ಅಂಕಣ

ಕಟ್ಟಿಹಾಕಲಾಗದು

ಮರಗಳು ವಿರಳವಿರುವ ಮಲೆನಾಡಿನ ಒಂದು ಭಾಗದಲ್ಲಿ ಮನೆಯಿಂದ ಹೊರಗೆ ಕಾಲಿಡುವ ಮುನ್ನ ಅದು ಎಲ್ಲಾದರೂ ನಿಂತಿದೆಯೋ ಎಂದು ಸುತ್ತಲೂ ಕಣ್ಣಾಡಿಸಿಕೊಂಡು ಹೊರಡಬೇಕಿತ್ತು. ಹೋಗುವ ಹಾದಿಯ ಗುಂಟ ಪದೇ ಪದೇ ಹಿಂತಿರುಗಿ ನೋಡಿಕೊಳ್ಳುತ್ತ, ಎಡಬಲಗಳಲ್ಲಿ ಕಣ್ಣಾಡಿಸುತ್ತ, ಅದಕ್ಕೆ ಅಂಜಿಕೊಂಡೇ ನಡೆಯಬೇಕಿತ್ತು. ಶಾಲೆಗೆಂದು ಹೋದ ಮಕ್ಕಳು ಸರಿಯಾದ ಸಮಯಕ್ಕೆ ಮನೆ ತಲುಪಿದ ಮೇಲೇ ತಂದೆತಾಯಿಗಳಿಗೆ ಸಮಾಧಾನ. ಅಚ್ಚು ಬಣ್ಣದ, ಎದ್ದು ಕಾಣುವ ಬಟ್ಟೆ ಹಾಕಿಕೊಂಡು ತಿರುಗಾಡುವವರು ಕಣ್ಣೀರಿಟ್ಟ ಸಂದರ್ಭಗಳೇನೂ ಕಡಿಮೆಯಿಲ್ಲ. ಮುಖ್ಯವಾದ ಕೆಲಸವೆಂದು ನಡೆದು ಹೊರಟವರು ಹಾದಿಗಡ್ಡ ನಿಂತ ಅದನ್ನು ನೋಡಿ ಹೆದರಿ ಓಡಿದ ಸಂದರ್ಭಗಳೆಷ್ಟೋ.

ಎಲ್ಲರೂ ಅದನ್ನು ಕಂಡರೇ ಹೆದರುತ್ತಿದ್ದರು. ಅದರ ರೂಪದಿಂದಾಗಿಯೂ, ಗುಣಗಳಿಂದಾಗಿಯೂ ತನಗೇ ಗೊತ್ತಿಲ್ಲದೇ ಊರ ನೆಲದಲ್ಲಿ ನಡುಕ ಹುಟ್ಟಿಸಿದ್ದ ಅದು ವಾಸಪ್ಪನ ಮನೆಯ ಎಮ್ಮೆ ಎಂದು ಹೇಳಲು ನನಗೆ ಅವಮಾನವೆನ್ನಿಸುತ್ತದೆ. ಎಮ್ಮೆಗಳೆಂದರೆ ಬಡ ಜಾನುವಾರುಗಳಲ್ಲವೇ!? ಮೊಂಡಾದ ಚೌತಿ ಚಂದ್ರನ ಆಕಾರದ ಪಾದಗಳ ವಾಸಪ್ಪನ ಮನೆಯಲ್ಲಿಯೇ ಹುಟ್ಟಿ ಬೆಳೆದ ಎಮ್ಮೆ ಇದ್ದಕ್ಕಿದ್ದಂತೆ ಒಂದು ದಿನ ಬದಲಾಗಿ ಹೋಗಿ ಸ್ವಲ್ಪ ಹೆಚ್ಚೇ ಎನ್ನಿಸುವಷ್ಟು ಕುಖ್ಯಾತಿ ಪಡೆಯಿತು.

೧೯೯೨ರ ಚಳಿಗಾಲದ ದಿನಗಳು. ಬೆಳಿಗ್ಗೆ ಗಂಟೆಯ ಸುಮಾರಿಗೆ ದೊಡ್ಡದೊಂದು ಸ್ಟೀಲ್ ಕ್ಯಾನ್ ಹಿಡಿದು ಆಲೆಮನೆಯಿಂದ ಕಬ್ಬಿನ ಹಾಲು ತರಲು ಹೊರಟಿದ್ದ ಅಪ್ಪನನ್ನು ಆಗಷ್ಟೇ ನಿದ್ದೆಯಿಂದೆದ್ದು ಕಂಬಳಿಯನ್ನು ಮಡಚುತ್ತಿದ್ದ ನಾನೂ ನೋಡಿದ್ದೆ. ಮನೆಯ ಹಿಂದಿನ ಗುಡ್ಡದ ಇಳಿಜಾರನ್ನು ಇಳಿದು, ಹೊಳೆಯ ಕಾಲುಸೇತುವೆ ದಾಟಿ, ಗದ್ದೆ ಬಯಲನ್ನು ದಾಟಿದರೆ ಆಲೆಮನೆ ನಡೆಯುವ ಸ್ಥಳ ಸಿಗುತ್ತದೆ. ಮನೆಯಿಂದ ನಿಮಿಷಗಳ ದೂರವಷ್ಟೇ. ನಾನೆದ್ದು ಸ್ನಾನ ಮಾಡಿ, ಅಮ್ಮನ ಕೈಯಿಂದ ಜಡೆ ಹಾಕಿಸಿಕೊಂಡು, ತಿಂಡಿ ತಿಂದು ಮುಗಿಸಿದರೂ ಅಪ್ಪನ ಸುಳಿವೇ ಇಲ್ಲ. ಆಲೆಮನೆಯಲ್ಲೇ ಹರಟುತ್ತ ಕುಳಿತಿರಬೇಕೆಂದುಕೊಂಡೆವು. ಅದು ಅಡಿಕೆ ಕೊಯ್ಲಿನ ದಿನವಾಗಿದ್ದರಿಂದ ಮನೆಯಲ್ಲಿ ಮತ್ತು ತೋಟದಲ್ಲಿ ಮುಗಿಯದಷ್ಟು ಕೆಲಸಗಳಿರುವಾಗ, ಹೊತ್ತಿನ ಪರಿವೆಯೇ ಇಲ್ಲದೇ ಅಪ್ಪ ಹರಟುತ್ತ ಕುಳಿತಿದ್ದಾನೆಂದರೆಯಾರೋ ಮಾತುಗಾರರು ಅಪ್ಪನನ್ನು ಹರಟೆಯಲ್ಲಿ ಕಟ್ಟಿಹಾಕಿ ಕೂರಿಸಿದ್ದಾರೆಂದೇ ಅರ್ಥ! ಎಂಟು ಗಂಟೆಯ ಹೊತ್ತಿಗೆ ಏದುಸಿರು ಬಿಡುತ್ತ ಬಂದವನು ಮನೆಯೆದುರಿನ ಹೇಡಿಗೆಯ ಮೇಲೆ ಕುಳಿತು ಹೇಳಿದಅದೇ, ವಾಸಪ್ಪನ ಮನೆಯ ಎಮ್ಮೆ ಕಥೆ ಗೊತ್ತಾತ ನಿಮಗೆಲ್ಲ?” ನಾವು ಗಾಬರಿಯಾಗಿಎಂತದು?” ಎಂದು ಕೇಳಿದೆವು.

ಎರಡು ದಿನಗಳ ಹಿಂದೆ ಪಕ್ಕದೂರಿನ ಭಟ್ಟರೊಬ್ಬರು ಯಾರದೋ ಮನೆಯ ಪೌರೋಹಿತ್ಯವನ್ನು ಮುಗಿಸಿಕೊಂಡು ತಮ್ಮೂರಿಗೆ ಮರಳುತ್ತಿದ್ದರು. ಆಗ ವಾಸಪ್ಪನ ಎಮ್ಮೆ ಅವರನ್ನು ಅಟ್ಟಿಸಿಕೊಂಡು ಬಂತು. ಜೋರಾಗಿ ಓಡಲು ಆಗದ ಭಟ್ಟರು, ಎದುರಿಗೆ ಕಂಡ ಮರವನ್ನು ಹತ್ತಿ ಕುಳಿತರು.  ಎಮ್ಮೆ ಮರದ ಕೆಳಗೆ ಸುತ್ತು ಹಾಕುತ್ತ, ಮೇಲೆ ನೋಡುತ್ತ ಕೂಗಲು ಪ್ರಾರಂಭಿಸಿತು. ಭಟ್ಟರು ಎಷ್ಟು ಹೊತ್ತಾದರೂ ಮರದಿಂದ ಇಳಿಯದೇ ಇದ್ದುದನ್ನು ನೋಡಿ ಎಮ್ಮೆ ಹೊರಟುಹೋಯಿತು.

ಆಗಿನ ಕಾಲದಲ್ಲಿ ವಾಟ್ಸ್ಯಾಪ್, ಫೇಸ್ಬುಕ್ ಏನೂ ಇಲ್ಲದೆಯೂ ದಿನಗಳಲ್ಲೇ ಸುದ್ದಿ ವೈರಲ್ ಅಯಿತು. ಇಷ್ಟು ಸುದ್ದಿ ಅಪ್ಪನಿಗೆ ಆಲೆಮನೆಯಲ್ಲಿ ಸಿಕ್ಕಿತ್ತು. ಅಪ್ಪ ಆಲೆಮನೆಯಿಂದ ಸರಿಯಾದ ಸಮಯಕ್ಕೇ ಹೊರಟರೂ, ಹೊಳೆಯ ಕಾಲುಸೇತುವೆಯ ಆಚೆಗೆ ಎಮ್ಮೆ ನಿಂತುಕೊಂಡಿತ್ತು. ಭಟ್ಟರಿಗಾದ ಅನುಭವದ ಸುದ್ದಿಯನ್ನು ಆಗಷ್ಟೇ ತಿಳಿದಿದ್ದ ಅಪ್ಪ ಎಮ್ಮೆಯ ಎದುರಿಗೆ ಹೋಗುವುದು ಅಪಾಯವೇ ಎಂದು ಪರಿಗಣಿಸಿ, ಒಂದು ಕಿ.ಮಿ. ದೂರ ನಡೆದು ಮುಂದಿನ ಸೇತುವೆಯಿಂದ ಹೊಳೆದಾಟಿ, ಮತ್ತೆರಡು ಕಿ.ಮಿ. ಗುಡ್ಡ ಬೆಟ್ಟ ಹತ್ತಿಳಿದು ಮನೆ ತಲುಪಿದ್ದ.

ನಂತರದ ದಿನಗಳಲ್ಲಿ ಊರಲ್ಲೆಲ್ಲಾ ಒಂದು ಬಗೆಯ ಭಯದ ವಾತಾವರಣ ನಿರ್ಮಾಣವಾಯಿತು. ನಾವು ಶಾಲೆಗೆ ಹೋಗುವಾಗ ದೂರದಲ್ಲೆಲ್ಲೋ ಎಮ್ಮೆ ಕಾಣಿಸಿಕೊಂಡರೂ ಸಾಕು, ಕಾಲಿಗೆ ಬುದ್ಧಿಹೇಳದೇ ಬೇರೆ ದಾರಿಯೇ ಇರುತ್ತಿರಲಿಲ್ಲ. ಮುದುಕರು, ಗಂಡಸರು, ಹೆಂಗಸರು ಎಲ್ಲರಿಗೂ ಓಡಲು ಕಲಿಸಿದ್ದೇ ಎಮ್ಮೆ. ಬಹುತೇಕ ಸಮಯಗಳಲ್ಲಿ ಅದು ಒಂದು ಕಡೆಗೆ ಸ್ತಬ್ಧವಾಗಿ ನಿಂತು ಕೆಂಪು ಕಣ್ಣು ಮಾಡಿಕೊಂಡು ನೋಡುತ್ತಿರುತ್ತಿತ್ತು. ಅದರ ನೋಟದಿಂದಲೇ ಅಟ್ಟಿಕೊಂಡು ಬರಲು ತಯಾರಿ ನಡೆಸಿದೆ ಎನ್ನುವ ಕಲ್ಪನೆ ಹುಟ್ಟುತ್ತಿತ್ತು. ಅದು ನಿಂತು ದೃಷ್ಟಿಯನ್ನೊಂದು ಕಡೆಗೆ ನೆಟ್ಟಿತೆಂದರೆ ಎಂತವರ ನಡಿಗೆಯೂ ಜೋರಾಗುತ್ತಿತ್ತು. ಎಮ್ಮೆಯ ನೋಟ ಎಷ್ಟು ಪ್ರಖ್ಯಾತವಾಯಿತೆಂದರೆಗುರಾಯಿಸುವುದಕ್ಕೆ ಪರ್ಯಾಯವಾಗಿವಾಸಪ್ಪನ ಎಮ್ಮೆಯಂತೆ ನೋಡುವುದುಎಂದಾಗಿಹೋಯಿತು.

ಬಹಳಷ್ಟು ಜನ ವಾಸಪ್ಪನಿಗೆ ಬೈದು, ಅದನ್ನು ಮನೆಯಲ್ಲೇ ಕಟ್ಟಿಹಾಕು ಎಂದರು. ಆದರೆ ಹಾಲು ಕರೆಯುವ ಜಾನುವಾರನ್ನು ಕಟ್ಟಿಹಾಕಿದರೆ ರುಚಿಯಾದ ಹಾಲು ಸಿಗುವುದಾದರೂ ಹೇಗೆ? ಭಟ್ಟರನ್ನು ಅಟ್ಟಿಸಿಕೊಂಡು ಹೋಗಿದ್ದೊಂದು ಬಿಟ್ಟರೆ, ಮತ್ತಾರನ್ನೂ ಅದು ಅಟ್ಟಿಸಿಕೊಂಡು ಹೋಗಿರಲಿಲ್ಲ. ಆದರೆ ಹತ್ತಿರ ಸುಳಿಯುವ ಜನರನ್ನು ನೆಟ್ಟನೋಟದಿಂದ ಬಹಳ ಹೊತ್ತು ನೋಡದೇ ಹೋಗುತ್ತಿರಲಿಲ್ಲ. ಜನರು ಹೆದರುವುದನ್ನು ನೋಡಿ ವಾಸಪ್ಪನೇ ಮುಂದೊಂದು ದಿನ ಅದನ್ನು ಹಗಲು ಹೊತ್ತಿನಲ್ಲಿ ಮೇಯಲು ಬಿಡದೇ, ಮನೆಯಂಗಳದ ತುದಿಯ ಮರಕ್ಕೆ ಕಟ್ಟಿಹಾಕಲು ಪ್ರಾರಂಭಿಸಿದ.

ನಂತರ ಜನರು ಎಮ್ಮೆಯನ್ನು ಮರೆತರು. ಅದು ಸತ್ತು ಹೋಯಿತೋ ಅಥವಾ ವಾಸಪ್ಪನೇ ಅದನ್ನು ಯಾರಿಗಾದರೂ ಮಾರಿದನೋ ಗೊತ್ತಾಗಲಿಲ್ಲ. ಅದು ತಮಗೆ ಸಂಬಂಧಿಸಿದ್ದಲ್ಲ ಎಂಬಂತೆ ಜನರು ವಿಷಯವನ್ನು ಕಡೆಗಣಿಸಿದರು.

ಈಗೆರಡು ವರ್ಷಗಳ ಹಿಂದೆ ಊರಿಗೆ ಬಾಣಂತನಕ್ಕೆಂದು ಹೋದಾಗ ಅಲ್ಲಿ ನಡೆದ ಘಟನೆಯೊಂದು ಇತಿಹಾಸ ಮರುಕಳಿಸುತ್ತದೆ ಎಂಬಂತಿತ್ತು. ನಮ್ಮ ಜೀವನದ ಬಹುತೇಕ ಘಟನೆಗಳು ಮತ್ತೆಂದೂ ಘಟಿಸುವುದಿಲ್ಲ ಎಂದು ನಾವು ನೋಯುತ್ತಿರುವಾಗ, ಅಪರೂಪಕ್ಕೊಂದು ಘಟನೆ ಮತ್ತೆ ನಡೆದು ನಮ್ಮನ್ನು ಒಳಗೊಳಗೇ ಖುಷಿಪಡಿಸುತ್ತವೆ. ನನ್ನ ಬಾಣಂತನದ ಕೆಲಸಕ್ಕೆ ಬರುತ್ತಿದ್ದ ಕಣ್ಣಮ್ಮನೇ ನನಗೆ ವರದಿಗಾರ್ತಿಯಾಗಿದ್ದಳು. ದಿನವೂ ರಾಕ್ಷಸನಂತಹ ಹಸುವೊಂದರ ಬಗ್ಗೆ ವಿಚಾರಿಸುವುದೇ ನನ್ನ ಕಸುಬಾಗಿಬಿಟ್ಟಿತ್ತು.

ಹಸು ಎಲ್ಲಿ ಹುಟ್ಟಿತೋ, ಎಲ್ಲಿ ಬೆಳೆಯಿತೋ ಯಾರಿಗೂ ಗೊತ್ತಿಲ್ಲ. ಅದು ಎಲ್ಲಿಂದ ನಮ್ಮೂರಿಗೆ ಬಂತೆನ್ನುವುದೂ ಗೊತ್ತಿಲ್ಲ. ಆದರೆ ಅದು ನಮ್ಮೂರನ್ನು ಪ್ರವೇಶಿಸಿದ ಮೇಲೆ ಅದು ಕೊಟ್ಟ ಕಾಟವನ್ನು ಕಂಡು ಚಿಂತೆಗೀಡಾಗದವರು ಯಾರೂ ಇಲ್ಲ. ಕಾಡುಮೇಡು ಸುತ್ತಿಕೊಂಡು ಒಳ್ಳೆಯ ಹಸಿರು ತಿಂದು ಬೆಳೆದಿತ್ತು. ಅದು ನಮ್ಮೂರಿಗೆ ಬಂದಾಗ ಕಡು ಬೇಸಿಗೆ; ಗುಡ್ಡಬೆಟ್ಟಗಳಲ್ಲೆಲ್ಲೂ ಹಸಿರು ಹುಲ್ಲು ಇಲ್ಲ. ಹೀಗಾಗಿ,  ಅದು ಸೀದಾ ನುಗ್ಗುತ್ತಿದ್ದುದು ಯಾರದಾದರೂ ಮನೆಯೆದುರಿನ ಹೂವಿನ ಹಿತ್ತಲಿಗೋ, ಅಡಿಕೆ ತೋಟಕ್ಕೋ, ಬಾಳೆ ತೋಟಕ್ಕೋ ಅಥವಾ ಕಾಳುತರಕಾರಿ ಬೆಳೆವ ಹೊಲಕ್ಕೋ ಆಗಿತ್ತು. ಮೊದಮೊದಲು ಅದು ಪಕ್ಕದೂರಿನಲ್ಲಿ ಯಾರೋ ಸಾಕಿದ ಹಸು ಎಂದೇ ನಮ್ಮೂರ ಜನ ತಿಳಿದಿದ್ದರು. ಆದರೆ, ಅಕ್ಕಪಕ್ಕದೂರಿನ ದನ ಕಾಯುವವರಿಂದ ಅದು ಯಾರದೋ ಮನೆಯಿಂದ ತಪ್ಪಿಸಿಕೊಂಡು ಬಂದ ಹಸುವಲ್ಲ ಎಂಬ ವಿಚಾರ ಸ್ಪಷ್ಟವಾಯಿತು. ಆದರೇನು? ಅದರ ಉಪಟಳವನ್ನು ತಾಳಲಾಗದೇ ಅದನ್ನು ಹಿಡಿದು ಕಟ್ಟಿಹಾಕಲು ಎಷ್ಟೋ ಜನ ಮಾಡಿದ ಪ್ರಯತ್ನ ವಿಫಲವಾಯಿತು. ಹತ್ತಿರ ಹೋದರೇ ರಾಕ್ಷಸನಂತಾಡುವ ಅದನ್ನು ಬೇರೆ ಊರಿಗೆ, ದೂರಕ್ಕೆ ಓಡಿಸಲು ಮಾಡಿದ ಪ್ರಯತ್ನ ಕೂಡ ಕೈಕೊಟ್ಟಿತು. ಮತ್ತೊಂದು ತಿಂಗಳಲ್ಲಿ ಅದು ಕರು ಹಾಕಿತು. ದಿನದಿಂದ ದಿನಕ್ಕೆ ಕರು ಸೊಗಸಾಗಿ ಬೆಳೆಯುತ್ತ ಹೋಯಿತು. ನಾವು ಸಾಕಿದ ಹಸುವಾದರೆ ಮೊದಲ ಹದಿನೈದು ದಿನ ಎಲ್ಲ ಹಾಲನ್ನೂ ಕರುವಿಗೇ ಬಿಟ್ಟರೂ, ನಂತರದ ದಿನಗಳಲ್ಲಿ ಕರುವಿಗೆ ಅರ್ಧ ಲೀಟರನ್ನೋ, ಒಂದು ಲೀಟರನ್ನೋ ಬಿಟ್ಟು ಉಳಿದ ಹಾಲನ್ನು ನಾವು ಕರೆದುಕೊಳ್ಳುತ್ತೇವೆ. ಆದರೆ ಹಸುವಿನ ವಿಷಯದಲ್ಲಿ ಹಾಗಾಗಲಿಲ್ಲ. ಇದ್ದಷ್ಟೂ ಹಾಲನ್ನು ಕರುವೇ ಕುಡಿದು, ಕರು ಚೆನ್ನಾಗಿ ಬೆಳವಣಿಗೆ ಹೊಂದಿತು.

ಹೊತ್ತಿಗೆ ಊರ ಜನರು ಒಂದು ಉಪಾಯವನ್ನು ಮಾಡಿದರುಕರುವನ್ನು ಹಿಡಿದು ಕಟ್ಟಿಹಾಕಿ, ಹಸುವನ್ನು ಹದ್ದುಬಸ್ತಿಗೆ ತರೋಣ ಎಂದು. ಕರುವನ್ನು ಹಿಡಿಯಲು ಹೋದವನ ಕೈಯನ್ನು ಕರು ಗಟ್ಟಿಯಾಗಿ ಕಚ್ಚಿತು. ಅಲ್ಲಿಗೆ ಹಸು ಮತ್ತು ಕರುವನ್ನು ಕಟ್ಟಿಹಾಕುವ ಪ್ರಯತ್ನ ಸ್ಥಗಿತಗೊಂಡಿತು. ಸ್ವಲ್ಪ ದಿನಗಳಲ್ಲಿಯೇ ಮಳೆಗಾಲ ಪ್ರಾರಂಭವಾಗಿ, ಎಲ್ಲೆಡೆ ಹಸಿರು ಚಿಗುರಿ, ಹಸು ತೋಟಗಳಿಗೆ ನುಗ್ಗಿ ಮೇಯುವುದು ನಿಂತಿತು. ಜನರೂ ತಮ್ಮ ತೋಟಗದ್ದೆಗಳ ಕೆಲಸದಲ್ಲಿ ಹಸುವನ್ನು ಮರೆತರು.

ಕಳೆದ ವರ್ಷದ ಬೇಸಿಗೆಯಲ್ಲಿ ಹಸು ಇನ್ಯಾವುದೋ ಊರಿನ ಅತಿಥಿಯಾಗಿತ್ತು ಎಂಬ ಸುದ್ದಿ ಸಿಕ್ಕಿತ್ತೆಂದು ಅಪ್ಪ ಹೇಳುತ್ತಿದ್ದರು.  

Facebook ಕಾಮೆಂಟ್ಸ್

ಲೇಖಕರ ಕುರಿತು

ಶ್ರೀಕಲಾ ಹೆಗಡೆ ಕಂಬ್ಳಿಸರ

ಹುಟ್ಟಿದ್ದು, ಬೆಳೆದದ್ದು ಸಿರಸಿಯ ಪುಟ್ಟ ಹಳ್ಳಿಯೊಂದರಲ್ಲಿ.
ಓದಿದ್ದು ವಾಣಿಜ್ಯಶಾಸ್ತ್ರ. ಐದು ವರ್ಷಗಳು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿದ ಅನುಭವ. ಈಗ ಗೃಹಿಣಿಯಾಗಿದ್ದು, ಬರವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!