ಕವಿತೆ

ಡಕಾಯಿತನ ಪ್ರೀತಿ

ಡಕಾಯಿತನಿಗೆ ಪ್ರೀತಿಸುವ ಹಕ್ಕಿಲ್ಲವೇ? ಪ್ರೀತಿಗೂ ವೃತ್ತಿಗೂ ಪರಸ್ಪರ ಸಂಬಂಧ ಬೇಕೆ? ಪ್ರೀತಿ ಕುರುಡಲ್ಲವೇ? ಆಂಗ್ಲಮೂಲದ ಕವಿ ಆಲ್‌ಫ್ರೆಡ್ ನೋಯ್ಸ್ ಬರೆದ ದ ಹೈವೇ ಮ್ಯಾನ್ ಒಬ್ಬ ಡಕಾಯಿತನ ಪ್ರೀತಿಯ ಕುರಿತಾಗಿ ಮಾತನಾಡುವ ಸುಂದರ ಕವನ. ಕನ್ನಡಕ್ಕೆ ಅನುವಾದಿಸಿದ್ದಾರೆ – ಸರೋಜಾ ಪ್ರಭಾಕರ್


ಭಾಗ-೧

    ಗಾಢಾಂಧಕಾರದ ನಡುವೆ ಮರಗಳ ರಾಶಿಯೊಳಗಿಂದ ಗಾಳಿಯ ರಭಸದ ಸುಯ್ಯೆನ್ನುವ ಸದ್ದು

ಕಾರ್ಮೋಡಗಳೊಳಗೆ ಇಣುಕುವ ಚಂದ್ರ ಹುಟ್ಟಿಸುವ ಅಮೂರ್ತ ಭಾವನೆಯಮಲು

ಬೆಳದಿಂಗಳಲ್ಲಿ ಕೆನ್ನೇರಳೆ ಬಣ್ಣದ ಅಲಂಕಾರಪಟ್ಟಿಯಂತೆ ಗೋಚರಿಸುವ ಆಹಾದಿಯ ಗುಂಟ

ಕುದುರೆಯೇರಿ ಸವಾರಿಮಾಡುತ್ತ ಬಂದನಾ ಡಕಾಯಿತ

ಸವಾರಿ ಮಾಡುತ್ತ ಆ ಹಳೆಯ ಮನೆಯ ಬಳಿ ಬಂದು ನಿಂತ ||೧||

ಕೋಳಿಪುಚ್ಛದ ಫ್ರೆಂಚ್ ಟೋಪಿ ಆತನ ಹಣೆಯ ಮುಚ್ಚಿತ್ತು

ಅಂಗಿಯ ಮೇಲೊಂದು ಲೇಸಿನ ಗುಚ್ಛ ಒರಟುತನಕ್ಕೊಂದು ಸಾಕ್ಷಿ

ನೆತ್ತರಬಣ್ಣದ ಮಕಮಲ್ ಕೋಟು ಕಂದುಬಣ್ಣದ ಚರ್ಮದ ಪ್ಯಾಂಟು ಮೈಯ ಮುಚ್ಚಿತ್ತು

ನೆರಿಗೆ ಕಾಣದ ಬಿಗಿ ಬಟ್ಟೆ, ತೊಡೆ ಮುಚ್ಚುವ ಬೂಟು

ತುಪಾಯಿಯ ಹಿಡಿಕೆಯಂತೆ ಹೊಳೆವ ಹಿಡಿದ ಪಿಸ್ತೂಲು

ಸಿಂಗರಗೊಂಡ ಆಕಾಶದ ಬೆಳಕಿನಲ್ಲಿ ಹೊಳೆವ

ಹಿಡಿದ ಹಿಡಗತ್ತಿ ||೨||

ಘವ್ವೆನ್ನುವ ಕತ್ತಲ ಅಂಗಳದ ಗೋಡೆಗೆ ದಡಬಡ ಬಡಿದ, ಛಾವಟಿಯಿಂದ ಬಾಗಿಲ ತಟ್ಟಿದ

ಮುಚ್ಚಿದ ಬಾಗಿಲು, ಹಾಕಿದ ಬೀಗ ಹೆಚ್ಚಿಸಿದ ತುಮುಲ

ಕಿಟಕಿಯ ಬಳಿಬಂದ, ತನಗೆ ಕಾಯುವವರಿಗೆಂಬಂತೆ ಒಂದು ಶಿಳ್ಳೆಸ್ವರದಲ್ಲಿ ಹಾಡಿ ಉತ್ತರಕ್ಕೆ ಕಾದ

ಮನೆಯೊಡೆಯನ ಕಪ್ಪುಕಣ ನ ಹುಡುಗಿ ಬೆಸ್

ಗಾಢಕೆಂಪುಗೂದಲೊಳಗೆ ತನ್ನ ಪ್ರೀತಿಯ ಗಂಟನ್ನು ಸೇರಿಸಿ ಹೆಣೆದಳು ||೩||

ಆ ಹಳೆಮನೆಯ ಅಂಗಳದ ಗಾಢಾಂಧಕಾರದಲ್ಲೇ ನಿಶ್ಚಲ ಕಿರುಬಾಗಿಲೊಂದು ಕಿರ್ರೆಂದಿತು

ಕುದುರೆಲಾಯದಾಳು ಟಿಮ್ ಆಲಿಸುತ್ತಿದ್ದ, ಬಿಳುಪು ಮುಖ ಬಿಳಿಚಿತ್ತು

ಹುಚ್ಚನಂತೆ ಗುಳಿಬಿದ್ದ ಕಣ್ಣು, ಕೊಳೆತ ಹುಲ್ಲಿನಂತಿದ್ದ ಕೂದಲಗುಚ್ಛ

ಮನೆಮಾಲೀಕನ ಮಗಳ ಪ್ರೀತಿಯಲ್ಲಿ ಹುಚ್ಚನಂತಾಗಿದ್ದ, ಕೆಂಪುತುಟಿಗಳ ಆಸೆಯಲಿ ತನ್ನೆ ಮರೆತಿದ್ದ

ಗವ್ವೆನ್ನುವ ಕತ್ತಲೆಯಲ್ಲಿ ಸುಮ್ಮನೆ ಶ್ವಾನದಂತೆ ಡಕಾಯಿತನ ಮಾತನ್ನು ಕಿವಿಗೊಟ್ಟು ಆಲಿಸುತ್ತಿದ್ದ ||೩||

ಒಂದೇ ಒಂದು ಮುತ್ತು, ಓ ನನ್ನ ಪ್ರಿಯೆ, ನನ್ನ ಬಂಧಿಸಲಲ್ಲಿ ಬಹುಮಾನ ಕಾದಿದೆ.

ಆದರೇನು, ಬಂಗಾರದೊಂದಿಗೆ ನಿನಗಾಗಿ ಬರುವೆ ಮುಂಜಾನೆಯೊಳಗೆ,

ಅವರ ಬಲವಂತ, ಕಿರುಕುಳ ಎನ್ನ ತಡೆಯಲಾರದು

ಬೆಳದಿಂಗಳಿಗೆ ಬರುವೆ, ಕಾಯಲೇಬೇಕು ನೀ ಬೆಳದಿಂಗಳಿಗೆ

ನರಕವೇ ಅಡ್ಡವಾದರೂ ಬರುವೆ ನಾ ಬೆಳದಿಂಗಳಿಗೆ ||೪||

ಕುದುರೆ ಜೀನಿನ ಮೇಲ್ನಿಂತು ತವಕಿಸಿದ ಬೆಸ್‌ಳ ಸ್ಪರ್ಶಕ್ಕೆ

ಕಿಟಕಿಯಲಿ ಬಿತ್ತು ಆಕೆಯ ನೀಳಕೂದಲ ಗಂಟು

ಹಾದುಹೋದ ಪರಿಮಳದ ಸುಗಂಧದ ಸುವಾಸನೆಗೆ ಮೊಗವೇರಿತ್ತು ಸುಡುಸುಡುಗೆಂಪು

ಬೆಳ್ದಿಂಗಳಿನಲ್ಲಿ ಹಾದುಬಂದ ಗಾಳಿಯನ್ನೇ ಮುತ್ತಿಕ್ಕಿದ

(ಬೆಳದಿಂಗಳಿನಲ್ಲಿ ಓ ಸಿಹಿಯಾದ ಕಪ್ಪು ಅಲೆಯೇ)

ಕೈಹಿಡಿದೆಳೆದಿತ್ತು ಹತ್ತಿದ ಕುದುರೆಯ ಜೀನು, ಸಾಗಿತ್ತು ವೇಗದ ಪಯಣ ಪಶ್ಚಿಮದತ್ತ ||೫||

ಭಾಗ-೨

ಮುಂಜಾನೆಯಾಯ್ತು, ಮಧ್ಯಾಹ್ನ ಕಳೆದಿತ್ತುಸೂರ್ಯ ಮುಳುಗಿದ, ಕೆಂಪು ಆಗಸದಿ ಚಂದ್ರ

ಕಾಣ ಸಿದನಾದರೂ ಬರಲಿಲ್ಲ ಡಕಾಯಿತಅಲೆಮಾರಿ ಅಲಂಕರಿಸಿಕೊಂಡ ಪಟ್ಟಿಯಂತೆ,

ಕೆನ್ನೇರಳೆ ಬಣ್ಣ ಸುತ್ತುವರಿದ ಆ ಮಾರ್ಗದ ತುಂಬ ಕೆಂಪುಕೋಟಿನ ಸೈನ್ಯದ ಪ್ರಯಾಣ ಸಾಗಿತ್ತು

ದೌಡಾಯಿಸಿತ್ತು, ಕಿಂಗ್ ಜಾರ್ಜ್‌ನ ಸೈನ್ಯಹಳೆಮನೆಯ ಅಂಗಳಕೆ ಬಂದು ನಿಂತಿತ್ತು ||೬||

ಉಸುರಲಿಲ್ಲ ಸೈನ್ಯ ಒಂದೇ ಒಂದೂ ಶಬ್ದ, ಬಿಡಲಿಲ್ಲ ಮನೆಮಾಲೀಕನ ಒಂದೂ ಹನಿ ಬೀರು

ಮನೆಮಾಲೀಕನ ಮಗಳ ಹಿಡಿದರು, ಮಂಚಕ್ಕೆ ಕಟ್ಟಿದರು,

ಮೊಳಕಾಲೂರಿದರೀರ್ವರು ಆಕೆಕುಳಿತ ಕಿಟಕಿಯ ಬಳಿ

ತಮ್ಮ ಬದಿಯಲೆ ಮಸ್ಲೆಟ್ ಇಟ್ಟುಕೊಂಡು ಕಾದರು ಬೆಸ್ ಪ್ರೀತಿ ಮಂಡಿಯೂರಿತ್ತು

ಸೈನಿಕರ ಕ್ರೂರತೆಯ ನರಕಯಾತನೆಯೆದುರು

ಅಲ್ಲಿ ಪ್ರತಿ ಕಿಟಕಿಯಲ್ಲೂ ಸಾವಿತ್ತು,

ಕಿಟಕಿಯಲೆ ಕೇಳಬಹುದಿತ್ತಾಕೆ ಪ್ರಿಯತಮನ ಖರಪುಟದ ಸದ್ದು ||೭||

ಬೆಸ್‌ಳ ಪ್ರತಿನೋಟದಲ್ಲೂ ಇತ್ತು ಸೈನ್ಯದ ಕಣ್ಣು, ಎಸೆದಿತ್ತು ಬಾಯಿ ಕೊಳೆತಹಾಸ್ಯದ ಹೊನಲು

ಮಸ್ಕಟ್ ಆಕೆಯ ಎದೆಯ ಬಳಿ ಗುರಿ ಒಡ್ಡಿತ್ತು

ಈಗ ನೋಡು ಮುದ್ದಿಸಿದರು ಆಕೆಯ ಸೌಂದರ್ಯರಾಶಿಯನ್ನು

ಪ್ರೀತಿ ಕಿವುಡಾಗಿತ್ತು ಬೆಸ್‌ಳ ಕಿವಿಯಲ್ಲಿ ಮೊರೆಯುತ್ತಿತ್ತು ಪ್ರಿಯತಮನದೊಂದೇ ವಾಕ್ಯ

ನಾ ಬರುವೆ ನರಕ ಎದುರಾದರೂ ಬೆಳದಿಂಗಳಿನಲ್ಲಿ,

ನನಗಾಗಿ ಕಾಯುತಿರು ಬರುವೆ ಬೆಳದಿಂಗಳಿಗೆ ||೮||

ಹಿಂಗಟ್ಟಿದ ಕೈ ತಿರುಗಿಸಿದಳು, ಕಟ್ಟಿದ ಕೈ ಗಟ್ಟಿ ಹಿಡಿದಿತ್ತು

ರಕ್ತದಿಂದ, ಬೆವರಿನಿಂದ ತೋಯುವವರೆಗೂ ಚಾಚಿದಳು ಕೈಬೆರಳು

ಚಾಚುತ್ತ ಹೋಯ್ತು ಕತ್ತಲಿನಲ್ಲಿ, ಎಳೆಯುತ್ತ ಸಾಗಿತು

ಗಂಟೆಗಳು ವರುಷಗಳಂತಾಯ್ತು, ನಡುರಾತ್ರಿಯ ಛಳಿ ಮೈ ಸೋಕಿತು

ಬೆರಳತುದಿ ಟ್ರಿಗರಿಗೆ ತಾಕಿತ್ತು, ಬೆಸ್ ಗುರಿ ಅಚಲವಾಗಿತ್ತು

ಬೆಸ್ ಈಗ ಎದ್ದುನಿಂತಿದ್ದಳು, ಟ್ರಿಗರ್ ಅವಳೆದೆಯ ಹಾದುಹೋಗಿತ್ತು ||೯||

ಬೆಸ್ ಸೈನಿಕರ ಸ್ವರ ಕೇಳಿಸಿಕೊಳ್ಳದೆ ನಿಶ್ಚಲಳಾಗಿದ್ದಳು ಆ ರಸ್ತೆ ನಿಶ್ಶಬ್ದವಾಗಿ ಮಲಗಿತ್ತು

ಆ ಬೆಳದಿಂಗಳಲ್ಲಿ ಮಾರ್ಗವೆಲ್ಲ ಖಾಲಿಯಾಗಿ ತೋರುತ್ತಿತ್ತು

ಬೆಸ್‌ಳ ನರನಾಡಿಗಳ ನೆತ್ತರು ಬೆಳದಿಂಗಳಲ್ಲಿ ಅವಳ ಪ್ರೀತಿಯ ಪಲ್ಲವಿಗೆ ಕಂಪಿಸುತ್ತಿತ್ತು

ಬೆಸ್ ಅವರ ಮಾತನ್ನು ಕೇಳಿಸಿಕೊಳ್ಳಲೇ ಇಲ್ಲ; ಸುಮ್ಮನೆ ನಿಶ್ಚಲಳಾಗಿದ್ದಳು. ||೧೦||

ಟ್ಲಾಟ್-ಟ್ಲಾಟ್! ಸೈನಿಕರಿಗೆ ಕೇಳಿತೆ ಈ ಸದ್ದು? ಇದು ಕುದುರೆಯ ಖರಪುಟದ ಸದ್ದು

ಟ್ಲಿಟ್-ಟ್ಲಾಟ್! ಇದು ದೂರದಿಂದ ಕೇಳುತ್ತಿದೆಯೇ? ಕೇಳಲಾರದವರೆ?

ಬೆಳದಿಂಗಳ ಅಲಂಕಾರದ ಪಟ್ಟಿಯಲ್ಲಿ, ಹುಬ್ಬಿನಂತಹ ಪರ್ವತದ ಮೇಗಡೆ

ಡಕಾಯಿತ ಬರುತ್ತಿದ್ದಾನೆ ವೇಗವಾಗಿ ಸವಾರಿ ಮಾಡಿ

ಸವಾರಿ ಮಾಡುತ್ತ ಓಡೋಡಿ ಬರುತ್ತಿದ್ದಾನೆ ತನ್ನ ಪ್ರಿಯತಮೆಗಾಗಿ ||೧೧||

ಟ್ಲಿಟ್-ಟ್ಲಾಟ್ ಆ ನಿಗೂಢ ಮೌನದಲ್ಲಿ! ರಾತ್ರಿಯ ನೀರವತೆಂiiಲ್ಲಿ ಪ್ರತಿಧ್ವನಿಸುತ್ತಿದೆ ಟ್ಲಿಟ್-ಟ್ಲಾಟ್

ಡಕಾಯಿತ ಸನ್ನಿಹಿತನಾಗುತ್ತಿದ್ದಾನೆ! ದೀಪದಂತೆ ಪ್ರಜ್ವಲಿಸಿತು ಬೆಸ್‌ಳ ಮೊಗ

ಅರೆಕ್ಷಣ ಅಗಲವಾಯ್ತು ನೇತ್ರಗಳು, ಅರೆಕಾಲ ಬೆಳದಿಂಗಳಲ್ಲಿ ಚಲಿಸಿತು ಬೆರಳು

ಕೊನೆಯ ಉಸಿರನ್ನು ಎಳೆದುಕೊಂಡಿತವಳ ಹೃದಯ

ಹೋಯ್ದಾಡಿತು ಆ ಬೆಳದಿಂಗಳಲ್ಲಿ ಬೆಸ್‌ಳ ಎದೆ

ಡಕಾಯಿತನನ್ನು ಎಚ್ಚರಿಸಿತು ಸಾವಿನ ಸೂತಕ ಎದೆಯಲ್ಲಿ ಕಂಪಿಸಿತು

ಎಲ್ಲಿಂದ ಬಂತೆಂಬುದರಿಯದ ಮನಸ್ಸು ಕಂಪಿಸಿತು ಪ್ರೀತಿಯ ಅಂತ್ಯ

ಕುದುರೆಯ ಜೀನು ಹಿಡಿದೆಳೆದಾಗ ತಿರುಗಿತ್ತು ಪಶ್ಚಿಮಕ್ಕೆ   ||೧೨||

ಮಸ್ಕಟ್‌ನತ್ತ ವಾಲಿದ ತಲೆ, ನೆತ್ತರಿನಲ್ಲಿ ತೋಯ್ದ ಬೆಸ್ ದೇಹ,

ಡಕಾಯಿತನ ಕಣ್ಣು ಕಾಣದ್ದು ಮನಸ್ಸು ಅರಿತಿತ್ತು,

ಅರಿಯುವದಾರಿಗಾಣದಂತಾಗಿತ್ತು

ಎಲ್ಲ ಅರಿತಾಗ ಮೊಗ ಬಿಳಿಚಿತ್ತು, ಮನ ಹುಚ್ಚನಂತೆ ಅಲೆದಿತ್ತು

ಬೆಸ್, ಮನೆಮಾಲೀಕನ ಮಗಳು ಬೆಸ್

ಪ್ರೀತಿಗಾಗಿ ಬೆಳದಿಂಗಳಲ್ಲಿ ಕಾಯುತ್ತ ಸಾವಪ್ಪಿದ್ದಳು ||೧೩||

ತಿರುಗಿದ ಡಕಾಯಿತ ಎಲ್ಲ ಅರಿತಿದ್ದ, ಹುಚ್ಚನಂತಾದ, ಆಗಸದ ಕಡೆ ಮೊಗ ಮಾಡಿ ಶಪಿಸಿದ

ಕುದುರೆಯೇರಿದ, ಸವಾರಿ ಮಾಡುತ್ತಿದ್ದ ಮಾರ್ಗ ಧೂಳಿನಲ್ಲಿ ತೋಯ್ದಿತು,

ಕತ್ತಿ ತನ್ನಿಂತಾನೇ ಝಳಪಿಸುತ್ತ ಹೊಳೆಯತೊಡಗಿತು ||೧೪||

ಡಕಾಯಿತನ ಕೆಂಬಣ್ಣ ನೆತ್ತರ ಓಕುಳಿ ಮಧ್ಯಾಹ್ನದ ಉರಿಬಿಸಿಲಿಗೆ ಹೊಳೆದಿತ್ತು,

ತೊಟ್ಟ ಕೋಟಿನದೀಗ ನೆತ್ತರುಬಣ್ಣ,

ಸೈನಿಕರು ಕೊಚ್ಚಿ ತಿವಿದಿದ್ದರು ನಾಯಿಯಂತೆ ಕೊಂದು ಎಸೆದಿದ್ದರು

ನೆತ್ತರ ಹೊಳೆಯಲ್ಲಿ ಮಲಗಿದ್ದಾತನ ಕುತ್ತಿಗೆಯ ಲೇಸಿನ ಗೊಂಚಲು ಅನಾಥ ಅಲಂಕಾರ ||೧೫||

ಚಳಿಗಾಲದ ನೀರವರಾತ್ರಿ, ಮರಗಿಡಗಳಲ್ಲಿ ಗಾಳಿ ಅಲುಗಾಟ

ಚಂದ್ರನ ಬೆಳಕು ಮೋಡ ಮುಟ್ಟುವ ಸಮಯ

ಬೆಳದಿಂಗಳ ಹಾದಿ ಕೆನ್ನೇರಳೆ ಬಣ್ಣದ ರಿಬ್ಬನ್ನಿನಂತೆ

ಡಕಾಯಿತ ಕುದುರೆಯೇರಿ ಬರುತ್ತಿದ್ದಾನೆ

ಸವಾರಿ ಮಾಡಿ ಬರುತ್ತಾನೆ ಆ ಹಳೆಯ ಮನೆಯ ಅಂಗಳಕ್ಕೆ ||೧೬||

ಅಂಗಳದ ಗಾಢ ಕತ್ತಲೆ, ದಡಬಡ ಬಡಿಯುತ್ತಿದ್ದಾನೆ ಗೋಡೆಯ ಮೇಲೆ, ತಟ್ಟುತ್ತಾನೆ

ಬಾಗಿಲಿನ ಮೇಲೆ ಛಾವಟಿಯಿಂದ

ಅವೆಲ್ಲವೂ ಬೀಗ ಹಾಕಿಕೊಂಡು ನಿಂತಿವೆ ||೧೭||

ಬಂದು ನಿಂತ ಕಿಟಕಿಯ ಬಳಿ, ಅಲ್ಯಾರೋ ತನಗಾಗಿ ಕಾಯುತ್ತಿರುವಂತೆ

ಶಿಳ್ಳೆ ಹಾಕುತ್ತಾನೆ, ಯಾರೋ ಬರುತ್ತಾರೆಂಬಂತೆ

ಮನೆಮಾಲೀಕನ ಕಪ್ಪುಕಣ ನ ಮಗಳು ಬೆಸ್ ಕಡುಗಪ್ಪುಗೂದಲು ಚಾಚುತ್ತಾಳೆ

ಕೆಂಪುಹುಡುಗಿ ಬೆಸ್ ಪ್ರೀತಿಗಂಟನ್ನು ಸೇರಿಸಿ ಜಡೆಹೆಣೆಯುತ್ತಾಳೆ  ||೧೮||

Facebook ಕಾಮೆಂಟ್ಸ್

ಲೇಖಕರ ಕುರಿತು

Saroja Prabhakar

‘ಉತ್ಥಾನ ‘ಪತ್ರಿಕೆಯ ಕಾರ್ಯಕರ್ತೆ. ಓದು, ಬರವಣಿಗೆ, ಸಂಗೀತ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!