ಪ್ರವಾಸ ಕಥನ

ಹಂಪಿಯೆನ್ನುವ ಅದ್ಭುತ

ದೇಶದ ಯುವಕ-ಯುವತಿಯರಲ್ಲಿರುವ ಸಿಂಹವನ್ನು ಬಡಿದೆಬ್ಬಿಸಿ ಭಾರತವನ್ನು ಮತ್ತೆ ವಿಶ್ವಗುರು ಮಾಡುವುದಕ್ಕೊಸ್ಕರ ರಾಜ್ಯದ ನಾನಾ ಭಾಗಗಳಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿರುವ ಯುವಕರು ಸೇರಿ 2014ರ ಜುಲೈ 27 ರಂದು ಬೆಂಗಳೂರಿನಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸುವುದರ ಮೂಲಕ “ಉತ್ತಿಷ್ಠ ಭಾರತ” ಉದ್ಘಾಟನೆಗೊಂಡಿತು. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹಲವಾರು ರಾಷ್ಟ್ರೀಯ, ಧಾರ್ಮಿಕ, ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಆಚರಿಸುತ್ತಾ ಬಂದಿದೆ. ಪ್ರತಿ ವರ್ಷ ತನ್ನ ವರ್ಷಾಚರಣೆಯನ್ನು “ನಿರಂತರ” ಎನ್ನುವ ಹೆಸರಿನಲ್ಲಿ ಆಚರಿಸುತ್ತಿರುವ “ಉತ್ತಿಷ್ಠ ಭಾರತ” ತಂಡ ಈ ಬಾರಿ ವಿಶ್ವ ಪಾರಂಪರಿಕ ತಾಣವಾದ ಹಂಪಿಯಲ್ಲಿ ಹಮ್ಮಿಕೊಂಡಿತ್ತು

ಈ ವರ್ಷ “ಶ್ರೀ ಹನುಮಾನ್ ಚಾಲೀಸಾ ಅಭಿಯಾನದ” ಅಡಿಯಲ್ಲಿ  ಲಕ್ಷ ಉಚಿತ ಹನುಮಾನ್ ಚಾಲೀಸಾ ಪುಸ್ತಕಗಳನ್ನು ಶಾಲಾ ಮಕ್ಕಳಿಗೆ, ಭಜನಾ ಮಂಡಳಿಗಳಿಗೆ ವಿತರಿಸುವ ಅಭಿಯಾನ ಹಮ್ಮಿಕೊಂಡಿದೆ. ಹಾಗಾಗಿ ಈ ಬಾರಿಯ “ನಿರಂತರ” ಕಾರ್ಯಕ್ರಮವನ್ನು  ರಾಮಭಂಟ ಹನುಮನ ಜನ್ಮಸ್ಥಳವಾದ ಹಂಪಿಯ ಬಳಿಯಿರುವ ಪುಣ್ಯಭೂಮಿ “ಅಂeನಾದ್ರಿ ಬೆಟ್ಟದಲ್ಲಿ” ಆಯೋಜಿಸಲಾಗಿತ್ತು. ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸವಿರುವುದರಿಂದ ಅದನ್ನು ಸಹ ಅಲ್ಲಿಯೇ ಆಚರಿಸಲು ನಿರ್ಧರಿಸಲಾಗಿತ್ತು.್

ದಿನಾಂಕ 27-07-2018 ರ ಶುಕ್ರವಾರದಂದು ಬೆಂಗಳೂರಿನಿಂದ 50 ಜನರ ತಂಡ ಹಂಪಿಗೆ ಹೊರಟು ಮರುದಿನ ಬೆಳಗ್ಗೆ ಹೊಸಪೇಟೆ ತಲುಪಿದೆವು. ಹೊಸಪೇಟೆಯಲ್ಲಿ ಸ್ನೇಹಿತರಾದ ಶ್ರೀ ರಾಘವೇಂದ್ರ ಶೆಟ್ಟಿಯವರು ಸಕಲರಿಗೂ ಉಳಿದುಕೊಳ್ಳಲು ಛತ್ರದ ವ್ಯವಸ್ಥೆ ಮಾಡಿದ್ದರು. ಬೆಳಗಿನ ನಿತ್ಯಕರ್ಮಗಳನ್ನು ಮುಗಿಸಿ ಬಿಸಿ ಬಿಸಿ ಉಪ್ಪಿಟ್ಟು ಕೇಸರೀಭಾತ್ ತಿಂದು ನಮ್ಮ ಪ್ರಯಾಣ ಅಂಜನಾದ್ರಿಯೆಡೆಗೆ ಸಾಗಿತ್ತು. ಚಿರಂಜೀವಿ ಆಂಜನೇಯ ಹುಟ್ಟಿದ್ದು ನಮ್ಮ ಕರ್ನಾಟಕದಲ್ಲೇ ಎಂದು ಕೇಳಿದ್ದ ನಮಗೆ ಅಂಜನಾದ್ರಿ ಬೆಟ್ಟ ನೋಡುವ ಕುತೂಹಲ ಕ್ಷಣ ಕ್ಷಣಕ್ಕೂ ಹೆಚ್ಚತೊಡಗಿತ್ತು. ಹೊಪೇಟೆಯಿಂದ ಅಂಜನಾದ್ರಿ ಬೆಟ್ಟ 30 ಕಿ.ಮೀ ದೂರದಲ್ಲಿದೆ. ಬೆಟ್ಟದ ಬಳಿ ಬರುವ ಹೊತ್ತಿಗೆ ತಂಡದಲ್ಲಿ ಜೈ ಶ್ರೀರಾಮ್, ಜೈ ಹನುಮಾನ್, ರಾಮ ಲಕ್ಷ್ಮಣ ಜಾನಕಿ ಜೈ ಭೋಲೋ ಹನುಮಾನಕೀ ಎನ್ನುವ ಘೋಷಣೆಗಳ ಸುರಿಮಳೆಯೇ ಆಗುತ್ತಿತ್ತು. ಆ ಘೋಷಣೆಗಳ ನಡುವೆ ಕೆಲವೇ ನಿಮಿಷಗಳಲ್ಲಿ ಆಯಾಸವಿಲ್ಲದೇ ಬೆಟ್ಟ ಹತ್ತಿದ್ದು ಯಾರಿಗೂ ತಿಳಿಯಲಿಲ್ಲ. ಬೆಟ್ಟ ಹತ್ತಲು ಮೆಟ್ಟಿಲುಗಳಿವೆ, ಹಿರಿಯರು ನಡುವೆ ಸ್ವಲ್ಪ ವಿಶ್ರಮಿಸಿ ಹತ್ತಬಹುದು. ಮೊದಲೇ ಮಳೆಗಾಲವಾದ್ದರಿಂದ ಪ್ರಕೃತಿಯ ಸೌಂದರ್ಯ ಹೆಚ್ಚಿತ್ತು. ಅಂeನಾದ್ರಿಯ ತುತ್ತುದಿಯಲ್ಲಿ ನಿಂತು ಕಣ್ಣಾಯಿದಷ್ಟೂ ದೂರಕ್ಕೆ ಕಾಣುವ ಬೆಟ್ಟಗಳ ಸಾಲು, ಪ್ರಶಾಂತತೆಯಿಂದ ಹರಿಯುತ್ತಿರುವ ತುಂಗಭದ್ರಾ ನದಿ, ದೂರದಲ್ಲಿ ಕಾಣುವ ಹಂಪಿಯ ಶ್ರೀ ವಿರೂಪಾಕ್ಷ ದೇವಾಲಯ, ವಿಜಯ ವಿಠಲ ಮಂದಿರದ ಸಂಕೀರ್ಣ, ತಣ್ಣಗೆ ಬೀಸುವ ಗಾಳಿ ಎಂತವರನ್ನು ನಿಬ್ಬೆರೆಗಾಗಿಸುತ್ತವೆ. ಬೆಟ್ಟದ ಮೇಲಿರುವ ಆಂಜನೇಯ ದೇವಸ್ಥಾನದ ಮುಂದೆ ನಿಂತು ಈ ಪ್ರಕೃತಿಯ ಸೌಂದರ್ಯವನ್ನು ಸವೆಯುತ್ತಿದ್ದರೆ ಮೈಯೆಲ್ಲಾ ರೋಮಾಂಚನಗೊಳ್ಳುವುದು ಖಂಡಿತ.

ನಮ್ಮ ತಂಡದವರೆಲ್ಲರೂ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ 11 ಬಾರಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣಕ್ಕೆ ಅಣಿಯಾದೆವು. ಬಂದಿದ್ದ ಭಕ್ತರಿಗೂ ಹನುಮಾನ್ ಚಾಲೀಸಾ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು. ಮೊದಲ ಬಾರಿ 70 ಕ್ಕೂ ಅಧಿಕ ಜನ ಒಟ್ಟಾಗಿ ಚಾಲೀಸಾ ಓದುತ್ತಿದ್ದರೆ ಪ್ರತಿಯೊಬ್ಬರ ಮೈ ನವಿರೇಳುತ್ತಿತ್ತು. ದೇವಸ್ಥಾನ ಆವರಣದಲ್ಲಿ ಕೊನೆಯ ಬಾರಿ ಚಾಲೀಸಾ ಓದುವಾಗ ಅಚ್ಚರಿಯಂತೆ ವಾನರ ಸೇನೆ ನಮ್ಮ ಬಳಿ ಬಂದು ಪ್ರತಿಯೊಬ್ಬರ ಮೇಲೆ ಕುಳಿತು ಆಲಿಸುತಿದ್ದವು. ಚಾಲೀಸಾದ ಬಳಿಕ ಸ್ವಚ್ಛಕಾರ್ಯಕ್ರಮ ನಡೆಯಿತು. ಈ ಸಮಯದಲ್ಲಿ ಸ್ಥಳೀಯ ಸಂಘಟನೆಯಾದ “ಭಾರತ ಸೇವಾ ಟ್ರಸ್ಟ್” ನ ಹಲವು ಕಾರ್ಯಕರ್ತರು ನಮ್ಮ ಜೊತೆಗೂಡಿದರು. ಬೆಟ್ಟದ ಮೇಲಿಂದ ಕೆಳಗಿನವರೆಗೂ ಸ್ವಚ್ಛ ಭಾರತ ಮಾಡಿ ಒಟ್ಟು  15 ಕ್ಕೂ ಹೆಚ್ಚು ಚೀಲ ಕಸವನ್ನು, ಪ್ಲಾಸ್ಟಿಕ್ ಬಾಟಲಿಗಳನ್ನು, ಬಿಸ್ಕೆಟ್ ಮತ್ತು ಚಿಪ್ಸ್ ಕವರಗಳನ್ನು ಕಾರ್ಯಕರ್ತರು ಚೀಲಗಳಿಗೆ ತುಂಬಿದರು. “ನಮ್ಮ ಬೆಟ್ಟ ಸ್ವಚ್ಛ ಅಂಜನಾದ್ರಿ ಬೆಟ್ಟ” ಎನ್ನುವ ಘೋಷಣೆಗಳನ್ನು ಕೂಗಿ ಭಕ್ತರಲ್ಲಿ ಅರಿವು ಮೂಡಿಸಲಾಯಿತು.

ಅಲ್ಲಿಂದ ಮುಂದೆ ನಮ್ಮ ಪಯಣ ಪಂಪಾ ಸರೋವರದೆಡೆಗೆ ಸಾಗಿತ್ತು. ಸರೋವರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಸರೋವರದ ಸುತ್ತಮುತ್ತು ಬಿದ್ದಿದ್ದ ಕಸವನ್ನು ಸ್ವಚ್ಛಗೊಳಿಸಿ ಸರೋವರವನ್ನು ಶುಚಿಗೊಳಿಸಿಲಾಯಿತು. ಅಷ್ಟೊತ್ತಿಗಾಗಲೇ ಸುಸ್ತಾಗಿದ್ದ ಪ್ರತಿಯೊಬ್ಬರು ಆಗ ತಾನೆ ಬಂದಿದ್ದ ಬಿಸಿ ಬಿಸಿ ಜೋಳದ ರೊಟ್ಟಿ ಎಣ್ಣೆಗಾಯಿಯನ್ನು ಚಪ್ಪರಿಸಿ ಸವಿದರು. ಸಂಜೆ 5 ಗಂಟೆಗೆ ಕಾರ್ಗಿಲ್ ವಿಜಯ ದಿವಸವ ಆಚರಿಸುವುದೆಂದು ಮುಂಚೆಯೆ ನಿರ್ಧರಿಸಲಾಗಿತ್ತು. ಇನ್ನೂ ಸಮಯವಿದ್ದದರಿಂದ ಕೆಲವರು ನಿದ್ರೆಗೆ ಜಾರಿದರೆ, ಕೆಲವು ಯುವಕರು ಅಲ್ಲೇ ಸಮೀಪವಿದ್ದ ವಾಲೀ ಪರ್ವತವನ್ನು ಹತ್ತಲು ಶುರು ಮಾಡಿದರು. ಕೆಲವರು ಅರ್ಧಕ್ಕೆ ನಿಂತರೆ ಕೆಲವರು ತುದಿ ಮುಟ್ಟಿ ಖುಷಿಪಟ್ಟರು.

ಸಂಜೆ 5 ಗಂಟೆಗೆ ಸರಿಯಾಗಿ ಕಾರ್ಗಿಲ್ ವಿಜಯ ದಿವಸ ಆಚರಣೆ ಶುರು ಮಾಡಲಾಯಿತು. ವಿಜಯನಗರ ವಂಶಸ್ಥರಾದ ರಾಜಾಮಾತೆಯವರು , ಗಂಗಾವತಿಯ ಶಾಸಕರು ಶ್ರೀ ಪರಣ್ಣ ಮನವಳ್ಳಿ, ಉದ್ಯಮಿಗಳಾದ ಶ್ರೀ ಸಂತೋಷ್ ಕೆಲೋಜಿ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಉತ್ತಿಷ್ಠ ಭಾರತ ತಂಡದ ಪರಿಚಯವನ್ನು ಕಾರ್ಯಕರ್ತರಾದ ಸಿದ್ದಲಿಂಗ ಸ್ವಾಮಿಯವರು ಮಾಡಿಕೊಟ್ಟರು. ಕಾರ್ಗಿಲ್ ಕದನವನ್ನು ಕಣ ್ಣಗೆ ಕಟ್ಟುವಂತೆ ಮಧುಸೂದನ್ ರವರು ಪ್ರತಿಯೊಬ್ಬ ಯೋಧರ ಬಗ್ಗೆ ವಿವರಿಸಿದರು. ಉತ್ತಿಷ್ಠ ಭಾರತ ತಂಡದವರು ನಮ್ಮ ಹಂಪಿಗೆ ಬಂದು “ಶ್ರೀ ಹನುಮಾನ್ ಚಾಲೀಸಾ ಅಭಿಯಾನ” ಮತ್ತು “ಸ್ವಚ್ಛ ಭಾರತದ” ಹಮ್ಮಿಕೊಂಡಿದ್ದು ಸಂತೋಷದ ವಿಷಯ ಎಂದು ರಾಜಮಾತೆಯವರು ಹೇಳಿದರು. ಶ್ರೀ ಪರಣ್ಣ ಮನವಳಿಯವರು ಮಾತಾಡಿ ತಮ್ಮ ಬಿಡುವಿಲ್ಲದ ಜೀವನದ ನಡುವೆಯೂ ಬೆಂಗಳೂರಿನಿಂದ ಆಗಮಿಸಿ ಉತ್ತಮ ಕೆಲಸಗಳನ್ನು ಕೈಗೊಂಡಿರುವುದು ಅದ್ಭುತ ಕೆಲಸ ಎಂದು ವಣ ್ಸಿದರು. ಇದೇ ಸಮಯದಲ್ಲಿ ಕಾರ್ಗಿಲ್ ಕದನದಲ್ಲಿ ಹೋರಾಡಿದ್ದ ಹೊಸಪೇಟೆಯವರಾದ ಶ್ರೀ ಸುಬ್ಬಣ್ಣ ಮತ್ತು ಶ್ರೀ ರಾಜಶೇಖರ್ ರವರನ್ನು “ಉತ್ತಿಷ್ಠ ಭಾರತ” ಮತ್ತು “ಭಾರತ ಸೇವಾ ಟ್ರಸ್ಟ್” ನವರು ಸನ್ಮಾನಿಸಿದರು.

ಅಲ್ಲಿಂದ ಹೊರಟು ರಾತ್ರಿ ಸಮೀಪದ ಪರಿಚಯಸ್ಥರ ರೆಸಾರ್ಟ ತಲುಪಿದಾಗ ರಾತ್ರಿ 8 ಗಂಟೆಯಾಗಿತ್ತು. ಅಲ್ಲೇ ಕ್ಯಾಂಪ್ ಫೈರ್ ಮಾಡಿ ಪ್ರತಿಯೊಬ್ಬರು ಬೆಳದಿಂಗಳ ಊಟವನ್ನು ಸವಿದರು. ಪಕ್ಕದಲ್ಲೇ ರಭಸವಾಗಿ ಹರಿಯುತ್ತಿದ ನದಿಯ ಝುಳು ಝುಳು ಸಪ್ಪಳ, ತಂಗಾಳಿಯಲ್ಲಿ ಎಲ್ಲರೂ ಕೂಡಿ ನಲಿದರು. ಅಲ್ಲಿಂದ ಮತ್ತೆ ಹೊಸಪೇಟೆಗೆ ಬಂದು ತಲುಪಿ ಸುಖನಿದ್ರೆಯಲ್ಲಿದ್ದವರಿಗೆ ಬೆಳಗ್ಗೆ 5 ಗಂಟೆಗೆ ಮತ್ತೆ ಆಯೋಜಕರು ಎಬ್ಬಿಸಿದರು. ರುಚಿಕರವಾದ ಇಡ್ಲಿ ವಡೆ ಸವಿದು ಎಲ್ಲರೂ ವಿಶ್ವ ವಿಖ್ಯಾತ ತಾಣ ಹಂಪಿ ನೋಡಲು ಹೊರಟೆವು. ಶ್ರೀ ಕೃಷ್ಣದೇವಾರಯರ ಕಾಲದಲ್ಲಿ ಮುತ್ತು ರತ್ನಗಳನ್ನು ರಸ್ತೆ ಬದಿಗಳಲ್ಲಿ ಮಾರುತ್ತಿದ್ದರು, ವಿಜಯನಗರ ಸಾಮ್ರಾಜ್ಯ ಅತ್ಯಂತ ಶ್ರೀಮಂತ ಸಾಮ್ರಾಜ್ಯ, ಕಲ್ಲಿನಲ್ಲಿಯೂ ಸಂಗೀತ ಹೊರಡುವ ದೇವಸ್ಥಾನವಿದೆ ಎಂದು ಮತ್ತಿತರ ವಿಷಯಗಳನ್ನು ತಿಳಿದುಕೊಂಡಿದ್ದ ನಮಗೆ ಹಂಪಿ ನೋಡುವ ಕುತೂಹಲ ಹೆಚ್ಚಾಗಿತ್ತು.

ಹೊಸಪೇಟೆಯಿಂದ ಸ್ವಲ್ಪ ದೂರ ಸಾಗುತ್ತಲೇ ಹಂಪಿಯ ಸೊಬಗು ತೆರೆದುಕೊಳ್ಳುತ್ತದೆ. ಯಾವ ದಿಕ್ಕಿಗೆ ಕಣ್ಣು ಹಾಯಿಸಿದರು ದೇವಾಲಯಗಳು, ಪ್ರತಿ ಬೆಟ್ಟದ ಮೇಲೂ ಮಂದಿರಗಳು. ಹಂಪಿ ಸೇರುವದಕ್ಕೂ ಮೊದಲೇ ಗೈಡ್ ಗಳು ನಮ್ಮ ಬೆನ್ನು ಹತ್ತುತ್ತಾರೆ. ಹೆಜ್ಜೆ ಹೆಜ್ಜೆಗೂ ಗೈಡ್ ಗಳು ಬರುವ ಪ್ರವಾಸಿಗರನ್ನು ಬಲೆ ಬಿಸಿ ಮೀನು ಹಿಡಿಯುವಂತೆ ಕಾಯುತ್ತಿರುತ್ತಾರೆ. ಮೊದಲು ನಾವು ಹೊರಟಿದ್ದು ಪಂಪಾಪತಿ ಶ್ರೀ ವಿರೂಪಾಕ್ಷೇಶ್ವರ ದೇವಾಲಯವನ್ನು ನೋಡಲು. ಈ ದೇವಾಲಯವು ಸುಮಾರು 15 ನೇ ಶತಮಾನದಲ್ಲಿ ಕಟ್ಟಲಾಗಿದೆ. ವಿರೂಪಾಕ್ಷ, ಪಂಪಾದೇವಿ, ಭುವನೇಶ್ವರೀ ದೇವಿ ಸೇರಿದಂತೆ ಹಲವು ಮಂದಿರಗಳನ್ನು ಇದು ಒಳಗೊಂಡಿದೆ. ಪಕ್ಕದಲ್ಲಿಯೇ ಪುಷ್ಕರಣ  ಮತ್ತು ತುಂಗಭದ್ರಾ ನದಿ ತಟವಿದೆ. ಅದ್ಭುತ ಶಿಲ್ಪಕಲೆಯಿಂದ ಬರುವ ಭಕ್ತರ ಮನ ತಣ ಸುತ್ತದೆ ಈ ದೇವಾಲಯ. ಉಲ್ಟಾ ಕಾಣುವ ದೇವಾಲಯದ ಗೋಪುರದ ಛಾಯೆ, ಮೂರು ತಲೆಯ ಬಸವ, ನೆಲಮಳಿಗೆಯಲ್ಲಿರುವ ಹರಿಹರ ಮಂದಿರ ಸೇರಿದಂತೆ ಹಲವು ಅಚ್ಚರಿಗಳು ನಮ್ಮನ್ನು ಬೆರಗಾಗಿಸುತ್ತವೆ! ಮುಖ್ಯರಸ್ತೆಯಲ್ಲಿ ಸ್ವಲ್ಪ ದೂರ ನಡೆದು, ನದಿಯ ಬದಿಯಲ್ಲಿ ಸ್ವಲ್ಪ ದೂರ ನಡೆದರೆ ಸಿಗುವುದು ಕೋದಂಡರಾಮ ಮತ್ತು ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನ. ಇಲ್ಲಿ ಆಂಜನೇಯನ್ನು ಯಂತ್ರ ಹಾಕಿ ಬಂಧಿಸಲಾಗಿದೆ ಎನ್ನುವ ನಂಬಿಕೆಯಿದ್ದು, ಆಂಜನೇಯನ ಸುತ್ತ 52 ಕೋತಿಗಳಿವೆ(ವರ್ಷಕ್ಕೆ 52 ವಾರಗಳು). ಇಲ್ಲಿ ನದಿಯಲ್ಲಿ ದೋಣಿ ವಿಹಾರ ಹೋಗುವವರಿಗೆ ತೆಪ್ಪಗಳಿವೆ. ಹಂಪಿಯ ಒಳಹೊಕ್ಕುತ್ತಿದ್ದಂತೆ ನಮಗೆ ಸಿಗುವುದು ಕಡಲೆಕಾಳು ಮತ್ತು ಸಾಸಿವೆಕಾಳು ಗಣೇಶ. ಗೌರಿಯು ತನ್ನು ತೊಡೆಯ ಮೇಲೆ ಗಣೇಶನನ್ನು ಕೂರಿಸಿಕೊಂಡ ಹಾಗಿದೆ ಏಕಶಿಲೆಯಲ್ಲಿ ಕೆತ್ತಲಾಗಿರುವ ಸಾಸಿವೆಕಾಳು ಗಣೇಶ, ಮತಾಂಧರ ದಾಳಿಗೆ ಸಿಲುಕಿ ಮೂರ್ತಿ ಭಗ್ನಗೊಂಡಿದೆ. ಇದರ ಬಳಿಯೇ ಇರುವ ಮತ್ತೊಂದು ಅದ್ಭುತ ದೇವಸ್ಥಾನವೆಂದರೆ ಶ್ರೀಕೃಷ್ಣ ದೇವಾಲಯ ಮತ್ತು ಮಾರುಕಟ್ಟೆ ಪ್ರದೇಶ. ಗರ್ಭಗುಡಿಯಲ್ಲಿ ದೇವರಿಲ್ಲದಿರುವ ಕಾರಣ ಇದು ಪಾಳುಬಿದ್ದಿದ್ದು ದೇವಸ್ಥಾನದ ಗೋಪುರದ ಜೀರ್ಣೋದ್ಧಾರ ನಡೆಯುತ್ತಿದೆ. ಭಾರತೀಯ ಪುರಾತತ್ವ ಇಲಾಖೆಯ ದಿವ್ಯ ನಿರ್ಲಕ್ಷದಿಂದ ದೇವಸ್ಥಾನವು ಬಾವಲಿಗಳು ತಾಣವಾಗಿದ್ದು, ಒಳಹೋಗಲು ಪ್ರವಾಸಿಗರು ಹಿಂಜರಿಯುವಂತಾಗಿದೆ. ಭಾರತ ದೇಶವು 15 ನೇ ಶತಮಾನದಲ್ಲಿ ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತ ದೇಶವಾಗಿದ್ದು ಮುತ್ತು ರತ್ನಗಳನ್ನು ಬೀದಿಯಲ್ಲಿ ಮಾರುತ್ತಿದ್ದ ವಿಷಯ ನಮಗೆ ಗೊತ್ತೇ ಇದೆ. ಆ ಸಮಯದಲ್ಲಿ ವಿದೇಶಗಳಿಂದ ಭಾರತಕ್ಕೆ ವ್ಯಾಪಾರಕ್ಕೆಂದು ಬಂದಿದ್ದವರ ಬಗ್ಗೆ ನಮಗೆ ಗೊತ್ತೇ ಇದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಶ್ರೀ ಕೃಷ್ಣ ದೇವಸ್ಥಾನದ ಎದುರಿಗಿರುವ ಮಾರುಕಟ್ಟೆ.

ಇದರ ಬಳಿಯಿರುವ ಮತ್ತೊಂದು ಅದ್ಭುತ ಕೆತ್ತನೆಯೇ ಯೋಗನರಸಿಂಹ ದೇವಸ್ಥಾನ ಮತ್ತು ಬಡವಿಲಿಂಗ. ಏಳು ಮೀ ಎತ್ತರದ ಯೋಗ ಭಂಗಿಯಲ್ಲಿರುವ ನರಸಿಂಹನ ದೇವರ ಮೂರ್ತೀ ಮುಸಲ್ಮಾನ ದೊರೆಗಳ ಅಟ್ಟಹಾಸಕ್ಕೆ ಬಲಿಯಾಗಿ ವಿರೂಪಗೊಂಡಿದೆ. ನರಸಿಂಹನ ಜೊತೆಯಲ್ಲಿದ್ದ ಲಕ್ಷ್ಮೀ ದೇವಿಯ ವಿಗ್ರಹ ಈಗಿಲ್ಲ. ಇದರ ಪಕ್ಕದಲ್ಲಿಯೇ ಬಡ ಮಹಿಳೆಯೊಬ್ಬಳ 3 ಮೀಟರ್ ಎತ್ತರದ ಶಿವಲಿಂಗ ನಿರ್ಮಿಸಿದ್ದರಿಂದ ಇದನ್ನು ಬಡವಿಲಿಂಗವೆಂದು ಕರೆಯುತ್ತಾರೆ. ಸುತ್ತಮುತ್ತಲೂ ಕೃಷಿ ಚಟುವಟಿಕೆ ನಡೆಯುತ್ತಲಿದೆ ಆದ್ದರಿಂದ ಶಿವಲಿಂಗದ ಸುತ್ತಲೂ ನೀರು ಶೇಖರಣೆಯಾಗುತ್ತಿದೆ ಎನ್ನುವ ಫಲಕವಿದೆ. ಮಹಾನವಮಿದಿಬ್ಬಕ್ಕೆ ತೆರಳುವ ರಸ್ತೆಯಲ್ಲಿ ನೆಲಮಳಿಗೆಯಲ್ಲಿರುವ ಶಿವನ ಮತ್ತೊಂದು ದೊಡ್ಡ ದೇವಸ್ಥಾನವಿದೆ, ಇಲ್ಲೂ ಸಹ ದೇವಸ್ಥಾನದೊಳಗೆ ನೀರು ತುಂಬಿದ್ದು ಗರ್ಭಗುಡಿಯಲ್ಲಿ ಶಿವಲಿಂಗವಿಲ್ಲ. ಕೇವಲ ನಂದಿಯ ವಿಗ್ರಹವಿದೆ.

ಅಲ್ಲಿಂದ ಮುಂದೆ ಸಾಗಿ ಮಹಾನವಮಿದಿಬ್ಬ ನೋಡಲು ನಾವೆಲ್ಲ ಹೊರಟೆವು. ದಸರಾ ಹಬ್ಬವನ್ನು ಇಲ್ಲಿ ಆಚರಿಸುತ್ತಿದ್ದರು ಮತ್ತು ಇತರೆ ಹಬ್ಬಗಳನ್ನು ಇಲ್ಲಿ ಆಚರಿಸುತ್ತಿದ್ದರು ಎನ್ನುವ ಮಾತಿದೆ. ಇದು 19 ಎಕರೆ ಜಾಗದಲ್ಲಿ ಹರಡಿಕೊಂಡಿರುವ ಟಂಕಸಾಲೆ, ಪುಷ್ಕರಣ ಗಳು, ಹೋಳಿ ಬಣ್ಣ ಆಡುತ್ತಿದ್ದ ವಿಶಾಲ ಜಾಗ. ದಿಬ್ಬದಲ್ಲಿ ಹಲವು ಪದರಗಳಿದ್ದು ಪ್ರತಿಯೊಂದರಲ್ಲೂ ವಿಶೇಷ ಕೆತ್ತನೆಗಳಿವೆ. ಇಲ್ಲಿರುವ ಅದ್ಭುತ ಪುಷ್ಕರಣ ಯನ್ನು ಪ್ರತಿಯೊಬ್ಬರು ಸಿನಿಮಾಗಳಲ್ಲಿ ವೀಕ್ಷಿಸಿರುತ್ತೀರಿ. 1986ರ ವರೆಗೂ ಭೂಗರ್ಭದಲ್ಲಿ ಅಡಗಿದ್ದ ಇದನ್ನು ನಂತರದಲ್ಲಿ ಪತ್ತೆಹಚ್ಚಲಾಯಿತು. ಅಂದಿನ ಕಾಲದಲ್ಲೇ ಸಮೀಪದ ಕಮಲಾಪುರದ ಕೆರೆಯಿಂದ ಇಲ್ಲಿನ ಪುಷ್ಕರಣಿಗಳಿಗೆ ನೀರು ತರಲು ವಿಜಯನಗರ ಸಾಮ್ರಾಜ್ಯದ ಜನರು ಮಾಡಿರುವ ಸಣ್ಣ ಸಣ್ಣ ಕಲ್ಲಿನ ನಾಲೆಗಳನ್ನು ನೋಡಿದರೆ ನಮ್ಮ ಹಿರಿಯರು ಎಷ್ಟೊಂದು ಬುದ್ದಿವಂತರು ಎನ್ನುವುದು ತಿಳಿಯುತ್ತದೆ.

ಇಷ್ಟೆಲ್ಲ ನೋಡುವ ಹೊತ್ತಿಗೆ ಬಿಸಿಲು ಶುರುವಾಗಿತ್ತು ಜೊತೆಗೆ ಹೊಟ್ಟೆಯಲ್ಲಿ ಇಲಿಗಳು ಓಡಾಡತ್ತಿದ್ದವು ! ಸಮೀಪದ ಯಲ್ಲಮ್ಮ ದೇವಸ್ಥಾನದ ಬಳಿ ಊಟ ಮಾಡಲು ಕುಳಿತಾಗ ಹಂಪಿ ನೋಡಲು ಫ್ರೆಂಚ್ ದೇಶದಿಂದ ಬಂದಿದ್ದ ಪ್ರವಾಸಿಗರು ನಮ್ಮ ಸ್ನೇಹಿತರಾಗಿದ್ದರು. ಅತಿಥಿ ದೇವೋ ಭವಃ ಎನ್ನುವಂತೆ ಅವರಿಗೂ ಸಹ ನಮ್ಮ ಜೊತೆ ಊಟ ಮಾಡಲು ಹೇಳಿ ನಮ್ಮ ಆಹಾರ ಶೈಲಿಯ ಪರಿಚಯ ಮಾಡಿಕೊಟ್ಟೆವು. ಕಂಪನಿಗಳಲ್ಲಿ ಪ್ರತಿಯೊಂದಕ್ಕೂ ಪಾರ್ಟಿ ಕೇಳಿ ಅಭ್ಯಾಸವಾಗಿರುವ ನಮ್ಮವರು, ಫ್ರೆಂಚ್ ನವರು ಫುಟ್ಬಾಲ್ ವಿಶ್ವಕ[ಪ್ ಗೆದ್ದಿದ್ದಕ್ಕೆ ಅವರ ಬಳಿಯೂ ಪಾರ್ಟಿ ಕೇಳಿದರು !! ಅವರ ಜೊತೆ ಫೋಟೋ ತೆಗಿಸಿಕೊಂಡು ಸಮೀಪದಲ್ಲಿದ್ದ ಲೋಟಸ್ ಮಹಲ್ ನೋಡಲು ಹೊರಟೆವು.

ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನಡೆಸಲು ಈ ಲೋಟಸ್ ಮಹಲ್ ಕಟ್ಟಲಾಗಿದ್ದು ಇಲ್ಲಿ ಉದ್ಯಾನವನ ನಿರ್ಮಿಸಲಾಗಿದೆ. ಇದರ ಹಿಂದೆಯೇ ಗಜ ಲಾಯ ಮತ್ತು ಒಂಟೆ ಲಾಯಗಳಿವೆ. ಒಂದು ಸಮರ್ಥ ಸೇನೆಯನ್ನು ಕಟ್ಟಿದ್ದ ಕೃಷ್ಣದೇವರಾಯರ ಸೇನೆಯಲ್ಲಿ ಸಾವಿರಾರು ಕುದುರೆಗಳು, ಆನೆಗಳು, ಒಂಟೆಗಳಿದ್ದವು. ಈ ಆನೆಗಳಿಗಾಗಿ 11 ಮನೆಗಳ ಗಜ ಲಾಯವನ್ನು ಕಟ್ಟಲಾಗಿದೆ. ಇಲ್ಲಿ ಒಳಹೋಗಲು 30 ರೂ ಟಿಕೆಟ್ ತೆಗೆದುಕೊಂಡರೇ ಅದೇ ಟಕೇಟ್ ನಲ್ಲಿ ವಿಜಯ ವಿಠಲ ಮಂದಿರಕ್ಕೂ ಹೋಗಬಹುದು.

ವಿಜಯ ವಿಠಲ ಮಂದಿರದಿಂದ 1 ಕಿ.ಮೀ ದೂರದಲ್ಲಿ ವಾಹನ ನಿಲ್ದಾಣವಿದೆ. ಅಲ್ಲಿಂದ ದೇವಸ್ಥಾನ ಸಂಕೀರ್ಣಕ್ಕೆ ತೆರಳಲು ಬ್ಯಾಟರೀ ಚಾಲಿತ ವಾಹನಗಳಿವೆ, ನಡೆದುಕೊಂಡೂ ಸಹ ಹೊಗಬಹುದು. ಒಳಹೋಗುತ್ತಲೇ ನಮ್ಮನ್ನು ಸ್ವಾಗತಿಸುವುದು ವಿಶ್ವಪ್ರಸಿದ್ದ ಕಲ್ಲಿನ ರಥ ಮತ್ತು ಅದರ ಎದುರಿಗಿರುವ ವಿಜಯ ವಿಠಲ ಮಂದಿರ. ಇದನ್ನು ಹಳೇ ಹಂಪಿ ಅಥವಾ ಹಾಳು ಹಂಪೇಯಂದೂ ಕರೆಯಲಾಗುತ್ತದೆ ಯಾಕೆಂದರೆ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಮುಸಲ್ಮಾನ ದಾಳಿಕೋರರು ಒಂದೂ ದೇವಸ್ಥಾನ ಬಿಡದೇ ಎಲ್ಲವನೂ ಭಗ್ನಗೊಳಿಸಿ, ಲೂಟಿ ಮಾಡಿದ್ದಾರೆ. ಕಲ್ಲಿನಲ್ಲೂ ಹಲವು ವಿವಿಧ ಸಂಗೀತವನ್ನೂ ಬರಿಸು ಶಿಲ್ಪಕಲೆ ನಮ್ಮ ಹಂಪಿ ಬಿಟ್ಟರೆ ಮತ್ತೆಲ್ಲೂ ಇಲ್ಲ. ವಿಜಯ ವಿಠಲ ಮಂದಿರದಲ್ಲಿ ಒಟ್ಟು 400 ಕಂಬಗಳಿದ್ದು, ಇಗ ಕೇವಲ 56 ಕಂಬಗಳಲ್ಲಿ ಸಂಗೀತ ಹೊರಹೊಮ್ಮುತ್ತಿದೆ. ಒಂದರಲ್ಲಿ ಸರಿಗಮಪದನಿಸ ಬಂದರೆ, ಇನ್ನೊಂದರಲ್ಲಿ ತಬಲ, ಮತ್ತೊಂದರಲ್ಲಿ ಢಮರುಗ, ಹೀಗೇ ಹಲವು ಶಬ್ಧಗಳು ಬರುತ್ತವೆ. ಪ್ರತಿಯೊಂದು ಕಂಬದಲ್ಲೂ ಒಬ್ಬ ಸಂಗೀತ ನುಡಿಸುವವನ ಚಿತ್ರವಿದ್ದು, ಅವನ ಕೈಯಲ್ಲಿರುವ ವಾದ್ಯದ ಶಬ್ದ ಅದರಲ್ಲಿ ಬರುತ್ತದೆ. ರಾಜಮನೆತನದವರು ಕುಳಿತು ಸಂಗೀತ ಆಸ್ವಾದಿಸುತ್ತಿದ್ದಾಗ ಸುತ್ತಲೂ ಹಲವು ಬಣ್ಣದ ಬಟ್ಟೆಗಳನ್ನು ಮೇಲಿಂದ ಇಳಿಬಿಡಲೂ ಕಲ್ಲಿನ ಲಾಕ್ ಗಳನ್ನು ಕೆತ್ತಲಾಗಿದೆ.

ದೇವಸ್ಥಾನ ಎದುರಿಗೆ ಸುಮಾರೂ 2 ಕಿ,ಮೀ ಉದ್ದದ ಮಾರುಕಟ್ಟೆಯಿದ್ದು ಅಲ್ಲಿ ಕುದರೆಗಳನ್ನು ಮಾರಲು ವಿದೇಶದಿಂದ ಹಲವು ವಿದೇಶಿಗರು ಬರುತ್ತಿದ್ದರಂತೆ. ಇದಕ್ಕೆ ಸಾಕ್ಷಿಯೆನ್ನುವಂತೆ ವಿಜಯ ವಿಠಲ ಮಂದಿರದ ಅಡಿಪಾಯದಲ್ಲಿ ಹಲವು ಕೆತ್ತನೆಗಳಿವೆ. ಮೊದಲಿಗೆ ಕುದುರೆ ಮಾರಲು ಬಂದಿರುವ ಮಂಗೋಲಿಯಾ, ಚೈನೀಸ್, ಪೂರ್ಚುಗೀಸರ ಕೆತ್ತನೆಗಳಿವೆ. ನಂತರ ಇಲ್ಲಿನ ಸೈನಿಕರು ಅವುಗಳನ್ನು ಪರೀಕ್ಷಿಸುತ್ತಿರುವ ಕೆತ್ತನೆಗಳಿವೆ. ಅವುಗಳ ಪರೀಕ್ಷೆ ಮುಗಿದ ನಂತರ ರಾಜನ ಬಳಿ ಕರೆದುಕೊಂಡು ಹೋಗಿ ರಾಜ ಒಪ್ಪಿದರೆ ಅವುಗಳಿಗೆ ತರಬೇತಿ ಕೊಡುತ್ತಿದ್ದ ಕೆತ್ತನೆಗಳಿವೆ. ಇದರ ಹಿಂದೆಯೇ ನದಿಯಿದ್ದು ಅಲ್ಲಿ ಪುರಂದರ ಮಂಟಪವಿದೆ. ತುಂಗಭದ್ರಾ ನದಿಯೂ ಉಕ್ಕಿ ಹರಿಯುತ್ತಿದ್ದರಿಂದ ಪುರಂದರ ಮಂಟಪ ನೀರಿನಲ್ಲಿ ಮುಳುಗಿತ್ತು.

ಇವಷ್ಟೇ ಅಲ್ಲದೇ ಹಜಾರ ರಾಮ ದೇವಸ್ಥಾನ, ಅಚ್ಯುತರಾಯ ದೇವಸ್ಥಾನ, ಹೇಮಕೂಟ ಬೆಟ್ಟ, ಪಟ್ಟಾಭಿರಾಮ ದೇವಸ್ಥಾನ, ಸೇರಿದಂತೆ ಹತ್ತಾರು ದೇವಾಲಯಗಳಿವೆ.

ಇಂದು ಜಗತ್ತಿನಲ್ಲಿ ಕೇವಲ ಏಳು ಅದ್ಭುಗಳಿವೆ. ಆದರೇ ಮತಾಂಧರ ದಾಳಿಗೆ ಸಿಲುಕದೇ ಇದ್ದರೇ ನಮ್ಮ ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳಲ್ಲಿಯೇ 100 ಕ್ಕೂ ಅಧಿಕ ಅದ್ಭುತಗಳಿರುತ್ತಿದ್ದವು.

  • ಸಿದ್ದಲಿಂಗ ಸ್ವಾಮಿ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!