ಮಂಗಳೂರಿಗರಿಗೆ ರಾಜಧಾನಿ ಬೆಂಗಳೂರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಹೊತ್ತಿರುವುದು ಶಿರಾಡಿ ಘಾಟ್. ಆ ಕಡೆ ಸಂಪಾಜೆ ಘಾಟ್, ಈ ಕಡೆ ಚಾರ್ಮಾಡಿ ಘಾಟ್ ರಸ್ತೆಯಿರುವಾಗಲೂ ಜನ ಪ್ರಿಫರ್ ಮಾಡುವುದು ಶಿರಾಡಿ ಘಾಟ್ ರಸ್ತೆಯನ್ನೇ. ಇದಕ್ಕೆ ಕಾರಣ, ಶಿರಾಡಿ ಘಾಟ್ ರಸ್ತೆಯಾಗಿ ಬೆಂಗಳೂರನ್ನು ಬೇಗವಾಗಿ ತಲುಪಬಹುದೆನ್ನುವುದು ಒಂದಾದರೆ ಚಾರ್ಮಾಡಿ ಘಾಟ್’ಗೆ ಹೋಲಿಸಿದರೆ ಅಪಾಯಕಾರಿ ತಿರುವುಗಳಿರುವುದು ಕಡಿಮೆ, ಅಪಘಾತಗಳಾಗಿ ಘಾಟ್ ಬ್ಲಾಕ್ ಆಗುವುದು ಕಡಿಮೆ. ಯಾವ ರೀತಿಯಲ್ಲಿ ನೋಡಿದರೂ ಬೆಂಗಳೂರಿನ ಸಂಪರ್ಕಕ್ಕೆ ಶಿರಾಡಿ ಘಾಟೇ ಅತಿ ಹೆಚ್ಚು ಸೂಕ್ತ. ಈಗ ಇಲ್ಲಿ ಅತಿ ಹೆಚ್ಚು ಮಳೆ ಬಂದು ಘಾಟ್ ಪ್ರದೇಶದಲ್ಲಿ ಗುಡ ಕುಸಿತವುಂಟಾಗಿ ಸಂಚಾರವನ್ನೇ ಬಂದ್ ಮಾಡಲಾಗಿದೆ. ಶಿರಾಡಿ ಘಾಟ್ ಕಾಂಕ್ರಿಟೀಕರಣದ ಸಂದರ್ಭದಲ್ಲಿ ಪರ್ಯಾಯವಾಗಿ ಬಳಸಲ್ಪಡುತ್ತಿದ್ದ ಸಂಪಾಜೆ ಘಾಟ್ ಹೇಳ ಹೆಸರಿಲ್ಲದಂತಾಗಿದ್ದು ಸದ್ಯಕ್ಕೆ ಈ ರಸ್ತೆಯಲ್ಲಿ ವಾಹನ ಸಂಚಾರದ ಕನಸೂ ಕಾಣುವಂತಿಲ್ಲ. ಅತ್ಯಂತ ಕಡಿದಾದ ಹೇರ್ ಪಿನ್ ತಿರುವುಗಳನ್ನು ಹೊಂದಿರುವ ಚಾರ್ಮಾಡಿ ರಸ್ತೆಯಲ್ಲಿ ಅವಾಗಾವಾಗ ಅಪಘಾತಗಳಾಗಿ ಬ್ಲಾಕ್ ಉಂಟಾದರೆ ಪ್ರಯಾಣಿಕರು ಹತ್ತಾರು ಘಂಟೆಗಳಿಗೂ ಹೆಚ್ಚು ಅನ್ನಾಹಾರವಿಲ್ಲದೆ ಪರದಾಡುವ ಸ್ಥಿತಿಯಿದೆ. ಶಿರಾಡಿ ಘಾಟ್ ಬಂದ್ ಆದಾಗ ಸಂಪಾಜೆ ರಸ್ತೆಯಾಗಿ ಹೋಗಿ ಎನ್ನುವುದೇ ಜನರಿಗೆ ದೊಡ್ದ ಶಿಕ್ಷೆ. ಈಗ ಎರಡನ್ನೂ ಬಂದ್ ಮಾಡಿ ಚಾರ್ಮಾಡಿ ಘಾಟ್’ನಲ್ಲಿ ಹೋಗಿ ಎಂದರೆ ಅದು ಕಠಿಣ ಶಿಕ್ಷೆಯಾಗಿ ಪರಿಣಮಿಸಲಿದೆ. ಮಂಗಳೂರು-ಬೆಂಗಳೂರು ರೈಲಿನಲ್ಲಾದರೂ ಹೋಗೋಣವೆಂದರೆ ರೈಲು ಹಳಿಗಳೂ ಹಾನಿಗೀಡಾಗಿ ರೈಲು ಸಂಚಾರವೂ ಅನಿರ್ಧಿಷ್ಟಾವಧಿ ಬಂದ್ ಆಗಿದೆ. ಆ ದುರ್ಗಮ ಕಾಡಿನಲ್ಲಿ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವುದು ಅತ್ಯಂತ ಸವಾಲಿನ ಕೆಲಸವಾಗಿದ್ದು, ಅದರ ಕುರಿತಾಗಿ ನಾವು ಸದ್ಯಕ್ಕೆ ಯಾವುದೇ ನಿರೀಕ್ಷೆಯಿರಿಸಿಕೊಳ್ಳದಿರುವುದೇ ಉತ್ತಮ. ಎಲ್ಲಾ ಗಾಯದ ಮೇಲೆ ಬರೆ ಎಳೆದಂತೆ ವಿಮಾನಯಾನ ಕಂಪನಿಗಳೂ ದರವನ್ನು ದುಪ್ಪಟ್ಟು ಏರಿಸಿ ಚಿತೆಯಲ್ಲಿ ಚಳಿಗಾಯಿಸಿಕೊಳ್ಳುತ್ತಿರುವುದು ದುರದೃಷ್ಟಕರ.
ಈ ನಿಟ್ಟಿನಲ್ಲಿ ಪುತ್ತೂರಿನಿಂದ ಇಂಜಿನಿಯರುಗಳ ತಂಡ ಮೊನ್ನೆ ಆಗಸ್ಟ್ 27ಕ್ಕೆ ಪರಿಶೀಲನೆಗಾಗಿ ತೆರಳಿತ್ತು. ಅಲ್ಲಿ ನಾನು ಕಂಡ ಕೆಲವು ವಿಚಾರಗಳನ್ನು ಇಲ್ಲಿ ಬರೆಯುತ್ತಿದ್ದೇನೆ.
ಆಗಿರುವುದೇನು?
ಮೊನ್ನೆಯ ಮಾರಿಮಳೆಗೆ ಘಾಟ್’ನ ರಸ್ತೆಯ ಮೇಲೆ ಗುಡ್ಡ ಕುಸಿದು ಭಾರೀ ಪ್ರಮಾಣದಲ್ಲಿ ಮಣ್ಣು ಬಂದು ರಸ್ತೆಯ ಮೇಲೆ ಬಿದ್ದಿದೆ. ಮಣ್ಣು ಮತ್ತು ನೀರಿನ ರಭಸಕ್ಕೆ ಘಾಟ್’ನ ಹನ್ನೆರಡು ಕಡೆಗಳಲ್ಲಿ ಇತ್ತೀಚೆಗಷ್ಟೇ ನಿರ್ಮಿಸಲಾಗಿದ್ದ ರಕ್ಷಣಾಗೋಡೆಗಳು ಕುಸಿದು ಬುಡಸಮೇತ ಕೆಂಪುಹೊಳೆಗೆ ಬಿದ್ದಿದೆ. ಇವುಗಳಲ್ಲಿ ಕೆಲವು ಕಡೆ ಆಳ ನೂರರಿಂದ ನೂರೈವತ್ತು ಅಡಿಯಿರುವುದರಿಂದ ಬಹಳ ಅಪಾಯಕಾರಿ ಸ್ಥಿತಿಯಿದೆ. ಸ್ವಲ್ಪ ಎಚ್ಚರತಪ್ಪಿದರೂ ಬಸ್ಸು ಅಥವಾ ಇತರ ಯಾವುದೇ ವಾಹನ ಕೆಂಪುಹೊಳೆಯಲ್ಲಿರಬಹುದು. ಈ ಹನ್ನೆರಡು ಕಡೆಗಳಲ್ಲಿ ಸಿಮೆಂಟ್ ಬ್ಲಾಕ್’ನಿಂದ ತಾತ್ಕಾಲಿಕ ರಕ್ಷಣಾಗೋಡೆಗಳ ಹಾಗೂ ಬ್ಯಾರಿಕೇಡ್’ಗಳನ್ನು ನಿರ್ಮಿಸಲಾಗಿದೆ. ಜೊತೆಗೆ ಕಾರ್ಮಿಕರನ್ನು ಕೆಳಗಿಳಿಸಿ ರಿಪೇರಿ ಕೆಲಸವನ್ನು ಶುರು ಮಾಡಲಾಗಿದೆ. ಈ ಭಾರಿ ಹೊಸ ರಸ್ತೆ ನಿರ್ಮಿಸುವಾಗ ಗುಡ್ಡೆ ಬದಿಯಲ್ಲಿ ರಸ್ತೆ ವಿಸ್ತರಿಸದೆ ಕೆಂಪುಹೊಳೆಯ ಬದಿಯಲ್ಲಿ ವಿಸ್ತರಿಸಿದ್ದೇ ಈ ಸಮಸ್ಯೆಗೆ ಮೂಲ ಕಾರಣ. ಜೊತೆಗೆ ಮಳೆನೀರು ಹಾಗು ಇಂಗಿದ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಕಲ್ಪಿಸದೇ ಇರುವುದು ಮತ್ತೊಂದು ಬಹುಮುಖ್ಯ ಕಾರಣ. ಮೊನ್ನೆ ಏನಾಗಿದ್ದೆಂದರೆ, ಮಳೆಯ ರಭಸಕ್ಕೆ ನೀರು ಹೋಗಲು ಸರಿಯಾದ ದಾರಿಯಿಲ್ಲದೆ ಸಿಕ್ಕ ಸಿಕ್ಕ ಕಡೆಗಳಲ್ಲಲ್ಲಾ ನೀರು ತನ್ನದೇ ದಾರಿ ಮಾಡಿಕೊಂಡು ಹೋಗಿದೆ. ರಸ್ತೆಯ ಮೇಲೆಯೇ ಪ್ರವಹಿಸಿ ರಕ್ಷಣಾಗೋಡೆಗೆ ಬಡಿದು, ಅದನ್ನು ಕೊಚ್ಚಿಕೊಂಡು ಹೋಗಿ ಕೆಳಭಾಗದಲ್ಲಿರುವ ಕೆಂಪುಹೊಳೆಯನ್ನು ಸೇರಿದೆ. ಇಲ್ಲೆಲ್ಲಾ ರಸ್ತೆಯ ಅಂಚಿನವರೆಗೂ ಮಣ್ಣು ಕಿತ್ತುಕೊಂಡು ಹೋಗಿದ್ದು ರಸ್ತೆಯ ಅಂಚು ಬಿಟ್ಟರೆ ಕಾಣುವುದು ದೊಡ್ಡ ಪ್ರಪಾತ ಹಾಗು ಉಕ್ಕಿ ಹರಿಯುತ್ತಿರುವು ಕೆಂಪುಹೊಳೆ ಮಾತ್ರವೇ. ಹೊಸ ಕಾಂಕ್ರೀಟ್ ರಸ್ತೆಯ ಕೆಲಸದ ಗುಣಮಟ್ಟ ಎಷ್ಟು ಉತ್ತಮವಾಗಿದೆಯೆಂದರೆ ಇಷ್ಟೆಲ್ಲಾ ಅವಾಂತರಗಳಾಗಿದ್ದರೂ ಸಹ ಒಂದು ಕಡೆಯಲ್ಲಿ ಸ್ವಲ್ಪ ಕ್ರ್ಯಾಕ್(Crack) ಬಂದಿದ್ದು ಬಿಟ್ಟರೆ ಬೇರೆಲ್ಲೂ ರಸ್ತೆಗೆ ಹಾನಿಯಾಗಿಲ್ಲ. ಹಾಗೆಯೇ, ಬದಿಯಲ್ಲಿ ನಿರ್ಮಿಸಿರುವ ರಕ್ಷಣಾಗೋಡೆಯ ಡಿಸೈನ್ ಹಾಗು ಕಾಮಗಾರಿ ಎಷ್ಟು ಕಳಪೆಯಾಗಿದೆಯೆಂದರೆ ಹೆಚ್ಚಿನ ಕಡೆಗಳಲ್ಲಿ ಅವು ಇನ್ನು ಬಹುಕಾಲ ಬಾಳುವ ಸ್ಥಿತಿಯಲ್ಲಿಲ್ಲ. ಕೆಲವು ಕಡೆ ಅವು ನೀರಿನ ಹೊಡೆತಕ್ಕೆ ತನ್ನ ದಿಕ್ಕನ್ನೇ ಬದಲಿಸಿ ನಿಂತಿದೆ. ಈಗಲೋ ಆಗಲೋ ಎನ್ನುವಂತಿದೆ. ಯಾವ ಕ್ಷಣದಲ್ಲಾದರೂ ಅದಕ್ಕೆ ಪಿಂಡ ಬಿಡುವ ಸಮಯ ಬರಬಹುದು.
ಇದು ರಸ್ತೆಯ ಕಥೆಯಾದರೆ ಗುಡ್ಡಗಳ ಕಥೆ ಬೇರೆಯೇ ಇದೆ. ಅಪಾಯವೊಡ್ಡುವುದರಲ್ಲಿ ರಕ್ಷಣಾಗೋಡೆಗಳಿಗಿಂತಲೂ ತಾನೇನೂ ಕಡಿಮೆಯಿಲ್ಲ ಅಂತ ಈ ಗುಡ್ಡಗಳು ಸಾರಿ ಹೇಳುತ್ತಿವೆ. ವಿಪರೀತ ಮಳೆಯಿಂದಾಗಿ ಗುಡ್ಡ ಕುಸಿದು ಭಾರಿ ಪ್ರಮಾಣದ ಮಣ್ಣು ರಸ್ತೆಯನ್ನಾವರಿಸಿತ್ತು. ಬಳಿಕ ಅದು ಕೆಸರು ಪಾಯಸದ ರೂಪ ಹೊಂದಿ ಕೆಂಪುಹೊಳೆಯ ಜೊತೆಗೆ ಸೇರಿತು. ಮಿಕ್ಕುಳಿದ ಮಣ್ಣನ್ನು ಈಗಾಗಲೇ ಜೆಸಿಬಿಗಳ ಮೂಲಕ ತೆರವುಗೊಳಿಸಲಾಗಿದೆ. ಆದರೆ ಈಗಿನ ಸಮಸ್ಯೆ ಅದಲ್ಲ. ಈಗಾಗಲೇ ಗುಡ್ಡ ಕುಸಿದಿರುವ ಗುಡ್ಡಗಳು ಇನ್ನಷ್ಟು ಅಪಾಯ ತಂದೊಡ್ಡುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಕೆಲವು ಕಡೆ ಗುಡ್ಡಗಳು ಅರ್ಧ ಕುಸಿದಿದ್ದು ಸಂಪೂರ್ಣ ಕುಸಿಯಲು ಮತ್ತೊಂದು ಮಳೆಗೆ ಕಾಯುತ್ತಿದೆ. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದೆನ್ನುವ ಸ್ಥಿತಿಯಿದೆ. ಆಗಸ್ಟ್ 14ರಂದು ಚಲಿಸುತ್ತಿರುವ ಬಸ್ಸಿಗೆ ಮಣ್ಣು ಕುಸಿದು ಭಾರಿ ಅನಾಹುತವೊಂದು ಕೂದಲೆಳೆಯ ಅಂತರದಿಂದು ತಪ್ಪಿ ಹೋದದ್ದು ನಿಮಗೆಲ್ಲಾ ಗೊತ್ತೇ ಇದೆ.
ಇಷ್ಟಾಗಿಯೂ ಘಾಟನ್ನು ಸಂಪೂರ್ಣ ಬಂದ್ ಮಾಡಬೇಕೆನ್ನುವ ವಾದದಲ್ಲಿ ಯಾವ ತಾಂತ್ರಿಕ ಕಾರಣವೂ ಇಲ್ಲ. ಇಂಜಿನಿಯರಿಂಗ್ ಇಷ್ಟೆಲ್ಲಾ ಅಡ್ವಾನ್ಸ್ಡ್ ಆಗಿದ್ದರೂ ಸಹ, ಆರುತಿಂಗಳು ಬಂದ್ ಮಾಡಿ ನಿರ್ಮಿಸಿದ ಹೊಸ ರಸ್ತೆಯನ್ನು, ಈಗ ಮತ್ತೆ ಬಂದ್ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಅದೂ ಅಲ್ಲದೆ ರಿಪೇರಿಯ ಹೆಸರಲ್ಲಿ ಹಣ ಲೂಟಿ ಹೊಡೆಯುವ ಸಂಚು ನಡೆಯುತ್ತಿದೆಯೆನ್ನುವ ಆರೋಪಗಳೂ ಕೇಳಿ ಬರುತ್ತಿರುವುದರಿಂದ ಸಂಪೂರ್ಣ ಬಂದ್ ಮಾಡುವುದು ಸರಿಯಲ್ಲ. ಇದೆಲ್ಲದಕ್ಕಿಂತಲೂ ಹೆಚ್ಚಾಗಿ ಮಣಿಪಾಲ, ಉಡುಪಿ,ಮಂಗಳೂರು, ಪುತ್ತೂರು, ಕಾಸರಗೋಡು, ಸುಳ್ಯ ಮುಂತಾದ ಕಡೆಗಳ ಲಕ್ಷಾಂತರ ಜನರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಮತ್ತೆ ಐದಾರು ತಿಂಗಳು ಶಿರಾಡಿ ಘಾಟನ್ನು ಮುಚ್ಚಿ ಅನನುಕೂಲವಾಗುವಂತೆ ಮಾಡುವುದು ನ್ಯಾಯವಲ್ಲ.
ಈ ನಿಟ್ಟಿನಲ್ಲಿ ಸರಕಾರ ಯಾವುದೇ ಅನಾಹುತವಾಗದಂತೆ ಎಚ್ಚರ ವಹಿಸಿ ಶಿರಾಡಿ ಘಾಟನ್ನು ಪ್ರಯಾಣಿಕರಿಗೆ ಸಂಚಾರಮುಕ್ತಗೊಳಿಸಲು ಏನು ಮಾಡಬಹುದು?
ನಮ್ಮ ತಂಡ ತೆಗೆದುಕೊಂಡ ಅತ್ಯಂತ ಪ್ರಮುಖ ನಿರ್ಧಾರ ಏನೆಂದರೆ ಗುಂಡ್ಯದಿಂದ ಶಿರಾಡಿ ಘಾಟ್ ಅಂತ್ಯದವರೆಗೂ ಕಾಂಕ್ರೀಟ್ ರಸ್ತೆಗೆ ಯಾವ ಹಾನಿಯೂ ಆಗದೇ, ಕೆಂಪುಕೊಳೆಯ ಬದಿಯಲ್ಲಿ ರಸ್ತೆಯ ಅಂಚು ಹನ್ನೆರಡು ಕಡೆಗಳಲ್ಲಿ ಕೊಚ್ಚಿ ಹೋಗಿದ್ದು ಮಾತ್ರವಾದದ್ದರಿಂದ ಈ ಹನ್ನೆರಡು ಕಡೆಗಳಲ್ಲಿ ಎಂಟೂವರೆ ಮೀಟರ್ ರಸ್ತೆಯ ಅರ್ಧ ಭಾಗ ಅಂದರೆ ಹೊಳೆ ಬದಿಯಲ್ಲಿ ನಾಲ್ಕೂಕಾಲು ಮೀಟರ್ ರಸ್ತೆಯನ್ನು ಬಿಟ್ಟು ಗುಡ್ಡೆಯ ಕಡೆಗಿರುವ ನಾಲ್ಕೂ ಕಾಲು ಮೀಟರ್ ರಸ್ತೆಯಲ್ಲಿ ಸರಕು ಸಾಗಾಟದ ವಾಹನಗಳನ್ನು ಬಿಟ್ಟು ಉಳಿದೆಲ್ಲಾ(ಬಸ್ಸುಗಳನ್ನು ಸೇರಿಸಿ) ವಾಹನಗಳನ್ನು ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಎಲ್ಲೆಲ್ಲಾ ಅಂಚು ಕುಸಿದಿದೆಯೋ ಅಲ್ಲೆಲ್ಲಾ ಸೂಕ್ತವಾಗ ಸಿಗ್ನಲ್’ಗಳನ್ನು ಹಾಕಿ, ಅಗತ್ಯ ಬ್ಯಾರಿಕೇಡ್’ಗಳನ್ನು ಅಳವಡಿಸಿ ಟ್ರಾಫಿಕ್ ನಿಯಂತ್ರಣಕ್ಕೆ ಪೋಲೀಸರನ್ನು ನಿಯೋಜಿಸಬೇಕು. ಅಲ್ಲದೆ ಎಲ್ಲೆಲ್ಲಾ ಗುಡ್ಡ ಕುಸಿಯುವ ಸಾಧತೆಯಿದೆಯೋ ಅಂತಹಾ ಪ್ರದೇಶಗಳನ್ನು ಗುರುತಿಸಿ ಮತ್ತಷ್ಟು ಕುಸಿಯದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆ ಜೊತೆಗೆ ಈಗ ಕುಸಿದಿರುವ ಕಡೆಗಳಲ್ಲಿ ಎಲ್ಲಾ ರೀತಿಯ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಂಡು ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಶಿರಾಡಿ ಘಾಟನ್ನು ಸಂಪೂರ್ಣ ಸಂಚಾರಯೋಗ್ಯ ಮಾಡಬೇಕು.
ಎರಡು ದಿನಗಳ ಹಿಂದೆ “ವಾರದೊಳಗೆ ಶಿರಾಡಿ ಘಾಟನ್ನು ಸಂಚಾರಮುಕ್ತಗೊಳಿಸಿ – ನಿತಿನ್ ಗಡ್ಕರಿ ಆದೇಶ” ಎನ್ನುವ ಸುದ್ದಿ ನಮಗೆಲ್ಲಾ ಖುಷಿ ಕೊಟ್ಟಿತ್ತು. ಇವತ್ತಿನ ಪತ್ರಿಕೆಯಲ್ಲಿ ಬಂದಿರುವ “ಆರು ತಿಂಗಳು ಸಂಚಾರಕ್ಕೆ ಅನುವು ಮಾಡಿಕೊಡಲು ಸಾಧ್ಯವೇ ಇಲ್ಲ – ಸಚಿವ ರೇವಣ್ಣ” ಎನ್ನುವ ಸುದ್ದಿ ಮತ್ತೆ ನಮ್ಮ ಖುಷಿಗೆ ತಣ್ಣೀರೆರಚಿದೆ. ಇಲ್ಲಿ ಒಂದೋ ಕೇಂದ್ರ ಸಚಿವರು ಪೂರಕ ಮಾಹಿತಿಯಿಲ್ಲದೆ ಮಾತನಾಡುತ್ತಿದ್ದಾರೆ, ಇಲ್ಲಾ ರಾಜ್ಯ ಸಚಿವರು ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ. ಒಟ್ಟಿನಲ್ಲಿ ಇಲ್ಲಿ ಪ್ರಯಾಣಿಕನೆನ್ನುವ ಕೂಸು ಇಲ್ಲಿ ಬಡವಾಗುತ್ತಿದ್ದಾನೆ. ಅನುಮಾನಗಳು ಹೆಚ್ಚುತ್ತಿವೆ. ಒಂದು ಮಾತ್ರ ಸತ್ಯ ಸತ್ಯ ಸತ್ಯ… ಸೂಕ್ತ ರಕ್ಷಣಾಕ್ರಮಗಳನ್ನು ಕೈಗೊಂಡು ವಾರದೊಳಗೆ ಶಿರಾಡಿ ಘಾಟನ್ನು ಪ್ರಯಾಣಿಕ ವಾಹನಗಳಿಗೆ ಸಂಚಾರಮುಕ್ತಗೊಳಿಸಬಹುದು, ನಮ್ಮವರು ಮನಸ್ಸು ಮಾಡಿದರೆ!