ಅಂಕಣ

ಹೂವ ತೇರಲೊಬ್ಬ ದೇವರು!

“ಮುಂಜಾವಿನ ಕನಸಿನಲಿ ನೀ ನೀಡಿದ ಸಿಹಿವಚನ.

ನನ್ನೊಲವೇ ಮರೆಯದೆಯೇ ಬಲುಬೇಗ ಈಡೇರಿಸು”

ಜಯಂತ್ ಕಾಯ್ಕಿಣಿಯವರ ಸಾಹಿತ್ಯವಿರುವ ಒಂದು ಹಾಡಿನ ಪಲ್ಲವಿ ಇದು. ಈ ಹಾಡಿನ ಚರಣದಲ್ಲಿ ಒಂದು ಸಾಲಿದೆ: `ಖುಷಿಯಲಿ ಕಂಪಿಸಿ ಮನಸೀಗ ಹೂವ ತೇರು’ ಎಂದು. ಅದೇಕೋ ಅರಿಯೆ, ಈ ಸಾಲಿನಲ್ಲಿರುವ ‘ಹೂವ ತೇರು’ ಪದ ತುಂಬ ಆಪ್ತವಾಯಿತು ನನಗೆ. ‘ತೇರು ಹೂವು’ ಎನ್ನುವ ಒಂದು ಬಗೆಯ ಹೂವಿದೆ. ನನಗೆ ಈ ‘ಹೂವ ತೇರು’ ಎಂಬ ಪದ ಪ್ರತಿಬಾರಿಯೂ ಅದನ್ನು ನೆನಪಿಸುತ್ತದೆ. ಹೀಗೆ ಈ ಹೂವ ತೇರಿನ ಕುರಿತಾದ ಮುಂದುವರಿದ ಆಲೋಚನೆ ಒಂದು ಸಣ್ಣ ಕುತೂಹಲಕ್ಕೆ ಎಡೆಮಾಡಿತು. ಅದೇನೆಂದರೆ “ತೇರು ಅಂದಮೇಲೆ ದೇವರಿರಬೇಕಲ್ಲವೇ?” ಎಂದು. ಆಗ ಮೂಡಿದ ಯೋಚನಾಸರಣಿಗಳನ್ನು ಬರಹ ರೂಪಕ್ಕಿಳಿಸಿದ್ದೇನೆ.

ಹೌದು. ಆ ಹೂವ ತೇರಲ್ಲೂ ಒಬ್ಬ ದೇವರಿದ್ದಾನೆ. ಎಲ್ಲ ಜಾತಿ ಮತ ಪಂಥಗಳ ಮೀರಿದವನಾತ. ಹಸಿರ ಜಾತ್ರೆಯಲ್ಲಿ ಅರಳುವವನು. ಎಲ್ಲ ಕಟ್ಟುಪಾಡುಗಳ ಮೀರಿ ಗೋಡೆ ಬಾಗಿಲುಗಳ ಮುರಿದು ಭಕ್ತರೊಂದಿಗೆ ಬೆರೆಯಲು ಬಂದವನು. ಗಾಳಿ, ಬೆಳಕು, ನೀರೆಂಬ ಮೂಲಭೂತಗಳ ಕಣ ಕಣದಲ್ಲೂ ತನ್ನ ಅಂಶಗಳ ಅಡಗಿಸಿ ಇಡೀ ಸೃಷ್ಟಿಯನ್ನೇ ತನ್ನ ಕಣ್ಣಳತೆಯಲ್ಲಿ ಕಾಪಾಡುತ್ತಿರುವವನು. ಅವನಿಗೆ ಪ್ರತಿದಿನವೂ ಜಾತ್ರೆಯೇ. ದಿನವೂ ಅದೆಷ್ಟೋ ಹೂವ ತೇರು ಇವನಿಗಾಗಿ ಅರಳುತ್ತದೆ. ಚಿಲಿಪಿಲಿಗುಟ್ಟುವ ಪಕ್ಷಿಗಳ ಮಂತ್ರಘೋಷಕ್ಕೆ ಮಾರು ಹೋಗುತ್ತಾನೆ ಆತ. ಸೂರ್ಯನೆಂಬ ಹಣತೆಯೊಂದು ಇವನಿಗಾಗಿ ನಿರಂತರ ಉರಿಯುತ್ತಲೇ ಇರುತ್ತದೆ. ನವಿಲುಗಳು ಇವನಿಗಾಗೇ ನರ್ತಿಸುತ್ತವೆ. ಬೇಕಂತಲೇ ತನ್ನ ಗರಿಗಳನ್ನು ಬೀಳಿಸಿ ಓಡುತ್ತವೆ. ಆ ದೇವರೆಂಬ ಸುಂದರಾಂಗನ ಮುಡಿ ಸೇರಲಿ ಎಂಬ ಮುದ್ದಾದ ಕಿಲಾಡಿತನ ಅವುಗಳದ್ದು.

ಜನರೆಲ್ಲ ಮುಗಿಬಿದ್ದು ಮಂದಿರ, ಮಸೀದಿ, ಚರ್ಚುಗಳಲ್ಲಿ ವಿಧವಿಧವಾಗಿ ಸ್ವಾರ್ಥ ತುಂಬಿದ ಬೇಡಿಕೆಗಳ ಮಹಾಪೂರ ಹರಿಸುತ್ತಿರುವಾಗ ಈ ಹೂವ ತೇರಿನ ದೇವರು ಗುಡಿಸಲಲ್ಲಿ ಮೊಲೆಹಾಲುಣಿಸುತ್ತ ಮಗುವ ಮಲಗಿಸಲು ತಾಯಿಯೊಬ್ಬಳು ಹಾಡುವ ಲಾಲಿಹಾಡ ಕೇಳುತ್ತ ಕೂತಿರುತ್ತಾನೆ. ದೊಡ್ಡ ದೊಡ್ಡ ಜನರೇಟರ್’ಗಳ ಬೆಳಕಲ್ಲಿ, ಧ್ವನಿಪೆಟ್ಟಿಗೆಗಳ ಗದ್ದಲದಲ್ಲಿ ಭಕ್ತಿಪರವಶವಾದಂತೆ ನಟಿಸುತ್ತ ಜಗತ್ತು ಕುಣಿಯುತ್ತಿರುವಾಗ, ಮೇಣದ ಬತ್ತಿಯ ಬೆಳಕಲ್ಲಿ ಪರೀಕ್ಷೆಗಾಗಿ ಓದುತ್ತಿರುವ ವಿದ್ಯಾರ್ಥಿನಿಯ ಜೊತೆ ತಾನು ಕುಳಿತು ಅವಳಿಗೆ ನಿದ್ದೆ ಬರದಂತೆ ಕಾಯುತ್ತಿರುತ್ತಾನೆ ಆತ. ಅರೆಕ್ಷಣದ ದರ್ಶನಕ್ಕೆ ದಿನಗಟ್ಟಲೆ ಉದ್ದದ ಸಾಲೊಂದು ಕಾದಿರುವಾಗ, ನಿಂತಿರುವವರಿಗೆ ದಣಿವಾರಿಸಲು ನೀರು ಕೊಡುತ್ತಿರುವ ಸ್ವಯಂಸೇವಕಿಯೊಬ್ಬಳ ನಿಸ್ವಾರ್ಥ ಸೇವೆಯ ಹಿಂದೆ ಹೋಗಿಬಿಡುತ್ತಾನಾತ. ಚಿನ್ನ, ಬೆಳ್ಳಿಯ ಆಭರಣಗಳ ಮಹಾಪೂರವನ್ನೇ ‘ಶ್ರೀಮಂತ ಭಕ್ತ’ನೊಬ್ಬ ಹರಿಸುತ್ತಿರುವಾಗ, ‘ಭಕ್ತಿ ಶ್ರೀಮಂತಿಕೆ’ ಹೊಂದಿದ ಬಡವನೊಬ್ಬನ ದೂರ್ವೆಯ ಮಾಲೆಗೆ ಮರುಳನಾಗುತ್ತಾನಾತ. ಸ್ನಾನ ಮಾಡದೆ ದೇವರ ಮೂರ್ತಿಯ ಮುಟ್ಟಿದ ಕಾರಣಕ್ಕೆ ಅಮ್ಮನ ಕೈಯಲ್ಲಿ ಏಟುತಿಂದ ಪುಟ್ಟ ಅಳುತ್ತ ಹೊರಬಂದಾಗ ಪುಟಾಣಿ ಬೆಕ್ಕಿನ ಮರಿಯಾಗಿ ಪುಟ್ಟನ ನಗಿಸಲು ಆತ ಅಲ್ಲಿಗೆ ಬಂದುಬಿಡುತ್ತಾನೆ. ರಾಶಿಗಟ್ಟಲೆ ಹರಕೆ ಹೊತ್ತು ಅದನ್ನು ತೀರಿಸುವುದರಲ್ಲಿಯೇ ಅರ್ಧ ಜೀವನ ಸವೆಸುತ್ತ ಕೆಲವರಿರುವಾಗ, “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ” ಅಂದುಕೊಳ್ಳುವವನಿಗೆ ಆತ್ಮೀಯತೆಯ ಅಭಯವೀಯುತ್ತಾನಾತ.  ಅವನು ನನ್ನ ದೇವರು, ಇವನು ನಿನ್ನ ದೇವರು ಎಂದು ಹೊಡೆದಾಡುತ್ತಿರುವವರ ಕಂಡು ಒಳಗೊಳಗೇ ನಗುವ ಆತ ಅಲ್ಲೆಲ್ಲೋ ಹಸಿದ ಜೀವವೊಂದು ಚಡಪಡಿಸುವಾಗ ಜಾತಿ ಮತಗಳ ಕೇಳದೇ ತನ್ನ ಬಟ್ಟಲಿನಿಂದ ತುತ್ತನಿಟ್ಟ ಶುದ್ಧ ಆತ್ಮಕ್ಕೆ ಅಭಿಮಾನಿಯಾಗುತ್ತಾನಾತ.

ಪದೇ ಪದೇ ಘಾಸಿಯಾದ ಮನಸನ್ನು ಹೊತ್ತು ಕಡಲ ತಡಿಯಲ್ಲಿ ಅಲೆಯುವಾಗ ಸೋಕುವ ತಂಗಾಳಿಯ ಮದ್ದಿನಲ್ಲಿ ಅವನಿರುತ್ತಾನೆ. ಬಸ್ಸಿನ ಎದುರು ಸೀಟಿನಲ್ಲಿ ತಾಯಿಯ ಎದೆಗೊರಗಿ ನಿಂತ ಮಗುವೊಂದು ನಮ್ಮೆಡೆಗೆ ಬೀರುವ ಅಪರಿಚಿತ ಮುಗ್ಧ ನಗುವಿನಲ್ಲಿ ಅವನಿರುತ್ತಾನೆ. ಜಾತ್ರೆಯೊಂದರ ಗದ್ದಲದಲ್ಲಿ ಕೇಳಿಬರುವ ಕೊಳಲ ನಾದದ ಗುಂಗಿನಲ್ಲಿ ಆತನಿರುತ್ತಾನೆ. ಚಳಿ, ಮಳೆ, ಬಿಸಿಲು, ಗಾಳಿಯೆನ್ನದೇ ದೇಶದ ಗಡಿ ಕಾಯುವ ಸೈನಿಕರ ಕುರಿತು “ಅದು ಅವರ ಹಣೆಬರಹ” ಎಂಬ ಉದ್ದಟತನದ ಮಾತುಗಳನ್ನು ಕೇಳಿಯೂ ತಾಳ್ಮೆಗೆಡದೇ ಕರ್ತವ್ಯನಿರತರಾಗಿರುವವರ ದೇಶಭಕ್ತಿಯ ಔನ್ನತ್ಯದಲ್ಲಿ ಅವನಿದ್ದಾನೆ. “ಶಿವ ಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ” ಎಂಬ ಕುವೆಂಪುರವರ ಸಾಲುಗಳಂತೆ ಸದಭಿರುಚಿಯ ಸಾಹಿತ್ಯದ ಪ್ರತಿ ಪದದಲ್ಲಿ ಅವನಿರುತ್ತಾನೆ. ನೂರೆಂಟು ಕಷ್ಟಗಳ ಸರಮಾಲೆ ಅನುಭವಿಸಿಯೂ ಜಿಗುಪ್ಸೆಗೊಳಗಾಗದ ಸಮಾಧಾನಿಯ ಜೀವನ ಪ್ರೀತಿಯಲ್ಲಿ ಅವನಿರುತ್ತಾನೆ.

ಹೀಗೆ ಆಡಂಬರವಿಲ್ಲದ, ಡಾಂಭಿಕತನವಿರದ ಜೀವನದ ಎಲ್ಲ ನಿತ್ಯಸತ್ಯಗಳಲ್ಲಿ ಈ ಹೂವ ತೇರಿನ ದೇವರಿರುತ್ತಾನೆ! ವಾಸ್ತವದ ಬೆಳ್ಳಿಪರದೆಯ ಹಿಂದಿನ ಬೆಳಕಾಗಿ, ಈ ಅಭೂತಪೂರ್ವ ಸೃಷ್ಟಿಯ ಸೃಷ್ಟಿಕರ್ತ ಸೃಷ್ಟಿಯ ಅಣುಅಣುವಲ್ಲೂ  ತಾನು ಬೆರೆತು ಸೃಷ್ಟಿಯೇ ತಾನಾಗಿ ಆವರಿಸಿದ್ದಾನೆ!

Facebook ಕಾಮೆಂಟ್ಸ್

ಲೇಖಕರ ಕುರಿತು

Anoop Gunaga

ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ.
ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!