ಅಂಕಣ

ಶಿಲೆಯಲ್ಲಿ ನೇಯ್ದ ಕಲೆಯ ಬಲೆ – ಬಸರಾಳು ಮಲ್ಲಿಕಾರ್ಜುನ ದೇವಾಲಯ

ರಾಷ್ಟ್ರಕವಿ ಕುವೆಂಪುರವರು ಒಂದೆಡೆ “ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ, ಶಿಲೆಯಲ್ಲವೀ ಗುಡಿಯು, ಕಲೆಯ ಬಲೆಯು” ಎನ್ನುತ್ತ ಶಿಲಾವೈಭವದ ದೇಗುಲವನ್ನು ಬಣ್ಣಿಸುತ್ತಾರೆ. ಹೊಯ್ಸಳರ ಕಾಲದ ಶಿಲಾದೇಗುಲಗಳಿಗೆ ಹೋಗುವುದೆಂದರೆ ಇತರ ಸಾಮಾನ್ಯ ದೇಗುಲಕ್ಕೆ ಹೋದಂತೆ ಹೋಗಿ ಆರತಿ, ತೀರ್ಥ ತೆಗೆದುಕೊಂಡು ಅರೆಗಳಿಗೆ ಕಣ್ಣುಮುಚ್ಚಿ ಪ್ರಾರ್ಥನೆ ಮಾಡಿ ಬರುವುದಲ್ಲ; ಇವೆಲ್ಲ ಕಲಾವೈಭವವನ್ನೇ ತಮ್ಮ ಒಡಲಲ್ಲಿ ತುಂಬಿಕೊಂಡ ದೇಗುಲಗಳು. ಇವುಗಳನ್ನು ವೀಕ್ಷಿಸಲು, ಅರಿತುಕೊಳ್ಳಲು ಒಂದಷ್ಟು ಮಾಹಿತಿ ನಮಗಿದ್ದರೆ ಅನುಕೂಲ; ಮಾಹಿತಿ ಇದ್ದವರು ಜೊತೆಗಿದ್ದರೆ ಹೊಯ್ಸಳ ದೇಗುಲಗಳನ್ನು ಸಂಪೂರ್ಣ ತಿಳಿದುಕೊಳ್ಳುವುದು ಸುಲಭವಾಗುತ್ತದೆ.  

ಮಂಡ್ಯಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಸರಾಳು ಇಂತಹುದೇ ಒಂದು ಕಲಾದೇಗುಲ. ಮಂಡ್ಯದಿಂದ 27 ಕಿ.ಮೀ. ದೂರದಲ್ಲಿರುವ ಹೊಯ್ಸಳರ ದೇವಾಲಯವನ್ನು ವೀಕ್ಷಿಸುವ ಉದ್ದೇಶದಿಂದ ಬೆಂಗಳೂರಿನಿಂದ ಮುಂಜಾನೆ ಆರುಗಂಟೆಗೆ ಹೊರಟಾಗಿತ್ತು. ತೊನೆದಾಡುವ ಕಬ್ಬಿನಗದ್ದೆ, ಅದರ ಮಧ್ಯೆ ತೆಂಗಿನಮರಗಳು, ಭತ್ತ ರಾಗಿಯ ಪೈರು, ಮಾವು ಸಪೋಟ ಮರಗಳಿಂದ ತುಂಬಿದ ಪ್ರಕೃತಿಯನ್ನು ವೀಕ್ಷಿಸುತ್ತಾ ಬಸರಾಳು ತಲಪಿದ್ದಾಯ್ತು. ಬಸರಾಳು ಒಂದಷ್ಟು ಅಂಗಡಿ ಮುಗ್ಗಟ್ಟನ್ನು ಹೊಂದಿದ ಚಿಕ್ಕ ಪೇಟೆ. ಹೊಯ್ಸಳ ಕಾಲದಲ್ಲಿ ಊರಿನ ಮಧ್ಯೆ ವಿಷ್ಣುವಿನ ದೇವಾಲಯವಿರುತ್ತಿತ್ತಂತೆ. ಅಂತಹ ವಿಷ್ಣು ದೇವಾಲಯವಿದೆಯೆಂದು ಹೇಳಲಾಗುತ್ತದಾದರೂ, ಈಗ ಅದು ನಾಶಗೊಂಡಿದೆ.

ಬಸರಾಳು ದೇವಾಲಯವನ್ನು 1234ರಲ್ಲಿ ಹೊಯ್ಸಳರ ಇಮ್ಮಡಿ ನರಸಿಂಹನ ದಂಡನಾಯಕನಾದ ಹರಿಹರನು ಕಟ್ಟಿಸಿದನು. ಯುದ್ಧದಲ್ಲಿ ಗೆದ್ದಾಗ ದಂಡನಾಯಕನಿಗೆ ರಾಜರು ಕೊಡುವ ಬಳವಳಿಯು ಈ ರೀತಿಯಲ್ಲಿ ಬಳಕೆಯಾಗುತ್ತಿತ್ತು. ದಂಡನಾಯಕ ಹರಿಹರನು ಸೇವುಣರನ್ನು ಗೆದ್ದಾಗ ತಾಯಿಯ ಹೆಸರಿನಲ್ಲಿ ಕೆರೆ ಹಾಗೂ ತಂದೆಯ ಹೆಸರಿನಲ್ಲಿ ಮಲ್ಲಿಕಾರ್ಜುನ ದೇವಾಲಯ ಕಟ್ಟಿಸಿದನೆಂದು ಹೇಳುತ್ತಾರೆ. ಬಸುರಿವಾಳ ಅಗ್ರಹಾರವಾಗಿದ್ದು, ಹರಿಹರನ ತಂದೆ ಈ ಊರಿನವರಾಗಿದ್ದರಂತೆ. ಇಲ್ಲಿನ ಶಾಸನದ ಪ್ರಕಾರ 1234ರಲ್ಲಿ ಎರಡನೇ ನರಸಿಂಹ, 1237ರಲ್ಲಿ ವೀರಸೋಮೇಶ್ವರ ಹಾಗೂ 1239ರಲ್ಲಿ ಮೂರನೇ ನರಸಿಂಹ ಮತ್ತು 1625ರಲ್ಲಿ ಪಾಳೆಯಗಾರ ಕೆಂಪಭೈರರಸ ನರಸಿಂಹ ಇವರುಗಳು ಈ ದೇವಾಲಯಕ್ಕೆ ದತ್ತಿಗಳನ್ನು ಬಿಟ್ಟಿದ್ದರಂತೆ.

ದೊಡ್ಡ ಕೆರೆಯೊಂದು ಇತ್ತು ಎಂಬುದರ ಕುರುಹಾಗಿ ತಗ್ಗಾದ ಪ್ರದೇಶದಲ್ಲಿ ಕಲ್ಲಿನ ಗೋಪುರವೊಂದಿದೆ. ಆ ಗೋಪುರದ ಒಂದಷ್ಟು ಭಾಗ ಹೊಯ್ಸಳ ಶೈಲಿಯದಾಗಿದ್ದರೆ, ಇನ್ನೊಂದಷ್ಟು ಭಾಗ ಹೊಸದಾಗಿ ಕಲ್ಲಿನ ಕಂಬಗಳನ್ನು ನೆಟ್ಟು ಮಾಡಿದಂತಿದೆ. ಗೋಪುರದ ಮುಂದೆ ಪುಟ್ಟ ಕಲ್ಯಾಣ ಯೊಂದು ಈಗಲೂ ಇದೆ. ಆ ಕೆರೆಭಾಗವನ್ನು  ಊರ ಜನ ಕಾಪಾಡಿಕೊಂಡಿದ್ದರೆ ಊರಿನ ನೀರಿನಹಸಿವನ್ನು ಹಿಂಗಿಸುತ್ತಿತ್ತೇನೋ. ಊರ ಮಧ್ಯೆ ಕಾಳಭೈರವೇಶ್ವರ ಗುಡಿಯಿದ್ದು ಅಲ್ಲಿ ಮಾಸ್ತಿಗಲ್ಲು, ವೀರಗಲ್ಲುಗಳು ಅಡ್ಡಾದಿಡ್ಡಿಯಾಗಿ ಇಟ್ಟಿದ್ದು, ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ. (ಪತಿ ಯುದ್ಧದಲ್ಲಿ ಮರಣ ಹೊಂದಿದಾಗ ಸತಿ ಸಹಗಮನ ಹೋದಾಗ ಪತಿಪತ್ನಿ ಇಬ್ಬರ ಚಿತ್ರ ಕೆತ್ತಿದ ಕಲ್ಲು ಮಾಸ್ತಿಗಲ್ಲು; ವೀರಮರಣವನ್ನಪ್ಪಿದ ವೀರಯೋಧರ ಕಲ್ಲು ವೀರಗಲ್ಲು.)

ಹೊಯ್ಸಳ ಕಲೆಯ ಮುಂದೆ

ಊರ ಒಂದು ಪಕ್ಕಕ್ಕೆ ಇರುವ ಹೊಯ್ಸಳಕಾಲದ ದೇವಾಲಯದ ಮುಂದೆ ನಿಂತಿದ್ದೆವು. ಭಾರತದಲ್ಲಿ ಮೊದಮೊದಲು ದೇವರಿಗೆ ಆಲಯ ಕಟ್ಟುವ ರೂಢಿ ಇರಲಿಲ್ಲ. ನಿರ್ಗುಣ ಆರಾಧನೆಯಾಗಿತ್ತು ಎನ್ನಬಹುದು.  ಕ್ರಿಸ್ತಪೂರ್ವ 2-3ನೇ ಶತಮಾನದ ಮೌರ್ಯ ಹಾಗೂ ಶಾತವಾಹನರ ಕಾಲದಿಂದ ದೇವಾಲಯ ಕಟ್ಟುವ ರೂಢಿ ಆರಂಭವಾಯ್ತು. ಮೊದಮೊದಲು ದೇಗುಲ ನಿರ್ಮಾಣಕ್ಕೆ ಮರಮಟ್ಟುಗಳನ್ನು ಬಳಸಲಾಗುತ್ತಿತ್ತು. ಬಾದಾಮಿ ಚಾಲುಕ್ಯರು 6ನೇ ಶತಮಾನದಲ್ಲಿ ಗುಹಾಂತರ ದೇವಾಲಯಗಳನ್ನಲ್ಲದೇ, ಇನ್ನಿತರ ದೇವಾಲಯಗಳನ್ನೂ ಕಟ್ಟಿದ್ದು ಕಂಡುಬರುತ್ತದೆ. ಕನ್ನಡನಾಡಿನಲ್ಲಿ ಶಾತವಾಹನರ ಕಾಲದಿಂದ ಕಟ್ಟಡಗಳು ಕಂಡುಬರುತ್ತವೆ. ಒಂದನೇ ಪುಲಕೇಶಿ 6ನೇ ಶತಮಾನದ ಮಧ್ಯಭಾಗದಲ್ಲಿ ಕೋಟೆಯ ನಿರ್ಮಾಣ ಮಾಡಿದನು. ಆಗ ಗುಹಾಲಯ ನಿರ್ಮಾಣವಾಗಿ ಮಂಗಳೀಶನ ಕಾಲದಲ್ಲಿ ಮಹಾಕೂಟೇಶ್ವರ ದೇವಾಲಯವು ನಿರ್ಮಾಣವಾಗಿತ್ತೆಂದು ತಿಳಿದುಬರುತ್ತದೆ. ಚಾಲುಕ್ಯ ಶಿಲ್ಪಮಾದರಿಯನ್ನೇ ಪಲ್ಲವರು ಅನುಸರಿಸಿದ್ದು ಮರಮಟ್ಟು ಬಿಟ್ಟು ಕಲ್ಲಿನಲ್ಲಿ ದೇವಾಲಯ ನಿರ್ಮಾಣ ಆರಂಭವಾಯ್ತು. ಭಾರತದಲ್ಲಿ ಶಿಲ್ಪಶಾಸ್ತ್ರದಲ್ಲಿನ ಮೂರು ಪದ್ಧತಿಗಳಾದ ನಾಗರ, ದ್ರಾವಿಡ ಹಾಗೂ ವೇಸರಶೈಲಿಗಳನ್ನು ಬಳಸಿಕೊಂಡು ದೇವಾಲಯ ಕಟ್ಟಿದ್ದು ಕಂಡುಬರುತ್ತದೆ. ಸಾಮಾನ್ಯವಾಗಿ ಉತ್ತರಭಾರತದಲ್ಲಿ ನಾವು ನಾಗರಶೈಲಿಯ ದೇವಾಲಯಗಳನ್ನು ಕಾಣುತ್ತೇವೆ. ಬೊಂಬುಗಳನ್ನು ನೆಟ್ಟು ಅವುಗಳ ಕೊನೆಯನ್ನು ಬಗ್ಗಿಸಿದಂತೆ ಇದ್ದರೆ ಅದು ನಾಗರಶೈಲಿಯಾಗುತ್ತದೆ. ಪುರಿ ದೇವಾಲಯ, ಭುವನೇಶ್ವರದ ಲಿಂಗರಾಜ ದೇವಾಲಯ ಇವೆಲ್ಲ ದೇವಾಲಯಗಳು ನಾಗರಶೈಲಿಯಲ್ಲಿ ಕಟ್ಟಿದ್ದು, ಇವುಗಳ ಬೃಹತ್ತತೆ ನಮ್ಮನ್ನು ಬೆರಗುಗೊಳಿಸುತ್ತವೆ. ಚಪ್ಪಟೆ ಕಲ್ಲಿನ ಮಂಡಪದ ಮೇಲೆ ಮೆಟ್ಟಿಲು ಮೆಟ್ಟಿಲಾಗಿ ದೇವಾಲಯ ಕಟ್ಟಿದ್ದು ದ್ರಾವಿಡಶೈಲಿಯಾಗುತ್ತದೆ. ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯ, ಮಹಾಬಲಿಪುರಂನ ರಾಕ್–ಕಟ್ ಶೋರ್ ದೇವಾಲಯ, ಎಲ್ಲೋರದ ಕೈಲಾಸನಾಥ ದೇವಾಲಯ, ಮಧುರೈನ ಮೀನಾಕ್ಷೀ ದೇವಾಲಯಸಂಕೀರ್ಣ ಇವೆಲ್ಲವೂ ದ್ರಾವಿಡಶೈಲಿಯಲ್ಲಿ ಕಟ್ಟಿದವುಗಳಾಗಿವೆ. ವೇಸರಶೈಲಿಯಲ್ಲಿ ತಳವಿನ್ಯಾಸದ ಮೇಲೆ ನಕ್ಷತ್ರಾಕಾರದ ಜಗತಿಯನ್ನು ಕಟ್ಟಲಾಗುತ್ತದೆ. ಹೊಯ್ಸಳಶೈಲಿಯಲ್ಲಿ ಇವೆಲ್ಲದರ ಹದವಾದ ಮಿಶ್ರಣಮಾಡಿ ದೇವಾಲಯಗಳನ್ನು ಕಟ್ಟಿದ್ದು ವಿಶೇಷ.   

ಹೊಯ್ಸಳರು ಮೂಲತಃ ಚಿಕ್ಕಮಗಳೂರಿನ ಅಂಗಡಿಯವರಾಗಿದ್ದು ಮಲೆನಾಡಿನವರು. ಕಲ್ಯಾಣ  ಚಾಲುಕ್ಯರ ಸಾಮಂತರಾಗಿದ್ದ ಹೊಯ್ಸಳರು 11ನೇ ಶತಮಾನದಲ್ಲಿ ಸ್ವತಂತ್ರ ಆಳ್ವಿಕೆ ಆರಂಭಿಸಿದರು.  ಹೊಯ್ಸಳರ ಆಳ್ವಿಕೆ ಇಡೀ ಕರ್ನಾಟಕವಲ್ಲದೇ, ತಮಿಳುನಾಡು, ಆಂಧ್ರದ ಭಾಗದಲ್ಲೂ ಇತ್ತು. ಹೊಯ್ಸಳ ಕಾಲವು ಒಂದು ರೀತಿಯಲ್ಲಿ ಪರ್ವ ಕಾಲ ಎನ್ನಬಹುದು. ಸಾಹಿತ್ಯ, ಸಂಗೀತ, ಧರ್ಮ, ಶಿಕ್ಷಣ, ವಿಜ್ಞಾನ ಎಲ್ಲದರಲ್ಲೂ ಆದ ಪ್ರಗತಿ ವಾಸ್ತುಶಿಲ್ಪದ ಮೇಲೂ ಪ್ರಭಾವ ಬೀರಿತು. ತಂತ್ರಜ್ಞಾನ, ವಾಸ್ತುಶಾಸ್ತ್ರ, ಖಗೋಳ, ಗಣ ತ, ಲೋಹಶಾಸ್ತ್ರ, ಶಿಲಾಶಾಸ್ತ್ರ ಇವೆಲ್ಲ ಕ್ಷೇತ್ರದಲ್ಲೂ ಆದ ಪ್ರಗತಿಯನ್ನು ಆಗಿನ ಶಿಲ್ಪಿಗಳು ಬಳಸಿಕೊಳ್ಳಲಿಕ್ಕೆ ಅನುಕೂಲವಾಯಿತು. ಸಾಹಿತ್ಯದಲ್ಲಿ ಉತ್ತಮ ಸಾಹಿತ್ಯ ರಚನೆಗಳಾಗಿ ಅಲ್ಲಿನ ನವರಸಗಳ ವರ್ಣನೆಗಳು ಹಂಸ, ವ್ಯಾಳ, ಲತಾಬಳ್ಳಿ ಮೊದಲಾದ ಶಿಲ್ಪಕ್ಕೆ ಸ್ಫೂರ್ತಿ ನೀಡಿತು. ಶಿಲ್ಪಿಗಳ ಸಂಘಗಳು ಬೆಳೆದು ಅವರಲ್ಲೇ ಪರಸ್ಪರ ಪೈಪೋಟಿಯಿಂದಾಗಿ ಮತ್ತಷ್ಟು ಸುಂದರ ರಚನೆಗಳಾದವು. ಹೊಯ್ಸಳರು ದೇವಾಲಯಗಳನ್ನು ಕಟ್ಟಿದಂತೆ ಜೈನಬಸದಿಗಳನ್ನೂ ಕಟ್ಟಿದರು ಹಾಗೂ ಹಿಂದೂದೇವಾಲಯಗಳನ್ನೂ ಜೀರ್ಣೋದ್ಧಾರ ಮಾಡಿದರು. ವಾಸ್ತುಶಿಲ್ಪಕಲೆಯೂ ಉಚ್ಛ್ರಾಯಸ್ಥಿತಿ ಕಂಡ ಕಾಲವದು. ಆಗ ದ್ರಾವಿಡಶೈಲಿ ಪ್ರಚಲಿತವಾಗಿದ್ದು ಹೊಯ್ಸಳರು ಎಲ್ಲ ಶೈಲಿಗಳನ್ನು ಹಿತಮಿತವಾಗಿ ಬಳಸಿಕೊಂಡಿದ್ದಾರೆ. ಕಲ್ಯಾಣ  ಚಾಲುಕ್ಯರು ಮರಳುಶಿಲೆ, ಕಣಶಿಲೆ ಬಿಟ್ಟು ಮೃದುಬಳಪದ ಶಿಲೆ ಬಳಕೆಯ ಪ್ರಯೋಗ ಮಾಡಿದ್ದರು. ಕಲ್ಯಾಣ ಚಾಲುಕ್ಯರಲ್ಲಿ ಕೆತ್ತನೆ ಕಾರ್ಯ ನಡೆಸಿದ ಶಿಲ್ಪಿಗಳೇ ಹೊಯ್ಸಳರ ದೇವಾಲಯದಲ್ಲೂ ಶಿಲ್ಪಿಗಳಾಗಿದ್ದು, ಇಲ್ಲಿ ಕೆತ್ತನೆಯಕಾರ್ಯವನ್ನು ಇನ್ನಷ್ಟು ಅಭಿವೃದ್ಧಿಪಡಿಸಿದರು. ಸುತ್ತಿಗೆ, ಉಳಿಗಳ ಬದಲಾಗಿ ಬಾಚಿ, ಮರದ ಸುತ್ತಿಗೆ, ಭೈರಿಗೆ, ದಬ್ಬಳ ಇವೆಲ್ಲವನ್ನೂ ಬಳಸಿ ಅಲಂಕಾರ ಮಾಡುವ ರೂಢಿಯನ್ನು ಬಳಕೆಗೆ ತಂದರು. ಬಳಪದ ಕಲ್ಲು ಮೃದುವಾಗಿದ್ದು, ಕೆತ್ತನೆಗೆ ಅನುಕೂಲವಾಗಿತ್ತು. ಆದರೆ ಅದರಲ್ಲಿ ಉದ್ದುದ್ದ ತೊಲೆ ಸಿಗದ ಹಾಗೂ ಭಾರವಾಹಕವಲ್ಲದ ಕಾರಣ ಚಿಕ್ಕ ತೊಲೆ ಮಾಡುವ ರೂಢಿ ಬಳಕೆಗೆ ಬಂತು. ಹಾಗಾಗಿಯೇ ಹೆಚ್ಚಿನ ಕಂಬಗಳನ್ನು ಹಾಕಬೇಕಾಯಿತು. ಆ ಕಂಬಗಳೂ ಶಿಲ್ಪಕಲೆಯಿಂದ ಅಲಂಕರಿಸಲ್ಪಟ್ಟವು. ಹೊಯ್ಸಳರ ಕಾಲದಲ್ಲಿ ಬಳಪದ ಕಲ್ಲಲ್ಲದೆ, ಕಣಶಿಲೆಯಲ್ಲೂ ದೇವಾಲಯ ನಿರ್ಮಾಣವಾಗಿದೆ. ಕಣಶಿಲೆ ಬಳಸಿದ ಕಡೆ ನವರಂಗದ ಮಧ್ಯಭಾಗಕ್ಕೆ ಮಾತ್ರ ಬಳಪದ ಕಲ್ಲಿನ ಬಳಕೆ ಮಾಡಲಾಗಿದೆ. ಕಲ್ಲಿನ ಜೊತೆ ಇಟ್ಟಿಗೆ ಗಾರೆ ಬಳಸಿಯೂ ದೇವಾಲಯ ನಿರ್ಮಾಣ ಮಾಡಿದ್ದಾರೆ. ಶ್ರವಣಬೆಳಗೊಳದ ಚಂದ್ರಗಿರಿಯ ಮೇಲಿನ ಬಸದಿ ಇಂತಹ ಮಿಶ್ರಣದಿಂದ ಮಾಡಿದವುಗಳಾಗಿವೆ. ಬಸದಿಯ ಅಧಿಷ್ಠಾನ, ಕಂಬಗಳು, ಚಾವಣ ಭಾಗಗಳು ಕಣಶಿಲೆಯದ್ದಾಗಿದ್ದರೆ, ಗೋಡೆಗಳು ಇಟ್ಟಿಗೆಗಾರೆಯದ್ದಾಗಿದೆ. ಅವರು ವಿವಿಧ ವಾಸ್ತುಪ್ರಕಾರ ಬಳಸಿದ್ದಲ್ಲದೇ, ತಮಗೆ ಬೇಕಾದಂತೆ ಬದಲಾವಣೆಯನ್ನೂ ಮಾಡಿಕೊಂಡಿದ್ದುದು ಕಾಣುತ್ತದೆ. ಹಾಗಾಗಿ ಹೊಯ್ಸಳರದು ವೇಸರಶೈಲಿ ಎಂದೇ ನಿರ್ಧರಿಸುವುದಕ್ಕೆ ಸಾಧ್ಯವಾಗುವುದಿಲ್ಲ.

ಹೊಯ್ಸಳ ದೇವಾಲಯದಲ್ಲಿ ತಳವಿನ್ಯಾಸದಲ್ಲಿ ಹಲವಾರು ಪ್ರಯೋಗ ಮಾಡಿದ್ದು, ಒಂದರಿಂದ ಐದು ಗರ್ಭಗೃಹಗಳ ದೇವಾಲಯವನ್ನೂ ನಿರ್ಮಿಸಿ ಪ್ರತಿಯೊಂದರ ಮೇಲೂ ಒಂದೊಂದು ಪ್ರಾಸಾದ ನಿರ್ಮಾಣ ಮಾಡಿದ್ದು ಏಕಕೂಟ, ದ್ವಿಕೂಟ, ತ್ರಿಕೂಟ, ಚತುಸ್ರ, ಪಂಚಕೂಟ ಆಲಯ ನಿರ್ಮಿಸಿದ್ದಾರೆ.

ಮಹಾಮಂಟಪ, ಮುಖಮಂಡಪದ ಕೆತ್ತನೆಗಳು, ಕಂಬಗಳ ಕೆತ್ತನೆಗಳು ಹೊಯ್ಸಳಕಾಲದ ಸೌಂದರ್ಯಪ್ರಜ್ಞೆಗೆ ಸಾಕ್ಷಿಯಾಗಿವೆ.

ಅಧಿಷ್ಠಾನವು ಹೊಯ್ಸಳ ದೇವಾಲಯದ ಆಕರ್ಷಕ ಭಾಗವಾಗಿದ್ದು, ಆನೆ, ಕುದುರೆಗಳ ಸಾಲು, ರಾಮಾಯಣ, ಮಹಾಭಾರತ, ಭಾಗವತ, ಪಂಚತಂತ್ರ, ದಶಾವತಾರ, ಯುದ್ಧದ ದೃಶ್ಯಗಳನ್ನು ಕಡೆಯುವುದರ ಹಿಂದೆ ಶಿಕ್ಷಣ ನೀಡುವ ಉದ್ದೇಶವೂ ಇರುತ್ತಿತ್ತು. ಅಧಿಷ್ಠಾನದ ಪಟ್ಟಿಕೆಗಳಲ್ಲಿ ಆನೆಗಳ ಸಾಲಿನಲ್ಲಿ ಅವು ಸಾಲಾಗಿ ಹೋಗುವುದು, ಮರಿಗಳ ಜೊತೆ ಆಟ, ನೀರಿನ ಜೊತೆ ಆಟ ಹೀಗೆ ಆನೆಗಳ ಜೀವನಶೈಲಿಯನ್ನು ಈ ಸಾಲಿನಲ್ಲಿ ಕೆತ್ತಲಾಗುತ್ತಿತ್ತು. ಇಂತಹ ದೇವಾಲಯದಿಂದ ನಾವು ಆನೆಗಳ ಜೀವನರೀತಿನೀತಿಯನ್ನು ಅಧ್ಯಯನ ಮಾಡುವಷ್ಟು ಮಾಹಿತಿ ದೊರಕುತ್ತದೆ. ಆನೆಗಳು ಯುದ್ಧಪ್ರಾಣ ಗಳಂತೆ ಬಳಕೆ ಮಾಡುವುದಲ್ಲದೆ, ಸಾಕುಪ್ರಾಣ ಯೂ ಆಗಿದ್ದಿರಬಹುದು.

ಗರ್ಭಗೃಹದಿಂದ ಸುಕನಾಸಿಯವರೆಗೆ ಶಿಖರದ ಮೊದಲನೇ ತಳ ವಿಸ್ತರಿಸಲ್ಪಡುತ್ತದೆ. ಶಿಖರದ ಭಾಗಕ್ಕೆ ಕಲಶ, ಶಾಲಾ, ಪಂಜರ, ಕಪೋತ, ಕೂಟ ಇವೇ ರಚನೆಗಳಿವೆ. ನವರಂಗ, ಭುವನೇಶ್ವರಿ, ಶುಕನಾಸಿ, ಮುಖಮಂಡಪ ಹೀಗೆ  ದೇವಾಲಯದ ಪ್ರತಿಭಾಗವೂ ಶಿಲ್ಪಕಲೆಯ ಪ್ರದರ್ಶನಕ್ಕೆ ಬಳಕೆಯಾಗಿರುತ್ತವೆ.

ಸಾಮಾನ್ಯವಾಗಿ ಹೊಯ್ಸಳ ದೇವಾಲಯಗಳಲ್ಲಿ ಕಂಡುಬರುವ ಶಾಸನಗಳ ಕಲ್ಲು ಆ ದೇವಾಲಯದ ಸಕಲ ಮಾಹಿತಿಗಳನ್ನೂ ಒದಗಿಸುವಂತಿರುತ್ತದೆ. ಹೊಯ್ಸಳರ ಶಾಸನದ ವಿಶೇಷತೆಯೆಂದರೆ ಅದರಲ್ಲಿ ಕೇವಲ ಅರಸರದಷ್ಟೇ ಅಲ್ಲದೆ, ಮಂತ್ರಿ, ಸೇನಾಪತಿ ಇವರೆಲ್ಲರ ವಿವರಗಳೂ ಇರುತ್ತವೆ. ಶಾಸನ ಬರೆಯುವುದಕ್ಕೂ ಒಂದು ಕ್ರಮವನ್ನು ಅನುಸರಿಸಲಾಗುತ್ತಿದ್ದು, ಶಾಸನಗಳ ಲಿಪಿ ಬರೆಯುವವರು ಒಬ್ಬರಾಗಿದ್ದರೆ, ಅದನ್ನು ಹೇಳಿ ಬರೆಸುವವರು ಇನ್ನೊಬ್ಬರು, ಬಣ್ಣದಲ್ಲಿ ಬರೆಯುವವರು ಒಬ್ಬರು, ಕೆತ್ತುವವರು ಇನ್ನೊಬ್ಬರು. ಶಾಸನವು ಪದ್ಯ ಅಥವಾ ಗದ್ಯ ಯಾವುದೇ ರೂಪದಲ್ಲೂ ಇರಬಹುದಾಗಿದೆ.

ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ

ಹೊಯ್ಸಳರ ಮೂಲ ಮಲೆನಾಡಾದರೂ ಶಿಲ್ಪಕಲೆಯ ಕಲ್ಲಿನ ಲಭ್ಯತೆ (ಸಾಮಾನ್ಯವಾಗಿ ಹಾಸನ, ಮೈಸೂರು ಮೊದಲಾದೆಡೆ) ಹೆಚ್ಚಾಗಿರುವಲ್ಲಿ ಹೊಯ್ಸಳ ಶಿಲಾದೇವಾಲಯಗಳು ಹೆಚ್ಚಾಗಿದೆ. ಬಸರಾಳು ಮಲ್ಲಿಕಾರ್ಜುನ ದೇವಸ್ಥಾನದ ಪ್ರವೇಶದಲ್ಲಿ ಎರಡು ಸುಂದರವಾಗಿ ಕೆತ್ತಿದ ಕಂಬಗಳು ನಮ್ಮನ್ನು ಸ್ವಾಗತಿಸುತ್ತವೆ. ಈ ದೇವಸ್ಥಾನವನ್ನು ಬಳಪ ಶಿಲೆಯಲ್ಲಿ ಕೆತ್ತಲಾಗಿದ್ದರೂ ಶಿಲೆ ಬೇಲೂರಿನಲ್ಲಿರುವಷ್ಟು ಉನ್ನತ ಗುಣಮಟ್ಟದಲ್ಲ. ಆದರೆ ಕೆತ್ತನೆಯಲ್ಲಿ ಚಿಕ್ಕದ್ದೆಂದು ನಿರ್ಲಕ್ಷ್ಯವಿಲ್ಲ. ಮುಖ್ಯದ್ವಾರದ ಬಲಭಾಗಕ್ಕೆ ದೊಡ್ಡದಾದ ಶಿಲೆಯಲ್ಲಿ ಶಾಸನವೊಂದನ್ನು ಬರೆದಿದ್ದು ಶಾಸನದ ಮೇಲ್ಭಾಗಕ್ಕೆ ಶಿವನ ಲಿಂಗವನ್ನು ಪೂಜಿಸುತ್ತಿರುವ ದೃಶ್ಯವಿದೆ. ಈ ಒಂದೇ ಕಲ್ಲಿನಲ್ಲಿ 4 ಶಾಸನವನ್ನು ಬರೆಯಲಾಗಿದೆ. ಬಸರಾಳಿನ ಶಾಸನದ ಲಿಪಿಯನ್ನು ಬರೆದವನು ಚಿದಾನಂದ ಮಲ್ಲಿಕಾರ್ಜುನ ಎಂಬಾತ(ಈತ ಶಬ್ದಮಣ  ದರ್ಪಣವನ್ನು ಬರೆದ ಕೇಶೀರಾಜನ ತಂದೆ)ನಾಗಿದ್ದಾನೆ. ಈ ಶಾಸನದಲ್ಲಿ ಕೊನೆಯ ಎರಡು ಸಾಲನ್ನು ಬಳಿಕ ಸೇರಿಸಿದ್ದು ಅದು 15-16ನೇ ಶತಮಾನದ್ದಾಗಿದೆ.

ಮುಖ್ಯದ್ವಾರದ ಮೇಲಿನ ಅಂಕಣಭಾಗದಲ್ಲಿ ರಾಜನು ಕುದುರೆಯ ಮೇಲೆ ಎಲ್ಲಿಗೋ ಹೋಗುತ್ತಿರುವುದು, ಮುಂದೆ ಚಾಮರ ಹಿಡಿದ ಸೇವಕ, ರಾಜ ರಾಣ  ಆನೆಯ ಮೇಲೆ ಕುಳಿತು ಹೋಗುತ್ತಿರುವ ದೃಶ್ಯ ಹಾಗೂ ಚಾಮರ ಹಿಡಿದ ಸೇವಕ, ದೇವತೆಯ ಚಿತ್ರ, ಇಂತಹ ಸುಮಾರು 9 ಶಿಲ್ಪಗಳನ್ನು ಚೌಕಾಕಾರದಲ್ಲಿ ಕೆತ್ತಲಾಗಿದೆ. ಮುಖ್ಯದ್ವಾರದ ಎಡಭಾಗಕ್ಕೆ ಗಣಪತಿಯ ವಿಗ್ರಹವನ್ನು ಇಡಲಾಗಿದೆ. ಮುಖ್ಯದ್ವಾರದಲ್ಲಿ ಕುಳಿತುಕೊಳ್ಳಲಿಕ್ಕೆ ಅನುಕೂಲವಾಗುವಂತೆ ದೊಡ್ಡದೊಡ್ಡ ಹಾಸುಗಲ್ಲು ಹಾಕಲಾಗಿದ್ದು ಅದರ ಮೇಲೆ ಚನ್ನೆಮಣೆ ಆಡುವಂತೆ ಗುಣ ಗಳನ್ನು ತೋಡಲಾಗಿದೆ. ಇದು ಆ ಕಾಲದಲ್ಲೇ ಮಾಡಲಾಗಿದೆಯೋ, ಬಳಿಕ ಗುಣ  ತೊಡಲಾಗಿದೆಯೋ ಹೇಳಲಾಗದು. ದೇವಾಲಯಗಳು ಮೊದಲೆಲ್ಲ ಕೇವಲ ಪೂಜೆಗಾಗಿ ಮಾತ್ರ ಬಳಕೆಯಾಗುತ್ತಿರಲಿಲ್ಲ. ಅದು ವಿದ್ಯಾಕೇಂದ್ರವೂ, ಸಾಹಿತ್ಯಗೋಷ್ಠಿಗಳಿಗಾಗಿಯೂ, ನರ್ತನಕ್ಕೂ ಬಳಕೆಯಾಗುತ್ತಿತ್ತು. ಮನರಂಜಿತ ಆಟಕ್ಕೋಸ್ಕರವೂ ಬಳಕೆಯಾಗುತ್ತಿದ್ದಿರಬಹುದು.

ಬಸರಾಳು ದೇವಾಲಯದ ತಳವಿನ್ಯಾಸವು ನಕ್ಷತ್ರಾಕಾರದ ಜಗತಿಯನ್ನು ಹೊಂದಿದ್ದು, ತ್ರಿಕೂಟಾಚಲ ರಚನೆಯದ್ದಾಗಿದೆ. ಹೊಯ್ಸಳ ಕಾಲದಲ್ಲಿ ಇಂತಹ ಜಗತಿಯನ್ನು ಪ್ರದಕ್ಷಿಣೆ ಮಾಡಲು ಅನುಕೂಲವಾಗುವಂತೆ ನಿರ್ಮಿಸಲಾಗುತ್ತಿತ್ತು. ಇಡೀ ದೇವಾಲಯದ ಒಂದಿನಿತೂ ಜಾಗವನ್ನೂ ಬಿಡದೆ ಶಿಲ್ಪಗಳನ್ನು ಕಡೆದಿದ್ದು, ಜಗತಿಯು ಪ್ರದಕ್ಷಿಣೆ ಮಾಡುತ್ತಲೇ ಕಲೆಯನ್ನು ಅವಲೋಕಿಸುವುದಕ್ಕೆ ಅನುಕೂಲವಾಗುವಂತಿದೆ. ಜಗತಿಯ ಮೇಲಿನ ಅಧಿಷ್ಠಾನದ ಭಾಗದಲ್ಲಿ ಆರು ಸಾಲಿನ ಪಟ್ಟಿಕೆಗಳಿವೆ. ಮೊದಲ ಪಟ್ಟಿಕೆ ಆನೆಗಳಿಗೆ ಮೀಸಲಾಗಿದೆ. ಪಟ್ಟಿಕೆಯ ಎರಡನೇ ಸಾಲು ಕುದುರೆಗಳಿಗೆ ಮೀಸಲಾಗಿದ್ದು, ಕುದುರೆಯ ಮೇಲೆ ಸವಾರರು ಕುಳಿತು ಎಲ್ಲೋ ಹೋಗುವ ದೃಶ್ಯವನ್ನು ಕಡೆಯಲಾಗಿದೆ. ಅನಂತರ ಸಿಂಹದ ಸಾಲು, ಯುದ್ಧದ ದೃಶ್ಯಗಳನ್ನೂ, ಸಳ ಹುಲಿ ದೃಶ್ಯಗಳನ್ನೂ ಇವೇ ಮೊದಲಾದ ದೃಶ್ಯಗಳನ್ನು ಕಡೆಯಲಾಗಿದೆ. ಅದರ ಮೇಲ್ಗಡೆ ಸಾಲಿನಲ್ಲಿ ದಕ್ಷಿಣದ ಮುಖ್ಯದ್ವಾರದಿಂದ ರಾಮಾಯಣದ ದೃಶ್ಯವಿದ್ದು, ನಂತರ ಉತ್ತರದ ಮುಖ್ಯದ್ವಾರದವರೆಗೂ ಮಹಾಭಾರತ ಹಾಗೂ ನಂತರದ ಭಾಗಗಳಲ್ಲಿ ಭಾಗವತದ ಸನ್ನಿವೇಶಗಳನ್ನು ಕೆತ್ತಲಾಗಿದೆ. ರಾವಣ, ಸಮುದ್ರಮಥನ, ಹಿರಣ್ಯ ಕಷ್ಯಪುವಿನ ಕರುಳು ಬಗೆದು, ಕರುಳನ್ನೇ ಹೊರತೆಗೆಯುವ ದೃಶ್ಯ, ಮತ್ಸ್ಯಯಂತ್ರ ಭೇದಿಸುವುದು, ಜಟ್ಟಿಕಾಳಗ, ಗೋವರ್ಧನಗಿರಿ ಎತ್ತಿದ ದೃಶ್ಯ, ಪೂತನಿಸಂಹಾರ, ಕಾಳಿಂಗಮರ್ಧನ  ಇವೆಲ್ಲವನ್ನೂ ಕಲ್ಲಿನಲ್ಲಿ ಕೆತ್ತಲಾಗಿದೆಯೆಂದರೆ ನಂಬಲಾಗದಷ್ಟು ಅದ್ಭುತವಾಗಿ ಮೂಡಿಬಂದಿದೆ.

ನರಸಿಂಹಾವತಾರ

ನಂತರ ವ್ಯಾಳಪಟ್ಟಿಕೆ ಹಾಗೂ ಹಂಸಪಟ್ಟಿಕೆಗಳನ್ನು ಕಡೆಯಲಾಗಿದೆ. ಅದರ ಮೇಲ್ಗಡೆ ಕೀರ್ತಿಮುಖ ಹಾಗೂ ಮಕರದ ಕೆಳಗಡೆ ದೇವದೇವತೆಗಳ ಚಿತ್ರಗಳಿವೆ. ಬಸರಾಳುವಿನ ದೇವಾಲಯದಲ್ಲಿ ನರ್ತಿಸುತ್ತಿರುವ ಈಶ್ವರನ ಹಲವಾರು ಭಂಗಿಗಳನ್ನು ಚಿತ್ರಿಸಲಾಗಿದೆ.

ನಾಟ್ಯಶಿವ

ಶಿವಪಾರ್ವತಿ – ನಂದಿ

ಜೊತೆಗೆ ವಿಷ್ಣುವಿನ ಚಿತ್ರಗಳೂ ಇವೆ. ಸಾಮಾನ್ಯವಾಗಿ ತ್ರಿಮೂರ್ತಿಗಳಲ್ಲಿ ಹರಿಹರರ ಮೂರ್ತಿಯಂತೆ ಕಾಣಸಿಗುವಂತೆ ಬ್ರಹ್ಮನ ಮೂರ್ತಿ ಕಂಡುಬರುವುದಿಲ್ಲ. ಆದರೆ ಇಲ್ಲಿ ಬ್ರಹ್ಮನಮೂರ್ತಿ ಕೆತ್ತಲಾಗಿದೆ. ಗರುಡನ ಮೇಲೆ ಕುಳಿತ ಲಕ್ಷ್ಮೀನಾರಾಯಣರು, ವೃಶಭಾಚಲೇಶ್ವರ, ತ್ರೈಪುರುಷ, ಹಯಗ್ರೀವ, ತಾಂಡವ ಶಿವ, ಗಣೇಶ, ಸರಸ್ವತಿ, ವೇಣುಗೋಪಾಲ, ಬಲಿ ವಾಮನ, ಬಲಿ ವಾಮನನಿಗೆ ದಾನ ನೀಡುತ್ತಿರುವುದು ಇಂತಹ ಹಲವಾರು ಅಪರೂಪದ ದೇವದೇವತೆಗಳ ಮೂರ್ತಿಗಳನ್ನು ಕೆತ್ತಲಾಗಿದೆ. ನಡುವೆ ಎರಡು ಕಲ್ಲು ಸೇರುವಲ್ಲಿ, ಮೂಲೆಯಲ್ಲಿ ಹೀಗೆ ಒಂದೊಂದೆಡೆ ಶಿಲಾಬಾಲಿಕೆಯರನ್ನು ಕಡೆಯಲಾಗಿದೆ. ಶಿಖರವು ಚತುರಸ್ರವಾಗಿದೆ. ಅಲ್ಲಿ ತಾಂಡವೇಶ್ವರ ವಿಗ್ರಹವಿದ್ದು ಸಳ ಹುಲಿಯನ್ನು ಕೊಲ್ಲುತ್ತಿರುವ ಕಲ್ಲಿನ ಮೂರ್ತಿಯಿದೆ. ಇದನ್ನು ನೋಡಿದಾಗ ಸ್ಪಷ್ಟವಾಗುವುದೇನೆಂದರೆ ಆ ಕಾಲದಲ್ಲಿ ಹರಹರಿಭೇದಭಾವವಿರಲಿಲ್ಲವೆಂಬುದು. ಇದು ಮಲ್ಲಿಕಾರ್ಜುನನ ದೇವಾಲಯವಾದರೂ ಎಲ್ಲ ದೇವತೆಗಳು ಹಾಗೂ ವಿಷ್ಣುವಿನ ವಿಗ್ರಹಕ್ಕೂ ಅಷ್ಟೇ ಪ್ರಾಶಸ್ತ್ಯ ನೀಡಲಾಗಿದೆ.

 ಇಂತಹ ದೇವಾಲಯಕ್ಕೆ ಐದರವರೆಗೂ ದ್ವಾರಗಳನ್ನು ನಿರ್ಮಿಸಲಾಗುವುದಂತೆ. ಬಸರಾಳು ದೇವಾಲಯಕ್ಕೆ ಎರಡು ದ್ವಾರಗಳಿವೆ. ಎರಡೂ ದ್ವಾರಗಳಲ್ಲಿ ಎರಡು ಗೋಪುರಗಳಿದ್ದು ಸುಂದರ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟಿವೆ. ಆನೆಗಳ ಮೂರ್ತಿಗಳು ಯುದ್ಧಕ್ಕೆ ಹೊರಟಂತಿವೆ. ಕಲ್ಲಿನ ಬಾವಿಯೊಂದಿದ್ದು, ಅದರ ಬಳಿ ಇನ್ನೊಂದು ಗೋಪುರವಿದೆ. ದಕ್ಷಿಣದ ದ್ವಾರಕ್ಕೆ ಶೈವದ್ವಾರಪಾಲಕರಿದ್ದು, ಒಂದೇ ದ್ವಾರಪಾಲಕ ವಿಗ್ರಹವಿದೆ. ದ್ವಾರದ ನಂತರ ಮುಖಮಂಡಪವಿದ್ದು ಅಲ್ಲಿ ಸುಂದರವಾದ ನಂದಿ ವಿಗ್ರಹವಿದೆ. ನಾಲ್ಕು ಅಡಿ ಎತ್ತರ, ಐದು ಅಡಿ ಉದ್ದದ ನಂದಿಗೆ ಬಲಕೋಡಿಲ್ಲ ಹಾಗೂ ಕಿವಿಗಳಿಲ್ಲವಾದರೂ ನುಣುಪು ಕೆತ್ತನೆಯಿಂದ ಸುಂದರವಾಗಿದೆ. ಸುತ್ತಲೂ ನಾಲ್ಕು ಕಂಬಗಳಿದ್ದು, ಕೆತ್ತನೆ ಅದ್ಭುತವಾಗಿದೆ. ಕುಳಿತುಕೊಳ್ಳಲಿಕ್ಕೆ ಅನುಕೂಲವಾಗುವಂತೆ ಹಾಸುಗಲ್ಲು ಹಾಸಲಾಗಿದೆ. ಮಂಡಪದ ಸುತ್ತಲಿನ ಕೆತ್ತನೆಗಳನ್ನು ನೋಡಲಿಕ್ಕೆ ಎರಡುಕಣ್ಣು ಸಾಲದಂತಿದೆ. ಅದರ ಸುತ್ತಲೂ ಜಾಲಂದ್ರಗಳಿದ್ದು, ಮಂಡಪಕ್ಕೆ ಹಾಗೂ ನವರಂಗಕ್ಕೆ ಬೆಳಕಿನ ವ್ಯವಸ್ಥೆ ಚೆನ್ನಾಗಿದೆ. ಮಂಡಪದ ಪಶ್ಚಿಮಕ್ಕೆ ನವರಂಗಕ್ಕೆ ದ್ವಾರವಿದ್ದು ಅಲ್ಲೂ ಶೈವದ್ವಾರಪಾಲಕರಿದ್ದಾರೆ. ದ್ವಾರದ ಮೇಲ್ಭಾಗಕ್ಕೆ ತಾಂಡವೇಶ್ವರ ವಿಗ್ರಹವಿದೆ. ಪಕ್ಕದಲ್ಲೇ ಜಾಲಂದ್ರವಿದೆ. ದೇವಾಲಯದ ಸುತ್ತಲೂ ಜಾಲಂದ್ರಗಳನ್ನು ಕಟ್ಟಿದ್ದು ಇದು ಕೂಡ ಕಲಾತ್ಮಕವಾಗಿದ್ದು ಪ್ರತಿಜಾಲಂದ್ರದ ತೂತುಗಳೂ ವಿಭಿನ್ನವಾಗಿದೆ. ಸೂರ್ಯನ ಬೆಳಕಿನ ಲೆಕ್ಕಾಚಾರದ ಮೇಲೇ ಜಾಲಂದ್ರಗಳನ್ನು ಕಟ್ಟಲಾಗುತ್ತದೆಯೆಂದರೆ ನಮ್ಮವರ ಜ್ಞಾನದ ಆಳವನ್ನು ಊಹಿಸಬಹುದು.

ಹಿಂದೆಲ್ಲ ದೇವರಿಗೆ ಅಂಗಭೋಗ, ರಂಗಭೋಗ ಎಂಬ ಎರಡೂ ಬಗೆಯ ಪೂಜೆ ನೆರವೇರಿಸಲಾಗುತ್ತಿತ್ತು. ಅಂಗಭೋಗವೆಂದರೆ ಅಲಂಕಾರ, ದೀಪದೂಪ ಅರ್ಚನೆಗಳಿಂದ ದೇವರನ್ನು ಅರ್ಚಿಸಿದರೆ, ರಂಗಭೋಗವೆಂದರೆ ಸಂಗೀತ, ನೃತ್ಯ, ಗಾಯನಗಳ ಸೇವೆಗಳ ಮೂಲಕ ದೇವರನ್ನು ಅರ್ಚಿಸಲಾಗುತ್ತಿತ್ತು. ಇದಕ್ಕೆಂದೇ ನವರಂಗದ ಮಧ್ಯದ ಜಾಗವನ್ನು ಎತ್ತರಿಸಿ ಕಟ್ಟಿ, ಸುತ್ತಲೂ ಕುಳಿತುಕೊಳ್ಳಲು ಹಾಸುಗಲ್ಲು ಹಾಕಿ, ಆ ಭಾಗವನ್ನೂ ಕಲಾಕೌಶಲ್ಯದಿಂದ ಅಲಂಕರಿಸಲಾಗುತ್ತಿತ್ತು. ಎಲ್ಲ ದೇವಾಲಯಗಳಲ್ಲೂ ರಂಗಭೋಗ ಪೂಜೆ ಇರುತ್ತಿರಲಿಲ್ಲ. ಹೊಯ್ಸಳಕಾಲದಲ್ಲಿ ರಂಗಭೋಗ ಹೆಚ್ಚಿನದಾಗಿ ನಡೆಯುತ್ತಿದ್ದಿರಬಹುದು. ಬಸರಾಳು ದೇವಾಲಯದಲ್ಲಿ ನವರಂಗಕ್ಕೆ ಒಟ್ಟೂ ಹದಿನಾಲ್ಕು ಕಂಬಗಳಿದ್ದು, ಇದರಲ್ಲಿ ಆರು ಕರಿಗಲ್ಲಿನ ನುಣುಪಾದ ಕಂಬಗಳಾಗಿದ್ದು, ಸುಂದರ ತಿರುಪನ್ನು ಹೊಂದಿವೆ. ತಿರುಗಣೆಯಂತ್ರ ಬಳಸಿ ಆ ಬಗೆಯ ತಿರುಪನ್ನು ಕಂಬದಲ್ಲಿ ಮೂಡಿಸುತ್ತಿದ್ದರೆಂಬ ಒಂದು ಊಹೆಯೂ ಇದೆ. ಇನ್ನುಳಿದ ಎಂಟು ಕಂಬಗಳು ಇನ್ನೊಂದು ಬಗೆಯದಿದ್ದು ಬಗೆಬಗೆಯ ಕಲಾಕೌಶಲ್ಯದಿಂದ ಕೂಡಿವೆ. ನವರಂಗದ ಮಧ್ಯೆ ಎತ್ತರಿಸಿದ ಭಾಗವಿದ್ದು ಅದರ ಮೊದಲಿನ ಮೇಲ್ಚಾವಣ  ತೆಗೆದುಹಾಕಿ ಗೋಪುರ ಕಟ್ಟಿದ್ದು ಕಂಡುಬರುತ್ತದೆ. ಸುತ್ತಲೂ ಜಗತಿಯನ್ನು ಹೊಂದಿದೆ ಹಾಗೂ ಕುಳಿತುಕೊಳ್ಳಲು ಅನುಕೂಲವಾಗುವಂತೆ ಹಾಸುಗಲ್ಲು ಹಾಕಲಾಕಿದೆ. ಮೇಲ್ಗಡೆಭಾಗದ ಭುವನೇಶ್ವರಿಯನ್ನು ಮೊಗ್ಗಿನಿಂದ ಅಲಂಕರಿಸಿದ್ದು, ಸೂಕ್ಷ್ಮಕೆತ್ತನೆಗಳಿಂದ ನೋಡಲು ಅದ್ಭುತವಾಗಿ ತೋರುತ್ತದೆ. ಆ ಮೊಗ್ಗಿಗೆ ಮೊದಲೆಲ್ಲ ನೈಸರ್ಗಿಕ ಬಣ್ಣಗಳಿಂದ ಅಲಂಕರಿಸುತ್ತಿದ್ದು, ಒಂದು ಮೊಗ್ಗಿಗೆ ಈಗಲೂ ಆ ಬಣ್ಣ ಅಳಿಸದೆ ಹಾಗೇ ಇದೆ. ನವರಂಗದಲ್ಲಿ ನಾಲ್ಕು ಗೂಡುಗಳಲ್ಲಿ ಸರಸ್ವತಿ, ಗಣೇಶ, ಮಹಿಷಮರ್ಧಿನಿ ಇವುಗಳಿವೆ. ಗಣೇಶನಿಗೆ ಎದುರಿನಲ್ಲಿ ಸಪ್ತಮಾತೃಕೆಯರಿದ್ದು, ಇದರಲ್ಲಿ ಒಂಬತ್ತು ಮೂರ್ತಿಗಳಿವೆ. ನವರಂಗದಲ್ಲಿ ದಕ್ಷಿಣ ಗರ್ಭಗುಡಿಯಲ್ಲಿ ದ್ವಾರಕ್ಕೆ ಜಯವಿಜಯ ದ್ವಾರಪಾಲಕರಿದ್ದ ಕಾರಣ ಹಿಂದೆ ವಿಷ್ಣುವಿನ ವಿಗ್ರಹ ಇದ್ದಿರಬಹುದು ಎನ್ನಲಾಗುತ್ತದೆ. ಈಗ ಸೂರ್ಯನಾರಾಯಣ ವಿಗ್ರಹವನ್ನು ಒರಗಿಸಿಡಲಾಗಿದೆ. ಉತ್ತರದ ಗರ್ಭಗುಡಿಯಲ್ಲಿ ನಾಗದಂಪತಿಗಳ ವಿಗ್ರಹವಿದೆ. ಪಶ್ಚಿಮಕ್ಕೆ ಗರ್ಭಗುಡಿಯಿದ್ದು ಸುಂದರವಾದ ಲಿಂಗರೂಪಿ ಮಲ್ಲಿಕಾರ್ಜುನ ವಿಗ್ರಹಕ್ಕೆ ಅರ್ಚಕರು ಬಂದು ಚಿಕ್ಕದಾಗಿ ಪೂಜೆ ನೆರವೇರಿಸುತ್ತಾರೆ. ಶುಕನಾಸಿಗೆ ಪ್ರವೇಶವಿಲ್ಲ. (ಶುಕನಾಸಿ ಎಂದರೆ ಶುಕದ ಆಕಾರದಲ್ಲಿರುವ ಗರ್ಭಗುಡಿಯ ಮುಂದಿನ ಭಾಗ) ಅದನ್ನು ಸುಂದರವಾದ ಕೆತ್ತನೆಗಳಿಂದ ಅಲಂಕರಿಸಿದ್ದಾರೆ. ದೇವಾಲಯದ ಒಳಭಾಗದಲ್ಲಿ ಅಂದರೆ ಮುಖಮಂಡಪದಿಂದ ಫೋಟೋಗ್ರಫಿಯನ್ನು ನಿಷೇಧಿಸಲಾಗಿದೆ.

ದೇವಾಲಯದ ಹೊರಭಾಗದಲ್ಲಿ ಒಂದು ನೀರಿನ ಬಾವಿಯಿದ್ದು ಕಲ್ಲಿನಿಂದಲೇ ಕಟ್ಟಲಾಗಿದೆ. ಪಕ್ಕದಲ್ಲೇ ಚಂಡಿಕೇಶ್ವರನ ಪುಟ್ಟ ಗುಡಿಯಿದೆ. ಪೌಳಿ ಗೋಡೆಯ ಹೊರಗಡೆ ಒಂದು ಸ್ಥಂಭವಿದ್ದು ಅದರ ಮೇಲೆ ಒಂದೇ ಶಿಲೆಯಲ್ಲಿ ಹೆಣ್ಣು ಗಂಡು ಇರುವ ಒಂದು ವಿಗ್ರಹವಿದ್ದು ಅದು ನ್ಯೂನವಾಗಿರುವಂತೆ ತೋರುತ್ತದೆ. ಅದನ್ನು ಯಾವ ಉದ್ದೇಶಕ್ಕೆ ಕಡೆಯಲಾಗಿದೆಯೋ ತಿಳಿಯದು.

ಪ್ರಾಚ್ಯವಸ್ತು ಸಂಗ್ರಹಾಲಯವು ಈ ದೇವಾಲಯವನ್ನು ಸಂರಕ್ಷಣೆ ಮಾಡುತ್ತಿದೆ. ಈ ಹಿಂದೆ ಈ ದೇವಾಲಯವನ್ನು 1920ರ ವೇಳೆಗೆ ಒಮ್ಮೆ ಜೀರ್ಣೋದ್ಧಾರಮಾಡಲಾಗಿದ್ದು, ಈಗ ಮತ್ತೊಮ್ಮೆ ಜೀರ್ಣೋದ್ಧಾರಕ್ಕಾಗಿ ಕೆಲವು ಗುರುತುಗಳನ್ನು ಮಾಡಿಡಲಾಗಿದೆ.   

ಬಸರಾಳಿನ ದೇವಾಲಯ ನೋಡಿದಾಕ್ಷಣ ಅಬ್ಬಾ! ಎನ್ನುವ ಉದ್ಗಾರ ಅರಿವಿಲ್ಲದೆ ನಮ್ಮಿಂದ ಹೊರಬರುತ್ತದೆ. ಒಂದೆಡೆ ಇದ್ದ ಬೃಹತ್‍ಶಿಲೆಯನ್ನೇ ಕಡೆದು ಇಂತಹ ದೇವಾಲಯ ಕಟ್ಟುತ್ತಿದ್ದಿರಬಹುದು; ಆದರೆ ವಿಶ್ವದಲ್ಲಿ ಬಹುಷಃ ಭಾರತದಲ್ಲೊಂದೇ ಇಂತಹ ಮಾನವನಿರ್ಮಿತ ಅದ್ಭುತಗಳನ್ನು ನೋಡಲು ಸಾಧ್ಯ. ಇದು ಒಬ್ಬ ಶಿಲ್ಪಿಯ ತಾಳ್ಮೆ, ಕೌಶಲ್ಯ, ಕಲೆಯ ಬಗೆಗಿನ ಪ್ರೀತಿ, ಕಲ್ಪನೆಯ ಮೂರ್ತರೂಪವೆಂದರೂ ಸರಿ. ಶಿಲ್ಪಿ ‘ಇಂತಹ ಬೃಹತ್ ಶಿಲೆಯನ್ನು ಕಡೆಯಲಾರೆ’ನೆಂದು ಹಾಗೆ ಬಿಟ್ಟಿದ್ದರೆ ಶಿಲೆ ಶಿಲ್ಪವಾಗುತ್ತಿರಲಿಲ್ಲ. ಇಂದಿನ ಪೀಳಿಗೆ ಅವರ ಆ ಕಲಾಪ್ರೀತಿಯನ್ನು ಉಳಿಸಿಕೊಳ್ಳುವುದರ ಬಗ್ಗೆ ಯೋಚಿಸಬೇಕಾಗಿದೆ. ಶಿಲ್ಪಗಳನ್ನು ಯಥಾವತ್ತಾಗಿ ಕಾಪಾಡಬೇಕು, ಪ್ರವಾಸಿಗರಿಗೆ ಇಂತಹ ದೇವಾಲಯಗಳ ಬಗ್ಗೆ ಕೈಪಿಡಿ ಸಿಗುವಂತಾಗಬೇಕು. ಹಾಗಾದಾಗ ಮಾತ್ರ ಶಿಲ್ಪಿಗಳ ಪ್ರಯತ್ನಕ್ಕೆ ಮನ್ನಣೆ ದೊರಕಿದಂತಾಗುತ್ತದೆ. ಊರಿನ ಸ್ವಚ್ಛತೆ ಕಾಪಾಡುವ, ಉತ್ತಮ ರಸ್ತೆ, ವಸತಿನಿರ್ಮಾಣ ಮೊದಲಾದ ಅಭಿವೃದ್ಧಿಕಾರ್ಯ ಕೈಗೊಳ್ಳುವ ಮೂಲಕ ಇಂತಹ ಸ್ಥಳಗಳು ಪ್ರವಾಸಿತಾಣವಾಗಿ ರೂಪುಗೊಳ್ಳುವುದರಿಂದ ಸ್ಥಳೀಯಜನರಿಗೂ ಆದಾಯದಮೂಲ ದೊರಕಿದಂತಾಗುತ್ತದೆ.    

ಹೊಸಬೂದನೂರು

ಮಂಡ್ಯದಿಂದ ಕೆಲವೇಮೈಲಿ ದೂರದಲ್ಲಿರುವ ಊರು ಹೊಸಬೂದನೂರು. ಊರಿನ ಪ್ರವೇಶದಲ್ಲೇ ದೊಡ್ಡದಾದ ಕೆರೆ ನಮ್ಮನ್ನು ಸ್ವಾಗತಿಸುತ್ತದೆ. ವಿಶ್ವೇಶ್ವರಯ್ಯನವರ ಪ್ರತಿಮೆಯೊಂದನ್ನು ಗಾಂಧಿ ಪ್ರತಿಮೆಯ ಪಕ್ಕದಲ್ಲೇ ಸ್ಥಾಪಿಸಿ ಮಂಟಪವೊಂದನ್ನು ಕಟ್ಟಿ ಅವರಿಗೆ ಗೌರವ ತೋರಿರುವುದು ಈ ಊರ ವಿಶೇಷ. ಅಲ್ಲಿಯೇ ಸಮೀಪಕ್ಕೆ ಇರುವುದು ಪುಟ್ಟ ಕಲ್ಲಿನ ಅನಂತ ಪದ್ಮನಾಭ ಗುಡಿ. ಇದು ವಿಜಯನಗರ ಅರಸರ ಕಾಲದಲ್ಲಿ ಜೀರ್ಣೋದ್ಧಾರಗೊಂಡಿರಬಹುದು ಎನ್ನಲಾಗುತ್ತದೆ. ನಕ್ಷತ್ರಾಕಾರದ ಜಗತಿಯಿದ್ದು, ಮುಂದಿನದ್ವಾರವು ತಕ್ಕಮಟ್ಟಿಗೆ ಅಲಂಕರಿಸಲ್ಪಟ್ಟಿದೆ. ಅಧಿಷ್ಠಾನವು ಸಾಧಾರಣವಾಗಿದ್ದು, ಕೀರ್ತಿಮುಖ ಬಿಟ್ಟರೆ ವಿಶೇಷ ಅಲಂಕಾರವಿಲ್ಲ. ಒಳಗಡೆ ನವರಂಗವಿದ್ದು, ಭುವನೇಶ್ವರಿಯನ್ನು ಬಾಗಿಲು, ಕಿಟಕಿ ಇವೇ ಮೊದಲಾದ ಬಗೆಬಗೆಯ ಕೆತ್ತನೆಯಿಂದ ಅಲಂಕರಿಸಿದ್ದಾರೆ. ನವರಂಗದಲ್ಲಿ ತುಸು ಎತ್ತರದ ಭಾಗವಿದ್ದು ಸುತ್ತಲೂ ಜಗತಿಯಿದೆ. ಶುಕನಾಸಿಯನ್ನೂ ಸುಂದರ ಕೆತ್ತನೆಗಳಿಂದ ಅಲಂಕರಿಸಿದ್ದಾರೆ. ನವರಂಗದಲ್ಲಿ ಶಾಸನದ ಕಲ್ಲೊಂದು ಇದೆ. ಸಾಮಾನ್ಯವಾಗಿ ಅನಂತಪದ್ಮನಾಭ ದೇವರೆಂದರೆ ಮಲಗಿರುವ ದೇವರ ಕಲ್ಪನೆಯಿದೆ. ಆದರೆ ಇಲ್ಲೊಂದೇ ಅನಂತಪದ್ಮನಾಭ ದೇವರ ನಿಂತಿರುವ ವಿಗ್ರಹವು ಪೂಜಿಸಲ್ಪಡುತ್ತದೆ. ಈ ದೇವರಿಗೆ ನಿತ್ಯ ಪೂಜೆ ಸರಿಯಾಗಿ ನೆರವೇರಲ್ಪಡುತ್ತಿದೆ. ಇದಕ್ಕೆ ಅನತಿ ದೂರದಲ್ಲಿಯೇ ಕಾಶಿವಿಶ್ವನಾಥನ ಒಂದು ಪುಟ್ಟ ಕಲ್ಲಿನ ಗುಡಿಯಿದೆ. ಅದು ಸಹ ಅನಂತಪದ್ಮನಾಭ ಗುಡಿಯಂತೆಯೇ ಇದೆ. ಪೂಜೆಯೂ ನೆರವೇರಿಸಲ್ಪಡುತ್ತಿದೆ.

ಕಲ್ಲುಗಳು ಸಾರುತ್ತಿವೆ ಇತಿಹಾಸ

ಕಲ್ಲುಗಳೂ ಇತಿಹಾಸದ ಕತೆಯನ್ನು ಸಾರುತ್ತವೆ. ಇಂದಿಗೂ ಕೆಲವು ಜಾತಿ, ಮತಗಳಲ್ಲಿ ಶವವನ್ನು ಹೂಳುವ, ಆ ಬಳಿಕ ಅದಕ್ಕೆ ಗೋರಿ ಕಟ್ಟುವ ಸಂಪ್ರದಾಯ ರೂಢಿ ಇದೆ. ಪಾರ್ಸಿಮತದಲ್ಲಿ ಹದ್ದಿಗೆ ಶವವನ್ನು ಇಡುವ ರೂಢಿ ಇದೆ. ಬಸರಾಳಿಗೆ ಹೋಗುವ ಹಾದಿಯಲ್ಲಿ ಗುಡ್ಡದ ಮೇಲೆ ಒಂದಷ್ಟು ವಿಭಿನ್ನವಾಗಿ ಕೂಡ್ರಿಸಿದಂತಿರುವ ಕಲ್ಲುಗಳಿವೆ. ನೆಲದ ಭಾಗದಲ್ಲಿ ಹೂತಂತೆ ಚಿಕ್ಕ ಹಾಸುಗಲ್ಲು, ಅದರ ಮೇಲೆ ಇನ್ನೊಂದು ಸ್ವಲ್ಪ ದೊಡ್ಡ ಹಾಸುಗಲ್ಲು, ಅದರ ಮೇಲೆ ದೊಡ್ಡದಾದ ಹಾಸುಗಲ್ಲು, ಇಂತಹ ಅನೇಕ ಕಲ್ಲುಗಳು ಕಂಡುಬರುತ್ತವೆ. ಇವು ಯಾವುದೋ ಕಾಲದಲ್ಲಿ ಶವವನ್ನು ಹೂಳಿ ಅದರ ಮೇಲೆ ಗೋರಿ ಕಟ್ಟಿದ ಕಲ್ಲುಗಳು ಎಂದು ತಿಳಿದಾಗ ಅಚ್ಚರಿಯ ಜೊತೆ ಕಲ್ಲಿಗೂ ಇತಿಹಾಸವಿರುತ್ತದೆ ಎನ್ನುವ ಮಾತನ್ನು ಒಪ್ಪಿಕೊಳ್ಳಬೇಕಾಯಿತು.    

  • ಸರೋಜಾ ಪ್ರಭಾಕರ್

Facebook ಕಾಮೆಂಟ್ಸ್

ಲೇಖಕರ ಕುರಿತು

Saroja Prabhakar

‘ಉತ್ಥಾನ ‘ಪತ್ರಿಕೆಯ ಕಾರ್ಯಕರ್ತೆ. ಓದು, ಬರವಣಿಗೆ, ಸಂಗೀತ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!