರೆ. ಆದರೆ ವಿಕಾಸದ ಹೆಸರಿನಲ್ಲಿ ಈವತ್ತು ಕೆರೆಬಾವಿಗಳನ್ನು ಮುಚ್ಚುವ ಕೆಲಸ ನಡೆಯುತ್ತಿದೆ. ವಿಕಾಸದ ಈ ಹಾದಿಯನ್ನು ಹಳ್ಳಿಯ ಜನ ಬಯಸುವುದಿಲ್ಲ, ಅದೇ ಪಟ್ಟಣದ ಜನ ಈ ಹಾದಿಯನ್ನು ಹಿಡಿಯುತ್ತಾರೆ. ಬಳಿಕ ನೀರಿನ ಸಮಸ್ಯೆ ಎಂದು ಕೂಗುತ್ತಾರೆ. ಆದ್ದರಿಂದ ನೀರಿನ ಸಮಸ್ಯೆಗೆ ಪರಿಹಾರ ಬೇಕು ಎಂದಿದ್ದರೆ ಹಳ್ಳಿಯ ಪ್ರಾಚೀನವಾದಂತಹ ಅನುಭವ ವಿದ್ಯೆಯನ್ನು ನಾವು ಮೆಲುಕುಹಾಕಬೇಕು. ಎಲ್ಲ ಹಳ್ಳಿಗಳ ಕೆರೆಗಳನ್ನು ಪುನರುಜ್ಜೀವನಗೊಳಿಸಬೇಕು. ಅಕಸ್ಮಾತ್ ಮುಚ್ಚಿದ್ದರೂ ಪುನಃ ತೆರೆಯುವ ಕೆಲಸವಾಗಬೇಕು. ಸರ್ಕಾರವೂ ಈ ಕೆಲಸವನ್ನು ಮಾಡಬೇಕಾಗಿದೆ.

ಇನ್ನು ಹವಾಮಾನಕ್ಕನುಗುಣವಾಗಿ ಹಳ್ಳಿಯ ಜನ ಮನೆಗಳನ್ನು ಕಟ್ಟುತ್ತಾರೆ. ಸೆಖೆಯ ಸಮಯದಲ್ಲಿ ತಂಪಾಗಿರಬೇಕು, ತಂಪಾದ ವಾತಾವರಣದ ಸಮಯದಲ್ಲಿ ಬೆಚ್ಚಗಿರಬೇಕು. ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡೇ ಹಿಂದಿನ ಕಾಲದ ಕಟ್ಟಡಗಳ ನಿರ್ಮಾಣವೂ ಕಾರ್ಯಶೈಲಿಯೂ ಇತ್ತು. ಅದು ಹುಲ್ಲಿನ ಮಾಡು, ಬೆಚ್ಚಗೆ ಇರುವಂತಹ ಮಣ್ಣಿನ ಗೋಡೆಗಳು. ಮಣ್ಣಿನ ಗೋಡೆಯು ಮನೆಯೊಳಗಿನ ವಾತಾವರಣವನ್ನು ಬೇಸಿಗೆ ಕಾಲದಲ್ಲಿ ತಂಪಾಗಿ ಇಟ್ಟಿರುತ್ತದೆ, ಚಳಿಗಾಲದಲ್ಲಿ ಬೆಚ್ಚಗಿಡುವ ಶಕ್ತಿಯನ್ನೂ ಹೊಂದಿದೆ. ಇಂದು ಸಿಮೆಂಟಿನ ಗೋಡೆಯನ್ನು ಮಾಡುತ್ತೇವೆ, ಅದು ಸೆಖೆಗಾಲದಲ್ಲಿ ಸೆಖೆಯನ್ನು ವೃದ್ಧಿಮಾಡುತ್ತದೆ, ಚಳಿಗಾಲದಲ್ಲಿ ಚಳಿಯನ್ನು ಹೆಚ್ಚಿಸುತ್ತದೆ. ಬಳಿಕ ಇದರಿಂದ ಬಚಾವಾಗಲು ಎ.ಸಿ.ಯ ಮೊರೆಹೊಗುತ್ತೇವೆ. ನಿಸರ್ಗದ ವಿರುದ್ಧವಾಗಿ ಹೋದ ಪರಿಣಾಮವಾಗಿ ದುಡ್ಡೂ ಖರ್ಚು, ಆರೋಗ್ಯವೂ ಹೋಯಿತು, ಎಲ್ಲವೂ ವ್ಯತ್ಯಾಸವಾಯಿತು.

ಹಾಗಾಗಿ, ಒಂದು ಕಾಲದಲ್ಲಿ ಹಿಂದಿನ ಅನುಭವಸ್ಥರು ಹೇಳಿದ ಜೀವನವಿಧಾನವನ್ನು ಅಧ್ಯಯನ ಮಾಡಿ, ಆ ಕಡೆಗೆ ಹೋಗುವುದು ಉತ್ತಮವಾದ ಆಯ್ಕೆ ಎನಿಸುತ್ತದೆ. ದುಡ್ಡು ಉಳಿಯುವುದು, ಆರೋಗ್ಯ ಸ್ತಿಮಿತವನ್ನೂ ಕಾಪಾಡಿಕೊಳ್ಳಬಹುದು, ಪ್ರಾಚೀನ ಸಂಸ್ಕೃತಿಯನ್ನೂ ಉಳಿಸಿಬೆಳೆಸಿಕೊಂಡು ಬರಬಹುದು.

ಪ್ರಶ್ನೆ: ಗ್ರಾಮಗಳು ಹೆಚ್ಚು ಹೆಚ್ಚು ನಗರೀಕರಣಗೊಳ್ಳುತ್ತ ಸಾಗಿವೆ ಎನಿಸುತ್ತದೆಯೇ?

ಉತ್ತರ: ಎನಿಸುತ್ತಿದೆ. ಬಹಳ ವೇಗದಲ್ಲಿ ಆಗುತ್ತಿದೆ. ಇದಕ್ಕೆ ಬಹುಮುಖ್ಯ ಕಾರಣ, ನಗರಕ್ಕೆ ಹತ್ತಿರವಾಗಿರುವಂತಹ ಹಳ್ಳಿಗಳನ್ನು ನಗರಗಳೇ ನುಂಗಿಬಿಟ್ಟಿವೆ. ಅಂದರೆ ಅರ್ಥ ಅದು ನಗರೀಕರಣವಲ್ಲ, ಅವು ನಗರವೇ ಆಗಿವೆ.

ಉದಾಹರಣೆಗೆ ನಾವು ಬೆಂಗಳೂರನ್ನು ತೆಗೆದುಕೊಂಡರೆ, ಬೆಂಗಳೂರಿನ ಸುತ್ತಮುತ್ತ ಎಷ್ಟು ಸಾವಿರ ಹಳ್ಳಿಗಳು ಇಂದು ನಗರವಾಗಿವೆ ಎಂದು ಲೆಕ್ಕಹಾಕಿದರೆ; ಸಾವಿರಾರು ಹಳ್ಳಿಗಳು ನಗರವೇ ಆಗಿಬಿಟ್ಟಿವೆ ಎನ್ನುವುದು ತಿಳಿಯುತ್ತದೆ. ಹಾಗಾಗಿ ಒಂದು ದೃಷ್ಟಿಯಿಂದ ‘ನಗರಗಳು ಬೆಳೆದಂತೆ ಹಳ್ಳಿಗಳು ಸಾಯುತ್ತಿವೆ.’ ಇದು ವಿಕಾಸದ ಲಕ್ಷಣವಲ್ಲ ಎಂದು ಮೊದಲನೆಯದಾಗಿ ನಾವು ತಿಳಿದುಕೊಳ್ಳಬೇಕು.

ಇನ್ನು ಎರಡನೆಯದಾಗಿ, ನಗರಗಳಿಗಿಂತ ಸ್ವಲ್ಪ ದೂರವಿರುವಂತಹ ಹಳ್ಳಿಗಳು ನಗರೀಕರಣದ ಪ್ರಭಾವಕ್ಕೆ ಒಳಗಾಗುತ್ತಿವೆ. ಯಾಕೆಂದರೆ, ಎಲ್ಲ ಕಡೆಗಳಿಗೆ ಆಧುನಿಕವಾದಂತಹ ದೂರದರ್ಶನ ತಲಪಿದೆ. ಪ್ರತಿಯೊಬ್ಬನ ಕೈಯಲ್ಲೂ ಮೊಬೈಲ್ ಸಿಗುವಂತಾಗಿದೆ. ಇವುಗಳ ಮೂಲಕ ಹಗಲು ರಾತ್ರಿ ನಗರದ ಬದುಕನ್ನು ನೋಡುತ್ತಾರೆ. ತನ್ನ ಕೈಯಲ್ಲಿರುವ ಯಂತ್ರದ ಮೂಲಕ ನಗರಜೀವನವನ್ನು ನೋಡುವಾಗ, ಆತನಿಗೆ ‘ನಗರದ ಜನ ಆರಾಮವಾಗಿ ಇದ್ದಾರೆ. ನಮ್ಮ ಹಾಗೆ ಬೆವರುಸುರಿಸುವ, ಕಷ್ಟಪಡುವ ಸ್ಥಿತಿ ಅವರಿಗಿಲ್ಲ. ದುಡ್ಡು ಕೈಯಲ್ಲಿ ಉಂಟು, ಆ ಮೂಲಕ ಆರಾಮವಾದ ಐಷಾರಾಮೀ ಜೀವನವನ್ನು ನಡೆಸುತ್ತಿದ್ದಾರೆ. ಹಾಗಾದರೆ ನಾವು ಯಾಕೆ ಕಷ್ಟಪಡಬೇಕು, ಬೆವರು ಸುರಿಸಬೇಕು’ ಎನ್ನುವ ಪ್ರಶ್ನೆಗಳು ಮೂಡುವುದು ಸ್ವಾಭಾವಿಕ. ಇದು ಪ್ರಾಕೃತಿಕವಾದ ಪರಿವರ್ತನೆ. ನಾವು ಯಾವುದನ್ನು ವಿಕಾಸ ಎನ್ನುವ ಹೆಸರಿನಲ್ಲಿ, ಹಳ್ಳಿಹಳ್ಳಿಗಳಿಗೆ ದೂರದರ್ಶನ ಮೊದಲಾದ ಯಂತ್ರಗಳನ್ನು ಮುಟ್ಟಿಸುತ್ತಿದ್ದೇವೆಯೋ ಅದರ ಪರಿಣಾಮ ನಗರೀಕರಣದ ಪ್ರಭಾವ ಹಳ್ಳಿಹಳ್ಳಿಗಳಿಗೆ ಮುಟ್ಟುತ್ತಿದೆ. ಇದು ಬಹಳ ಗಂಭೀರವಾಗಿ ಚಿಂತನೆ ಮಾಡಬೇಕಾದ ವಿಷಯ. ಹಾಗಾಗಿ ಒಂದು ದೃಷ್ಟಿಯಿಂದ ‘ಗ್ರಾಮ ಪಲಾಯನ’ವೂ ಆಗುತ್ತಿದೆ.

ನಗರೀಕರಣ ಎನ್ನುವುದರಲ್ಲಿ ಇನ್ನೊಂದು ಮುಖವಿದೆ. ನಗರದಂತೆ ಐಷಾರಾಮೀ ಬದುಕನ್ನು ಬದುಕುವುದಕ್ಕೆ, ಪ್ರತಿಯೊಂದಕ್ಕೂ ಯಂತ್ರದ ಮೇಲೆ ಅವಲಂಬಿತವಾಗುವುದು. ಈ ಸ್ಥಿತಿಗೆ ನಾವಿಂದು ಬರುತ್ತಿರುವುದು ನಗರೀಕರಣದ ಇನ್ನೊಂದು ಮುಖ. ಹಳ್ಳಿಗಳಲ್ಲಿ ಪ್ರತಿಯೊಂದಕ್ಕೂ ಯಂತ್ರಗಳ ಮೇಲೆ ಅವಲಂಬಿತರಾಗುತ್ತಿದ್ದೇವೆ. ಒಂದೆಡೆ ಉದ್ಯೋಗವಿಲ್ಲ ಎನ್ನುತ್ತಿದ್ದೇವೆ, ಇನ್ನೊಂದೆಡೆ ಉದ್ಯೋಗ ಸೃಷ್ಟಿಸುವ ಮೂಲವನ್ನು ನಾವು ಒಡೆಯುತ್ತಿದ್ದೇವೆ. ಇದು ದೊಡ್ಡ ವಿಪರ್ಯಾಸವಾಗಿದೆ. ಇದನ್ನು ಹೇಗೆ ಸರಿಪಡಿಸಬಹುದು ಎನ್ನುವುದನ್ನು ವಿಕಾಸದ ಹೆಸರಿನಲ್ಲಿ ಯೋಜನೆಗಳನ್ನು ಹಾಕುವವರು ಯೋಚಿಸಬೇಕು. ನಾವು ನಿಜವಾಗಿಯೂ ಉದ್ಯೋಗ ಸೃಷ್ಟಿಸುತ್ತಿದ್ದೇವೆಯೇ ಅಥವಾ ಉದ್ಯೋಗವನ್ನು ಕಳೆಯುತ್ತಿದ್ದೇವೆಯೇ? – ಎನ್ನುವುದನ್ನು ಆಲೋಚಿಸಬೇಕು.

ಪ್ರಶ್ನೆ: ‘ಸ್ಮಾರ್ಟ್ ಸಿಟಿಬಗ್ಗೆ ಏನು ಹೇಳುತ್ತೀರಿ?

ಉತ್ತರ: ಇದಕ್ಕೆ ನಾವು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸಿದ್ದೇವೆ. ನಮಗೆ ‘ಸ್ಮಾರ್ಟ್ ಸಿಟಿ’ಯ ಅಗತ್ಯವಿಲ್ಲ. ನಮಗೆ ಬೇಕಿರುವುದು ‘ಸ್ಮಾರ್ಟ್ ಗ್ರಾಮ’ಗಳು. ಗ್ರಾಮಗಳನ್ನು ಸ್ಮಾರ್ಟ್ ಮಾಡಿ, ಆಗ ನಗರ ತಾನೇ ತಾನಾಗಿ ಗ್ರಾಮದ ಪ್ರಭಾವದಿಂದ ಸ್ಮಾರ್ಟ್ ಆಗುತ್ತದೆ. ಗ್ರಾಮದ ಪ್ರಭಾವದಿಂದ ಸ್ಮಾರ್ಟ್ ಆಗುವ ನಗರ ನಮಗೆ ಬೇಕು. ಸ್ಮಾರ್ಟ್ ನಗರಗಳಿಂದ ಪ್ರಭಾವಿತವಾದ ಸ್ಮಾರ್ಟ್ ಗ್ರಾಮ ನಮಗೆ ಬೇಡ.

ಎಲ್ಲ ಹಳ್ಳಿಗಳನ್ನು ಸ್ಮಾರ್ಟ್‍ಗೊಳಿಸಿ ಎಂದರೆ ಅರ್ಥ: ಗ್ರಾಮದ ಜನರು ಗ್ರಾಮದಲ್ಲೇ ಉಳಿದು, ಗ್ರಾಮದ ಸಂಸ್ಕೃತಿಯನ್ನು ಉಳಿಸಿಕೊಂಡು, ಎಲ್ಲ ಕುಟೀರ ಉದ್ಯೋಗಗಳನ್ನು ಉಳಿಸಿ ಬೆಳೆಸಿಕೊಂಡು; ಗ್ರಾಮದಲ್ಲೇ ಸ್ವಾವಲಂಬಿಯಾಗಿ ಪರಸ್ಪರ ಅವಲಂಬಿಯಾಗಿ ಬದುಕಿ, ನಗರದ ಜನರಿಗೆ ಏನೆಲ್ಲಾ ಬೇಕೋ ಅದನ್ನು ಹಿಂದಿನಂತೆಯೇ ಗ್ರಾಮದಿಂದ ಕೊಡುವ ವ್ಯವಸ್ಥೆಗೆ ಬಂದರೆ ನಮ್ಮ ಗ್ರಾಮಗಳು ಸ್ಮಾರ್ಟ್ ಆಗುತ್ತವೆ.

ಪ್ರಶ್ನೆ: ಅಂದರೆ, ಗ್ರಾಮದಲ್ಲಿ ಉತ್ಪಾದನೆಯಾದಂತಹವುಗಳು ನಗರದಲ್ಲಿ ವಿಲೇವಾರಿ ಆಗಬೇಕು ಎಂದೇ?

ಉತ್ತರ: ವಿಲೇವಾರಿ ಎಂದಲ್ಲ. ಹಿಂದೆ ನೋಡಿ, ಔಷಧಿ ಬೇಕು ಎಂದರೆ ನಗರದ ಜನ ಹಳ್ಳಿಗೆ ಬರುತ್ತಿದ್ದರು. ಹಾಲು-ತರಕಾರಿ-ಅನ್ನ-ದವಸಧಾನ್ಯ ಬೇಕು ಎಂದರೆ ಹಳ್ಳಿಗೆ ಬರುತ್ತಿದ್ದರು. ಬಟ್ಟೆಗೂ ಹಳ್ಳಿಯ ಮೇಲೆ ಅವಲಂಬಿತರಾಗಿದ್ದರು. ವಿದ್ಯೆ ಬೇಕು ಎಂದಾಗಲೂ ಹಳ್ಳಿಯ ಗುರುಗಳ ಬಳಿ ಬರುತ್ತಿದ್ದರು. ರಾಜಮಹಾರಾಜರ ಮಕ್ಕಳೂ ಸಹಿತವಾಗಿ ಎಲ್ಲರೂ ಹಳ್ಳಿಗಳತ್ತ ಮುಖಮಾಡುತ್ತಿದ್ದರು. ಅದರರ್ಥ ಭಾರತದ ಜೀವನದ ಕೇಂದ್ರಬಿಂದು ಗ್ರಾಮವಾಗಿತ್ತು. ಇಂದು ಅದನ್ನು ನಾವು ತಿರುವುಮುರುವು ಮಾಡಿದ್ದೇವೆ. ಇಂದು ಹಳ್ಳಿಯ ಜನ ಹಾಲನ್ನು ನಗರಕ್ಕೆ ಕಳುಹಿಸುತ್ತಾರೆ, ನಗರದಿಂದ ಹಾಲು ತರಿಸುತ್ತಾರೆ. ನಗರಕ್ಕೆ ತರಕಾರಿ ಕಳುಹಿಸಿ, ಇನ್ನಾವುದೋ ತರಕಾರಿಯನ್ನು ಪುನಃ ನಗರದಿಂದ ಕೊಂಡುಕೊಂಡು ಬರುತ್ತಾರೆ. ಇದು ಸರಿಯಾದ ವ್ಯವಸ್ಥೆಯಲ್ಲ. ನಗರದ ಜನ ಹಳ್ಳಿಗಳಿಗೆ ಹೋಗಿ ತೆಗೆದುಕೊಳ್ಳುವ ವ್ಯವಸ್ಥೆಯಾಗಬೇಕು. ತರಕಾರಿ, ಹಾಲು ಇವುಗಳ ಮಾರುಕಟ್ಟೆ ಹಳ್ಳಿಯಾಗಬೇಕು. ಕುಟೀರ ಕೆಲಸಗಳ ಕೇಂದ್ರಬಿಂದು ಹಳ್ಳಿಯಾಗಬೇಕು. ನಗರದ ಜನ ಹಳ್ಳಿಗೆ ಬಂದು ಕೊಂಡುಕೊಳ್ಳುವ ವ್ಯವಸ್ಥೆ ಬಂದಾಗ ಹಳ್ಳಿ ಸ್ಮಾರ್ಟ್ ಆಯಿತು, ಸ್ಮಾರ್ಟ್ ಹಳ್ಳಿಯಿಂದಾಗಿ ನಗರ ಸ್ಮಾರ್ಟ್ ಆಯಿತು. ಆಗ ನಗರದ ಜನರಿಗೆ ಹಳ್ಳಿಯ ಕಡೆಗೆ ತಿರುಗಿ ನೋಡುವ ಅಭ್ಯಾಸವಾಗುತ್ತದೆ.


“ರೈತ-ಗ್ರಾಹಕನ ನಡುವೆ ನೇರ ವ್ಯವಹಾರ ಆರಂಭವಾಗಲಿ”

  ಪ್ರಶ್ನೆ: ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದಿರುವುದು ದೇಶದ ರೈತರ ಬಹುದೊಡ್ಡ ಸಮಸ್ಯೆ ಎನ್ನುತ್ತಾರೆ. ದೇಶದ ಯಾವ ಭಾಗದಲ್ಲಾದರೂ ರೈತರು ಇದಕ್ಕೆ ಯೋಗ್ಯ ಪರಿಹಾರ ಕಂಡುಕೊಂಡಿದ್ದಾರೆಯೆ? ಅದನ್ನು ಇತರರು ಅನುಸರಿಸಬಹುದೆ?

ಉತ್ತರ: ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದಿರುವುದಕ್ಕೆ ಮೂಲಕಾರಣ ರೈತ ಮತ್ತು ಗ್ರಾಹಕರ ನಡುವೆ ಇರುವ ಮಧ್ಯವರ್ತಿಗಳು. ನಾನು ಮೊದಲಿನಿಂದಲೂ ಹೇಳುತ್ತಿದ್ದದ್ದು ಮತ್ತು ಭಾರತದಲ್ಲಿ ಮೊದಲಿನಿಂದಲೂ ಚಾಲ್ತಿಯಲ್ಲಿದ್ದುದು ‘ರೈತ ಮತ್ತು ಗ್ರಾಹಕನ ನಡುವೆ ನೇರ ಸಂಬಂಧ’. ಏಕೆಂದರೆ ಭಾರತದ ರೈತ ಎಂದೂ ಮೋಸಗಾರನಲ್ಲ. ಇನ್ನೊಬ್ಬನಿಗೆ ಮೋಸ ಮಾಡಿ ತಾನು ಬದುಕಬೇಕು ಎಂದು ಎಂದಿಗೂ ಯೋಚನೆ ಕೂಡ ಮಾಡುವವನಲ್ಲ. ತಾನು ಕಷ್ಟಪಟ್ಟದ್ದಕ್ಕೆ ನ್ಯಾಯಬೆಲೆ ಸಿಗುವುದಕ್ಕಾಗಿ ಆತ ಹೋರಾಡುತ್ತಾನೆ ಮತ್ತು ಅದು ತನ್ನ ಧರ್ಮ ಎಂದು ತಿಳಿದಿದ್ದಾನೆ. ಆದ್ದರಿಂದ ರೈತ ಮತ್ತು ಗ್ರಾಹಕನ ನಡುವೆ ನೇರ ವ್ಯವಹಾರದ ವ್ಯವಸ್ಥೆ ಬಂದಾಗ ಗ್ರಾಹಕನಿಗೆ ಮೋಸ ಮಾಡುವ ಯೋಚನೆ ಉತ್ಪಾದಕನಿಗೆ ಬರಲಾರದು. ಆಗ ಉತ್ಪನ್ನಗಳಿಗೆ ಸೂಕ್ತಬೆಲೆ ಸಿಗುತ್ತದೆ ಮಾತ್ರವಲ್ಲದೆ ಗ್ರಾಹಕನಿಗೆ ಕಡಮೆ ದರದಲ್ಲಿ ಮಾಲುಗಳು ಸಿಗಬಹುದು. ಇದು ಒಂದನೆಯ ಅಂಶ.

ಎರಡನೆಯ ಅಂಶ, ಇಂತಹ ವ್ಯವಸ್ಥೆ ಮಾಡಿಕೊಂಡ ಕೆಲವು ಹಳ್ಳಿಗಳಿವೆ. ಹಳ್ಳಿಯಲ್ಲಿ ಸಹಕಾರ ಸಂಘವನ್ನು ಕಟ್ಟಿಕೊಂಡಿದ್ದಾರೆ. ಅದು ಕೃಷಿಕರೇ ಕಟ್ಟಿಕೊಂಡ ಸಹಕಾರ ಸಂಘಗಳು, ಯಾರೂ ಮೋಸಮಾಡುವವರು ಇಲ್ಲ. ಗ್ರಾಹಕರು ಸುತ್ತಮುತ್ತಲಿನಿಂದ ಬರುತ್ತಾರೆ. ಸಂಘದಿಂದ ಮಾಲುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಇಲ್ಲಿ ರೈತ-ಗ್ರಾಹಕನ ನಡುವೆ ನೇರ ವ್ಯವಹಾರ ಉಂಟಾಯಿತು. ಅನೇಕ ಕಡೆಗಳಲ್ಲಿ ಈ ವ್ಯವಸ್ಥೆ ಚೆನ್ನಾಗಿ ನಡೆಯುತ್ತಿದೆ. ದಲ್ಲಾಳಿ ವ್ಯವಸ್ಥೆಗಿಂತ ಇದು ಉತ್ತಮ ವ್ಯವಸ್ಥೆ.


ಪ್ರಶ್ನೆ: ವ್ಯಕ್ತಿಯ ಬೆಳವಣಿಗೆಗಾಗಿ ಸಹಜವಾಗಿ ಲಬ್ಧವಿದ್ದ ವ್ಯವಸ್ಥೆಗಳೂ, ಪರಿಸರವೂ ಈಗ ಇವೆಯೇ?

ಉತ್ತರ: ಆಗಲೇ ಹೇಳಿದಂತೆ ನಗರದಿಂದ ದೂರವಿರುವ ಹಳ್ಳಿಗಳಲ್ಲಿ ಪೂರಕ ಪರಿಸರವಿದೆ. ಹಾಗೆಂದು ಯಾವುದನ್ನು ನಾವು ಬೆಳವಣಿಗೆ ಎನ್ನುತ್ತೇವೆ ಆ ಭಾಗ ಇಲ್ಲ. ಅದನ್ನು ಸ್ವಲ್ಪಮಟ್ಟಿಗೆ ಒದಗಿಸಿಕೊಟ್ಟರೆ ಉತ್ತಮ. ಉದಾಹರಣೆಗೆ ಆರೋಗ್ಯದ ವ್ಯವಸ್ಥೆ, ಶಿಕ್ಷಣದ ವ್ಯವಸ್ಥೆ. ಆಗ ವ್ಯಕ್ತಿಗೆ ಬೇಕಾದಂತಹ ಬೆಳವಣಿಗೆಗೆ ಪೂರಕ ಪರಿಸರ ಚೆನ್ನಾಗಿವೆ ಎನ್ನಬಹುದು. ಹಳ್ಳಿಗಳಲ್ಲಿ ಶಿಕ್ಷಣ ವ್ಯವಸ್ಥೆ ಇಲ್ಲವೇ ಎಂದು ಕೇಳಿದರೆ, ಶಾಲೆಯಿದೆ. ಆದರೆ ಶಿಕ್ಷಕರು ಸರಿಯಾಗಿ ಬರುವುದಿಲ್ಲ, ಪಾಠಗಳು ನಡೆಯುವುದಿಲ್ಲ. ಆರೋಗ್ಯ ಕೇಂದ್ರಗಳಿವೆ, ವೈದ್ಯರು ಬರುವುದಿಲ್ಲ, ಔಷಧಿ ಸಿಗುವುದಿಲ್ಲ. ಈ ಅವ್ಯವಸ್ಥೆ ಸರಿಯಾಗಬೇಕು. ನಗರಗಳಿಗಿಂತ ಉತ್ತಮ ಶಿಕ್ಷಕರು ಹಳ್ಳಿಗಳಲ್ಲಿ ಇದ್ದಾರೆ ಎಂದಾದರೆ, ಹಳ್ಳಿಯ ಜನ ಮಕ್ಕಳನ್ನು ವಿದ್ಯಾಭ್ಯಾಸಕ್ಕೆಂದು ನಗರಕ್ಕೆ ಯಾಕೆ ಕಳುಹಿಸುತ್ತಾರೆ? ಆರೋಗ್ಯದ ವ್ಯವಸ್ಥೆ ಉತ್ತಮವಿದ್ದರೆ ಹಳ್ಳಿಯ ಜನ ನಗರಕ್ಕೆ ಯಾಕೆ ಓಡೋಡಿ ಬರಬೇಕು? ಈ ರೀತಿಯ ಮಾರ್ಪಾಡು ಆಗಬೇಕು.

ಪ್ರಶ್ನೆ: ಈಗಾಗಲೇ ಪ್ರಸ್ತಾವಿಸಿದ ಹಲವು ಅಂಶಗಳಿಗೆ ಸಂಬಂಧಪಟ್ಟ ವಾಸ್ತವ ಅನುಭವಗಳು ಕಂಡಿದ್ದಲ್ಲಿ ಅವನ್ನು ತಿಳಿಸಬಹುದೇ?

ಉತ್ತರ: ಒಂದೆರಡು ಉದಾಹರಣೆ ಹೇಳುತ್ತೇನೆ.

ಹಲವು ಹಳ್ಳಿಯಲ್ಲಿ ಇಂದು ಕೂಡ ಒಂದುಕಾಲದಲ್ಲಿ ಇದ್ದಂತಹ ಅವಿಭಕ್ತ ಕುಟುಂಬ ಪದ್ಧತಿ ಇದೆ. ಅವಿಭಕ್ತ ಕುಟುಂಬ ಪದ್ಧತಿ ಇರುವುದರಿಂದಲೇ ಆ ಕುಟುಂಬಗಳು ಆನಂದವಾಗಿವೆ. ಯಾರ ಮೇಲೆಯೂ ಅವರು ಅವಲಂಬಿತರಲ್ಲ. ಅವರ ಕುಟುಂಬದ ಕೆಲಸಗಳನ್ನು ಮಾಡುವಷ್ಟು ಸಾಮಥ್ರ್ಯ ಅವರಲ್ಲಿದೆ. ಉತ್ತರಾಖಂಡದಲ್ಲಿ ಯಮುನೋತ್ರಿಯ ಹಾದಿಯಲ್ಲಿ ಹೋಗುವಾಗ ಒಂದು ಮನೆಯಲ್ಲಿ ಉಳಿದುಕೊಂಡಿದ್ದೆವು. ಆ ಮನೆಯಲ್ಲಿ ಇಂದಿಗೂ 97 ಜನರಿದ್ದಾರೆ. ಇನ್ನು 25-30 ಜನರಿರುವ ಕುಟುಂಬಗಳು ಹಲವು ಹಳ್ಳಿಗಳಲ್ಲಿವೆ. ವಿಶೇಷವಾಗಿ ಗುಜರಾತ್, ರಾಜಸ್ಥಾನ, ಹಿಮಾಚಲಪ್ರದೇಶ, ಉತ್ತರಾಖಂಡ ಇಂತಹ ರಾಜ್ಯಗಳಲ್ಲಿ ಇವು ಕಾಣಸಿಗುವುದು ಹೆಚ್ಚು. ಅವರಿಗೆ ಇಂದಿಗೂ ಈ ಜೀವನಪದ್ಧತಿ ಬೇಕು.

ಹಲವು ಹಳ್ಳಿಗಳಲ್ಲಿ ಅವಿಭಕ್ತ ಕುಟುಂಬಗಳು ವಿಭಕ್ತವಾಗಿದ್ದನ್ನೂ ಕಾಣುತ್ತೇವೆ. ದಕ್ಷಿಣಕನ್ನಡ ಜಿಲ್ಲೆಯನ್ನೇ ತೆಗೆದುಕೊಂಡರೆ, ಮುಂದುವರಿದ ಜಿಲ್ಲೆ ಎನ್ನುತ್ತೇವೆ. ಆದರೆ ಮುಂದುವರಿದ ಜಿಲ್ಲೆಯಲ್ಲಿ ತಿನ್ನಲು ಅನ್ನವಿಲ್ಲ. ಉಡಲು ಬಟ್ಟೆಯಿಲ್ಲ. ಅದು ಬೇರೆ ಕಡೆಯಿಂದ ಬರಬೇಕು. ಹಳ್ಳಿಯ ಮನೆಗಳಲ್ಲಿ ಮನೆಯ ಕೆಲಸಕ್ಕೆ ಜನವಿಲ್ಲ. ತೋಟದ ಕೆಲಸಕ್ಕೆ ಜನ ಸಿಗುವುದಿಲ್ಲ. ಹಳ್ಳಿಮನೆಗಳಲ್ಲಿ ವಯಸ್ಸಾದ ಮುದುಕ-ಮುದುಕಿಯರಷ್ಟೇ ಇದ್ದಾರೆ. ಇದು ವಿಕಾಸವೇ, ವಿನಾಶವೇ? – ಎನ್ನುವ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳಬೇಕು.

ಇವೆರಡು ನಿಟ್ಟಿನಲ್ಲಿ ಯೋಚಿಸುವುದಾದರೆ, ಭಾರತದ ಯಾವ ಭಾಗಗಳನ್ನು ನಾವು ಮುಂದುವರಿದಿಲ್ಲ ಎನ್ನುತ್ತಿದ್ದೇವೋ ಅಲ್ಲಿ ಇಂತಹ ಪ್ರಾಚೀನ ವ್ಯವಸ್ಥೆ ಇನ್ನೂ ಜೀವಂತವಾಗಿದೆ. ನಮ್ಮ ಭವಿಷ್ಯ ಉಜ್ಜ್ವಲವಾಗಿದೆ, ಕೆಟ್ಟಿಲ್ಲ ಎನ್ನುವ ಭರವಸೆಯನ್ನು ಕೊಡುವ ಭಾಗಗಳು ಇವು.

ನಾವು ನೋಡಿದ ಭಾರತದ ಚಿತ್ರ ಎಂದರೆ: ಪುಟ್ಟ ಮಕ್ಕಳಿಂದ ಹಿಡಿದು, ಯುವಕ ಯುವತಿಯರು, ಮುದುಕಮುದುಕಿಯರು, ಮಧ್ಯವಯಸ್ಸಿನವರು ಹೀಗೆ ಲಕ್ಷಾಂತರ ಹಳ್ಳಿಗರನ್ನು ಭೇಟಿ ಮಾಡಿದ್ದೇವೆ. ಇವರು ಯಾರೂ ಕೂಡ ನಮ್ಮಲ್ಲಿ ಕೊಲೆಯಾಗಿದೆ, ಕಳ್ಳತನವಾಗಿದೆ ಎಂದು ಹೇಳಿಲ್ಲ. ಇದರಿಂದ ನಾವು ಅರಿತುಕೊಳ್ಳಬೇಕು ಹಳ್ಳಿಜೀವನ ಹೇಗಿದೆ ಎಂದು. ಕೇಳಲು ಸಿಗದಿರುವುದು ಮಾತ್ರವಲ್ಲ; ನಾವು ನೋಡಿದ ಚಿತ್ರಣವನ್ನೂ ಹೇಳುತ್ತೇವೆ. ಭಾರತದ ಇಷ್ಟು ಹಳ್ಳಿಗಳಲ್ಲಿ ವಸತಿ ಮಾಡಿ, ಇಡೀ ದಿನ ಸುತ್ತಾಡುವಾಗ ನಾವು ಕಣ್ಣಾರೆ ನೋಡಿದ ಚಿತ್ರ. ಹಳ್ಳಿಯ ಜನ ಈವತ್ತಿಗೂ ತೋಟ ಗದ್ದೆಯ ಕೆಲಸಕ್ಕೆ ಹೋಗುವಾಗ ತಮ್ಮ ಮನೆಗೆ ಬೀಗಹಾಕಿ ಹೋಗಿರುವುದನ್ನು ನಾವು ನೋಡಿಲ್ಲ. ಬೀಗ ಹಾಕದೇ ಹೋಗುವ ದೃಶ್ಯ, ನಾವು ಯಾವುದನ್ನು ಕೇಳಿಲ್ಲವೋ ಅದನ್ನು ಕಣ್ಣಾರೆ ನೋಡಬಹುದು.

ಬೇಸಿಗೆಗಾಲದಲ್ಲಿ, ಹೆಣ್ಣುಗಂಡುಮಕ್ಕಳಾದಿಯಾಗಿ ಎಲ್ಲರೂ ರಾತ್ರಿಯಿಡೀ ಹೊರಗೆ ಅಂಗಳದಲ್ಲಿ ಮಲಗುವ ದೃಶ್ಯವನ್ನು ಭಾರತದ ಹಳ್ಳಿಗಳಲ್ಲಿ ಇಂದಿಗೂ ಕಾಣಬಹುದು. ಹೆಣ್ಣುಮಕ್ಕಳಾದಿಯಾಗಿ ಎಲ್ಲರೂ ಹೊರಗಡೆ ಮಲಗುತ್ತಾರೆ ಎಂದರೆ ಹಳ್ಳಿ ಪರಸ್ಪರ ಎಷ್ಟು ವಿಶ್ವಾಸದಿಂದ ಬದುಕುತ್ತಿದೆ ಎನ್ನುವುದಕ್ಕೆ ಇದು ಮೂರನೆಯ ಉದಾಹರಣೆ.

ನಾಲ್ಕನೆಯದಾಗಿ, ಐದು ವರ್ಷಗಳಲ್ಲಿ ಒಂದು ದಿನವೂ ಕೂಡ ದೇಹ ಕಾಯಿಲೆ ಬೀಳಲು ಬಿಡಲಿಲ್ಲ. ಅಂದರೆ ಪ್ರತಿಯೊಂದು ಹಳ್ಳಿಗಳಲ್ಲಿ, ಅದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ದ್ವಾರಕಾದಿಂದ ಪರಶುರಾಮಕುಂಡದವರೆಗೆ, ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಯಾವುದೇ ಹಳ್ಳಿಗಳಲ್ಲಿ ನಾವು ನೋಡಿದ ದೃಶ್ಯವೆಂದರೆ: ಮೊದಲನೆಯದಾಗಿ, ‘ಬನ್ನಿ ಕುಳಿತುಕೊಳ್ಳಿ, ತಿನ್ನಿ, ಚೆನ್ನಾಗಿ ತಿನ್ನಿ, ಸಂಕೋಚಮಾಡಿಕೊಳ್ಳಬೇಡಿ. ನಿಮ್ಮ ಮನೆ ಎಂದೇ ತಿಳಿದುಕೊಳ್ಳಿ. ಇನ್ನೂ ಎರಡು ದಿನ ಇದ್ದುಹೋಗಿ. ಅನಿವಾರ್ಯ ಎಂದಾದರೆ, ಯಾತ್ರೆ ಮುಗಿದ ಬಳಿಕ ಆರಾಮ ಮಾಡಲು ಕನಿಷ್ಠ ಪಕ್ಷ ಒಂದು ಹತ್ತು ದಿನ ನಮ್ಮ ಮನೆಗೇ ಬನ್ನಿ.’ ಇದು ಎಲ್ಲಾ ಮನೆಯ ತಾಯಂದಿರ ಬಾಯಿಯಿಂದ ನಾವು ಕೇಳಿದ ಮಾತು. ಎರಡನೆಯದು, ಮನೆಯಿಂದ ಹೊರಡುವಾಗ ಪ್ರತಿ ಮನೆಯ ತಾಯಂದಿರ ಕಣ್ಣಲ್ಲೂ ಕಣ್ಣೀರು. ಇದು ಏನು ಸೂಚಿಸುತ್ತದೆ ಎಂದರೆ, ಭಾರತ ಅಂತರ್ವಾಹಿನಿಯಾಗಿ ಈವತ್ತಿಗೂ ಭಾರತವಾಗಿ ಉಳಿದುಕೊಂಡಿದೆ. ಇದೇ ಭಾರತ. ಇದೇ ಭಾರತದ ನಿಜವಾದ ಆಧ್ಯಾತ್ಮಿಕ ವಾತ್ಸಲ್ಯಮಯ ಜೀವನ ಪರಂಪರೆ.

ಐದನೆಯದಾಗಿ, ನಾವು ಹಳ್ಳಿಗಳನ್ನು ಸುತ್ತಬೇಕಾದರೆ, ಒಂದೇ ಒಂದು ಹಳ್ಳಿಯಲ್ಲಿ ಈ ಯಾತ್ರೆಗೆ ವಿರೋಧವಾಗಲಿ ತಿರಸ್ಕಾರವಾಗಲಿ ನಕಾರಾತ್ಮಕವಾದ ಮಾತುಗಳಾಗಲಿ ನಮಗೆ ಕೇಳಲು ಸಿಕ್ಕಿಲ್ಲ. ಬದಲಾಗಿ ಈಗ ವರ್ಣಿಸಿದ ದೃಶ್ಯಗಳೇ ನಮ್ಮನ್ನು ಸ್ವಾಗತಿಸಿದವು.

ಇವೆಲ್ಲವೂ ಏನನ್ನು ಸೂಚಿಸುತ್ತದೆ ಎಂದರೆ, ಭಾರತ ನಿಜಕ್ಕೂ ಇಂದು ಜೀವಂತವಾಗಿ ಉಳಿದುಕೊಂಡಿದ್ದರೆ ಅದು ಭಾರತದ ಹಳ್ಳಿಗಳಿಂದಾಗಿ ಮಾತ್ರ.     


‘ವೃದ್ಧಾಶ್ರಮ ಸ್ವಯಂಕೃತ ಅಪರಾಧ’

ಪ್ರಶ್ನೆ: ಕೃಷಿಕ್ಷೇತ್ರ ಸೊರಗುತ್ತಿರುವ ಕಾರಣ ಗ್ರಾಮೀಣ ಪ್ರದೇಶಗಳು ‘ವೃದ್ಧಾಶ್ರಮ’ಗಳಾಗುತ್ತಿರುವ ವಿದ್ಯಮಾನ ಸಾರ್ವತ್ರಿಕವೆ? ಹಳ್ಳಿಗಾಡಿನಲ್ಲಿರುವ ಮುದುಕ-ಮುದುಕಿಯರು ಏನು ಹೇಳುತ್ತಾರೆ?

ಉತ್ತರ: ನನಗೆ ಅನಿಸುತ್ತಿರುವ ಪ್ರಕಾರ, ಕೃಷಿಕ್ಷೇತ್ರ ಸೊರಗುತ್ತಿರುವ ಕಾರಣದಿಂದ ಗ್ರಾಮೀಣ ಪ್ರದೇಶಗಳು ‘ವೃದ್ಧಾಶ್ರಮ’ಗಳಾಗುತ್ತಿಲ್ಲ. ಬದಲಾಗಿ ‘ನಾವಿಬ್ಬರು ನಮಗೊಬ್ಬ/ಳು’ ಎನ್ನುವ ಕೆಟ್ಟಚಾಳಿಯನ್ನು ಮಾನಸಿಕವಾಗಿ ಬೆಳೆಸಿಕೊಂಡಿದ್ದೇ ಇದಕ್ಕೆ ಮುಖ್ಯಕಾರಣ. ಸರ್ಕಾರವೇ ದೊಡ್ಡಮಟ್ಟಿಗೆ ಪ್ರಚಾರ ಮಾಡಿತು. ಜನಸಂಖ್ಯೆ ಬೆಳೆಯುತ್ತಿದೆ, ಆದ್ದರಿಂದ ಜನಸಂಖ್ಯೆ ನಿಯಂತ್ರಣ ಮಾಡಬೇಕು ಎಂದು. ಅದು ‘ನಾವಿಬ್ಬರು ನಮಗೆ ಮೂವರು’, ‘ನಾವಿಬ್ಬರು ನಮಗಿಬ್ಬರು’, ಕೊನೆಗೆ ‘ನಾವಿಬ್ಬರು ನಮಗೊಬ್ಬ/ಳು’ ತನಕ ಬಂದಿತು. ಬಲವಂತವಾಗಿ ಜನಸಂಖ್ಯಾ ನಿಯಂತ್ರಣವನ್ನು ಮಾಡುವ ಪ್ರಯತ್ನ ಮಾಡಿತು. ಬಲವಂತ ಎನ್ನುವ ಶಬ್ದಕ್ಕೆ ಎರಡು ಅರ್ಥ. ಒಂದು ದೈಹಿಕವಾಗಿ ಬಲವಂತ, ಇನ್ನೊಂದು ಆಮಿಷಗಳನ್ನು ಒಡ್ಡಿ ಬಲವಂತ. ಆದ್ದರಿಂದ ಇದರ ಪರಿಣಾಮವಾಗಿಯೇ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ.
ವಾಸ್ತವವಾಗಿ ನಾವು ಕೇಳಬೇಕಾದ ಪ್ರಶ್ನೆ ಎಂದರೆ, ಮಾನವ ಸಂಪನ್ಮೂಲ ಖಾತೆ ತೆರೆಯುತ್ತೀರಿ. ಮಾನವನನ್ನು ಸಂಪನ್ಮೂಲ ಎಂದು ಕರೆದಿದ್ದೀರಿ, ಕೋಟ್ಯಂತರ ರೂಪಾಯಿಯನ್ನು ಖರ್ಚು ಮಾಡಲಾಗುತ್ತದೆ. ಹೀಗೆ ಹೇಳುತ್ತಾ ಮತ್ತೊಂದು ಕಡೆ ಜನಸಂಖ್ಯೆಯೇ ಸಮಸ್ಯೆ ಎನ್ನಲಾಗುತ್ತದೆ. ಇವೆರಡು ವಿಪರ್ಯಾಸ ಅಲ್ಲವೇ? ಮಾನವನೇ ಸಂಪತ್ತು ಎಂದವರು ಮಾನವನೇ ಸಮಸ್ಯೆ ಎಂದು ಹೇಗೆ ಹೇಳುತ್ತೀರಿ? ಜನ ಕೇವಲ ಸಂಖ್ಯೆಯಾದರೆ ಅದು ಸಮಸ್ಯೆ. ಜನವೇ ಸಂಪತ್ತು ಎಂಬುದನ್ನು ಅರಿತು ಮನುಷ್ಯನನ್ನು ಸಂಪತ್ತಾಗಿ ಪರಿವರ್ತಿಸುವ ಸಂಸ್ಕಾರವನ್ನು ಶಿಕ್ಷಣದ ಮೂಲಕ ಕೊಟ್ಟುಕೊಂಡು ಬಂದರೆ, ಆಗ ಈ ಸಮಸ್ಯೆ ಪರಿಹಾರವಾಗುತ್ತದೆ. ಆಗ ಇಂದು ವೃದ್ಧಾಶ್ರಮಗಳು ಎನಿಸಿಕೊಳ್ಳುತ್ತಿರುವ ಕುಟುಂಬಗಳು ಸಂತೃಪ್ತಿಯಿಂದ ಬದುಕುವ ಸಮೃದ್ಧಾಶ್ರಮಗಳಾಗಲು ಸಾಧ್ಯ.


ಈ ಸಂದರ್ಶನದ ಮೂಲ: ‘ಉತ್ಥಾನ’ ಮಾಸಪತ್ರಿಕೆ.

ಸಂದರ್ಶನ ಮತ್ತು ಚಿತ್ರ: ಕಾಕುಂಜೆ ಕೇಶವ ಭಟ್, ಸಂಪಾದಕರು ‘ಉತ್ಥಾನ’ ಮಾಸಪತ್ರಿಕೆ.

ನಿರೂಪಣೆ: ಸುಮನಾ ಮುಳ್ಳುಂಜ

Facebook ಕಾಮೆಂಟ್ಸ್

ಲೇಖಕರ ಕುರಿತು

Sumana Mullunja

Trying hard to be myself on this Earth. Born and brought up at Puttur, Dakshina Kannada. Completed my B.Sc and pursuing M.Sc Physics from Kuvempu University – Distance Education, Shivamogga.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!