ಅಂಕಣ

ಬ್ರಿಟನ್ನಿಗರ ತಪ್ಪನ್ನೇ ಪುನರಾವರ್ತಿಸಿದರೆ ಅಮೇರಿಕನ್ನರು?!

2016 ಜೂನ್ 23, ಎಡಮಗ್ಗುಲಲ್ಲಿ ಎದ್ದ ಬ್ರಿಟನ್ ಅಂದು ಮಹತ್ತ್ವದಾದೊಂದು ಜನಾದೇಶವನ್ನು ಸಂಗ್ರಹಿಸಿತು. ಇಡೀ ವಿಶ್ವದಾದ್ಯಂತ ದಿಗಿಲು ಹುಟ್ಟಿಸಿದ ಸುದ್ದಿಯೊಂದು ತನ್ನ ತಾರ್ಕಿಕ ಕೊನೆಯನ್ನು ತಲುಪುವ ಹಂತದಲ್ಲಿತ್ತು. ಬ್ರಿಟನ್, ಯೂರೋಪಿಯನ್ ಯೂನಿಯನ್ (EU) ನಿಂದ ಹೊರಬರಬೇಕೋ ಬೇಡವೋ ಎಂಬ ವಿಷಯದ ಕುರಿತಾಗಿದ್ದ ಜನಾದೇಶದ ಆ ಫಲಿತಾಂಶ ಮಾತ್ರ ಇಡೀ ವಿಶ್ವವನ್ನಲ್ಲದೆ ಸ್ವತಃ ಬ್ರಿಟನ್ ದೇಶದ ಪ್ರಧಾನಿಯನ್ನೇ ಬೆಚ್ಚಿಬೀಳುವಂತೆ ಮಾಡಿತು. ಸುಮಾರು ಅರ್ಧಕ್ಕಿಂತ ಹೆಚ್ಚಿನ ಪ್ರಜೆಗಳು ಅಂದು ಹೊರಬರುವ (BREXIT) ನಿರ್ಧಾರಕ್ಕೆ ಹಸಿರು ನಿಶಾನೆಯನ್ನು ತೋರಿಸಿದರು. ಡೇವಿಡ್ ಕಮೆರೋನ್ ಕೂಡಲೇ ತನ್ನ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿ ಸದ್ದಿಲ್ಲದೇ ತೆರೆಮರೆಗೆ ಸರಿದ. ಆಗ ಶುರುವಾದದ್ದು ನೋಡಿ ನಿಜವಾದ ಹಗ್ಗಜಗ್ಗಾಟ. ಗುಂಡು ನಳಿಕೆಯಿಂದ ಹಾರಿದ ಮೇಲೆ ತಪ್ಪಾಯಿತೇನೋ ಎಂಬಂತೆ ಹಣೆಯನ್ನು ಚಚ್ಚಿಕೊಂಡವರ ಸಾಲಿಗೆ ಸೇರಿದರು, ಜನಾದೇಶವನ್ನು ನೀಡಿದ ಜೇಂಟಲ್ಮ್ಯಾನ್ ಗಳು. ಅದಾಗಿ ಎರಡು ವರ್ಷಗಳು ಕಳೆದಿವೆ. ಇಷ್ಟರಲ್ಲಾಗಲೇ ತನ್ನ ನಿರ್ಧಾರಕ್ಕೆ ಪೂರಕವಾಗಿ  ಗುಂಪಿನಿಂದ ಹೊರಬಂದಿರಬೇಕಿದ್ದ ಬ್ರಿಟನ್ ಇನ್ನೂ ಕೂಡ ಮೀನಾಮೇಷ ಎಣಿಸುತ್ತಲಿದೆ. ನೀರಿನ ಮೇಲಿನ ಗುಳ್ಳೆಯಂತೆ ಕ್ಷಣಮಾತ್ರದಲ್ಲಿ ಹುಬ್ಬಿಕೊಂಡ ಬ್ರಿಟನ್ನಿಗರ ಹುಮ್ಮಸ್ಸು ಇಂದು ಏನಾಗಿದೆ? ‘ಜೋಷ್ನಲ್ಲಿ ಕಳೆದುಕೊಂಡ ಹೊಷ್ಈಗ ಬಂದರೆಷ್ಟು ಹೋದರೆಷ್ಟು? ನಾನು, ನನ್ನದು ಎನುತ ಎಲ್ಲರಿಂದ ಪ್ರತ್ಯೇಕವಾಗಬಯಸಿದ ನಿರ್ಧಾರ ಅದೆಷ್ಟರ ಮಟ್ಟಿಗೆ ಸರಿಯೋ ಕಾದು ನೋಡಬೇಕು.

BREXIT ನ ಕೆಲವೇ ತಿಂಗಳ ಅವಧಿಯಲ್ಲಿ ಅಮೆರಿಕದಲ್ಲೊಂದು ನೆಲ ಕಂಪಿಸದ ಭೂಕಂಪವೊಂದು ಜರುಗಿತು! 2016 ರ ಅಧ್ಯಕ್ಷರ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಡೊನಾಲ್ಡ್ ಟ್ರಂಪ್ ಮರಳುಗಾಡಿನ ಮಾನ್ಸೂನ್ ನಂತೆ ಹುಚ್ಚು ಮತಗಳ ಹೆಚ್ಚು ಸಂಖ್ಯೆಯಲ್ಲಿ ಜಯಗಳಿಸಿದ. ಕೆಲವರಿಗಂತು ಅದು ಇಂದಿಗೂ ನಂಬಲಾರದ ವಿಷಯವೇ ಸರಿ. ರಿಯಾಲಿಟಿ ಷೋ ನಲ್ಲಿ ಡೊಂಬರಾಟ ಕುಣಿಯುವ ಕ್ಯಾರೆಕ್ಟರ್ ಒಂದರ ನಕಲೆನಿಸುವ ಈತನೂ ಒಬ್ಬ ಅಧ್ಯಕ್ಷ ಆಕಾಂಕ್ಷಿಯೇ ಎಂದು ಅಂದು ರಿಪಬ್ಲಿಕ್ ಪಕ್ಷವನ್ನು ಕೇಳಿದವರೆಷ್ಟೋ. ಲಿಂಕನ್, ರೂಸ್ವೆಲ್ಟ್, ಬುಷ್ ರಂತಹ ನಾಯಕರನ್ನು ಕೊಟ್ಟ ಈ ಪಕ್ಷಕ್ಕೆ ಇಂತಹ ಒಬ್ಬ ವ್ಯಕ್ತಿಯ ಬಲದಲ್ಲಿ ಚುನಾವಣೆಯನ್ನು ಗೆಲ್ಲುವ ದು:ಸ್ಥಿತಿ ಬರಬಾರದಿತ್ತು ಎಂದವರು ಮತ್ತೆಷ್ಟು ಮಂದಿಯೋ. ಅದೇನೇ ಇದ್ದರು ಅಂದು ಜನರು ಮಣೆಹಾಕಿದ್ದು ಔಟ್ ಆಫ್ ದ ಬಾಕ್ಸ್ಟ್ರಂಪ್ ಎಂಬ ಮುದುಕನಿಗೆಯೇ. ಅಮೇರಿಕ ಫಸ್ಟ್ಎಂಬ ಎರಡಕ್ಷರದ ಪದಗಳ ಬಲದ್ಲಲ್ಲಿಯೇ ಅಂದು ಆತ  ಚುನಾವಣೆಯನ್ನು ಗೆದ್ದ. ಅದೂ ಕೂಡ ಅಮೆರಿಕವನ್ನು ಮೊದಲುಗೊಳಿಸುವ, ಎಲ್ಲ ದೇಶಗಳಿಂದ ಪ್ರತ್ಯೇಕಿಸುವ, ನಾನು  ನಾನೆಂಬ ಮೊಂಡುತನದ ಚುನಾವಣಾ ಪ್ರಚಾರವಾಗಿದ್ದಿತು. ಜನಗಳಿಗೂ ಹಳೆಯ ರಾಗ ಮತ್ತದೇ ತಾಳವನ್ನು ಕೇಳಿ ಬೋರ್ಆಗಿತ್ತೇನೋ ಎಂಬಂತೆ ಬಹುಪಾಲು ಮಂದಿ ಹಿರಿ ಮುದುಕನೊಬ್ಬನಿಗೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಕೊಟ್ಟರು. ಆದರೆ ಅಂದು ಈತನಿಗೆ ಬಿದ್ದ ಓಟುಗಳಲ್ಲಿ ವಿಮರ್ಶಕರು ಹಾಗು ವಿಚಾರವಂತರ ಓಟುಗಳೆಷ್ಟು, ಹಿರಿಯ ನಾಗರೀಕರ ಓಟುಗಳೆಷ್ಟು, ಬಿಸಿನೆಸ್ ಮ್ಯಾನ್ಗಳ ಓಟುಗಳೆಷ್ಟು, ನೌಕರರ ಓಟುಗಳೆಷ್ಟು ಹಾಗು ಪುಂಡ ಪೋಕರಿಗಳ ಓಟುಗಳೆಷ್ಟು ಎಂಬುದನ್ನು ಪ್ರತ್ಯೇಕಿಸಿ ಎಣಿಸಿ ನೋಡಿದರೆ ಬಹುಶಃ ಅಮೇರಿಕಾದ ಭವಿಷ್ಯವನ್ನು ನಿರ್ಧರಿಸಿದವರ್ಯಾರು ಎಂಬುದು ತಿಳಿಯುತ್ತದೇನೋ!

ವಿಶ್ವದಲ್ಲೇ ಅತಿಹೆಚ್ಚಿನ ಹಣವನ್ನು (ಭಾರತದ ಐದು ಪಟ್ಟು – 140 ಲಕ್ಷ ಕೋಟಿಗಳು) ತನ್ನ ಮಿಲಿಟರಿಗಾಗಿಯೇ ಸುರಿಯುವ ಧನವಂತ ದೇಶದ ಅಧಿಕಾರದ ಚುಕ್ಕಾಣಿಯನ್ನು WWE ಬಡಿದಾಟದ  ಕಚ್ಚಾಟದಲ್ಲಿ ಹುಚ್ಚನಂತಾಗುತ್ತಿದ್ದ ವ್ಯಕಿಯೊಬ್ಬನ ಕೈಗೆ ಕೊಟ್ಟ ಅಲ್ಲಿನ ಬಹುಪಾಲು ಸತ್ಪ್ರಜೆಗಳೂ ಸಹ ಬ್ರಿಟನ್ನಿನ ಪ್ರಜೆಗಳಂತೆಯೇ ಇಂದು ಕೈ-ಕೈಯನ್ನು ಹಿಸುಕಿಕೊಳ್ಳುತ್ತಿದ್ದಾರೆ. ಮುಸ್ಲಿಂ ಜನಾಂಗ ಹಾಗೂ ಅಂತಹ ದೇಶಗಳ ವಿರುದ್ಧ ಆಕ್ರೋಶ, ನ್ಯೂಕ್ಲಿಯರ್ ಸುಸಜ್ಜಿತ ದೇಶಗಳ ಜೊತೆಗೆ ವೈಮಸಸ್ಸು, ಇಂದೂ ಮುಂದೂ ನೋಡದ ದೇಶ ದೇಶಗಳನ್ನು ಜರಿಯುವ ಬೇಕಾಬಿಟ್ಟಿ  ಟ್ವೀಟ್ ಗಳು, ಇರಾನ್ ಹಾಗು ಚೀನಾದೊಟ್ಟಿಗಿನ ಟ್ರೇಡ್ ವಾರ್, ತಟಸ್ಥ  ಭಾರತಕ್ಕೇ ಬುದ್ದಿ ಹೇಳುವಂತ ಹುಂಬತನ, ವಿಶ್ವವೇ ಸಮ್ಮತಿಸಿದ ಪ್ಯಾರಿಸ್ ಒಪ್ಪಂದದಿಂದ ಹೊರಬರುವಿಕೆ ಹಾಗು ಮಾಲಿನ್ಯವನ್ನು ಹೆಚ್ಚುಮಾಡುವ ಕಾರುಗಳ ತಯಾರಿಕೆಗೂ ಅನುಮತಿ ನೀಡುವಿಕೆ, ಆರೋಗ್ಯ ವಿಮೆಯನ್ನು ಮೊಟಕುಗೊಳಿಸಿವಿಕೆ, ವೈಟ್ ಹೌಸ್ ನ ಹಿರಿಯ ಅಧಿಕಾರಿಗಳೊಟ್ಟಿಗೆ ವೈಮನಸ್ಸು, ಅವರುಗಳ ರಾಜೀನಾಮೆ, ದೇಶದ ನ್ಯಾಯಾಧೀಶರೊಟ್ಟಿಗೆ, ಕೋರ್ಟುಗಳೊಟ್ಟಿಗೆ ವಾಗ್ವಾದ, ರಾಜಕೀಯವೇನೆಂದೇ ಅರಿಯದ ಮಗ, ಮಗಳು, ಅಳಿಯರೆಲ್ಲರಿಗೂ ವೈಟ್ ಹೌಸಿನ ಕೀಗುಚ್ಛವನ್ನು ನೀಡಿ ರಾಜಾಂತ್ರಿಕ ಧೂತರನ್ನಾಗಿ ದೇಶಾದಿಗಳಿಗೆ ಕಳುಹಿಸುವುದು… ಒಂದೇ ಎರಡೇ? ಅಧ್ಯಕ್ಷನಾದ ಕೇವಲ ಕೆಲವೇ ತಿಂಗಳುಗಲ್ಲಿ ಸಾಕು ಸಾಕಪ್ಪ ಎಂಬ ಮಟ್ಟಿಗೆ ಅಮೆರಿಕದವರನ್ನು ಆತಂಕಕ್ಕೆ ಗುರಿಮಾಡಿದನೀತ. ಉತ್ತರ ಕೊರಿಯದೊಟ್ಟಿಗೆ ನ್ಯೂಕ್ಲಿಯರ್ ವಾರ್ ಜರುಗಿ ದೇಶದ ಹವಾಯಿ ನಗರಕ್ಕೆ ಇನ್ನೇನು ಕಂಟಕ ಬಂದೆರಗಿತು ಎಂಬಂತೆ ಜನತೆಯ ಜೀವವನ್ನು ಬಾಯಿಗೆ ತಂದು ನಂತರ  ತೆಪ್ಪಗಾದ ಈತನಿಂದ  ವಿಶ್ವ ಇನ್ನು ಏನೇನನ್ನು ನೋಡುತ್ತದೆಯೋ ಸದ್ಯಕ್ಕೆ  ತಿಳಿಯದು.

It was expected!

ಅಮೇರಿಕ ಒನ್, ಅಮೇರಿಕ ಫಸ್ಟ್, ಅಮೇರಿಕ ಗ್ರೇಟ್ ಎಂಬ ಅರಚುವಿಕೆಯಲ್ಲೇ ಗೆದ್ದ ಟ್ರಂಪ್ ನಿಂದ ಇವೆಲ್ಲ ಅತಿರೇಕಗಳು ಜರುಗಲೇಬೇಕಿದ್ದವು. ಅಮೇರಿಕವೆಂದರೆ ಅದ್ಯಾವುದೋ ಅನ್ಯ ಗ್ರಹದಲ್ಲಿರುವ ದೇವತೆಗಳ ದೇಶಗಳೇನೋ ಎಂಬಂತೆ ಬಿತ್ತರಿಸಿತೊಡಗಿದನೀತ. ಇಲ್ಲಿಗೆ ಬರುವವರು, ಹೋಗುವವರು, ಇರುವವರು, ಸಾಯುವವರು ಎಲ್ಲರನ್ನು ಸಂಶಯ ದೃಷ್ಟಿಯಿಂದಲೇ ನೋಡುವ ಈತ ತನ್ನ ದೇಶವನ್ನು ಒಂದು ಕಾರ್ಪೊರೇಟ್ ಕಂಪನಿಯಂತೆ ಬದಲಾಗಿಸತೊಡಗಿದ್ದಾನೆ. ಆ ಬುಡ ಗಟ್ಟಿಯಿಲ್ಲದ ಕಂಪನಿಯಲ್ಲಿ ಜರುಗುವ ನಿರ್ಧಾರಗಳೆಲ್ಲವೂ ಕೇವಲ ಲಾಭನಷ್ಟಗಳ ಸಮೀಕರಣಗಳಷ್ಟೇ. ಮೂಲತಃ ಬಿಸಿನೆಸ್ ಪರಿವಾರದವನಾದ ಟ್ರಂಪ್ ದೇಶವನ್ನು ನಡೆಸುವುದೆಂದರೆ ಕೇವಲ ಕೊಡುವುದು ಹಾಗು ಕೊಟ್ಟ ದುಡ್ಡಿಗೆ ಲಾಭವನ್ನು ಪಡೆಯುವುದೆಂದಷ್ಟೇ ತಿಳಿದಿರುವ ಹಾಗಿದೆ. ಹಸಿರು ಮನೆ ಪರಿಣಾಮದಿಂದಹೊತ್ತಿ ಉರಿಯುವಂತಾಗಿರುವ ಧರೆಯನ್ನು ತಂಪಾಗಿಸಲು ವಿಶ್ವದ ದೇಶಗಳೆಲ್ಲವೂ ಜಾತಿ, ಪಂಥ, ದ್ವೇಷ ಅಸೂಯೆಗಳೆಲ್ಲವನ್ನೂ ಮರೆತು ಒಂದಾಗಿ ಪ್ಯಾರಿಸ್ ಒಪ್ಪಂದಎಂಬ ಮಹತ್ವದ ಒಪ್ಪಂದವನ್ನು ಮಾಡಿಕೊಂಡು ಮುನ್ನೆಡೆಯಬಯಸಿದರೆ ಟ್ರಂಪ್ ಅಧ್ಯಕ್ಷನಾದ ಕೂಡಲೇ ಚೀನಾ, ಭಾರತ ಹಾಗು ಇನ್ನಿತರ ಅಭಿವೃದ್ಧಿಶೀಲ ರಾಷ್ತ್ರಗಳ ಮಾಲಿನ್ಯ ವಿಪರೀತವಾಗಿದ್ದು ಅವುಗಳಿಗೆ ಇನ್ನೂ ಹೆಚ್ಚಿನ ನಿಯಮಗಳನ್ನು ಜಡಿಯಬೇಕು, ಅದಿಲ್ಲದೆ ಈ ಒಪ್ಪಂದ ಅಮೆರಿಕಕ್ಕೆ ಮೋಸ ಬಗೆದಂತೆ ಎಂಬ ಭಂಡ ಸಬೂಬನನ್ನು ನೀಡಿ ಒಪ್ಪಂದದಿಂದ ಹೊರಬಂದ. ಅಮೆರಿಕಕ್ಕೆ ಮೋಸಎಂಬ ಮಾತುಗಳನ್ನು ಕೇಳಿಯೇ ಶಿಳ್ಳೆ ಚಪ್ಪಾಳೆಗಳಿಂದ ಈತನ ನಿರ್ಧಾರವನ್ನು ಅಲ್ಲಿನ ಬಹುಪಾಲು ಜನತೆಯೂ ಸ್ವಾಗತಿಸಿದರು ಮತ್ತು ವಿಶ್ವದ ಯಾವ ಮಾನದಂಡಗಳಿಲ್ಲದೆಯೇ ಪರಿಸರವನ್ನು ನಾನಾಬಗೆಯಲ್ಲಿ ಮಾಲಿನ್ಯಮಾಡತೊಡಗಿದರು.

ಡೆಮೋಕ್ರೆಟ್ ಪಕ್ಷ ಹಾಗು ಹಿಂದಿನ ಅಧ್ಯಕ್ಷ ಬರಾಕ್ ಒಬಾಮನೆಂದರೆ ನಿಂತ ನೆರಳಿಗೆ ಆಗದ ಈತನಿಗೆ ಅವರ ಪ್ರತಿಯೊಂದು ನಿರ್ಧಾರಗಳನ್ನು ತುಂಡರಿಸುವುದು ಅಥವಾ ಅದರ ತದ್ವಿರುದ್ಧವಾಗಿ ಬೇರೊಂದು ತಲೆಬುಡವಿಲ್ಲದ ನಿಯಮವನ್ನು ಜಾರಿತರುವುದಷ್ಟೇ ಕಾಯಕವಾಗಿಬಿಟ್ಟಿತು. ಕೋಟ್ಯನುಕೋಟಿ ಜನರ ಅರೋಗ್ಯ ವಿಮೆ (ಒಬಾಮ ಹೆಲ್ತ್ ಕೇರ್)ಯನ್ನು ಮೊಟಕುಗೊಳಿಸಿ ಆಟಕ್ಕುಂಟು ಲೆಕ್ಕಕಿಲ್ಲದಂತಹ ಮತ್ತೊಂದು ವಿಮೆಯನ್ನು ಜಾರಿಗೊಳಿಸಿದ ನಂತರ ಏನುಮಾಡಬೇಕೆಂದು ಯೋಚಿಸುತ್ತ ಕುಳಿತ ಟ್ರಂಪ್ ಗೆ ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂತಿಷ್ಟು ಜಗಳವಾಡಬೇಕೆಂಬ ಬಯಕೆ ಹೆಚ್ಚಾಯಿತೆನಿಸುತ್ತದೆ. ಕೂಡಲೇ ತೈಲ ಸಂಪತ್ದ್ಭರಿತ ಮಧ್ಯಪ್ರಾಚ್ಯಾದ ದೇಶ ಇರಾನ್ನ ಮೇಲೆ ಮುಗಿಬಿದ್ದ ಟ್ರಂಪ್ ಪಡೆ ಇರಾನ್ ಈಗಲೂ ಕೂಡ ಅಲ್ಲೊಂದು ಇಲ್ಲೊಂದು ನ್ಯೂಕ್ಲಿಯರ್ ಮಿಸೈಲ್ ಗಳನ್ನು ಪರೀಕ್ಷಿಸುತ್ತಿದೆ ಹಾಗು ಇದು ಹಿಂದಿನ ಸರ್ಕಾರ ಮಾಡಿಕೊಂಡ ನ್ಯೂಕ್ಲಿಯರ್ ಡೀಲ್ಗೆ ವಿರುದ್ಧವಾಗಿದ್ದು ಕೂಡಲೇ ಇರಾನ್ ನ ಮೇಲೆ ಆರ್ಥಿಕ ದಿಗ್ಬಂದನವನ್ನು ಹೇರಿ ಅದನ್ನು ಎಲ್ಲರಿಂದ ಪ್ರತ್ಯೇಕಿಸಬೇಕೆಂದು ಅರಚತೊಡಗಿದ; ಅಲ್ಲದೆ ಹಾಗೆ ಮಾಡಿಯೂ ಬಿಟ್ಟ! ಸರಿ ಒಂದುಪಕ್ಷ ಇರಾನ್ ನ್ಯೂಕ್ಲಿಯರ್ ಮಿಸೈಲ್ ಗಳನ್ನು ತಯಾರುಮಾಡಿಕೊಂಡಿದೆ ಅಂದುಕೊಳ್ಳೋಣ. ಮಿಡಲ್ ಈಸ್ಟ್ ಎಂದರೆ ಇಂದು ಯುದ್ಧದ ಗೂಡಾಗಿರುವ ಪ್ರದೇಶದಲ್ಲಿ ಸ್ವಂತ ರಕ್ಷಣೆಗೆ ದೇಶವೊಂದು ಸುಸಜ್ಜಿತವಾಗುವುದರಲ್ಲಿ ತಪ್ಪೇನಿದೆ? ದೇಶ ಸುಸಜ್ಜಿತವಾಗುವುದಕ್ಕೆ ಪ್ರಸ್ತುತ ಕಾಲದಲ್ಲಿ ನೂರಾರು ಸಾವಿರಾರು ತಂತ್ರಜ್ಞಾನಗಳು, ಯುದ್ದೋಪಕರಣಗಳು ಇದ್ದರೂ ನ್ಯೂಕ್ಲಿಯರ್ ಮಿಸೈಲ್ಗಳೇ ಏಕೆ ಬೇಕೆಂಬುದು ಸಹಜವಾದ ಪ್ರೆಶ್ನೆಯೇ. ಆದರೆ ಹೀಗೆ ಪ್ರೆಶ್ನೆಯನ್ನು ಕೇಳುವ ಅಮೇರಿಕ ಅದೆಷ್ಟರ ಮಟ್ಟಿಗೆ ಸಾಚಾ? ಸಮೀಕ್ಷೆಯೊಂದರ ಪ್ರಕಾರ ಇಂದು ವಿಶ್ವದಲ್ಲೇ ಅತಿಹೆಚ್ಚಿನ ನ್ಯೂಕ್ಲಿಯರ್ ಬಾಂಬುಗಳು, ಮಿಸೈಲ್ಗಳು ಅಮೆರಿಕವೊಂದರಲ್ಲಿಯೇ ಇವೆಯಂತೆ! ವಸ್ತುಸ್ಥಿತಿ ಹೀಗಿರುವಾಗ ಇನ್ನೊಂದು ದೇಶಕ್ಕೆ ಬುದ್ಧಿಹೇಳುವ ಕಾಯಕವಾದರೂ ಅದಕ್ಕೆ ಏಕೆ? ಹೋಗಲಿ ಇದು ಆ ಎರಡು ದೇಶಗಳ ಹಣೆಬರಹ ನಾವೇಕೆ ಮೂಗು ತೂರಿಸಬೇಕೆಂದು ಸುಮ್ಮನಿಯಬಹುದು. ಆದರೆ ಈ ಯಪ್ಪಾ ಅಮೇರಿಕ ಇರಾನೊಟ್ಟಿಗೆ ಮಾತುಬಿಟ್ಟರೆ ನೀವು ಕೂಡ ಮಾತು ಬಿಡಬೇಕು ಎಂದರೆ ಕೇಳಲಾಗುತ್ತದೆಯೇ ಸ್ವಾಮಿ? ವಿಶ್ವಮಾರುಕಟ್ಟೆ ಏನು ಅಮೇರಿಕವೊಂದೇ ಬೆವರು ಸುರಿಸಿ ಬೆಳೆಸಿದ ವಲಯವೇ? ಈ ಮಾರುಕಟ್ಟೆಯಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದೆ. ಇಲ್ಲಿ ಎಲ್ಲರೂ ಒಂದೇ ಎನ್ನುವಾಗ ಟ್ರಂಪ್ ಎಂಬ ದೊಣ್ಣೆ ನಾಯಕನ ಅನುಮತಿ ಯಾರಿಗೆ ತಾನೇ ಬೇಕು?

ಇದೇ ದ್ವೇಷರಾಜಕಾರಣವನ್ನು ವಿಶ್ವಮಾರುಕಟ್ಟೆಯ ಕಿಂಗ್ ಚೀನಾದ ಮೇಲೂ ಬಳಸಿ ಅಲ್ಲಿಂದ ತರುವ ಅಲ್ಯೂಮಿನಿಯಂ ಹಾಗು ಉಕ್ಕಿನ ಮೇಲೆ ಅಗಾಧವಾಗ (35%) ಸುಂಕವನ್ನು ಜಡಿದ. ಕೂಡಲೇ ಹೆಚ್ಚೆತ್ತುಕೊಂಡ ಚೀನಾವೂ ಅಮೆರಿಕದದಿಂದ ಬರುವ ವಸ್ತುಗಳ ಮೇಲೆ ಅದೇ ಪ್ರಮಾಣದ ಸುಂಕವನ್ನು ಜಡಿಯಲು ಶುರುವಿಟ್ಟಾಗ ಅಯ್ಯಯೋ.. ಎನುತ ಒಳಗೊಳಗೇ ನಾಲಿಗೆಯನ್ನು ಕಚ್ಚಿಕೊಂಡರೂ ಹೊರಗೆಲ್ಲೂ ಅದನ್ನು ತೋರಿಸಿಕೊಳ್ಳಲಿಲ್ಲ!

ಭಾಗಶಃ ಎಲ್ಲ ದೇಶಗಳೊಟ್ಟಿಗೂ ಶಾಂತಿಯ ಸಂಬಂಧವನ್ನು ಬೆಳೆಸಿಕೊಂಡಿರುವ ಭಾರತದಂತಹ ದೇಶಕ್ಕೆ ನೀವು ರಷ್ಯಾದಿಂದ ಯುದ್ಧೋಪಕರಣವನ್ನು ಖರೀದಿಸಬಾರದು, ಇರಾನ್ ನಿಂದ ತೈಲವನ್ನು ಆಮದುಮಾಡಿಕೊಳ್ಳಬಾರದು, ಪರಮಾಣು ಪರೀಕ್ಷೆಯನ್ನು ಮಾಡಿಕೊಳ್ಳಬಾರದು ಎಂಬ ಪಾಠವನ್ನು ಹೇಳುವ  ಟ್ರಂಪ್ ಅಜ್ಜಪ್ಪನಿಗೆ ನಾವುಗಳು ಇಂದಿಗೂ ಸಹ ಅವರ ತಾಳಕ್ಕೆ ಕುಣಿಯುವ ಕೀಲುಗೊಂಬೆಗಳು ಎಂಬ ನಿಲುವೇ ತಲೆಯಲ್ಲಿದ್ದಂತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವಿಷಯ ಅದೆಷ್ಟೇ ಮಹತ್ತ್ವದಾಗಿದ್ದರೂ ಭಾರತದಂತಹ ದೇಶಗಳ ಖಡಕ್ ಉತ್ತರಗಳು ಅಮೆರಿಕಕ್ಕೆ ಮುಟ್ಟಿಕೊಳ್ಳುವಂತೆ ತಟ್ಟುತ್ತಿವೆ. ದೊಡ್ಡಣ್ಣ, ಹಿರಿಯಣ್ಣ, ದೈತ್ಯ, ನಾಯಕ ಎಂಬ ಪದಗಳಿಂದ ಕೂಡಿದ ಉಪಮೇಯಗಳ ಹೊಗಳಿಕೆಗಳ ಕಾಲ ಮುಗಿದು ಇಂದಿಗೆ ದಶಕಗಳೇ ಕಳೆದಿವೆ. 10% ಅಮೇರಿಕ ಒಂದೆಡೆಯಾದರೆ 90% ವಿಶ್ವದ ಇತರ ದೇಶಗಳು ಇನ್ನೊಂದೆಡೆ ಎಂಬುದ ಅದು ಮನವರಿಕೆ ಮಾಡಿಕೊಳ್ಳಬೇಕು.

ಟ್ರಂಪ್ ಚುನಾವಣೆಯಲ್ಲಿ ಅಬ್ಬರಿದ ಮಾತ್ರಕ್ಕೆ, ಆತ ಆ ಮಾತುಗಳಿಗೆ ಪೂರಕವಾಗಿ ನಡೆದುಕೊಳ್ಳುತ್ತಿರುವ ಮಾತ್ರಕ್ಕೆ ವಿಶ್ವವೇಕೆ ಆ ತಾಳಕ್ಕೆ ತಕ್ಕಂತೆ ಕುಣಿಯಬೇಕು? ಇಂದು ನಮಗೆ ಬೇರ್ಯಾವ ದೇಶಗಳ ಅನಿವಾರ್ಯವಿಲ್ಲವೆನ್ನುವವರು ಮೂರ್ಖರಲ್ಲದೆ ಬೇರ್ಯಾರು ಅಲ್ಲ. ಮನೆಗೆ ಬಂದುಹೋಗುವ ನೆರೆವೊರೆಯವರು ಅವರು ಕೇವಲ ನಮ್ಮ ಮನೆಯನ್ನು ಕೊಳ್ಳೆಹೊಡೆಯಲೇ ಬರುತ್ತಾರೆಂಬ ಮಾತು ಅದೆಷ್ಟರ ಮಟ್ಟಿಗೆ ಸರಿ? ಹಾಗೆನುತ ಅದೆಂದಿನವರೆಗೆ ನಾವುಗಳು ಅವರ ಮುಖವನ್ನು ನೋಡದೆ ಇರುವುದು? ಈ ಕಾರಣಕ್ಕಾಗಿಯೇ ಹಿಂದಿನ ಒಬಾಮ ಆಡಳಿತ ವಿಶ್ವದ ಪ್ರತಿಯೊಂದು ದೇಶಗಳೊಟ್ಟಿಗೂ ಒಂದಲ್ಲ ಒಂದು ಬಗೆಯಲ್ಲಿ ಉತ್ತಮ ಸಂಬಧವನ್ನು ಬೆಳೆಸಲು ಇಚ್ಛಿಸುತ್ತಿತ್ತು. ಆದರೆ ಈ ಒಂದು ಸರಳ ಫಾರ್ಮುಲಾ ಟ್ರಂಪ್ ಅಭಿಮಾನಿಗಳಿಗೆ ತಿಳಿಯಲಿಲ್ಲ. ಅಂದು ಒತ್ತಲು ಬಟನ್ ಒಂದಿದೆ ಏನುತಾ ಏಕಾಏಕಿ ಬ್ರಿಟನ್ ಅನ್ನು ಅತಂತ್ರ ಸ್ಥಿತಿಗೆ ತಂದ ಜನಗಳಂತೆಯೇ ಅಮೆರಿಕದ ಜನರೂ ಮಾಡಿದರು. ಟ್ರಂಪ್ ಅಧ್ಯಕ್ಷನಾದ ಎರಡು ವರ್ಷಗಳಲ್ಲಿಯೇ ಇಷ್ಟೆಲ್ಲಾ ಅನಾಹುತಗಳು ಜರುಗಿರುವಾಗ ಇನ್ನೊಂದೆರಡು ವರ್ಷಗಳಲ್ಲಿ ಅದ್ಯಾವ ಬಗೆಯ ಪ್ರಳಯ ಅಮೇರಿಕಾದ ನೆಲದಲ್ಲಿ ನಡೆಯುತ್ತದೆಯೋ ಕಾದು ನೋಡಬೇಕು.

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!