ಅಂಕಣ

ಕಾಲಚಕ್ರದಲ್ಲಿ ಕ್ವಾಂಟಮ್ ಫಿಸಿಕ್ಸ್ ಮತ್ತು ವೇದಾಂತ

ಡ್ಯಾನ್ ಬ್ರೌನ್ ಎನ್ನುವ ಹೆಸರನ್ನು ನೀವು ಕೇಳಿರಬಹುದು. ‘ಡಿಸೆಪ್ಷನ್ ಪಾಯಿಂಟ್’, ‘ದ ಡಾವಿನ್ಸಿ ಕೋಡ್’, ‘ಇನ್’ಫೆರ್ನೋ’ ಎನ್ನುವಂತಹ ಥ್ರಿಲ್ಲರ್ ಕಾದಂಬರಿಗಳನ್ನು ಬರೆದಿರುವ ಈತ, ವಿಶ್ವದ ಬೆಸ್ಟ್ ಸೆಲ್ಲಿಂಗ್ ಲೇಖಕರುಗಳಲ್ಲಿ ಒಬ್ಬ. ಇಂತಹ ಡ್ಯಾನ್ ಬ್ರೌನ್’ಗೆ ಈಗ ಹೋಲಿಸುತ್ತಿರುವುದು ಅಶ್ವಿನ್ ಸಾಂಘಿಯವರನ್ನು. ಅಶ್ವಿನ್ ಅವರನ್ನು ‘ಭಾರತದ ಡ್ಯಾನ್ ಬ್ರೌನ್’ ಎಂದೇ ಕರೆಯುತ್ತಾರೆ. ಆದರೆ ಡ್ಯಾನ್ ಬ್ರೌನ್ ಹಾಗೂ ಅಶ್ವಿನ್ ಇವರಿಬ್ಬರ ಪುಸ್ತಕಗಳನ್ನೂ ಓದಿರುವ ನನಗೆ ಅಶ್ವಿನ್ ಅವರ ಪುಸ್ತಕಗಳೇ ಹೆಚ್ಚು ಪ್ರಿಯವಾಗಿದ್ದು. ಬಹುಶಃ ಅವರು ಭಾರತೀಯರು  ಅಥವಾ ಅವರ ಪುಸ್ತಕಗಳಲ್ಲಿ ಭಾರತೀಯ ಸಂಸ್ಕೃತಿ, ಇತಿಹಾಸ, ವೇದಾಂತಗಳು ಹೆಚ್ಚು ಬರುವ ಕಾರಣಕ್ಕೆ ಇರಬಹುದು. ಅವರು ತಾವು ಬರೆಯುತ್ತಿರುವ ಪುಸ್ತಕಗಳಿಗೆ ‘ಭಾರತ್ ಸೀರೀಸ್’ ಎಂಬ ಹೆಸರಿಟ್ಟಿದ್ದಾರೆ. ಅವರ ಈ ‘ಭಾರತ್ ಸೀರೀಸ್’ನ ಇತ್ತೀಚಿನ ಪುಸ್ತಕವೇ ‘ಕೀಪರ್ಸ್ ಆಫ್ ಕಾಲಚಕ್ರ.’

ಪುಸ್ತಕ ಆರಂಭವಾಗುವುದೇ ಒಂದು ಕೊಲೆ ಪ್ರಯತ್ನದಿಂದ. ಎಲ್ಲಾ ಸಸ್ಪೆನ್ಸ್ ಥ್ರಿಲ್ಲರ್ ಕಥೆಗಳಂತೆಯೇ. ಇಡೀ ಪುಸ್ತಕದಲ್ಲಿ ಎಷ್ಟೊ ಕೊಲೆಗಳು ನಡೆಯುತ್ತವೆ, ಆ ಕೊಲೆಗಳಿಗೆ ಕಾರಣವೇನು, ಯಾರು ಮಾಡಿಸುತ್ತಿರುವುದು, ರಾಜಕೀಯ, ಧರ್ಮಾಂಧತೆ, ಭಯೋತ್ಪಾದನೆ, ರಾಜಕೀಯ ಲಾಭಕ್ಕಾಗಿ ಹೇಗೆ ಇವುಗಳನ್ನು ಬಳಸಿಕೊಳ್ಳಲಾಗುತ್ತದೆ ಎನ್ನುವಂತಹ ವಿಷಯಗಳು. ಆದರೆ ಇತರ ಸಸ್ಪೆನ್ಸ್ ಥ್ರಿಲ್ಲರ್ ಕಥೆಗಳಂತೆ ಈ ಪುಸ್ತಕ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ಪುಸ್ತಕದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವುದು ಹಿಂದು ಸಂಸ್ಕೃತಿ, ಬೌದ್ಧಮತ ಹಾಗೂ ಕ್ವಾಂಟಮ್ ಫಿಸಿಕ್ಸ್. ಈಗ ನಮ್ಮ ವಿಜ್ಞಾನಿಗಳು ಏನೆಲ್ಲಾ ಹೇಳುತ್ತಿದ್ದಾರೋ ಅದೆಲ್ಲವನ್ನೂ ಸಾವಿರ ಸಾವಿರ ವರ್ಷಗಳ ಹಿಂದೆಯೇ ನಮ್ಮ ಯೋಗಿಗಳು, ಋಷಿ ಮುನಿಗಳು ಹೇಳಿದ್ದರು ಎನ್ನುವುದರ ಬಗ್ಗೆ ಹೆಚ್ಚು ಹೇಳಲಾಗಿದೆ. ಕ್ವಾಂಟಮ್ ಫಿಸಿಕ್ಸ್ ಮತ್ತು ವೇದಾಂತ ಎರಡೂ ಭಿನ್ನ ಅಲ್ಲ, ಅವೆರಡೂ ಒಂದೇ ಎನ್ನುವುದೇ ಈ ಪುಸ್ತಕದ ಮುಖ್ಯ ವಿಷಯ.

ಇಡೀ ಪುಸ್ತಕದಲ್ಲಿ ಕ್ವಾಂಟಮ್ ಎಂಟ್ಯಾಗಲ್’ಮೆಂಟ್, ಸ್ಟ್ರಿಂಗ್ ಥಿಯರಿ, ಗ್ರಾವಿಟೇಷನಲ್ ವೇವ್ಸ್, ಟೈಮ್ ಅಂಡ್ ಸ್ಪೇಸ್, ಹಿಗ್ಸ್ ಬಾಸನ್ ಎನ್ನುವುದರ ಜೊತೆಗೆ ಶಿವ –ಶಕ್ತಿ, ಓಂಕಾರ, ಶ್ರೀಯಂತ್ರ, ರುದ್ರಾಕ್ಷ ಹಾಗೂ ರಾಮಾಯಣದ ಕುರಿತು ಬರುತ್ತಾ ಹೋಗುತ್ತದೆ. ಕಾಲಚಕ್ರ ಎನ್ನುವುದು ಟೈಮ್ ಅಂಡ್ ಸ್ಪೇಸ್’ನ್ನು ಪ್ರತಿನಿಧಿಸುತ್ತದೆ ಎನ್ನುತ್ತದೆ ಈ ಪುಸ್ತಕ. ಶ್ರೀಕೃಷ್ಣ ಮಹಾಭಾರತದಲ್ಲಿ ಹೇಳಿದ ‘ಪರಬ್ರಹ್ಮ’, ಬುದ್ಧಿಸಂ’ನಲ್ಲಿ ಧರ್ಮಕಾಯ ಹೇಳಿದ್ದ ಏಕತೆಯನ್ನೇ (Oneness), ಕ್ವಾಂಟಮ್ ಫಿಸಿಕ್ಸ್ ಇಂದು ಹೇಳುತ್ತಿರುವುದು ಎನ್ನುತ್ತದೆ.

ಪ್ರತಿಯೊಂದು ಅಣುವಿನಿಂದ ಹಿಡಿದು ನಮ್ಮ ಈ ಶರೀರದವರೆಗೆ ಎಲ್ಲವೂ ಹೆಚ್ಚುಪಾಲು ಹೊಂದಿರುವುದು ಅಥವಾ ಆಗಲ್ಪಟ್ಟಿರುವುದು ‘Empty space’ನಿಂದ ಎನ್ನುವಂತಹ ಸಂಭಾಷಣೆಯ ನಡುವೆ ಒಬ್ಬಾತ ‘ಹಾಗಿದ್ದಲ್ಲಿ ನಾವು ಗೋಡೆಯ ಮೂಲಕ ಹಾದುಹೋಗಬಹುದೇ?’ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಉತ್ತರವಾಗಿ ಅದರ ಸಾಧ್ಯತೆಯ ಬಗ್ಗೆ ಹೇಳುವ ವ್ಯಕ್ತಿಯು ಕ್ಷಣಕಾಲಕ್ಕೆ ಪಾರ್ಟಿಕಲ್ ನೇಚರ್’ನಿಂದ ವೇವ್ ನೇಚರ್’ಗೆ ರೂಪಾಂತರಗೊಂಡು ಪುನಃ ಪಾರ್ಟಿಕಲ್ ನೇಚರ್’ಗೆ ಬರುವಂತಾದರೆ ಸಾಕು ಎನ್ನುತ್ತಾನೆ. ಎಷ್ಟೊ ಯೋಗಿಗಳು, ಸಾಧು ಸಂತರು ಬೆಳಕಿನಂತೆಯೇ ತಮ್ಮನ್ನು ತಾವು ಪಾರ್ಟಿಕಲ್’ನಿಂದ ವೇವ್ ಹಾಗೂ ವೇವ್’ನಿಂದ ಪಾರ್ಟಿಕಲ್ ಆಗಿ ರೂಪಾಂತರಗೊಳಿಸಿಕೊಳ್ಳುವುದನ್ನು ಅರಿತಿದ್ದರು ಎನ್ನುತ್ತಾನೆ. ಅಲ್ಲದೇ ಅವರುಗಳು ಮಂತ್ರ, ಯಂತ್ರ ಹಾಗೂ ತಂತ್ರವನ್ನು ಒಟ್ಟಾಗಿ ಸರಿಯಾಗಿ ಬಳಸಿಕೊಂಡು ತಮ್ಮ ಡಿ.ಎನ್.ಎ. ಅನ್ನು ಕೂಡ ರೀಪ್ರೋಗ್ರಾಮ್ ಮಾಡಿಕೊಳ್ಳಬಲ್ಲವರಾಗಿದ್ದರು. ಆದರೆ ವಿಜ್ಞಾನ ಡಿ.ಎನ್.ಎ. ರೀಪ್ರೊಗ್ರಾಮಿಂಗ್ ಕುರಿತು ಇತ್ತೀಚೆಗೆ ಸಂಶೋಧನೆಗಳನ್ನು ಆರಂಭಿಸಿದೆ.

ಶಿವ ಎನ್ನುವ ಪದದ ಅರ್ಥ ‘ದಟ್ ವಿಚ್ ಈಸ್ ನಾಟ್’ ಎನ್ನುವಾಗ, ಶಿವ ಮತ್ತು ಶಕ್ತಿ ಒಂದಕ್ಕೊಂದು ಪೂರಕ ಎನ್ನುವಾಗ, ಎಲ್ಲವೂ ಬಂದಿದ್ದು ‘ನಥಿಂಗ್’ನೆಸ್’ನಿಂದ ಮತ್ತು ಎಲ್ಲವೂ ಸೇರುವುದು ಆ ನಥಿಂಗ್’ನೆಸ್’ನ್ನು ಎಂದಾಗ, ನಥಿಂಗ್’ನೆಸ್’ನ ಆಳಕ್ಕೆ ಇಳಿದಾಗ ಜಗತ್ತನ್ನು ಅದು ಇರುವಂತೆಯೇ ನೋಡುತ್ತೇವೆ ಎನ್ನುವಾಗ, ನಟರಾಜನ ನೃತ್ಯವನ್ನು ವ್ಯಾಕ್ಯೂಮ್’ನಲ್ಲಿನ ಸಬ್ ಅಟಾಮಿಕ್ ಪಾರ್ಟಿಕಲ್’ಗಳ ನೃತ್ಯಕ್ಕೆ ಹೋಲಿಸಿದಾಗ, ಭೂತ, ವರ್ತಮಾನ ಮತ್ತು ಭವಿಷ್ಯತ್ ಮೂರು ಕೂಡ ಭಿನ್ನ ಆಯಾಮಗಳಲ್ಲ ಎಂದಾಗಲೆಲ್ಲಾ ಸದ್ಗುರು ಅವರ ‘ಆದಿಯೋಗಿ’ ಪುಸ್ತಕದ ಮುಂದಿನ ಭಾಗ ಓದುತ್ತಿದ್ದೇವೆಯೇ ಎನ್ನುವಂತೆ ಭಾಸವಾಗುತ್ತದೆ.

ಅಂದಹಾಗೆ ಸದ್ಗುರು ಅವರು ಇತ್ತೀಚಿಗೆ ನಡೆದ ‘ಕಾನ್ಶಿಯಸ್’ನೆಸ್, ಮೆಮರಿ ಅಂಡ್ ಕೋಮಾ’ ಎಂಬ ವಿಷಯಗಳ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡುತ್ತ ‘ನೆನಪುಗಳು ಇರುವುದು ಕೇವಲ ಮೆದುಳಿನಲ್ಲಿ ಅಲ್ಲ, ಅದು ಪ್ರತಿಯೊಂದು ಕೋಶದಲ್ಲಿಯೂ ಇದೆ, ನೆನಪು ಎನ್ನುವುದು ಸೆಲ್ಯುಲಾರ್ ಮಟ್ಟದಲ್ಲಿ ಇರುವಂಥದ್ದು’ ಎಂದಿದ್ದರು. ಅದೇ ವಿಷಯ ಈ ಪುಸ್ತಕದಲ್ಲಿಯೂ ಉಲ್ಲೇಖವಾಗುವುದಷ್ಟೇ ಅಲ್ಲದೇ,  ಅದಕ್ಕೆ ಉದಾಹರಣೆಯನ್ನು ಕೂಡ ನೀಡಿದ್ದಾರೆ ಅಶ್ವಿನ್. ಹಾರ್ಟ್ ಟ್ರಾನ್ಸ್’ಪ್ಲಾಂಟ್’ಗೆ ಒಳಗಾದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಶಾಸ್ತ್ರೀಯ ಸಂಗೀತವನ್ನು ಇಷ್ಟಪಡಲು ಆರಂಭಿಸಿದ್ದನು. ಮೊದಲು ಸ್ವಲ್ಪವೂ ಇಷ್ಟವಾಗದಿದ್ದ ಶಾಸ್ತ್ರೀಯ ಸಂಗೀತ ಈಗ ಪ್ರಿಯವಾಗಿತ್ತು. ಅದಕ್ಕೆ ಕಾರಣ ಹುಡುಕಿದಾಗ ತಿಳಿದದ್ದು ಹೃದಯವನ್ನು ದಾನ ಮಾಡಿದ ವ್ಯಕ್ತಿ ಶಾಸ್ತ್ರೀಯ ಸಂಗೀತವನ್ನು ಪ್ರೀತಿಸುತ್ತಿದ್ದು ತನ್ನ ಕೊನೆಯ ಕ್ಷಣಗಳಲ್ಲಿ ವಾಯಲಿನ್’ನ್ನು ಅಪ್ಪಿಕೊಂಡು ಕೊನೆಯುಸಿರೆಳೆದಿದ್ದ ಎಂದು.  ಕೊಲೆಗೀಡಾಗಿದ್ದ ಹುಡುಗಿಯ ಹೃದಯವನ್ನು ಪಡೆದಿದ್ದಾಕೆಯೊಬ್ಬಳಿಗೆ ಪದೇ ಪದೇ ಕನಸಿನಲ್ಲಿ ಕೊಲೆಯ ಚಿತ್ರಗಳು ಕಾಣಿಸಲಾರಂಭಿಸಿತ್ತು, ಲಿವರ್’ನ್ನು ದಾನವಾಗಿ ಪಡೆದಿದ್ದಾಕೆಗೆ ತಾನು ತನ್ನ ತಂದೆಯೊಂದಿಗೆ ಉಯ್ಯಾಲೆಯ ಮೇಲಿದ್ದ ನೆನಪುಗಳು ಕಾಡುತ್ತಿದ್ದವು ಆದರೆ ಆ ನೆನಪುಗಳು ಆಕೆಯ ಡೊನರ್’ದಾಗಿತ್ತು.

ಸೃಷ್ಟಿಯ ಸಮಯದಲ್ಲೇ ಉಂಟಾದ ಓಂಕಾರ, ಅದರ ಮಹತ್ತ್ವ, ಓಂಕಾರ ಏನನ್ನು ಪ್ರತಿನಿಧಿಸುತ್ತದೆ ಎನ್ನುವುದರ ಕುರಿತು, ಹಿಂದೂ ಸಂಸ್ಕೃತಿಯಲ್ಲಿ ಬಹುಮುಖ್ಯ ಎನಿಸಿರುವ ೧೦೮ ಸಂಖ್ಯೆಯ ಮಹತ್ತ್ವ, ಚಕ್ರಗಳ ಕುರಿತು, ಪ್ರಜ್ಞೆ, ತಾಂತ್ರಿಕ ವಿದ್ಯೆ ಹಾಗೂ ಅದನ್ನು ಬಹಳ ಋಣಾತ್ಮಕವಾಗಿ ನೋಡುತ್ತಿರುವುದರ ಕುರಿತು, ಯುಗಗಳ ಕುರಿತು, ಋಗ್ವೇದದಲ್ಲಿ ಹೇಳಲ್ಪಟ್ಟ ಬೆಳಕಿನ ವೇಗ, ಜ್ಯೋತಿಷ್ಯ, ಆಕಾಶಿಕ್ ರೆಕಾರ್ಡ್ಸ್, ಸಸ್ಯಗಳಲ್ಲಿ ಕ್ಯಾಂಟಮ್ ಫೀಲಿಂಗ್, ರಾಮಾಯಣ, ಗಾಯತ್ರಿ ಮಂತ್ರ, ವಾರ್ಮ್ ಹೋಲ್ ಕುರಿತು ಸಾಕಷ್ಟು ಮಾಹಿತಿ ನೀಡಲಾಗಿದೆ. ಅಲ್ಲದೇ ಎಷ್ಟೊ ಜನ್ಮಗಳು ಹಾಗೂ ಅವುಗಳ ನೆನಪುಗಳು ನಮಗೆ ಇಲ್ಲದಿರುವಿಕೆಗೆ ಕಾರಣವನ್ನೂ ಹೇಳಿದೆ. ರಾಮಾಯಣದ ಘಟನೆಗಳನ್ನು ವಿವರಿಸುತ್ತಾ ಲಂಕೆಗೆ ಕಟ್ಟಿದ ಕುರಿತು, ಸಮಯ ಎನ್ನುವುದು ಸರಳ ರೇಖೆಯಲ್ಲ, ಸಮಯ ಎನ್ನುವುದು ಚಕ್ರವಿದ್ದಂತೆ ಎನ್ನುವುದರ ಸೇತುವೆ ಅಂದು ಸಮುದ್ರ ಮಟ್ಟಕ್ಕಿಂತ ಮೂರು ಅಡಿ ಮೇಲಕ್ಕಿತ್ತು, ಅಂದರೆ ಸೇತುವೆ ಲೆವಿಟೇಟ್ ಆಗುತ್ತಿತ್ತು ಎಂದಾಗ ಒಮ್ಮೆ ಹುಬ್ಬೇರಿಸುವಂತೆ ಮಾಡುತ್ತದೆ.

ಅಂದಹಾಗೆ ಇದರಲ್ಲಿ ಸ್ವಲ್ಪ ಜೀರ್ಣಿಸಿಕೊಳ್ಳಲು ಕಷ್ಟವಾಗುವುದು ಕ್ವಾಂಟಮ್ ಟ್ವಿನ್ ಎನ್ನುವ ವಿಷಯ. ಕ್ವಾಂಟಮ್ ಟ್ವಿನ್ ಎನ್ನುವುದು ಪಾರ್ಟಿಕಲ್ ಮಟ್ಟದಲ್ಲಿ ನಿಜ ಜೊತೆಗೆ ಇದರ ಬಗ್ಗೆ ಇನ್ನೂ ಸಾಕಷ್ಟು ಸಂಶೋಧನೆಗಳು ನಡೆಯಬೇಕಿದೆ. ಆದರೆ ಅದು ಮನುಷ್ಯನ ಮಟ್ಟಿಗೆ ಎಷ್ಟು ನಿಜ ಎಂದು ತಿಳಿದಿಲ್ಲ. ಈ ಪುಸ್ತಕದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕ್ವಾಂಟಮ್ ಟ್ವಿನ್ ಹೊಂದಿರುತ್ತಾನೆ, ಆತನ ಸಾವಿನೊಂದಿಗೆ ಆತನ ಟ್ವಿನ್ ಕೂಡ ಸಾವನ್ನಪ್ಪುತ್ತಾನೆ ಎನ್ನುವಂತೆ ಕಥೆಗೆ ಬಳಸಿಕೊಳ್ಳಲಾಗಿದೆ. ಇದು ಎಷ್ಟರಮಟ್ಟಿಗೆ ನಿಜ ಎನ್ನುವ ಸಂಶಯವೊಂದು ಉಳಿದುಕೊಂಡುಬಿಡುತ್ತದೆ. ಮುಂದೊಂದು ದಿನ ಅದು ನಿಜ ಎಂದಾದರೂ ಆಗಬಹುದು.

ಅಶ್ವಿನ್ ಅವರು ತಮ್ಮ ಪುಸ್ತಕದಲ್ಲಿ ಹಿಂದು ಹಾಗೂ ಬೌದ್ಧ ಮತಗಳ ಕುರಿತು ಹೇಳುವುದಲ್ಲದೇ ಇಸ್ಲಾಮ್ ಕುರಿತಾಗಿಯೂ ಹೇಳಿದ್ದಾರೆ. ಷರಿಯಾ ಕಾನೂನು, ಕುರಾನ್, ಸೂಫಿ, ಅರಬ್ ದೇಶಗಳು ಭಯೋತ್ಪಾದನೆ ಇತ್ಯಾದಿಗಳ ಬಗ್ಗೆ. ಹೀಗೆ ರಿಲಿಜಿಯನ್’ಗಳ (ಧರ್ಮ ಎನ್ನುವುದಕ್ಕಿಂತ ರಿಲಿಜಿಯನ್ ಎನ್ನುವುದು ಉತ್ತಮ) ಕುರಿತು ಹೇಳುತ್ತಾ ಯಾವುದೇ ರಿಲಿಜಿಯನ್ ಆಗಿರಲಿ ಸಣ್ಣ ಡೋಸ್’ನಲ್ಲಿ ಔಷಧಿಯಂತೆ ಕೆಲಸ ಮಾಡುತ್ತದೆ, ಅದೇ ಡೋಸ್ ಹೆಚ್ಚಾದರೆ ಅದು ವಿಷದಂತೆ ಪರಿಣಮಿಸುತ್ತದೆ ಎನ್ನುತ್ತಾರೆ ಅಶ್ವಿನ್. ಎಲ್ಲಾ ರಿಲಿಜಿಯನ್’ಗಳಲ್ಲಿಯೂ ಕಾಲ ಕಾಲಕ್ಕೆ ಸಾಕಷ್ಟು ಸುಧಾರಣೆಗಳನ್ನು ತರಲಾಯಿತು, ಪದ್ಧತಿಗಳನ್ನು, ಪರಂಪರೆಗಳನ್ನು ಬದಲಾಯಿಸಲಾಯಿತು. ಇಸ್ಲಾಂನಲ್ಲಿಯೂ ಇಂತಹ ಸುಧಾರಣೆಗಳನ್ನು ತರುವ ಸಮಯ ಬಂದಿದೆಯೇ ಎಂದು ಪ್ರಶ್ನಿಸಿಕೊಳ್ಳುವಲ್ಲಿಗೆ ಕಥೆ ಕೊನೆಗೊಳ್ಳುತ್ತದೆ.  ಫಿಸಿಕ್ಸ್, ಬಯಾಲಜಿ, ಗಣಿತ, ಅಧ್ಯಾತ್ಮ, ರಿಲಿಜಿಯನ್, ರಾಜಕೀಯ, ಸಸ್ಪೆನ್ಸ್ ಎಲ್ಲವನ್ನೂ ಒಳಗೊಂಡಿರುವ ಈ ಪುಸ್ತಕ ಓದಲೇಬೇಕಾಗಿರುವಂಥದ್ದು. ಬಹುಶಃ ಓದಿದ ಎಲ್ಲಾ ವಿಷಯಗಳನ್ನು ಜೀರ್ಣಿಸಿಕೊಳ್ಳಲು ಸ್ವಲ್ಪ ಜಾಸ್ತಿಯೇ ಸಮಯ ಹಿಡಿಯಬಹುದು. ಕೆಲವೊಂದು ವಿಷಯಗಳನ್ನು ಒಂದೆರೆಡು ಬಾರಿ ಹೆಚ್ಚೇ ಓದಬೇಕಾದೀತು. ಆದರೆ ಕೊನೆಯವರೆಗೂ ‘ಕೀಪರ್ಸ್ ಆಫ್ ಕಾಲಚಕ್ರ’ ಎನ್ನುವ ಈ ಪುಸ್ತಕ ನಿಮ್ಮನ್ನು ತನ್ನೊಳಗೆ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!