Featured ಅಂಕಣ

ಮೂಲಭೂತ ಹಕ್ಕುಗಳು ಮತ್ತು  ಸಾಂವಿಧಾನಿಕ ತಿದ್ದುಪಡಿಗಳು (1947-1977)

1950ರ ಜನವರಿ 26ರಂದು ಭಾರತದ ಸಂವಿಧಾನವು ಜಾರಿಗೆ ಬಂತು. ನಾಗರಿಕರ ಮೂಲಭೂತ ಹಕ್ಕುಗಳು (ಸಂವಿಧಾನ ಭಾಗ – 3) ಮತ್ತು ಸ್ವತಂತ್ರ ನ್ಯಾಯಾಂಗವನ್ನು, ಅತ್ಯಂತ ಪವಿತ್ರ ಮತ್ತು ಅಮೂಲ್ಯವೆಂದು ಸಂವಿಧಾನದಲ್ಲಿ ಪರಿಗಣಿಸಲಾಗಿದೆ. ಕಾನೂನಿನ ನಿಯಮ, ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು, ಅನಿಯಂತ್ರಿತ ಬಂಧನ ಮತ್ತು ಬಂಧನದಿಂದ ಸ್ವಾತಂತ್ರ್ಯ, ವಾಕ್‍ಸ್ವಾತಂತ್ರ್ಯದ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕೋದ್ಯಮದ ಹಕ್ಕು, ನ್ಯಾಯಾಂಗಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಮೊರೆಹೊಗುವ ಹಕ್ಕು ಇವೆಲ್ಲವನ್ನೂ ನಾಗರಿಕನ ಮೂಲಭೂತ ಹಕ್ಕುಗಳು ಸ್ಪಷ್ಟಪಡಿಸುತ್ತವೆ. ಈ ರೀತಿಯಾಗಿ ಸಾಂವಿಧಾನಿಕ ನಿಬಂಧನೆಗಳ ನಿರ್ವಹಣೆಯಲ್ಲಿ ಕೆಲವು ತಿದ್ದುಪಡಿಗಳು ಯಾವರೀತಿಯಾಗಿ ಒಟ್ಟಾರೆಯಾಗಿ ಕಾರ್ಯನಿರ್ವಹಣೆಯ ಮೇಲೆ ಪ್ರಭಾವ ಬೀರಿವೆ ಎಂಬುದನ್ನು ನೋಡೋಣ.

ಆರಂಭದ ದಿನಗಳು

1950 ಮೇ 12ರಂದು, ಸಂವಿಧಾನ ಜಾರಿಗೆ ಬಂದ ನಾಲ್ಕು ತಿಂಗಳ ಒಳಗಾಗಿ, ಕಾಂಗ್ರೆಸ್ ಸರ್ಕಾರದ ಪಂಡಿತ್ ನೆಹರೂ ಅವರು ವಿಧಿ (ಆರ್ಟಿಕಲ್) – 19ಕ್ಕೆ ಸಂಬಂಧಿಸಿ ಪ್ರಥಮ ಸಾಂವಿಧಾನಿಕ ತಿದ್ದುಪಡಿಯನ್ನು ಸಂಸತ್ತಿನ ಮುಂದಿಟ್ಟರು.

ವಿಧಿ – 19, ವಾಕ್‍ಸ್ವಾತಂತ್ರ್ಯದ ಹಕ್ಕುಗಳ ರಕ್ಷಣೆಗೆ ಸಂಬಂಧಿತವಾಗಿದೆ:

  1. ಎಲ್ಲಾ ನಾಗರಿಕರು ಕೆಳಗಿನ ಹಕ್ಕುಗಳನ್ನು ಪಡೆಯಲು ಅರ್ಹರು
  • ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ
  • ಶಾಂತಿಯುತವಾಗಿ ಮತ್ತು ಶಸ್ತ್ರಾಸ್ತ್ರವಿಲ್ಲದೇ ಒಂದೆಡೆ ಸೇರುವುದು
  • ಸಂಘಟನೆ ಮತ್ತು ಒಕ್ಕೂಟಗಳನ್ನು ನಿರ್ಮಿಸಿಕೊಳ್ಳುವುದು
  • ಭಾರತದಾದ್ಯಂತ ಸ್ವತಂತ್ರವಾಗಿ ಓಡಾಡುವುದು
  • ಭಾರತದ ಯಾವುದೇ ಭಾಗದಲ್ಲಿಯೂ ನೆಲೆಸುವುದು.
  • ಆಸ್ತಿಯನ್ನು ಪಡೆಯುವುದು, ಸ್ವಾಧೀನಪಡಿಸಿಕೊಳ್ಳುವುದು ಮತ್ತು ವಿಲೇವಾರಿಗೊಳಿಸುವುದು (20-06-1979ರ 44ನೇ ತಿದ್ದುಪಡಿಯಲ್ಲಿ ಈ ಹಕ್ಕನ್ನು ತೆಗೆದುಹಾಕಲಾಗಿದೆ.)
  • ವೃತ್ತಿ, ಯಾವುದೇ ಉದ್ಯೋಗ, ವ್ಯಾಪಾರ, ವ್ಯವಹಾರವನ್ನು ನಡೆಸುವುದು.

ಸಂವಿಧಾನದ ಈ ಭಾಗವು, ಜನರಿಗೆ ಅನ್ಯಾಯದ ವಿರುದ್ಧ ಹೋರಾಡುವ ಘನತೆ ಮತ್ತು ಶಕ್ತಿಯನ್ನು ನೀಡುತ್ತದೆ. ಜನರ ಸ್ವಾಭಿಮಾನ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆಬಾರದಂತೆ ಸರ್ಕಾರವನ್ನು ನಿಬಂಧಿಸುತ್ತದೆ. ಪ್ರಪಂಚದ ಹಲವು ಸರ್ಕಾರಗಳ ಹಿನ್ನೆಲೆಯಲ್ಲಿ ನೋಡಿದರೆ, ನಾಗರಿಕರ ಘನತೆ, ಸ್ವಾಭಿಮಾನ, ಹಲವು ಸ್ವಾತಂತ್ರ್ಯವನ್ನು ಒದಗಿಸುವಂತಹ ಸಾಂವಿಧಾನಿಕ ನಿಬಂಧನೆಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಜನರನ್ನು ಪಕ್ಷದ ಗುಲಾಮರನ್ನಾಗಿ ಮಾಡಲು ಪ್ರಯತ್ನಿಸಿವೆ. ಸ್ವತಃ ದೇಶವೇ ನಿರ್ದಯ ಸ್ಥಿತಿಗೆ ಬಂದ ಉದಾಹರಣೆಗಳೂ ಇವೆ.

ಕೇಂದ್ರ ಮತ್ತು ಪ್ರಾಂತೀಯ ಸರ್ಕಾರಗಳ ಕಾರ್ಯಾಚರಣಾ ಶೈಲಿಯು ಪ್ರತಿಪಕ್ಷ ಮತ್ತು ಪತ್ರಿಕೋದ್ಯಮ ವರ್ಗದಿಂದ ತೀವ್ರವಾಗಿ ಟೀಕೆಗೆ ಒಳಗಾದ ಕಾರಣ, ವಾಕ್‍ಸ್ವಾತಂತ್ರ್ಯವನ್ನು ನಿಗ್ರಹಿಸಲು ಸರ್ಕಾರ 19ನೇ ಪರಿಚ್ಛೇದವನ್ನು ತಿದ್ದುಪಡಿ ಮಾಡಲು ಬಯಸಿತು. ಜಮೀನ್ದಾರಿ ನಿರ್ಮೂಲನೆ, ರಸ್ತೆಸಾರಿಗೆ ವ್ಯವಸ್ಥೆಯ ರಾಷ್ಟ್ರೀಕರಣ ಮೊದಲಾದವುಗಳಲ್ಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‍ನ ಕೆಲವು ನಿರ್ಧಾರಗಳ ಕಾರಣದಿಂದ ಪ್ರಧಾನಮಂತ್ರಿ ನೆಹರೂ ಅವರು ಬಹಳ ತೊಂದರೆಗೆ ಸಿಲುಕಿದ್ದರು. ಪಕ್ಷದ ಹಲವು ಮುಖಂಡರು ಪ್ರಮುಖವಾಗಿ ಸರ್ದಾರ್ ಪಟೇಲ್ ಅವರು ನೆಹರೂ ಅವರಿಗೆ ಇಂತಹ ತಿದ್ದುಪಡಿಯನ್ನು ತರುವುದು ಸರಿಯಲ್ಲ ಮತ್ತು ಸಕಾಲವೂ ಅಲ್ಲ ಎಂದು ತಿಳಿಹೇಳಿದರು. ಅದಲ್ಲದೆ, ಸಂವಿಧಾನವನ್ನು ಅಂಗೀಕರಿಸಿದ ಸಂಸತ್ತು ತಾತ್ಕಾಲಿಕವಾದದ್ದು ಮತ್ತು ಬಹುಶಃ ಅದನ್ನು ತಿದ್ದುಪಡಿ ಮಾಡುವ ಯಾವುದೇ ಹಕ್ಕು ಅಥವಾ ಶಕ್ತಿಯನ್ನು ಸಂಸತ್ತು ಹೊಂದಿರಲಿಲ್ಲ. ಹೊಸ ತಿದ್ದುಪಡಿಗಳನ್ನು ಜಾರಿಗೆ ತರಲು ಹೊಸ ಸಂಸತ್ತಿಗಾಗಿ ಕಾಯಬೇಕು ಎನ್ನಲಾಗಿತ್ತು.  

ಆದರೆ ಕೆಲವು ತಿಂಗಳುಗಳ ಬಳಿಕ, ಫೆಬ್ರವರಿ 1951ರಲ್ಲಿ, ಸರ್ಕಾರವು ಪತ್ರಿಕಾಗೋಷ್ಠಿಯಲ್ಲಿ ಮತ್ತು ವಿರೋಧಪಕ್ಷದ ನಾಯಕರ ಟೀಕೆಯನ್ನು ಹೇಗೆ ವ್ಯವಹರಿಸುವುದು ಎನ್ನುವುದರ ಕುರಿತಾಗಿ ನೋಡಿಕೊಳ್ಳಲು ಒಂದು ಕ್ಯಾಬಿನೆಟ್ ಸಮಿತಿಯನ್ನು ರಚಿಸಿತು. ನೆಹರೂ ಅವರೊಂದಿಗೆ ಸಿ. ರಾಜಗೋಪಾಲಾಚಾರಿ, ಮೌಲಾನಾ ಆಜಾದ್, ಜಗಜೀವನ ರಾಮ್, ಕೆ.ಎಂ. ಮುನ್ಶಿ, ಬಿ.ಆರ್. ಅಂಬೇಡ್ಕರ್ ಹಾಗೂ ಇನ್ನಿತರರು ಸಮಿತಿಯಲ್ಲಿ ಇದ್ದರು. ತಮ್ಮ ಸಹೋದ್ಯೋಗಿಗಳಿಂದಲೂ ಸಲಹೆಗಳನ್ನು ನೆಹರೂ ಅವರು ಆಹ್ವಾನಿಸಿದರು. ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಜಿ.ಬಿ. ಪಂತ್ ಅವರು ಪತ್ರದಲ್ಲಿ ಹೀಗೆ ಬರೆಯುತ್ತಾರೆ: ‘ವಾಕ್‍ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ದುರುದ್ದೇಶಪೂರಿತವಾದ ಅಸಭ್ಯ ದಾಳಿಗಳನ್ನು ಮಾಡಲಾಗುತ್ತಿದೆ.’   

ಭೂಸುಧಾರಣೆ ಸೇರಿದಂತೆ ಹಲವು ಆರ್ಥಿಕ ಸುಧಾರಣೆಗಳಲ್ಲಿ ಪಾಲ್ಗೊಳ್ಳುವ ಸರ್ಕಾರದ ಪ್ರಯತ್ನಗಳಿಗೆ ಹೈಕೊರ್ಟ್ ಮತ್ತು ಸುಪ್ರೀಂಕೋರ್ಟ್‍ನಿಂದ ಹಲವು ಕಾನೂನುಗಳ ವಿರುದ್ಧವಾಗಿ ನಿರ್ಧಾರಗಳು ಬರುವುದರೊಂದಿಗೆ ಹಿನ್ನಡೆ ಉಂಟಾಯಿತು. ದುರದೃಷ್ಟವಶಾತ್, ಅಂತಹ ಕೆಲವು ಕಾನೂನುಗಳು ಜನರ ಮೂಲಭೂತ ಹಕ್ಕುಗಳನ್ನು ಮೀರಿವೆ. ಸಮಂಜಸವಾದ ನಿರ್ಬಂಧಗಳನ್ನು (reasonable restrictions)  ವಿಧಿ – 19ರಲ್ಲಿ ಹೇರಬೇಕೆಂದು ಕಾಂಗ್ರೆಸ್ಸಿನ ಹಲವು ನಾಯಕರು ಮತ್ತು ಹಲವು ಮುಖ್ಯಮಂತ್ರಿಗಳು ನೆಹರೂ ಅವರಲ್ಲಿ ವಿನಂತಿಸಿದರು. ನಾಯಕರ ಸಲಹೆಯಂತೆ ನೆಹರೂ ಅವರು ಕಾನೂನು ಸಚಿವರಾದ ಡಾ. ಅಂಬೇಡ್ಕರ್ ಅವರಲ್ಲಿ ಸಂವಿಧಾನ ತಿದ್ದುಪಡಿಗೆ ಕರಡುಪ್ರತಿಯನ್ನು ಸಿದ್ಧಪಡಿಸುವಂತೆ ಹೇಳಿದರು. ಈ ರೀತಿ ಮಾಡುವುದರಿಂದ ಸಂವಿಧಾನದ ಮೂಲಭೂತ ಹಕ್ಕುಗಳ ಪತ್ರ ಮತ್ತು ಆತ್ಮಕ್ಕೆ ವಿರುದ್ಧವಾಗುವುದು ಎಂದು ಅಂಬೇಡ್ಕರ್ ಎಚ್ಚರಿಕೆಯನ್ನು ನೀಡಿದರು. ಆದರೆ ನೆಹರೂ ಅವರು, ಅದೇ ದಿನ ಸಂಸತ್ತಿನ ಮುಂದೆ ತಿದ್ದುಪಡಿ ಕರಡು ಮಸೂದೆಯನ್ನು ಸಿದ್ಧಪಡಿಸಬೇಕು ಎಂದು ಒತ್ತಾಯಿಸಿದರು.

ತಿದ್ದುಪಡಿ ಕರಡು ಮಸೂದೆ ಸಿದ್ಧವಾದ ಬಳಿಕ ಅದನ್ನು ರಾಷ್ಟ್ರಪತಿಯಾದ ಡಾ. ರಾಜೇಂದ್ರ ಪ್ರಸಾದ್ ಅವರ ಅವಗಾಹನೆಗಾಗಿ ಕಳುಹಿಸಲಾಯಿತು. ರಾಷ್ಟ್ರಪತಿಗಳು ಈ ಮಸೂದೆಗೆ ತೀವ್ರವಾದ ಆಕ್ಷೇಪವನ್ನು ವ್ಯಕ್ತಪಡಿಸಿದರು. ‘ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‍ನ ಹಲವು ನಿರ್ಧಾರಗಳ ಬಗೆಗೆ ತಿಳಿದುಕೊಂಡಿದ್ದ ರಾಷ್ಟ್ರಪತಿಗಳು, ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡುವಂತಹ ಸ್ಥಿತಿ ನಿರ್ಮಾಣವಾಗಿಲ್ಲ ಮತ್ತು ಸಂವಿಧಾನದ ಅನುಗುಣವಾಗಿ ಕಾನೂನನ್ನು ಅಡ್ಡಿಪಡಿಸಿದ ನಿಬಂಧನೆಗಳನ್ನು ತರಲು ಅಸಾಧ್ಯವಾದರೆ ಮಾತ್ರ ತಿದ್ದುಪಡಿಗಳನ್ನು ತರಬೇಕು. ಇದಲ್ಲದೆ, ಅಂತಹ ತಿದ್ದುಪಡಿಯನ್ನು ಯಾವುದೇ ತರಾತುರಿಯಲ್ಲಿ ತರಬಾರದು. ವ್ಯಾಪಕ ಚರ್ಚೆ ಮತ್ತು ಸಮಾಲೋಚನೆಗೆ ಸಾಕಷ್ಟು ಸಮಯವನ್ನು ನೀಡಿದ ಬಳಿಕ ಇಂತಹ ಪ್ರಮುಖ ಬಿಲ್ ಜಾರಿಗೆ ಬರಬೇಕು’ ಎಂದರು.  

ಡಾ. ರಾಜೇಂದ್ರ ಪ್ರಸಾದ್ ಮತ್ತು ಸರ್ದಾರ್ ಪಟೇಲ್ ಅವರ ಸಲಹೆಯನ್ನು ಪಂಡಿತ್ ನೆಹರೂ ಅವರು ಸಂಪೂರ್ಣವಾಗಿ ಕಡೆಗಣಿಸಿದರು. ಮೇ 12, 1951ರಂದು ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆಯನ್ನು ಇಡಲಾಯಿತು. ಎಚ್.ವಿ. ಕಾಮತ್, ಹೃದಯ್‍ನಾಥ್ ಕುಂಜ್ರೂ, ಶ್ಯಾಮ್‍ಪ್ರಸಾದ್ ಮುಖರ್ಜಿ ಮೊದಲಾದ ನಾಯಕರು ಇದು ವಿಧಿ-19ರ ತಿದ್ದುಪಡಿಯಲ್ಲ, ಬದಲಾಗಿ ಅದನ್ನು ಸಂಪೂರ್ಣವಾಗಿ ವಜಾಮಾಡುವುದೇ ಆಗಿದೆ ಎಂದು ಏಕಧ್ವನಿಯಲ್ಲಿ ಹೇಳಿದರು. ಮಸೂದೆಗೆ ತೀವ್ರವಾದ ವಿರೋಧ ವ್ಯಕ್ತವಾದ ಕಾರಣ ನೆಹರೂ ಅವರು ಸಂಸತ್ತಿನ ಸಮಿತಿಗೆ ಉಲ್ಲೇಖಿಸಲು ಒಪ್ಪಿಕೊಂಡರು. ಬಹಳ ತಿದ್ದುಪಡಿಗಳ ಬಳಿಕ, ಮಸೂದೆಯು ವಿಧಿ – 19ರ ತಿದ್ದುಪಡಿಯ ಬದಲಾಗಿ The Press (Objectionable) Act’ ಆಗಿ ಅಂಗೀಕರಿಸಲಾಯಿತು.

ಮೊದಲೇ ಹೇಳಿದಂತೆ, ಸ್ವಾತಂತ್ರ್ಯಾನಂತರ ಭಾರತ ಸರ್ಕಾರ ಮತ್ತು ರಾಜ್ಯಸರ್ಕಾರಗಳು ಕೃಷಿ ಸುಧಾರಣೆಗಳನ್ನು ಅನುಷ್ಠಾನಗೊಳಿಸಲು ಆರಂಭಿಸಿದವು. ಬಾಡಿಗೆದಾರರಿಗೆ ಮಾಲೀಕತ್ವದ ಹಕ್ಕನ್ನು ನೀಡದೆ, ಜಮೀನ್ದಾರರಿಗೆ ಪರಿಹಾರವನ್ನು ಸರಿಯಾಗಿ ಕೊಡದೆ ಭಾರೀ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡಿತು. ಸರ್ಕಾರದ ಈ ಕ್ರಮವನ್ನು ವಿಧಿ 14, 19, 31ರ ಪ್ರಕಾರ ಮೂಲಭೂತ ಹಕ್ಕುಗಳನ್ನು (ಸ್ವತ್ತನ್ನು ಹೊಂದುವ ಹಕ್ಕು) ಸರ್ಕಾರ ಉಲ್ಲಂಘಿಸಿದೆ ಎಂದು ಹಲವು ಹೈಕೋರ್ಟ್‍ಗಳಲ್ಲಿ ಪ್ರಶ್ನಿಸಲಾಯಿತು. ಬಿಹಾರ್ ಭೂ ಸುಧಾರಣೆ ಆಕ್ಟ್, 1950 – ಪಾಟ್ನಾ ಹೈಕೋರ್ಟ್‍ನ ಮೂಲಕ ಪ್ರಶ್ನಿಸಲ್ಪಟ್ಟ ಮೊದಲ ಕೃಷಿ ಸುಧಾರಣೆ ಆಕ್ಟ್ ಆಗಿದೆ. ಅರ್ಜಿಯನ್ನು ಸ್ವೀಕರಿಸುವುದರೊಂದಿಗೆ ಭೂಸ್ವಾಧೀನದ ಕಾನೂನು ನಿರರ್ಥಕ ಎಂದು ಘೋಷಿಸಿತು. ಈ ಸಮಸ್ಯೆಯಿಂದ ಹೊರಬರಲು, ಮೂಲಭೂತ ಹಕ್ಕುಗಳ ನಿಬಂಧನೆಗಳ ಕಾನೂನುಗಳಿಗೆ ಸಂಬಂಧಿಸಿ ಭವಿಷ್ಯದಲ್ಲಿ ಕೋರ್ಟ್ ಮಧ್ಯಪ್ರವೇಶಿಸದಂತೆ, ವಿಧಿ 31ಎ, 31ಬಿ ಮತ್ತು ಶೆಡ್ಯೂಲ್ 9 ಅನ್ನು ಸಂವಿಧಾನದಲ್ಲಿ ಸೇರಿಸಲಾಯಿತು. ಇನ್ನೂ ಹಲವು ವಿಧಿಗಳನ್ನು ತಿದ್ದುಪಡಿ ಮಾಡಲಾಯಿತು. 16 ಜೂನೆ 1951 ರಲ್ಲಿ ಜಾರಿಗೆ ಬರುವ ಮೂಲಕ ಜಾರಿಗೆ ಬಂದ ಮೊದಲ ತಿದ್ದುಪಡಿ ಇದಾಗಿದೆ.  

ತರುವಾಯ, ವಿಧಿ – 368ರ ಅಡಿಯಲ್ಲಿ ಸಂಸತ್ತಿಗೆ ಮೂಲಭೂತ ಹಕ್ಕಿಗೆ ಸಂಬಂಧಿಸಿ ಯಾವುದೇ ತಿದ್ದುಪಡಿಯನ್ನು ಮಾಡುವ ಅಧಿಕಾರದ ಬಗೆಗೆ ಪ್ರಶ್ನಿಸಲಾಯಿತು. ನೂತನವಾಗಿ ಸೇರಿಸಲಾಗಿದ್ದ ವಿಧಿ 31ಬಿ ಯು ವಿಧಿ 13ರ ಅಡಿಯಲ್ಲಿ ಬರುವ ಹಕ್ಕುಗಳನ್ನು ಮೊಟಕುಗೊಳಿಸಿದ್ದರಿಂದ, ಇದರ ಮಾನ್ಯತೆಯ ಬಗ್ಗೆ ಸವಾಲು ಎದುರಾಯಿತು. ವಿವಿಧ ತಾಂತ್ರಿಕ ಅಧಾರಗಳ ಮೂಲಕ ಅರ್ಜಿಗಳನ್ನು ತಿರಸ್ಕರಿಸಲಾಯಿತು. ತನ್ಮೂಲಕ ತಿದ್ದುಪಡಿಗಳನ್ನು ಮಾನ್ಯಗೊಳಿಸಲಾಯಿತು. ಒಂದು ರೀತಿಯಲ್ಲಿ, ಉಚ್ಚನ್ಯಾಯಾಲಯವು ಸರ್ಕಾರದ ಕಾರ್ಯಗಳನ್ನು ಮೌಲ್ಯೀಕರಿಸಿದೆ.

ವಿಧಿ 13 ಈ ರೀತಿ ಹೇಳುತ್ತದೆ:

ಮೂಲಭೂತ ಹಕ್ಕುಗಳ ಅವಹೇಳನಕ್ಕೆ ಅಸಮಂಜಸವಾದ ಕಾನೂನುಗಳು:

  1. ಈ ಸಂವಿಧಾನ ಜಾರಿಗೆ ಬರುವ ಮೊದಲೇ, ಭಾರತದಲ್ಲಿ ಜಾರಿಯಲ್ಲಿದ್ದ ಕಾನೂನುಗಳು, ಈಗಿನ ನಿಬಂಧನೆಗಳಿಗೆ ಸಂಬಂಧಿಸಿ ಅಸಮಂಜಸವಾಗುವುದರಿಂದ, ಅಂತಹ ಅಸಮಂಜಸದ ಮಟ್ಟಕ್ಕೆ ನಿರರ್ಥಕವಾಗಿದೆ.
  2. ರಾಜ್ಯವು, ಈ ಭಾಗದಿಂದ ನೀಡಲಾದ ಹಕ್ಕುಗಳನ್ನು ಮೊಟಕುಗೊಳಿಸುವಂತಹ ಮತ್ತು ಈ ಅಧಿನಿಯಮಕ್ಕೆ ವಿರೋಧವಾದ ಯಾವುದೇ ಕಾನೂನನ್ನು ಮಾಡುವಂತಿಲ್ಲ. ಈ ಷರತ್ತಿನ ವಿರುದ್ಧವಾಗಿ ಮಾಡಿದ ಯಾವುದೇ ಕಾನೂನು ಅನೂರ್ಜಿತವಾಗುತ್ತದೆ.
  3. ಈ ಪರಿಚ್ಛೇದದಲ್ಲಿ, ವಿಧಿ, ಆದೇಶ, ಬೈ-ಲಾ, ನಿಯಮ, ನಿಯಂತ್ರಣ, ಪ್ರಕಟಣೆ, ಸಂಪ್ರದಾಯ ಅಥವಾ ಭಾರತದ ಪ್ರಾಂತ್ಯದಲ್ಲಿ ಕಾನೂನಿನ ಬಲವನ್ನು ಹೊಂದಿರುವ ಬಳಕೆಗಳು – ಇವೆಲ್ಲವೂ ಕಾನೂನಿಗೆ ಒಳಪಡುತ್ತವೆ.

ಜಾರಿಯಲ್ಲಿರುವ ಕಾನೂನಿನಡಿಯಲ್ಲಿ – ಶಾಸಕಾಂಗದಿಂದ ಜಾರಿಗೆ ತರಲ್ಪಟ್ಟ ಕಾನೂನು, ಸಂವಿಧಾನ ರಚನೆಯ ಮೊದಲು ಸಮರ್ಥ ಸಂಸ್ಥೆಯಿಂದ ಭಾರತದ ಒಳಗೆ ರಚನೆಯಾದ ಕಾನೂನು ಹಾಗೂ ಹಿಂದೆಂದೂ  ರದ್ದುಗೊಳಿಸದೇ ಇರುವ ಕಾನೂನು ಬರುತ್ತವೆ; ಹಾಗಿದ್ದರೂ ಇಂತಹ ಕಾನೂನು ಅಥವಾ ಅದರ ಯಾವುದೇ ನಿರ್ದಿಷ್ಟ ಭಾಗವು ಕೆಲವು ಪ್ರದೇಶಗಳಲ್ಲಿ ಚಾಲ್ತಿಯಲ್ಲಿ ಇರುವುದಿಲ್ಲ.

  1. ವಿಧಿ 368 – ಸಮಾನತೆಯ ಹಕ್ಕಿನ (1971ರಲ್ಲಿ ಮಾಡಿದ 24ನೇ ತಿದ್ದುಪಡಿ ಮೂಲಕ ಸಂವಿಧಾನದಲ್ಲಿ ಸೇರಿಸಲಾಯಿತು) ಅಡಿಯಲ್ಲಿ ಮಾಡಿರುವ ಸಂವಿಧಾನದ ಯಾವುದೇ ತಿದ್ದುಪಡಿಗಳಿಗೆ ಈ ವಿಧಿಯು ಅನ್ವಯಿಸುವುದಿಲ್ಲ.

ವಿಧಿ 13 ಹೇಳುವ ಪ್ರಮುಖ ಅಂಶವೆಂದರೆ – ಮೂಲಭೂತ ಹಕ್ಕುಗಳನ್ನು ಸರ್ಕಾರವು ಕಾನೂನಿನ ಮೂಲಕ ಅಥವಾ ಆಡಳಿತಾತ್ಮಕ ಪ್ರಕ್ರಿಯೆಯಿಂದ ಉಲ್ಲಂಘಿಸಲಾಗದು.

17ನೇ ತಿದ್ದುಪಡಿ ಅಂಗೀಕರಿಸಲ್ಪಟ್ಟು 1964 ಜೂನ್ 20ರಂದು ಜಾರಿಗೆ ಬಂದ ಕೂಡಲೇ ಈ ವಿವಾದವು ಸುಪ್ರೀಂ ಕೋರ್ಟ್‍ನ ಅಂಗಳದಲ್ಲಿತ್ತು. ಆಗ ನೆಹರೂ ಅವರ ಮರಣವಾಗಿ ಮೂರು ವಾರಗಳಾಗಿತ್ತಷ್ಟೆ. ಇದರ ಪ್ರಕಾರ ವಿಧಿ 31ರನ್ನು ತಿದ್ದುಪಡಿ ಮಾಡುವ ಮೂಲಕ ಮೂಲಭೂತಹಕ್ಕುಗಳನ್ನು ಮೊಟಕುಗೊಳಿಸಲಾಯಿತು; ನ್ಯಾಯಾಲಯಗಳ ಪರಿಶೀಲನೆಗೆ ಒಳಗಾಗದಂತೆ 9ನೇ ಶೆಡ್ಯೂಲ್‍ನಲ್ಲಿ 46 ಬಿಲ್‍ಗಳನ್ನು ಕೂಡ ಸೇರಿಸಲಾಯಿತು. ಭೂಸುಧಾರಣೆಗೆ ಸಂಬಂಧಿಸಿ ಈ ತಿದ್ದುಪಡಿಗಳು ಮಾಡಲ್ಪಟ್ಟವು. 17ನೇ ತಿದ್ದುಪಡಿಯನ್ನು ಪಂಜಾಬ್ ರಾಜ್ಯದ ಗೋಲಕ್‍ನಾಥ್ ವಿ ಎಂಬ ಜನಪ್ರಿಯ ರಿಟ್ ಮೂಲಕ ಪ್ರಶ್ನಿಸಲಾಯಿತು. ಚೀಫ್ ಜಸ್ಟಿಸ್ ಕೆ. ಸುಬ್ಬರಾವ್ ಅವರ ನೇತೃತ್ವದಲ್ಲಿ 11 ನ್ಯಾಯಾಧೀಶರನ್ನು ಒಳಗೊಂಡ ಈ ಪ್ರಕರಣವನ್ನು ಪರಿಶೀಲಿಸಿದ್ದರು. ವಿಧಿ 368ರ ಅಡಿಯಲ್ಲಿ ಸಂವಿಧಾನದ 3ನೇ ಭಾಗವೂ ಸೇರಿದಂತೆ ಸಂಸತ್ತಿಗೆ ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡಲು ಮತ್ತು ಈ ಭಾಗದ ಯಾವುದೇ ವಿಚಾರವನ್ನು ತೆಗೆದುಹಾಕಲು ಹಕ್ಕು ಇದೆ ಎಂದು ಸರ್ಕಾರಿ ಪರ ವಕೀಲ ವಾದಿಸಿದರು.

6:5ರ ಬಹುಮತ ಮೂಲಕ ಈ ಪ್ರಕರಣವನ್ನು ನಿರ್ಧರಿಸಲಾಯಿತು. ಕಾಮೇಶ್ವರ ಪ್ರಸಾದ್, ಶಂಕರಿ ಪ್ರಸಾದ್, ಸಜ್ಜನ್ ಸಿಂಗ್ ಮೊದಲಾದ ಪ್ರಕರಣಗಳಲ್ಲಿ ನೀಡಿದ ತೀರ್ಪನ್ನು ಬಹುಮತದ ನಿರ್ಧಾರವು ತಳ್ಳಿಹಾಕಿತು. ವಿಧಿ 31ರ ತಿದ್ದುಪಡಿಯನ್ನು ಈ ತೀರ್ಪು ಅನೂರ್ಜಿತಗೊಳಿಸಿತು. ಬಹುಮತದ ತೀರ್ಪು –  ‘ವಿಧಿ 13(2) ರಾಜ್ಯವು ಈ ಭಾಗದಲ್ಲಿ ನೀಡಿರುವ ಯಾವುದೇ ಹಕ್ಕುಗಳನ್ನು ಮೊಟಕುಗೊಳಿಸುವಂತಹ ಕಾನೂನನ್ನು ತರುವಂತಿಲ್ಲ ಮತ್ತು ಇದಕ್ಕೆ ವಿರುದ್ಧವಾಗಿ ಮಾಡಿದ ಯಾವುದೇ ಕಾನೂನು ಅನೂರ್ಜಿತವಾಗುತ್ತದೆ’ ಎಂದಿತು. ಆದ್ದರಿಂದ, ಇದಕ್ಕೆ ವಿರುದ್ಧವಾಗಿ ಅಥವಾ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸ್ಸ ಎಲ್ಲಾ ಸಾಂವಿಧಾನಿಕ ತಿದ್ದುಪಡಿಗಳು ಅನೂರ್ಜಿತವೆಂದು ಘೋಷಿಸಲಾಯಿತು. ಈ ತೀರ್ಪು ಯಾವುದೇ ಸಂದರ್ಭದಲ್ಲೂ ಮೂಲಭೂತ ಹಕ್ಕುಗಳಲ್ಲಿ ಯಾವುದೇ ತಿದ್ದುಪಡಿಗಳನ್ನು ಮಾಡಬಾರದು ಮತ್ತು ಸಂವಿಧಾನದ ಮೂರನೇ ಭಾಗದಲ್ಲಿ ಯಾವುದೇ ತಿದ್ದುಪಡಿಗಳನ್ನು ಮಾಡುವುದನ್ನು ನಿಷೇಧಿಸಿತು. ಈ ತೀರ್ಪು ದೃಢೀಕರಿಸಿದ ಮತ್ತೊಂದು ವಿಚಾರವೆಂದರೆ ಸಂವಿಧಾನವನ್ನು ತಿದ್ದುಪಡಿ ಮಾಡುವಲ್ಲಿ ಸಂಸತ್ತಿಗೆ ಅನಿಯಮಿತ ಅಧಿಕಾರವಿಲ್ಲ; ಬದಲಾಗಿ ಅದು ಬಹಳ ಸೀಮಿತವಾಗಿದೆ ಎಂದು.

ಮಧ್ಯಂತರ

ಗೋಲಕ್ ನಾಥ್ ಮತ್ತು ಕೇಶವಾನಂದ ಭಾರತಿ ಪ್ರಕರಣಗಳ ನಡುವೆ ಭಾರತೀಯ ನ್ಯಾಯಶಾಸ್ತ್ರದ ಇತಿಹಾಸದಲ್ಲಿ ಹೆಗ್ಗುರುತಾದ ಎರಡು ಪ್ರಮುಖವಾದ ಪ್ರಕರಣದ ಕುರಿತಾಗಿ ಚರ್ಚಿಸಬೇಕು.

ಶ್ರೀಮತಿ ಗಾಂಧಿ ಅವರು ತನ್ನ ಸಮಾಜವಾದಿ ನೀತಿಗಳನ್ನು ಅನುಸರಿಸಲು, ಆರ್ಥಿಕತೆಯ ಕ್ಷೇತ್ರದಲ್ಲಿ ಹಲವಾರು  ಜನಪ್ರಿಯ ಕ್ರಮಗಳನ್ನು ಕೈಗೊಂಡಿದ್ದು ತಿಳಿದೇ ಇದೆ. ಸರ್ಕಾರದ ವಿಲೇವಾರಿಗಳಲ್ಲಿ ಹೆಚ್ಚಿನ ಸಂಪನ್ಮೂಲಗಳನ್ನು ಹೊಂದುವಲ್ಲಿ, 14 ಖಾಸಗಿ ಬ್ಯಾಂಕ್‍ಗಳನ್ನು ರಾಷ್ಟ್ರೀಕೃತಗೊಳಿಸಿದರು. ಇವುಗಳ ಬ್ಯಾಂಕ್ ಠೇವಣಿ ಒಟ್ಟು ಬ್ಯಾಂಕ್ ಠೇವಣಿಯ ಸುಮಾರು 85 ಪ್ರತಿಶತವಾಗಿತ್ತು. ಇದಕ್ಕಾಗಿ, 1969 ಜುಲೈ 19ರ ಮಧ್ಯರಾತ್ರಿಯಿಂದ ಅನ್ವಯವಾಗುವಂತೆ ಸರ್ಕಾರವು ಆರ್ಡಿನೆನ್ಸ್ ಅನ್ನು ಹೊರಡಿಸಿತು; ಆದರೆ ಈ ಆರ್ಡಿನೆನ್ಸ್ ಅನ್ನು ಬದಲಾಯಿಸಲು ಸಂಸತ್ತು ಮೂರು ದಿನಗಳ ಒಳಗೆ ಆಕ್ಟ್ ಒಂದನ್ನು ಜಾರಿಗೊಳಿಸಿತು.  

1969 ಜುಲೈ 21ರಂದು ಶ್ರೀ ರುಸ್ತುಂ ಕಾವಾಸ್ಜೀ ಕೂಪರ್ ಅವರು ಈ ಆಕ್ಟ್ ಅನ್ನು ಪ್ರಶ್ನಿಸಿ ರಿಟ್ ಅರ್ಜಿಯನ್ನು ಸಲ್ಲಿಸಿದರು. ಈ ಪ್ರಕರಣವು ಬ್ಯಾಂಕ್ ರಾಷ್ಟ್ರೀಕರಣ ಪ್ರಕರಣ ಎಂದೇ ಪ್ರಸಿದ್ಧವಾಗಿದೆ. ಈ ವಿಚಾರದ ಮಹತ್ತ್ವದ ದೃಷ್ಟಿಯಿಂದ, 11 ಜನರ ನ್ಯಾಯಪೀಠವು ಈ ಪ್ರಕರಣವನ್ನು ಆಲಿಸಿತು. ಅರ್ಜಿ ಸಲ್ಲಿಸಿದವರ ಪರವಾಗಿ ನಾನಿ ಎ. ಪಾಲಖಿವಾಲ, ಎಂ.ಸಿ. ಛಾಗ್ಲ (ಬಾಂಬೇ ಹೈಕೋರ್ಟ್‍ನ ನಿವೃತ್ತ ಚೀಫ್ ಜಸ್ಟಿಸ್, ಶ್ರೀಮತಿ ಗಾಂಧಿ ಅವರ ಕ್ಯಾಬಿನೆಟ್‍ನಲ್ಲಿ ವಿದೇಶಾಂಗ ಮಂತ್ರಿ ಆಗಿದ್ದವರು), ಎ.ಜೆ. ರಾಜ, ಎನ್.ಎನ್, ಪಾಲಖಿವಾಲ, ಆರ್.ಎನ್. ಬ್ಯಾನರ್ಜಿ ವಕೀಲರಾಗಿದ್ದರು. ಇನ್ನೊಂದು ಕಡೆಯಿಂದ, ಹೆಸರಾಂತ ಅಟಾರ್ನಿ ಜನರಲ್ ನಿರೇನ್ ಡಿ, ಸಾಲಿಸಿಟರ್ ಜನರಲ್ ಜಗದೀಶ್ ಸ್ವರೂಪ್, ನಿವೃತ್ತ ಅಟಾರ್ನಿ ಜನರಲ್ ಎಂ.ಸಿ. ಸೆತ್ಲ್ವಾಡ್ (ಮಿಸ್ಟರ್.ಲಾ ಎಂದೇ ಪ್ರಸಿದ್ಧಿ ಹೊಂದಿದವರು), ನಿವೃತ್ತ ಅಟಾರ್ನಿ ಜನರಲ್ ಸಿ.ಕೆ. ದಫ್ತರಿ, ಆರ್.ಎಚ್. ಧೇಬರ್ ವಕೀಲರಾಗಿದ್ದರು. ಇದರಿಂದಲೇ ಈ ಪ್ರಕರಣದ ಮಹತ್ತ್ವವನ್ನು ಅರಿತುಕೊಳ್ಳಬಹುದು. ಆರ್ಡಿನೆನ್ಸ್‍ನ ಸಿಂಧುತ್ವದ ಬಗ್ಗ್ ಅರ್ಜಿದಾರರು ಪ್ರಶ್ನಿಸಿದ್ದರು ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯ ಕುರಿತಾಗಿ ವಾದಿಸಿದರು. ವಿಧಿ 31(2)ರ ಪ್ರಕಾರ ಸಂವಿಧಾನವು ಪರಿಹಾರದ ಹಕ್ಕನ್ನು ನೀಡುತ್ತದೆ; ಇದರ ಪ್ರಕಾರ ಸ್ವಾಧೀನಪಡಿಸಿಕೊಂಡ ಭೂಮಿಗೆ ಸಮಾನವಾದ ಪರಿಹಾರ ಹಣವನ್ನು ನೀಡಬೇಕು ಎಂದು ವಾದಿಸಿದರು.

ಈ ಪ್ರಕರಣ 10:1 ರ ಬಹುಮತದಲ್ಲಿ ನಿರ್ಧಾರಿತವಾಯಿತು. 11 ಜನ ನ್ಯಾಯಾಧೀಶರಲ್ಲಿ ಎ.ಎನ್. ರಾಯ್ ಮಾತ್ರ ಅಸಮ್ಮತಿ ನೀಡಿದರು. ಬಹುಮತದ ಈ ತೀರ್ಪಿನಲ್ಲಿ, ನ್ಯಾಯಾಲಯವು ಸರ್ಕಾರದ ಶಾಸಕಾಂಗದ ಅಧಿಕಾರದಲ್ಲಿ ಆರ್ಡಿನೆನ್ಸ್-ಆಕ್ಟ್ ಅನ್ನು ಮಾನ್ಯಮಾಡಿತು. ಬ್ಯಾಂಕ್‍ಗಳ ರಾಷ್ಟ್ರೀಕರಣವನ್ನು ಹಿಂತೆಗೆದುಕೊಳ್ಳಲಿಲ್ಲ ಬದಲಾಗಿ ಪರಿಹಾರವನ್ನು ಹೆಚ್ಚಿಸಲಾಯಿತು.

ರಾಜಮನೆತನಗಳಿಗೆ ಅನ್ಯಾಯ

ಇಲ್ಲಿ ಚರ್ಚಿಸಬೇಕಾದ ಇನ್ನೊಂದು ಪ್ರಕರಣವೆಂದರೆ, ಹಿಂದಿನ ಸ್ವತಂತ್ರ ರಾಜ್ಯಗಳ ಮಾಜಿ ಆಡಳಿತಗಾರರಿಗೆ Abolition of Privy Purses. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿ, ಬ್ರಿಟಿಷರಿಂದ ಆಳಲ್ಪಡುತ್ತಿದ್ದ ಪ್ರಾಂತಗಳು, ಮಹಾರಾಜ, ನವಾಬ, ನಿಜಾಮರಿಂದ ಆಳಲ್ಪಡುತ್ತಿದ್ದ 563 ಸ್ವತಂತ್ರ ರಾಜ್ಯಗಳನ್ನು ಭಾರತ ಒಳಗೊಂಡಿತ್ತು. ಈ ಎಲ್ಲಾ ಆಡಳಿತಗಾರರು ತಮ್ಮ ಸ್ವತಂತ್ರ ರಾಜ್ಯಗಳನ್ನು ಭಾರತದ ಜೊತೆ ವಿಲೀನವಾಗಿಸಲು ಸರ್ದಾರ್ ಪಟೇಲ್ ಅವರ ರಾಜತಾಂತ್ರಿಕ ಕೌಶಲ್ಯ ಮತ್ತು ಅವರ ಬಲಗೈಯಂತಿದ್ದ ವಿ.ಪಿ. ಮೆನನ್ ಅವರೇ ಕಾರಣ. ಅವರ ಗೌರವಾದರಗಳನ್ನು ಕಾಪಿಡುವುದು ಮಾತ್ರವಲ್ಲದೆ ಆರ್ಥಿಕ ಪಿಂಚಣಿಯನ್ನು ನೀಡುವುದಾಗಿ ಪಟೇಲ್ ಅವರು ಮಾತುಕೊಟ್ಟಿದ್ದರು. payment of Privy Purses ಮತ್ತು ವೈಯಕ್ತಿಕ ಹಕ್ಕುಗಳು, ಸವಲತ್ತುಗಳು ಮತ್ತು ಆಡಳಿತಗಾರರ ಗೌರವವನ್ನು ಕಾಪಾಡುವುದನ್ನು ಖಾತರಿಪಡಿಸಲು ಪಟೇಲ್ ಅವರು ಸಂವಿಧಾನದಲ್ಲಿ ವಿಧಿ 291, 362ರ ಮೂಲಕ ಇವುಗಳನ್ನು ಸೇರಿಸಿದರು. ಈ ಮೊತ್ತವು ಹೈದರಾಬಾದ್‍ನ ನಿಜಾಮನಿಗೆ ವರ್ಷಕ್ಕೆ 43 ಲಕ್ಷ ರೂ. ಆಗಿದ್ದರೆ, ಖಾವೋಡಿಯಾದ ಆಳ್ವಿಕೆ ಮಾಡುತ್ತಿದ್ದವನಿಗೆ ರೂ. 192 ಆಗಿತ್ತು. 563 ಆಡಳಿತಗಾರರಲ್ಲಿ 398 ಆಡಳಿತಗಾರರು ವರ್ಷಕ್ಕೆ ಐವತ್ತು ಸಾವಿರಕ್ಕಿಂತಲೂ ಕಡಿಮೆ ಪಿಂಚಣಿ ಪಡೆಯುತ್ತಿದ್ದರು. ಇದಕ್ಕಾಗಿ ಖಜಾನೆಯ ಒಟ್ಟು ಹೊರೆ 1947ರಲ್ಲಿ ಆರು ಕೋಟಿ ರೂಪಾಯಿಯಾಗಿತ್ತು; ಕ್ರಮೇಣವಾಗಿ ಇಳಿಸುತ್ತಾ ಬಂದು 1970ರಲ್ಲಿ  4 ಕೋಟಿಗೆ ಬಂದು ನಿಂತಿತ್ತು.

1967 ಜೂನ್ 25ರಂದು All India Congress  ಕಮಿಟಿಯು Privy Purses  ಅನ್ನು ನಿರ್ಮೂಲನೆಗೊಳಿಸಲು ಒಂದು ನಿರ್ಣಯವನ್ನು ಅಂಗೀಕರಿಸಿತು. 24ನೇ ತಿದ್ದುಪಡಿಯನ್ನು ಲೋಕಸಭೆಯಲ್ಲಿ 1970ರಲ್ಲಿ ಮಂಡಿಸಲಾಯಿತು ಮತ್ತು ಅಂಗೀಕಾರವೂ ಆಯಿತು. ಆದರೆ ರಾಜ್ಯಸಭೆಯಲ್ಲಿ ಈ ತಿದ್ದುಪಡಿ ಅಂಗೀಕಾರವಾಗಲಿಲ್ಲ. ಸಂಸತ್ತಿನಲ್ಲಿ ವಿಫಲವಾದ ಶ್ರೀಮತಿ ಗಾಂಧಿ ಅವರು ಹಿಂದಿನ ಎಲ್ಲಾ ಆಡಳಿತಗಾರರನ್ನು ಡಿರೆಕೊಗ್ನೈಸ್ ಮಾಡುವಂತೆ ರಾಷ್ಟ್ರಪತಿ ಆರ್ಡಿನೆನ್ಸ್ ಅನ್ನು ಹೊಂದಿದ್ದರು. ಮಾಧವ ರಾವ್ ಸಿಂಧಿಯಾ ಅವರು ಸುಪ್ರೀಂ ಕೋರ್ಟ್‍ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದರು. ಚೀಫ್ ಜಸ್ಟಿಸ್ ಎಂ. ಹಿದಾಯತುಲ್ಲಾ ಅವರ ನೇತೃತ್ವದಲ್ಲಿ 11 ನ್ಯಾಯಾಧೀಶರ ಪೀಠವು ಈ ಪ್ರಕರಣವನ್ನು ಆಲಿಸಿತು. 1971 ಡಿಸೆಂಬರ್ 15ರಂದು ತೀರ್ಪು ಹೊರಬಿತ್ತು. ಪಾಲಾಖಿವಾಲಾ ಬಹುಮತದ ಮೂಲಕ ಅರ್ಜಿದಾರರ ಪ್ರಕರಣವನ್ನು ಗೆದ್ದರು. ಬಹುಮತದ 9:2 ತೀರ್ಪಿನ ಮೂಲಕ Privy Purse ಅನ್ನು ರದ್ದುಗೊಳಿಸುವುದು ಸರಿಯಾದ ಕ್ರಮವಲ್ಲ ಎಂದಾಯಿತು. ಎ.ಎನ್. ರಾಯ್ ಮತ್ತು ಜಿ.ಕೆ. ಮಿತ್ತರ್ ಮಾತ್ರ ಈ ತೀರ್ಪಿಗೆ ವಿರುದ್ಧವಾದ ತೀರ್ಪು ನೀಡಿದ್ದರು.

ಹೀಗೆ ಗೋಲಕ್ ನಾಥ್ ಪ್ರಕರಣದ ಸುಪ್ರೀಂ ಕೋರ್ಟ್‍ನ ತೀರ್ಪನ್ನು ರದ್ದುಗೊಳಿಸಲಾಯಿತು. ನಾನಿ ಪಾಲ್ಖಿವಾಲ್ ಅವರು ನಾಗರಿಕರು ಮತ್ತು ಸಂವಿಧಾನವನ್ನು ರಕ್ಷಿಸಲು ಮುಂದಾದರು. ಈ ಸಂಪೂರ್ಣ ಪ್ರಯತ್ನವು ಕೇಶವಾನಂದ ಭಾರತಿ ಮತ್ತು ಕೇರಳ ಸರ್ಕಾರದ ನಡುವೆ ನಡೆದ ಪ್ರಕರಣ ಎಂದೇ ಕರೆಯಲಾಗುತ್ತದೆ.

ಈ ಪ್ರಕರಣದ ಕುರಿತಾಗಿ ಹೇಳಬೇಕಾದ ವಿಷಯಗಳು ಕೆಲವು ಇವೆ. ಸಂವಿಧಾನಾತ್ಮಕ ನ್ಯಾಯಕ್ಕೆ ಕೇಶವಾನಂದ ಭಾರತಿ ಪ್ರಕರಣವು ಅತ್ಯಂತ ದೊಡ್ಡ ಕೊಡುಗೆ ಎಂದೇ ಹೇಳಲಾಗಿದೆ. ಈ ಪ್ರಕರಣವು 13 ಜನ ನ್ಯಾಯಾಧೀಶರ ಪೀಠದಿಂದ ಆಲಿಸಲ್ಪಟ್ಟಿತು. ಈ ಪೀಠವು ಸುಪ್ರೀಂ ಕೋರ್ಟ್ ರಚಿಸಿದ ದೊಡ್ಡ ನ್ಯಾಯಪೀಠ ಮತ್ತು 5 ತಿಂಗಳುಗಳ ಕಾಲ ನಿರಂತರವಾಗಿ (68 ಕೆಲಸದ ದಿನಗಳು) ಈ ಪ್ರಕರಣವನ್ನು ಆಲಿಸಲಾಯಿತು. ನಾನಿ ಪಾಲ್ಖಿವಾಲ ಅವರು ಅರ್ಜಿದಾರರ ಪರವಾಗಿ ವಕಾಲತ್ತು ವಹಿಸಿದ್ದರು.

ಗೋಲಕ್ ನಾಥ್ ಪ್ರಕರಣ ರದ್ದುಗೊಳಿಸಿದ 24, 25ನೇ ತಿದ್ದುಪಡಿಯ ದೃಷ್ಟಿಯಿಂದ 3 ವಿಚಾರವನ್ನು ಕೇಶವಾನಂದ ಭಾರತಿ ಪ್ರಕರಣದಲ್ಲಿ ಕೋರಿದರು:

  1. ಗೋಲಕ್ ನಾಥ್ ಪ್ರಕರಣದ ತೀರ್ಪು ಸರಿಯಾಗಿಯೇ ಇತ್ತು. ವಿಧಿ 13ಕ್ಕೆ ಸಂಬಂಧಿಸಿ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಯಾವುದೇ ಅಧಿಕಾರ ಸಂಸತ್ತಿಗೆ ಇರಬಾರದು. ವಿಧಿ 13 ಅನ್ನು ವಿಧಿ 368 ಕ್ಕೆ ಒಳಪಡಿಸಿದ 24ನೇ ತಿದ್ದುಪಡಿ ಅಮಾನ್ಯವಾಗಿದೆ.
  2. ವಿಧಿ 31ಸಿ (25ನೇ ತಿದ್ದುಪಡಿ ಮೂಲಕ ಸೇರಿಸಲ್ಪಟ್ಟದ್ದು)ಯು ವಿಧಿ 14,19,31 ರಲ್ಲಿ ಬರುವ ಮೂಲಭೂತ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ; ಇದು ಅಮಾನ್ಯವಾಗಿದೆ.
  3. ಯಾವುದೇ ಸಂದರ್ಭದಲ್ಲಿ, ಸಂಸತ್ತು ತಿದ್ದುಪಡಿಗೊಳಿಸುವ ತನ್ನ ಅಧಿಕಾರವನ್ನು ಬಳಸಿಕೊಂಡು ಸಂವಿಧಾನದ ಮೂಲರೂಪವನ್ನು, ಅದರ ಚೌಕಟ್ಟನ್ನು ಬದಲಾಯಿಸುವುದು ಅಥವಾ ನಾಶಗೊಳಿಸುವಂತಿಲ್ಲ. ಹೀಗೆ ಮಾಡಿದಲ್ಲಿ ಸಂವಿಧಾನವು ತನ್ನ ಮೂಲಸತ್ತ್ವವನ್ನು, ಗುರುತನ್ನು ಕಳೆದುಕೊಳ್ಳುತ್ತದೆ. ನ್ಯಾಯಾಂಗದ ಪರಿಶೀಲನೆಗೆ ಹೊರತಾಗಿರುವ ವಿಧಿ 31(ಸಿ)ಯ ಮುಂದಿನ ಭಾಗ ಅಮಾನ್ಯವಾಗಿದೆ.  

ಸರಳವಾಗಿ ಹೇಳುವುದಾದರೆ:

  • ನಾಗರಿಕರ ಮೂಲಭೂತ ಹಕ್ಕುಗಳು
  • ಸಂವಿಧಾನದ ಮೂಲರಚನೆ
  • ಮೇಲಿನ ಎರಡು ವಿಚಾರಗಳಲ್ಲಿ ಬದಲಾವಣೆ ಅಥವಾ ನಾಶವು ಸಂಸತ್ತಿನ ಮೂಲಕ ಉಂಟಾದರೆ ನ್ಯಾಯಾಂಗದ ಪಾತ್ರ

ಈ ಐತಿಹಾಸಿಕ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ ಸಂಸತ್ತಿಗೆ ಸಂವಿಧಾನದ ಮೂಲರಚನೆಯನ್ನು ನಾಶಗೊಳಿಸುವ ಅಧಿಕಾರ ಇಲ್ಲ. ಅಂತಹ ತಿದ್ದುಪಡಿಗಳು ಆದ ಸಂದರ್ಭದಲ್ಲಿ ನ್ಯಾಯಾಂಗ ಅಗತ್ಯವಿದ್ದಲ್ಲಿ ಪರಿಶೀಲನೆಯನ್ನು ಮಾಡಬಹುದು ಎಂದಿತು. 7:6ರ ಬಹುಮತದಲ್ಲಿ ಈ ತೀರ್ಪು ಬಂದಿತು.

39, 41, 42 ತಿದ್ದುಪಡಿಗಳನ್ನು ಅನೂರ್ಜಿತಗೊಳಿಸಿದ್ದು ಮಾತ್ರವಲ್ಲದೆ ಶ್ರೀಮತಿ ಗಾಂಧಿ ಅವರ ಪ್ರಕರಣವು (ರಾಜ್ ನರೇನ್ ಮತ್ತು ಶ್ರೀಮತಿ ಇಂದಿರಾ ಗಾಂಧಿ ಚುನಾವಣಾ ಅರ್ಜಿ) ಇದೇ ಕೇಶವಾನಂದ ಭಾರತಿ ಪ್ರಕರಣದ ತೀರ್ಪಿನ ಪ್ರಭಾವದಲ್ಲೇ ನಿರ್ಧರಿತವಾಯಿತು. ಕೇಶವಾನಂದ ಭಾರತಿ ಪ್ರಕರಣದ ತೀರ್ಪು ಬಂದ ಎರಡೂವರೆ ವರ್ಷಗಳಲ್ಲಿ, 58ಕ್ಕೂ ಹೆಚ್ಚು ಆಕ್ಟ್’ಗಳನ್ನು 9ನೇ ಶೆಡ್ಯೂಲ್‍ಗೆ ಸೇರಿಸಲಾಯಿತು.

ಸುಪ್ರೀಂ ಕೋರ್ಟಿನ ಈ ತೀರ್ಪಿನಿಂದ ವೈಷಮ್ಯ ಸಾಧಿಸಿದ ಕಾಂಗ್ರೆಸ್ ಸರ್ಕಾರ 24ನೇ ತಿದ್ದುಪಡಿಯನ್ನು ಜಾರಿಗೆ ತರುವ ಮೂಲಕ ವಿಧಿ 13 ಅನ್ನು ಬದಲಾಯಿಸುವ ಮೂಲಕ ಪ್ರತೀಕಾರವನ್ನು ತೀರಿಸಿಕೊಂಡಿತು. ವಿಧಿ 13ರ ವಿವರಗಳನ್ನು ಮೇಲೆ ತಿಳಿಸಲಾಗಿದೆ. 24ನೇ ತಿದ್ದುಪಡಿ ಮೂಲಕ ವಿಧಿ 13ಕ್ಕೆ ಒಂದು ಷರತ್ತನ್ನು ಸೇರಿಸಲಾಯಿತು: ವಿಧಿ 368ರ ಅಡಿಯಲ್ಲಿ ಮಾಡಿದ ಸಂವಿಧಾನದ ಯಾವುದೇ ತಿದ್ದುಪಡಿಯು ಈ ವಿಧಿಗೆ ಅನ್ವಯಿಸಬಾರದು. ಈ ಸಣ್ಣದು ಎನಿಸಬಹುದಾದ ಷರತ್ತನ್ನು ಸಂವಿಧಾನದಲ್ಲಿ ಸೇರಿಸುವ ಮೂಲಕ, ಅಂದಿನ ಸರ್ಕಾರವು ಸಂವಿಧಾನವನ್ನು ಅದರ ವಿನಾಶವಾಗುವ ತನಕ ತಿದ್ದುಪಡಿ ಮಾಡಲು ಮತ್ತು ಭಾರತದ ನಾಗರಿಕರ ಸ್ವಾತಂತ್ರ್ಯವನ್ನು ಹಿಂದೆಗೆದುಕೊಳ್ಳಲು ಅಧಿಕಾರವನ್ನು ಹೊಂದಿತು.

ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ, ಸರ್ಕಾರ ಭಾರತದ ಚೀಫ್ ಜಸ್ಟಿಸ್‍ಗೆ ಕೇಶವಾನಂದ ಭಾರತಿ ಅವರ ಪ್ರಕರಣದ ತೀರ್ಪನ್ನು ಪರಿಶೀಲಿಸಲು ಮೌಖಿಕ ವಿನಂತಿಯನ್ನು ಮಾಡಿತು. ಏಕೆಂದರೆ ಇದೇ ತೀರ್ಪು ಆಗ ಇದ್ದ ಸರ್ಕಾರಕ್ಕೆ, ತಮ್ಮ ತೀರ್ಮಾನದೊಂದಿಗೆ ಸಮನ್ವಯಗೊಳಿಸಲು ಕಷ್ಟಕರವಾಗಿತ್ತು. ಪಾಲ್ಖಿವಾಲಾ ಅವರು ಏಳುಪುಟಗಳ ಪ್ರತಿಪಾದನೆಯನ್ನು ಸರ್ಕಾರದ ಮನವಿಗೆ ವಿರುದ್ಧವಾಗಿ ಸಲ್ಲಿಸಿದ್ದರು. ಜಾರಿಯಲ್ಲಿದ್ದ ಸೆನ್ಸಾರ್‍ಶಿಪ್ ಈ ಪ್ರಸ್ತಾವನೆಯನ್ನು ಯಾವುದೇ ಪತ್ರಿಕೆಯಲ್ಲಿ ಪ್ರಕಟಿಸಲು ಅನುಮತಿ ನೀಡುವುದಿಲ್ಲ. 1975 ನವೆಂಬರ್ 10ರಂದು ಈ ಪ್ರಕರಣದ ವಿಚಾರಣೆ ಆರಂಭವಾಯಿತು. ಪಾಲ್ಖಿವಾಲಾ ಅವರು ಸಂವಿಧಾನದ ಪೀಠದ ಬಗ್ಗೆಯೇ ಆಕ್ಷೇಪ ವ್ಯಕ್ತಪಡಿಸಿದರು. ಕಳೆದ ಎರಡೂವರೆ ವರ್ಷಗಳಲ್ಲಿ ಯಾವುದೇ ಸಂದರ್ಭ ಎದುರಾಗಿಲ್ಲ; ಇದು ವಿಮರ್ಶೆಗೆ ಅಗತ್ಯವಾಗಿದೆ. ದೇಶದಲ್ಲಿ ಭಯದ ವಾತಾವರಣ ಮತ್ತು ವಿರೋಧ ಪಕ್ಷದ ನಾಯಕರು ಸೆರೆಮನೆಯಲ್ಲಿ ಇರುವ ಈ ಸಂದರ್ಭ ಪ್ರಕರಣವನ್ನು ಪರಿಶೀಲಿಸುವುದಕ್ಕೆ ಸೂಕ್ತ ಸಮಯವಲ್ಲ. ಅಲ್ಲದೆ 13 ನ್ಯಾಯಾಧೀಶರ ತೀರ್ಪನ್ನು ಮತ್ತೊಂದು 13 ನ್ಯಾಯಾಧೀಶರ ಪೀಠ ಪರಿಶೀಲಿಸುವುದು ಅಸಮರ್ಪಕವಾಗಿದೆ; ಇದು ಕೆಟ್ಟ ನಿದರ್ಶನವನ್ನು ಹುಟ್ಟುಹಾಕಲಿದೆ ಮತ್ತು ಭವಿಷ್ಯದಲ್ಲಿ ಮತ್ತೊಂದು 13 ನ್ಯಾಯಾಧೀಶರ ಪೀಠದ ತೀರ್ಪಿನ ಹೆಚ್ಚಿನ ವಿಮರ್ಶೆಗಳಿಗೆ ಕಾರಣವಾಗಲು ಸಾಧ್ಯವಿಲ್ಲ. ಎರಡು ದಿನಗಳ ವಿಚಾರಣೆಯ ನಂತರ, 1975 ನವೆಂಬರ್ 12ರ ಬೆಳಗ್ಗೆ 10 ಗಂಟೆಗೆ ಚೀಫ್ ಜಸ್ಟಿಸ್ ಅಜಿತ್ ನಾಥ್ ರಾಯ್ ಅವರು ಸ್ಪಷ್ಟವಾಗಿ: ಪೀಠವನ್ನು ರದ್ದುಗೊಳಿಸಲಾಗಿದೆ ಎಂದರು. ಈ ಪ್ರಕರಣವು ಯಾವುದೇ ಕಾನೂನು ಪುಸ್ತಕ, ಪ್ರಕರಣದ ಕಡತಗಳಲ್ಲಿ ಉಲ್ಲೇಖವಾಗಿಲ್ಲ; ಸುಪ್ರೀಂ ಕೋರ್ಟ್ ಪ್ರಕರಣಗಳಲ್ಲಿ, ಆಲ್ ಇಂಡಿಯಾ ರಿಪೋರ್ಟರ್ (AIR) ಅಲ್ಲಿಯೂ ಇಲ್ಲ ಎನ್ನುವುದು ಆಶ್ಚರ್ಯದ ವಿಷಯವಾಗಿದೆ.

ಸರ್ಕಾರದ ಆಲೋಚನೆಗಳು, ವಿನ್ಯಾಸಗಳು ಯಶಸ್ವಿಯಾಗದೇ ಇರುವುದಕ್ಕೆ ಮತ್ತು ಕೇಶವಾನಂದ ಭಾರತಿ ತೀರ್ಪನ್ನು ರದ್ದುಗೊಳಿಸುವಂತೆ ಕೋರಿದ ಸರ್ಕಾರದ ಮನವಿಯನ್ನು ಆಲಿಸಲು ರಚಿಸಿದ 13 ನ್ಯಾಯಾಧೀಶರ ಪೀಠವು ರದ್ದಾಗಿದ್ದಕ್ಕೆ ರಾಷ್ಟ್ರವು ನಾನಿ ಪಾಲ್ಖಿವಾಲಾ ಮತ್ತು ಅವರ ಸಹೋದ್ಯೋಗಿಗಳಿಗೆ ಋಣಿಯಾಗಿದೆ.

ಸಂವಿಧಾನವನ್ನು ತನಗೆ ಬೇಕಾದ ಹಾಗೆ ತಿದ್ದುಪಡಿ ಮಾಡುವ ಮತ್ತು ನ್ಯಾಯಾಂಗದ ಪರಿಶೀಲನೆಯಿಂದ ತಪ್ಪಿಸಿಕೊಳ್ಳುವ ಅಧಿಕಾರವನ್ನು ಪಡೆಯಲು ಅಂದಿನ ಸರ್ಕಾರ ಮಾಡಿದ ಹರಸಾಹಸ ಅದೃಷ್ಟವಶಾತ್ ವಿಫಲವಾಯಿತು.

ಮೂಲ ಲೇಖನ: ಡಾ. ಮಕ್ಖನ್ ಲಾಲ್, Professor & Founder Director of Delhi Institute of Heritage Research and Management

ಅನುವಾದ : ಸುಮನಾ ಮುಳ್ಳುಂಜ

‘ವಿಕ್ರಮ’ ವಾರಪತ್ರಿಕೆಯಲ್ಲಿ ಪ್ರಕಟಿತ ಬರಹ

Facebook ಕಾಮೆಂಟ್ಸ್

ಲೇಖಕರ ಕುರಿತು

Sumana Mullunja

Trying hard to be myself on this Earth. Born and brought up at Puttur, Dakshina Kannada. Completed my B.Sc and pursuing M.Sc Physics from Kuvempu University – Distance Education, Shivamogga.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!