ಅಂಕಣ

ಗೌರಿಪೂಜೆಗೆ ಗೌರಿಹೂವಿನ ಬೆಡಗು

ಗಣೇಶಹಬ್ಬದಲ್ಲಿ ಗಣೇಶನ ಪೂಜೆಗಿಂತ ಮೊದಲು ತಾಯಿ ಗೌರಿಯ ಪೂಜೆ ಮಾಡುವುದು  ಹಬ್ಬದ ವಿಶೇಷ. ಹೆಣ್ಣುಮಕ್ಕಳು ಗೌರಿಯ ಮೂರ್ತಿಯನ್ನು ಅಲಂಕರಿಸಿ ಪೂಜಿಸುವುದು ವಾಡಿಕೆ. ನಗರದಲ್ಲಂತೂ ಪ್ರತಿಹಬ್ಬದಲ್ಲೂ ಮಾರುಕಟ್ಟೆಯು ಹೂವು ಹಣ್ಣು ಹಾಗೂ ಬಗೆಬಗೆಯ ಪೂಜಾ ಸಾಧನಗಳಿಂದ ತುಂಬಿ ಹೋಗುತ್ತದೆ. ಗಣೇಶನ ಹಬ್ಬದಲ್ಲಂತೂ ಎಲ್ಲೆಲ್ಲೂ ಫಲವಳಿಗಳ ರಾಶಿ. ಇದರ ನಡುವೆ ಮಲೆನಾಡಿಗರ ಕಣ್ಣು ಮಾತ್ರ ಗೌರಿಹೂವನ್ನು ಹುಡುಕುತ್ತದೆ.

ಮಲೆನಾಡಿನ ಕೆಲಭಾಗದಲ್ಲಿ ಗೌರಿಪೂಜೆಗೆಂದು ಗೌರಿ ಹೂವು ಇರಲೇ ಬೇಕು. ಮನೆಯ ಮಕ್ಕಳಿಗೆ ಮನೆಯಲ್ಲಿ ಬೆಳೆದ ತರಕಾರಿಗಳನ್ನು ಸಂಗ್ರಹಿಸುವ ಕಾರ್ಯವಹಿಸಲಾಗುತ್ತದೆ. ಆದರೆ ಅಡವಿಯಲ್ಲಿ ಬೆಳೆಯುವ ಗೌರಿಹೂವನ್ನು ಮಾತ್ರ ಹಿರಿಯರೇ ಸಂಗ್ರಹಿಸುವುದು. ಅದು ಎತ್ತರಕ್ಕೆ ಎಲ್ಲೆಲ್ಲೋ ಬೆಳೆಯುವ ಬಳ್ಳಿಯಗಿಡವಾಗಿದ್ದು ಕೈಗೆಟುಕದಂತಿರುತ್ತದೆ. ಪಶ್ಚಿಮಘಟ್ಟಪ್ರದೇಶದಲ್ಲಿ ಬೆಳೆಯುವ ಈ ಗಿಡದಲ್ಲಿ ಮಳೆಗಾಲದ ಅಗಸ್ಟ್-ಸಪ್ಟಂಬರ್, ಅರ್ಥಾತ್ ಶ್ರಾವಣ-ಭಾದ್ರಪದ ಮಾಸದಲ್ಲಿ ಹೂವು ಬಿಡುತ್ತದೆ.

ಗ್ಲೋರಿಯೋಸಾ ಸುಪರ್ಬಾ ಎಂದು ಕರೆಯಲಾಗುವ ಈ ಹೂವು ತಮಿಳುನಾಡಿನ ರಾಜ್ಯದ ಹೂವಾಗಿ ಪರಿಗಣಿಸಲ್ಪಟ್ಟಿದೆ. ಜಿಂಬಾಬ್ವೆಯ ರಾಷ್ಟ್ರಹೂವಾದ ಇದನ್ನು ಇಂಗ್ಲೆಂಡಿನ ರಾಣಿಗೆ 1947ರಲ್ಲಿ ಭೇಟಿ ನೀಡಿದಾಗ ಇದೇ ಆಕಾರದ ವಜ್ರಖಚಿತ ಹೂವನ್ನು ಕಾಣಕೆಯಾಗಿ ನೀಡಲಾಗಿತ್ತಂತೆ.
ಈ ಹೂವಿನಾಕಾರ, ಬೆಳೆಯುವ ರೀತಿಗನುಸಾರವಾಗಿ ಫ್ಲೇಮ್ ಲಿಲ್ಲಿ, ಕ್ಲೈಬಿಂಗ್ ಲಿಲ್ಲಿ, ಕ್ರೀಪಿಂಗ್ ಲಿಲ್ಲಿ, ಗ್ಲೋರಿ ಲಿಲ್ಲಿ, ಗ್ಲೋರಿಯೋಸಾ ಲಿಲ್ಲಿ, ಟೈಗರ್ ಕ್ಲಾ, ಫೈರ್ ಲಿಲ್ಲಿ ಮುಂತಾದ ಹೆಸರಿನಿಂದ ಕರೆಯಲಾಗುತ್ತದೆ. ಕೆಂಪು ಬಣ್ಣದ ಈ ಹೂವು ಬೆಂಕಿಯ ಕೆನ್ನಾಲಗೆಯ ರೂಪದಲ್ಲೇ ಇರುತ್ತದೆ. ಅದಕ್ಕೇ ಇನ್ನೊಂದು ಹೆಸರು ಅಗ್ನಿಶಿಖೆ ಎಂದಿದೆ.
ಚಿಟ್ಟೆಗಳು, ಸನ್ ಬಡ್ರ್ಸ ಇವುಗಳು ಈ ಗಿಡದ ಪ್ರಸರಣ ಮಾಡುತ್ತವೆ. ಇದನ್ನು ದೊಡ್ಡವರೇ ಕೊಯ್ದುತರಲು ಇನ್ನೊಂದು ಕಾರಣ ಇದರ ವಿಷ. ಇನ್ನೊಬ್ಬರ ಹತ್ಯೆಗೂ ಬಳಸಬಹುದಾದಷ್ಟು ವಿಷದ ಗಿಡವಿದು. ಆಂಟಿ-ಟಾಕ್ಸಿನ್ ಆಗಿಯೂ ಇದನ್ನು ಬಳಸಬಹುದಂತೆ. ನೈಜೀರಿಯಾದಲ್ಲಿ ಬಾಣಕ್ಕೆ ವಿಷ ಸವರುವ ರೂಢಿ ಇದೆ. ಅದಕ್ಕೆ ಈ ಗಿಡದ ವಿಷವನ್ನು ಬಳಸುವರೆಂದು ಹೇಳುತ್ತಾರೆ. ಇದರ ಬೀಜ, ಬೇರು ಎಲ್ಲವೂ ವಿಷಮಯ. ಸರ್ಪ ಕಚ್ಚಿದರೆ ಔಷಧವಾಗಿ ಬಳಸುತ್ತಾರೆ. ಇದನ್ನು ಇಂಜೆಕ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ತಲೆತಿರುಗುವುದು, ವಾಂತಿ, ಖಿನ್ನತೆ ಮೊದಲಾದ ಲಕ್ಷಣಗಳು ತಲೆದೋರುವುದಲ್ಲದೆ, ದೀರ್ಘಕಾಲದ ಪರಿಣಾಮಗಳೆಂದರೆ, ಹೆಣ್ಣುಮಕ್ಕಳಲ್ಲಿ ರಕ್ತಸ್ರಾವ, ಚರ್ಮ ಕಿತ್ತುಬರುವುದು, ಕೂದಲು ಉದುರಿ ಬೋಳಾಗುವುದು ಮೊದಲಾದವುಗಳಾಗಿವೆ. ಹಾಗೆಂದು ಈ ಹೂವು ಬಳಕೆಗೆ ಬರುವಂಥದ್ದೇ ಅಲ್ಲವೆಂದು ಹೇಳಲಾಗದು. ಅಲ್ಕಲೈಡ್ ಸಂಪದ್ಭರಿತ ಈ ಹೂವು ಹಾವು ಕಚ್ಚಿದರೆ, ಸಂತಾನಹೀನತೆ, ಆರ್ಥೈಟಿಸ್, ಕಾಲರಾ, ಕಿಡ್ನಿ, ಅಲ್ಸರ್, ಕ್ಯಾನ್ಸರ್, ಸ್ಮಾಲ್ ಪಾಕ್ಸ್, ಲೈಂಗಿಕ ರೋಗ ಇನ್ನೂ ಅನೇಕ ಕಡೆಗಳಲ್ಲಿಯೂ ಔಷಧದ ರೂಪದಲ್ಲಿ ಬಳಸಲಾಗುತ್ತದೆ. ಹಾಗಾಗಿ ಇದರ ಕೃಷಿಯನ್ನೂ ಮಾಡಲಾಗುತ್ತದೆ.
ಇಂತಹ ವಿಷತುಂಬಿದ ಹೂವನ್ನು ಧಾರ್ಮಿಕಕಾರ್ಯದಲ್ಲಿ ಬಳಸುವುದು ರೂಢಿಯಲ್ಲಿದೆ. ಇದನ್ನು ಪೂಜಿಸುವುದು ಯಾವುದರ ಸಂಕೇತವೋ, ಆದರೆ ವಿಷಕ್ಕೂ ಶಿವನಿಗೂ ಅನ್ಯೋನ್ಯ ನಂಟು. ಅದಕ್ಕೆ ಪಾರ್ವತಿಯ ಪೂಜೆಗೆ ಗೌರಿಹೂ ವಿಶೇಷವೆನಿಸಿರಬಹುದು. ಯಾಕೆಂದರೆ ಶಿವರಾತ್ರಿ ಬರುವುದು ಫೆಬ್ರುವರಿ ಆಚೀಚೆ. ಆಗ ಈ ಹೂವು ಸಿಗುವುದಿಲ್ಲ; ಹಾಗಾಗಿ ಮಳೆಗಾಲದಲ್ಲಿ ಸಿಗುವ ಈ ಹೂ ಶಿವನ ಪತ್ನಿ ಪಾರ್ವತಿಯ ಮುಡಿಗೇರಿರಬಹುದು.  

Facebook ಕಾಮೆಂಟ್ಸ್

ಲೇಖಕರ ಕುರಿತು

Saroja Prabhakar

‘ಉತ್ಥಾನ ‘ಪತ್ರಿಕೆಯ ಕಾರ್ಯಕರ್ತೆ. ಓದು, ಬರವಣಿಗೆ, ಸಂಗೀತ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!