Featured ಅಂಕಣ

“ಬೇಕಿರುವುದು ಸಮಾನತೆಯಲ್ಲ – ಅನ್ಯೋನ್ಯತೆ” – ಡಾ|| ರವೀಂದ್ರನಾಥ ಶಾನಭಾಗ

ಪ್ರಶ್ನೆ: ಪುರುಷರ ಮತ್ತು ಸ್ತ್ರೀಯರ ಸಮಾನತೆಗಾಗಿ ಆಗ್ರಹ ಅನೇಕ ದಶಕಗಳಿಂದ ಹೊಮ್ಮಿದೆ. ಹಾಗೆಂದು ಇದುವರೆಗಿನ ಯಾವುದೇ ದೇಶದ ಕಾನೂನುಗಳು ಕಂಠೋಕ್ತವಾಗಿ ಸ್ತ್ರೀಯರಿಗೆ ವಿರುದ್ಧವಾಗಿ ಇದ್ದಂತಿಲ್ಲ. ಸರ್ವಸಮಾನತೆಯೇ ಎಲ್ಲ ಸಂವಿಧಾನಗಳ ಆಧಾರವಾಗಿದೆ. ಹೀಗಿದ್ದೂ ಸಮಾನತೆ ಆಚರಣೆಯಲ್ಲಿ ಬಂದಿಲ್ಲವೆಂದರೆ ಬೇರೆಯೇ ಕಾರಣಗಳು ಇರಬೇಕಲ್ಲವೆ?

ಉತ್ತರ: ಹೌದು. ಸಮಾನತೆ ಎಂದು ಹೇಳುತ್ತೇವೆ. ಈ ಸಮಾನತೆ ಎನ್ನುವುದನ್ನು ಅನ್ಯೋನ್ಯತೆ ಎಂದು ಏಕೆ ಮಾಡಬಾರದು? ಸಮಾನತೆ ಎಂದು ಹೇಳುವಾಗಲೇ ‘ಹಕ್ಕು – ಪ್ರತಿಪಾದನೆ’ ಮಾಡಿದ ರೀತಿ ಆಗುತ್ತದೆ. ಪುರುಷ ಮತ್ತು ಸ್ತ್ರೀ ಸಮಾನತೆಗಾಗಿ ಕಾನೂನುಗಳನ್ನು ಮಾಡಿದ ಕಾನೂನು ಮಾಪಕರು ಯಾರಾದರೂ ಇವರ ನಡುವೆ ಅನ್ಯೋನ್ಯತೆಗಾಗಿ ಎನ್ನುವ ದೃಷ್ಟಿಯಿಂದ ಯೋಚಿಸಲೇ ಇಲ್ಲ. ನಾನು ಇಲ್ಲಿಯ ತನಕ ಮಾತನಾಡಿದ ಯಾವುದೇ ಹೆಣ್ಣುಮಗಳು ಕೂಡಾ ಸಮಾನತೆ ಇಲ್ಲ ಎಂದು ಹೇಳಿಲ್ಲ. ಆಕೆಗೂ ಬೇಕಿರುವುದು ಅನ್ಯೋನ್ಯತೆಯೇ ಆಗಿದೆ.

ಇದೇ ನಿಟ್ಟಿನಲ್ಲಿ ಯೋಚಿಸಿ, ನಾವು ಅದಕ್ಕಾಗಿ ಒಂದು ಸಣ್ಣ ಗುಂಪು ಮಾಡಿಕೊಂಡಿದ್ದೇವೆ. 1992ರಲ್ಲಿ ಆರಂಭವಾದ ಸಂಸ್ಥೆ ಇದು – ‘ಸಮನ್ವಯ’. ಗಂಡ-ಹೆಂಡತಿ ವಿಚ್ಛೇದನ ಬೇಕೆಂದು ನಮ್ಮ ಬಳಿ ಬರುತ್ತಾರೆ. ನಾವು ಮೊದಲಿಗೆ ಕೇಳುವ ಪ್ರಶ್ನೆ ಎರಡು: ನಿಮಗೆ ಜೊತೆಯಾಗಿರಬೇಕೋ ಅಥವಾ ಬೇರೆಯಾಗಬೇಕೋ? ಜೊತೆಯಾಗಬೇಕು ಎಂದರೆ ಅವರ ನಡುವೆ ಅನ್ಯೋನ್ಯತೆ ಕಡಮೆಯಾಗಲು ಕಾರಣವೇನು ಎನ್ನುವುದನ್ನು ತಿಳಿಯುತ್ತೇವೆ. ನಮ್ಮ ಗುಂಪಿನಲ್ಲಿ ವೈದ್ಯರೂ ಇದ್ದಾರೆ. ಎಲ್ಲ ರೀತಿಯಿಂದ ಅವರ ನಡುವೆ ವಿರಸ ಮೂಡಲು ಕಾರಣಗಳೇನು, ಅವುಗಳನ್ನು ಸರಿಪಡಿಸಲು ಸಾಧ್ಯವೇ ಎಂದು ಪರೀಕ್ಷಿಸುತ್ತೇವೆ. ಸಾಧ್ಯವಿದ್ದಾಗ ಅನ್ಯೋನ್ಯತೆ ಮತ್ತೆ ಮೂಡಿಸಲು ಪ್ರಯತ್ನಿಸುತ್ತೇವೆ. ಅದರಿಂದ ಅನೇಕ ಸಂದರ್ಭಗಳಲ್ಲಿ ಯಶಸ್ಸು ಸಿಕ್ಕಿದೆ. ಹೀಗಾಗಿ ಬೇಕಿರುವುದು ಅನ್ಯೋನ್ಯತೆಯೇ ಹೊರತು ಸಮಾನತೆಯಲ್ಲ.

ಪ್ರಶ್ನೆ: ಸರ್ವಜನಹಿತಕ್ಕಾಗಿ ಅಮಲಿಗೆ ಬಂದಿರುವ ಶಾಸನಗಳಿಗೆ ಕೊರತೆಯಿಲ್ಲ. ಆದರೆ ಕೆಲವು ವರ್ಗಗಳು ಆಗ್ರಹಿಸುವ ಸಮಾನತೆ ಇಷ್ಟು ದೀರ್ಘಕಾಲದ ನಂತರವೂ ಏರ್ಪಟ್ಟಿಲ್ಲವೆಂದರೆ ಮೂಲಭೂತ ಪ್ರಾಕೃತಿಕ ಕಾರಣಗಳು ಇರಬಹುದಲ್ಲವೆ? ಸ್ತ್ರೀಯರ ಸಮಾನತೆಯ ವಿಷಯ ಹಾಗಿರಲಿ; ಉದ್ಯೋಗ ಲಭ್ಯತೆ, ಬಡವರ್ಗಗಳ ಶೋಷಣೆ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆಯೂ ಬೇಕಾದಷ್ಟು ಕಾನೂನುಗಳೂ ಯೋಜನೆಗಳೂ ಜಾರಿಗೆ ಬಂದಿವೆಯಷ್ಟೆ. ಆದರೆ ಹೆಚ್ಚಿನಂಶದಲ್ಲಿ ಗಣನೀಯ ಪರಿವರ್ತನೆ ಆಗಿದೆ ಎನಿಸುತ್ತಿದೆಯೆ?

ಉತ್ತರ: ಸ್ತ್ರೀಯರ ವಿರುದ್ಧವಾಗಿ ಅಥವಾ ಪುರುಷರ ರಕ್ಷಣೆಗಾಗಿ ಇಂದಿನವರೆಗೆ ಯಾವುದೇ ಕಾನೂನು ಇಲ್ಲ. ಯಾಕೆಂದರೆ ಅವರ ಮೂಲ ಯೋಚನೆ – ಮಹಿಳೆ ಎಂದರೆ ಅಬಲೆ ಎಂದು. ಎಲ್ಲ ಪರಿಸ್ಥಿತಿಗಳಲ್ಲೂ ಇದು ನಿಜವಾಗಿರಬೇಕಿಲ್ಲ. ಸಮಾನತೆ ಬೇಕು ಎಂದೇ ಆದರೆ, ಸಮಾನತೆ ಯಾವುದರಲ್ಲಿ ಬೇಕಿದೆ? ಪುರಾಣಕಾಲದಲ್ಲಿ ಸ್ತ್ರೀ ಸಮಾನತೆ ಇತ್ತು ಎನ್ನುವುದಕ್ಕೆ ನಮ್ಮಲ್ಲಿ ಬೇಕಾದಷ್ಟು ಪುರಾವೆಗಳಿವೆ. ಅವರು ಯಾರೂ ಸಮಾನತೆ ಬೇಕು ಎಂದು ಪ್ರತಿಪಾದಿಸಿ ಅದನ್ನು ಪಡೆದದ್ದಲ್ಲ, ತಮ್ಮ ಸ್ವಪ್ರಯತ್ನ ಸಾಧನೆಯಿಂದ ಸಮಾನ ಹಂತಕ್ಕೆ ಬೆಳೆದರು. ನೀವು ಕೊಡಿ ಅಥವಾ ಕೊಡದೇ ಇರಿ, ಅವರು ಆ ಹಂತಕ್ಕೆ ಬೆಳೆದರು. ಈ ರೀತಿಯ ಯೋಚನೆ ಮುಖ್ಯ. ನಾನು ನನ್ನ ಗಂಡನಷ್ಟೇ ಸಮರ್ಥಳು ಎನ್ನುವುದಕ್ಕೆ ಯಾವುದೇ ಸರ್ಟಿಫಿಕೇಟ್ ಬೇಕಿಲ್ಲ, ಯಾವುದೇ ಕಾನೂನು ಅದನ್ನು ಹೇಳಬೇಕಾಗಿಲ್ಲ ಎನ್ನುವುದನ್ನು ಅರಿತುಕೊಂಡು ಬದುಕಲು ಆರಂಭಿಸಿದಾಗ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆಗ ಮಾತ್ರ ಬದಲಾವಣೆ ಸಾಧ್ಯ. ಯಾವುದಕ್ಕೂ ಕಡಮೆ ಇಲ್ಲದಂತೆ ಬದುಕಿ ತೋರಿಸಬೇಕು.

ಪ್ರಶ್ನೆ: ಹಲವು ವರ್ಷಗಳಿಗೊಮ್ಮೆ ಹೊಸದೆನಿಸುವಂತಹ ಯಾವುದೋ ವಿಷಯವನ್ನು ಅತ್ಯಂತ ಮುಖ್ಯವೆಂದು ಮುಂದೊತ್ತುತ್ತ ಬರುವುದು ರೂಢಿಯಾಗಿದೆ. ಪರಿಭಾಷೆ ಬದಲಾಗುತ್ತದೆಯೇ ಹೊರತು ವಸ್ತುಸ್ಥಿತಿಯಲ್ಲಿ ಹೆಚ್ಚಿನ ವ್ಯತ್ಯಾಸವೇನಾಗದು. ಆಹಾರಾಭಾವ, ಪೌಷ್ಟಿಕತೆಯ ಕೊರತೆ, ಹಲವು ಕಾಯಿಲೆಗಳ ಪ್ರಸಾರ, ಪರಿಸರನಾಶ – ಹೀಗೆ ಹಲವು ವರ್ಷಗಳಿಗೊಮ್ಮೆ ಯಾವಾವುದೋ ವಿಷಯಗಳನ್ನು ಹೊಸದೆಂಬಂತೆ ಮುಂದೆ ತರಲಾಗುತ್ತದೆ. ಇಂತಹ ಅರ್ಧಸತ್ಯಗಳ ಪ್ರಸಾರ ಸದಾ ನಡೆಯುವುದರಿಂದ ಅವುಗಳ ಬಗೆಗೆ ಸಿನಿಕತನವೇ ಏರ್ಪಡುತ್ತದೆ. ಸ್ತ್ರೀಸ್ವಾತಂತ್ರ್ಯವೂ ಈ ಪಟ್ಟಿಗೆ ಸೇರಿರಬಹುದೇ? ಸ್ತ್ರೀವಾದವನ್ನು ನೂರುವರ್ಷ ಹಿಂದೆ ಆರಂಭಿಸಿದ ಅನೇಕ ಆದ್ಯರೇ ಹಲವು ವರ್ಷಗಳ ನಂತರ ಆ ನಿಲವುಗಳಿಂದ ಹಿಂದೆ ಸರಿದ ನಿದರ್ಶನಗಳಿವೆಯಲ್ಲವೆ?

ಉತ್ತರ: ಹೌದು. ಕಾನೂನು ಪಾರ್ಲಿಮೆಂಟಿನಲ್ಲಿ ಪಾಸ್ ಆಗುತ್ತದೆ; ಬಳಿಕ ಇದನ್ನು ಜಾರಿಗೆ ತರಲು ಸರ್ಕಾರೀ ಅಧಿಕಾರಿಗಳ ಬಳಿ ಕಳುಹಿಸಲ್ಪಡುತ್ತದೆ. ಕೆಲವು ಕಾನೂನುಗಳು 30-40 ಸಲ ಬದಲಾಗುತ್ತವೆ. ಕಾನೂನು ಪಾಸ್ ಮಾಡಿದವರು ಬುದ್ಧಿ ಇಲ್ಲದವರೇನೂ ಅಲ್ಲ. ಆದರೆ ಕಾನೂನು ಎನ್ನುವುದು ಎಂದಿಗೂ ನಿಂತ ನೀರಲ್ಲ; ಅನುಭವಗಳು ಹೆಚ್ಚಾದಂತೆ ಅಲ್ಲಿ ಬದಲಾವಣೆಗಳು ಆಗುತ್ತಿರುತ್ತವೆ. ಇದೇ ನಿಮ್ಮ ಈ ಪ್ರಶ್ನೆಗೆ ಉತ್ತರ. ಉದಾಹರಣೆಗೆ: ಬಳಕೆದಾರರ ರಕ್ಷಣಾ ಕಾಯ್ದೆ, ಅದನ್ನು 4 ಸಲ ತಿದ್ದುಪಡಿ ಮಾಡಲಾಯಿತು. ಈ ತಿದ್ದುಪಡಿಗಳ ಬಳಿಕ ಕಾಯ್ದೆಯ ಮೂಲರೂಪವೇ ಸಂಪೂರ್ಣ ಬದಲಾಗಿದೆ. ಮೊದಲಿಗೆ ಯಾವುದೇ ಕಾನೂನು, ಕಾಯ್ದೆ ಹೊಸದೆಂದು ಅನಿಸಿದರೂ, ಬಳಿಕ ಕಾಲ ಸರಿಯುತ್ತಾ ಇದು ಸರಿಯಾದ ಮಾರ್ಗವಲ್ಲ ಎನ್ನುವುದು ತಿಳಿಯುತ್ತದೆ.

ಪ್ರಶ್ನೆ: ಮೂಲತಃ ಇಡೀ ಸಮಾಜದ ಅಭ್ಯುದಯವನ್ನು ಕುರಿತು ಯೋಚಿಸುವುದಕ್ಕೆ ಬದಲಾಗಿ ಯಾವುದೊ ವಿಶಿಷ್ಟ ಜನವರ್ಗಕ್ಕೇ ವಿಶೇಷ ಸಮಸ್ಯೆಗಳು ಇವೆಯೆನ್ನುವಂತೆ ಧೋರಣೆಗಳನ್ನು ಕೈಗೊಳ್ಳುವುದು ಎಷ್ಟು ಮಾತ್ರ ಫಲದಾಯಕವಾದೀತು?

ಉತ್ತರ: ಸಾಧ್ಯವಿಲ್ಲ. ಧೋರಣೆ(ಪಾಲಿಸಿ)ಗಳನ್ನು ಮಾಡುವುದು ಐ.ಎ.ಎಸ್. ಅಧಿಕಾರಿಗಳೇ ಹೊರತು ರಾಜಕಾರಣಿಗಳಲ್ಲ. ತಮ್ಮ ಯೋಜನೆಯನ್ನು ಅಧಿಕಾರಿಗಳಿಗೆ ತಿಳಿಸುತ್ತಾರೆ, ಅಧಿಕಾರಿಗಳು ಧೋರಣೆಯನ್ನು ತಯಾರಿಸುತ್ತಾರೆ. ಧೋರಣೆ ಮಾಡುವವರು, ಎಲ್ಲಾ ದೃಷ್ಟಿಕೋನಗಳಿಂದ ಯೋಚಿಸುವುದಿಲ್ಲ. ಯಾವುದೋ ಒಂದು ಜನಾಂಗದವರು ದುರ್ಬಲರು, ಮತ್ತೊಂದು ಜನಾಂಗ ಸಬಲ ಎನ್ನುವ ಷರಾ ಬರೆದುಬಿಡುತ್ತಾರೆ. ಪ್ರತಿ ಜನಾಂಗದಲ್ಲೂ ಎಲ್ಲಾ ರೀತಿಯವರೂ ಇರುತ್ತಾರೆ. ಆದ್ದರಿಂದ ಇಂತಹ ಧೋರಣೆಗಳಿಂದ ಸಮಾಜಸುಧಾರಣೆ ಸಾಧ್ಯವಿಲ್ಲ.

ನಮ್ಮ ಸಮಾಜಸುಧಾರಕರು ಯಾರೂ ಧೋರಣೆಗಳ ಮೂಲಕ ಸಮಾಜವನ್ನು ಉತ್ತಮ ಸ್ಥಿತಿಗೆ ತಂದಿದ್ದಲ್ಲ. ಯಾವುದೇ ಸಮಾಜಸುಧಾರಕರೂ ಕೂಡ ಸಮಸ್ಯೆಯ ಮೂಲ ಎಲ್ಲಿದೆ, ಅದಕ್ಕೆ ಕಾರಣ ಏನು ಎನ್ನುವುದನ್ನು ಅಧ್ಯಯನ ಮಾಡಿದರು. ಆ ಕಾರಣಕ್ಕೆ ಪರಿಹಾರ ಹುಡುಕಿದರೇ ಹೊರತು, ಧೋರಣೆಯನ್ನು ತಂದು ಕಾನೂನಾತ್ಮಕವಾಗಿ ಹೋರಾಟ ಮಾಡಿದವರಲ್ಲ.

ಸತಿಸಹಗಮನ ಪದ್ಧತಿ ನಿರ್ಮೂಲನೆಯಾಗಿದ್ದು ಇದಕ್ಕೆ ಉದಾಹರಣೆ. ಬ್ರಿಟಿಷರು ಹೆಣ್ಣುಮಕ್ಕಳಿಗೆ ಪತಿಯ ಮರಣಾನಂತರ ಆಸ್ತಿಯಲ್ಲಿ ಹಕ್ಕು ಇದೆ ಎನ್ನುವ ಕಾನೂನನ್ನು ತಂದಿದ್ದರು. ಇದೇ ಕಾರಣಕ್ಕೆ ಪತಿ ತೀರಿಕೊಂಡಾಗ ಪತ್ನಿಯನ್ನು ಸಾಯಿಸುವ ಪದ್ಧತಿ ಆರಂಭವಾಯಿತು. ಈ ಮೂಲಕ ಕಾರಣವನ್ನು ತಿಳಿದುಕೊಂಡು ಸಮಾಜಸುಧಾರಕರು ಸತಿಸಹಗಮನ ಪದ್ಧತಿಯನ್ನು ಹೋಗಲಾಡಿಸಲು ಹೋರಾಡಿದರೇ ಹೊರತು ಕಾನೂನಾತ್ಮಕವಾಗಿ ಹೋರಾಟ ನಡೆಸಿ ಸಾಧಿಸಿದ್ದಲ್ಲ.

ಪ್ರಶ್ನೆ: ಈಚಿನ ಕಾಲದ ಮಾಧ್ಯಮಗಳ ದುರ್ಬಳಕೆಯ ಹಿನ್ನೆಲೆಯಲ್ಲಿ ಯಾವ ಸಮಸ್ಯೆಗಳು ನಿಜವಾದವು, ಯಾವ ಸಮಸ್ಯೆಗಳು ಕೃತಕವಾಗಿ ಸೃಷ್ಟಿಸಲ್ಪಟ್ಟಿರುವುವು ಎಂದೇ ಶಂಕೆ ತಲೆದೋರುವ ಸ್ಥಿತಿ ಇದೆ ಎನಿಸುತ್ತದೆಯೆ?

ಉತ್ತರ: ಹೌದು, ಮಾಧ್ಯಮಗಳ ಪಾತ್ರ ಬಹಳ ಇದೆ. ಉದಾಹರಣೆಗೆ – ಒಬ್ಬ ಹುಡುಗ ಮಣಿಪಾಲದ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿದವನು, ಈಗಿನ ಕಾಲದ ಜನಜೀವನಕ್ಕೆ ಒಗ್ಗಿಕೊಂಡವನು. ಆತ ಪ್ರತಿದಿನ ನೀಲಿಚಿತ್ರಗಳನ್ನು ನೋಡುವುದನ್ನು ಅಭ್ಯಾಸ ಮಾಡಿಕೊಂಡವನು. ಹುಡುಗಿ ಉಡುಪಿಯ ಹಳ್ಳಿಯೊಂದರಲ್ಲಿ ಡಿಗ್ರಿ ಮುಗಿಸಿದವಳು. ಅವಳದೇ ಮನಃಸ್ಥಿತಿಯ ಸ್ನೇಹಿತೆಯರನ್ನು ಹೊಂದಿದ್ದವಳು ಆಕೆ. ಇವರಿಬ್ಬರಿಗೆ ಮನೆಯ ಹಿರಿಯರ ಮೂಲಕ ಮದುವೆ ಆಯಿತು. ಈಕೆ ಮದುವೆಯ ಮೊದಲ ದಿನವೇ ಆತನ ನಡವಳಿಕೆ ನೋಡಿ ಆಘಾತಕ್ಕೆ ಒಳಗಾಗಿದ್ದಾಳೆ. ಅವಳೂ ಕೆಟ್ಟವಳಲ್ಲ, ಈತನೂ ಕೆಟ್ಟವನಲ್ಲ. ಇದನ್ನು ಕಲ್ಚರಲ್ ಡಿಫರೆನ್ಸ್ ಎನ್ನುತ್ತೇವೆ.

ಇದಕ್ಕೆ ಪರಿಹಾರ ಎಂದರೆ ಮದುವೆಯ ಮೊದಲು ಹುಡುಗ ಹುಡುಗಿ ಮಾತನಾಡಿಕೊಳ್ಳುವ ಅವಕಾಶ ಕೊಡಬೇಕು. ಇಂದಿನ ಕಾಲದಲ್ಲೂ ಹುಡುಗ ಹುಡುಗಿ ಮದುವೆಯ ಮೊದಲು ನೋಡದೇ ಮದುವೆಯಾಗುವ ಸ್ಥಿತಿ ಇದೆ. ಇದು ಬದಲಾಗಬೇಕು. ಅವರ ಮಾನಸಿಕ ಸ್ಥಿತಿ ಹೊಂದಾಣಿಕೆಯಾಗುತ್ತದೆಯೇ ಎನ್ನುವುದನ್ನು ಅವರು ಅರಿತುಕೊಳ್ಳಬೇಕು. ನಮ್ಮ ಪ್ರಕಾರ ಕನಿಷ್ಠಪಕ್ಷ ಆರು ತಿಂಗಳು ಮಾತನಾಡಬೇಕು. ಅವರಿಗೆ ಪರಿಸ್ಪರ ಸಂಬಂಧವನ್ನು ಅರಿತುಕೊಂಡು, ಮಾನಸಿಕ ಸ್ಥಿತಿ ಹೊಂದುತ್ತದೆ ಎಂದೆನಿಸಿದರೆ ಮಾತ್ರ ಮದುವೆಯ ಹಂತಕ್ಕೆ ಹೋಗಬೇಕು.

ಪ್ರಶ್ನೆ: ಹಿಂಸಾಚರಣೆ ಮೊದಲಾದವು ಸಂಪೂರ್ಣ ಇಲ್ಲವಾಗಿದ್ದ ಕಾಲ ಬಹುಶಃ ಇದ್ದಿರಲಾರದೇನೊ. ಈ ಹಿನ್ನೆಲೆಯಲ್ಲೂ ಹಲವಾರು ಸಮಸ್ಯೆಗಳು ಸತ್ಯದೂರವಾಗಿ ಬಿಂಬಿತವಾಗುತ್ತಿವೆ ಎನಿಸುತ್ತದೆಯೆ?

ಉತ್ತರ: ಹೌದು. ಪ್ರತಿಕಾಲದಲ್ಲೂ ಹಿಂಸೆ ಎನ್ನುವುದಿತ್ತು. ಅದರ ನಮೂನೆ ಬೇರೆ ಬೇರೆ ಇರಬಹುದು ಅಷ್ಟೆ. ನನ್ನ ಅಜ್ಜ ಅಜ್ಜಿಗೆ ಹೊಡೆಯುತ್ತಿದ್ದರಂತೆ. ಅದೇ ನನ್ನ ತಂದೆ ತಾಯಿಯ ನಡುವೆ ಅಂತಹ ಸ್ಥಿತಿ ಇರಲಿಲ್ಲ. ನನ್ನ ವೈಯಕ್ತಿಕ ಜೀವನದಲ್ಲಿ ಅಂತೂ ಅಂತಹ ಘಟನೆಗಳು ಇಲ್ಲ. ಮೊದಲೆಲ್ಲ ನಿಕೃಷ್ಟವಾಗಿ ಕಾಣುವುದು ಸರ್ವೇಸಾಮಾನ್ಯವಾಗಿತ್ತು. ಇದೂ ಅಷ್ಟೆ ಕಾನೂನು ತರುವುದರಿಂದ ಈ ಬದಲಾವಣೆ ಸಾಧ್ಯವಿಲ್ಲ, ಮನುಷ್ಯನ ಮನಃಸ್ಥಿತಿ ಬದಲಾಗಬೇಕು.

ಪ್ರಶ್ನೆ: ಮೂಲತಃ ಸಾಮಾಜಿಕವೋ ಮಾನಸಿಕವೋ ಆಗಿರುವ ಸಮಸ್ಯೆಗಳಿಗೆ ಕಾನೂನಿನ ಪರಿಹಾರವನ್ನು ಅರಸುವುದು ಎಷ್ಟುಮಟ್ಟಿಗೆ ಫಲಕಾರಿಯಾದೀತು?

ಉತ್ತರ: ನಾನು ಹೇಳುವುದಾದರೆ ಇದು ಅಸಂಬದ್ಧ. ಫ್ಯಾಮಿಲಿ ಕೋರ್ಟ್ ಇರಬಾರದು. ಆದರೆ ಅದಕ್ಕೆ ಸಮನಾದ ಸಮರ್ಥವಾದ ಪರಿಹಾರಮಾರ್ಗವಿದೆ. ಸ್ವಾಮಿಜೀಗಳ ಬಳಿ, ಮುಲ್ಲಾಗಳ ಬಳಿ, ಇಗರ್ಜಿಯಲ್ಲಿ ಮಾತನಾಡಿದ್ದೇನೆ. ಧಾರ್ಮಿಕವಾಗಿ ಕೋರ್ಟ್‍ಗಳನ್ನು ಇಟ್ಟುಕೊಳ್ಳಬೇಕು. ಹಿರಿಯರ ಸಮಿತಿ ಮಾಡುವ ಮೂಲಕ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಈ ದಿಕ್ಕಿನಲ್ಲಿ ಸಣ್ಣ ಪ್ರಯೋಗಗಳನ್ನು ಮಾಡಿದ್ದೇವೆ, ಗೆಲವೂ ಕಂಡಿದ್ದೇವೆ.

ಪ್ರಶ್ನೆ: ಸ್ತ್ರೀಯರ ಮೇಲಣ ಅತ್ಯಾಚಾರ ಪ್ರಸಂಗಗಳು ತೀರಾ ಇತ್ತೀಚೆಗಷ್ಟೆ ಹೆಚ್ಚಿವೆ ಎನಿಸುತ್ತದೆಯೆ? ಹಾಗಿದ್ದಲ್ಲಿ ಕಾರಣಗಳು ಏನಿರಬಹುದು?

ಉತ್ತರ: ಖಂಡಿತಾ ಹೆಚ್ಚಾಗಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಪ್ರಚಾರ ಹೆಚ್ಚು ಸಿಗುತ್ತಿದೆ. ನಮ್ಮ ಊರಿನಲ್ಲಿ 10 ದಿನಪತ್ರಿಕೆ, 8 ನ್ಯೂಸ್‍ಚಾನೆಲ್‍ಗಳು ಇವೆ. ಅವು ಬೆಳಗ್ಗೆಯಿಂದ ಸಂಜೆ ತನಕ ಒಂದೇ ಸುದ್ದಿಯನ್ನು ಹಾಕುತ್ತಲೇ ಇರುತ್ತವೆ. ಬೆಳಗ್ಗೆಯಿಂದ ಸಂಜೆ ತನಕ ಅದನ್ನೇ ನೋಡಿದ ನಾವು ಮಾನಸಿಕವಾಗಿ 40 ಸಲ ಅತ್ಯಾಚಾರ ಆಗಿದೆ ಎನ್ನುವಂತಹ ಮನಃಸ್ಥಿತಿಗೆ ತಲಪುತ್ತೇವೆ. ಇದು ಮಾಧ್ಯಮದಿಂದ ಸೃಷ್ಟಿಯಾಗುವ ಸಮಸ್ಯೆ. ಮಾಧ್ಯಮಗಳು ತೊಂದರೆಯನ್ನು ನೋಡುವುದಿಲ್ಲ, ಅವು ಟಿ.ಆರ್.ಪಿ. ಮುಖವನ್ನು ನೋಡುತ್ತವೆ.

ಪ್ರಶ್ನೆ: ಶೋಷಣೆಯ ವಿಷಯಕ್ಕೆ ಬಂದರೆ: ಅನೇಕ ವರ್ಗಗಳು ತಾರತಮ್ಯಗಳನ್ನು ಎದುರಿಸುತ್ತಿರುತ್ತವೆ. ಇವಕ್ಕೆ ಪರಿಹಾರವನ್ನು ಸಾಮಾಜಿಕ ಶಿಕ್ಷಣಾತ್ಮಕ ಮಾರ್ಗಗಳ ಮೂಲಕ ಯೋಚಿಸುವುದು ಹೆಚ್ಚು ಪ್ರಯೋಜನಕರವಾಗದೆ?

ಉತ್ತರ: ಹೌದು. ಒಂದು – ಆಯಾಯ ಜನಾಂಗಗಳಲ್ಲಿ ಗುಂಪುಗಳನ್ನು ಮಾಡಿ ಶಿಕ್ಷಣವನ್ನು ಕೊಡಿಸುವುದು. ಇನ್ನೊಂದು ಪ್ರಮುಖವಾದುದೆಂದರೆ ಶಾಲೆಗಳಲ್ಲಿ ಶಿಕ್ಷಣ. ಹೆಣ್ಣುಮಕ್ಕಳಿಗೆ, ಅವರ ತಾಯಂದಿರಿಗೆ ಮತ್ತು ಶಿಕ್ಷಕಿಯರಿಗೆ ಈ ಶಿಕ್ಷಣ ನೀಡಬೇಕು. ಇವರಿಗೆ ನಾಲ್ಕೈದು ವಿಚಾರವಾಗಿ ಶಿಕ್ಷಣ ಕೊಡಬೇಕು. ಲೈಂಗಿಕ ಶಿಕ್ಷಣ ಮಾತ್ರ ಇಂದಿನ ಅಗತ್ಯವಲ್ಲ. ಗರ್ಭಾವಸ್ಥೆಯಲ್ಲಿರುವಾಗ ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳುವುದು, ಕ್ರಿಮಿನಾಶಕ-ಕೀಟನಾಶಕಗಳು ಜೆನೆಟಿಕಲಿ ಹೇಗೆ ಪರಿಣಾಮವನ್ನು ಬೀರುತ್ತವೆ, ಫಾರ್ಮಸಿಯಲ್ಲಿ ಮಾತ್ರೆಗಳು ಸಿಗುತ್ತವೆ ಎಂದು ಸಿಕ್ಕಸಿಕ್ಕ ಮಾತ್ರೆಗಳನ್ನು ನುಂಗುವುದರಿಂದ ಆಗುವ ಅಡ್ಡಪರಿಣಾಮಗಳೇನು – ಇತ್ಯಾದಿ ಮಾಹಿತಿಗಳನ್ನು ಹೆಣ್ಣುಮಕ್ಕಳಿಗೆ ತಲಪಿಸಬೇಕು. ಇದನ್ನು ಸುಮಾರು 200 ಶಾಲೆಗಳಲ್ಲಿ ನಮ್ಮ ತಂಡದವರು ಮಾಡಿದ್ದೇವೆ. ಈ ಶಿಕ್ಷಣದಿಂದಾಗಿ ಗಂಡ ಹೊಡೆದರೆ ಏನು ಮಾಡಬಹುದು, ಗುಡ್ ಟಚ್, ಬಾಡ್ ಟಚ್ ಹೇಗೆ ತಿಳಿಯುವುದು ಎಲ್ಲವನ್ನೂ ತಿಳಿದುಕೊಳ್ಳುತ್ತಾರೆ. ಇದುವೇ ಸಮಸ್ಯೆ ಬಾರದಂತೆ ತಡೆಯಲು ಇರುವ ಸಮರ್ಥವಾದ ಏಕೈಕ ಮಾರ್ಗ ಎನ್ನುವುದು ನನ್ನ ಅಭಿಪ್ರಾಯ.

ಸಮಸ್ಯೆ ಬಂದ ಬಳಿಕ ಆದರೆ ಪರಿಹಾರಕ್ಕೆ ಧಾರ್ಮಿಕ ಮಾರ್ಗ ಸೂಕ್ತ. ದೇವಸ್ಥಾನದಲ್ಲೊ ಅಥವಾ ಆಯಾಯ ಸಮುದಾಯಗಳಲ್ಲಿ ಹಿರಿಯರು ಕುಳಿತು ಮಾತನಾಡಿ ಪರಿಹಾರ ಕಂಡುಕೊಳ್ಳುವುದು ಕಾನೂನಾತ್ಮಕ ಹೋರಾಟಕ್ಕಿಂತ ಸಮರ್ಥವಾದದ್ದು.

ಪ್ರಶ್ನೆ: ಕಾನೂನುಗಳೂ ಅಧಿಕೃತ ಸರ್ಕಾರೀ ಧೋರಣೆಗಳೂ ಸೇರಿದಂತೆ ಎಲ್ಲ ವ್ಯವಸ್ಥೆಗಳೂ ವಿಶಿಷ್ಟ ವರ್ಗಗಳಿಗೆ ಪಕ್ಷಪಾತ ತೋರುವ ದಿಕ್ಕಿನಲ್ಲಿ ಇದ್ದರೆ ಈ ಸಂಗತಿಯೇ ಸಾಮಾಜಿಕ ಅಸಾಮರಸ್ಯಕ್ಕೆ ಕಾರಣವಾಗದೆ?

ಉತ್ತರ: ಹೌದು. ಹೆಣ್ಣನ್ನು ಯಾವತ್ತೂ ನೀನು ಬಲಹೀನಳು, ನಿನ್ನಿಂದ ಸಾಧಿಸಲು ಸಾಧ್ಯವಾಗದು ಎಂದೇ ಯಾವತ್ತೂ ಯಾಕೆ ಹೇಳುತ್ತಿರಬೇಕು? ನೀನು ಅಬಲೆ ಎಂದು ಕಾಲಮಾನಗಳಿಂದ ಹೇಳಿ ಹೇಳಿಯೇ ಆಕೆಗೆ ತಾನು ಶೋಷಣೆಗೆ ಒಳಗಾಗುತ್ತಿದ್ದೇನೆ ಎನ್ನುವ ಮಾನಸಿಕ ಸ್ಥಿತಿ ಬೆಳೆದುಬಿಡುತ್ತದೆ. ಎಲ್ಲಿ ನಿನ್ನನ್ನು ಶೋಷಣೆ ಮಾಡುತ್ತಿದ್ದಾರೆ ಎಂದರೆ, ಹಿಂದಿನ ಕಾಲದಲ್ಲಿ ಮಾಡಿದ್ದರು, ಸರಿ ಈಗ ಯಾರಾದರು ಮಾಡುತ್ತಿದ್ದಾರಾ, ಎಂದರೆ ಇಲ್ಲ. ಈ ಮನಃಸ್ಥಿತಿಗೆ ಕಾರಣ ಒಂದು ಜನಾಂಗವನ್ನು ಬಲಹೀನರು ಎಂದು ಸದಾ ಹೇಳುತ್ತಿರುವುದೇ ಆಗಿದೆ. ಹೋರಾಟಗಾರರಾಗಲು ಪ್ರಯತ್ನಿಸಬೇಡಿ, ಪರಿಹಾರ ಹುಡುಕಿ.

ಪ್ರಶ್ನೆ: ಯಾವುದೋ ಸದುದ್ದೇಶದಿಂದ ಕಾನೂನುಗಳು ರೂಪಿತವಾಗಿದ್ದರೂ ಅನಂತರದ ಕಾಲದಲ್ಲಿ ಅವನ್ನು ಅನುಭವಾಧಾರಿತವಾಗಿ ಮರುವಿಮರ್ಶೆ ಮಾಡಬೇಡವೆ?

ಉತ್ತರ: ಹೌದು. ಮರುವಿಮರ್ಶೆ ಬೇಕು ಮತ್ತು ಮರುವಿಮರ್ಶೆ ಕಾನೂನಿನಲ್ಲಿ ಆಗುತ್ತಿರುತ್ತದೆ. ತಿದ್ದುಪಡಿಗಳು ಜಾರಿಗೆ ಬರುತ್ತವೆ. ಆದರೆ ಮರುವಿಮರ್ಶೆ ಮಾಡಬೇಕಾಗಿರುವುದು ಕಾನೂನನ್ನಲ್ಲ. ಬದಲಾಗಿ ನಮ್ಮ ದೃಷ್ಟಿಕೋನವನ್ನು ಮರುವಿಮರ್ಶಿಸಬೇಕಾಗಿದೆ. ಇರುವ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿದ್ದೇವೆಯೇ ಅಥವಾ ಜಗಳ-ಸಂಘರ್ಷಗಳನ್ನು ಸೃಷ್ಟಿಸುತ್ತಿದ್ದೇವೆಯೇ ಎನ್ನುವುದನ್ನು ಯೋಚಿಸಬೇಕಾಗಿದೆ. ಇದು ಕಾನೂನು ಅಥವಾ ಸರ್ಕಾರೀ ಮಟ್ಟದಲ್ಲಿ ಇಲ್ಲ. ಇದು ಸಾಧ್ಯವಾದರೆ ಧಾರ್ಮಿಕ ಹಂತದಲ್ಲಿ ಮಾತ್ರ. ದುರುದ್ದೇಶವಿದೆ ಎಂದು ಕಾನೂನನ್ನು ಹಿಂತೆಗೆಯಲು ಯಾವುದೇ ಸರ್ಕಾರ ಯೋಚಿಸುವುದಿಲ್ಲ; ಕಾರಣ ಮುಂದಿನ ಮತದಾನದ ಸಮಯದಲ್ಲಿ ಹಿನ್ನಡೆಯಾಗಬಹುದೆಂಬ ಭಯ.

ಪ್ರಶ್ನೆ: ನಿದರ್ಶನಕ್ಕೆ: ವರದಕ್ಷಿಣೆಯ ಹಿನ್ನೆಲೆಯಲ್ಲಿ ನಡೆದಿರುವ ಗೊಂದಲಗಳನ್ನು ನಿವಾರಿಸಲು ಸಂಪೂರ್ಣವಾಗಿ ಸ್ತ್ರೀಯರ ಪರವಾಗಿರುವ ಏಕದೇಶೀಯ ಕಾನೂನುಗಳು ಅಮಲಿಗೆ ಬಂದಿವೆ. ಈ ಕಾನೂನುಗಳು ಹತ್ತಾರು ಸಂದರ್ಭಗಳಲ್ಲಿ ದುರುಪಯೋಗಗೊಳ್ಳುತ್ತಿರುವುದು ದೇಶಾದ್ಯಂತ ಗಮನಕ್ಕೆ ಬಂದಿದೆ. ಕಾನೂನಿನ ಈ ಪಕ್ಷಪಾತ ಕುರಿತು ಸರ್ವೋಚ್ಚ ನ್ಯಾಯಾಲಯವೂ ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದೆ. ಇಂತಹ ಕಾನೂನುಗಳ ಮರುವಿಮರ್ಶೆ ಆಗಬೇಡವೆ?

ಉತ್ತರ: ನನ್ನ ಪ್ರಕಾರ ಇಂದು ವರದಕ್ಷಿಣೆ ಎನ್ನುವ ಸಮಸ್ಯೆ ಇಲ್ಲ. ಅಪವಾದಗಳು ಇರಬಹುದು. ಆದರೆ ಬಹುತೇಕವಾಗಿ ಇಂತಹ ಸಮಸ್ಯೆ ಇಲ್ಲ ಎನ್ನಬಹುದು. ವರದಕ್ಷಿಣೆ ಇಲ್ಲದೆ ಮದುವೆ ಆಗುತ್ತೇನೆ ಎನ್ನುವ ಯಾವ ಹುಡುಗಿ ತನ್ನ ಮನೆಯಿಂದ ಚಿನ್ನವೂ ತೆಗೆದುಕೊಳ್ಳದೆ ಹೋಗುತ್ತಾಳೆ? ಇದು ಒಂದು ರೀತಿಯ ವರದಕ್ಷಿಣೆಯೇ ಆಯಿತಲ್ಲವೇ? ಮೊದಲಿನ ಹಾಗೆ ವರದಕ್ಷಿಣೆ ತರದಿದ್ದರೆ ಮದುವೆ ಮುರಿದುಬೀಳುವುದು, ಮನೆಯಿಂದ ಹೊರಗೆ ಕಳುಹಿಸುವುದು ಇಂತಹದ್ದೆಲ್ಲ ಇಂದು ಬಹುತೇಕ ಇಲ್ಲ ಎನ್ನುವುದೇ ನನ್ನ ಅನುಭವ.

ಹಾಗೆ ನೋಡಿದರೆ, ಇಂದು ದಕ್ಷಿಣಕನ್ನಡದಲ್ಲೇ ನಾನು ಗಮನಿಸಿದಂತೆ ವಧುದಕ್ಷಿಣೆ ಆರಂಭವಾಗಿದೆ. 3-4 ಲಕ್ಷ ದುಡ್ಡು ಕೊಟ್ಟು ಹುಡುಗಿಯನ್ನು ಮದುವೆ ಮಾಡಿ ಕರೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇದು ಭ್ರೂಣಹತ್ಯೆಯ ಕರಾಳ ಮುಖ. 1976-80ರ ಸಮಯದಲ್ಲಿ ಸ್ಕ್ಯಾನಿಂಗ್ ವ್ಯವಸ್ಥೆ ಬಂದ ಕಾಲ. ಆಗ ಭ್ರೂಣಹತ್ಯೆ ಬಹಳಷ್ಟು ನಡೆದಿವೆ. ಆಗ ಲೇಖನಗಳನ್ನು ಬರೆದಿದ್ದೆ, ‘ಜಾಗ್ರತೆ ಮಾಡಿ ಈಗ ಮಾಡುತ್ತಿರುವುದನ್ನು 10-20 ವರ್ಷ ಬಿಟ್ಟು ಅನುಭವಿಸಬೇಕಾಗುತ್ತದೆ’ ಎಂದು. ಈಗ ಮದುವೆ ಆಗಲು ಹುಡುಗಿಯರಿಲ್ಲ ಎಂದರೆ ತಪ್ಪು ಯಾರದ್ದು?

ಪ್ರಶ್ನೆ: ಸ್ತ್ರೀಯರಂತೆ ಪುರುಷರೂ ಶೋಷಣೆಗೂ ಹಿಂಸಾಚರಣೆಗೂ ಗುರಿಯಾಗಿರುವ ಅಸಂಖ್ಯ ನಿದರ್ಶನಗಳು ಎದುರಿಗಿವೆ. ಅನೇಕ ರಾಜ್ಯಗಳಲ್ಲಿ ಈ ವಿಪರ್ಯಾಸವನ್ನು ಎದುರಿಸಲು ಪುರುಷ ಸಂಘಟನೆಗಳೂ ಕಾರ್ಯ ಮಾಡುತ್ತಿವೆ. ಈ ಪರಿಸ್ಥಿತಿಯನ್ನು ನಿರ್ಮಾಣ ಮಾಡಿರುವ ಕಾನೂನು ವ್ಯವಸ್ಥೆ ಮುಂದುವರಿಯಬೇಕೆ?

ಉತ್ತರ: ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ನನ್ನ ಪ್ರಕಾರ ಸಂಘ ಕಟ್ಟಿಕೊಳ್ಳುವ ಮೂಲಕ ಇದಕ್ಕೆ ಪರಿಹಾರ ಸಾಧ್ಯವಿಲ್ಲ. ಕೆಲವು ಸಂಘದವರು ನನ್ನನ್ನು ಭೇಟಿಯಾಗಿದ್ದರು. ನಾನು ಹೇಳುವುದೇನೆಂದರೆ – ಸಂಘ ಕಟ್ಟುವ ಬದಲು ವಿಚಾರಗೋಷ್ಠಿಗಳನ್ನು ಮಾಡಿ. ಹಿರಿಯರನ್ನು ಜೊತೆಗೂಡಿಸಿ. ಲೈಂಗಿಕ ಶೋಷಣೆಯನ್ನು ಹೋಗಲಾಡಿಸಲು ಯಾವ ರೀತಿ ಸಣ್ಣಮಕ್ಕಳಿಗೆ ತಿಳಿಹೇಳಬೇಕೋ; ಹಾಗೆಯೇ ಈ ಸಮಸ್ಯೆಯ ಪರಿಹಾರಕ್ಕೆ ಹಿರಿಯರನ್ನು ಒಟ್ಟುಗೂಡಿಸಬೇಕು. ಪುರುಷಶೋಷಣೆ ನಿಲ್ಲಲು ಇದು ಪರಿಹಾರಮಾರ್ಗವಾಗಲು ಸಾಧ್ಯ. ಹೆಣ್ಣುಮಗಳ ಮನಸ್ಸಿನಲ್ಲಿ ಜಾಗೃತವಾಗಿರು ಎಂದು ಹೇಳುತ್ತಾ ಹೇಳುತ್ತಾ ಎಲ್ಲರನ್ನೂ ಸಂಶಯದೃಷ್ಟಿಯಲ್ಲಿ ನೋಡುವ ಮನೋಭಾವ ಬೆಳೆಸಿದ್ದೇವೆಯೇ? ನನಗೆ ಎಲ್ಲಿ ಶೋಷಣೆಯಾಗಿಬಿಡುತ್ತದೆಯೋ ಎನ್ನುವುದೇ ಅವಳ ಮನಸ್ಸಿನಲ್ಲಿರುತ್ತದೆ. ಸಂಶಯಮನೋಭಾವ ಬೆಳೆಯದಂತೆ, ತನ್ನ ಸ್ವರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬೇಕು ಎನ್ನುವ ಮನೋಭಾವವನ್ನು ಹಿರಿಯರು ಬೆಳೆಸಬೇಕಿದೆ.

ಪ್ರಶ್ನೆ: ಈ ಬಗೆಯ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರಕ್ರಮಗಳನ್ನು ವಾಸ್ತವಸ್ಥಿತಿಯ ಪ್ರಸಾರ, ಸಾಮಾಜಿಕ ಶಿಕ್ಷಣ, ಸಮಾಜ ಹಿತಚಿಂತಕ ತ್ರಯಸ್ಥರ ಮೂಲಕ ಹಿತಬೋಧನೆ ಮೊದಲಾದ ಕ್ರಮಗಳು ದೀರ್ಘಾವಧಿ ದೃಷ್ಟಿಯಿಂದ ಹೆಚ್ಚು ಪ್ರಯೋಜನಕರವಾದಾವೆಂದು ಅನಿಸುವುದಿಲ್ಲವೆ?

ಉತ್ತರ: ಹೌದು. ಖಂಡಿತವಾಗಿಯೂ ಇದೊಂದೇ ದಾರಿ. ಆದರೆ, ಹಿತಬೋಧನೆ ಎನ್ನುವ ಬದಲು ಆಗಲೇ ಹೇಳಿದಂತೆ ಸ್ಕೂಲ್ ಹಂತದಲ್ಲಿ ಶಿಕ್ಷಣ ಕೊಡಬೇಕು. 13ರಿಂದ 16ರ ವಯಸ್ಸಿನಲ್ಲಿ ಈ ಶಿಕ್ಷಣ ಸಿಗಬೇಕು. ಈ ವಯೋಮಾನವೇ ಏಕೆ ಆಗಬೇಕು ಎಂದರೆ, ಈವತ್ತಿಗೂ ಹತ್ತನೆಯ ತರಗತಿಯ ಬಳಿಕ ಶೇಕಡಾ 50ರಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮುಂದುವರಿಸುವುದಿಲ್ಲ. ಹಳ್ಳಿಗಳಲ್ಲಿ ಎಸ್.ಎಸ್.ಎಲ್.ಸಿ. ಮುಗಿಸಿದ ಬಳಿಕ ಅನೇಕ ಮಕ್ಕಳು ಶಿಕ್ಷಣ ಮುಂದುವರಿಸುವುದಿಲ್ಲ. ಲೈಂಗಿಕ ಶಿಕ್ಷಣ ಮಾತ್ರವಲ್ಲ, ಹೆಣ್ಣುಮಕ್ಕಳು ತಮ್ಮ ಮುಂದಿನ ಜೀವನದ ಪ್ರತಿಯೊಂದು ಹಂತದಲ್ಲಿ ತೆಗೆದುಕೊಳ್ಳಬೇಕಾದ ವೈದ್ಯಕೀಯ ಜಾಗ್ರತಾಕ್ರಮಗಳ ಬಗೆಗೂ ತಿಳಿವಳಿಕೆ ನೀಡಬೇಕು. ಇಂತಹ ಶಿಕ್ಷಣದ ಮೂಲಕ ಮಾತ್ರವೇ ಸಮಾಜದಲ್ಲಿ ಬದಲಾವಣೆ ಸಾಧ್ಯ.


ದಾಂಪತ್ಯಜೀವನದ ಸಾಮರಸ್ಯಕ್ಕೆ ಬೇಕಿದೆ ಕೂಡುಕುಟುಂಬ

ಹಿಂದಿನ ಕಾಲದಲ್ಲಿ ನಮ್ಮ ಕುಟುಂಬಪದ್ಧತಿ ಕೂಡು ಕುಟುಂಬವಾಗಿತ್ತು. ಆಗ ಮನೆಯ ಸೊಸೆಗೆ ಸಮಸ್ಯೆಯೇನಾದರೂ ಬಂದರೆ ಆಕೆ ತನ್ನ ಓರಗಿತ್ತಿಯರ ಬಳಿ ಆ ವಿಚಾರವನ್ನು ಹಂಚಿಕೊಂಡು ಮನಸ್ಸಿಗೆ ಸಮಾಧಾನವನ್ನು ಕಂಡುಕೊಳ್ಳುತ್ತಿದ್ದಳು. ಸಮಸ್ಯೆಗಳಿಗೆ ಪರಿಹಾರಮಾರ್ಗ ಅವರವರ ಮನೆಯೊಳಗೇ ಸಿಗುತ್ತಿತ್ತು, ಸಮಸ್ಯೆ ಮನೆ ಬಿಟ್ಟು ಹೊರಗೆ ಹೋಗುತ್ತಿರಲಿಲ್ಲ. ಅದಲ್ಲದೆ ಆಗ ಸಣ್ಣ ವಯಸ್ಸಿನಲ್ಲಿ ಮದುವೆ ಆಗುತ್ತಿತ್ತು. ಹೆಚ್ಚೆಂದರೆ 18ರಿಂದ 20 ವರ್ಷ ಮದುವೆಯ ವಯಸ್ಸಾಗಿತ್ತು. ಆಗ ತಾನೇ ತಾನಾಗಿ ಹೊಂದಿಕೆಯ ಮನೋಭಾವ ಬೆಳೆದುಬಿಡುತ್ತದೆ. ಅದೇ ಈಗ – 29-30 ವರ್ಷ ವಯಸ್ಸಿಗೆ ಹುಡುಗ-ಹುಡುಗಿ ಮದುವೆ ಆಗುತ್ತಿದ್ದಾರೆ. ವೈಯಕ್ತಿಕವಾಗಿ ತಮ್ಮದೇ ಆದ ಜೀವನರೀತಿಯನ್ನು ಬೆಳೆಸಿಕೊಂಡ ಅವರಿಗೆ ಮದುವೆಯ ಬಳಿಕ ಹೊಂದಾಣಿಕೆ ಎನ್ನುವುದು ಬಹಳ ಕಷ್ಟವಾಗುತ್ತದೆ. ಎಷ್ಟೊ ಸಂದರ್ಭಗಳಲ್ಲಿ ಗಂಡ ಹೆಂಡತಿ ಇಬ್ಬರೇ ದೂರದ ಊರಲ್ಲಿ ಜೀವನ ಮಾಡುತ್ತಿರುತ್ತಾರೆ. ತಂದೆ-ತಾಯಿ, ಅತ್ತೆ-ಮಾವ ಯಾರೂ ಜೊತೆಗೆ ಇರುವುದಿಲ್ಲ. ಹಗಲು ಮಾತುಕತೆ ಬಿಡಿ ಪರಸ್ಪರ ಮುಖ ನೋಡಿಕೊಳ್ಳುವುದೇ ರಾತ್ರಿ ಹತ್ತು ಹನ್ನೊಂದು ಗಂಟೆಯ ಬಳಿಕ. ಇಬ್ಬರೂ ಹೊರಗಡೆ ದುಡಿದು ಬಂದು ದಣಿದಿರುತ್ತಾರೆ. ಇಂತಹ ಜೀವನಕ್ರಮದಲ್ಲಿ ಅನ್ಯೋನ್ಯತೆ ಬೆಳೆಯಬೇಕು ಎಂದರೆ; ಬೆಳೆಯುವುದಾದರೂ ಹೇಗೆ?

ಈ ಎಲ್ಲಾ ದೃಷ್ಟಿಯಿಂದ ವಿಮರ್ಶಿಸಿ ನೋಡಿದಾಗ ನಮ್ಮ ಹಿಂದಿನ ಭಾರತೀಯ ಜೀವನಪದ್ಧತಿಯೇ ಇಂದಿನ ಹಲವು ಸಮಸ್ಯೆಗಳಿಗೆ ಪರಿಹಾರವಾವೆನಿಸುತ್ತದೆ.


(ಕಳೆದ ಸುಮಾರು ೩೦ ವರ್ಷಗಳಿಂದ ಬಳಕೆದಾರ ಮತ್ತು ಮಾನವಹಕ್ಕುಗಳ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಶಾನಭಾಗರು, ಇದೇ ವಿಷಯದ ಕುರಿತಾಗಿ ೧೨ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಪ್ರಸಕ್ತ ಮಾನವ ಹಕ್ಕುಗಳಿಗಾಗಿ, ಅದರಲ್ಲೂ ಯುವಜನರ ಮನಸ್ತಾಪಗಳು ಮತ್ತು ಹಿರಿಯರ ಹಕ್ಕುಗಳಿಗಾಗಿ ಹೋರ‍ಾಟವನ್ನು ನಡೆಸುತ್ತಿದ್ದಾರೆ. ಇವರು ಇತ್ತೀಚೆಗೆ ‘ಉತ್ಥಾನ’ ಮಾಸಪತ್ರಿಕೆಗಾಗಿ ನಡೆಸಿದ ಮಾತುಕತೆ ಇದು.)

ಚಿತ್ರ: ಕಾಕುಂಜೆ ಕೇಶವ ಭಟ್, ಸಂಪಾದಕರು ‘ಉತ್ಥಾನ’ ಮಾಸಪತ್ರಿಕೆ

Facebook ಕಾಮೆಂಟ್ಸ್

ಲೇಖಕರ ಕುರಿತು

Sumana Mullunja

Trying hard to be myself on this Earth. Born and brought up at Puttur, Dakshina Kannada. Completed my B.Sc and pursuing M.Sc Physics from Kuvempu University – Distance Education, Shivamogga.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!