ಅಂಕಣ

ಅಜ್ಜಿಯಾಟದಿ ಬೊಮ್ಮ (ಕಣ್ಣಾಮುಚ್ಚೆ ಕಾಡೇ ಗೂಡೆ..)

ಮಂಕುತಿಮ್ಮನ ಕಗ್ಗ ಟಿಪ್ಪಣಿ ೦೮೨.

ಬನ್ನಿರಾಡುವ ಕಣ್ಣ ಮುಚ್ಚಾಲೆಯಾಟವನು |
ಎನ್ನನರಸಿರಿ ಬನ್ನಿ ಮಕ್ಕಳಿರ ಬೇಗ ||
ಬನ್ನಿರಾಟವ ಬೇಡವೆಂಬರನು ನಾಂ ಬಿಡೆನು |
ಎನ್ನುವಜ್ಜಿಯೊ ಬೊಮ್ಮ – ಮಂಕುತಿಮ್ಮ || ೦೮೨ ||

ಈ ಕಗ್ಗದ ಅದ್ಭುತ ನೋಡಿ : ಸೃಷ್ಟಿಯಾಟವನಾಡುತಿರುವ ಬೊಮ್ಮನನ್ನು ಕಣ್ಣಮುಚ್ಚಾಲೆಯಾಟ ಆಡಿಸುವ ಅಜ್ಜಿಗೆ ಸಮೀಕರಿಸಿ ಅವನ ಕಾರ್ಯವನ್ನು ಸರಳವಾಗಿ ವಿವರಿಸುವ ಯತ್ನ ಇಲ್ಲಿದೆ.

ಬಾಲ್ಯದಲ್ಲಾಡುವ ಕಣ್ಣುಮುಚ್ಚಾಲೆಯಾಟದ ಪರಿಚಯವಿರದ ಮಕ್ಕಳೆ ದುರ್ದೈವಿಗಳು. ಅದರಲ್ಲು ಸುತ್ತಮುತ್ತಲ ವಠಾರದ ಮಕ್ಕಳನೆಲ್ಲ ಸೇರಿಸಿಕೊಂಡು ಕಣ್ಣಾಮುಚ್ಚಾಲೆಯಾಟ ಆಡಿಸುತ್ತಿದ್ದ ಅಜ್ಜಿಗಳು ಈಗ ಅಪರೂಪವೆಂದೆ ಹೇಳಬೇಕು. ಒಟ್ಟಾರೆ ಆಟಕ್ಕೆ ನೆರೆದವರಲ್ಲೆ ಹಿರಿಯರೊಬ್ಬರು ಆ ಪಾತ್ರ ವಹಿಸಿದರೂ ಆಯ್ತು.  ಹೀಗೆ ನಡೆಯುವಾಟದಲ್ಲಿ ಇಷ್ಟವಿರಲಿ ಬಿಡಲಿ ಎಲ್ಲಾ ಮಕ್ಕಳು ಪಾಲ್ಗೊಳ್ಳಬೇಕು – ಹಾಗೆ ಆಡಿಸುವ ಛಾತಿ ಅಜ್ಜಿಯದಿರಬೇಕು. ಬಾರೆನೆಂದವರನ್ನು ಓಲೈಸಿ ಭಾಗವಹಿಸುವಂತೆ ಮಾಡುವ ಅಜ್ಜಿ ಕೂತಲ್ಲಿಯೆ ಎಲ್ಲವನ್ನು ಅದ್ಭುತವಾಗಿ ನಿಭಾಯಿಸುವ ಚಾಕಚಕ್ಯತೆಯವಳು.

ಬನ್ನಿರಾಡುವ ಕಣ್ಣ ಮುಚ್ಚಾಲೆಯಾಟವನು |
ಆ ಅಜ್ಜಿಯ ಹಾಗೆ ಬೊಮ್ಮನು ತನ್ನ ಸೃಷ್ಟಿಯ ಎಲ್ಲರನ್ನು  ‘ಬಾಳಿನ‘ ಕಣ್ಣಾಮುಚ್ಚಾಲೆಯಾಟವಾಡಲು ಕರೆಯುತಿದ್ದಾನಂತೆ. ಈ ಭೂಮಿಯ ಮೇಲೆ ಹುಟ್ಟಿದ ಜೀವಿಗಳಿಗೆಲ್ಲ ಇಲ್ಲಿನ ಬದುಕೆಂದರೆ ಕಣ್ಣಾಮುಚ್ಚಾಲೆ ಆಟದ ಹಾಗೆಯೆ ಅಲ್ಲವೆ? ಗೊತ್ತಿರಲಿ-ಬಿಡಲಿ, ಕಾಣಲಿ-ಕಾಣದಿರಲಿ ಈ ಬಾಳಿನಾಟದಲ್ಲೆಲ್ಲರು ಪಾಲ್ಗೊಳ್ಳಲೇಬೇಕು. ಆಟವಾಡಿಸುವ ಸೂತ್ರಧಾರಿ ಅಜ್ಜಿ – ಆ ಪರಬೊಮ್ಮನ ಕರೆಗೆ ಓಗೊಟ್ಟು ಪಾಲ್ಗೊಳ್ಳುವ ಅವಕಾಶ ಎಲ್ಲರಿಗು. ಇಲ್ಲಿಯು ಆಟದಂತೆ ಬಚ್ಚಿಟ್ಟುಕೊಂಡದ್ದೇನನ್ನೊ ಹುಡುಕಾಡಿ, ತಡಕಾಡಿ ಶೋಧಿಸಬೇಕು. ಕೆಲವೊಮ್ಮೆ ಸೋಲುತ್ತ, ಮತ್ತೆ ಕೆಲವೊಮ್ಮೆ ಗೆಲ್ಲುತ್ತ ಈಸಬೇಕು, ಇದ್ದು ಜೈಸಬೇಕು. ನಿಯಂತ್ರಿಸುವ ಸೂತ್ರಧಾರಿಣಿ ಅಜ್ಜಿಯ (ಬೊಮ್ಮನ) ನಿರ್ದೇಶನದನುಸಾರ ನಡೆದುಕೊಳ್ಳುತ್ತ ಆಟದಲ್ಲಿ ಪಾಲ್ಗೊಳ್ಳಬೇಕು. ಪ್ರತಿ ಸುತ್ತಿನಲ್ಲಿ ಮತ್ತೆ ಮತ್ತೆ ಅಜ್ಜಿಯ ಹತ್ತಿರ ಬಂದು ಮುಟ್ಟಿ ಹೋಗುವುದು ಅವನ (ಬೊಮ್ಮನ) ಮೇಲಿರುವ ನಿರಂತರ ಅವಲಂಬನೆಯನ್ನೂ ತೋರಿಸುತ್ತದೆ.

ಎನ್ನನರಸಿರಿ ಬನ್ನಿ ಮಕ್ಕಳಿರ ಬೇಗ ||
ಆದರೆ ಬೊಮ್ಮನಾಟವನ್ನು ನಮ್ಮ ಅಜ್ಜಿಯಾಟಕ್ಕೆ ಹೋಲಿಸಿದರೆ ಇಲ್ಲೊಂದು ‘ಟ್ವಿಸ್ಟ್’ ಕಾಣಿಸಿಕೊಳ್ಳುತ್ತದೆ. ನಮ್ಮಾಟದ ಅಜ್ಜಿಯನ್ನು ಹುಡುಕಿಕೊಂಡು ಅಲೆದಾಡುವ ಪ್ರಮೇಯವಿರುವುದಿಲ್ಲ. ಅವಳಿರುವ ಕಡೆ ಗುಂಪಾದರೆ ಸಾಕು.  ಆದರೆ ಈ ಬಾಳಿನ ಕಣ್ಣಮುಚ್ಚಾಲೆ ಆಟದಲ್ಲಿ ಬೊಮ್ಮನೆನ್ನುವ ಅಜ್ಜಿ ಹಾಗೆಲ್ಲ ಬೇಕೆಂದ ಕಡೆ ಕೈಗೆ ಸಿಗುವುದಿಲ್ಲವಂತೆ ! ಬದಲಿಗೆ, ಆಟಕ್ಕೆ ಬನ್ನಿರೆಂದು ಕರೆಕೊಟ್ಟ ಅಜ್ಜಿ ಅವನಾದರು, ಅಜ್ಜಿಯನ್ನು ಹುಡುಕುವ ಕೆಲಸವನ್ನು ನಾವೆ ಮಾಡಿಕೊಳ್ಳಬೇಕು! ಅರ್ಥಾತ್ ಸರಿಯಾಗಿ ಬಾಳಿನಾಟ ಆಡುವ ಆಸೆಯಿದ್ದವರು ಬೊಮ್ಮನೆನ್ನುವ ಅಜ್ಜಿಯನ್ನರಸಿಕೊಂಡು ಹೋಗಬೇಕಂತೆ – ಒಂದು ರೀತಿ ಸತ್ಯಾನ್ವೇಷಣೆಯಲ್ಲಿ. ಅವನನ್ನು ಹುಡುಕಿದರೆ ಮಾತ್ರ ಅವನ ಸೂತ್ರಧಾರತ್ವದಡಿಯಲ್ಲಿ ನೆಮ್ಮದಿಯ ಕಣ್ಣುಮುಚ್ಚಾಲೆಯಾಟ ಆಡಬಹುದು. ಹೀಗಾಗಿ ಎಷ್ಟು ಬೇಗ ಅವನನ್ನು (ಜತೆಗೆ ತನ್ಮೂಲಕ ಬದುಕುವ ದಾರಿಯನ್ನು) ಕಂಡುಕೊಳ್ಳುತ್ತೇವೊ ಅಷ್ಟೂ ಒಳ್ಳೆಯದು. ಇಲ್ಲದಿದ್ದರೆ ಬರಿಯ ಹಾದಿಯ (ಬೊಮ್ಮನ) ಹುಡುಕಾಟದಲ್ಲೆ ಅರ್ಧ ಜೀವನ ಕಳೆದುಹೋಗಿರುತ್ತದೆ – ಪರಿಪೂರ್ಣ ಬಾಳುವೆಯ ಅವಕಾಶವೆ ಇಲ್ಲದ ಹಾಗೆ.

ಬನ್ನಿರಾಟವ ಬೇಡವೆಂಬರನು ನಾಂ ಬಿಡೆನು |
ಎನ್ನುವಜ್ಜಿಯೊ ಬೊಮ್ಮ – ಮಂಕುತಿಮ್ಮ ||
ಅಂತೂ, ಒಮ್ಮೆ ಅವನನ್ನು (ಸರಿಯಾದ ಹಾದಿಯನ್ನು) ಹುಡುಕಿಕೊಂಡರಾಯ್ತು – ಮಿಕ್ಕಿದ್ದೆಲ್ಲ ಅವನ ನಿರ್ದೇಶನದಂತೆ ನಡೆದುಕೊಂಡು ಹೋಗುತ್ತದೆ. ಆಗ ಆ ಹಾದಿಯಲ್ಲಿ ನಡೆದು ಬಳಲಿ ಕಂಗೆಟ್ಟ ಹೊತ್ತಲೂ, ಬಾಳಿನಾಟ ಸಾಕಾಯ್ತೆಂದವರನ್ನೂ ಬಿಡದೆ ಆಟ ಆಡಿಸುತ್ತಾನಂತೆ ಬೊಮ್ಮ – ಎಲ್ಲರು ಅವರವರ ಪಾತ್ರ ನಿಭಾಯಿಸುವಂತೆ ಮಾಡುತ್ತ. ಹೀಗೆ ಒಮ್ಮೆ ಬಾಳೆಂಬ ಕಣ್ಣುಮುಚ್ಚಾಲೆ ಆಟಕ್ಕೆ ಬಂದ ಮೇಲೆ ಸೋಲೊ, ಗೆಲುವೊ ಲೆಕ್ಕಿಸದೆ ಕರ್ಮಸಿದ್ಧಾಂತಕ್ಕೆ ಬದ್ಧರಾಗಿ ಆಡಿಕೊಂಡು ಹೋಗುವಂತೆ ಮಾಡುತ್ತಾನೆ ಬೊಮ್ಮ. ಆಸಕ್ತಿಯಿಂದಾದರು ಆಡಲಿ, ನಿರಾಸಕ್ತಿಯಿಂದಾದರು ಆಡಲಿ – ಆಟ ಮಾತ್ರ ಆಡಲೇಬೇಕು : ಯಾರನ್ನೂ ಬಿಡದೆ ಎಲ್ಲರನ್ನು ಆ ಸೂತ್ರದ ಹಾಗೆ ಆಡಿಸುವ ಅಜ್ಜಿ ಪರಬೊಮ್ಮ ಎನ್ನುತ್ತಾನೆ ಮಂಕುತಿಮ್ಮ.

ಕಣ್ಣಿಗೆಟುಕುವ ಅರ್ಥದ ಹೊರತಾಗಿ ಸ್ವಲ್ಪ ಆಳಕ್ಕೆ ಹೊಕ್ಕು ನೋಡಿದರೆ ಇನ್ನೂ ಮಿಗಿಲಾದ ಅರ್ಥಗಳು ಕಾಣಿಸಿಕೊಳ್ಳುತ್ತವೆ ಈ ಕಗ್ಗದಲ್ಲಿ. ದೈವವನ್ನು ಹುಡುಕುವಾಟವೆ ಕಣ್ಣಾಮುಚ್ಚಾಲೆ ಆಟವಿದ್ದ ಹಾಗೆ. ಅದು ಇದೆಯೆನ್ನುವ ಆಸ್ತಿಕ ನಂಬಿಕೆ ಒಂದೆಡೆ; ಅವರು ನಂಬಿಕೆಯೆನ್ನುವ ಅಸ್ತ್ರದಲ್ಲೆ ಅವನ ಹುಡುಕಾಟಕ್ಕೆ ಹೊರಡುತ್ತಾರೆ. ಇಲ್ಲವೆನ್ನುವ ನಾಸ್ತಿಕತೆ ಇನ್ನೊಂದೆಡೆ; ಅವರದೊ ಇಲ್ಲವೆನ್ನುವ ವಾದದಲ್ಲೆ ದೈವದ ಅಸ್ತಿತ್ವವನ್ನು ಜಪಿಸುವ ಬಾಧ್ಯತೆ. ಹೀಗೆ ಎಲ್ಲರನ್ನು ತನ್ನಾಟದಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಾನಂತೆ ಬೊಮ್ಮ. ಅದರನುಸಾರವೆ ಎಲ್ಲರೂ ಬಾಳಿನಾಟ ಆಡದೆ ವಿಧಿಯಿಲ್ಲ.

ಬಾಲಂಗೋಚಿ: ಅಂತೆಯೆ ‘ಕಣ್ಣಾಮುಚ್ಚೆ ಕಾಡೆ ಗೂಡೆ’ ಸಾಲುಗಳಲ್ಲೆ ವಿಶಿಷ್ಟಾರ್ಥವಿದೆ. ಕಣ್ಣಮುಚ್ಚೆದಾಗ (ಮರಣ ಸಂಭವಿಸಿದಾಗ) ‘ಕಾಡೇನು, ಗೂಡೇನು?’ ಎಲ್ಲವೂ ಒಂದೆ. ಉದ್ದಿನ ಮೂಟೆ ಉರುಳೇಹೋಯ್ತು  (ಉದ್ದಿನ ಮೂಟೆಯಂತೆ ಗಟ್ಟಿಮುಟ್ಟಾಗಿದ್ದ ದೇಹವೂ ದುರ್ಬಲವಾಗಿ ಸಾವಿಗೆ ಶರಣಾಗಬೇಕಾಯ್ತು). ನಮ್ಮಯ ಹಕ್ಕಿ ಬಿಟ್ಟೆಬಿಟ್ಟೆ (ಭೂಮಿಯೆಂಬ ನಮ್ಮ ಲೋಕದಲ್ಲಿ ದೇಹಕ್ಕಂಟಿಕೊಂಡಿದ್ದ ಆತ್ಮದ ಹಕ್ಕಿಯನ್ನು ಇಲ್ಲಿಂದ ಬಿಟ್ಟುಕೊಟ್ಟಿದ್ದಾಯ್ತು). ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ ( ಇನ್ನು ಆ ಹಕ್ಕಿಯ ಮೇಲಿನ ಹಕ್ಕು ಇಹದ್ದಲ್ಲ, ಪರದ್ದು – ನಿಮ್ಮ ಹಕ್ಕಿಯನ್ನು ನೀವು ಹಿಡಿದುಕೊಳ್ಳಿ). ಒಂದು ಸಾವಿನ ಆಧ್ಯಾತ್ಮಿಕ ಅಂತರಾರ್ಥವನ್ನು ಇದಕ್ಕಿಂತ ಸರಳವಾಗಿ , ಅದೂ ಸರಳಾಟವೊಂದರ ರೂಪದಲ್ಲಿ ಹೇಳಲು ಸಾಧ್ಯವೇ ಇಲ್ಲವೇನೊ?

ಈ ಕಗ್ಗದಲ್ಲಿ ಕಣ್ಣುಮುಚ್ಚಾಲೆಯಾಟವನ್ನು ಈ ಹಿನ್ನಲೆಯಲ್ಲಿ ನೋಡಿದಾಗ –  ಹುಟ್ಟಿದ ತರುವಾಯ ಸಾಯಲೇಬೇಕಾದ ಅನಿವಾರ್ಯತೆಯಿರುವ ನಾವು ಅದರ ಪಾರಮಾರ್ಥಿಕ ಸಾಧನೆಗಾಗಿ ಹುಡುಕಾಟ ನಡೆಸಬೇಕು. ಹುಟ್ಟು ಸಾವಿನ ನಡುವಿನ ಬಾಳನ್ನು ಸಾರ್ಥಕತೆಯಿಂದ ನಡೆಯುವಂತೆ ನೋಡಿಕೊಳ್ಳಬೇಕು. ಅವನಾಟದಂತೆ ನಡೆದು ಕೊನೆಗೆ ಅವನನ್ನೆ ಸೇರಿಕೊಳ್ಳುವ ಯತ್ನ ನಡೆಸಬೇಕು ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!