Featured ಅಂಕಣ

ಸರ್ವವ್ಯಾಪಿ ಸರ್ವಸ್ಪರ್ಶಿ ಏಕದಂತನಿಗೆ ಎಲ್ಲೆಗಳೆಲ್ಲಿ?

ಆನೆಯ ಮೋರೆ, ವಕ್ರದಂತ, ನೀಳವಾಗಿ ಚಾಚಿರುವ ಸೊಂಡಿಲು, ಮೂಷಿಕದ ಮೇಲಿನ ಸವ್ವಾರಿ, ಹೊಟ್ಟೆಗೆ ಬಿಗಿದು ಕಟ್ಟಿರುವ ನಾಗರಹಾವು, ಹುಯ್ಯೋ ಅಂತ ಧಾವಿಸುವ ಜನ, ಆಗೊಮ್ಮೆ ಈಗೊಮ್ಮೆ ಸುರಿಯುವ ಜಿಟಿ ಜಿಟಿ ಮಳೆ, ಕೈ ಕಾಲಲ್ಲಿ ಮೆತ್ತುವ ಕೆಸರು, ಮಹಿಳೆಯರು, ಮಕ್ಕಳು, ಪುರುಷರು ಹೀಗೆ ತರಾವರಿ ಮಾದರಿಯಲ್ಲಿ ವಯಸ್ಸು ಮತ್ತು ಶಕ್ತಿಗೆ ಅನುಸಾರವಾಗಿ ಆಯೋಜಿಸಲ್ಪಡುವ ಸ್ಪರ್ಧೆಗಳು, ಓರಗೆಯ ಗೆಳೆಯರ ಕೈ ಜಗ್ಗಿ ಹೆಗಲ ಮೇಲೆ ಕೈ ಹಾಕಿ ಜಿಗಿದೋಡುವ ಚಿಟಿಪಿಟಿ ಮಕ್ಕಳು, ವಹ್ ಊರಿಗೆ ಗಣೇಶ ಹಬ್ಬ ಬರುವಾಗ ಬೀದಿಬೀದಿಯೂ ನವ ವಧುವಿನಂತೆ ಸಿಂಗಾರಗೊಳ್ಳುತ್ತದೆ. ಮನಸ್ಸು ಇನ್ನಿಲ್ಲದ ಮುದ ತುಂಬಿಕೊಂಡು ಹಬ್ಬವನ್ನು ಇದಿರ್ಗೊಳ್ಳುತ್ತದೆ. ಆತನೆಂದರೆ ಅಬಾಲವೃದ್ದರಾದಿಯಾಗಿ ಎಲ್ಲರಿಗೂ ವಿಚಿತ್ರವಾದ ಅಚ್ಚರಿ. ಆತ ಚಕಿನಾಗಿಸದ ಜನಮಾನಸವಿಲ್ಲ. ಆತ ವ್ಯಾಪಿಸದ ಜಗತ್ತಿಲ್ಲ. ಗಲ್ಲಿಗಲ್ಲಿಯಿಂದ ಹಿಡಿದು ರಾಜಬೀದಿಯವರೆಗೆ, ಓಣಿಗಳಿಂದ ಹಿಡಿದು ವೈಭವೋಪೇತ ಒಡ್ಡೋಲಗದವರೆಗೂ ಆತನ ಪಾರುಪತ್ಯವಿದೆ. ಆತ ಬರೇ ಭಕ್ತಿಪ್ರಣೀತ ದೇವರಲ್ಲ ಕುತೂಹಲದ ಸಾಕಾರಮೂರ್ತಿ. ವಿಸ್ಮಯಗಳ ಶರಧಿ.
ಪ್ರತೀ ಮನುಜನ ಜ್ಞಾನದ ಹಾದಿಗಳೂ ಕುತೂಹಲದೊಂದಿಗೆ ಆರಂಭಗೊಳ್ಳುತ್ತವೆ. ಯಾಕೆ? ಹೇಗೆ? ಏನು? ಎತ್ತ? ಎನ್ನಲಾರಂಭಿಸಿದಾಕ್ಷಣ ಕಲಿಕೆಯ ಪ್ರಕ್ರಿಯೆಯೇ ಆರಂಭಗೊಳ್ಳುತ್ತದೆ. “ಶ್ರೀ ಗಣೇಶಾಯ ನಮಃ” ಅಂತ ಗಣಪನ ಮುಂದೆ ಕೂತು ಬರೆಯುವ ಹೊತ್ತಿಗೆ ಗಣಪನಿಗೇಕೆ ವಕ್ರದಂತ? ಆನೆಯ ಸೊಂಡಿಲು? ಡೊಳ್ಳುಹೊಟ್ಟೆ ಅಂತ ಅಮ್ಮನ ಗೋಳು ಹೊಯ್ದುಕೊಳ್ಳುವ ಮಕ್ಕಳು ಒಂದೇ ಎರಡೇ? ಆತ ಕುತೂಹಲಗಳ ಖನಿ. ಆತನನ್ನು ಸ್ಮರಿಸಿ ಕೇಳಿದಷ್ಟೂ ಕಿವಿಗೆ ದಣಿವಿಲ್ಲ. ಕಣ್ತುಂಬಿಕೊಂಡಷ್ಟು ಕಣ್ಣಿಗೆ ಆಯಾಸಗಳಿಲ್ಲ. ಅನ್ವೇಷಣೆಯ ಮಾರ್ಗವನ್ನು ಬದುಕಿಗೆ ಹೇಳಿಕೊಡುವವನೇ ವಿಘ್ನ ನಿವಾರಕ ವಿನಾಯಕ.
ದನಗಾಹಿ ಬಾಲಕರು ಜಿಗಿದೋಡುವ ಗೋವುಗಳನ್ನು ಮೇಯಿಸುತ್ತ ಬೆಟ್ಟದ ಕಿಬ್ಬಿಗಳನ್ನು ಹಾಯುತ್ತಿದ್ದರು. ಅವರಿಗಾದರೂ ಬಾಲ್ಯದ ಬಗೆಬಗೆಯ ತುಂಟಾಟದ ವಿಪರೀತ ಹುಚ್ಚು. ತುಡುಗುದನಗಳ ಅಡ್ಡಾಡಿಸಿ ತಹಬಂದಿಗೆ ಬರುವ ಹೊತ್ತಿಗೆ ಸಾಮಾನ್ಯ ಬಾಲಕರಿಗೆ ಮೂರ್ತಿಯೊಂದು ಅಚಾನಕ್ಕಾಗಿ ದೊರೆತಿತ್ತು. ರಾಜಮನೆತನವೊಂದು ಆರಾಧಿಸುತ್ತಿದ್ದ ಮಹಾಗಣಪತಿಯನ್ನು ಬಾಲಕರು ಕಂಡು ಇನ್ನಿಲ್ಲದ ಆನಂದ ತುಂದಿಲರಾದರು. ಸುತ್ತಮುತ್ತಲೆಲ್ಲ ಅಡ್ಡಾಡಿ ಸೊಂಪಾಗಿ ಬೆಳೆದಿದ್ದ ಸೌತೆಕಾಯಿಗಳನ್ನು ಅರ್ಪಿಸಿ ಅರ್ಚಿಸಿದರು. ನಿತ್ಯವೂ ಇದು ಮುಂದುವರೆಯಿತು. ಮಕ್ಕಳ ಭಕ್ತಿಗೆ ಸಂಪ್ರೀತನಾದ ಏಕದಂತ ಬಯಲನ್ನು ಆಲಯ ಮಾಡಿಕೊಂಡು ನೆಲೆಸಿರುವ ಐತಿಹ್ಯವೊಂದು ದಕ್ಷಿಣಕನ್ನಡದ ಬೆಳ್ತಂಗಡಿ ತಾಲೂಕಿನ ಸೌತಡ್ಕ ಕ್ಷೇತ್ರದಲ್ಲಿ ದೊರಕುತ್ತದೆ. ಇನ್ನೂ ಮೂಕವಿಸ್ಮಿತವಾಗಿಸುವ ಸಂಗತಿ ಏನೆಂದರೆ ಕಾಲಕ್ರಮೇಣ ಊರಿನ ಹಿರಿಯರೆಲ್ಲ ಸೇರಿ ಭಗವಂತನಿಗೆ ಗುಡಿಕಟ್ಟಲು ಮುಂದಾದಾಗ ಭಗವಂತ ಕನಸಿನಲ್ಲಿ ಕಾಣಿಸಿಕೊಂಡು ವಿಶಾಲವಾದ ಮೈದಾನವೇ ನನ್ನ ಆಲಯ ಎಂದು ದೇಗುಲವನ್ನು ನಿರಾಕರಿಸಿದ ಪ್ರತೀತಿಯೂ ಈ ಕ್ಷೇತ್ರಕ್ಕಿದೆ. ಪಾರ್ವತೀಸುತ ಗಜಾನನ ಇಂದಿಗೂ ಬಯಲುಗಣಪನಾಗಿಯೇ ಗಾಳಿ ಮಳೆ ಚಳಿಗೆ ಮೈಯೊಡ್ಡಿ ನಿತ್ಯವೂ ಭಕ್ತರಿಂದ ಪೂಜಿಸಲ್ಪಡುತ್ತಿದ್ದಾನೆ . ಗಣಪ ಎಉಕದ ಭಕುತನಿಲ್ಲ. ಆತನಿರದ ಊರಿಲ್ಲ. ಆತ ತಲುಪದ ಜನರಿಲ್ಲ. ಅವರವರ ಶಕ್ತಿಗೆ ಅನುಸಾರವಾಗಿ ಆತ ಭಕ್ತರಾಧೀನ ಆಗಿ ಹೋಗಿದ್ದಾನೆ.
ಗಣೇಶ ಹಬ್ಬದ ಸಲುವಾಗಿ ಊರಿಗೆ ಊರೇ ಒಂದಾಗುತ್ತದೆ. ಭಕ್ತಿಯ ಮಹಾಪ್ರವಾಹದಲ್ಲಿ ಮೀಯುತ್ತದೆ. ಗಣೇಶನ ಆರಾಧನೆಗೆ ಚೌಕಟ್ಟುಗಳಿಲ್ಲ. ಆತ ಒಳಗೊಳ್ಳದ ಪ್ರಪಂಚವೇ ಇಲ್ಲ. ಮತ್ತು ಆತ ಆವರಿಸಿಕೊಳ್ಳದ ಗುಂಪುಗಳಿಲ್ಲ. ಅಗ್ರಪೂಜೆಗೆ ಪಾತ್ರನಾಗುವ ಗಣಪ ಹಿಂದೂಸ್ಥಾನದ ಹೂಂಕಾರಕ್ಕೂ ಪ್ರೇರಣೆಯನ್ನು ನೀಡಿದವ ಎನ್ನುವುದನ್ನು ಸದಾ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಆತ ಸರ್ವಸ್ಪರ್ಶಿ, ಸರ್ವವ್ಯಾಪಿ ಎಷ್ಟರಮಟ್ಟಿಗೆ ಎಂದರೆ ಆತನ ಹಬ್ಬದ ಸಲುವಾಗಿ ಇಡಿಯ ಭಾರತವೇ ಒಂದಾಗಿ ಹೆಜ್ಜೆ ದಾಖಲಿಸಲಾಂಭಿಸಿತು. ಆತನ ಹಬ್ಬದ ಸಲುವಾಗಿ ಕೂಡಿದ ಜನ ಪಾರತಂತ್ರ್ಯದ ವಿರುದ್ದವೇ ಗರ್ಜಿಸಲಾರಂಭಿಸಿದರು. ಗಣೇಶನ ಹಬ್ಬದ ಏಕತೆ ಸೂರ್ಯಮುಳುಗದ ಸಾಮ್ರಾಜ್ಯದ ಬುಡಗಳನ್ನೇ ಅಲ್ಲಾಡಿಸುವಂತೆ ಮಾಡಿಬಿಟ್ಟಿತು. ಲೋಕಮಾನ್ಯ ತಿಲಕರು ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಿ ಎಂದುದಕ್ಕೆ ಸಿಕ್ಕ ಪ್ರತಿಕ್ರಿಯೆ ಈ ದೇಶದ ಸುವರ್ಣ ಅಧ್ಯಾಯವೇ ಹೌದು. ಜನ ಮನೆಯಿಂದಷ್ಟೇ ಆಚೆ ಧುಮುಕಲಿಲ್ಲ, ಅವರೆಲ್ಲ ದಾಸ್ಯದ ಸಂಕೋಲೆಗಳನ್ನು ಕಿತ್ತೊಗೆವ ಶಪಥ ಮಾಡುತ್ತಲೇ ಗಣಪತಿಗೆ ದೀಪ ಬೆಳಗಿದರು. ಗಣಪತಿಗೆ ಬೆಳಗುವ ಆರತಿಗಳಲ್ಲಿ ರೋಷ, ಆವೇಶದ ಜ್ವಾಲೆಗಳಿದ್ದವು. ಸೂರ್ಯನೇ ಮುಳುಗುವುದಿಲ್ಲ ಎಂದು ಬೀಗುತ್ತಿದ್ದವರೆಲ್ಲ ತತ್ತರಿಸಿ ಹೋಗಿದ್ದು ಆ ಕಾಲದಲ್ಲೇ.
ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯಂದು ದೇಶ ಗಣಪತಿಯನ್ನು ಪ್ರತಿಷ್ಟಾಪಿಸಿ ಆರಾಧಿಸುತ್ತದೆ. ಆತನಿಗೆ ಪ್ರಿಯವಾದ ಮೋದಕ, ಕಡುಬುಗಳನ್ನು ಅರ್ಪಿಸಿ ಭಕ್ತಿಯಿಂದ ಭಜಿಸುತ್ತದೆ. ಗಣಪತಿಯ ಹುಟ್ಟಿನೊಂದಿಗಿನ ಪಾರ್ವತಿಯ ಕತೆಯನ್ನೂ ಎಲ್ಲರೂ ಬಲ್ಲವರೇ ಆಗಿದ್ದಾರೆ. ಮಗನನ್ನು ಪೂಜಿಸುವ ಪೂರ್ವದಲ್ಲಿ ಗೌರೀಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಗೌರೀಗಣೇಶ ಹಬ್ಬ ಜನಜನಿತವಾಗಿ ದೇಶಾದ್ಯಂತ ಆಚರಿಸಲ್ಪಡುತ್ತದೆ.
ಗಣಪತಿಯನ್ನು ಪ್ರಥಮವಾಗಿ ಪೂಜಿಸಿ ಎಲ್ಲ ಕಾರ್ಯಕ್ಕೂ ಮುಂದುವರೆಯುವ ಅನೂಚಾನ ಪದ್ದತಿ ನಮ್ಮ ಪರಂಪರೆಯದ್ದು. ಆತನ ಕುರಿತಾದ ನೂರಾರು ಕತೆ, ಉಪಕತೆಗಳಿವೆ. ಆತ ಮಣ್ಣಿನಿಂದ ಜನಿಸಿದವ, ಆತ್ಮಲಿಂಗವನ್ನು ಲಂಕೆಗೆ ಒಯ್ಯದಂತೆ, ಶಿವಲಿಂಗ ರಕ್ಕಸ ಮಹಾರಾಜನಾದ ರಾವಣನ ಅಧೀನಕ್ಕೆ ಒಳಪಡದಂತೆ ಕಾಯ್ದವನು. ವ್ಯಾಸರು ಹೇಳುವ ಮಹಾಭಾರತವನ್ನು ಬರೆದವನೂ ಮಹಾಗಣಪತಿಯೇ ಹೌದು.
ಪ್ರಪಂಚ ಸುತ್ತಿ ಬರುವ ಸ್ಪರ್ಧೆ ತನ್ನ ಮತ್ತು ಸಹೋದರ ಕಾರ್ತಿಕೇಯನ ಜೊತೆ ಉಂಟಾಗುತ್ತದೆ. ಸುಬ್ರಹ್ಮಣ್ಯನಾದರೂ ಜಯಶಾಲಿಯಾಗುವ ಉದ್ದೇಶದಿಂದ ಇನಿತೂ ತಡಮಾಡದೆ ನವಿಲನ್ನೇರಿ ಪ್ರಪಂಚ ಪರ್ಯಟನೆಗೆ ಹೊರಟುಬಿಡುತ್ತಾನೆ. ಆದರೆ ಬಾಲಗಣಪ ತನ್ನ ಮಾತಾಪಿತರಾದ ಶಿವಪಾರ್ವತಿಯನ್ನು ಸುತ್ತಿ ಬಂದು ನಿಲ್ಲುತ್ತಾನೆ. ಗಣೇಶನ ಹಬ್ಬ ನಮ್ಮಲ್ಲಿ ವಿಚಾರದ ಹರಿವನ್ನು ಹರಿತಗೊಳಿಸುತ್ತದೆ. ಕೌತುಕಗಳನ್ನು ನೂರ್ಮಡಿ ಮಾಡುವ ಪ್ರೇರಣೆಯನ್ನು ದಟ್ಟವಾಗಿ ತುಂಬುತ್ತದೆ. ಎನ್ನುವುದಕ್ಕೆ ಈ ನಿದರ್ಶನ ಸಾಕು.
ಭಾರತ ದೇಶದ ಪ್ರಸ್ತುತ ಸಾಮಾಜಿಕ ತಲ್ಲಣಗಳು, ಆಗಾಗಲೊಮ್ಮೆ ಕೇಳಿಬರುವ ಒಡಕುಗಳ ನಡುವೆ ಚೌತಿ ಬಂದಾಗಲೆಲ್ಲ ಹೊಸ ಆಸೆಗಳು ಕನಸುಗಳು ಚಿಗುರೊಡೆಯುತ್ತವೆ. ಚಪಾತಿಗಳಲ್ಲಿ ಸಂದೇಶ ಕಳಿಸುತ್ತಿದ್ದ ಕಾಲದಲ್ಲಿ, ಟೆಲಿಗ್ರಾ,ಂಗೆ ದಿನವಿಡೀ ಕಾಯುತ್ತಿದ್ದ ಕಾಲದಲ್ಲಿ, ಹತ್ತಾರು ಕಿ. ಮೀ ಪಯಣಿಸಲು ಹರಸಾಹಸ ಪಡುತ್ತಿದ್ದ ಕಾಲದಲ್ಲಿ ದೇಶ ವ್ಯಾಪಕವಾಗಿ ಗಣೇಶನ ಹಬ್ಬ ಆಚರಿಸಿ ಒಂದಾದ ಬಗೆ ಅಭೂತಪೂರ್ವವಲ್ಲದೆ ಮತ್ತೇನು? ಇಂದು ಪರರಿಸ್ಥಿತಿ ಹಾಗೆ ಇಲ್ಲವೇ ಇಲ್ಲ. ದೂರವಾಣಿ, ಸಾಮಾಜಿಕ ಜಾಲತಾಣ, ಪತ್ರಿಕೆ, ಸಮೂಹ ಮಾಧ್ಯಮಗಳೆಲ್ಲ ಎಲ್ಲೆಡೆ ಅತ್ಯಂತ ಪರಿಣಾಮಕಾರಿಯಾಗೇ ಜನಮಾನಸದಲ್ಲಿ ನೆಲೆಯೂರಿವೆ. ಜನರಿಗೆ ಸಂಪರ್ಕದ ಸಲುವಾಗಿ ಯಾವ ಕಷ್ಟವೂ ಇದ್ದಂತಿಲ್ಲ. ಆದರೂ ಭಾರತ ಏಕಮುಖವಾಗಿ, ಒಂದೇ ಭೂಮಿಕೆಯಡಿ ನಿಂತು ಯೋಚಿಸುವ ಹಳೆಯ ಲಹರಿಗಳನ್ನು ಶಿಥಿಲಗೊಳಿಸಿಕೊಂಡು ಸಾಗಿದೆ. ಜಾತೀಯತೆ, ಅಸ್ಪøಷ್ಯತೆ, ಸ್ವಜನ ಪಕ್ಷಪಾತದ ಕೂಗುಗಳು ಅನಾರೋಗ್ಯಕರ ಸನ್ನಿವೇಶ ನಿರ್ಮಿಸಿ ಸವಾಲಾಗಿ ಪರಿಣಮಿಸುತ್ತತ್ತಿವೆ.
ಗಣೇಶನ ಮೂರ್ತಿಯಲ್ಲಿ ಬದಲು ಮಾಡಬೇಕು, ರಾಸಾಯನಿಕ ಹೆಚ್ಚು ಬಳಸಬಾರದು, ಪರಿಸರ ಸ್ನೇಹಿ ಗಣಪನನ್ನು ಕೂರಿಸಬೇಕೆಂದು ಅನೇಕ ಜನ ಹೇಳುತ್ತಾರೆ. ಸೌತೇಕಾಯಿಗೆ ಒಲಿದವನು ಭಕ್ತಿಗೆ ಒಲಿಯದಿರುತ್ತಾನೆಯೇ? ಗಣಪನ ಹೆಸರಲ್ಲಿ ನಮ್ಮ ನೆಲ ಜಲವನ್ನು ಕಾಯುವ ಮುಂದಿನ ಪೀಳಿಗೆಗೂ ಹಬ್ಬವನ್ನು ಹಸ್ತಾಂತರಿಸುವ ಮಹತ್ವದ ಹೊಣೆಗಾರಿಕೆ ನಮ್ಮ ಮೇಲಿದೆ. ಅದು ಇಂದಿನ ಬಹುದೊಡ್ಡ ಅನಿವಾರ್ಯತೆಯೂ ಹೌದು. ಈ ವಾಸ್ತವಗಳನ್ನು ಅರಿತುಕೊಂಡೇ ದೇಶದ ಐಕ್ಯತೆಯೆಡೆಗೆ ಮಾರ್ಮಿಕ ಹೆಜ್ಜೆಯಿಡುವ ಶಪಥ ಕೈಗೊಳ್ಳಬೇಕಿದೆ. ಸ್ವಾತಂತ್ರ್ಯ ದೊರಕಿಸಿಕೊಟ್ಟ ಗಣಪ ಸದೃಢತೆಗೂ ಶಕ್ತಿನೀಡಲಿ ಗಣಪನ ಹಬ್ಬ ನಾಡಿನೆಲ್ಲೆಡೆ ಸಮೃದ್ದಿ, ಸುಖ, ಸಂತೋಷದ ಹೊನಲು ಹರಿಸಲಿ.

 

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Surya

ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಸುರ್ಯದವರಾದ ಶಿವಪ್ರಸಾದ್ 1990ರಲ್ಲಿ ಜನಿಸಿದರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ ನಂತರ ಇದೀಗ ಉದ್ಯೋಗ ನಿಮಿತ್ತ ಬೆಳಗಾವಿಯ ಅಥಣಿಯಲ್ಲಿ ನೆಲೆಸಿದ್ದಾರೆ. ಪ್ರಸ್ತುತ ವಿಧ್ಯಮಾನಗಳ ವಿಶ್ಲೇಷಣೆಯ ಜೊತೆಗೆ ಸೃಜನಶೀಲ ಸಾಹಿತ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕತೆ, ಕವನ, ಹಾಸ್ಯಪ್ರಬಂಧ ಲೇಖಕರ ಆಸಕ್ತಿಯ ಕ್ಷೇತ್ರಗಳು. ಚಾರಣ ಮೆಚ್ಚಿನ ಹವ್ಯಾಸಗಳಲ್ಲಿ ಒಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!